ಭಟ್ಕಳ: ವಿಚಿತ್ರಕಾಯಿಲೆಯಿಂದ ಬಳಲುತ್ತಿರುವ ಸಾಹೀಮಾ ಫಾರಿಮ್
ಭಟ್ಕಳ :ಒಂದುಕೋಟಿ ಮಕ್ಕಳಲ್ಲಿ ಒಂದು ಮಗುವಿಗೆ ಬರುವ ವಿಚಿತ್ರ ಕಾಯಿಲೆ ಪೆಲಿಜ್ಯೂಸ್ ಮೆರ್ಜಬೆಕರ್ ಗೆ ತುತ್ತಾಗಿ ಬೆಳವಣೆಗೆ ಕುಂಠಿತಗೊಂಡಿರುವ ಸ್ಥಿತಿಯಲ್ಲಿ ಇಲ್ಲಿನ ರಂಗೀನಕಟ್ಟೆಯ ಅಕ್ಬರ್ ಅಲಿ ಹಾಗು ಸಮೀನಾ ದಂಪತಿಗಳ ಹಿರಿಯ ಮಗಳು ಸಾಹೀಮಾ ಫಾರಿಮ್ 10 ವರ್ಷ ತುಂಬಿದರೂ ಇನ್ನೂ 1ವರ್ಷದ ಮಗುವಿನಂತೆ ತಾಯಿಯ ತೊಡೆಯಲ್ಲಿ ದಿನ ದೂಡುತ್ತಿದ್ದಾಳೆ.
ಮೆದುಳು ಮತ್ತು ಬೆನ್ನುಹುರಿ(ಕೆಂದ್ರ ನರಗಳ ವ್ಯವಸ್ಥೆ) ಒಳಗೊಂಡ ಒಂದು ಅನುವಂಶಿಕ ಸ್ಥಿತಿ ಇದಾಗಿದೆ.ಇಂತಹ ಕಾಯಿಲೆಯಿಂದ ಮಗುವಿನ ಮಾತು, ದೇಹ, ನಡೆದಾಡುವುದು ತೀರಾ ತಡವಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.
ಎಲ್ಲ ಮಕ್ಕಳಂತೆ ಸಹಜವಾಗಿ ಓಡಾಡಿ ಶಾಲೆಗೆ ಹೋಗಿ ವಿದ್ಯಾವಂತಳಾಗುವ ಈ ವಯಸ್ಸಿನಲ್ಲಿ ಇನ್ನೂ ಕೂಡ ತಾಯಿ ತೋಳ ತೆಕ್ಕೆಯಲ್ಲಿ ಕುಳಿತುಕೊಳ್ಳಬೇಕಾದ ಅಸಹನೀಯ ಸ್ಥಿತಿ ಈಕೆಯದು.ಈ ಜಗತ್ತಿನಲ್ಲಿ ಆ ದೇವರ ಸೃಷ್ಟಿಯ ಬಗ್ಗೆ ಮನುಷ್ಯ ಏನು ಮಾಡಲಾರ.ಹುಟ್ಟಿದ ಮಕ್ಕಳು ಹಲವು ವರ್ಷಗಳವರೆಗೆ ಮಾತನಾಡುವುದಿಲ್ಲ, ಕೆಲವೊಂದು ಮಗುವಿಗೆ ಬುದ್ಧಿಮಂದವಾಗಿರುತ್ತದೆ. ಹಾಗು ಇನ್ನು ಕೆಲವು ಮಕ್ಕಳು ಹುಟ್ಟಿದಾಗ ಸರಿಯಿದ್ದು, ತದ ನಂತರದಲ್ಲಿ ಬೆಳವಣಿಗೆಯಾಗದೇ ಎಷ್ಟೆ ವರ್ಷವಾದರೂ ಚಿಕ್ಕದೇಹವನ್ನು ಹೊಂದಿಯೇ ಅವರ ಜೀವಿತಾವಧಿಯನ್ನು ಮುಗಿಸುತ್ತಾರೆ
ಸಾಹೀಮಾ ಫಾರಿಮ್ ಹುಟ್ಟು ಸಹಜವಾಗಿಯೇ ಆಗಿದ್ದು ಎಲ್ಲ ಮಕ್ಕಳಂತೆ ಈಕೆಯೂ ಕೂಡ 9 ತಿಂಗಳು ತಾಯಿಯ ಗರ್ಭದಲ್ಲೆ ಬೆಳೆದು ಯಾವುದೇ ರೀತಿಯ ತೊಂದರೆಯಿಲ್ಲದೆ ಹೊರಜಗತ್ತಿಗೆ ಕಾಲಿಟ್ಟಳು.ಆದರೆ ವಿಧಿಬರಹವನ್ನು ಯಾರೂ ಕೂಡ ಅಳಿಸಲಾರರು.ಹುಟ್ಟಿದಾಗ ಸರಿಯಿದ್ದ ಮಗು ಕ್ರಮೇಣ ವರ್ಷಗಳು ಉರುಳಿದ ಮೇಲೆ ಮಗುವಿನ ದೇಹದಲ್ಲಿ ಯಾವುದೇ ಬೆಳವಣಿಗೆಯಾಗದೇ ನಡೆದಾಡಲು ಅಸಾಧ್ಯವಾದಾಗ ಪಾಲಕರಲ್ಲಿ ಅತಂಕದ ಸ್ಥಿತಿ ನಿರ್ಮಾಣವಾಯಿತು.
ಭಟ್ಕಳ ತಾಲೂಕಿನ ರಂಗಿನಕಟ್ಟೆಯ ನಿವಾಸಿಯಾದ ಅಕ್ಬರ್ ಅಲಿ ಹಾಗು ಸಮೀನಾ ದಂಪತಿಗಳ ಹಿರಿಯ ಮಗಳು ಸಾಹೀಮಾ ಫಾರಿಮ್ ಎಂಬಾಕೆ ಹುಟ್ಟಿ 10 ವರ್ಷಗಳೇ ಕಳೆದರೂ ಇನ್ನು1 ವರ್ಷದ ಮಗುವಿನ ದೇಹದ ಬೆಳವಣಿಗೆ ಹೊಂದಿರುವುದು ಆಕೆಯ ತಂದೆ ತಾಯಿಗೆ ಕರುಳು ತಿವುಚಿದಂತಾಗಿದೆ.
ಈ ದಂಪತಿಗೆ ಒಟ್ಟು3 ಮಕ್ಕಳಿದ್ದು ಇದರಲ್ಲಿ ಮೊದಲ ಮಗುವಿನ ಬೆಳವಣಿಗೆ ಮಾತ್ರ ಈ ಅಸಹಜ ಸ್ಥಿಗೆ ತಲುಪಿದೆ.ಇದಕ್ಕಾಗಿ ತಿರುಗಿದ ಆಸ್ಪತ್ರೆಗಳ ಲೆಕ್ಕವಿಲ್ಲ .ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಈಕೆಗೆ ಮೆದುಳು ಸಂಬಂಧಿ ಹಾಗು ಹೃದಯ ಸಂಬಂಧಿ ಕಾಯಿಲೆಯಿದೆ ಎನ್ನುವುದು ಸಾಬೀತಾಗಿದ್ದು, ಪದೇ ಪದೇ ಜ್ವರ ಬರುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ.
1 ಕೋಟಿಗೆ ಒಂದು ಮಗುವಿಗೆ ಬರುವಂತಹಾ ಪೆಲಿಜ್ಯೂಸ್ ಮೆರ್ಜಬೆಕರ್ ಎಂಬ ಕಾಯಿಲೆ ಬಂದಿದ್ದು, ಮೆದುಳು ಮತ್ತು ಬೆನ್ನುಹುರಿ (ಕೆಂದ್ರ ನರಗಳ ವ್ಯವಸ್ಥೆ) ಒಳಗೊಂಡ ಒಂದು ಅನುವಂಶಿಕ ಸ್ಥಿತಿಯಲ್ಲಿದೆ ಮಗು.ದಿನಕ್ಕೆ ಇವಳ ಔಷಧದ ಖರ್ಚು ರೂ 20000ಅಧಿಕವಾಗಲಿದ್ದು, ಈ ಹಿಂದೆ ಈಕೆಯ ತಂದೆ ದೂರದ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಮಗಳ ಜೀವಕ್ಕಿಂತ ಹಣದ ಖರ್ಚಿನ ಬಗ್ಗೆ ತಲೆ ಗೆಡಿಸಿಕೊಳ್ಳದ ತಂದೆ ಸದ್ಯ ಊರಿಗೆ ಬಂದಿದ್ದು ಇಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.ಊರಿನಲ್ಲಿ ಸಿಗುವ ಹಣದಿಂದ ಜೀವನ ನಡೆಸುವುದೇ ದೊಡ್ಡ ಸವಾಲಾಗಿದ್ದು, ತನ್ನ ಮಗಳ ಆರೋಗ್ಯಕ್ಕೆ ಬೇಕಾದ ಔಷಧಿಯ ವೆಚ್ಚ ಹೇಗೆ ಭರಿಸಲಿ ಎನ್ನುವದು ತಂದೆಯ ಕಣ್ಣೀರಿನ ಗೋಳು.ದೂರದ ದುಬೈನಲ್ಲಿ ಕೆಲಸ ಕಳೆದುಕೊಂಡು ಊರಿಗೆ ಬಂದಿದ್ದು ಈಗ ಮಗಳ ಔಷಧದ ಖರ್ಚಿಗೆ ಕಷ್ಟವಾಗುತ್ತಿದ್ದು, ಆಕೆಯ ಆರೋಗ್ಯದ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಮಗಳ ಆರೋಗ್ಯದ ಕುರಿತಂತೆ ಮಾಧ್ಯಮಗಳ ಮುಂದೆ ಮಾತನಾಡಿದ ಸಾಹೀಮಾಳ ತಂದೆ ಅಕ್ಬರ್ ಅಲಿ ಮೊದಲಾದರೆ ಈಕೆ ನಮ್ಮೆಲ್ಲರ ಜೊತೆ ಸ್ವಲ್ಪವಾದರೂ ಮಾತನಾಡುತ್ತಿದ್ದಳು ಆದರೆ ಈಗ ಕ್ರಮೇಣ ಆರೋಗ್ಯದಲ್ಲಿನ ಏರುಪೇರಿನಿಂದ ಮಗಳು ಮಾತನಾಡುವುದನ್ನೇ ಬಿಟ್ಟಿದ್ದಾಳೆ.ಮಗಳ ನೋವು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ. ಮಗಳ ಆರೋಗ್ಯಕ್ಕೆ ಸರ್ಕಾರದಿಂದ ಏನಾದರೂ ಸಹಾಯ ಸಿಕ್ಕರೆ ಏನಿದ್ದರೂ ಮಗಳ ಆರೋಗ್ಯಕ್ಕೆ ಮಾತ್ರ ನಾವು ಕೇಳುತ್ತಿರುವುದು.ಜನರಿಂದ ಸಹಾಯ ಸಿಕ್ಕರೆ ಅದು ಅಲ್ಪ ದಿನದವರೆಗೆ ಅದೇ ಸರ್ಕಾರದಿಂದ ಸಿಕ್ಕರೆ ಆಕೆಯ ಕೊನೆಯಕ್ಷಣದವರೆಗೆ ಸಿಗಬೇಕು ಎನ್ನುವುದು ನನ್ನಆಶಯವಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ತಾಯಿ ಸಮೀನಾರನೋವಿನ ಮಾತು ಕೇಳಿದತೆ ಕಠಿಣ ಹೃದಯವೂಕರಗುತ್ತದೆ.ಮಗಳ ಈ ಕಾಯಿಲೆಯಿಂದ ಮನೆಯಲ್ಲಿರುವುದಕ್ಕಿಂತಾ ಹೆಚ್ಚು ಸಮಯ ಆಸ್ಪತ್ರೆಯಲ್ಲಿಯೇ ಕಳೆದದ್ದುಂಟು.ಯಾವುದೇ ಆಸ್ಪತ್ರೆಗೆ ತೋರಿಸಿದರು ನಮ್ಮಲ್ಲಿ ಆಗುವುದಿಲ್ಲ ಎಂಬ ಮಾತುಗಳೇ ಕೇಳಿಬರುತ್ತಿದೆ.ಈಕೆ 9 ತಿಂಗಳಿರುವಾಗ ಬಂದಿರುವ ಜ್ವರವು ಇಲ್ಲಿಯ ತನಕ ಬರುತ್ತಿದ್ದು, ಹೆಚ್ಚಿನ ಆಹಾರವನ್ನು ಸಹ ತಿನ್ನಲು ಅಸಾಧ್ಯ ಸ್ಥಿತಿಯಲಿದ್ದಾಳೆ.ಎನ್ನುವುದು ತಾಯಿಯ ಸಂಕಟ.
ಸಾಹೀಮಾಳಿಗೆ ಬರುವಂತಹಾ ಕಾಯಿಲೆ ಜಗತ್ತಿನಲ್ಲಿ 1 ಕೋಟಿ ಒಂದು ಮಗುವಿಗೆ ಬರುವಂತಹದಾಗಿದ್ದು, ಮೆದುಳು, ಹೃದಯ ಹಾಗು ಇನ್ನು ಹಲವು ಕಾಯಿಲೆಯಿಂದ ಸಾಹೀಮಾ ತನ್ನ ಜೀವನವನ್ನು ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾಳೆ.
ಈಕೆಯ ಪಾಲಕರಿಗೆ ಸಾರ್ವಜನಿಕರ ಕನಿಕರದ ಮಾತುಗಳಿಂದ ಯಾವುದೇ ಪ್ರಯೋಜನವಾಗದೆ ಸಹಾಯ ಹಸ್ತಬೇಕಾಗಿದೆ.ಸರ್ಕಾರವು ಕೂಡ ತನ್ನ ಖರ್ಚಿನಲ್ಲಿ ಈಕೆಯ ಬದುಕಿಗೊಂದು ಉಸಿರು ನೀಡುತ್ತದೆಯೇ ಎನ್ನುವ ನಿರೀಕ್ಷೆಯಲ್ಲಿ ಪಾಲಕರು ದಿನ ದೂಡುತ್ತಿದ್ದಾರೆ.