ಹೋಳಿಯಲ್ಲಿ ನಾವು ಆಚರಿಸುವುದು ಬಹುಜನರ ಹತ್ಯೆಯನ್ನು...

Update: 2016-03-26 05:31 GMT

ನಾನು ಹೋಳಿಯನ್ನು ಆಚರಿಸುವುದಿಲ್ಲ, ಮುಖ್ಯವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ವರ್ಷಗಳಲ್ಲಿ ಪಡೆದ ಸಾಮಾಜಿಕ ಪ್ರಜ್ಞೆಯ ನಂತರ. ನಿಜವಾಗಿ ನಾನು ಈಗ ಯಾವುದೇ ಹಿಂದೂ ಹಬ್ಬಗಳನ್ನು ಆಚರಿಸುವುದಿಲ್ಲ. ಜಾತಿ ವಿರೋಧಿ ಸಾಹಿತ್ಯ ಅಥವಾ ಪಾಂಡಿತ್ಯದ ಕಾರ್ಯವನ್ನು ಶಿಫಾರಸು ಮಾಡದ ಈ ಸಾಮಾಜಿಕ ಪ್ರಜ್ಞೆ ನಮ್ಮ ವಿಶ್ವವಿದ್ಯಾನಿಲಯಗಳ ಪಠ್ಯಗಳೊಂದಿಗೆ ಅಷ್ಟೊಂದು ಸಂಬಂಧ ಹೊಂದಿಲ್ಲ. ಇತ್ತೀಚಿನ ಸಮಯಗಳಲ್ಲಿ, ಮುಖ್ಯವಾಗಿ ಮಂಡಲ ಸಮಿತಿಯ ನಂತರ, ಸೀಮಿತಗೊಳಿಸಲ್ಪಟ್ಟ ಸಾಮಾಜಿಕ ಗುಂಪುಗಳು ಕಾಲೇಜು ಆವರಣಗಳಲ್ಲಿ ಚರ್ಚೆಗೆ ಅವಕಾಶವನ್ನು ಸೃಷ್ಟಿಸಿಕೊಂಡಿವೆ. ಮುಂಬೈಯಲ್ಲಿ ನಡೆದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್‌ನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಸ್ಮರಣಾರ್ಥ ಉಪನ್ಯಾಸದಲ್ಲಿ ನನಗೆ ತಜ್ಞರಾದ ಜಿ. ಅಲೋಶಿಯಸ್‌ನ ಮತ್ತು ಆತನ ರಾಷ್ಟ್ರೀಯತೆ ಬಗೆಗಿನ ಬರಹಗಳ ಪರಿಚಯವಾಯಿತು.

ಈ ಉಪನ್ಯಾಸವನ್ನು 2014ರಲ್ಲಿ ದಲಿತ ಬಹುಜನ ವಿದ್ಯಾರ್ಥಿಗಳನ್ನು ಹೊಂದಿದ್ದ ವಿದ್ಯಾರ್ಥಿ ಸಂಘಟನೆಯೊಂದು ಆಯೋಜಿಸಿತ್ತು. ನನ್ನ ಸಾಂಸ್ಕೃತಿಕ ಶಿಕ್ಷಣ ತರಗತಿಯಲ್ಲಿ ಜಿ.ಅಲೋಶಿಯಸ್ ಮತ್ತು ಅವರ ರಾಷ್ಟ್ರೀಯತೆಯಿಲ್ಲದ ರಾಷ್ಟ್ರ ಎಂಬ ಬರಹದ ಬಗ್ಗೆ ಉಲ್ಲೇಖವಿಲ್ಲದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಆಕ್ಸ್ಫರ್ಡ್ ಪ್ರೆಸ್ ವಿಶ್ವವಿದ್ಯಾನಿಲಯ ಮುದ್ರಿಸಿದ ಈ ಪುಸ್ತಕವು ರಾಷ್ಟ್ರೀಯತೆಯ ಕಲ್ಪನೆಯನ್ನು ಜಾತಿ ವಿರೋಧಿ ದೃಷ್ಟಿಕೋನದಿಂದ ಚರ್ಚಿಸುತ್ತದೆ. ಒಬ್ಬ ಸ್ವತಂತ್ರ ವಿದ್ವಾಂಸನ ಬರಹವನ್ನು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿಸಿರಲಿಲ್ಲ.


ಹಿಂದೂ ಹಬ್ಬಗಳು ಅದೆಷ್ಟು ಸ್ತ್ರೀದ್ವೇಷಿ, ಜಾತಿವಾದಿ ಮತ್ತು ಬ್ರಾಹ್ಮಣೀಯವಾಗಿವೆ ಎಂಬುದನ್ನು ತಿಳಿಸುವ ಅದೆಷ್ಟೋ ಬರಹಗಳು ಲಭ್ಯವಿದೆ. ಅದರಲ್ಲಿ ಕೆ. ಜಮ್ನಾದಾಸ್ ಎಂಬವರು ಬರೆದ ಒಂದು ಪುಸ್ತಕ ಹೋಳಿಯು ಹೇಗೆ ಬಹುಜನರ ಹತ್ಯೆಯನ್ನು ಆಚರಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಪಠ್ಯಗಳಲ್ಲಿ ಜಾತಿವಿರೋಧಿ ದೃಷ್ಟಿಕೋನ ಮತ್ತು ಪಾಂಡಿತ್ಯದ ಬರಹಗಳನ್ನು ಅಳಿಸಿ ಹಾಕಿರುವುದು ಆಕಸ್ಮಿಕವಲ್ಲ ಅದನ್ನು ತಿಳಿದೇ ಮಾಡಲಾಗಿದೆ. ಗುಣಾತ್ಮಕ ನೀತಿಗಳಿಂದ ಸಾರ್ವಜನಿಕ ವಿಶ್ವವಿದ್ಯಾನಿಲಗಳಲ್ಲಿ ಸಮಾಜದ ಎಲ್ಲಾ ಜಾತಿಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಉಪನ್ಯಾಸಕರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಮೇಲ್ವರ್ಗದ ಜನರೇ ತುಂಬಿ ಹೋಗಿದ್ದಾರೆ.


ಹಾಗಾಗಿ ಹಿಂದೂ ಹಬ್ಬಗಳು ಸಮೂಹವನ್ನು ಪ್ರತಿನಿಧಿಸುತ್ತವೆಯೇ ಎಂಬುದನ್ನು ಚರ್ಚಿಸುವುದು ಮುಖ್ಯವಾಗುತ್ತದೆ. ಜನರನ್ನು ಹಲವು ಜಾತಿಗಳಾಗಿ ವಿಂಗಡಿಸಿ, ನಮ್ಮನ್ನು ಸಮಾನವಾಗಿ ನೋಡದ ಧರ್ಮವೊಂದಕ್ಕೆ ನಾವು ಸೇರಿದ್ದೇವೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿದಾಗ ಮಾತ್ರ ಹಿಂದುತ್ವದ ರಚನೆ ಸಫಲವಾಗುತ್ತದೆ. ಕೆಳಗೆ ನೀಡಿರುವ ಬಿ.ಆರ್ ಅಂಬೇಡ್ಕರ್ ಅವರ ಜಾತಿಯ ಸಂಯುಕ್ತತೆಯಿಂದ ಆರಿಸಿದ ಅಂಶಗಳು ಹಿಂದೂ ಸಮಾಜದ ರನೆಯನ್ನು ಬಟಾಬಯಲು ಮಾಡುತ್ತದೆ.


ಹಿಂದೂ ಸಮಾಜವೆಂಬುದು ಅಸ್ತಿತ್ವದಲ್ಲಿಲ್ಲ. ಅದು ಕೇವಲ ಜಾತಿಗಳ ಸಮೂಹ ಮಾತ್ರ. ಪ್ರತೀ ಜಾತಿಯೂ ತನ್ನ ಅಸ್ತಿತ್ವವನ್ನು ಅರಿತಿದೆ. ಜಾತಿಗಳು ಒಂದು ಒಕ್ಕೂಟವನ್ನು ಕೂಡಾ ಸ್ಥಾಪಿಸುವುದಿಲ್ಲ. ಒಂದು ಜಾತಿಗೆ ನಾವು ಇನ್ನೊಂದು ಜಾತಿ ಜೊತೆ ಸಂಬಂಧ ಹೊಂದಿದ್ದೇವೆ ಎಂಬುದು, ಹಿಂದೂ-ಮುಸ್ಲಿಂ ದಂಗೆಗಳ ಸಮಯದಲ್ಲಿ ಹೊರತಾಗಿ ಇತರ ಸಮಯಗಳಲ್ಲಿ ಆ ಭಾವನೆಯೇ ಇರುವುದಿಲ್ಲ. ಇತರ ಎಲ್ಲ ಸಂದರ್ಭಗಳಲ್ಲೂ ಪ್ರತಿಯೊಂದು ಜಾತಿ ತನ್ನನ್ನು ಪ್ರತ್ಯೇಕಗೊಳಿಸುತ್ತದೆ ಮತ್ತು ಇತರ ಜಾತಿಗಳಿಗಿಂತ ತನ್ನನ್ನು ಭಿನ್ನವಾಗಿಸುತ್ತದೆ.

ಬಹುಜನರು ಸಾಮಾನ್ಯವಾಗಿ ಈ ಹಬ್ಬಗಳನ್ನು ಜೀವನದ ಸರಳ ಸಂತೋಷಗಳ ಜೊತೆ ಬೆಸೆಯುತ್ತಾರೆ. ಬಾಲ್ಯದಲ್ಲಿ ಆಡಿದ ಹೋಳಿಯ ನೆನಪುಗಳು ನನ್ನಲ್ಲಿವೆ. ಹೋಳಿ ಮತ್ತು ದೀಪಾವಳಿಯಂದು ನನ್ನ ಹೆತ್ತವರು ನನಗೆ ಹೊಸ ಬಟ್ಟೆಯನ್ನು ಖರೀದಿಸುತ್ತಿದ್ದರು. ಬಿಹಾರದಲ್ಲಿ ಕನಿಷ್ಠ ಮೂರು ದಿನಗಳಾದರೂ ರಜೆಯಿರುತ್ತಿತ್ತು. ನಾವು ನಮ್ಮ ಪೂರ್ವಜರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುತ್ತಿದ್ದೆವು. ಈ ಹಿಂದೂ ಹಬ್ಬಗಳಿಗೆ ಸಾಂಸ್ಥಿಕ ಬೆಂಬಲವೂ ಇತ್ತು. ಶಾಲೆಗಳಲ್ಲಿ ಈ ಹಬ್ಬಗಳ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗುತ್ತಿತ್ತು.

ಮಾಧ್ಯಮಗಳು ಕೂಡಾ ಈ ಹಬ್ಬಗಳ ಹಿಂದಿರುವ ಕತೆಗಳನ್ನು ಪುನರುತ್ಪಾದಿಸುವ ಮತ್ತು ಪುನರುಚ್ಛರಿಸುವ ಮೂಲಕ ಇವುಗಳ ಜಾತಿವಾದಿ ಸ್ವಭಾವವನ್ನು ಅಡಗಿಸುವಲ್ಲಿ ತಮ್ಮ ಕಾಣಿಕೆ ನೀಡುತ್ತವೆ. ಬಹುಜನರು ಈ ಹಬ್ಬವನ್ನು ಬ್ರಾಹ್ಮಣೀಯ ಪ್ರಾಬಲ್ಯದ ಕಾರಣದಿಂದ ಆಚರಿಸುತ್ತಾರೆ. ಇದು ಒಂಥರಾ ನಿಮ್ಮ ಗುಲಾಮಗಿರಿಯನ್ನು ನೀವೇ ಆಚರಿಸಿದಂತೆ. ಒಂದು ಬಾರಿ ನಿಮಗೆ ಇದು ಮನವರಿಕೆಯಾದರೆ ಮತ್ತೆಂದೂ ನೀವು ಈ ಹಬ್ಬಗಳನ್ನು ಆಚರಿಸುವುದಿಲ್ಲ. ಇಂತಹ ಹಬ್ಬಗಳಲ್ಲಿ ಜನರನ್ನು ದೂರವಿಡುವ ಬಹಳಷ್ಟು ಗೆಳೆಯರನ್ನು ನಾನು ಹೊಂದಿದ್ದೇನೆ. ನೀವು ಬೆಳೆಯುವಾಗ ಎಂದೂ ಕಲಿಸದ ಇತಿಹಾಸದ ಬಗ್ಗೆ ನಿಮಗೆ ತಿಳಿದಾಗ ಈ ಬ್ರಾಹ್ಮಣೀಯ ಹಬ್ಬಗಳನ್ನು ಆಚರಿಸುವುದು ನೋವುದಾಯಕವಾಗುತ್ತದೆ.


ನಾವು ಏನನ್ನು ಆಚರಿಸುತ್ತಿದ್ದೇವೆ? ಎಂಬುದನ್ನು ಪ್ರಶ್ನಿಸುವುದು ಮುಖ್ಯವಾಗುತ್ತದೆ. ಹಿಂದೂ ಹಬ್ಬಗಳನ್ನು ಆಚರಿಸುವಾಗ ನಾವು ಜಾತಿ ವ್ಯವಸ್ಥೆಯನ್ನು ಆಚರಿಸುತ್ತೇವೆಯೇ? ಒಂದು ಕಠೋರವಾದ ವ್ಯವಸ್ಥೆಯ ವಿಜಯವನ್ನು ನಾವು ಆಚರಿಸುತ್ತಿದ್ದೇವೆಯೇ? ‘ಹೋಳಿಕಾ’ ಎಂಬ ಮಹಿಳೆಯೋರ್ವಳನ್ನು ದಹಿಸುವುದನ್ನು ನಾವು ಹೇಗೆ ಆಚರಿಸಲು ಸಾಧ್ಯ? ಬಹುಶಃ ‘ರಾಕ್ಷಸಿ’ ಎಂದು ಗ್ರಹಿಸಲ್ಪಟ್ಟಾಕೆಯ ಮೇಲಿನ ದೌರ್ಜನ್ಯವನ್ನು ಸಾಮಾನ್ಯ ಎಂಬಂತೆ ಬಿಂಬಿಸಲಾಗಿರಬಹುದು, ಒಂಥರಾ ಇಶ್ರತ್ ಜಹಾನ್‌ಳ ಬಗ್ಗೆ ಜನರು ಮಾತನಾಡುವಾಗ ವ್ಯಕ್ತಪಡಿಸುವ ಸಹಜತೆಯಂತೆಯೇ. ಇಶ್ರತ್‌ಳ ಬರ್ಬರ ಹತ್ಯೆಯನ್ನು ಆಕೆ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾಳೆ ಎಂಬ ಅಂಶ ಮುಚ್ಚಿಹಾಕಿತ್ತು. ಅಥವಾ ಕೇರಳದಲ್ಲಿ ಚಿತ್ರಲೇಖಾ ಎಂಬಾಕೆಯ ಮೇಲೆ ಸಿಪಿಐ(ಎಂ)ನ ಗೂಂಡಾಗಳು ನಡೆಸಿದ ನಿರಂತರ ಹಲ್ಲೆ ಕೂಡಾ ಮಾಧ್ಯಗಳಲ್ಲಿ ಸುದ್ದಿಯಾಗಲಿಲ್ಲ.


ಸೀಮಿತಗೊಳಿಸಲ್ಪಟ್ಟವರ ಮೇಲಿನ ದೌರ್ಜನ್ಯಗಳನ್ನು ಸಹಜವೆಂಬಂತೆ ಬಿಂಬಿಸಲಾಯಿತು. ದಾದ್ರಿಯಲ್ಲಿ ನಡೆದ ಘಟನೆಯ ಗಂಭೀರತೆಯ ಬದಲಾಗಿ ಜನರು ಅಲ್ಲಿ ಇದ್ದಿದ್ದು ಗೋಮಾಂಸವೇ ಅಥವಾ ಇತರ ಮಾಂಸವೇ ಎಂದು ಕೇಳಿದ್ದೇ ಹೆಚ್ಚು. ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ‘ದಕ್ಷಿಣ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ’ ಒಂದು ಸಾಮಾನ್ಯ ವಿದ್ಯಮಾನ ಎಂದು ಕೆಲವರು ಸಮರ್ಥಿಸಿಕೊಳ್ಳಬಹುದು. ರೋಹಿತ್ ವೇಮುಲಾ ಎಂಬ ಓರ್ವ ಪಿಎಚ್ ಡಿ ವಿದ್ಯಾರ್ಥಿಯ ಸಾವು ಆತ ದಲಿತನೇ ಅಥವಾ ಇತರ ಹಿಂದುಳಿದ ವರ್ಗಕ್ಕೆ ಸೇರಿದವನೇ ಎಂಬ ವಿಷಯಕ್ಕೆ ಪರಿವರ್ತಿಸಲಾಗುತ್ತದೆ.


ಸ್ಮತಿ ಇರಾನಿ ಸಂಸತ್‌ನಲ್ಲಿ ಮಹಿಷಾಸುರ ಹುತಾತ್ಮೆಯನ್ನು ಆಚರಿಸುವ ವಿಷಯವನ್ನು ಪ್ರಸ್ತಾಪಿಸಬಹುದು, ಆಕೆ ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರು ತಮ್ಮ ‘ದುರ್ಗಾ’ಳನ್ನು ರಕ್ಷಿಸಿ ಎಂದು ಹೇಳಬಹುದು, ಆದರೆ ಆಕೆ ಎಂದೂ ಹೋಳಿಕಾ, ಪೂತನಿ ಮತ್ತು ಶೂರ್ಪನಖಿಯ ಕ್ರೂರ ಹತ್ಯೆ ಬಗ್ಗೆ ಮಾತನಾಡುವುದಿಲ್ಲ. ಈ ಹಬ್ಬಗಳು ಅದೆಷ್ಟು ಜಾತಿವಾದಿ ಮತ್ತು ಅಮಾನುಷವಾಗಿವೆ ಎಂದು ಅವರು ಚರ್ಚಿಸುವುದಿಲ್ಲ.

Writer - ಅತುಲ್ ಆನಂದ್

contributor

Editor - ಅತುಲ್ ಆನಂದ್

contributor

Similar News