ಮಲ್ಪೆ ಬೀಚ್‌ನಲ್ಲಿದೆ ಜೀವ ರಕ್ಷಕರ ಪಡೆ

Update: 2016-04-03 18:32 GMT

 ಇಡೀ ವಿಶ್ವದಲ್ಲಿ ಪ್ರತಿವರ್ಷ ಬೀಚ್‌ಗಳಲ್ಲಿ ಮುಳುಗಿ 1.2 ಮಿಲಿಯನ್ ಮಂದಿ ಸಾಯುತ್ತಿದ್ದು, ಅದರಲ್ಲಿ 23% ಭಾರತೀಯರು ಆಗಿರುತ್ತಾರೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಿದೆ.
ಇಂಟರ್ ನ್ಯಾಷನಲ್ ಲೈಫ್ ಸೇವಿಂಗ್ ಸೊಸೈಟಿ, ವಿಶ್ವದಾದ್ಯಂತ ನೀರಿನಲ್ಲಿ ಮುಳುಗಿ ಸಾಯುವವರನ್ನು ರಕ್ಷಿಸಲು ವಿದ್ಯಾರ್ಥಿಗಳಿಗೆ, ಆಸಕರ್ತಿಗೆ ವಿವಿಧ ತರಬೇತಿಗಳನ್ನು ನೀಡುತ್ತಿದೆ. ಭಾರತದಲ್ಲಿ ಇದರ ಅಂಗ ಸಂಸ್ಥೆ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ (ಇಂಡಿಯಾ) ಕಾರ್ಯನಿರ್ವಹಿಸುತ್ತಿದೆ.
  ಈ ಸಂಸ್ಥೆಯು ಭಾರತದಲ್ಲಿ ಸಮುದ್ರ ತೀರದಲ್ಲಿನ ಯುವಜನತೆ ಮತ್ತು ಇತರೆ ಆಸಕ್ತರಿಗಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರ ಜೀವ ಉಳಿಸುವ ಕಾರ್ಯ ಮಾಡುತ್ತಿದೆ.
 ಇತ್ತೀಚೆಗೆ ಉಡುಪಿಯಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆಯ ಫಿಶರೀಸ್ ಶಾಲೆ, ಗಾಂಧಿ ಶಾಲೆ, ನಾರಾಯಣ ಗುರು ಶಾಲೆ ಮತ್ತು ಉಡುಪಿಯ ಕ್ರೀಡಾ ಹಾಸ್ಟೆಲ್ ನ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 100 ಮಂದಿ ಶಾಲಾ ಮಕ್ಕಳಿಗೆ ಸಮುದ್ರದಲ್ಲಿ ಅಪಾಯದಲ್ಲಿರುವವರನ್ನು ರಕ್ಷಿಸುವ ಕುರಿತು ತರಬೇತಿ ನೀಡಲಾಗಿದೆ. ಪ್ರತೀ ವಾರಾಂತ್ಯದಲ್ಲಿ ಮಕ್ಕಳಿಗೆ 2 ಗಂಟೆಗಳ ವಿಶೇಷ ತರಬೇತಿಯನ್ನು ನೀಡಲಾಗಿದೆ. ಈ ತರಬೇತಿಯಲ್ಲಿ ಮುಳುಗುತ್ತಿರುವವರನ್ನು ಗುರುತಿಸುವುದು, ಅವರನ್ನು ದಡಕ್ಕೆ ತರುವುದು, ಅಗತ್ಯ ಪ್ರಥಮ ಚಿಕಿತ್ಸೆ, ಸಿಪಿಆರ್ ನೀಡುವ ವಿಧಾನಗಳ ಕುರಿತು ತರಬೇತಿಯನ್ನು ನೀಡಲಾಗಿದೆ.
ಈ ತರಬೇತಿ ಪಡೆಯಲು ಆಗಮಿಸಿದ ಮಕ್ಕಳಿಗೆ ಪ್ರಾರಂಭದಲ್ಲಿ ಈಜು ಸಹ ಗೊತ್ತಿರಲಿಲ್ಲ, ಇವರಿಗೆ ಈಜು ಕಲಿಸಿ, ಸಮುದ್ರದಲ್ಲಿ ವಿವಿಧ ಸಂದರ್ಭಗಳಲ್ಲಿ ಯಾವ ರೀತಿ ರಕ್ಷಿಸಬೇಕು, ಸುರಕ್ಷಾ ಉಪಕರಣಗಳ ಬಳಕೆ ಕುರಿತು ಅಂತಾರಾಷ್ಟ್ರೀಯ ಈಜು ಪರಿಣಿತ ಹಾಗೂ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ ಪಾರ್ಥ ವಾರಣಾಸಿ ತರಬೇತಿಯನ್ನು ನೀಡಿದ್ದಾರೆ.
 ಈ ರೀತಿಯ ತರಬೇತಿ ಪಡೆದ ಮಕ್ಕಳಿಂದ ಸಮುದ್ರದಲ್ಲಿ ಮುಳುಗುತ್ತಿರುವವರ ಕನಿಷ್ಠ 50% ಜನರ ಜೀವ ರಕ್ಷಣೆ ಸಾಧ್ಯ ಎನ್ನುವುದು ಪಾರ್ಥ ವಾರಣಾಸಿ ಅವರ ಅಭಿಪ್ರಾಯ, ರೇಸರ್ ಬೋರ್ಡ್, ರೆಸ್ಕ್ಯೂ ಟ್ಯೂಬ್ ಹಾಗೂ ಬೋಟ್ ನೆರವಿನಿಂದ ಯಾವ ರೀತಿ ರಕ್ಷಿಸಬಹುದು ಎನ್ನುವುದರ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಮಲ್ಪೆ ಸಮುದ್ರ ತೀರದಲ್ಲಿ ಸ್ವಚ್ಛತೆ ಹಾಗೂ ಪ್ರವಾಸಿಗಳ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಲೈಫ್ ಗಾರ್ಡ್‌ಗಳು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಶಾಲಾ ಮಕ್ಕಳಿಗೆ ಸಹ ಈ ತರಬೇತಿಯನ್ನು ನೀಡುವುದರಿಂದ ತುರ್ತು ಸಂದರ್ಭಗಳಲ್ಲಿ ಪ್ರವಾಸಿಗರ ರಕ್ಷಣೆ ಸಾಧ್ಯ. ಈ ತರಬೇತಿ ಕಾರ್ಯಕ್ರಮಕ್ಕೆ 2 ಲಕ್ಷ ರೂ. ವೆಚ್ಚವಾಗಿದ್ದು, ಈ ಮೊತ್ತವನ್ನು ಬೀಚ್ ಅಭಿವೃದ್ಧಿ ಸಮಿತಿಯಿಂದ ಪಾವತಿಸಲಾಗಿದೆ. ಆಸಕ್ತರಿಗೆ ತರಬೇತಿ ಪಡೆಯಲು ಇನ್ನೂ ಅವಕಾಶವಿದೆ, ಜಿಲ್ಲಾಡಳಿತ ಎಲ್ಲಾ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ವಿಶಾಲ್ ಆರ್ ತಿಳಿಸಿದರು.

ತರಬೇತಿ ಪಡೆಯಲು ಇಚ್ಛಿಸುವವರು ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ ದೂ.ಸಂ. 9742507270 ರವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News