ಅಶಕ್ತತೆ ವಿರುದ್ಧದ ಹೋರಾಟಕ್ಕೆ ತುಂಬಬೇಕಿದೆ ಮತ್ತಷ್ಟು ಶಕ್ತಿ

Update: 2016-04-04 18:20 GMT

 ಕಳೆದ ಕೆಲ ದಶಕಗಳಿಂದ ಶಿಶು ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಸರಕಾರಗಳು ಹಮ್ಮಿಕೊಳ್ಳುತ್ತಾ ಬಂದಿದ್ದರೂ, ದೇಶದಲ್ಲಿ ಮೂರನೆ ಒಂದರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ; ದೇಶದಲ್ಲಿ ಪ್ರಾಥಮಿಕ ಆರೋಗ್ಯ ಕ್ಷೇತ್ರ ಕಳವಳಕಾರಿಯಾಗಿಯೇ ಉಳಿದಿದೆ.
ಸೆಂಟರ್ ಫಾರ್ ಬಜೆಟ್ ಆ್ಯಂಡ್ ಗವರ್ನೆನ್ಸ್ ಅಕೌಂಟೆಬಿಲಿಟಿ (ಸಿಬಿಜಿಎ) ಪ್ರಕಟಿಸಿದ ಅಪೌಷ್ಟಿಕತೆ ವರದಿಯಲ್ಲ್ಲಿ ಶೇ.29ರಷ್ಟು ಭಾರತೀಯ ಮಕ್ಕಳ ಬೆಳವಣಿಗೆ ಕುಂಠಿತವಾಗಿರುವ ಅಂಶ ಬಹಿರಂಗವಾಗಿದೆ. ಈ ವರದಿ ಕೆಲ ಪ್ರಮುಖ ಅಂಶಗಳನ್ನು ಕೂಡಾ ಗುರುತಿಸಿದೆ.
ಒಕ್ಕೂಟ ಹಣಕಾಸು ಸಂರಚನೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲ ಬದಲಾವಣೆಗಳಾಗಿದ್ದು, ಕಳೆದ ವರ್ಷ ಆಗಿರುವ ನೀತಿ ಬದಲಾವಣೆಗಳು ಪೌಷ್ಟಿಕತೆಗೆ ಒದಗಿಸುವ ಹಣಕಾಸು ಸೌಲಭ್ಯದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರಲಿದೆ. ಈ ನೀತಿಯ ಪ್ರಕಾರ, ಅಪೌಷ್ಟಿಕತೆಯನ್ನು ತಡೆಯಲು ಬಹು ವಲಯ ದೃಷ್ಟಿಕೋನ ಅಗತ್ಯವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಪೌಷ್ಟಿಕತೆಗಾಗಿ ದೊಡ್ಡ ಪ್ರಮಾಣದ ಸಾರ್ವಜನಿಕ ಹೂಡಿಕೆಯ ಅಗತ್ಯತೆ ಇದೆ. ಆಗ ಮಾತ್ರ ಈ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಲು ಸಾಧ್ಯ. ಆದರೆ ಪೌಷ್ಟಿಕತೆ ಬಗೆಗಿನ ಭಾಷಣಗಳು ಹಾಗೂ ದೇಶದ ಬಜೆಟ್‌ಗೆ ಎಲ್ಲೋ ಸಂಪರ್ಕ ತಪ್ಪಿಹೋದಂತೆ ಕಾಣುತ್ತಿದೆ ಎಂದು ವರದಿ ಪರೋಕ್ಷವಾಗಿ ಸರಕಾರವನ್ನು ಚುಚ್ಚಿದೆ.
ವರದಿಯಲ್ಲೇನಿದೆ?
ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ.39ರಷ್ಟು ಮಕ್ಕಳ ಬೆಳವಣಿಗೆ ಸರಾಸರಿಗಿಂತ ಕಡಿಮೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕುರಿತ 2013-14ನೆ ಸಾಲಿನ ಸಮೀಕ್ಷಾ ವರದಿ ಹೇಳಿದೆ. ಇದು ಹಿಂದೆ ನಡೆದ 2005-06ನೆ ಸಾಲಿನ ಸಮೀಕ್ಷೆಗಿಂತ ಶೇ.19.4ರಷ್ಟು ಕಡಿಮೆ. ಅದಾಗ್ಯೂ ಇಳಿಕೆಯ ವಾರ್ಷಿಕ ದರ ಶೇ.2.4ರಷ್ಟು ಮಾತ್ರ ಇದ್ದು, ಇದು ಜಾಗತಿಕ ಗುರಿಯನ್ನು ಸಾಧಿಸುವಷ್ಟರ ಮಟ್ಟಿಗೆ ಕ್ಷಿಪ್ರವಾಗಿಲ್ಲ. 2015ರಲ್ಲಿ ದೇಶದಲ್ಲಿ ಸುಮಾರು 4.7 ಕೋಟಿ ಬೆಳವಣಿಗೆೆ ಕುಂಠಿತವಾದ ಮಕ್ಕಳಿದ್ದರು. ಮಕ್ಕಳ ಬೆಳವಣಿಗೆ ಕುಂಠಿತ ಜಾಗತಿಕ ಸಮಸ್ಯೆಯಾಗಿದ್ದು, ಭಾರತ ಈ ಸಮಸ್ಯೆಯ ಕೇಂದ್ರ ಬಿಂದುವಾಗಿದೆ.
ಜಾಗತಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಬೆಳವಣಿಗೆ ಕುಂಠಿತವಾದ ಮಕ್ಕಳ ಪ್ರಮಾಣ ಆಫ್ರಿಕಗಿಂತಲೂ ಅಧಿಕ. ಅಲ್ಲಿ ಶೇ.32ರಷ್ಟು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ದೇಶಗಳ ಮೂರು ಪಟ್ಟು. ಈ ದೇಶಗಳಲ್ಲಿ ಅಂದಾಜು ಶೇ.11.7 ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ.
  ಅಪೌಷ್ಟಿಕತೆ ವಿರುದ್ಧದ ಸಮರದಲ್ಲಿ ಭಾರತದಲ್ಲಿ ಏನಾಗಿದೆ? ಇನ್ನು ಯಾವ ಸಾಧನೆ ಆಗಬೇಕಿದೆ ಎಂದು ಆಳವಾಗಿ ಚಿಂತಿಸುವ ಅಗತ್ಯವಿದೆ. ಒಡಿಶಾ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಯಾಗಿರುವ ಆರತಿ ಅಹುಜಾ ಅವರ ಪ್ರಕಾರ, ಮಕ್ಕಳ ಅಪೌಷ್ಟಿಕತೆ ಸಮಸ್ಯೆಯನ್ನು ಇಳಿಸುವ ನಿಟ್ಟಿನಲ್ಲಿ ಭಾರತದ ಸಾಧನೆಯನ್ನು ಜಿಎನ್‌ಆರ್ ಸಮೀಕ್ಷಾ ವರದಿ ಎತ್ತಿ ಹಿಡಿದಿದೆ. ಕೈಯಲ್ಲಿ ಸುತ್ತಿಗೆ ಇರುವ ವ್ಯಕ್ತಿಗೆ ಎಲ್ಲವೂ ಮೊಳೆಯಂತೆ ಕಾಣುತ್ತದೆ. ಹಾಗೆ ಪೌಷ್ಟಿಕತೆ ಮಸೂರದಿಂದ ನಾವು ನೋಡಿದಾಗ ಚಾಂಪಿಯನ್ ಎಂದು ಹೇಳಿಕೊಳ್ಳಲು ಸಾಧ್ಯವಾಗದಿರಬಹುದು
ವಾಸ್ತವ ಎಂದರೆ ಪೌಷ್ಟಿಕತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅಪೌಷ್ಟಿಕತೆಯಲ್ಲಿ ಕಡಿಮೆ ಪೌಷ್ಟಿಕತೆ ಹಾಗೂ ಅಧಿಕ ಪೌಷ್ಟಿಕತೆ ಎರಡೂ ಸೇರುತ್ತದೆ. ಕುಡಿಯುವ ನೀರು, ಲಸಿಕೆ, ಆಹಾರ ವೈವಿಧ್ಯ, ಬಯಲು ಶೌಚ, ತಾಯಿಯ ವಯಸ್ಸು ಮತ್ತು ಶಿಕ್ಷಣ, ಆಹಾರ ಸೇವನೆ ಪ್ರಮಾಣದ ಹೊರತಾಗಿ ಆಹಾರಕ್ರಮದ ವೈವಿಧ್ಯತೆ ಮತ್ತಿತರ ಅಂಶಗಳು ಪೌಷ್ಟಿಕತೆಯ ಸ್ಥಿತಿ ಮೇಲೆ ಪರಿಣಾಮ ಬೀರುತ್ತವೆ ಎಂದು ಅಹುಜಾ ವಿವರಿಸುತ್ತಾರೆ.
ರಾಷ್ಟ್ರವ್ಯಾಪಿಯಾಗಿ ಹಿಂದೆ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ ಅಂಶಗಳ ಜತೆ ಇತ್ತೀಚೆಗೆ ಬಿಡುಗಡೆಯಾದ ಮಕ್ಕಳ ಕ್ಷಿಪ್ರ ಸಮೀಕ್ಷೆ (ಆರ್‌ಎಸ್‌ಸಿಒ) 2014ರ ಮಾಹಿತಿಯನ್ನು ಹೋಲಿಸಿದರೆ, ಬೆಳವಣಿಗೆ ಕುಂಠಿತವಾದ ಮಕ್ಕಳ ಸಂಖ್ಯೆ ಶೇಕಡ 48ರಿಂದ 39ಕ್ಕೆ ಇಳಿದಿದೆ. ಮಕ್ಕಳು ಕೃಶವಾಗುವ ಪ್ರಮಾಣ ಕಡಿಮೆಯಾಗಿದ್ದು, ಮೊಲೆಹಾಲು ಉಣಿಸುವ ದರ ಹೆಚ್ಚಳವಾಗಿದೆ.
ವಾಸ್ತವ ಪರಿಸ್ಥಿತಿ ಹಾಗಿದ್ದರೂ, ಎಲ್ಲ ಸಾಮಾಜಿಕ ಸೂಚಕ ಅಂಶಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿವೆ. ಇಳಿಕೆ ದರ ಹಲವು ರಾಜ್ಯಗಳಲ್ಲಿ ವಿಭಿನ್ನವಾಗಿದೆ. ಕೆಲವು ಕಡೆಗಳಲ್ಲಂತೂ ಕ್ಷೀಣವಾಗುತ್ತಿರುವ ಮಕ್ಕಳ ಸಂಖ್ಯೆ ಕಳವಳಕಾರಿಯಾಗಿದೆ.
ಭಾರತದಲ್ಲಿ ಇಂಥ ಚೇತೋಹಾರಿ ಚಿತ್ರಣ ಇದ್ದರೂ, ಜಾಗತಿಕ ಮಟ್ಟದಲ್ಲಿ ಹೋಲಿಸಿದಾಗ ನಮ್ಮ ಸಾಧನೆ ಹೇಳಿಕೊಳ್ಳುವಷ್ಟು ಉತ್ತಮವಾಗೇನೂ ಇಲ್ಲ. ತನ್ನ ನೆರೆಹೊರೆಯ ದೇಶಗಳಿಗೆ ಹೋಲಿಸಿದರೆ ಜಾಗತಿಕ ಪೌಷ್ಟಿಕ ವರದಿಯಲ್ಲಿ ಭಾರತದ ಸಾಧನೆ ಕಳಪೆ. ಗುಯಾನ, ಹೈಟಿ ಹಾಗೂ ಹೊಂಡರಾಸ್ ದೇಶಗಳು ಒಂದೆಡೆಯಾದರೆ, ಇಂಡೋನೇಷ್ಯಾ, ಇರಾನ್ ಹಾಗೂ ಇರಾಕ್ ಇನ್ನೊಂದೆಡೆ, ಹೀಗೆ ಮಧ್ಯದ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ 2011ರಲ್ಲಿ ಶೇ.48ರಷ್ಟಿದ್ದು, ಇದು ಈ ಎಲ್ಲ ದೇಶಗಳಿಗಿಂತಲೂ ಅಧಿಕ.
ಬೆಳವಣಿಗೆ ಕುಂಠಿತವಾಗುವ ಅಥವಾ ಕ್ಷೀಣತೆಯ ವಿಚಾರದಲ್ಲೂ, ತನ್ನ ನೆರೆಹೊರೆಯ ದೇಶಗಳಿಗಿಂತ ಕಳಪೆ ಸಾಧನೆ ಮಾಡಿದೆ. ಭೌಗೋಳಿಕ ನೆರೆಹೊರೆಯ ದೇಶಗಳ ಜತೆ ಹೋಲಿಸಿದರೆ, ಅಲ್ಲಿನ ಸ್ಥಿತಿಯೇ ಭಾರತದಲ್ಲೂ ಇದೆ. ಹಾಗಾಗಿ ಈ ಅಪೌಷ್ಟಿಕತೆ ದರ ಕಡಿಮೆಯಾಗುತ್ತಿರುವುದು ಒಳ್ಳೆಯ ಸುದ್ದಿ. ಆದರೆ ಇದನ್ನು ಇನ್ನಷ್ಟು ವೇಗಗೊಳಿಸುವ ಅಗತ್ಯವಿದೆ. ವರದಿಯಲ್ಲಿ ಪ್ರತಿಪಾದಿಸಿದಂತೆ, ಅಪೌಷ್ಟಿಕತೆಯ ಪ್ರಮಾಣವನ್ನು ಕಡಿಮೆ ಮಾಡಲು ಸ್ಪಷ್ಟ ಮಾರ್ಗಗಳಿವೆ. ಇಚ್ಛಾಶಕ್ತಿಯಲ್ಲಿ ಬದಲಾವಣೆ ಅಗತ್ಯ.
ಆಹಾರದ ಹಕ್ಕು ಕುರಿತ ಸುಪ್ರೀಂಕೋರ್ಟ್ ಆಯೋಗದ ಆಯುಕ್ತ ಹಾಗೂ ಯೋಜನಾ ಆಯೋಗದ ಮಾಜಿ ಕಾರ್ಯದರ್ಶಿ ಡಾ.ಎನ್.ಸಿ.ಸಕ್ಸೇನಾ, ಅಪೌಷ್ಟಿಕತೆ ಬಗ್ಗೆ ಚರ್ಚಿಸುವ ವೇಳೆ, ಬುಡಕಟ್ಟು ಜನಾಂಗದ ಮಕ್ಕಳ ಬೆಳವಣಿಗೆ ಕುಂಠಿತವಾಗಿರುವ ಬಗ್ಗೆ ವಿವರ ನೀಡಿದ್ದಾರೆ.
ಆಹಾರದ ಹಕ್ಕು ಕುರಿತ ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುವಂತೆ, ಅಂಗನವಾಡಿಗಳಲ್ಲಿ ಮತ್ತು ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿ ಯೋಜನೆಯಡಿ ನೀಡುವ ಹಲವು ಸೌಲಭ್ಯಗಳು ಇಂತ ಬುಡಕಟ್ಟು ಜನಾಂಗದ ಮಕ್ಕಳಿಗೆ ಸಿಗುತ್ತಿಲ್ಲ. ಜತೆಗೆ ಬುಡಕಟ್ಟು ಮಕ್ಕಳ ಬದುಕಿ ಉಳಿಯುವ ಪ್ರಮಾಣ ಕೂಡಾ ಕಡಿಮೆ ಇದೆ. ಇದರ ಜತೆಗೆ ಬಹುತೇಕ ಬುಡಕಟ್ಟು ಜನಾಂಗದ ಮಕ್ಕಳು ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಆದಿವಾಸಿಗಳಲ್ಲಿ ಶೇ.70ಕ್ಕಿಂತಲೂ ಅಧಿಕ ಮಂದಿ ಕೇಂದ್ರ ಭಾರತದಲ್ಲಿ ವಾಸವಿದ್ದಾರೆ. ಇಲ್ಲಿ ಹೇರಳವಾಗಿ ಸಂಪನ್ಮೂಲ ಲಭ್ಯವಿದ್ದರೂ, ಜನ ಮಾತ್ರ ಕಡುಬಡವರು. ಇತರ ಪ್ರದೇಶಗಳ ಜನರಿಗೆ ಸಿಕ್ಕಿದಂತೆ ಇವರಿಗೆ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಲಭಿಸಿದಂತಿಲ್ಲ. ಕೆಲವೆಡೆಯಂತೂ ಬುಡಕಟ್ಟು ವಿರೋಧಿ, ಮಾರುಕಟ್ಟೆ ನಿರ್ದೇಶಿತ ಅರಣ್ಯ ನೀತಿಗಳ ಪರಿಣಾಮವಾಗಿ ಅಥವಾ ವಂಶಪಾರಂಪರ್ಯವಾಗಿ ಬೆಳೆದುಬಂದ ಭೂಮಿಯಿಂದ ಸ್ಥಳಾಂತರಗೊಂಡದ್ದು ಇದಕ್ಕೆ ಕಾರಣ ಎಂದು ಸಕ್ಸೇನಾ ವಿವರಿಸುತ್ತಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಸರಕಾರಿ ಅಧಿಕಾರಿಗಳ ಹೊಣೆಗಾರಿಕೆ ಕೊರತೆ ಹಾಗೂ ಕೆಲವೊಮ್ಮೆ ಸಂಪರ್ಕಕ್ಕೆ ಸಿಕ್ಕದ ಪ್ರದೇಶಗಳಿಗೆ ಕೂಡಾ ಸರಕಾರಿ ಯೋಜನೆಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ಇವೆಲ್ಲವೂ ಆದಿವಾಸಿಗಳ ಸಂಪೂರ್ಣ ನಿರ್ಲಕ್ಷಕ್ಕೆ ಕಾರಣವಾಗುತ್ತದೆ ಎನ್ನುವುದು ಅವರ ಅಭಿಮತ.
 ಆದರೆ ಸರಕಾರಿ ದಾಖಲೆಗಳಲ್ಲಿ ಕೇವಲ 10ರಷ್ಟು ಮಕ್ಕಳು ಮಾತ್ರ ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಉಲ್ಲೇಖವಿದೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಸಮರ್ಪಕವಾಗಿ ಅಪೌಷ್ಟಿಕತೆ ಪ್ರಕರಣಗಳನ್ನು ವರದಿ ಮಾಡದಿರುವುದು ಹಾಗೂ ಕ್ಷೇತ್ರ ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿಯಿಂದಾಗಿ, ಇವರು ಪೌಷ್ಟಿಕತೆಯ ಫಲಿತಾಂಶ ಸುಧಾರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಈ ಪರಿಸ್ಥಿತಿಯ ಬಗ್ಗೆ ವಿವರಿಸುವ ಸಕ್ಸೇನಾ, ಬುಡಕಟ್ಟು ಜನಾಂಗದವರ ಆಹಾರದ ಹಕ್ಕನ್ನು ನಿರಾಕರಿಸಿರುವ ನಿದರ್ಶನಗಳು ಇವೆ. ಮಧ್ಯಪ್ರದೇಶದ ಬಿಹ್ರೋರ್ ಸಮುದಾಯದ ಮಕ್ಕಳು ಶಿಕ್ಷಣದ ಹಕ್ಕು, ಮಧ್ಯಾಹ್ನದ ಬಿಸಿಯೂಟದ ಹಕ್ಕಿನಿಂದ ವಂಚಿತರಾಗಿದ್ದಾರೆ. ಬಿಹ್ರೋರ್ ಸಮುದಾಯದ ಮಕ್ಕಳು ಪಾತ್ರೆ ಪಗಡೆಗಳನ್ನು ಅಪವಿತ್ರಗೊಳಿಸುತ್ತಾರೆ ಎಂಬ ಭೀತಿ ಶಿಕ್ಷಕರಲ್ಲಿರುವುದು ಇದಕ್ಕೆ ಕಾರಣ. ಬುಡಕಟ್ಟು ಜನಾಂಗದ ಮಕ್ಕಳು ಬದುಕಿ ಉಳಿಯುವ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಬುಡಕಟ್ಟು ಜನಾಂಗದ ಮಕ್ಕಳಲ್ಲಿ ಶೇ.71.4ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಶೇ.82.5ರಷ್ಟು ಮಕ್ಕಳಿಗೆ ರಕ್ತಹೀನತೆ ಸಮಸ್ಯೆ ಇದೆ.
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ, ಇನ್ನೂ ಬಹಳಷ್ಟು ಸಾಧನೆ ಆಗಬೇಕಿದೆ ಎಂಬ ಅಂಶವನ್ನು ಸಂಸ್ಥೆ ಪ್ರತಿಪಾದಿಸಿವೆ. ಯೋಜನೆಗಳ ಜಾರಿಯ ಹೊಣೆ ಹೊಂದಿದ ನೀತಿ ನಿರೂಪಕರು ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗೆ ಸಮಗ್ರ ಪ್ರಯತ್ನ ನಡೆಸಬೇಕಿದೆ. ಆಗ ಮಾತ್ರ ಮಕ್ಕಳ ಅಪೌಷ್ಟಿಕತೆ ಸಮಸ್ಯೆ ಬಗೆಹರಿಸಲು ಸಾಧ್ಯ.

Writer - ಶಿಶಿರ್ ತ್ರಿಪಾಠಿ

contributor

Editor - ಶಿಶಿರ್ ತ್ರಿಪಾಠಿ

contributor

Similar News