ರಾಘವೇಶ್ವರ ಶ್ರೀ ನಿರಪರಾಧಿಯೇ ? : ಇಲ್ಲಿದೆ ತೀರ್ಪು !

Update: 2016-04-04 12:02 GMT

ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಭಕ್ತೆಯೊಬ್ಬರ ಮೇಲೆ ನಡೆಸಿದರೆನ್ನಲಾದ ಅತ್ಯಾಚಾರ ಸಂಬಂಧದ ತೀರ್ಪು ಇದೀಗ ಹೊರಬಿದ್ದಿದ್ದು, ಬೆಂಗಳೂರಿನ 54 ನೇ ಎಸಿಎಂಎಂ ಸೆಶನ್ಸ್ ನ್ಯಾಯಾಧೀಶ ಜಿ ಬಿ ಮುದಿಗೌಡರ್ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸದರಿ ನ್ಯಾಯಾಧೀಶರು ನೀಡಿದ 119 ಪುಟಗಳ ತೀರ್ಪಿನ ಸುಮಾರು 34 ನೇ ಪುಟದವರೆಗೂ ಆರೋಪಿ ಪರ ಮತ್ತು ವಿರುದ್ಧದ ನ್ಯಾಯವಾದಿಗಳು ಮಂಡಿಸಿದ ವಾದಗಳನ್ನು ಪ್ರಸ್ತಾವಿಸಲಾಗಿದೆ. ಈ ಭಾಗದಲ್ಲಿ ಅಂಥ ಹೊಸ ವಿಷಯಗಳೇನೂ ಇಲ್ಲ (ಕಳೆದ ಒಂದೂವರೆ ವರ್ಷಗಳಿಂದ ನಾನಾ ವೇದಿಕೆಗಳಲ್ಲಿ ಕೇಳಿ ಬಂದ ವಾದಗಳೇ). ಇನ್ನುಳಿದ ಭಾಗದಲ್ಲಿ ಸ್ವಾಮೀಜಿಯನ್ನು ಆರೋಪ ಮುಕ್ತಗೊಳಿಸುವುದಕ್ಕೆ ನೀಡಿರುವ ಕಾರಣಗಳಲ್ಲಿ ವಿವರಿಸಲಾಗಿದೆ. ಅವು ಹೀಗಿವೆ-

ಅತ್ಯಾಚಾರ ಒಂದು ಬಾರಿ, ಎರಡು ಬಾರಿ, ಮೂರುಬಾರಿ ನಡೆದಿದೆ ಎನ್ನೋಣ. ಆದರೆ ನೂರಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆದಿದೆ, ನಾಲ್ಕು ವರ್ಷಗಳ ಅವಧಿಯುದ್ದಕ್ಕೂ ತನ್ನನ್ನು ಹೆದರಿಸಿ ದೇವರ ಹೆಸರಿನಲ್ಲಿ ಹೆದರಿಸಿ ಸುಮ್ಮನಿರಿಸಲಾಗಿದೆ ಎಂಬುದೆಲ್ಲಾ ಕಟ್ಟು ಕತೆ. ದೂರು ನೀಡುವ ಮುನ್ನ ತನ್ನ ಪತಿ ದಿವಾಕರ ಶಾಸ್ತ್ರಿ ಜೊತೆ ಪ್ರೇಮಲತಾ ಅವರು ಐಪಾಡ್, ಐಫೋನ್ ಹಾಗೂ ಕಂಪ್ಯೂಟರ್ ದಾಖಲೆಗಳಲ್ಲಿ ವಿನಿಮಯ ಮಾಡಿಕೊಂಡಿರುವ ಸಂದೇಶಗಳನ್ನು ಪರಿಶೀಲಿಸಿದಾಗ ಇವರು ದೂರನ್ನು ಕಾನೂನು ಪಂಡಿತರು, ಜ್ಯೋತಿಷಿಗಳನ್ನು ಸಂಪರ್ಕಿಸಿ ಸಿದ್ಧಪಡಿಸಿರುವುದು ಸ್ಪಷ್ಟವಾಗುತ್ತದೆ. ಆರೋಪಿ ನಿಜವಾಗಿಯೂ ಕರೆದು ಕರೆದು ಅತ್ಯಾಚಾರ ನಡೆಸುತ್ತಿದ್ದ ಎಂದು ಹೇಳುವುದಾದರೆ ಈಕೆ ಏಕೆ ತನ್ನ ವಾಟ್ಸ್ ಅಪ್ ಸಂದೇಶ ಮತ್ತು ಈಮೇಲ್‌ಗಳಲ್ಲಿ ತನ್ನ ಕೌಟುಂಬಿಕ ಸಂಕಟಗಳನ್ನು ಅವರ ಬಳಿ ಭಿನ್ನವಿಸಿಕೊಳ್ಳುತ್ತಿದ್ದಳು ಮತ್ತು ಶ್ರೀಗಳ ಆಶೀರ್ವಾದ ಬೇಕು ಎಂದು ಯಾಚಿಸುತ್ತಿದ್ದರು? ಇದನ್ನೆಲ್ಲ ನೋಡಿದರೆ ಸಂತ್ರಸ್ತೆ ಶ್ರೀಗಳಿಂದ ಯಾವುದೋ ವಿಧವಾದ ಫಲಾನುಭವಿ ಇರಬೇಕು ಎಂಬ ಸಂಶಯ ಮೂಡುತ್ತದೆ.

ಪ್ರಾಸಿಕ್ಯೂಶನ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯವನ್ನು ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪ್ರಾಸಿಕ್ಯೂಶನ್ ಮಾಡಿದ ತನಿಖೆ ಸರಿಯಾಗಿಲ್ಲ. ಅಲ್ಲದೆ ಪ್ರಾಸಿಕ್ಯೂಶನ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದವರು ಸದರಿ ಅಪರಾಧದಲ್ಲಿ ಸ್ವಾಮೀಜಿಯನ್ನು ಸಿಕ್ಕಿಸಿ ಹಾಕಲು ಕೈಜೋಡಿಸಿದ್ದಾರೆ. ವಿಧಿವಿಜ್ಞಾನದ ವರದಿಯಲ್ಲಿ ಕೃತಕ ಸುಧಾರಣೆಗಳನ್ನು ಮಾಡದಿದ್ದರೆ ಕೇಸು ಬಿದ್ದು ಹೋಗುತ್ತದೆ ಎಂದು ಪ್ರಾಸಿಕ್ಯೂಶನ್ ಭಯಪಟ್ಟು ಈ ಅನೈತಿಕ ಕೆಲಸ ಮಾಡಿರಬೇಕು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಹೆಣ್ಣು ಮತ್ತು ಗಂಡಿನ ಜೈವಿಕ ಕೋಶಗಳು ಸಂತ್ರಸ್ತೆಯ ಬಟ್ಟೆಯಲ್ಲಿ ಪತ್ತೆಯಾಗಿಲ್ಲ. ಬರೇ ವೀರ್ಯ ದೊರೆತರೆ ಸಾಲದು. ಹಾಗಾಗಿ ಇದು ದೂರುದಾರಳೊಂದಿಗೆ ಆರೋಪಿಯು ಲೈಂಗಿಕ ಕ್ರಿಯೆ ನಡೆಸಿಲ್ಲ ಎನ್ನುವುದಕ್ಕೆ ಸಮರ್ಥನೆಯಾಗುತ್ತದೆ ಎಂದಿದೆ (ಪ್ಯಾರಾ 66).

 ದೂರುದಾರಳು 51 ವರ್ಷ ಹರೆಯದವಳು. ಟಿವಿ ಸೀರಿಯಲ್‌ಗಳಲ್ಲಿ ಮತ್ತು ವೇದಿಕೆಗಳಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಾ ದೇಶವಿದೇಶಗಳಲ್ಲಿ ಓಡಾಡುತ್ತಾ, ಜೀನ್ಸ್ ಪ್ಯಾಂಟ್ ಮತ್ತು ಶರಟು ತೊಟ್ಟ ಹೈಟೆಕ್ ಮಹಿಳೆ. ಮದುವೆ ವಯಸ್ಸಿಗೆ ಬಂದ ಇಬ್ಬರು ಮಗಳಂದಿರು ಇರುವವರು. ಆಕೆಯ ಪತಿ ಒಬ್ಬ ಉದ್ಯಮಿ. ಅದೇ ಹೊತ್ತಿನಲ್ಲಿ ಆರೋಪಿಯು ಸಂಸ್ಕೃತ ಪರಿಣತ, ಹಿಂದೂ ಧರ್ಮದ ಪರಂಪರೆಗಳನ್ನು ಆಚಾರ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದಾತ. ಆದಿಶಂಕರಾಚಾರ್ಯರು ಸ್ಥಾಪಿಸಿದ ಗೋಕರ್ಣ ಸಹಿತ ಕರ್ನಾಟಕದಾದ್ಯಂತದ ರಾಮಚಂದ್ರಾಪುರ ಮತ್ತದರ ಶಾಖೆಗಳ ಪ್ರತಿನಿಧಿ.

ಅಪರಾಧ ನಡೆದಿದೆ ಎನ್ನಲಾದ ದಿನಾಂಕದಂದು ಆರೋಪಿಗೆ 38 ವರ್ಷ ವಯಸ್ಸು. ಅವರಿಬ್ಬರ ನಡುವೆ 14 ವರ್ಷ ಅಂತರವಿದೆ. ದೂರುದಾರಳು 30 ಕ್ಕೂ ಹೆಚ್ಚು ವರ್ಷಗಳ ಸಮೃದ್ದ ಸಾಂಸಾರಿಕ ಬದುಕಿನ ಅನುಭವವಿದ್ದವಳು. ಆದರೆ ಆರೋಪಿಯು ಬ್ರಹ್ಮಚಾರಿ. ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರುದಾರರು ಹೇಳುತ್ತಾರೆ. ಆದರೆ ಆರೋಪಿಯು ಯಾವತ್ತೂ ಆಕೆಯನ್ನು ಆಹ್ವಾನಿಸಿಯೇ ಇರಲಿಲ್ಲ. ಆಕೆಯೇ ಅಲ್ಲಿಗೆ ಹೋದುದು. ಅಲ್ಲದೆ ದೂರುದಾರಳು ತಾನು ಪತಿನಿಷ್ಠೆಯುಳ್ಳವಳು, ದೇವರ ಬಗ್ಗೆ ಭಯವುಳ್ಳವಳು ಮತ್ತು ಚಾರಿತ್ರ್ಯವಂತ ಮಹಿಳೆ ಎಂದಿದ್ದಾರೆ. ಆಕೆ ಹೆಡ್ಡಿಯಲ್ಲ, ಬಾಹ್ಯ ಜಗತ್ತಿನ ಜ್ಞಾನ ಇಲ್ಲದವಳಲ್ಲ. ಆಕೆಯನ್ನು ಮಠಾಧಿಪತಿ ಸೇರಿದಂತೆ ಯಾರಿಂದಲೂ ಸುಲಭದಲ್ಲಿ ಮೋಸಗೊಳಿಸುವುದು ಸಾಧ್ಯವಿಲ್ಲ (ಪ್ಯಾರಾ 71).

ನಾಲ್ಕು ವರ್ಷಗಳ ಅವಧಿಯಲ್ಲಿ ರಾಮಕಥಾ ತಾಲೀಮಿನ ಸಂದರ್ಭ 169 ಬಾರಿ ಲೈಂಗಿಕ ಕ್ರಿಯೆ ನಡೆದಿದೆ ಎಂದು ದೂರಲಾಗಿದೆ. ಕಾನೂನಿನ ಕಣ್ಣಿನಲ್ಲಿ ಇಲ್ಲಿ ಅಪರಾಧವಾದರೂ ಏನು? ಎಂದು ತೀರ್ಪು ಪ್ರಶ್ನಿಸಿದೆ. ಇಂಡಿಯನ್ ಪೀನಲ್ ಕೋಡ್ ನ ಸೆಕ್ಷನ್ 375ರ ಅಡಿಯ ಅತ್ಯಾಚಾರ ವ್ಯಾಖ್ಯೆಯನ್ನು ನೋಡುವಾಗ, ದೂರುದಾರಳೇ ಆರೋಪಿಯ ಬಳಿಗೆ ಹೋಗಿದ್ದಳು ಮತ್ತು ಲೈಂಗಿಕ ಕ್ರಿಯೆ ನಡೆಯುವಾಗ ಆಕೆ ಪ್ರತಿರೋಧ ಒಡ್ಡಲೇ ಇಲ್ಲ. ಆಕೆಯನ್ನು ಅಕ್ರಮ ಬಂಧನದಲ್ಲಿರಿಸಿ ಆಕೆಯ ಮೇಲೆ ಆತ ಲೈಂಗಿಕ ಕ್ರಿಯೆ ನಡೆಸಲಿಲ್ಲ. ಆರೋಪಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಯಾವ ದೂರೂ ಮಾಡದೆ ಆಕೆ ಮನೆಗೆ ಮರಳಿ ತನ್ನ ಕುಟುಂಬ ಸದಸ್ಯರೊಂದಿಗೆ ಲೌಕಿಕ ಬದುಕನ್ನು ಸಾಗಿಸಿದಳು. ಆಕೆಯ ಮಾತನ್ನು ಒಪ್ಪಿಕೊಳ್ಳುವುದೇ ಆದರೆ, ದೇವರ ಶಾಪದ ಭಯ ತೋರಿಸಿದ್ದು ಬಿಟ್ಟರೆ, ಮಠಾಧಿಪತಿಗಳ ಕಡೆಯಿಂದ ಬೆದರಿಕೆ ಇದೆ ಎಂದು ಆಕೆ ತಕ್ಷಣ ಏಕೆ ದೂರು ಸಲ್ಲಿಸಲಿಲ್ಲ?

 ದೇವರ ಶಾಪದ ಸೋಗಿನಲ್ಲಿ ಒಂದು ಭಾರಿ, ಎರಡು ಭಾರಿ ಮೂರು ಭಾರಿ ಮೋಸ ಮಾಡಬಹುದು. ಆದರೆ ಪತಿನಿಷ್ಠ ಮತ್ತು ದೇವರ ಭಯ ಇರುವ ಮಹಿಳೆ ಅಂತಹ ಗುಣನಡತೆಯುಳ್ಳವಳು ಮಠಾಧಿಪತಿ ಸಹಿತ ಯಾವ ಪುರುಷನಿಗೂ ಶರಣಾಗಲಾರಳು. ಪ್ರತಿರೋಧ ಒಡ್ಡಿಯೇ ಒಡ್ಡುತ್ತಾಳೆ. ಮಠಕ್ಕೆ ಭೇಟಿ ನೀಡುವುದನ್ನು ನಿಲ್ಲಿಸುತ್ತಾಳೆ. ಆಕೆಯ ಪ್ರಕಾರ ಆಕೆ ಈ ಲೈಂಗಿಕ ಕಿರುಕುಳವನ್ನು ನಿರಂತರ ನಾಲ್ಕು ವರ್ಷ ಸಹಿಸಿಕೊಂಡಳು. ಇದು ಆಕೆ ಕಾಮದಾಹಿ ಗುಣನಡತೆ ಹೊಂದಿದವಳಾಗಿರಬೇಕು ಅಥವಾ ಹಣಕ್ಕಾಗಿ ಮಾಡಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಹಣಕ್ಕಾಗಿ ಲೈಂಗಿಕತೆಯಲ್ಲಿ ತೊಡಗುವುದು ಅಕ್ರಮ ಸಂಬಂಧವೆನಿಸಿಕೊಳ್ಳುತ್ತದೆ. ದೂರುದಾರಳ ಈ ನಡತೆಯು ದೇವರ ಭಯವುಳ್ಳ ಶೀಲವತಿ ಮಹಿಳೆಯ ನಡತೆಗೆ ಅನುಗುಣವಾಗಿಲ್ಲ. ಯಾಕೆ ಆಕೆ ಆರೋಪಿಗೆ ಶರಣಾದಳು ಎನ್ನುವುದು ಅಕೆಗೆ ಚೆನ್ನಾಗಿ ಗೊತ್ತು; ಅಂದರೆ ಹಣಕ್ಕಾಗಿ. ಆದ್ದರಿಂದ ಇಲ್ಲಿ ಲೈಂಗಿಕತೆಯು ಅಕ್ರಮ ಸಂಬಂಧಕ್ಕೆ ಸಮ. ಈ ಹಿನ್ನೆಲೆಯಲ್ಲಿ, ದೂರುದಾರಳು ಸ್ವತಃ ಅರೋಪಿಯ ಬಳಿಗೆ ಹೋಗುವ ಮೂಲಕ ಆರೋಪಿ ಮಠಾಧಿಪತಿ ಮತ್ತು ದೂರುದಾರರ ನಡುವೆ ನಡೆದ ಲೈಂಗಿಕ ವ್ಯವಹಾರವು ಸೆಕ್ಷನ್ 375 ಕ್ಕೆ ಅಗತ್ಯವಾದ ಅಂಶಗಳನ್ನು ಒದಗಿಸಲು ವಿಫಲವಾಗುತ್ತವೆ. ಈ ಪ್ರಕರಣದಲ್ಲಿ ಅವರಿಬ್ಬರ ನಡುವಿನ ಲೈಂಗಿಕ ವ್ಯವಹಾರವು ಅಕ್ರಮಸಂಬಂಧದ ರೂಪ ಪಡೆದುಕೊಳ್ಳುತ್ತದೆ. (ಪ್ಯಾರಾ 73).

ಅಲ್ಲದೆ ಪ್ರಕರಣ ನಡೆದ ತಕ್ಷಣ ದೂರು ಏಕೆ ನೀಡಿಲ್ಲ ಎಂಬುದಕ್ಕೆ ಕೊಟ್ಟ ಕಾರಣ ಸಮರ್ಪಕವಾಗಿಲ್ಲ. ಇದು ದೂರುದಾರಳು ಮತ್ತು ಆಕೆಯ ಪತಿ ಮತ್ತು ಅಸಮಾಧಾನಗೊಂಡ ಐವರು ಸಂಬಂಧಿಗಳ ಷಡ್ಯಂತ್ರ ಎನ್ನುವುದು ಸಾಬೀತಾಗುತ್ತದೆ. (ಪ್ಯಾರಾ 74).

 ದೂರುದಾರಳು ವಿವಾಹಿತೆಯಾಗಿರುವುದರಿಂದ ಆಕೆಯನ್ನು ಮದುವೆಯಾಗುವೆನೆಂದಾಗಲಿ, ಮನೆ ಕಟ್ಟಿಕೊಡುವೆನೆಂದಾಗಲಿ ಆರೋಪಿ ವಚನ ನೀಡಿದ ಪ್ರಕರಣವೇನಲ್ಲ ಇದು. ಲೈಂಗಿಕ ಕಿರುಕುಳ ಸಹಿಸಿಕೊಳ್ಳುವಂತೆೆ ಮಾಡುವ ಯಾವುದೇ ವಿಶೇಷ ಸನ್ನಿವೇಶ ನಿರ್ಮಾಣವಾಗಿರಲಿಲ್ಲ. ಆಕೆ ಯಾವ ಕಾರಣಕ್ಕೆ ಆರೋಪಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಳು? ಹಣಕ್ಕೋ ಕಾಮತೃಷೆಗೋ ಎನ್ನುವುದು ನಮಗೆ ಗೊತ್ತಿಲ್ಲ (ಪ್ಯಾರಾ 75).

ವಿವಾಹಿತ ಮಹಿಳೆಯು ತನ್ನ ಗಂಡನನ್ನು ತೊರೆಯದೆ, ಅವಿವಾಹಿತ ಯಾ ವಿವಾಹಿತ ಪರಪುರುಷ ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ, ಹಣಕ್ಕಾಗಿ ಅಥವಾ ಕಾಮದಾಹ ತೀರಿಸಿಕೊಳ್ಳಲು, ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ, ಆಕೆಯ ಪತಿಗೆ ಗೊತ್ತಿಲ್ಲದಂತೆ, ಆತನ ಬಳಿಗೆ ಆಕೆ ಬಂದು, ಅಥವಾ ಆಕೆಯ ಬಳಿಗೆ ಆತ ಬಂದು ಲೈಂಗಿಕ ಸಂಬಂಧ ಇರಿಸಿಕೊಂಡರೆ ಅವರ ಸಂಬಂಧವನ್ನು ಸ್ವೀಕಾರಾರ್ಹವಾದ ಅಥವಾ ಸ್ವೀಕಾರಾರ್ಹವಲ್ಲದ ಶೀಲಗೆಟ್ಟ ಸಂಬಂಧಎಂದು ಕಾನೂನು ಪರಿಗಣಿಸುತ್ತದೆ.

 ಸದರಿ ಪ್ರಕರಣದಲ್ಲಿ ದೂರುದಾರಳು ನಾಲ್ಕು ವರ್ಷಗಳ ಕಾಲ ಆರೋಪಿಯ ಬಳಿಗೆ ಹೋಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆ ಮತ್ತು ಆಕೆ ಎಂದೂ ಈ ಬಗ್ಗೆ ದೂರು ಸಲ್ಲಿಸಿಲ್ಲ. ಲೈಂಗಿಕತೆಗೆ ಆರೋಪಿಯ ಕಡೆಯಿಂದ ಯಾವುದೇ ಅಹ್ವಾನವೂ ಬಂದಿಲ್ಲ. ಆಕೆಯ ಶಾಸನಬದ್ಧ ರಕ್ಷಕನಾದ ಆಕೆಯ ಪತಿಗೂ ಇದು ಗೊತ್ತಿಲ್ಲ. ಹಾಗಾಗಿ ಆಕೆ ಮಠಾಧಿಪತಿಯೊಂದಿಗೆ ಮಾಡಿದ ಲೈಂಗಿಕ ಕ್ರಿಯೆಯು ಅಸ್ವೀಕಾರಾರ್ಹವಾದ ಅಕ್ರಮ ಸಂಬಂಧಕ್ಕೆ ಸಮ. ಹಾಗಾಗಿ ಇದು ಅತ್ಯಾಚಾರ ಅಲ್ಲ, ಶೀಲಗೆಟ್ಟ ಸಂಬಂಧ.

ಅಲ್ಲದೆ ಅವರಿಬ್ಬರ ವಯಸ್ಸನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತಾ, ಆಕೆಯದ್ದು ಲೈಂಗಿಕ ಆಸಕ್ತಿ ಕಳಕೊಂಡ ವಯಸ್ಸು, ನಮ್ಮ ಪ್ರಕಾರ ಅವರಿಬ್ಬರದ್ದು ತಾಯಿ ಮಗನ ಸಂಬಂಧ. ಲೈಂಗಿಕತೆಯು ಒಂದು ಮನೋವೃತ್ತಿ ಅಥವಾ ನಮ್ಮ ಆಯ್ಕೆಯ ಮಹಿಳೆಯನ್ನು ಅಥವಾ ಹುಡುಗಿಯನ್ನು ನೋಡಿದಾಗ ಉಂಟಾಗುವ ಉದ್ರೇಕ. ಈ ತರ್ಕದ ಹಿನ್ನೆಲೆಯಲ್ಲಿ, ಇದು ಒಪ್ಪಿತ ಸಂಬಂಧ ಅಥವಾ ಮಠಾಧಿಪತಿಯನ್ನು ಬ್ಲಾಕ್‌ಮೇಲ್ ಮಾಡಲು ದುರುದ್ದೇಶದಿಂದ ಮಾಡಿದ ಸುಳ್ಳುಕತೆ. ಸ್ವಾಮೀಜಿಯು ಅತ್ಯಾಚಾರ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ. ಅದು ಒದಗಿಸಿರುವ ಸಾಕ್ಷ್ಯಾಧಾರಗಳು ವಿರೋಧಾಭಾಸದಿಂದ ಕೂಡಿದೆ. ಹಾಗಾಗಿ ಸ್ವಾಮೀಜಿಯನ್ನು ಸದರಿ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸಲಾಗಿದೆ ಎಂದು ಕೋರ್ಟು ಹೇಳಿದೆ.

ಇಲ್ಲಿ ಆರೋಪಿ ಮತ್ತು ದೂರುದಾರರ ನಡುವೆ ಇದ್ದಿರಬಹುದಾದ ಸಂಬಂಧವು ಹೆಚ್ಚೆಂದರೆ ಅಕ್ರಮ ಸಂಬಂಧವೆನಿಸಿಕೊಳ್ಳಬಹುದೇ ಹೊರತು ಅದು ಅತ್ಯಾಚಾರ ಎನಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಅಂಶವನ್ನು ಕೋರ್ಟು ಮತ್ತೆ ಮತ್ತೆ ಒತ್ತಿ ಹೇಳಿದೆ. ಇನ್ನುಳಿದಂತೆ ಅದು ಆರೋಪಿಯ ಪರ ನ್ಯಾಯವಾದಿಗಳ ವಾದವನ್ನು ಪದೇ ಪದೇ ಉಲ್ಲೇಖಿಸಿರುವುದನ್ನು ಮತ್ತು ಅವರ ವಾದವನ್ನು ಬಹುವಾಗಿ ಅವಲಂಬಿಸಿರುವುದನ್ನು ಮತ್ತು ಪುರಸ್ಕರಿಸಿರುವುದನ್ನು ಗಮನಿಸಬಹುದಾಗಿದೆ. ಆದರೆ ಹೊಸದಾಗಿ ಚಾಲ್ತಿಗೆ ಬಂದಿರುವ ಅತ್ಯಾಚಾರ ಸಂಬಂಧದ ಕಾನೂನು ದೂರುದಾರರ ಹೇಳಿಕೆಗೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಸದರಿ ತೀರ್ಪನ್ನು ಹೆಚ್ಚಿನ ವಿಮರ್ಶೆಗೆ ಒಳಪಡಿಸುವ ಅಗತ್ಯವಿದ್ದಂತೆ ಕಾಣುತ್ತಿದೆ.

  

Writer - ಶ್ರೀನಿವಾಸ ಕಾರ್ಕಳ

contributor

Editor - ಶ್ರೀನಿವಾಸ ಕಾರ್ಕಳ

contributor

Similar News