ಮರಾಠವಾಡದಲ್ಲಿ ಭೀಕರ ಬರ:ಹಸು ಸಾಕಾಣಿಕೆ ಬಿಸಿ ತುಪ್ಪ- ಬಿಜೆಪಿಗೆ ಹಿಡಿಶಾಪ
ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ದೇಶದ ಶ್ರೀಮಂತ ರಾಜ್ಯದಲ್ಲಿ ಇದೀಗ ಲಕ್ಷಾಂತರ ಮಂದಿ ಕಡುಬಡತನದ ದವಡೆಗೆ ಸಿಲುಕುತ್ತಿದ್ದಾರೆ. ಇದರಿಂದ ಹಳ್ಳಿಮಂದಿಯಲ್ಲಿ ಹತಾಶೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಪಕ್ಷದ ಮೇಲಿನ ಮುನಿಸು ಹೆಚ್ಚುತ್ತಿದೆ.
ಹಿಂದೂಧರ್ಮದಲ್ಲಿ ಪವಿತ್ರಸ್ಥಾನ ಇರುವ ಹಸುಗಳ ವಧೆಯನ್ನು ಐತಿಹಾಸಿಕವಾಗಿ ನಿಷೇಧಿಸಲಾಗಿದೆ. ಆದರೆ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತು ದೇಶವಾದ ಭಾರತದಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದ ನಿದರ್ಶನಗಳಿಲ್ಲ.
ಆದರೆ ಕಳೆದ ವರ್ಷದಿಂದೀಚೆಗೆ, ಮಹಾರಾಷ್ಟ್ರದಂಥ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ನಿಷೇಧವನ್ನು ವಿಸ್ತತಗೊಳಿಸಲಾಗಿದ್ದು, ಎತ್ತು ಹಾಗೂ ಎಮ್ಮೆಗಳ ವಧೆಯನ್ನೂ ನಿಷೇಧಿಸಲಾಗಿದೆ. ಹಿಂದೂ ಜಾಗೃತ ಪಡೆಗಳು ನಿಷೇಧವನ್ನು ಜಾರಿಗೊಳಿಸುವ ಸಲುವಾಗಿ ವ್ಯಾಪಾರಿಗಳ ಮೇಲೆ ದಾಳಿಗೆ ಮುಂದಾಗಿವೆ.
ಮೋದಿ ಹಾಗೂ ಅವರ ರಾಷ್ಟ್ರೀಯವಾದಿ ಬಿಜೆಪಿ ಭಾರತದ ಬಹುಸಂಖ್ಯಾತ ಹಿಂದೂ ನಂಬಿಕೆಗಳಿಗೆ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಾವಳಿಗಳು ಜಾರಿಗೆ ಬಂದಿವೆ. 18 ಕೋಟಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಗೋಮಾಂಸ ನಿಷೇಧದ ಪರಿಣಾಮ ಭೀಕರ. ದೇಶಾದ್ಯಂತ ಜಾನುವಾರುಗಳ ಬೆಲೆ ಕುಸಿದಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದ ಮಾಂಸ ರಫ್ತು ಶೇಕಡ 13ರಷ್ಟು ಕಡಿಮೆಯಾಗಿದೆ. ಭಾರತದ ಈ ನಷ್ಟ, ಪ್ರತಿಸ್ಪರ್ಧಿ ಬ್ರೆಜಿಲ್‌ಗೆ ದೊಡ್ಡ ಲಾಭವಾಗಿ ಪರಿಣಮಿಸಿದೆ.
ಮೇಲಿಂದ ಮೇಲೆ ಬರಗಾಲ ಹಾಗೂ ಅಕಾಲಿಕ ಮಳೆಯಿಂದಾಗಿ ಈಗಾಗಲೇ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರ ಪಾಲಿಗಂತೂ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಾನುವಾರುಗಳಿಗೆ ಮೇವು ಮತ್ತು ನೀರು ಕೂಡಾ ನೀಡುವುದು ಕಷ್ಟ ಎಂಬ ಸ್ಥಿತಿ ಒಂದೆಡೆಯಾದರೆ, ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲಾಗದ ದಯನೀಯ ಸ್ಥಿತಿ ಇನ್ನೊಂದೆಡೆ. ಹೀಗೆ ರೈತರು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.
"ಜನ ಉಳಿಯಬೇಕೇ ಅಥವಾ ಜಾನುವಾರು ಉಳಿಯಬೇಕೇ? ಸರ್ಕಾರದ ಇಚ್ಛೆ ಏನು ಎಂಬ ಬಗ್ಗೆ ನಮಗೆ ಅಚ್ಚರಿಯಾಗುತ್ತಿದೆ" ಎಂದು ಮಹಾರಾಷ್ಟ್ರದ ಜಾನುವಾರು ಮಾರುಕಟ್ಟೆಯಲ್ಲಿ ಜೋಡೆತ್ತಿನ ಮುಂದೆ ವಾರದಿಂದ ಗಿರಾಕಿಗಳಿಗಾಗಿ ಕಾಯುತ್ತಾ ನಿಂತ ರೇವಜಿ ಚೌಧರಿ ಉದ್ಗರಿಸುತ್ತಾರೆ.
ಸಾಮಾನ್ಯವಾಗಿ ರೈತರು ಬರ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಕಟುಕರಿಗೆ ಮಾರುತ್ತಾರೆ. ಹೀಗೆ ಖರೀದಿಸುವವರಲ್ಲಿ ಬಹುತೇಕ ಮುಸ್ಲಿಮರು. ಮಾಮೂಲಿನಂತೆ ಮುಂಗಾರು ಸುರಿದು, ಫಸಲು, ಆದಾಯ ಹೆಚ್ಚಿದಾಗ ಮತ್ತೆ ಜಾನುವಾರು ಖರೀದಿ ಮಾಡುತ್ತಾರೆ. ಆದರೆ ಈ ಚಕ್ರ ಇದೀಗ ಮುರಿದಿದೆ. ರೈತರಲ್ಲಿ ಮುಂದಿನ ಜೂನ್ ವೇಳೆಗೆ ಬರುವ ಬಿತ್ತನೆ ಹಂಗಾಮಿಗೆ ಬೇಕಾದ ಬೀಜ ಹಾಗೂ ಗೊಬ್ಬರ ಖರೀದಿಸಲು ಸ್ವಲ್ಪ ಹಣವಷ್ಟೇ ಉಳಿದಿದೆ. ಮಹಾರಾಷ್ಟ್ರದ ಬರಪೀಡಿತ ಮರಾಠವಾಡ ಪ್ರದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ದುಪ್ಪಟ್ಟಾಗಿದೆ.
ನಿಷೇಧದ ದ್ವಂದ್ವ
ಇದೀಗ ರೈತರ ಪೇಚಿನ ಸ್ಥಿತಿ, 130 ಕೋಟಿ ಮಂದಿಯ ಪೈಕಿ ಹೆಚ್ಚಿನ ಸಂಖ್ಯೆಯ ಜನರು ಇರುವ ಗ್ರಾಮೀಣ ಪ್ರದೇಶದಲ್ಲಿ ಬಲವರ್ಧನೆಯ ಕನಸು ಕಾಣುತ್ತಿರುವ ಬಿಜೆಪಿಯನ್ನು ದ್ವಂದ್ವದಲ್ಲಿ ಸಿಲುಕಿಸಿದೆ. ಈ ಗ್ರಾಮೀಣ ಸಂಕಷ್ಟದ ಪರಿಸ್ಥಿತಿ ಹೀಗಾಗಲೇ ಕಳೆದ ವರ್ಷದ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಿಗೆ ಕಾರಣವಾಗಿದೆ. ಮುಂದಿನ ವರ್ಷದಲ್ಲಿ ಇನ್ನಷ್ಟು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಗೋಹತ್ಯೆ ನಿಷೇಧ ಬಿಜೆಪಿಗೆ ಬಿಸಿ ತುಪ್ಪದಂತಾಗಿದೆ.
ಕಳೆದ ತಿಂಗಳು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಗ್ರಾಮೀಣಾಭಿವೃದ್ಧಿಗೆ 1300 ಕೋಟಿ ಡಾಲರ್ ಅನುದಾನ ಮೀಸಲಿಟ್ಟಿದ್ದು, 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿ ಹಾಕಿಕೊಂಡಿದೆ.
"ಸರ್ಕಾರದ ನಿಜವಾದ ಕಾಳಜಿ ರೈತರನ್ನು ಬೆಂಬಲಿಸುವುದು ಆಗಿದ್ದರೆ, ರೈತರು ತಮ್ಮ ಜಾನುವಾರುಗಳನ್ನು ಯಾರಿಗೆ ಬೇಕೋ ಅವರಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಇದೀಗ ನಿಷೇಧವನ್ನು ವಾಪಾಸು ಪಡೆಯಬೇಕಾದ ಅನಿವಾರ್ಯ ಸ್ಥಿತಿ ಇದೆ" ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಭೀಮರಾವ್ ಧೋಂಡೆ ಹೇಳುತ್ತಾರೆ.
"ಪಕ್ಷದ ಚಿಂತನೆಯಂತೆ ನಿಷೇಧ ಅಗತ್ಯ. ಆದರೆ ಬರದ ಕರಾಳ ಛಾಯೆಯಿಂದ ಸ್ವಲ್ಪಮಟ್ಟಿಗಾದರೂ ಮುಕ್ತರಾಗಬೇಕಾದರೆ ರೈತರಿಗೆ ಹಣ ಸಿಗುವಂತೆ ನೋಡಿಕೊಳ್ಳಬೇಕು" ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ಲಕ್ಷಾಂತರ ಹಸುಗಳು
ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಒಳಗೊಂಡಿರುವ ಮಹಾರಾಷ್ಟ್ರದಲ್ಲಿ ಬರದ ಛಾಯೆ ಭೀಕರ. ಒಂದು ಜಿಲ್ಲೆಯಲ್ಲಂತೂ ನೀರಿನ ಟ್ಯಾಂಕರ್ ಅಥವಾ ಕೊಳವೆಬಾವಿಯ ಮುಂದೆ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಕರಾಳವಾಗಿದೆ. ಹಸು ಹಾಗೂ ಎಮ್ಮೆಗಳಿಗೆ ದಿನಕ್ಕೆ 70 ಲೀಟರ್ ನೀರು ಬೇಕಾಗುತ್ತದೆ. ಈ ಕಾರಣದಿಂದ ಹಲವಾರು ಮಂದಿ ಜಾನುವಾರುಗಳನ್ನು ಹಾಗೇ ಬಿಟ್ಟುಬಿಡುತ್ತಿದ್ದಾರೆ.
ರಾಜ್ಯ ಸರ್ಕಾರ ನೂರಾರು ತಾತ್ಕಾಲಿಕ ದೊಡ್ಡಿಗಳನ್ನು ತೆರೆದಿದೆ. ಸುಮಾರು 2.50 ಲಕ್ಷ ಜಾನುವಾರುಗಳಿಗೆ ಇಂಥ ಗೋಶಾಲೆಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಮತ್ತೆ ಮಾಲೀಕರು ಒಯ್ಯುವವರೆಗೂ ಸಾಕಾಣಿಕೆಗೆ ವ್ಯವಸ್ಥೆ ಮಾಡಿದೆ. ಆದರೆ ತಜ್ಞರು ಹೇಳುವಂತೆ ಸರ್ಕಾರದಿಂದ ಮಾಡಿರುವ ವ್ಯವಸ್ಥೆ ಏನೇನೂ ಸಾಲದು. ರಾಜ್ಯದಲ್ಲಿ ಈ ಬರ ಪರಿಸ್ಥಿತಿಯಲ್ಲಿ ಕನಿಷ್ಠ 40 ಲಕ್ಷ ಜಾನುವಾರುಗಳ ರಕ್ಷಣೆ ಆಗಬೇಕಿದೆ.
ವಿಶ್ವಹಿಂದೂ ಪರಿಷತ್‌ನಂಥ ಹಿಂದೂ ಸಂಘಟನೆಗಳು ಇಂಥ ತಾತ್ಕಾಲಿಕ ದೊಡ್ಡಿಗಳನ್ನು ನಿರ್ಮಿಸುವ ಭರವಸೆ ನೀಡಿವೆ. ಆದರೆ ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಸರ್ಕಾರವೇ ಹೆಚ್ಚು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸುತ್ತಿದೆ.
ವಿಶ್ವಹುಂದೂ ಪರಿಷತ್ತಿನ ಗೋಸಂರಕ್ಷಣಾ ಸಮಿತಿ ಮುಖ್ಯಸ್ಥ ಲಕ್ಷ್ಮೀನಾರಾಯಣ ಚಂಡಕ್ ಹೇಳುವಂತೆ, ಸಂಘಟನೆ ವತಿಯಿಂದ ಇದುವರೆಗೆ ಒಂದು ಗೋಶಾಲೆಯನ್ನಷ್ಟೇ ತೆರೆಯಲು ಸಾಧ್ಯವಾಗಿದ್ದು, 150 ಜಾನುವಾರುಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ. ಸುಮಾರು ಏಳು ಲಕ್ಷ ಹಸು ಹಾಗೂ ಎತ್ತುಗಳು ಹಸಿವಿನಿಂದ ಸಾಯುವ ಭೀತಿ ಇದೆ ಅಥವಾ ಇವುಗಳನ್ನು ಕಸಾಯಿಖಾನೆಗಳಿಗೆ ಕಳ್ಳಸಾಗಾಣಿಕೆ ಮಾಡುವ ಅಪಾಯವಿದೆ. ಅವುಗಳನ್ನು ಸಂರಕ್ಷಿಸಬೇಕು ಎನ್ನುವುದು ಅವರ ಆಗ್ರಹ.
ಅಪ್ಪಟ ದೇಸಿ ತಳಿಯ ಹಸುಗಳು ಮಾತ್ರ ಪೂಜನೀಯ; ಅವುಗಳನ್ನು ರಕ್ಷಿಸಲು ಮೊದಲು ಆದ್ಯತೆ ನೀಡಬೇಕು ಎಂದು ಅವರು ಹೇಳುತ್ತಾರೆ.
ಪ್ರತಿ ಸೋಮವಾರ, ಚೌಧರಿಯಂಥ ರೈತರು ಮುಂಬೈನ ಪೂರ್ವಭಾಗದಲ್ಲಿ 200 ಕಿಲೋಮೀಟರ್ ದೂರದಲ್ಲಿರುವ ಬೆಲ್ಹೆ ಗ್ರಾಮದಲ್ಲಿ ನಡೆಯುವ ವಾರದ ಸಂತೆಗೆ ಜಾನುವಾರುಗಳೊಂದಿಗೆ ಬರುತ್ತಾರೆ. ಆದರೆ ಖರೀದಿಸುವವರ ಸಂಖ್ಯೆ ತೀರಾ ಕಡಿಮೆ. ಜಾನುವಾರುಗಳ ಬೆಲೆ ಕೂಡಾ ಶೇಕಡ 40ರಿಂದ 60ರಷ್ಟು ಕುಸಿದಿದೆ.
ಉತ್ತಮ ಮಳೆ ಬಿದ್ದರೆ ವಾರ್ಷಿಕವಾಗಿ ಚೌಧರಿ ಸುಮಾರು ಎರಡು ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ. ಆದರೆ ಈ ಬಾರಿ ಬರ ಪರಿಸ್ಥಿತಿಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಹೇಳುತ್ತಾರೆ. ಕಳೆದ ವರ್ಷ ಸುಮಾರು 40 ಸಾವಿರ ರೂಪಾಯಿಗೆ ಜೋಡೆತ್ತು ಖರೀದಿಸಿದ್ದರು. ಇದೀಗ ಅದನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇಷ್ಟಾಗಿಯೂ ಗಿರಾಕಿಗಳಿಲ್ಲ.
ಕುಡಿಯುವ ನೀರಿಗಾಗಿ ಅನಿವಾರ್ಯವಾಗಿ ಟ್ಯಾಂಕರ್ ಅವಲಂಬಿಸಬೇಕು. ಹಾಗಿದ್ದಾಗ ಜಾಣುವಾರುಗಳಿಗೆ ನೀರು ಒದಗಿಸುವುದು ಎಲ್ಲಿಂದ ಎನ್ನುವುದು ಅವರ ಪ್ರಶ್ನೆ.