ಕಾಲದ ಮರೆಗೆ ಸರಿಯುತ್ತಿರುವ ದೇಸೀ ಫಾಸ್ಟ್ ಫುಡ್‌ಗಳು
ನಮ್ಮೂರಿನಲ್ಲಿ ವರ್ಷಕ್ಕೆ ಎರಡು ಜಾತ್ರೆಗಳು ನಡೆಯುತ್ತವೆ. ಒಂದು ಬೆಳ್ಮದ ಬಂಡಿ ಎಂದು ಖ್ಯಾತಿಯಾಗಿರುವ ಮುಲಾರದ ಮುಡದಾಯನ ಜಾತ್ರೆ ಇನ್ನೊಂದು ಇದೇ ದೈವಸ್ಥಾನದ ವ್ಯಾಪ್ತಿಗೊಳಪಡುವ ಮರಕಳ ಬೆಟ್ಟು ಎಂಬ ಸ್ಥಳದಲ್ಲಿ ನಡೆಯುವ ದೊಂಪದ ಬಲಿ ಉತ್ಸವ.
ಈ ಎರಡೂ ಜಾತ್ರೆಗಳೆಂದರೆ ನಮ್ಮೂರಿನ ಮಕ್ಕಳಿಗೆ ಇನ್ನಿಲ್ಲದ ಸಂಭ್ರಮ. ನಮಗೂ ಸಣ್ಣವರಿರುವಾಗ ಬಂಡಿ ಜಾತ್ರೆ ಬಂತೆಂದರೆ ಸರಿ ಮನೆಯಲ್ಲಿ ನೆಂಟರಿಷ್ಟರ ಸಂಭ್ರಮ ಅಷ್ಟು ಮಾತ್ರವಲ್ಲದೆ, ಅದು ಮೇ ತಿಂಗಳಲ್ಲಿ ನಡೆಯುವ ಜಾತ್ರೆಯಾಗಿರುವುದರಿಂದ ಶಾಲೆಗೂ ರಜೆಯಿರುವ ತಿಂಗಳಾಗಿರುವುದರಿಂದ ಯಾರ ಕಿರಿಕಿರಿಯೂ ಇಲ್ಲ. ಐದು ದಿನದ ಜಾತ್ರೆ ಪೂರ್ತಿ ನಮ್ಮ ಸಂಭ್ರಮ.
ಜಾತ್ರೆಗೆ ಹೋದಾಗ ಅಲ್ಲಿ ನಡೆಯುವ ನೇಮ ನೋಡುತ್ತಾ ತುಳುನಾಡಿನ ಸಂಸ್ಕೃತಿಯ ಬಗೆಗೆ ಅದೇ ದೈವಸ್ಥಾನದಲ್ಲಿ ಪಲ್ಲಕ್ಕಿ ಹೊರುವ ಕೆಲಸ ಮಾಡುವ ಅಪ್ಪನಲ್ಲಿ ಇನ್ನಿಲ್ಲದ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಅದರಿಂದಾಗಿಯೇ ಅಲ್ಲಿ ನಡೆಯುವ ಹೆಚ್ಚಿನ ರೀತಿ ರಿವಾಜುಗಳು ಇಂದಿಗೂ ನಮಗೆ ಬಾಯಿ ಪಾಠವಾಗಿರುವುದು.
ಇಂತಹ ಜಾತ್ರೆಗೆ ಪೂರ್ವ ತಯಾರಿಯು ತಿಂಗಳುಗಳ ಹಿಂದೆಯೇ ನಡೆಯುತ್ತಿತ್ತು. ಇದು ಗೇರುಬೀಜ ಬೆಳೆಯುವ ಸಮಯವಾಗಿರುವುದರಿಂದ ನಮ್ಮನೆಯಲ್ಲಿರುವ ಒಂದು ಮರವಲ್ಲದೆ ಪಕ್ಕದ ಗುಡ್ಡೆಯಲ್ಲಿನ ಮರಗಳಲ್ಲಿನ ಗೇರು ಬೀಜಗಳೂ ಕೂಡ ನಮ್ಮ ಸುಪರ್ದಿಯಲ್ಲಿರುತ್ತಿದ್ದವು. ಇವುಗಳನ್ನು ಯಾರಿಗೂ ಗೊತ್ತಿಲ್ಲದಂತೆ ಊರಾಚೆ ಇದ್ದ ಇದಿನಬ್ಬ ಬ್ಯಾರಿ ಅಥವಾ ಮೋಂಟು ಬ್ಯಾರಿ (ಯಾವುದೋ ಕಾರಣದಿಂದ ಕಾಲು ನೋವಾಗಿ ಕುಂಟುತ್ತಾ ನಡೆಯುತ್ತಿದ್ದುದರಿಂದ ಅವರಿಗೆ ಈ ಹೆಸರು ಬಂದಿತ್ತು ಎಂಬುದು ಅಜ್ಜಿ ಹೇಳಿದ್ದ ಮಾತು)ಯ ಅಂಗಡಿಗೆ ಮಾರಿ ಬರುತ್ತಿದ್ದ ಹತ್ತಿಪ್ಪತ್ತು ರೂಪಾಯಿಗಳನ್ನು ಜಾತ್ರೆಯ ಖರ್ಚಿಗೆ ಎತ್ತಿಡುತ್ತಿದ್ದೆವು.
ಜಾತ್ರೆಯ ದಿನ ನಮ್ಮನೆಗೆ ಬರುತ್ತಿದ್ದ ಮಕ್ಕಳೊಂದಿಗೆ ಜಾತ್ರೆಯಲ್ಲಿಗೆ ಬರುತ್ತಿದ್ದ ಸಂತೆ ತಿರುಗುವುದೇ ಒಂದು ವಿಭಿನ್ನ ಅನುಭವ. ಅಂದು ನಮ್ಮ ಕೈಯಲ್ಲಿದ್ದ ಹತ್ತು ರೂಪಾಯಿಯೇ ನಮಗೆ ಇಂದಿನ ಕೆಲವು ಸಾವಿರ ರೂಪಾಯಿಗಳಿಗೆ ಸಮವಾಗಿರುತ್ತಿದ್ದವು. ಅಂದು ನನ್ನ ಪ್ರಾಥಮಿಕ ಶಾಲೆಯ ಸಹಪಾಠಿ ಶೌಕತ್ ಅಲಿ ಎಂಬವ ಯಾವಾಗಲೂ ಜಾತ್ರೆಯ ಸಂದರ್ಭದಲ್ಲಿ ಜತೆಗಿರುತ್ತಿದ್ದ.
ಅವನಿಗೆ ನಮ್ಮೂರಿನ ಜಾತ್ರೆಯೆಂದರೆ ಅವನ ಮನೆಯ ಹಬ್ಬದಂತೆಯೇ(ಇಂದಿಗೂ ಸೌದಿಯಲ್ಲಿರುವ ಆತ ಜಾತ್ರೆಯ ಸಂದರ್ಭ ಊರಿಗೆ ಬಂದು ದೈವಸ್ಥಾನಕ್ಕೆ ತನ್ನಲ್ಲಾಗುವಷ್ಟು ಕಾಣಿಕೆ ಸಲ್ಲಿಸಿ ತೆರಳುತ್ತಾನೆ. ನಮ್ಮೂರಿನ ದೈವಸ್ಥಾನವೆಂದರೆ ಅದು ಎಲ್ಲಾ ಧರ್ಮೀಯರು ಆರಾಧಿಸುವ ದೈವಸ್ಥಾನ ಅದರ ಬಗ್ಗೆ ಮುಂದೆ ಬರೆಯುತ್ತೇನೆ)
ಅವನೊಂದಿಗೆ ನಾನು ಹಾಗೂ ಇನ್ನಿತರ ಗೆಳೆಯರು ಸೇರಿಕೊಂಡು ಆಡುತ್ತಿದ್ದ ‘ರಂಗ್ ರಂಗ್ ದ ರಿಂಗ್ ದ ಗೊಬ್ಬು’, ‘ಗುಡು ಗುಡು’ ಹಾಗೂ ಇನ್ನಿತರ ಆಟಗಳು ಇಂದಿನ ಯಾವುದೇ ಆಟಗಳಿಗೆ ಸಮನಾಗಲಾರವು. ಎಲ್ಲಾ ರೀತಿಯ ಆಟಗಳ ನಂತರ ನಾವು ತೆರಳುತ್ತಿದ್ದುದು ಸುಕುನಪ್ಪ ಹಾಗೂ ಚರ್ಮುರಿ ಮಾರುತ್ತಿದ್ದ ಅಂಗಡಿಯವರ ಬಳಿ. ಅಲ್ಲಿ ನಾವು ನಾಲ್ಕರಿಂದ ಐದು ಮಂದಿ ತೆರಳಿ ರಾಶಿ ಬಿದ್ದು ಅಂಗಡಿಯವನಲ್ಲಿ ಒಂದು ಚರ್ಮುರಿ ಮಾಡಲು ಹೇಳಿ ಅವನು ಚರ್ಮುರಿ ಕಡೆ ಗಮನಹರಿಸುತ್ತಿದ್ದರೆ ನಮ್ಮ ಜತೆಗಿರುವ ಗೆಳೆಯರು ಸುಕುನಪ್ಪದ ಪ್ಯಾಕೆಟ್ ಗಳನ್ನು ಎಗರಿಸುತ್ತಿದ್ದರು.
ಆತ ಮಾಡಿಕೊಟ್ಟ ಒಂದು ಚರ್ಮುರಿಗೆ ಎಗರಿಸಿದ್ದ ಸುಕುನಪ್ಪವನ್ನು ಹಂಚಿ ತಿನ್ನುತ್ತಿದ್ದುದರಲ್ಲಿ ಸಿಗುತ್ತಿದ್ದ ಸುಖ ಇಂದಿನ ಯಾವುದೇ ಫಾಸ್ಟ್ ಫುಡ್‌ಗೂ ಸಮವಿಲ್ಲ ಬಿಡಿ (ನಾನು ತಿನ್ನುವುದೂ ಇಲ್ಲ).
ಇತ್ತೀಚೆಗೆ ತಂಗಿಯ ಮನೆಯಿರುವ ನಂದಳಿಕೆ ಸಮೀಪದ ಜಾತ್ರೆಗೆ ತೆರಳಿದಾಗ ಚರ್ಮುರಿ ಅಂಗಡಿಯ ಹುಡುಗನೊಬ್ಬ ಚರ್ಮುರಿ ತಯಾರಿಸುತ್ತಿರುವುದನ್ನು ಕಂಡು ಒಂದು ಫೋಟೊ ಕ್ಲಿಕ್ ಮಾಡಿದೆ.