ಪ್ಲಾಸ್ಟಿಕ್ ನಿಷೇಧ: ಉತ್ಪಾದನಾ ಘಟಕಗಳಿಗೆ ನಷ್ಟದ ಭೀತಿ

Update: 2016-04-03 12:43 GMT

  ಮಂಗಳೂರು, ಏ.1:ರಾಜ್ಯದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಪಣ ತೊಟ್ಟಿರುವ ರಾಜ್ಯ ಸರಕಾರ ಎ.15 ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿರುವುದು ಪರಿಸರದ ದೃಷ್ಟಿಯಿಂದ ಉತ್ತಮವಾದ ನಿರ್ಧಾರವೆಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ ಈ ಆದೇಶ ರಾಜ್ಯದ 750 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಿಕಾ ಸಂಸ್ಥೆಗಳ ಮೇಲೆ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವ ಸುಮಾರು 1.8 ಲಕ್ಷ ಕಾರ್ಮಿಕರ ಉದ್ಯೋಗದ ಮೇಲೂ ದುಷ್ಪರಿಣಾಮ ಬೀರಿದೆ.

     ರಾಜ್ಯ ಸರಕಾರ 2016 ರ ಮಾರ್ಚ್ 11 ರಂದು ಮಾಡಿದ ನೋಟಿಫೀಕೇಶನ್ ಪ್ರಕಾರ ರಾಜ್ಯದಲ್ಲಿ ಎಲ್ಲಾ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿದೆ. ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿರುವ ಸರಕಾರ ಜನರು ದಿನಬಳಕೆಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಳಸುತ್ತಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿದೆ. ಆದರೆ ಈ ನಿಷೇಧ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂಬುದು ಪ್ಲಾಸ್ಟಿಕ್ ಉತ್ಪಾದಕರು ಆಪಾದಿಸುತ್ತಿದ್ದಾರೆ. ಹಿಂದೆ 20 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿತ್ತು. ನಂತರದಲ್ಲಿ ಇದನ್ನು 40 ಮೈಕ್ರಾನ್‌ನಷ್ಟಿರಬೇಕು ಎಂದು ಆದೇಶಿಸಲಾಗಿತ್ತು. ಪ್ಲಾಸ್ಟಿಕ್ ವೇಸ್ಟ್ ಮ್ಯಾನೆಜ್‌ಮೆಂಟ್ ರೂಲ್ಸ್ ಪ್ರಕಾರ 40 ಮೈಕ್ರಾನ್‌ನಷ್ಟಿರಬೇಕು ಎಂದು ಕೇಂದ್ರ ಸರಕಾರ ನಿಯಮ ರೂಪಿಸಿದ್ದರೂ ರಾಜ್ಯ ಸರಕಾರ ಇದನ್ನು ಪರಿಗಣಿಸದೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸುತ್ತಿರುವುದು ಸರಿಯಲ್ಲ ಎಂಬುದು ಪ್ಲಾಸ್ಟಿಕ್ ಉತ್ಪಾದಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಕರ್ನಾಟಕದಲ್ಲ 750 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಕ ಉತ್ಪದಾನ ಸಂಸ್ಥೆಗಳಿದೆ. ಇವುಗಳಿಗೆ ರಾಜ್ಯ ಸರಕಾರ 2018 ರವರೆಗೆ ಪರವಾನಿಗೆಯನ್ನು ನೀಡಿದೆ. ಈ ಉತ್ಪಾದನಾ ಸಂಸ್ಥೆಗಾಗಿ ಮಾಡಿರುವ ಸಾಲ ಇನ್ನೂ ತೀರಿಲ್ಲ. ಸರಕಾರವೂ ಇದಕ್ಕೆ ಸಬ್ಸಿಡಿಯನ್ನು ನೀಡಿದೆ. ಇವೆಲ್ಲವೂ ಗೊತ್ತಿದ್ದರೂ ರಾಜ್ಯ ಸರಕಾರ ಏಕಾಏಕಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

       ದ.ಕ ಜಿಲ್ಲೆಯಲ್ಲಿ 52 ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಉತ್ಪಾದನಾ ಘಟಕವಿದೆ. ಸುಮಾರು 50 ಟ್ರೇಡರ್ಸ್‌ಗಳಿದ್ದಾರೆ. ಇಲ್ಲಿ ಐದು ಸಾವಿರ ಕಾರ್ಮಿಕರು ದುಡಿಯುತ್ತಿದ್ದು, ಹತ್ತು ಸಾವಿರ ಮಾರಾಟಗಾರರಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷ ಜನ ಪ್ಲಾಸ್ಟಿಕ್ ಉತ್ಪನ್ನ ಘಟಕಗಳಿಂದ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 80 ಸಾವಿರ ಜನ ಉದ್ಯೋಗಿಗಳಿದ್ದು 1 ಲಕ್ಷ ಜನ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 5 ಲಕ್ಷ ಜನ ಇದಕ್ಕೆ ಅವಲಂಬಿತರಾಗಿದ್ದಾರೆ .

  ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧ ಮತ್ತೊಂದೆಡೆ ಗ್ರಾಹಕರಿಗೂ ಸಮಸ್ಯೆಯನ್ನು ಸೃಷ್ಟಿಸಿದೆ. ಮೀನು, ಮಾಂಸ, ತರಕಾರಿಗಳ ಕೊಂಡೊಯ್ಯಲು ಪ್ಲಾಸ್ಟಿಕ್ ಅತ್ಯಗತ್ಯ. ಆದರೆ ಅದನ್ನು ನಿಷೇಧಿಸಿರುವುದು ಗ್ರಾಹಕರಿಗೂ ಸಂಕಷ್ಟ ತಂದಿದೆ.

    ಈ ಬಗ್ಗೆ ರಾಜ್ಯ ಸರಕಾರದಲ್ಲಿ ಕರಡು ನೊಟೀಫಿಕೆಶನ್ ಬಂದ ಸಂದರ್ಭದಲ್ಲಿಯೆ ಕೆನರ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರರ್ ಆ್ಯಂಡ್ ಟ್ರೇಡರ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಶನ್ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದರೂ ರಾಜ್ಯ ಸರಕಾರ ಎಲ್ಲಾ ಪ್ಲಾಸ್ಟಿಕ್ ನಿಷೇಧ ಮಾಡಿರುವುದನ್ನು ಹಿಂಪಡೆದಿಲ್ಲ. ಕಾನೂನು ಸಚಿವರು ಸೇರಿದಂತೆ ಹಲವರು 40 ಮೈಕ್ರಾನ್ ಗಿಂತ ಕಡಿಮೆಯಿರುವುದಕ್ಕೆ ಮಾತ್ರ ನಿಷೇಧವೇರುವುದಾಗಿ ಭರವಸೆ ನೀಡಿದ್ದರೂ ಅದು ಈಡೇರಿಲ್ಲವೆಂಬುದು ಉತ್ಪಾದಕರ ಅಳಲು.

ಸುಪ್ರೀಂ ಕೋರ್ಟ್ ಅಥವಾ ಗ್ರೀನ್ ಟ್ರಿಬ್ಯುನಲ್‌ನಲ್ಲಿ ಪ್ರಶ್ನಿಸಲು ಚಿಂತನೆ:

    ಪ್ಲಾಸ್ಟಿಕ್ ನಿಷೇಧದಿಂದ ಉದ್ಯಮಗಳು ಬಂದ್ ಆಗಿ ಆಗುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಕಾನೂನು ಮೊರೆ ಹೋಗಲು ಪ್ಲಾಸ್ಟಿಕ್ ಉತ್ಪನ್ನ ತಯಾರಕರು ನಿರ್ಧರಿಸಿದ್ದಾರೆ. ರಾಜ್ಯ ಸರಕಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ನಿಷೇಧವನ್ನೇರಿರುವ ವಿರುದ್ದ ಈಗಾಗಲೆ ಕೆನರ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರರ್ ಆ್ಯಂಡ್ ಟ್ರೇಡರ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಶನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಲು ಸೂಚಿಸಿರುವುದರಿಂದ ಗ್ರೀನ್ ಟ್ರಿಬ್ಯೂನಲ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಆದೇಶದ ವಿರುದ್ದ ಪ್ರಶ್ನಿಸಲು ಚಿಂತನೆ ನಡೆಯುತ್ತಿದೆ.ಅದಕ್ಕೂ ಮುಂಚೆ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಇದಕ್ಕೆ ಪರಿಹಾರ ಸಾಧ್ಯವೆ ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ.

    ಮಂಗಳೂರಿನಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಕ ಸಂಸ್ಥೆಯವರೆ ಒಟ್ಟುಗೂಡಿ 2 ಲಕ್ಷ ಖರ್ಚು ಮಾಡಿ ಪ್ಲಾಸ್ಟಿಕ್ ವೇಸ್ಟ್ ಕಲೆಕ್ಷನ್ ಸೆಂಟರನ್ನು ಕದ್ರಿ ಮಾರ್ಕೆಟ್‌ನಲ್ಲಿ ತೆರೆದಿದ್ದಾರೆ. ಹಳೆಯ ಪ್ಲಾಸ್ಟಿಕನ್ನು ಗ್ರಾಹಕರಿಂದ ಖರೀದಿಸುವ ಈ ಕೇಂದ್ರದಲ್ಲಿ ಸಾಕಷ್ಟು ಹಳೆಯ ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರೀಯೆ ಕೂಡ ಇದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯೂ ಆಗಿದೆ.ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಪುನರ್ಬಳಕೆಯನ್ನು ಮಾಡಲಾಗುತ್ತಿರುವುದರಿಂದ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗಿದೆ ಎಂಬುದು ಪ್ಲಾಸ್ಟಿಕ್ ತಯಾರಕರು ಹೇಳುತ್ತಾರೆ.

  ದೇಶದಲ್ಲಿ ಎಲ್ಲಿಯೂ ಈ ರೀತಿಯಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧ ಮಾಡಲಾಗಿಲ್ಲ. ಕೇಂದ್ರ ಸರಕಾರದ ನಿಯಮವನ್ನು ಮೀರಿ ರಾಜ್ಯ ಸರಕಾರ 40 ಮೈಕ್ರಾನ್ ಇರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇದಿಸಿದೆ. ಇದರಿಂದ ರಾಜ್ಯದಲ್ಲಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಿಕಾ ಸಂಸ್ಥೆಗಳು ಮುಚ್ಚಿ ಹೊರರಾಜ್ಯದ ಪ್ಲಾಸ್ಟಿಕ್ ಉತ್ಪನ್ನ ಸಂಸ್ಥೆಗಳು ಬಂದು ಮಾರಾಟ ಮಾಡುವ ಸಾಧ್ಯತೆಯಿದೆ. ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧದಿಂದ ಆಗುವ ನಷ್ಟಕ್ಕೆ , ಕಾರ್ಮಿಕರ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಮಾಡದೆ ಸರಕಾರ ಕಾನೂನನ್ನು ಜಾರಿಗೊಳಿಸುತ್ತಿದೆ.

-ಬಿ.ಎ.ನಝೀರ್, ಅಧ್ಯಕ್ಷ, ಕೆನರಾ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರ್ ಆ್ಯಂಡ್ ಟ್ರೇಡರ್ ಅಸೋಸಿಯೇಶನ್

  ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಿರುವಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸಲಾಗಿದೆ. 40 ಮೈಕ್ರಾನ್‌ಗಿಂತ ಗುಣಮಟ್ಟ ಹೆಚ್ಚಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳಿಗೆ ಅನುಮತಿ ನೀಡುವ ಬಗ್ಗೆ ಬೇಡಿಕೆಯಿದ್ದರೂ ಈ ಬಗ್ಗೆ ಕ್ಯಾಬಿನೇಟ್ ತೀರ್ಮಾನವಾಗಿರುವುದರಿಂದ ನಾನೂ ವೈಯಕ್ತಿವಾಗಿ ತೀರ್ಮಾನಿಸಲು ಸಾಧ್ಯವಿಲ್ಲ. ಆದರೂ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಉತ್ಪಾದಕರಿಗೆ ಆಗುವ ನಷ್ಟ ಮತ್ತು ಕಾರ್ಮಿಕರ ಉದ್ಯೋಗಕ್ಕೆ ಪರ್ಯಾಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು

-ಬಿ.ರಮಾನಾಥ ರೈ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ

Writer - ವಿನೋದ್ ಪುದು

contributor

Editor - ವಿನೋದ್ ಪುದು

contributor

Similar News