ಮಾಯಾ ನಗರಿಯ ಅಂಚಿನಲ್ಲಿ ನರಕಯಾತನೆ

Update: 2016-04-02 17:48 GMT

ಮುಂಬೈಯ ದಿಯೋನಾರ್‌ನ ತ್ಯಾಜ್ಯರಾಶಿಯ ನಡುವೆ ಬದುಕು ಸವೆಸುತ್ತಿರುವ ನತದೃಷ್ಟರು....

ಮುಂಬೈಯ ದಿಯೋನಾರ್‌ನ ತ್ಯಾಜ್ಯ ಎಸೆತ ಮೈದಾನದಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದ ಬಳಿಕವೂ ಅಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಲೇ ಇರುತ್ತದೆ. ಆದರೆ ವಿಷಕಾರಿ ಹೊಗೆ ಮಾಲಿನ್ಯವು ದಿಯೋನಾರ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೊಸ ಸೇರ್ಪಡೆಯಾಗಿದೆ. ಭಾರತದ ಈ ಅತಿ ದೊಡ್ಡ ತ್ಯಾಜ್ಯ ವಿಸರ್ಜನೆ ಮೈದಾನವು ಪ್ರತಿ ದಿನ 5500 ಮೆಟ್ರಿಕ್ ಟನ್ ತ್ಯಾಜ್ಯ, 600 ಮೆಟ್ರಿಕ್ ಟನ್ ಹೂಳು ಹಾಗೂ 25 ಟನ್ ಬಯೋಮೆಡಿಕಲ್ ತ್ಯಾಜ್ಯಗಳನ್ನು ಪಡೆದುಕೊಳ್ಳುತ್ತದೆ. ಪ್ರತಿ ವರ್ಷ ಮಾರ್ಚ್ ಹಾಗೂ ಜೂನ್ ತಿಂಗಳ ನಡುವೆ ಇಲ್ಲಿ ಸುರಿಯುವ ಹೂಳಿನ ಪ್ರಮಾಣ 9 ಸಾವಿರ ಟನ್‌ಗೂ ಮಿಕ್ಕಿರುತ್ತದೆ. 2014ರ ಡಿಸೆಂಬರ್‌ನಲ್ಲಿ ತ್ಯಾಜ್ಯವು 164 ಅಡಿ ಎತ್ತರದವರೆಗೂ ತಲುಪಿದ್ದು, ಸುಮಾರು 18 ಮಹಡಿಯ ಕಟ್ಟಡದ ಎತ್ತರಕ್ಕೆ ಸರಿಸಮವಾಗಿದೆ.
 ಮಕ್ಕಳು ಹಾಗೂ ಬೀಡಾಡಿ ನಾಯಿಗಳು ಅಲೆದಾಡುತ್ತಿರುವ ಈ ಕಸದ ರಾಶಿಯ ಬೆಟ್ಟದಲ್ಲಿ, ಪ್ಲಾಸ್ಟಿಕ್‌ನ ಹೊತ್ತಿ ಉರಿಯುವ ಹೊಗೆಯ ಕಮಟು ವಾಸನೆ ಮೂಗಿಗೆ ಬಡಿಯುತ್ತಿದ್ದು, ಖಂಡಿತವಾಗಿಯೂ ಈ ಪ್ರದೇಶವು ಮಾನವ ವಾಸ್ತವ್ಯಕ್ಕೆ ಅಹಿತಕರವಾಗಿದೆ.
 ತ್ಯಾಜ್ಯ ಎಸೆತ ಪ್ರದೇಶಕ್ಕೆ ಕೊಳೆಗೇರಿ ನಿವಾಸಿಗಳ ಸ್ಥಳಾಂತರ
ದಿಯೋನಾರ್‌ನ ಇತಿಹಾಸಕ್ಕೆ ಬರುವುದಾದರೆ, 1970ರ ಆರಂಭದಲ್ಲಿಯೇ ಮುಂಬೈ ಹೊರವಲಯದ ಈ ಪ್ರದೇಶವು ತ್ಯಾಜ್ಯ ಎಸೆತದ ಪ್ರದೇಶವಾಗಿ ರೂಪುಗೊಂಡಿತು. ಮಾಲಿನ್ಯಕಾರಕವಾದ ಕೈಗಾರಿಕೆಗಳು ಹಾಗೂ ಕಸಾಯಿಖಾನೆಗಳ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತದೆ. ಇಲ್ಲಿ ಅನಪೇಕ್ಷಿತ ವಸ್ತುಗಳು ಮಾತ್ರವಲ್ಲ ಅನಪೇಕ್ಷಿತ ವ್ಯಕ್ತಿಗಳನ್ನು ‘ಬಿಟ್ಟುಬಿಡಲಾಗುತ್ತದೆ. ದೇಶದ ಇತರ ಭಾಗಗಳಿಂದ ಬಂದ ವಲಸಿಗರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಇಲ್ಲಿ ವಾಸವಾಗಿದ್ದಾರೆ.
   1972-73ರಲ್ಲಿ ನಗರದ ಒಳಪ್ರದೇಶಗಳ ಬಡನಿವಾಸಿಗಳನ್ನು ಶಿವಾಜಿನಗರ, ಬೈಗಾನ್‌ವಾಡಿ ಹಾಗೂ ಲೋಟಸ್ ಕಾಲನಿಗಳಿಗೆ ಸ್ಥಳಾಂತರಿಸಲಾಯಿತು. ಇನ್ನೂ ಅನೇಕ ಮಂದಿಯನ್ನು ಅದರಲ್ಲೂ ಮುಸ್ಲಿಮರು ಹಾಗೂ ದಲಿತರು ಅಧಿಕ ಸಂಖ್ಯೆಯಲ್ಲಿರುವ ದಿಯೋನಾರ್ ತ್ಯಾಜ್ಯಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸುವಂತೆ ಮಾಡಲಾಯಿತು. 1976ರಲ್ಲಿ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಆಸುಪಾಸಿನಲ್ಲಿ ವಾಸಿಸುವ ನಾಗರಿಕರನ್ನು ‘ಚೀತಾ ಕ್ಯಾಂಪ್’ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಮುಂಬೈ ಮಹಾನಗರದಲ್ಲಿ ವಿಶ್ವಬ್ಯಾಂಕ್ ನೆರವಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಭಾರೀ ಸಂಖ್ಯೆಯ ಕೊಳೆಗೇರಿ ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯು 2003ರಿಂದ 2006ರವರೆಗೂ ಮುಂದುವರಿಯಿತು.
 ಇಂದು ಮುಂಬೈ ಪೂರ್ವಭಾಗದ ವಾರ್ಡ್‌ನ ಶೇ.80ಕ್ಕೂ ಅಧಿಕ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.ಸೂಕ್ತ ವಸತಿ, ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸೌಲಭ್ಯಗಳ ಕೊರತೆಯಿಂದ ಈ ಪ್ರದೇಶವು ಪೀಡಿತವಾಗಿದೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಹಾಗೂ ಸರಕಾರಿ ಮಾಧ್ಯಮಿಕ ಶಾಲೆಗಳ ಕೊರತೆಗಳನ್ನು ಅದು ಎದುರಿಸುತ್ತಿದೆ.
       ತಮಗೆ ಕನಿಷ್ಠ ಮಟ್ಟದ ಬದುಕುವ ಸೌಲಭ್ಯಗಳನ್ನಾದರೂ ಕಲ್ಪಿಸಿ ಎಂಬ ಇಲ್ಲಿನ ನಿವಾಸಿಗಳ ಮೊರೆಗೆ ಸರಕಾರ ಕಿವಿಗೊಡುತ್ತಿಲ್ಲ. ಮುಂಬೈ ಪೂರ್ವ ವಾರ್ಡ್‌ನ ಮಾನವ ಅಭಿವೃದ್ಧಿ ಸೂಚ್ಯಂಕವು ಇಡೀ ನಗರದಲ್ಲೇ ಅತ್ಯಂತ ಕೆಳಮಟ್ಟದಲ್ಲಿದ್ದು, ಕೇವಲ ಶೇ.0.2 ಆಗಿದೆ. ಇಲ್ಲಿನ ನಿರುದ್ಯೋಗ ದರವು ಶೇ.52 ಆಗಿದೆ. ಉದ್ಯೋಗಿಗಳಾಗಿರುವವರ ಪೈಕಿ ಶೇ.71ರಷ್ಟು ಚಿಂದಿ ಆಯುವವರಾಗಿದ್ದು, ಅವರ ಆದಾಯವು ಅನಿಶ್ಚಿತವಾದುದಾಗಿದೆ. ಒಂದು ಕುಟುಂಬದ ಸರಾಸರಿ ಮಾಸಿಕ ಆದಾಯ 8 ಸಾವಿರ ರೂ.ಗಳಾಗಿವೆ.ವಿವಾಹವಾದ ಬಳಿಕ ಕೊಲ್ಲಾಪುರದಿಂದ ಬಂದು ಮುಂಬೈಯ ನಿರಂಕಾರಿ ನಗರ್‌ನಲ್ಲಿ ವಾಸವಾಗಿರುವ ಆಮಿನಾಬಿಗೆ ಇಲ್ಲಿನ ಬದುಕು ಒಂದು ಹೋರಾಟದಂತಿದೆ. ‘‘ಕಸದ ರಾಶಿಯ ನಡುವೆ ವಾಸಿಸುವುದು ನಮಗೆ ವಿಚಿತ್ರವೆಸುತ್ತದೆ.

ಇಲ್ಲಿನ ನೀರು ಪರಿಶುದ್ಧವಲ್ಲ. ಇಡೀ ದಿನ ಈ ಪ್ರದೇಶ ಕೊಳೆತು ನಾರುತ್ತದೆ. ಆದರೆ ಇಲ್ಲಿ ಎಸೆಯಲಾಗುವ ತ್ಯಾಜ್ಯಗಳು ನಮ್ಮ ಆದಾಯದ ಒಂದು ಉತ್ತಮ ಮೂಲವಾಗಿದೆ. ನೀವು ಪುನರ್‌ಬಳಕೆಯೋಗ್ಯವಾದ ಚಿಂದಿಗಳನ್ನು ಸಂಗ್ರಹಿಸಲು ಕಷ್ಟಪಟ್ಟು ದುಡಿದರೆ, ದಿನದಲ್ಲಿ ಎರಡು ಹೊತ್ತಿನ ಊಟಕ್ಕೆ ತೊಂದರೆಯುಂಟಾಗದು’’ ಎಂದು ಆಕೆ ಹೇಳುತ್ತಾರೆ. ಆದರೆ ಚಿಂದಿ ಆಯುವವರ ಲೈಸೆನ್ಸ್‌ಗಳನ್ನು ರದ್ದುಪಡಿಸಲು ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಆಮಿನಾಬಿ ಹಾಗೂ ಇತರ ಸಾವಿರಾರು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಲಿದೆ.
  ದಿಯೋನಾರ್ ತ್ಯಾಜ್ಯ ವಿಸರ್ಜನೆ ಬಯಲಿನ ಅಂಚಿನಲ್ಲಿ ಕನಿಷ್ಠ 17 ಕೊಳೆಗೇರಿಗಳಿವೆ. ಇಲ್ಲಿನ ಜನತೆ ನಿರಂತರವಾಗಿ ತೆರವಿನ ಭೀತಿಯನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಅನೇಕ ಜೋಪಡಿಗಳು ಧರಾಶಾಯಿಯಾಗುತ್ತವೆ. ಆಗ ತಮ್ಮ ಜೋಪಡಿಯನ್ನು ಮತ್ತೆ ಕಟ್ಟಲು ಈ ಕುಟುಂಬಗಳು ಪರದಾಡುತ್ತವೆ. ಇದೂ ಸಾಲದೆಂಬಂತೆ ಇಲ್ಲಿನ ಜೋಪಡಿಗಳನ್ನು ನೆಲಸಮಮಾಡಲು ಕಾರ್ಪೊರೇಷನ್ ಬುಲ್‌ಡೋಜರ್‌ಗಳು ಪೊಲೀಸ್ ಪಡೆಗಳೊಂದಿಗೆ ಧಾವಿಸುತ್ತವೆ. ಇದಾದ ಕೆಲವು ದಿನಗಳ ಬಳಿಕ ಈ ಕುಟುಂಬಗಳು ಮತ್ತೆ ಜೋಪಡಿಗಳನ್ನು ಪುನರ್‌ನಿರ್ಮಿಸಿ ತಮ್ಮ ಬದುಕನ್ನು ಕಟ್ಟುವ ಕಾಯಕವನ್ನು ಆರಂಭಿಸುತ್ತವೆ.
    ತೆರೆದ ಬಯಲಿನಲ್ಲಿ ಮಲವಿಸರ್ಜನೆ, ವಾಯು ಹಾಗೂ ಜಲಮಾಲಿನ್ಯ, ಕೊಳೆತುನಾರುವ ತ್ಯಾಜ್ಯಗಳ ಸಮಸ್ಯೆಯನ್ನು ಎದುರಿಸುತ್ತಿರುವ ಮುಂಬೈ ಪೂರ್ವ ವಾರ್ಡ್‌ನ ನಿವಾಸಿಗಳು ಸರಾಸರಿ 50 ವರ್ಷಗಳಿಗೂ ಕಡಿಮೆ ಜೀವಿತಾವಧಿ ಹೊಂದಿದ್ದಾರೆ. 2015ರಲ್ಲಿ ಇಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಶೇ.20ರಷ್ಟು ಶಿಶುಗಳದ್ದಾಗಿವೆ. ಇಲ್ಲಿ ಪ್ರತಿ ಎರಡು ಮಕ್ಕಳಲ್ಲಿ ಒಂದು ಮಗು ಕಡಿಮೆ ದೇಹತೂಕವನ್ನು ಹೊಂದಿದೆ. 2014-15ರಲ್ಲಿ ಶೇ.90ಕ್ಕೂ ಅಧಿಕ ಗರ್ಭಿಣಿಯರು ರಕ್ತಹೀನತೆ (ಅನೀಮಿಯಾ)ಯ ತೊಂದರೆಯಿಂದ ಪೀಡಿತರಾಗಿದ್ದಾರೆ.
ಬಾಣಂತಿ ಸಾವಿನ ಪ್ರಕರಣಗಳು ಇಲ್ಲಿ ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಕ್ಷಯದಂತಹ ಸೋಂಕುರೋಗಗಳ ಅಪಾಯವೂ ಇಲ್ಲಿದೆ. ಆರೋಗ್ಯ ಸೇವೆಗಳಂತೂ ಇಲ್ಲಿ ಅತ್ಯಂತ ಕಳಪೆಯಾಗಿವೆ. ನಕಲಿ ಔಷಧಿ ದಂಧೆ ಇಲ್ಲಿ ವ್ಯಾಪಕವಾಗಿ ಬೇರುಬಿಟ್ಟಿದೆ. ಶಿಕ್ಷಣ ಕೂಡಾ ಇಲ್ಲಿ ತೀರಾ ಕೆಳಮಟ್ಟದಲ್ಲಿದೆ. ಪ್ರತಿ ಹತ್ತು ಮನೆಗಳ ಪೈಕಿ ಏಳು ಮನೆಗಳು ನಳ್ಳಿ ನೀರಿನ ಸಂಪರ್ಕದಿಂದ ವಂಚಿತವಾಗಿವೆ.
   ಈ ಎಲ್ಲಾ ಸಮಸ್ಯೆಗಳ ಜೊತೆಗೆ ಜಾತಿ, ಧರ್ಮ, ಜನಾಂಗ ಹಾಗೂ ವೃತ್ತಿ ಕುರಿತ ವಿಚಾರಗಳು ಕೂಡಾ ಸ್ಥಳೀಯರ ಜೀವನದ ಮೇಲೆ ಪರಿಣಾಮವನ್ನು ಬೀರಿವೆ. ವಾಸ್ತವಿಕವಾಗಿ ಈ ವಾರ್ಡ್‌ನಲ್ಲಿ ಮಾನವ ಅಭಿವೃದ್ಧಿಯ ಮಾನದಂಡಗಳನ್ನು ಜಗತ್ತಿನ ಇತರ ಕಡುಬಡತನದ ಪ್ರಾಂತಗಳ ಜೊತೆಗೆ ಹೋಲಿಸಬಹುದಾಗಿದೆ. ಇಲ್ಲಿನ ವಾರ್ಡ್‌ನ ಒಟ್ಟಾರೆ ಬೆಳವಣಿಗೆಯು, ನಗರದ ಉಳಿದ ಭಾಗಕ್ಕಿಂತ ತೀರಾ ಕಳಪೆಯಾಗಿದೆ.
ಆರ್ಥಿಕ ಪ್ರಗತಿ
 ಮುಂಬೈ ಪೂರ್ವ ವಾರ್ಡ್ ಎದುರಿಸುತ್ತಿರುವ ಸಮಸ್ಯೆಗಳ ಮೂಲಬೇರು, ಕೃಷಿ ಬಿಕ್ಕಟ್ಟುಗಳಿಂದ ಜರ್ಝರಿತವಾಗಿರುವ ಭಾರತೀಯ ಹಳ್ಳಿಗಳಲ್ಲಿದೆ. ದಕ್ಷವಾದ ಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸರಕಾರಗಳು ಈ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸುಭದ್ರ ಗ್ರಾಮಗಳನ್ನು ಸೃಷ್ಟಿಸುವ ಅಬ್ದುಲ್ ಕಲಾಂ ಅವರ ದೂರದೃಷ್ಟಿ ಹಾಗೂ ನರೇಂದ್ರ ಮೋದಿ ರೂಪಿಸಿರುವ ಸಂಸದ್ ಆದರ್ಶ ಗ್ರಾಮ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಬಹುದಾಗಿದೆ. ಗ್ರಾಮೀಣ ಜನರನ್ನು ಅವರವರ ಗ್ರಾಮಗಳಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಗುವಂತಹ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಇಂತಹ ಗ್ರಾಮೀಣ ಪ್ರಗತಿಯು, ಧಾರಣಾಶೀಲ ನಗರಗಳನ್ನು ಹಾಗೂ ಉತ್ತಮ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬಲ್ಲುದು.

        40 ವರ್ಷಗಳ ಹಿಂದೆ ಮುಂಬೈಯನ್ನು ಭಾರತದ ಆರ್ಥಿಕ ರಾಜಧಾನಿಯನ್ನಾಗಿ ಮಾಡಲು, ನಗರ ಸುಂದರೀಕರಣ, ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವಾರು ಪುನರ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಸಮಾಜದಲ್ಲಿ ಕೆಳಮಟ್ಟದ ವರ್ಗ, ಜಾತಿ ಸಮುದಾಯಗಳ ಹಿತರಕ್ಷಣೆಯ ಬಗ್ಗೆ ಈ ಮಹಾನಗರದ ಆಡಳಿತ ಕುರುಡಾಗಿತ್ತು. ಮುಂಬೈ ಪೂರ್ವ ವಾರ್ಡ್‌ನಲ್ಲಿ ವಾಸಿಸುವ 5 ಲಕ್ಷದಷ್ಟು ಮಂದಿ, ಈ ಬೃಹತ್ ನಗರವು ಸುಸ್ಥಿತಿಯಲ್ಲಿ ಸಾಗಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅವರು ನಗರದಲ್ಲಿನ ಬ್ರಿಟಿಷ್ ಕಾಲದ ಒಳಚರಂಡಿ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ರಸ್ತೆಗಳನ್ನು ಗುಡಿಸಿ,ನಿರ್ಮಲವಾಗಿಡುತ್ತಾರೆ. ಚಿಂದಿಗಳನ್ನು ಒಯ್ದು, ಅವುಗಳನ್ನು ವಿಂಗಡಿಸುತ್ತಾರೆ. ಭದ್ರತಾ ಸಿಬ್ಬಂದಿಯಾಗಿ, ಮನೆಗೆಲಸದವರಾಗಿ ದುಡಿಯುತ್ತಾರೆ.ನಗರದ ಜನತೆಗೆ ಮೂಲಭೂತ ಸೇವೆಗಳನ್ನು ಒದಗಿಸುತ್ತಾರೆ. ಆದರೆ ಅವರ ಕಳಪೆ ಜೀವನ ಮಟ್ಟಕ್ಕೆ ಜಾಗತಿಕ ನಗರವಾದ ಮುಂಬೈನಲ್ಲಿ ಯಾವ ಸ್ಥಾನವೂ ಇಲ್ಲ. ನಗರದ ತ್ಯಾಜ್ಯರಾಶಿಯ ಜೊತೆಗೆ ಬದುಕುತ್ತಿರುವ ಈ ಬಡಪಾಯಿ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಲು ಹಾಗೂ ಅವರಿಗೆ ಅನುಕಂಪ ತೋರಲು ಮುಂಬೈನ ಶ್ರೀಮಂತರು ಹಾಗೂ ಪ್ರಭಾವಶಾಲಿಗಳಿಗೆ ಖಂಡಿತವಾಗಿಯೂ ಸಾಧ್ಯವಿದೆ.

Writer - ಪರಶುರಾಮನ್

contributor

Editor - ಪರಶುರಾಮನ್

contributor

Similar News