ಅಂದಿನ ಚಿತ್ರಮಂದಿರ ಇಂದಿನ ಮಸೀದಿ!
ಮುಂಬೈ: ಬಹುಶಃ ಹಳೆಯ ಸಿನಿಮಾಪ್ರಿಯರ ಮನಸ್ಸಿನಲ್ಲಿ ಹಿಂದಿನ ಅಲೆಕ್ಸಾಂಡ್ರಾ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಅರೆಬೆತ್ತಲು ಚಿತ್ರಗಳ ಶೀರ್ಷಿಕೆ ರೂಪಾಂತರಗಳು ಇಂದಿಗೂ ಅಚ್ಚಳಿಯೇ ಉಳಿದಿರಬಹುದು. ಅಲ್ಫ್ರೆಡ್ ಹಿಚ್‌ಕಾಕ್ ಅವರ 38 ಸ್ಟೆಪ್ಸ್ ಚಿತ್ರ, ’ಏಕ್ ಕಮ್ ಚಾಲಿಸ್ ಲಂಬೆ’ ಯಾಗಿ ಡಬಲ್ ಇಂಪ್ಯಾಕ್ಟ್ ಚಿತ್ರ ರಾಮ್ ಔರ್ ಶ್ಯಾಮ್ ಆಗಿ, ಬ್ರೂಸ್ ಲೀ- ದ ಲೆಜೆಂಡ್ ಚಿತ್ರ ದಾದೋಂ ಕಾ ದಾದಾ ಬ್ರೂಸ್ ಲೀ ಆಗಿ ಭಾಷಾಂತರಗೊಳ್ಳುತ್ತಿದ್ದವು.
ಆದರೆ 2000ನೇ ಇಸ್ವಿ ವೇಳೆಗೆ ಈ ಸಿನಿಮಾ ಹಾಲ್ ಹಾಲಿವುಡ್ ಚಿತ್ರದ ಬದಲಾಗಿ ಬಿ ಹಾಗೂ ಸಿ ದರ್ಜೆಯ ವಯಸ್ಕ ಚಿತ್ರಗಳ ಪ್ರದರ್ಶನ ಅಡ್ಡೆಯಾಯಿತು. ಅದು ಎಷ್ಟರ ಮಟ್ಟಿಗೆ (ಕು)ಖ್ಯಾತವಾಗಿತ್ತು ಎಂದರೆ, ಶಾಲಾವಾಹನಗಳ ಚಾಲಕರಿಗೆ ಪಾಲಕರು, ಆ ಮಾರ್ಗದಿಂದ ವಾಹನ ಒಯ್ಯದಂತೆ ಮನವಿ ಮಾಡಿಕೊಳ್ಳುವಷ್ಟರಮಟ್ಟಿಗೆ. ಅಂದರೆ, ಅಂಥ ಡರ್ಟಿ ಚಿತ್ರದ ಪೋಸ್ಟರ್‌ಗಳು ಮಕ್ಕಳ ಮೇಲೆ ಪ್ರಭಾವ ಬೀರದಿರಲಿ ಎಂಬ ಕಾರಣಕ್ಕೆ ಹೀಗೆ ಹೇಳುತ್ತಿದ್ದರು.
ಆದರೆ ಮೂರು ವರ್ಷ ಹಿಂದೆ, ಸಿನಿಮಾ ಹಾಲ್ ಹೊಸ ಅವತಾರ ತಾಳಿ ಮಸೀದಿ ಹಾಗೂ ಇಸ್ಲಾಮಿಕ್ ಸಂಸ್ಥೆಯಾಗಿ ಮಾರ್ಪಡುವ ಕಾರ್ಯ ಆರಂಭವಾಯಿತು. ವರ್ಷಗಳ ಕಾಲ ಐಟಂ ನಂಬರ್ ಅರಚುತ್ತಿದ್ದ ಡಲ್ಬಿ ಡಿಜಿಟಲ್ ಸ್ಪೀಕರ್‌ಗಳು ಇದೀಗ ಶ್ರದ್ಧಾವಂತರನ್ನು ಪ್ರಾರ್ಥನೆಗೆ ಆಹ್ವಾನಿಸುತ್ತಿವೆ. ಪ್ರೇಕ್ಷಕರ ಬೊಬ್ಬೆಯ ಬದಲು ಪ್ರತಿ ದಿನ ಐದು ಬಾರಿ ಇಮಾಮ್ ಖುರಾನ್ ಪಠಣ ಕೇಳಿಬರುತ್ತಿದೆ.
ಈ ರೂಪಾಂತರ ಆರಂಭವಾದದ್ದು 2011ರಲ್ಲಿ. ದಕ್ಷಿಣ ಮುಂಬೈನ ಬಿಲ್ಡರ್ ರಫೀಕ್ ದೂಧ್‌ವಾಲಾ 15 ಸಾವಿರ ಚದರ ಅಡಿಯ ಈ ಆಸ್ತಿಯನ್ನು ಹಲವು ಕೋಟಿಗೆ ಖರೀದಿಸಿ, ಇಸ್ಲಾಮಿಕ್ ಸ್ವಯಂಸೇವಾ ಸಂಸ್ಥೆಯಾದ ದೀನಿಯತ್‌ಗೆ ಕೊಡುಗೆಯಾಗಿ ನೀಡಿದರು. ಕೇಂದ್ರ ಮುಂಬೈನ ನಾಗಪಾದ ಜಂಕ್ಷನ್‌ನ ಬೆಲಾಸಿಸ್ ರಸ್ತೆಯ ಮಹಾರಾಷ್ಟ್ರ ಕಾಲೇಜಿನ ಎದುರು ಈ ಭವ್ಯ ಹಾಗೂ ದೈತ್ಯ ಕಟ್ಟಡ ಶೋಭಿಸುತ್ತಿದೆ.
ಹಿಂದೆ ಇಲ್ಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿತ್ರಮಂದಿರಗಳು ಅಲ್ಲಲ್ಲಿ ಕಂಡುಬರುತ್ತಿದ್ದವು. ಚಿತ್ರ ಪ್ರದರ್ಶಕನಾನಿ ವೃತ್ತಿ ಆರಂಭಿಸಿದ ಅರ್ದೇಶಿರ್ ಇರಾನಿ ಅಲೆಕ್ಸಾಂಡ್ರಾ ಸಿನಿಮಾವನ್ನು 1921ರಲ್ಲಿ ಆರಂಭಿಸಿದ್ದರು. ಅಬ್ದುಲ್ ಅಲಿ ಯೂಸಫಲಿ ಇದರ ಸಹ ಮಾಲೀಕರಾಗಿದ್ದರು.
ಹೊರಗಿನಿಂದ ಈಗಲೂ ಚಿತ್ರಮಂದಿರದಂತೆಯೇ ಕಾಣುವ ಈ ಮಸೀದಿಯ ಆಂತರಿಕ ವಿನ್ಯಾಸ ಸಂಪೂರ್ಣ ಬದಲಾಗಿದೆ. ಈ ರೂಪಾಂತರ ಬಗ್ಗೆ ಪ್ರತಿಕ್ರಿಯಿಸಲು ದೂಧ್‌ವಾಲಾ ನಿರಾಕರಿಸಿದ್ದಾರೆ. ಆದರೆ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕ್ಲೇರ್ ರಸ್ತೆ, ನಾಗಪಾದ, ಅಗ್ರಿಪಾದ ಹಾಗೂ ಕೇಂದ್ರ ಮುಂಬೈನ ನಿವಾಸಿಗಳು ಈ ಬಗ್ಗೆ ಅತೀವ ಸಂತಸ ಹೊಂದಿದ್ದಾರೆ.