ಜರ್ಮನ್ ಬೇಕರಿ ಸ್ಪೋಟ ಖುಲಾಸೆ ಜನತೆಯ ಪ್ರಶ್ನೆಗಳಿಗೆ ಉತ್ತರಿಸಿತೇ ಎಟಿಎಸ್?
ಕೇವಲ ಎರಡು ವಾರಗಳಲ್ಲಿ ದೇಶದ ಎರಡು ಉನ್ನತ ತನಿಖಾ ಸಂಸ್ಥೆಗಳಾದ ದಿಲ್ಲಿ ಪೊಲೀಸ್ ವಿಶೇಷ ಘಟಕ ಹಾಗೂ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳಕ್ಕೆ ಆಘಾತವಾಗಿದೆ. ಈ ತನಿಖಾ ಸಂಸ್ಥೆಗಳ ಕಟ್ಟುಕಥೆ ಸಿದ್ಧಾಂತವನ್ನು ತಿರಸ್ಕರಿಸಿದ ನ್ಯಾಯಾಲಯ, ಒಂದು ಪ್ರಕರಣದಲ್ಲಿ ಆರೋಪವನ್ನು ತಳ್ಳಿಹಾಕಿದ್ದರೆ, ಮತ್ತೊಂದು ಪ್ರಕರಣದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ಈ ಎರಡು ಪ್ರಕರಣಗಳೆಂದರೆ ಅಬ್ದುಲ್ ತುಂಡಾ ಹಾಗೂ ಮಿರ್ಜಾ ಹಿಮಾಯತ್ ಬೇಗ್ ಪ್ರಕರಣಗಳು
ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬಾ ಸಂಘಟನೆಗೆ ತುಂಡಾ ಬಾಂಬ್ ತಯಾರಿಕೆ ಮಾಡಿಕೊಡುತ್ತಿದ್ದರು ಎನ್ನುವುದು ದಿಲ್ಲಿ ಪೊಲೀಸ್ ವಿಶೇಷ ಘಟಕದ ಆರೋಪ. ಇವರ ವಿರುದ್ಧ ಬರೋಬ್ಬರಿ 20 ಪ್ರಕರಣಗಳನ್ನು ದಾಖಲಿಸಿ ಉಗ್ರನನ್ನಾಗಿ ಚಿತ್ರಿಸಿತ್ತು. ಆದರೆ ಆರೋಪಪಟ್ಟಿ ಸಲ್ಲಿಸಿದ್ದು ಕೇವಲ ನಾಲ್ಕು ಪ್ರಕರಣಗಳಲ್ಲಿ. ಮಾರ್ಚ್ 5ರಂದು ದಿಲ್ಲಿಯ ವಿಚಾರಣಾ ನ್ಯಾಯಾಲಯ ಕೊನೆಯ ನಾಲ್ಕನೆ ಪ್ರಕರಣದಲ್ಲೂ ತುಂಡಾ ಅವರನ್ನು ಖುಲಾಸೆಗೊಳಿಸಿದೆ. ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪವನ್ನು ವಜಾ ಮಾಡಿದೆ. ಆರೋಪ ವಜಾ ಮಾಡುವುದು ಎಂದರೆ, ಎಲ್ಲ ಆರೋಪಗಳೂ ಸುಳ್ಳು ಹಾಗೂ ವಾದಿಗಳು ವಿಚಾರಣೆಗೇ ಹಾಜರಾಗದಿರುವುದು.
ಬೇಗ್ ಪ್ರಕರಣ ಕೂಡಾ ಹಾಗೆಯೇ. ಪುಣೆಯಲ್ಲಿ ಸಂಭವಿಸಿದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಮಾರ್ಚ್ 17ರಂದು ಮುಂಬೈ ಹೈಕೋರ್ಟ್, ಅವರ ಮೇಲಿನ ಎಲ್ಲ ಭಯೋತ್ಪಾದಕ ಆರೋಪಗಳನ್ನೂ ವಜಾ ಮಾಡಿ ಅವರನ್ನು ಆರೋಪಮುಕ್ತಗೊಳಿಸಿದೆ. ಅವರ ವಿರುದ್ಧದ ಇತರ 11 ಪ್ರಕರಣಗಳ ಪೈಕಿ ಎರಡನ್ನು ಮಾತ್ರ ಎತ್ತಿ ಹಿಡಿದಿದೆ. ಒಂದು ಸ್ಫೋಟಕಗಳನ್ನು ಹೊಂದಿದ್ದುದು ಹಾಗೂ ಇನ್ನೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು.
ಈ ಎರಡೂ ಪ್ರಕರಣಗಳು ನಮ್ಮ ತನಿಖಾ ವ್ಯವಸ್ಥೆಯ ಹುಳುಕುಗಳನ್ನು ಬಹಿರಂಗಗೊಳಿಸಿವೆ. ಜತೆಗೆ ತನಿಖಾ ಸಂಸ್ಥೆಗಳು ಉಗ್ರ ಪ್ರಕರಣಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುವು ತೋರಿಸಿಕೊಟ್ಟಿವೆ. ಆದರೆ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸುವ ಕೇವಲ ಎರಡು ನಿದರ್ಶನಗಳಿವು. ಯಾವುದೇ ಪುರಾವೆ ಇಲ್ಲದಿದ್ದರೂ ಉಗ್ರರು ಎಂಬ ಹಣೆಪಟ್ಟಿ ಕಟ್ಟಿ ಅಬ್ಬರದ ಪ್ರಚಾರ ಪಡೆಯುವುದು. ಕೊನೆಗೆ ಆರೋಪಗಳು ಸಾಬೀತಾಗದೇ, ಆರೋಪಿಗಳು ಖುಲಾಸೆಯಾಗುತ್ತಾರೆ. ಹೀಗೆ ಹಲವು ವರ್ಷಗಳ ಕಾಲ ಸುಳ್ಳು ಆರೋಪ ಹೊರಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಪ್ರಕರಣಗಳು ಸಾಕಷ್ಟಿವೆ.
ಫ್ರೇಮ್ಡ್ಡ್, ಡೇವ್ಡ್, ಅಕ್ವಿಟೆಡ್ ಶೀರ್ಷಿಕೆಯ ವರದಿಯೊಂದನ್ನು ದಿಲ್ಲಿಯ ಜಾಮಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಶನ್ ಬಿಡುಗಡೆ ಮಾಡಿದೆ. ಇದರಲ್ಲಿ ಇಂತಹ ಹಲವು ಯುವಕರ ಬಗೆಗಿನ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ದಿಲ್ಲಿ ವಿಶೇಷ ಪೊಲೀಸ್ ಘಟಕ ಯುವಕರನ್ನು ಭಯೋತ್ಪಾದನೆ ಆರೋಪದಲ್ಲಿ ಬಂಧಿಸಿ, ಜೈಲಿಗೆ ತಳ್ಳಿ, ಚಿತ್ರಹಿಂಸೆ ನೀಡುತ್ತದೆ. ಕೊನೆಗೆ ಆರೋಪಿಗಳು ಖುಲಾಸೆಗೊಳ್ಳುತ್ತಾರೆ ಎಂದು ವರದಿ ವಿವರಿಸಿದೆ.
ಮಹಾರಾಷ್ಟ್ರದಲ್ಲಿ 2002ರ ಘಾಟ್ಕೋ ಸ್ಫೋಟ ಪ್ರಕರಣವನ್ನು ಗಮನಿಸಿದರೆ, ಎಲ್ಲ ಎಂಟು ಮಂದಿ ಆರೋಪಿಗಳೂ ಮುಸ್ಲಿಮರು. ವಿಚಾರಣೆಯಲ್ಲಿ ಇವರನ್ನು ಖುಲಾಸೆ ಮಾಡಲಾಯಿತು. ಇನ್ನೊಬ್ಬ ಆರೋಪಿ ಖ್ವಾಜಾ ಯೂನುಸ್ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದ. ಆತನ ಲಾಕಪ್ ಸಾವಿನ ಸಂಬಂಧ ನಾಲ್ವರು ಪೊಲೀಸರ ವಿರುದ್ಧ ವಿಚಾರಣೆ ಮುಂದುವರಿದಿದೆ.
ಅಂತೆಯೇ 2008ರಲ್ಲಿ ನಡೆದ ಮಾಲೇಗಾಂವ್ ಸ್ಫೋಟ. ಆರಂಭಿಕ ಹಂತದಲ್ಲಿ ಹಲವು ಮಂದಿ ಮುಸ್ಲಿಂ ಮುಖಂಡ ರನ್ನು ಬಂಧಿಸಲಾಯಿತು. ಆದರೆ ಪುರಾವೆಗಳಿಂದ ನಂತರ ಸಾಬೀತಾದಂತೆ, ಇದರಲ್ಲಿ ಕೈವಾಡ ಇದ್ದುದು ಹಿಂದೂ ಉಗ್ರ ಗಾಮಿ ಸಂಘಟನೆಗಳದ್ದು. ಈ ಪ್ರಕರಣದ ಇನ್ನೊಂದು ವಿಶೇಷವೆಂದರೆ, ಹನ್ನೊಂದು ಆರೋಪಿಗಳ ವಿರುದ್ದ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಕಾಯ್ದೆಯ ಅನ್ವಯ ಮಾಡಿದ್ದ ದೂರನ್ನು ಕೈಬಿಡಲು ನಿರ್ಧರಿಸುವ ಪ್ರಯತ್ನ ನಡೆಯಿತು. ರಾಜಕೀಯ ಒತ್ತಡದಿಂದಾಗಿ ಈ ಕ್ರಮಕ್ಕೆ ಎಟಿಎಸ್ ಮುಂದಾಗಿದೆ ಎನ್ನಲಾಗಿದೆ.
ಮುಂದೆ 2014ರಲ್ಲಿ, ಸುಪ್ರೀಂಕೋರ್ಟ್, ಗುಜರಾತ್ ಅಕ್ಷರಧಾಮ ದೇವಸ್ಥಾನ ಮೇಲೆ 2002ರಲ್ಲಿ ನಡೆದ ದಾಳಿಯ ಸಂಬಂಧ ಶಿಕ್ಷೆಗೆ ಒಳಗಾಗಿದ್ದ ಆರು ಮಂದಿಯನ್ನು ಆರೋಪಮುಕ್ತಗೊಳಿಸಿತು. ಇವರು 11 ವರ್ಷಗಳನ್ನು ವಿನಾಕಾರಣ ಜೈಲಿನಲ್ಲಿ ಕಳೆದಿದ್ದರು. ಆ ಪೈಕಿ ಒಬ್ಬ ಜೈಲು ಅನುಭವದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ.
ಈ ಎಲ್ಲವೂ ಸಹಜವಾಗಿಯೇ ಪ್ರಮುಖ ಪ್ರಶ್ನೆ ಮೂಡಿಸುತ್ತದೆ. ಪ್ರತಿ ಸ್ಫೋಟ ಪ್ರಕರಣಗಳಲ್ಲೂ ಏಕೆ ಮುಸ್ಲಿಮರನ್ನಷ್ಟೇ ಗುರಿ ಮಾಡಲಾಗುತ್ತದೆ? ತನಿಖಾ ಸಂಸ್ಥೆ ತಪ್ಪಾಗಿ ವಿಚಾರಣೆ ನಡೆಸಿದಾಗ ಏನಾಗುತ್ತದೆ? ಆರೋಪಿಗಳಾಗಿದ್ದು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದ ವ್ಯಕ್ತಿಗಳಿಗೆ ಇದು ಹೊಣೆಗಾರಿಕೆ ಪ್ರದರ್ಶಿಸುತ್ತದೆಯೇ? ಒಂದು ಬಾರಿ ಆರೋಪಮುಕ್ತಗೊಂಡ ಬಳಿಕ, ನೈಜ ಆರೋಪಿಗಳು ಯಾರು ಎನ್ನುವುದು ಜನಸಾಮಾನ್ಯರಿಗೆ ತಿಳಿಯುತ್ತದೆಯೇ? ಇದು ವಾಸ್ತವವಾಗಿ ಆರೋಪಿಗಳಾಗಿರುವವರನ್ನು ಹಿಡಿಯಲು ತನಿಖಾ ಸಂಸ್ಥೆ ಅಸಮರ್ಥ ಎಂಬುವುದನ್ನು ಬಿಂಬಿಸುವುದಿಲ್ಲವೇ? ವಾಸ್ತವವಾಗಿ ನಿಷ್ಪಕ್ಷಪಾತವಾಗಿ ಇರಬೇಕಾದ ತನಿಖಾ ಸಂಸ್ಥೆಗಳು ಮತ್ತಾದರೂ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸುವುದಿಲ್ಲವೇ?
ಮಿರ್ಜಾ ಹಯಾತ್ ಪ್ರಕರಣದಲ್ಲಿ, ತನಿಖಾ ಸಂಸ್ಥೆ ಹಾಗೂ ವಿಚಾರಣಾ ಸಂಸ್ಥೆ ಎರಡೂ ದೇಶವನ್ನು ತಪ್ಪುದಾರಿಗೆ ಎಳೆದ ವಿಚಾರದಲ್ಲಿ ಸಮಾನ ತಪ್ಪು ಮಾಡಿವೆ; ಎರಡೂ ಅಷ್ಟೇ ನಿಂದನಾಯೋಗ್ಯ. ಏಕೆಂದರೆ ನೈಜ ಆರೋಪಿಗಳು ತಪ್ಪಿಸಿಕೊಂಡಿದ್ದು, ಕೆಲವರನ್ನು ಬಲಿಪಶು ಮಾಡಲು ತನಿಖಾ ಸಂಸ್ಥೆ ಮುಂದಾಗಿರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ, ಬೇಗ್ ವಿರುದ್ಧದ ಪ್ರಕರಣಗಳು ಕನಿಷ್ಠ ದಿಗಿಲು ಹುಟ್ಟಿಸುವಂಥವು. ಕಾನೂನಿನ ಬಗ್ಗೆ ಸ್ವಲ್ಪ ಅರಿವು ಇರುವ ಜನಸಾಮಾನ್ಯರು ಕೂಡಾ ಇದರಲ್ಲಿನ ದೋಷಗಳನ್ನು ಪತ್ತೆ ಮಾಡಬಹುದು.
ನಿಗೂಢ ಸಾವು
2011ರ ನವೆಂಬರ್‌ನಲ್ಲಿ, ಅಂದರೆ ಬೇಗ್ ಬಂಧನವಾದ ಒಂದು ವರ್ಷ ಬಳಿಕ, ದಿಲ್ಲಿ ಪೊಲೀಸ್ ವಿಶೇಷ ಪಡೆ ಖ್ವತೀಲ್ ಸಿದ್ದಿಕಿ ಎಂಬ 28 ವರ್ಷದ ಯುವಕನನ್ನು ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಬಂಧಿಸಿತು. ಸಿದ್ದಿಕಿ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿದ್ದು, 2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸ್ಫೋಟ ಹಾಗೂ ಜರ್ಮನ್ ಬೇಕರಿ ಸ್ಫೋಟದಲ್ಲಿ ಈತನ ಕೈವಾಡವಿದೆ ಎಂದು ಘೋಷಿಸಿದರು.
ಬೆಂಗಳೂರು ಹಾಗೂ ದಿಲ್ಲಿ ಪೊಲೀಸರು ಸಿದ್ದಿಕಿಯ ವಿಚಾರಣೆ ನಡೆಸಿದರು.
ಆದರೆ ವೇಳೆ ಸಿದ್ದಿಕಿ ಹಾಗೂ ಬೇಗ್ ನಡುವೆ ಯಾವ ಸಂಬಂಧವೂ ಇಲ್ಲದಿರುವುದು ವಿಚಾರಣೆಯಿಂದ ತಿಳಿದುಬಂತು. ಸಿದ್ದಿಕಿಯ ವಿಚಾರಣೆ ನಡೆಸುವ ವೇಳೆ ದಿಲ್ಲಿ ಹಾಗೂ ಬೆಂಗಳೂರು ಪೊಲೀಸರು, ಪುಣೆಯ ಎರಡು ಪ್ರದೇಶಗಳಲ್ಲಿ ಸಿದ್ದಿಕಿ ಹಾಗೂ ಯಾಸಿನ್ ಭಟ್ಕಳ್ ಜಂಟಿಯಾಗಿ ಬಾಂಬ್ ಇಟ್ಟಿದ್ದರು ಎಂದು ಹೇಳಿಕೆ ನೀಡಿದರು. ಸಿದ್ದಿಕಿ ಇದರ ಜತೆಗೆ ದಗಡುಸೇಥ್ ಹಲ್ವಾಯಿ ಗಣೇಶ ದೇವಾಲಯದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ. ಮತ್ತು ಜರ್ಮನ್ ಬೇಕರಿಗೆ ಬಾಂಬ್ ಇಡಲು ಯಾಸಿನ್‌ನನ್ನು ಜತೆಗೆ ಕರೆದೊಯ್ದ ಎಂದು ಹೇಳಿದರು.
ಇದು ಮಹಾರಾಷ್ಟ್ರ ಎಟಿಎಸ್‌ನ ಸಿದ್ಧಾಂತಕ್ಕೆ ವಿರುದ್ಧವಾಯಿತು. ಅವರ ಪ್ರಕಾರ ಭಟ್ಕಳ್ ಹಾಗೂ ಬೇಗ್ ಇಡೀ ದಿನ ಪುಣೆಯಲ್ಲಿ ಜತೆಗಿದ್ದರು. ಈ ವೈರುದ್ಯದ ಮಾಹಿತಿಯನ್ನು ಪುಣೆ ವಿಚಾರಣಾ ನ್ಯಾಯಾಲಯದ ಮುಂದೆ ತರಲೇ ಇಲ್ಲ. ವಿಚಾರಣಾ ನ್ಯಾಯಾಲಯ ಬೇಗ್‌ಗೆ ಗಲ್ಲು ಶಿಕ್ಷೆ ಘೋಷಿಸಿತು.
ಈ ವೈರುದ್ಯಗಳನ್ನು ಸಮನ್ವಯಗೊಳಿಸುವ ಪ್ರಯತ್ನವಾಗಿ ಎಟಿಎಸ್, ದಿನೇಶ್ ಕದಂ ಎಂಬವರನ್ನು ಸಿದ್ದಿಕಿ ತನಿಖೆಗಾಗಿ ಕಳುಹಿಸಿಕೊಟ್ಟಿತು. ಕದಂ ಪುಣೆಗೆ ಮರಳಿ, ಸಿದ್ದಿಕಿ ವಿರುದ್ಧ ಹೊಸ ದೂರು ದಾಖಲಿಸಿದರು. ಪುಣೆಯ ದೇವಾಲಯವೊಂದರಲ್ಲಿ ಬಾಂಬ್ ಇರಿಸಲು ಸಂಚು ರೂಪಿಸಿದ್ದ ಎಂದು ಹೇಳಿದರು. ಎಟಿಎಸ್ ತಕ್ಷಣ ಸಿದ್ದಿಕಿಯನ್ನು ಕಸ್ಟಡಿಗೆ ಪಡೆದುಕೊಂಡು, 2012ರ ಮೇ ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ವಿಚಾರಣೆಗೆ ಕರೆತಂದಿತು. ಮೇ 28ರಂದು ಪುಣೆ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಸಿದ್ದಿಕಿಯನ್ನು ಬಿಗಿ ಭದ್ರತೆಯ ಯರವಾಡ ಜೈಲಿನಲ್ಲಿ ಇಡಲಾಯಿತು.
ಹನ್ನೊಂದು ದಿನಗಳ ಬಳಿಕ ಅಂದರೆ ಜೂನ್ 8ರಂದು, ಆತ ನಿಗೂಢವಾಗಿ ಕೊಲೆಯಾಗಿದ್ದ. ದಿಲ್ಲಿ ಪೊಲೀಸ್ ವಿಶೇಷ ಪಡೆ ಆತನ ವಿರುದ್ಧ ಹೂಡಿದ್ದ ಮೊಕದ್ದಮೆಯಲ್ಲಿ ಆತನನ್ನು ಅಂದು ದಿಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಬೇಕಿತ್ತು. ಸಿದ್ದಿಕಿಯನ್ನು ಇಬ್ಬರು ಸಹ ಕೈದಿಗಳು ಪರಸ್ಪರ ಜಗಳ ಮಾಡಿಕೊಂಡು ಹತ್ಯೆ ಮಾಡಿದರು ಎಂದು ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡರು. ಪೊಲೀಸರ ಪ್ರಕಾರ, ಚಡ್ಡಿಯ ದಾರದಿಂದ ಬಿಗಿದು ಉಸಿರುಗಟ್ಟಿಸಿ ಸಿದ್ದಿಕಿಯನ್ನು ಕೊಲೆ ಮಾಡಲಾಗಿದೆ. ಸಿದ್ದಿಕಿ ಕೊಲೆ ಇನ್ನೂ ನಿಗೂಢವಾಗಿಯೇ ಉಳಿದಿರುವ ನಡುವೆಯೇ, ಪುಣೆ ವಿಚಾರಣಾ ನ್ಯಾಯಾಲಯ ಹಿಮಾಯತ್ ಬೇಗ್‌ಗೆ ಗಲ್ಲುಶಿಕ್ಷೆ ವಿಧಿಸಿ, ತೀರ್ಪು ನೀಡಿತು.
ಆದರೆ ಮುಂಬೈ ಹೈಕೋರ್ಟ್ ಕ್ರಮೇಣ ವಿಚಾರಣೆ ನಡೆಸಿ, ಬೇಗ್‌ನನ್ನು ಭಯೋತ್ಪಾದನೆ ಸಂಬಂಧಿ ದೂರುಗಳಿಂದ ಮುಕ್ತಗೊಳಿಸಿದೆ. ಜತೆಗೆ ಇದೀಗ ಬೇಗ್, ಸ್ಫೋಟಕ ಹೊಂದಿದ್ದ ಪ್ರಕರಣದ ಸಂಬಂಧ ಆಗಿರುವ ಶಿಕ್ಷೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಇನ್ನೂ ಉಳಿದುಕೊಂಡಿರುವ ಪ್ರಶ್ನೆ ಎಂದರೆ, ಜರ್ಮನ್ ಬೇಕರಿ ಸ್ಫೋಟಕ್ಕೆ ನಿಜವಾಗಿ ಯಾರು ಹೊಣೆ?
ತುಂಡಾ ಹಾಗೂ ಬೇಗ್ ಪ್ರಕರಣಗಳ ವಿಚಾರಣೆಗೆ ಹೇರಳವಾಗಿ ಹಣ ವೆಚ್ಚವಾಗಿದೆ. ತಪ್ಪು ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆ ನಡೆಸುವಾಗ, ಖಂಡಿತವಾಗಿಯೂ ದೇಶವನ್ನು ತಪ್ಪುದಾರಿಗೆ ಎಳೆದದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಬೇಕು. ಆರೋಪಿಗಳನ್ನು ಆರಂಭದಲ್ಲಿ ಬಂಧಿಸಿದಾಗ, ಮಾಧ್ಯಮಗಳು ಕೂಡಾ ಅದನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತವೆ. ಆದರೆ ಬೇಗ್ ದೋಷಮುಕ್ತಗೊಂಡ ಬಳಿಕ, ತನಿಖಾ ಸಂಸ್ಥೆ, ಈ ಪ್ರಕರಣ ಏಕೆ ವಿಫಲವಾಯಿತು ಎಂದು ದೇಶದ ಜನತೆಗೆ ವಿವರಿಸಬೇಡವೇ?
ಜರ್ಮನ್ ಬೇಕರಿ ಸ್ಫೋಟ
ಪುಣೆಯ ಪ್ರಸಿದ್ಧ ಕೊರೇಗಾಂವ್ ಪಾರ್ಕ್‌ನ ಜರ್ಮನ್ ಬೇಕರಿಯಲ್ಲಿ 2010ರ ಫೆಬ್ರವರಿ 13ರಂದು ಪ್ರಬಲ ಬಾಂಬ್ ಸ್ಫೋಟಿಸಿತು. ಈ ಬೇಕರಿ ಯುವಕರು ಹಾಗೂ ವಿದೇಶಿ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯವಾಗಿರುವ ಓಶೋ ಆಶ್ರಮಕ್ಕೆ ತೀರಾ ಸನಿಹದಲ್ಲಿದೆ. ಸ್ಫೋಟದಲ್ಲಿ 17 ಮಂದಿ ಮೃತಪಟ್ಟು 58 ಮಂದಿ ಗಾಯಗೊಂಡರು. ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಅಥವಾ ಎಟಿಎಸ್ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತು. ಬಾಂಬ್ ಇಟ್ಟ ವ್ಯಕ್ತಿಯನ್ನು ಬೇಕರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆ ಮಾಡಿತು. ಆದರೆ ಮುಂದಿನ ನಾಲ್ಕು ತಿಂಗಳವರೆಗೂ ಯಾರನ್ನೂ ಬಂಧಿಸಲಿಲ್ಲ.
2010ರ ಜೂನ್‌ನಲ್ಲಿ, ಎಟಿಎಸ್, ಪುಣೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂದಿಸಿದಂತೆ ಅಬ್ದುಲ್ ಸಮದ್ ಎಂಬ ಭಟ್ಕಳದ ಮುಸ್ಲಿಂ ಯುವಕನನ್ನು ಬಂಧಿಸಿತು. ಆದರೆ ಆತನ ಬಂಧನದ ಕೆಲವೇ ಸಮಯದ ಬಳಿಕ, ಸಮದ್ ಅವರ ಪೋಷಕರು ಪತ್ರಿಕಾಗೋಷ್ಠಿ ನಡೆಸಿ, ಆ ದಿನ ಸಮದ್ ಭಟ್ಕಳದಲ್ಲೇ ತನ್ನ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೀಡಿಯೊ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ಅಲ್ಲಿಗೆ ಎಟಿಎಸ್‌ನ ಸಿದ್ಧಾಂತ ಮಣ್ಣುಪಾಲಾಯಿತು.
ತಕ್ಷಣ ನಿಲುವು ಬದಲಾಯಿಸಿದ ಎಟಿಎಸ್, ಬಾಂಬ್ ಇಟ್ಟ ವ್ಯಕ್ತಿ ಸಮದ್‌ನ ಸಹೋದರ ಅಹ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ ಎಂದು ಹೊಸ ಕತೆ ಹೆಣೆಯಿತು. ಸಮದ್‌ನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದ್ದು, ಆತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ.
2010ರ ಸೆಪ್ಟಂಬರ್‌ನಲ್ಲಿ, ಎಟಿಎಸ್, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪುಟ್ಟ ಪಟ್ಟಣ ಉದ್ಗೀರ್‌ನ ಹಯಾತ್‌ಬೇಗ್ ಎಂಬಾತನನ್ನು ಬಂಧಿಸಿತು. ಬೇಗ್, ಯಾಸಿನ್ ಭಟ್ಕಳ್ ಜತೆ ಸೇರಿ ಜರ್ಮನಿ ಬೇಕರಿ ಬಾಂಬ್ ಸ್ಫೋಟ ನಡೆಸಿದರು ಎಂದು ಎಟಿಎಸ್ ಬಿಂಬಿಸಿತು. ಆತನ ಬಂಧನದ ವೇಳೆ, ಬೇಗ್ ಪುಟ್ಟ ಸೈಬರ್ ಕೆಫೆ ನಡೆಸುತ್ತಿದ್ದರು. ಬೇಗ್ ತನ್ನ ತಪ್ಪೊಪ್ಪಿಕೊಂಡಿದ್ದು, ಆತನ ಮನೆಯಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಿಸಿತು.
2010ರ ಡಿಸೆಂಬರ್‌ನಲ್ಲಿ ಬೇಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಯಾಸಿನ್ ಭಟ್ಕಳ್, ಬೇಗ್ ಅವರ ಸೈಬರ್ ಕೆಫೆಯಲ್ಲಿ ಬಾಂಬ್ ಸಿದ್ಧಪಡಿಸಿದ್ದು, ಫೆಬ್ರವರಿ 13ರಂದು ಮುಂಜಾನೆ ಇಬ್ಬರೂ ಸೇರಿಕೊಂಡು ಅದನ್ನು ಉದ್ಗೀರ್‌ನಿಂದ 388 ಕಿಲೋಮೀಟರ್ ದೂರದ ಪುಣೆಗೆ ತಂದರು ಎಂದು ವಿವರಿಸಿತು. ಸಂಜೆ 5 ಗಂಟೆ ವೇಳೆಗೆ ಜರ್ಮನ್ ಬೇಕರಿಯಲ್ಲಿ ಬಾಂಬ್ ಇಡಲಾಗಿದ್ದು, 6:50ಕ್ಕೆ ಅದು ಸ್ಫೋಟಗೊಂಡಿತು ಎಂದು ಆರೋಪಪಟ್ಟಿ ವಿವರಿಸತು.