ತಂಬಾಕು ಕಾನೂನು ಇನ್ನಷ್ಟು ಹರಿತವಾಗಬೇಕಿದೆ!

Update: 2016-04-04 18:14 GMT

  ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳ ಪೊಟ್ಟಣಗಳಲ್ಲಿ ಶೇ.85ರಷ್ಟು ಸಚಿತ್ರ ಆರೋಗ್ಯ ಮುನ್ನೆಚ್ಚರಿಕೆ ಸಂದೇಶವನ್ನು ಮುದ್ರಿಸುವುದನ್ನು ಕೇಂದ್ರ ಸರಕಾರ ಶನಿವಾರದಿಂದ ಕಡ್ಡಾಯಗೊಳಿಸಿರುವುದನ್ನು ಆರೋಗ್ಯ ಕಾರ್ಯಕರ್ತರು ಶ್ಲಾಘಿಸಿದ್ದಾರೆ. ಆದರೆ ಇದರೊಂದಿಗೆ ತಂಬಾಕು ಪಿಡುಗಿನ ವಿರುದ್ಧದ ಸಮರ ಕೊನೆಗೊಂಡಿಲ್ಲ. ಇದು ಕೇವಲ ಆರಂಭವಷ್ಟೇ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಿಗರೇಟುಗಳು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ (ಸಿಓಟಿಪಿಎ) 2003 ಮೇಲೆ ಸಮರ್ಪಕವಾದ ರೀತಿಯಲ್ಲಿ ಕಣ್ಗಾವಲಿರಿಸಬೇಕೆಂದು ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರು ಕೇಂದ್ರ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿದ್ದಾರೆ. ಕಾಯ್ದೆಯ ಆದೇಶಗಳ ಪಾಲನೆ ಕುರಿತು ಸಮರ್ಪಕವಾದ ಕಣ್ಗಾವಲು ಹಾಗೂ ಕಾಯ್ದೆಯ ಉಲ್ಲಂಘನೆಗೆ ಶಿಕ್ಷೆಗಳು ಇಲ್ಲದೆ ಇದ್ದಲ್ಲಿ ಕಾನೂನು ಮತ್ತು ನಿಯಮಾವಳಿಗಳಿಂದ ಏನೂ ಪ್ರಯೋಜನವಾಗಲಾರದು ಎಂದು ಅವರು ವಾದಿಸುತ್ತಾರೆ.
      ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತ ವೈದ್ಯರ ವೇದಿಕೆಯ ಪರವಾಗಿ ತಾನು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಿದ ಪತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಿಒಟಿಪಿಎ ನಿಯಮಾವಳಿಗಳ ಜಾರಿಯನ್ನು ಅತ್ಯುನ್ನತ ಮಟ್ಟದಲ್ಲಿ ಪರಾಮರ್ಶಿಸಬೇಕೆಂದು ಒತ್ತಾಯಿಸಿರುವುದಾಗಿ ಶ್ವಾಸಕೋಶ ಪ್ರತಿಷ್ಠಾನದ ದಕ್ಷಿಣ ಏಶ್ಯ ಘಟಕದ ಅಧ್ಯಕ್ಷ ಡಾ.ಜಿ.ಆರ್.ಖತ್ರಿ, ದಿ ವೈರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.
   ಆದರೆ ಈ ನಿಯಮಾವಳಿಗಳು ಸಮರ್ಪಕವಾಗಿ ಜಾರಿಗೊಂಡಿಲ್ಲವೆಂದು ಸಾರ್ವಜನಿಕ ಆರೋಗ್ಯ ತಜ್ಞರಾದ ಖತ್ರಿ ಹೇಳುತ್ತಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ತ್ರಿಚಕ್ರ ವಾಹನಗಳು ಹಾಗೂ ಟ್ಯಾಕ್ಸಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರಿಗಾದರೂ ಶಿಕ್ಷೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ? ಎಂದವರು ಪ್ರಶ್ನಿಸುತ್ತಾರೆ. ಅದೇ ರೀತಿ, ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ನಿಷೇಧವನ್ನು ಕೂಡಾ ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೇ ವಿಷಯವಾಗಿ ಅವರು 2010ರಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದರು.
ಸದ್ಯಕ್ಕೆ ತಂಬಾಕು ಉತ್ಪನ್ನಗಳು ಅದರಲ್ಲೂ ವಿಶೇಷವಾಗಿ ಸಿಗರೇಟುಗಳ ಪ್ರಚಾರಕ್ಕೆ ಜಾಹೀರಾತುಗಳನ್ನು ಬಳಸಿಕೊಳ್ಳುವುದು ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆಯೆಂದು ಅವರು ಹೇಳುತ್ತಾರೆ. ‘‘ಬಹುತೇಕ ಎಲ್ಲಾ ಪಾನ್ ಹಾಗೂ ಬೀಡಿ ಅಂಗಡಿಗಳಲ್ಲಿ ನೀವು ಸಣ್ಣ ಗಾತ್ರದಲ್ಲಿ ಬರೆಯಲಾದ ಎಚ್ಚರಿಕೆಯ ಸಂದೇಶದೊಂದಿಗೆ ದೊಡ್ಡ ಗಾತ್ರದ ಸಿಂಹದ ಚಿತ್ರವೊಂದನ್ನು ಕಾಣುವಿರಿ. ಅದೊಂದು ಪ್ರಸಿದ್ಧ ಸಿಗರೇಟ್ ಒಂದರ ಬ್ರಾಂಡ್ ಆಗಿದೆ. ಅಂತಹ ಚಟುವಟಿಕೆಗಳನ್ನು ನಾವು ನಿಲ್ಲಿಸಬೇಕಾಗಿದೆ ಎಂದು ಖತ್ರಿ ಹೇಳುತ್ತಾರೆ.
       ಭಾರತದ ತಂಬಾಕು ವಿರೋಧಿ ಅಭಿಯಾನದ ‘ಪೋಸ್ಟರ್ ಹುಡುಗಿ’ ಎನಿಸಿಕೊಂಡಿರುವ ಸುನೀತಾ ತೋಮಾರ್ ಕಳೆದ ವರ್ಷ ಎಪ್ರಿಲ್ 1ರಂದು ಬಾಯಿ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ವಿಶ್ವ ಶ್ವಾಸಕೋಶ ಪ್ರತಿಷ್ಠಾನವು, ‘ವಾಯ್ಸಸ್ ಆಫ್ ಟೊಬ್ಯಾಕೊ ವಿಕ್ಟಿಮ್ಸ್’ ಸಂಘಟನೆಯ ಜೊತೆಗೂಡಿ ‘ಆನ್ಸರ್ ಸುನೀತಾ’ (ಸುನೀತಾ ಉತ್ತರಿಸು) ಎಂಬ ಅಭಿಯಾನವನ್ನು ಆರಂಭಿಸಿತ್ತು. ಭಾರತದಲ್ಲಿ ನಡೆದಿರುವ ಯಾವುದೇ ಸಂಶೋಧನೆಯು ತಂಬಾಕಿನ ಬಳಕೆಯು ಕ್ಯಾನ್ಸರ್‌ಗೆ ಕಾರಣವಾಗಬಹುದೆಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆಯೆಂದು ಬಿಜೆಪಿ ಸಂಸದ ದಿಲೀಪ್ ಗಾಂಧಿ ನೇತೃತ್ವದ ಸಂಸದೀಯ ಸಮಿತಿಯು ಘೋಷಿಸಿದ ಬಳಿಕ ನರೇಂದ್ರ ಮೋದಿ ಸರಕಾರವು, ತಂಬಾಕು ಉತ್ಪನ್ನಗಳಲ್ಲಿ ಸಚಿತ್ರ ಎಚ್ಚರಿಕೆಗಳ ಗಾತ್ರವನ್ನು ಹೆಚ್ಚಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
   ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ವಿನ್ಯಾಸಗಳಿಗೆ ಸಂಬಂಧಿಸಿ ನೂತನ ನಿಯಮಗಳನ್ನು ಜಾರಿಗೊಳಿಸುವುದಕ್ಕಾಗಿ ಪ್ರಧಾನಿಯ ಮೇಲೆ ಒತ್ತಡವನ್ನು ಹೆಚ್ಚಿಸುವುದೇ ಅನ್ಸರ್ ಸುನೀತಾ ಅಭಿಯಾನದ ಉದ್ದೇಶವಾಗಿದೆ. ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಟಂಬ್ಲರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ "Answer sunitha and put childrens health over tobacco industry profits. Pass 85% packwarnigns now.’’ ಎಂಬ ಸಂದೇಶವನ್ನು ಪ್ರಧಾನಿಗೆ ಕಳುಹಿಸುವಂತೆ ಅವರು ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಕೇಳಿಕೊಂಡಿದ್ದಾರೆ.

‘‘ತಂಬಾಕು ಹಾಗೂ ಕ್ಯಾನ್ಸರ್ ನಡುವೆ ನಂಟಿರುವುದನ್ನು ಬಹಳಷ್ಟು ಸಂಶೋಧನೆಗಳ ಮೂಲಕ ದೃಢಪಡಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನೀಡಲಾಗುತ್ತಿರುವ ಹೇಳಿಕೆಗಳು ಆಧಾರರಹಿತವಾಗಿವೆ ಹಾಗೂ ತಂಬಾಕು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೋವನ್ನುಂಟು ಮಾಡುತ್ತದೆ’’ ಎಂದು ಡಬ್ಲು ಎಲ್‌ಎಫ್‌ನ ರಾಷ್ಟ್ರೀಯ ನಿರ್ದೇಶಕಿ ನಂದಿತಾ ಮುರುಕುಟ್ಲಾ ತಿಳಿಸಿದ್ದಾರೆ. ತಂಬಾಕು ಪೊಟ್ಟಣಗಳಲ್ಲಿ ಗ್ರಾಫಿಕ್ ಎಚ್ಚರಿಕೆಗಳ ಗಾತ್ರವನ್ನು ಹೆಚ್ಚಿಸುವ ತನ್ನ ಬೇಡಿಕೆಯನ್ನು ಈಡೇರಿಸಲು ಸರಕಾರವು ಒಪ್ಪಿಕೊಳ್ಳುವವರೆಗೆ ಆನ್‌ಲೈನ್ ಅಭಿಯಾನ ಮುಂದುವರಿಯಲಿದೆಯೆಂದು ಅವರು ಹೇಳುತ್ತಾರೆ.
   ‘‘ತಂಬಾಕು ಉತ್ಪನ್ನಗಳ ಪೊಟ್ಟಣಗಳಲ್ಲಿ ಸಚಿತ್ರ ಎಚ್ಚರಿಕೆಗಳನ್ನು ದೊಡ್ಡ ಗಾತ್ರದಲ್ಲಿ ಮುದ್ರಿಸುವ ಕುರಿತ ಅಧಿಸೂಚನೆಯನ್ನು ತಡೆಹಿಡಿಯಬೇಕೆಂದು ಸಂಸದೀಯ ಸಮಿತಿಯ ಅಧ್ಯಕ್ಷರಾದ ದಿಲೀಪ್ ಗಾಂಧಿ ಇತ್ತೀಚೆಗೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಇಂತಹ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳು ಇಷ್ಟೊಂದು ಬೇಜವಾಬ್ದಾರರಾಗಿರುವುದನ್ನು ಕಂಡು ನನಗೆ ಆಘಾತವಾಯಿತು. ದೊಡ್ಡ ಗಾತ್ರದ ಸಚಿತ್ರ ಎಚ್ಚರಿಕೆ ಸಂದೇಶಗಳು ನನ್ನಂತಹ ಹಲವು ಅಮಾಯಕರ ಪ್ರಾಣಗಳನ್ನು ಉಳಿಸಬಲ್ಲದು. ನೀವು ಇತ್ತೀಚೆಗೆ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಮಾದಕದ್ರವ್ಯದ ವ್ಯಸನದ ಮುಕ್ತಗೊಳ್ಳುವ ಬಗ್ಗೆ ಮಾತನಾಡಿದ್ದೀರಿ. ಇದೀಗ ನೀವು ತಂಬಾಕಿನ ವಿಷಯವನ್ನೂ ಕೈಗೆತ್ತಿಕೊಳ್ಳುವಿರಾಗಿ ನಾನು ಆಶಿಸುತ್ತೇನೆ.
  ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಸ್ಥೆಯು ಕೂಡಾ ದೊಡ್ಡ ಗಾತ್ರದ ಸಚಿತ್ರ ಎಚ್ಚರಿಕೆಗಳನ್ನು ಜಾರಿಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಆಗ್ರಹಿಸಿತ್ತು. ಭಾರತವು ಜಗತ್ತಿನಲ್ಲೇ ಎರಡನೆ ಅತ್ಯಧಿಕ ತಂಬಾಕು ಗ್ರಾಹಕ ದೇಶವಾಗಿದ್ದು, 27.50 ಕೋಟಿ ಬಳಕೆದಾರರಿದ್ದಾರೆಂದು ಅದು ತಿಳಿಸಿತ್ತು. ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯನಾಳ ಹಾಗೂ ಶ್ವಾಸಕೋಶದ ಸಮಸ್ಯೆಗಳು ಹಾಗೂ ಪಾರ್ಶ್ವವಾಯು ಮತ್ತಿತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುವುದೆಂದು ಅದು ಎಚ್ಚರಿಕೆ ನೀಡಿದೆ.
 ಸಚಿತ್ರ ಎಚ್ಚರಿಕೆ ಸಂದೇಶಗಳು ತಂಬಾಕು ಬಳಕೆಯ ದುಷ್ಪರಿಣಾಮಗಳನ್ನು ಜನತೆಗೆ ಅದರಲ್ಲೂ ವಿಶೇಷವಾಗಿ ಕಡಿಮೆ ಸಾಕ್ಷರತೆಯುಳ್ಳವರು ಹಾಗೂ ಶಿಕ್ಷಣರಹಿತರಿಗೆ ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆಯೆಂದು 2.60 ಲಕ್ಷಕ್ಕೂ ಅಧಿಕ ವೈದ್ಯರನ್ನು ಪ್ರತಿನಿಧಿಸುತ್ತಿರುವ ಐಎಂಎ ತಿಳಿಸಿದೆ.

Writer - ಗೌರವ್ ವಿವೇಕ್ ಭಟ್ನಾಗರ್

contributor

Editor - ಗೌರವ್ ವಿವೇಕ್ ಭಟ್ನಾಗರ್

contributor

Similar News