ಅತಂತ್ರ ಆದಿವಾಸಿಗಳ ನೋವಿನ ಕಥನ
ಸ್ವಾತಂತ್ರ್ಯಾ ನಂತರದ ಭಾರತದ ನೆಲದಲ್ಲಿ ಜೀವಂತವಾಗಿ ಬದುಕಿರುವ ನತದೃಷ್ಟ ಸಮುದಾಯವೆಂದರೆ, ಭಾರತದ ಅರಣ್ಯ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ಬದುಕಿರುವ ಆದಿವಾಸಿಗಳು ಮಾತ್ರ. ಬಡತನ, ಅನಕ್ಷರತೆ,ಮುಗ್ಧತನ ಇವುಗಳನ್ನು ಒಡಲಲ್ಲಿರಿಸಿಕೊಂಡು ನೆಲದ ಸಂಸ್ಕೃತಿಯ ಮೇಲಿನ ನಿಜವಾದ ಕಾಳಜಿಯೊಂದಿಗೆ ಹಸಿವಿನ ಜೊತೆ ಭದ್ರತೆಯ ಬುನಾದಿಯಿಲ್ಲದ ಬದುಕನ್ನು ಹುಟ್ಟಿನಿಂದ ಸಾವಿನವರೆಗೂ ಕಟ್ಟಿಕೊಂಡು ಬದುಕುತ್ತಿರುವ ಅನಾಥ ಪ್ರಜ್ಞೆಯ ಅನಾಮಿಕರು ಇವರು. ಭಾರತದಲ್ಲಿರುವ ನೈಸರ್ಗಿಕ ಖನಿಜ ಸಂಪತ್ತಿನ ಶೇ.52ರಷ್ಟು ಭಾಗ ಇವರು ಬದುಕುತ್ತಿರುವ ಅರಣ್ಯ ಭೂಮಿಯ ಒಡಲಲ್ಲಿ ಅಡಗಿದೆ. ಆದರೆ, ಈ ನೈಸರ್ಗಿಕ ಸಂಪತ್ತು ಇವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಭಾರತ ನೆಲದ ಪೂರ್ವಜರೆಂದೇ ಪರಿಗಣಿಸಲ್ಪಟ್ಟಿರುವ ಆದಿವಾಸಿಗಳ ಅನಾಥ ಪ್ರಜ್ಞೆಗೆ ಮತ್ತು ಸ್ವಾವಲಂಬಿತನದ ಹೋರಾಟಕ್ಕೆ ಈ ನೆಲದಲ್ಲಿ ಶತಮಾನದ ಇತಿಹಾಸವಿದೆ. ತಮ್ಮ ನೆಲದ ಸಂಸ್ಕೃತಿ ಹಾಗೂ ಅಲ್ಲಿನ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತಕ್ಕೆ ಬಂದ ಬ್ರಿಟಿಷರ ವಿರುದ್ಧ ಬಿಲ್ಲು ಬಾಣಗಳನ್ನು ಎದೆಗೇರಿಸಿಕೊಂಡು ಹೋರಾಡಿ ಮಡಿದ ಅನೇಕ ಮಹನೀಯರ ಹೆಸರನ್ನು ಯಾರೂ ಲೆಕ್ಕವಿಡಲಿಲ್ಲ. ತಮ್ಮ ಬದುಕಿನುದ್ದಕ್ಕೂ ಉಳ್ಳವರ ಭಾರತದಲ್ಲಿ ಆಳುವ ಸರಕಾರಗಳ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಾಲ್ಚೆಂಡಿನಂತೆ ಬದುಕುತ್ತಾ ಅತಂತ್ರರಾದವರು ಇವರು.
ಆದಿವಾಸಿಗಳ ಘನತೆಯ ಬದುಕಿಗೆ ಹೋರಾಡಿದ ಬಿರ್ಸಾಮುಂಡಾ ಮತ್ತು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು, ಪಶ್ಚಿಮ ಬಂಗಾಳದ ಸಿಲಿಗುರಿಯ ಚಾರುಮುಜಂದಾರ್, ಕನುಸನ್ಯಾಲ್, ಆಂಧ್ರದ ವೆಂಪಟಾಪು ಸತ್ಯನಾರಾಯಣ, ಕೃಷ್ಣಮೂರ್ತಿ, ಕೊಂಡಪಲ್ಲಿ ಸೀತಾರಾಮಯ್ಯ, ಕಿಷನ್ ಜಿ ಯಿಂದ ಹಿಡಿದು ನಮ್ಮ ಕರ್ನಾಟಕದ ಸಾಕೇತ್ ರಾಜನ್ ಹೀಗೆ ಅನೇಕ ಮಹನೀಯರ ಹೆಸರುಗಳು ಹೋರಾಟದ ಇತಿಹಾಸ ಪುಟಗಳಲ್ಲಿ ದಾಖಲಾಗುವುದರ ಮೂಲಕ ಇಂದಿಗೂ ಆದಿವಾಸಿಗಳಿಗೆ ಇವರೆಲ್ಲರ ಹೋರಾಟ ಸ್ಫೂರ್ತಿಯ ಚಿಲುಮೆಯಾಗಿದೆ.
ಭಾರತದ ಆದಿವಾಸಿಗಳ ಹೋರಾಟ ಅಥವಾ ಅವರ ಮೂಲಭೂತ ಬೇಡಿಕೆಗಳು ಇಂದು ನಿನ್ನೆಯದಲ್ಲ. ಭಾರತಕ್ಕೆ ಸ್ವಾತಂತ್ರ ಲಭಿಸಿದ ನಂತರ 1952ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರು ಭಾರತದ ಆದಿವಾಸಿಗಳ ಸಮಸ್ಯೆ, ಅಧ್ಯಯನ ಮತ್ತು ಅವರ ಬೇಡಿಕೆಗಳ ಪೂರೈಕೆಗಾಗಿ ಪ್ರಖ್ಯಾತ ಸಮಾಜ ಶಾಸ್ತ್ರಜ್ಞ ವೇರಿಯಲ್ ಎಲ್ವಿನ್ ರವರ ಅಧ್ಯಕ್ಷತೆಯಲ್ಲಿ ‘‘ ಭಾರತದ ಬುಡಕಟ್ಟು ಜನಾಂಗದ ಅಭಿವೃದ್ಧಿ ಮಂಡಳಿಯೊಂದನ್ನು ಸ್ಥಾಪಿಸಿದ್ದರು. ಅಂದಿನಿಂದ 2012 ರವರೆಗೆ ಅಂದರೆ ಇತ್ತೀಚೆಗೆ ನಿಧನರಾದ ಮಧ್ಯಪ್ರದೇಶದ ಬಸ್ತರ್ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಬಿ.ಡಿ.ಶರ್ಮಾ ನೀಡಿದ ಅನೇಕ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಸಹ ಈವರೆಗೆ ವರದಿಯ ಯಾವೊಂದು ಶಿಫಾರಸ್ಸುಗಳು ಅನುಷ್ಠಾನಗೊಂಡಿಲ್ಲ. ಬಹುತೇಕ ವರದಿಗಳು ಆದಿವಾಸಿಗಳಿಗೆ ವಾಸಿಸುತ್ತಿರುವ ಭೂಮಿಯ ಹಕ್ಕನ್ನು ವರ್ಗಾಯಿಸುವಂತೆ ಹಾಗೂ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಅಂದರೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಇವುಗಳನ್ನು ಒದಗಿಸುವಂತೆ ಮತ್ತು ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ನೀಡುವಂತೆ ಶಿಫಾರಸ್ಸು ಮಾಡಿವೆ. ಮಾಜಿ ಐಎಎಸ್ ಅಧಿಕಾರಿ ಬಿ.ಡಿ.ಶರ್ಮರವರೂ ಸಹ ‘‘ಜಲ್, ಜಂಗಲ್, ಜಮೀನ್’’ ಎಂಬ ಶೀರ್ಷಿಕೆಯಡಿ ಇಂತಹದ್ದೇ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಅದು ಅನುಷ್ಠಾನಗೊಳ್ಳದ ಕಾರಣ ತಮ್ಮ ಹುದ್ದೆಗೆ (ಬುಡಕಟ್ಟು ಅಭಿವೃದ್ಧಿ ಮಂಡಳಿ ನಿರ್ದೇಶಕ ಸ್ಥಾನ) ರಾಜೀನಾಮೆ ನೀಡಿ, ಮಧ್ಯ ಪ್ರದೇಶದ ಬಸ್ತರ್ ಜಿಲ್ಲೆಯ ಅರಣ್ಯದೊಳಗೆ ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಾ, ಅಭಿವೃದ್ಧಿಗೆ ಶ್ರಮಿಸುತ್ತಾ ಬದುಕಿದ್ದರು.)
ಇಂದು ಭಾರತವನ್ನು ಬಹುವಾಗಿ ಕಾಡುತ್ತಿರುವ ಎರಡು ಜ್ವಲಂತ ಸಮಸ್ಯೆಗಳೆಂದರೆ, ಒಂದು ಭಯೋತ್ಪಾದನೆ, ಮತ್ತೊಂದು ನಕ್ಸಲರ ಹಿಂಸಾಚಾರ ಮತ್ತು ಹೋರಾಟ. ಯಾವುದೇ ಸೈದ್ಧಾಂತಿಕ ತಳಹದಿಯಿಲ್ಲದ ಧರ್ಮ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಇಂದು ಜಾಗತಿಕ ಸಮಸ್ಯೆಯಾಗಿ ಇಡೀ ಜಗತ್ತನ್ನು ಕಾಡುತ್ತಿದೆ. ಆದರೆ, ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಆದಿವಾಸಿಗಳು ಮತ್ತು ಕೃಷಿ ಕೂಲಿ ಕಾರ್ಮಿಕರು ಹಾಗೂ ಭೂರಹಿತ ದೀನ ದಲಿತರ ಏಳಿಗೆಗಾಗಿ ಹುಟ್ಟಿಕೊಂಡ ನಕ್ಸಲ್ ಹೋರಾಟಕ್ಕೆ ಒಂದು ತಾತ್ವಿಕ ಹಾಗೂ ಸೈದ್ಧಾಂತಿಕ ಚೌಕಟ್ಟು ತಳಹದಿಯಿದೆ. ಇಡೀ ನಕ್ಸಲ್ ಚರಿತ್ರೆಯನ್ನು ಪರಾಮರ್ಶೆ ನಡೆಸಿದರೆ, ನಕ್ಸಲರು ಎಂದಿಗೂ ಯಾವುದೇ ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟಿಲ್ಲ. ಅವರ ಪ್ರಧಾನ ಬೇಡಿಕೆಯೆಂದರೆ, ಅಭಿವೃದ್ಧಿ ಅಥವಾ ಗಣಿಗಾರಿಕೆ ನೆಪದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಡಿ.
ಅವರ ಭೂಮಿಯನ್ನು ಮತ್ತು ನಿಸರ್ಗಕ್ಕೆ ಎರವಾಗದಂತೆ ಬದುಕಿರುವ ಅವರ ಪಾರಂಪರಿಕ ಬದುಕನ್ನು ಕಸಿಯಬೇಡಿ ಎಂಬುದಾಗಿದೆ. ನಕ್ಸಲರು ಹೋರಾಟದ ಹಾದಿಯಲ್ಲಿ ಅನಿವಾರ್ಯವಾಗಿ ಅಪ್ಪಿಕೊಂಡ ಹಿಂಸೆಯ ಹಾದಿಯನ್ನು ಯಾವೊಬ್ಬ ಭಾರತೀಯ ನಾಗರಿಕನೂ ಒಪ್ಪಲಾರ ಜೊತೆಗೆ ಒಪ್ಪಲೂ ಬಾರದು. ಆದರೆ, ಈ ದೇಶದ ಆದಿವಾಸಿಗಳ ಸಮಸ್ಯೆ ಬಗೆಹರಿದರೆ, ನಕ್ಸಲ್ ಸಮಸ್ಯೆಯೂ ಕೊನೆಗೊಳ್ಳಬಲ್ಲದು ಎಂಬ ಜ್ಞಾನ ಈವರೆಗೆ ನಮ್ಮನ್ನಾಳುವ ಸರಕಾರಗಳಿಗೆ ದಕ್ಕಲಿಲ್ಲ. ಅದರ ಬದಲಾಗಿ ಬಹುರಾಷ್ಟ್ರೀಯ ಕಂಪೆನಿಗಳ ಗಣಿಗಾರಿಕೆಗೆ, ಕೈಗಾರಿಕೆಗೆ ಮತ್ತು ಹೆದ್ದಾರಿ, ವಿಶೇಷ ಆರ್ಥಿಕ ವಲಯ, ಬಂದರುಗಳ ನಿರ್ಮಾಣದ ನೆಪದಲ್ಲಿ ಅರಣ್ಯದಲ್ಲಿದ್ದ ಆದಿವಾಸಿಗಳನ್ನು ನಿರಂತರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ಸ್ವಾತಂತ್ರ ನಂತರದ ಭಾರತದಲ್ಲಿ ಈವರೆಗೆ 3 ಕೋಟಿ, 20 ಲಕ್ಷ ಆದಿವಾಸಿಗಳು ತಮ್ಮ ನೆಲೆಗಳನ್ನು ಕಳೆದು ಕೊಂಡು, ನಗರದತ್ತ ವಲಸೆ ಹೋಗಿ, ಇಟ್ಟಿಗೆ ತಯಾರಿಕೆಯ ಘಟಕಗಳು, ಜವಳಿ ಕಾರ್ಖಾನೆಗಳು, ಗಣಿಗಾರಿಕೆ, ಮೀನು ಮತ್ತು ಸೀಗಡಿ ಸಂಸ್ಕರಣ ಘಟಕಗಳಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದಾರೆ.
ಜಾಗತಿಕ ಬಡತನದ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ಭಾರತದ ಆದಿವಾಸಿಗಳ ಮಾಸಿಕ ಕುಟುಂಬದ ಆದಾಯ ತಿಂಗಳಿಗೆ ಕೇವಲ 872 ರೂಪಾಯಿ ಮಾತ್ರ. ಭಾರತದ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ 20 ಕೋಟಿ ಹದಿನೈದು ಲಕ್ಷ ಜನತೆ ಯಾವುದೇ ಆಧಾರ್ ಕಾರ್ಡ್, ಮತದಾನದ ಪತ್ರ, ವಾಸದ ದೃಢೀಕರಣ ಪತ್ರವಿಲ್ಲದೆ ನಗರದ ಕೊಳಗೇರಿಗಳಲ್ಲಿ ಬದುಕುತ್ತಾ ಇದ್ದಾರೆ. ಸರಕಾರ ಘೋಷಿಸಿರುವ ಯಾವುದೇ ಯೋಜನೆಗಳ ಫಲಾನುಭವಿಗಳಾಗಲು ಇವರ ಬಳಿ ಸೂಕ್ತ ದಾಖಲೆಗಳಿಲ್ಲ. ಹೊಟ್ಟೆಪಾಡಿಗಾಗಿ ನಗರದಿಂದ ನಗರಕ್ಕೆ ವಲಸೆ ಹೋಗುತ್ತಾ ಬದುಕುತ್ತಿದ್ದಾರೆ. ಇನ್ನೂ ಅರಣ್ಯದ ಗ್ರಾಮಗಳಲ್ಲಿ ಸುಸ್ಥಿರ ಬೇಸಾಯ ಮತ್ತು ಅರಣ್ಯದ ಕಿರು ಉತ್ಪನ್ನಗಳನ್ನ್ನು ನಂಬಿ ಬದುಕಿರುವ ಆದಿವಾಸಿಗಳ ಪಾರಂಪರಿಕ ಹಕ್ಕು ಮತ್ತು ಅವರು ವಾಸಿಸುತ್ತಿರುವ ಸ್ಥಳಗಳ ಭೂಮಿಯ ಹಕ್ಕನ್ನು ಈವರೆಗೆ ದಯಪಾಲಿಸಲು ಈವರೆಗೆ ಯಾವ ಸರಕಾರಗಳಿಂದಲೂ ಸಾಧ್ಯವಾಗಿಲ್ಲ ಈ ಕುರಿತು ಸುಪ್ರೀಂಕೋರ್ಟ್ ವಿವಿಧ ಪ್ರಕರಣಗಳಲ್ಲಿ ತೀರ್ಪನ್ನು ನೀಡಿದ್ದರೂ ಸಹ ಸಂದರ್ಭಕ್ಕೆ ಅನುಕೂಲವಾಗುವಂತೆ ಸುಗ್ರೀವಾಜ್ಞೆ ಹೊರಡಿಸುವುದರ ಮೂಲಕ ಸರಕಾರಗಳು ರಂಗೋಲಿಯ ಕೆಳಗೆ ತೂರುವ ಚಾಣಾಕ್ಷತನವನ್ನು ಪ್ರದರ್ಶಿಸುತ್ತಿವೆ.
ಕಳೆದ ಎರಡು ವರ್ಷದ ಹಿಂದೆ ಒರಿಸ್ಸಾ ರಾಜ್ಯದ ಕಾಳಹಂದಿ ಜಿಲ್ಲೆಯಲ್ಲಿರುವ ನಿಯಮಗಿರಿ ಕೊಂಡ ಪರ್ವತ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಇಂಗ್ಲೆಂಡ್ ಮೂಲ್ ವೇದಾಂತ ಕಂಪೆನಿಗೆ ಒರಿಸ್ಸಾ ಸರಕಾರ ಅನುಮತಿ ನೀಡಿದಾಗ ಅಲ್ಲಿನ ಕೊಂಡ ಆದಿವಾಸಿಗಳು ಸ್ವಯಂ ಸೇವಾ ಸಂಘಟನೆಗಳ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಈ ಪ್ರದೇಶದಲ್ಲಿರುವ ಹತ್ತೊಂಬತ್ತು ಗ್ರಾಮ ಪಂಚಾಯತ್‌ಗಳ ನಿರ್ಣಯವೇ ಅಂತಿಮ ಎಂದು ಆದೇಶ ನೀಡಿತು. ಅಂತಿಮವಾಗಿ ಅಷ್ಟೂ ಗ್ರಾಮ ಪಂಚಾಯತ್‌ಗಳು ಗಣಿಗಾರಿಕೆ ವಿರೋಧಿಸಿ ತೀರ್ಮಾನ ತೆಗೆದುಕೊಂಡಾಗ, ನಲವತ್ತು ಸಾವಿರ ಕೋಟಿ ರೂಪಾಯಿ ಬಂಡವಾಳದ ವೇದಾಂತ ಕಂಪೆನಿ ನಿಯಮಗಿರಿ ಕೊಂಡದಿಂದ ಕಾಲ್ತೆಗೆಯಿತು.(ಇತ್ತೀಚೆಗೆ ಒರಿಸ್ಸಾ ಸರಕಾರ ಗ್ರಾಮ ಸಭೆಯ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.)
ಇತ್ತೀಚೆಗೆ ತಮಿಳುನಾಡು ಸರಕಾರ ತಳೆದ ನಿಲುವಿನ ವಿರುದ್ಧ ಗಣಿಗಾರಿಕೆ ನಡೆಸಲು ಅಂದರೆ, ಅರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಈ ದೇಶದ ಬಹುತೇಕ ರಾಜ್ಯಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿರುವ ದಟ್ಟ ಅರಣ್ಯ ಪ್ರದೇಶವನ್ನು ಅರೆ ಅರಣ್ಯ ಪ್ರದೇಶವೆಂದು ಘೋಷಿಸಿ ಗಣಿಗಾರಿಕೆಗಾಗಿ ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡುತ್ತಿವೆ. ಛತ್ತೀಸ್‌ಗಡ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆದಿವಾಸಿಗಳಿಗೆ ದಯಪಾಲಿಸಿದ್ದ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಅಲ್ಲಿನ ಸರ್ಗುಜ ಜಿಲ್ಲೆಯ ಘಟಖರ್ರಾ ಎಂಬ ಬಹುತೇಕ ಆದಿವಾಸಿಗಳು ವಾಸಿಸುವ ಅರಣ್ಯ ಪ್ರದೇಶದಲ್ಲಿ ರಾಜಸ್ಥಾನ ವಿದ್ಯುತ್ ಉತ್ಪಾದನಾ ನಿಗಮ ಹಾಗೂ ನರೇಂದ್ರ ಮೋದಿಯವರ ಶಿಷ್ಯ ಗೌತಮ್ ಅದಾನಿಯವರ ಅದಾನಿ ಮಿನರಲ್ಸ್ ಪ್ರೈವೆಟ್ ಲಿಮಿಲೆಡ್ ಕಂಪೆನಿಗೆ ಕಲ್ಲಿದ್ದಲು ಗಣಿಗಾರಿಕೆ 2016ರ ಜನವರಿ 8 ರಂದು ಅನುಮತಿ ನೀಡಿದೆ.
ಇದರ ಮುಂದುವರಿದ ಅಧ್ಯಾಯದಂತೆ ಮಹಾರಾಷ್ಟ್ರ ಸರಕಾರ ಕೂಡ ಆದಿವಾಸಿಗಳ ಹಕ್ಕನ್ನು ಹಿಂಪಡೆಯುವ ಮಸೂದೆಯನ್ನು ಜಾರಿಗೆ ತಂದಿದೆ. ಮಹಾರಾಷ್ಟ್ರದಲ್ಲಿ ಫಡ್ನವೀಸ್ ನೇತೃತ್ವದ ಸರಕಾರ ಹಾಗೂ ಛತ್ತೀಸ್‌ಗಡದಲ್ಲಿರುವ ಡಾ.ರಮಣ್ ಸಿಂಗ್ ಮತ್ತು ರಾಜಸ್ಥಾನದಲ್ಲಿರುವ ವಸುಂಧರಾ ರಾಜೇ ಅರಸ್ ನೇತೃತ್ವದ ಸರಕಾರಗಳು ಬಿಜೆಪಿ ಸರಕಾರಗಳಾಗಿರುವುದು ವಿಶೇಷ. ಇನ್ನೂ ಗೌತಮ್ ಅದಾನಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಚುನಾವಣಾ ಖರ್ಚನ್ನು ನೋಡಿಕೊಳ್ಳುವುದರ ಜೊತೆಗೆ ನರೇಂದ್ರ ಮೋದಿಯಿಂದ ಹಿಡಿದು ಉಡುಪಿಯ ಪೇಜಾವರ ಮಠದ ಬೇಕು ಬೇಡಗಳನ್ನು ಪೂರೈಸುವ ಪ್ರಭಾವಿ ಉದ್ಯಮಿ. (ಇತ್ತೀಚೆಗೆ ಉಡುಪಿಯಲ್ಲಿ ನಡೆದ ವಿಶ್ವೇಶ್ವರ ಶ್ರೀಗಳ ಪರ್ಯಾಯ ಉತ್ಸವಕ್ಕೆ 50 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದನ್ನು ಸ್ವತಃ ಪೇಜಾವರ ಶ್ರೀ ಒಪ್ಪಿಕೊಂಡಿದ್ದಾರೆ)
2015ರ ಅಕ್ಟೋಬರ್ ತಿಂಗಳಿನಲ್ಲಿ ಛತ್ತೀಸ್‌ಗಡ ಸರ್ಗುಜ ಜಿಲ್ಲೆಯ ಭಟ್ಟಿಬರ್ರಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಹತ್ತೊಂಬತ್ತು ಆದಿವಾಸಿ ಗ್ರಾಮಗಳಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಅವಿರೋಧವಾಗಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಸರಕಾರ ಸ್ಥಳೀಯ ಸಂಸ್ಥೆಗಳ ಹಕ್ಕನ್ನು ಗಾಳಿಗೆ ತೂರಿದೆ. ಅಷ್ಟೇ ಅಲ್ಲ ಛತ್ತೀಸ್‌ಗಡದ ರಾಯಪುರ, ಮಧ್ಯ ಪ್ರದೇಶದ ಜಗದಾಲ್ ಪುರ, ಜಬ್ಬಲ್ ಪುರ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಇದ್ದುಕೊಂಡು, ಆದಿವಾಸಿ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದ ವಕೀಲರು ಮತ್ತು ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತರ ಮನೆ ಹಾಗೂ ಕಛೇರಿಗಳನ್ನು ಖಾಲಿ ಮಾಡಿಸುವಂತೆ ಕಟ್ಟಡ ಮಾಲಕರ ಮೇಲೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ಸರಕಾರಗಳು ಒತ್ತಡ ಹಾಕಿವೆ.
ಸಂಸ್ಕೃತಿ ಮತ್ತು ದೇಶಭಕ್ತಿಯ ಮುಖವಾಡ ಹೊತ್ತ ಸರಕಾರಗಳು ಆದಿವಾಸಿಗಳ ಬದುಕನ್ನು ಹೀಗೆ ಕಸಿದುಕೊಳ್ಳುತ್ತಾ ಹೊರಟರೆ, ನಕ್ಸಲ್ ಚಳವಳಿಗೆ ಅಥವಾ ಹಿಂಸಾಚಾರಕ್ಕೆ ಅಂತ್ಯ ಕಾಣಿಸಲು ಸಾಧ್ಯವೇ? ಇಲ್ಲಿ ನಿಜವಾದ ದೇಶದ್ರೋಹಿಗಳು ಯಾರು? ಹುಸಿ ದೇಶಭಕ್ತರಾ? ಅಥವಾ ನಕ್ಸಲ್ ಹೋರಾಟಗಾರರಾ? ಈ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.