ಐದುವರ್ಷದಲ್ಲಿ ರೈತರ ಆದಾಯ ದುಪ್ಪಟ್ಟು ಅ(ನ)ರ್ಥ ಸಚಿವರ ಅವಾಸ್ತವಿಕ ಕನಸು

Update: 2016-04-01 17:53 GMT

ಅನ್ನದಾತರಿಗೆ ನಾವು ಕೃತಜ್ಞರು. ಇವರು ದೇಶದ ಆಹಾರಭದ್ರತೆಯ ಬೆನ್ನೆಲುಬು. ನಾವು ಆಹಾರ ಭದ್ರತೆಯನ್ನು ಮೀರಿ ಯೋಚಿಸುವ ಕಾಲ ಬಂದಿದೆ. ರೈತರಿಗೆ ಆದಾಯ ಭದ್ರತೆಯ ಪ್ರತಿಫಲವನ್ನು ನಾವು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ತನ್ನ ಗುರಿಯನ್ನು ಮರುನಿಗದಿ ಮಾಡಿಕೊಂಡು ಕೃಷಿ ಹಾಗೂ ಕೃಷಿಯೇತರ ವಲಯದಲ್ಲಿ 2022ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರಕಾರ ಬದ್ಧವಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ 2016ರ ಫೆಬ್ರವರಿ 29 ರಂದು ಬಜೆಟ್ ಭಾಷಣದಲ್ಲಿ ಮಾಡಿದ ಘೋಷಣೆ ಇದು.

ಹೆಚ್ಚುತ್ತಿರುವ ವೆಚ್ಚಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡರೆ, 2003-2013ರ ಅವಧಿಯಲ್ಲಿ ರೈತರ ಆದಾಯ ವಾರ್ಷಿಕವಾಗಿ ಶೇ.5 ರಷ್ಟು ಹೆಚ್ಚಿದೆ ಎನ್ನುವುದು ಸರಕಾರದ ವಿವಿಧ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ತಿಳಿದುಬರುತ್ತದೆ. ಆದರೆ ಮುಂದಿನ ಐದು ವರ್ಷದಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವ ಜೇಟ್ಲಿ ಘೋಷಣೆ ಬಗ್ಗೆ ಸಹಜವಾಗಿಯೇ ಪ್ರಶ್ನೆ ಉದ್ಭವಿಸುತ್ತದೆ.
ಈ ಅವಾಸ್ತವಿಕ ಕನಸು ನನಸಾದರೆ ಅದು ಪವಾಡಗಳ ಪವಾಡ. ಪರಿಣಾಮವಾಗಿ ದೇಶದ ಪ್ರಗತಿದರ ಶೇ.12ಕ್ಕೆ ಹೆಚ್ಚಲಿದೆ ಎನ್ನುತ್ತಾರೆ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಭಾರತದ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಸಂಸ್ಥೆಯ ಪ್ರೊ. ಅಶೋಕ್ ಗುಲಾಟಿ.
2003-2013ರ ಅವಧಿಯಲ್ಲಿ ಸರಾಸರಿ ಕೃಷಿ ಮತ್ತು ಪಶುಪಾಲ ನೆಯ ಆದಾಯ 1,060 ರೂಪಾಯಿಗಳಿಂದ 3,844ಕ್ಕೆ ಹೆಚ್ಚಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೇ ನಡೆಸಿದ ಕೃಷಿ ಕುಟುಂಬಗಳ ಪರಿಸ್ಥಿತಿ ವೌಲ್ಯಮಾಪನ ವರದಿಯ ಅಂಕಿ ಅಂಶಗಳಿಂದ ತಿಳಿಯುತ್ತದೆ. ಅಂದರೆ ಸರಾಸರಿ ವಾರ್ಷಿಕ ಪ್ರಗತಿ ಶೇ.13.7ರಷ್ಟಿದೆ.
2003ರ ವರದಿ ಕೇವಲ ಭೂಮಾಲಕತ್ವ ಹೊಂದಿರುವ ರೈತರನ್ನಷ್ಟೇ ಪರಿಗಣಿಸಿದ್ದರೆ, 2013ರ ವರದಿ ಭೂರಹಿತ ಕೃಷಿ ಕಾರ್ಮಿಕರನ್ನೂ ಕೃಷಿ ಕುಟುಂಬ ಎಂದು ಪರಿಗಣಿಸಿದೆ. ಜತೆಗೆ ಸಾಗುವಳಿ ಮತ್ತು ಪಶುಪಾಲನೆ ಯನ್ನಷ್ಟೇ ಗಮನಕ್ಕೆ ತೆಗೆದುಕೊಂಡಿದೆ. ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಳ್ಳದೆ, 2022ರೊಳಗೆ ಆದಾಯವನ್ನು ದ್ವಿಗುಣಗೊಳಿಸುವುದು ಎಂದರೆ, ಅಂದಾಜು ವಾರ್ಷಿಕ ಶೇ.15ರಷ್ಟು ಪ್ರಗತಿ ಆಗಬೇಕು.
ಆದ್ದರಿಂದ ಸರಕಾರ ಆದಾಯ ಪ್ರಗತಿ ದರ ಇನ್ನಷ್ಟು ಹೆಚ್ಚಿಸುವಂತೆ ಸ್ವಲ್ಪಮಟ್ಟಿನ ಪ್ರಯತ್ನವನ್ನು ಮಾಡಿದಲ್ಲಿ ಈ ಗುರಿ ತಲುಪಬ ಹುದು. ಹಾಲಿ ಇರುವ ವ್ಯವಸ್ಥೆಯಲ್ಲೇ ಉಳಿಸಿಕೊಂಡು ಶೇ.13.7ರಿಂದ ವಾರ್ಷಿಕ ಶೇ.16ರಷ್ಟು ಕೃಷಿ ಪ್ರಗತಿ ಸಾಧಿಸಬಹುದು. ಈ ಮೂಲಕ ಐದು ವರ್ಷ ದಲ್ಲಿ ಆದಾಯ ದುಪ್ಪಟ್ಟುಗೊಳಿಸುವ ಭರವಸೆ ಈಡೇರಿಸಿ ದಂತಾಗುತ್ತದೆ.
ಆದರೆ ಅದು ಎಣಿಸಿದಷ್ಟು ಸುಲಭವಲ್ಲ; ಇದಕ್ಕೆ ಮುಖ್ಯವಾಗಿ ನಾಲ್ಕು ಪ್ರಮುಖ ತಡೆಗಳು ಎದುರಾಗುತ್ತವೆ. ಅವುಗಳೆಂದರೆ:
    *ಕೃಷಿ ಸಾಧನಗಳಾದ ಬೀಜ, ಗೊಬ್ಬರ ಹಾಗೂ ನೀರಾವರಿಯ ವೆಚ್ಚ ಹೆಚ್ಚುತ್ತಿರುವುದು.
    *ರೈತರ ಉತ್ಪನ್ನಗಳನ್ನು ಸರಕಾರ ಖರೀದಿಸುವಾಗ ನೀಡುವ ಕನಿಷ್ಠ ಬೆಂಬಲ ಬೆಲೆಯ ಅಪ್ರಸ್ತುತತೆ.
    *ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆ ಅಂದರೆ ದಾಸ್ತಾನು ಉಗ್ರಾಣ ಹಾಗೂ ಶೀತಲೀಕರಣ ಘಟಕಗಳ ಅಭಾವ.
    *ಬೆಳೆ ವಿಮಾ ಯೋಜನೆಯ ಪ್ರಯೋಜನ ಶೇ.85ರಷ್ಟು ರೈತರಿಗೆ ಸಿಗುತ್ತಿಲ್ಲ ಎಂಬ ವಾಸ್ತವ.
ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ರೈತರ ಆದಾಯವನ್ನು ಅಂಕಿ ಸಂಖ್ಯೆಗಳಲ್ಲಿ ಮಾತ್ರ ದ್ವಿಗುಣಗೊಳ್ಳಬಹುದು. 2022ರಲ್ಲಿ ವಾಸ್ತವ ಆದಾಯವನ್ನು ಹಣದುಬ್ಬರ ಹಾಗೂ ಹೆಚ್ಚಿದ ವೆಚ್ಚಕ್ಕೆ ಹೊಂದಿಕೆ ಮಾಡಿದರೆ, 2016ರ ಮಟ್ಟದಷ್ಟೇ ಆಗಿರುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ವ್ಯಾಪಾರ ನೀತಿ ವಿಶ್ಲೇಷಕ ದೇವೇಂದ್ರ ಶರ್ಮಾ ಅವರ ವರದಿ ಸ್ಪಷ್ಟಪಡಿಸುತ್ತದೆ.
ರೈತರ ಲಾಭ ಶೇ.10ಕ್ಕಿಂತಲೂ ಕಡಿಮೆ
ಸಮರ್ಥ ಕೃಷಿ ಮಾರುಕಟ್ಟೆಗಳು ಬಡತನ ನಿರ್ಮೂಲನೆಯ ಪ್ರಬಲದ ಅಸ್ತ್ರ ಎಂದು 2012ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಅಭಿಪ್ರಾಯಪಟ್ಟಿತ್ತು.
ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ರೈತರ ಸಣ್ಣ ವರ್ಗಕ್ಕೆ ಮಾತ್ರ ತಲುಪುವುದರಿಂದ ಕೃಷಿ ಉತ್ಪನ್ನಗಳಿಗೆ ಗೌರವಯುತ ಬೆಲೆ ಸಿಗುವುದಿಲ್ಲ. ಜತೆಗೆ ಕೃಷಿ ಮಾರುಕಟ್ಟೆ ವ್ಯವಸ್ಥೆ ಚಿಲ್ಲರೆ ಮಾರಾಟ ಬೆಲೆಯ ಸಣ್ಣ ಭಾಗವನ್ನಷ್ಟೇ ರೈತರಿಗೆ ನೀಡುತ್ತದೆ. ಅಂದರೆ ಚಿಲ್ಲರೆ ಮಾರಾಟದರದ ಶೇ.10 ರಿಂದ 30ರಷ್ಟು ಪಾಲು ಮಾತ್ರ ರೈತರ ಕೈಸೇರುತ್ತದೆ ಎಂದು ನೀತಿ ಆಯೋಗದ ವರದಿ ಸ್ಪಷ್ಟಪಡಿಸಿದೆ.
ನಿಯಂತ್ರಣ ಅಡೆತಡೆಗಳು ಕೃಷಿ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಗೆ ಅಡ್ಡಿಯಾಗಿವೆ. ಇದರಿಂದ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೈತರ ಸ್ಪರ್ಧಾತ್ಮಕತೆ ಸಾಮರ್ಥ್ಯ ಕಡಿಮೆಯಾಗಿದೆ.
ಹಲವು ರಾಜ್ಯಗಳಲ್ಲಿ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಮಿತಿ ಕಾನೂನುಗಳ ಅನ್ವಯ ಬಹುಮುಖ ತೆರಿಗೆ ವಿಧಿಸಲು ಅವಕಾಶವಿದೆ. ಕೃಷಿಕರ ಪರ ಕಾಳಜಿ ಇಲ್ಲದ ಕಾರಣದಿಂದ ಮಧ್ಯವರ್ತಿಗಳು ದೊಡ್ಡ ಮಟ್ಟದ ಲಾಭ ಪಡೆಯುತ್ತಿದ್ದಾರೆ ಎಂದು ನೀತಿ ಆಯೋಗದ ವರದಿ ವಿವರಿಸುತ್ತದೆ.

ಬೆಳೆವಿಮೆ ಪ್ರಯೋಜನ

ದೇಶದಲ್ಲಿ ಕೇವಲ 1.9 ಕೋಟಿ ರೈತರು ಅಂದರೆ ಒಟ್ಟು ರೈತರಲ್ಲಿ ಶೇ.15ರಷ್ಟು ಮಂದಿ ಮಾತ್ರ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸರಕಾರ 2014-15ರಲ್ಲಿ ಪ್ರಕಟಿಸಿದೆ.
ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ನವೀಕೃತ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆ ಸೇರಿ ಮೂರೂ ಯೋಜನೆಗಳಡಿ ತೊಡಗಿಸಿಕೊಂಡಿರುವ ರೈತರ ಪ್ರಮಾಣ ಕೇವಲ 37.2 ದಶಲಕ್ಷ. ಆದರೆ ಇವರಲ್ಲಿ ಪ್ರಯೋಜನ ಪಡೆಯುತ್ತಿರುವವರು ಅರ್ಧದಷ್ಟು ಮಾತ್ರ, ವಿಮಾ ಸೌಲಭ್ಯ ಪಡೆಯದ ಅರ್ಧದಷ್ಟು ಮಂದಿ ರೈತರಿಗೆ ಈ ಬಗ್ಗೆ ತಿಳುವಳಿಕೆ ಇಲ್ಲ ಎಂದು ಎನ್‌ಎಸ್‌ಎಸ್ ವರದಿ ಹೇಳುತ್ತದೆ.
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ, ಸರಕಾರದ ಇತ್ತೀಚಿನ ಯೋಜನೆಯಾಗಿದೆ. ಇದು ಹಾಲಿ ಇರುವ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ, ರೈತರು ತುಂಬಬೇಕಾದ ವಿಮಾ ಕಂತಿನ ಮೊತ್ತವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಜತೆಗೆ ವಿಮೆಗೆ ಸರಕಾರಿ ಸಬ್ಸಿಡಿ ಪ್ರಮಾಣದ ಮೇಲೆ ಇರುವ ಮಿತಿಯನ್ನು ಕಿತ್ತುಹಾಕಲಾಗಿದೆ. ಚೀನಾ ಕೃಷಿ ಕ್ಷೇತ್ರದ ಸುಧಾರಣೆಯನ್ನು 1978ರಿಂದ ಆರಂಭಿಸಿದೆ. 1978-84ರ ಅವಧಿಯಲ್ಲಿ ಕೃಷಿ ಜಿಡಿಪಿ ವಾರ್ಷಿಕ ಶೇ.7ರಷ್ಟು ಹೆಚ್ಚಿತು. ಬೆಲೆನಿಯಂತ್ರಣ ಕಿತ್ತುಹಾಕಿದ ಪರಿಣಾಮವಾಗಿ ಕೃಷಿ ಆದಾಯ ಶೇ.14ರಷ್ಟು ಹೆಚ್ಚಿತು. ಕೇವಲ ಆರು ವರ್ಷದಲ್ಲಿ ಬಡತನ ಪ್ರಮಾಣವನ್ನು ಅರ್ಧಕ್ಕೆ ಇಳಿಸಲು ಸಾಧ್ಯವಾಯಿತು ಎಂದು ಅಶೋಕ್ ಗುಲಾಟಿ ತಮ್ಮ ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಕೃಷಿ ಜಿಡಿಪಿ ಅಭಿವೃದ್ಧಿ ದರ 2015-16ನೆ ಸಾಲಿನಲ್ಲಿ ಶೇ.ಒಂದರಷ್ಟು ಮಾತ್ರ ಹೆಚ್ಚಿದ್ದು, ವೈಯಕ್ತಿಕವಾಗಿ ಕೃಷಿಕರ ಆದಾಯವನ್ನು ಶೇ.14ರಷ್ಟು ಹೆಚ್ಚಿಸುವುದು ಸುಲಭ ಸಾಧ್ಯವಲ್ಲ.

ವೆಚ್ಚ ಹೆಚ್ಚು-ಲಾಭ ಕಡಿಮೆ
ಕೃಷಿ ಉತ್ಪಾದಕತೆಯಲ್ಲಿ ಕುಸಿತ ಹಾಗೂ ವೆಚ್ಚ ಹೆಚ್ಚಳದ ಕಾರಣದಿಂದ ರೈತರ ಲಾಭದ ಪ್ರಮಾಣ ಕುಸಿಯುತ್ತಲೇ ಇದೆ.
2003ಕ್ಕೆ ಹೋಲಿಸಿದರೆ, 2013ರಲ್ಲಿ ಕೃಷಿ ಆದಾಯ 3.6 ಪಟ್ಟು ಹೆಚ್ಚಿದೆ. ಆದರೆ ಇದೇ ಅವಧಿಯಲ್ಲಿ ಕೃಷಿ ವೆಚ್ಚ ಮೂರು ಪಟ್ಟು ಅಧಿಕವಾಗಿದೆ. ಅಂದರೆ ಆದಾಯ ಮೂರು ಪಟ್ಟು ಹೆಚ್ಚಿದರೂ ಲಾಭ ಮಾತ್ರ ನಗಣ್ಯ ಎಂಬ ಪರಿಸ್ಥಿತಿ ಇದೆ.

ಸರಕಾರಿ ಖರೀದಿಯಿಂದ ಪ್ರಯೋಜನವಿದೆಯೇ?
ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ವ್ಯವಸ್ಥೆ 1965ರಲ್ಲಿ ಆರಂಭವಾಗಿದ್ದು, ಇದು ಕೃತಕ ಬೆಲೆ ಸ್ಥಿರೀಕರಣದ ಕ್ರಮ. ರೈತರಿಗೆ ಗೌರವಯುತ ವಾದ ಬೆಲೆ ದೊರಕಿಸಿಕೊಡುವ ಪ್ರಯತ್ನದಿಂದ ಇದನ್ನು ಆರಂಭಿಸಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗ, ದೇಶಾದ್ಯಂತ ಉತ್ಪಾದನೆಯಾಗುವ 23 ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತದೆ.
ಇಂಥ ಕನಿಷ್ಠ ಬೆಂಬಲಬೆಲೆ ಹೆಚ್ಚಳವನ್ನು ಘೋಷಿಸುವಾಗ ಇದು ರೈತರಿಗೆ ಉತ್ತೇಜಕ ಎನಿಸುವಂತಿರಬೇಕು. ಬದಲಾಗಿ ಈ ಕೆಳಗಿನ ಮೂರು ಅಂಶಗಳು ಹಾಗೆ ಮಾಡುವುದಿಲ್ಲ.
ಕನಿಷ್ಠ ಬೆಂಬಲ ಬೆಲೆ ಬಗ್ಗೆ ರೈತರಿಗೆ ತಿಳುವಳಿಕೆ ಕೊರತೆ ಇದೆ. ಸರಾಸರಿ ಶೇ.25ಕ್ಕಿಂತಲೂ ಕಡಿಮೆ ರೈತರು, ಕೆಲ ಬೆಳೆಗಳಲ್ಲಂತೂ ಶೇ.5ರಷ್ಟು ರೈತರು ಮಾತ್ರ ಕನಿಷ್ಠ ಬೆಂಬಲಬೆಲೆ ಬಗ್ಗೆ ತಿಳಿದಿರುತ್ತಾರೆ.
ಕಳೆದ ಮೂರು ವರ್ಷಗಳಿಂದ ಎಲ್ಲ ಬೆಳೆಗಳ ಬೆಂಬಲ ಬೆಲೆ ವಾರ್ಷಿಕ ಶೇ.12ರಷ್ಟು ಹೆಚ್ಚಿದೆ. ಆದರೆ 2011-12ರಲ್ಲಿ ಇದು ಶೇ.53 ಹಾಗೂ 2012-13ರಲ್ಲಿ ಶೇ.42ರಷ್ಟು ಹೆಚ್ಚಳವಾಗಿತ್ತು. 2010-11ರಲ್ಲಿ ಈ ಪ್ರಮಾಣ ಶೇ.39ರಷ್ಟಿತ್ತು.
ಕನಿಷ್ಠ ಬೆಂಬಲ ಬೆಲೆ, ಹಣದುಬ್ಬರಕ್ಕೆ ಕಾರಣವಾಗಬಹುದು. ಜತೆಗೆ ಮಾಸಿಕ ಖರ್ಚು ಕೂಡಾ ನಗರ ಪ್ರದೇಶಗಳಲ್ಲಿ ಇದಕ್ಕೆ ಅನುಗುಣವಾಗಿ ಹೆಚ್ಚುತ್ತದೆ.
ರಾಗಿಯ ಕನಿಷ್ಠ ಬೆಂಬಲ ಬೆಲೆಯನ್ನು 2008-09ರಲ್ಲಿ ಶೇ.52ರಷ್ಟು ಹೆಚ್ಚಿಸಲಾಯಿತು. ತೊಗರಿಬೇಳೆಯ ಬೆಲೆ 2010-11ರಲ್ಲಿ ಶೇ.52ರಷ್ಟು ಹೆಚ್ಚಿತು. 2011-12ರಲ್ಲಿ ಸಾಸಿವೆಯ ಬೆಲೆ ಶೇ.35ರಷ್ಟು ಹೆಚ್ಚಿತು. 2012-13ರಲ್ಲಿ ಜೋಳದ ಕನಿಷ್ಠ ಬೆಂಬಲಬೆಲೆ ಶೇ.53ರಷ್ಟು ಹೆಚ್ಚಿದೆ.

Writer - ಅಭಿಷೇಕ್ ವಾಗ್ಮಾರೆ

contributor

Editor - ಅಭಿಷೇಕ್ ವಾಗ್ಮಾರೆ

contributor

Similar News