ಉರ್ದು ಲೇಖಕರ ಕೈಕಟ್ಟಿದ ಕೇಂದ್ರ ಸರಕಾರ

Update: 2016-04-05 18:01 GMT

ಅಂದರೆ ಉರ್ದುವಿನಲ್ಲಿ ಬರೆಯುವವರು ದೇಶ ವಿರೋಧಿ ವಿಷಯಗಳನ್ನು ಬರೆಯುತ್ತಾರೆ ಎಂದು ಇದರ ಅರ್ಥವೇ? ಎಂದು ಕೋಲ್ಕತಾ ವಿಶ್ವವಿದ್ಯಾನಿಲಯದ ಉರ್ದು ವಿಭಾಗದ ಮುಖ್ಯಸ್ಥೆಯಾಗಿರುವ ಶಹನಾಝ್ ನಬಿ ಪ್ರಶ್ನಿಸುತ್ತಾರೆ. ಕಳೆದ ವಾರ ಆರಂಭದಲ್ಲಿ ಉರ್ದು ಭಾಷಾ ಪ್ರಚಾರ ರಾಷ್ಟ್ರೀಯ ಮಂಡಳಿ ನಬಿಯವರ ಸಾಹಿತ್ಯಕ ಟೀಕೆಗಳ ಪುಸ್ತಕಗಳನ್ನು ಒಟ್ಟಿಗೆ ಖರೀದಿಸುವ ವೇಳೆ ಅವರ ಕೈಗೆ ಅರ್ಜಿಯೊಂದನ್ನು ನೀಡಿತ್ತು. ಹಲವು ಲೇಖಕರಿಂದ ಟೀಕೆಗೊಳಗಾಗಿರುವ ಈ ವಿವಾದಾತ್ಮಕ ಅರ್ಜಿಯ ಪ್ರಕಾರ ಲೇಖಕರು ಸರಕಾರಿ ಯೋಜನೆಗಳ ಬಗ್ಗೆ ಯಾವುದೇ ಟೀಕಾತ್ಮಕ ಲೇಖನಗಳನ್ನು ಬರೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಉರ್ದುವಿನಲ್ಲಿರುವ ಈ ನಿಬಂಧನೆಯ ಭಾಷಾಂತರ ಹೀಗಿದೆ:
.........................ಯವರ ಮಗ/ಮಗಳಾದ ನಾನು, ಉರ್ದು ಭಾಷಾ ಪ್ರಚಾರ ರಾಷ್ಟ್ರೀಯ ಮಂಡಳಿಯು ಆರ್ಥಿಕ ನೆರವಿನ ದೃಷ್ಟಿಯಿಂದ ಒಟ್ಟಿಗೆ ಖರೀದಿಸಲು ಯೋಚಿಸಿರುವ ನನ್ನ ಪುಸ್ತಕ/ ಪತ್ರಿಕೆ/ಕಿರು ಹೊತ್ತಗೆ.............ಯಲ್ಲಿ ಭಾರತ ಸರಕಾರ ಯಾವುದೇ ಯೋಜನೆಗೆ ವಿರುದ್ಧವಾದ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಅಥವಾ ವಿವಿಧ ಸಮುದಾಯಗಳ ಮಧ್ಯೆ ಸೌಹಾರ್ದತೆಯನ್ನು ಕೆಡಿಸುವಂಥಹ ಅಂಶಗಳಿಲ್ಲ ಎಂದು ಈ ಮೂಲಕ ಘೋಷಿಸುತ್ತೇನೆ.

ಈ ಘೋಷಣೆಗೆ ವಿರುದ್ಧವಾಗಿ ನಡೆದುಕೊಂಡರೆ ಅಂಥಾ ಲೇಖಕರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವಂತಹ ಮತ್ತು ಅವರಿಗೆ ನೀಡಿರುವ ಆರ್ಥಿಕ ನೆರವನ್ನು ಮರುಪಡೆಯುವ ಹಕ್ಕು ಮಂಡಳಿಗಿದೆಯೆಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಅರ್ಜಿಗೆ ಲೇಖಕರು ಇತರ ಇಬ್ಬರು ಸಾಕ್ಷಿಗಳಿಂದ ಸಹಿ ಹಾಕಿಸುವ ಅಗತ್ಯವೂ ಇದೆ. ನಾನು ಈವರೆಗೆ ಇಂಥಾ ಯಾವುದೇ ಅರ್ಜಿಗೆ ಸಹಿ ಹಾಕಿಲ್ಲ ಮತ್ತು ಇತರ ಯಾವುದೇ ಲೇಖಕರು ಇಂಥದ್ದೊಂದು ಅರ್ಜಿಗೆ ಸಹಿ ಹಾಕಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದು ನಬಿ ಹೇಳುತ್ತಾರೆ. ಜಗತ್ತಿನಾದ್ಯಂತ ಇರುವ ಎಲ್ಲಾ ಭಾಷೆಗಳ ಲೇಖಕರಿಗೆ ತಮ್ಮ ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯವಿದೆ. ನಮ್ಮನ್ನು ಯಾಕೆ ಅಂಥಾ ಅರ್ಜಿಗೆ ಸಹಿ ಹಾಕುವಂತೆ ಮಾಡಬೇಕು? ಇನ್ನು ಇಬ್ಬರು ಸಾಕ್ಷಿಗಳು ಕೂಡಾ ಸಹಿ ಮಾಡಬೇಕಾದ ಅಗತ್ಯವಾದರೂ ಏನು? ಇದು ಲೇಖಕರಿಗೆ ಮಾಡಿದ ಅವಮಾನ ಮತ್ತು ಇಂಥಾ ಮೂಗುತೂರಿಸುವಿಕೆಯನ್ನು ಎಂದೂ ಸಹಿಸಲು ಸಾಧ್ಯವಿಲ್ಲ.

ಉರ್ದು ಭಾಷಾ ಪ್ರಚಾರ ರಾಷ್ಟ್ರೀಯ ಮಂಡಳಿಯು ಕೂಡಲೇ ಈ ಅರ್ಜಿಗಳನ್ನು ಹಿಂಪಡೆಯಬೇಕು ಮತ್ತು ಇಂಥಾ ಅರ್ಜಿಯನ್ನು ಹೊರಡಿಸಿದ್ದಾದರೂ ಯಾಕೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದಾಕೆ ಆಗ್ರಹಿಸುತ್ತಾರೆ. ಉರ್ದು ಭಾಷಾ ಪ್ರಚಾರ ರಾಷ್ಟ್ರೀಯ ಮಂಡಳಿಯು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಅದರ ಮುಖ್ಯ ಕಾರ್ಯವೆಂದರೆ ಸಾಹಿತ್ಯಿಕ ಬರಹಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವುದು. ಇದರಿಂದ ತಮ್ಮ ಬರಹವನ್ನು ಮುದ್ರಿಸಲು ಮುದ್ರಣಕಾರರು ಸಿಗದೆ ಕಷ್ಟಪಡುವ ಲೇಖಕರಿಗೆ ಇದರಿಂದ ಆರ್ಥಿಕ ನೆರವು ದೊರಕುತ್ತದೆ. ಈ ಅರ್ಜಿಯ ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಪ್ರಮುಖ ಸಾಹಿತಿಗಳು ಈ ಅರ್ಜಿಯ ಪ್ರಸರಣವನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಅವರು ಇಡೀ ಉತ್ತರ ಭಾರತಕ್ಕೆ ಸೇರಿರುವ ಉರ್ದು ಭಾಷೆಯ ಮೇಲೆ ನಿರ್ಬಂಧ ಹೇರುತ್ತಿದ್ದಾರೆ. ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉರ್ದು ಭಾಷೆಯ ಕೊಡುಗೆಯ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಹೇಳುತ್ತಾರೆ ಮೈ ಗಾಡ್ ಈಸ್ ಎ ವುಮನ್ ಪುಸ್ತಕದ ಲೇಖಕಿ ನೂರ್ ಝಹೀರ್. ಈ ಕ್ರಮವನ್ನು ಭಾರತೀಯ ಜನಸಂಖ್ಯೆಯ ಒಂದು ವಿಭಾಗವನ್ನು ಅವಮಾನಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ.

ಉರ್ದು ಭಾಷೆಯ ಲೇಖಕರು ಒಂದು ನಿಶ್ಚಿತ ಸಮುದಾಯಕ್ಕೆ ಸೇರಿದವರಾದ ಕಾರಣ ಅವರು ಸರಕಾರವನ್ನು ಟೀಕಿಸಬಹುದು ಎಂಬ ಪೂರ್ವಭಾವಿ ಕಲ್ಪನೆಯಿಂದಾಗಿ ಈ ರೀತಿ ಮಾಡಲಾಗಿದೆ. ಅವರನ್ನು ಪ್ರತೀ ಬಾರಿಯೂ ಸಂಶಯದ ದೃಷ್ಟಿಯಿಂದಲೇ ನೋಡಬೇಕಾಗಿದ್ದು, ಆಕೆ/ಆತ ತಾನು ನಿಷ್ಠಾವಂತ ಪ್ರಜೆಯೆಂಬುದನ್ನು ಸಾಬೀತುಪಡಿಸುತ್ತಲೇ ಇರಬೇಕಾಗುತ್ತದೆ. ಸರಕಾರವೇ ದೇಶವಲ್ಲ, ಟೀಕೆಯೆಂಬುದು ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಶ ಮತ್ತು ಈ ಹಕ್ಕನ್ನು ಮುಸ್ಲಿಮರಿಂದ ಯಾರೂ ಕಸಿಯಲು ಸಾಧ್ಯವಿಲ್ಲ ಎಂದಾಕೆ ಸೇರಿಸುತ್ತಾರೆ. ಪ್ರಸ್ತುತ ಸರಕಾರಕ್ಕೆ ಇತರ ಯಾವುದೇ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಸಿದ್ಧಾಂತಗಳು ಇಲ್ಲದಿರುವ ಕಾರಣ ಅದು ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದು ನಿಜವಾಗಿಯೂ ರೇಜಿಗೆ ಹುಟ್ಟಿಸುತ್ತದೆ ಎಂದಾಕೆ ಹೇಳುತ್ತಾರೆ. ಕೇವಲ ಝಹೀರ್ ಮಾತ್ರ ತಮ್ಮ ಭಾವನೆಯನ್ನು ಹೊರಹಾಕಿರುವುದಲ್ಲ.

ಇದು ಒಂದು ರೀತಿ ಸಾಹಿತ್ಯ ಮತ್ತು ಗೀತೆಯ ಮೇಲೆ ಅಘೋಷಿತ ಕತ್ತರಿ ಪ್ರಯೋಗ. ಸರಕಾರ ವಿರುದ್ಧವಾಗಿರುವುದು ಯಾವುದೂ ಸ್ವೀಕಾರಾರ್ಹವಲ್ಲ ಎಂದು ಅದು ಹೇಳುತ್ತದೆ. ಕೇವಲ ಉರ್ದು ಲೇಖಕರು ಮಾತ್ರ ಅಂಥಾ ಘೋಷಣೆಯನ್ನು ನೀಡುವಂತೆ ಸೂಚಿಸಲು ಕಾರಣವೇನು? ಇದರರ್ಥ ಸರಕಾರವು ಉರ್ದು ಮುದ್ರಣ ಸಂಸ್ಥೆಗಳು ಮತ್ತು ಲೇಖಕರನ್ನು ಸಂಶಯದ ದೃಷ್ಟಿಯಿಂದ ನೋಡುತ್ತದೆ. ಇದು ಸಮಾಜದಲ್ಲಿರುವ ಎಲ್ಲಾ ಕಲಾತ್ಮಕ ಕೆಲಸಗಳ ಮೇಲಿನ ದಾಳಿಯಾಗಿದೆ ಎಂದು ಶಹೀದಾ ಸಿದ್ದಿಕಿ ಹೇಳುತ್ತಾರೆ. ಸಿದ್ದಿಕಿಯವರು ಉರ್ದುವಿನ ಪ್ರಸಿದ್ಧ ವಾರಪತ್ರಿಕೆ ‘ನಯಿ ದುನಿಯಾ’ದ ಸಂಪಾದಕಿಯಾಗಿದ್ದಾರೆ. ಜಮ್ಶೇಡ್‌ಪುರದ ಪತ್ರಕರ್ತ, ರಾವಿ ಎಂಬ ಸಾಹಿತ್ಯಿಕ ಪಾಕ್ಷಿಕವನ್ನು ಪ್ರಕಟಿಸುವ ಅಬ್ರಾರ್ ಮುಜೀಬ್ ಕೂಡಾ ಇಂಥಾ ಅರ್ಜಿಯನ್ನು ಇತ್ತೀಚೆಗೆ ಪಡೆದಿದ್ದರು. ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿರುವ ವಿಷಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದು ನನ್ನ ಪ್ರಕಾರ ಸರಿ. ಆದರೆ ಸರಕಾರದ ವಿರುದ್ಧ ಟೀಕೆ ಮಾಡಬಾರದು ಎಂದು ಅವರು ಹೇಳಲು ಹೇಗೆ ಸಾಧ್ಯ?. ಇದು ನಮ್ಮ ಕ್ರಿಯಾಶೀಲ ಸ್ವಾತಂತ್ರ್ಯವನ್ನು ಕಿವುಚುವ ಪ್ರಯತ್ನವಾಗಿದೆ ಎಂದು ಮುಜೀಬ್ ತಿಳಿಸುತ್ತಾರೆ. ಮೋದಿ ಮತ್ತು ಅಮಿತ್ ಶಾ, ಸರಕಾರವನ್ನು ಟೀಕಿಸುವುದು ತಪ್ಪಲ್ಲ ಆದರೆ ದೇಶದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹೇಳುತ್ತಾರೆ ಮತ್ತು ನಾನವರ ಮಾತನ್ನು ಒಪ್ಪಿಕೊಳ್ಳುತ್ತೇನೆ ಎಂದವರು ಸೇರಿಸುತ್ತಾರೆ. ಜಗತ್ತಿನಾದ್ಯಂತ ಲೇಖಕರು ಈ ಅರ್ಜಿಯ ವಿರುದ್ಧ ಧ್ವನಿಯೆತ್ತಲು ಆರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿರುದ್ಧ ಅಭಿಯಾನವೊಂದು ರೂಪುಗೊಳ್ಳುತ್ತಿದೆ. ಈ ನಿರ್ಧಾರ, ಹಲವು ವರ್ಷಗಳವರೆಗೆ ಇದ್ದರೂ, ಇದೊಂದು ಪ್ರಜಾಪ್ರಭುತ್ವ ವಿರೋಧಿ ಮತ್ತು ಲೇಖಕರನ್ನು ಆಡಳಿತಪಕ್ಷದ ಕೈಗೊಂಬೆಗಳನ್ನಾಗಿ ಮಾಡುವ ಪ್ರಯತ್ನ.

ಸರಕಾರದ ನೀತಿಗಳನ್ನು ಟೀಕಿಸುವುದು ಮತ್ತು ರಾಜಕೀಯ ಮತ್ತು ನೀತಿ ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ಲೇಖಕರ ಕರ್ತವ್ಯವಾಗಿದೆ. ನಾವು ಇದರ ವಿರುದ್ಧ ಪ್ರತಿಭಟನೆ ನಡೆಸಲು ಯೋಚಿಸುತ್ತಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮತಾಂಧತೆಯ ಪರಮಾವಧಿಯಾಗಿರುವ ಈ ಕಲಾವಿರೋಧಿ ಮತ್ತು ಸಾಹಿತ್ಯ ವಿರೋಧಿ ಘೋಷಣೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ರೆಹ್ಮಾನ್ ಅಬ್ಬಾಸ್ ಹೇಳುತ್ತಾರೆ. ಇವರು ಈ ವಿಷಯದ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸುವಂತೆ ತಮಿಳುನಾಡಿನ ಸಿಪಿಐ(ಎಂ)ನ ಸಂಸದ ಟಿ.ಕೆ ರಂಗರಾಜನ್ ಅವರಲ್ಲಿ ಕೇಳಿಕೊಂಡಿದ್ದಾರೆ. ಅಬ್ಬಾಸ್ ಕೂಡಾ ಅಗ್ರಮಾನ್ಯ ಲೇಖಕರಾಗಿದ್ದು, ಈ ಹಿಂದೆ ಇವರ ಲೇಖನಗಳನ್ನೂ ಎನ್ಸಿಪಿಯುಎಲ್ ಖರೀದಿಸಿತ್ತು. ಒಬ್ಬ ಲೇಖಕ ಸರಕಾರದಿಂದ ಆರ್ಥಿಕ ನೆರವನ್ನು ಬಯಸುತ್ತಾರೆ ಎಂದಾದರೆ ಖಂಡಿತವಾಗಿಯೂ ಅವರ ಲೇಖನಗಳು ಸರಕಾರದ ವಿರುದ್ಧವಿರಬಾರದು.

ಎನ್ಸಿಪಿಯುಎಲ್ ಒಂದು ಸರಕಾರಿ ಸಂಸ್ಥೆಯಾಗಿದ್ದು, ನಾವು ಸರಕಾರಿ ನೌಕರರಾಗಿದ್ದೇವೆ. ಸ್ವಾಭಾವಿಕವಾಗಿ ನಾವು ಸರಕಾರದ ಹಿತಾಸಕ್ತಿಯನ್ನು ರಕ್ಷಿಸುತ್ತೇವೆ ಎಂದು ಎನ್ಸಿಪಿಯುಎಲ್‌ನ ನಿರ್ದೇಶಕ ಇತೇಜಾ ಕರೀಂ ತಿಳಿಸುತ್ತಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿನ ವರದಿಯೊಂದು ತಿಳಿಸುತ್ತದೆ. ಕರೀಂ ಅವರ ಹೇಳಿಕೆಯು ಇಂಥಾ ಅರ್ಜಿಯನ್ನು ಪೂರೈಸುವ ನಿರ್ಧಾರವು ತೀರಾ ಇತ್ತೀಚೆಗಿನದ್ದು ಎಂಬುದನ್ನೂ ಸೂಚಿಸುತ್ತದೆ. ಈ ಘೋಷಣಾ ಅರ್ಜಿಯನ್ನು ಸೇರಿಸುವ ನಿರ್ಧಾರವನ್ನು ಒಂದು ವರ್ಷಗಳ ಹಿಂದೆ ಎಚ್.ಆರ್.ಡಿ ಸಚಿವಾಲಯದ ಸದಸ್ಯರು ಮತ್ತು ಮಂಡಳಿಯ ಸದಸ್ಯರು ಭಾಗಿಯಾಗಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಗೃಹ ಇಲಾಖೆಗೂ ಈ ಬಗ್ಗೆ ತಿಳಿದಿತ್ತು ಎಂದು ಹೇಳುತ್ತಾರೆ ಕರೀಂ. ಈ ಅರ್ಜಿಯ ಅಗತ್ಯವನ್ನು ಸಮರ್ಥಿಸುತ್ತಾ,ಮಂಡಳಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ: ಕೆಲವೊಮ್ಮೆ ಒಬ್ಬ ಲೇಖಕ ಬರೆದಿರುವ ಪುಸ್ತಕವು ಇನ್ನೊಬ್ಬ ಲೇಖಕನ ಹೆಸರಲ್ಲಿ ನೀಡಲಾಗಿರುತ್ತದೆ ಮತ್ತು ನಾವು ಕಾನೂನು ಸಮಸ್ಯೆಯಲ್ಲಿ ಸಿಲುಕಬೇಕಾಗುತ್ತದೆ. ನಮ್ಮಲ್ಲಿ ಪ್ರತಿ ಪುಸ್ತಕದ ಪ್ರತಿಯೊಂದು ಸಾಲನ್ನೂ ಓದುವಷ್ಟು ಉದ್ಯೋಗಿಗಳು ಇಲ್ಲದಿರುವ ಕಾರಣ ಈ ಅರ್ಜಿ ಲೇಖಕರ ಮೇಲೆ ಹೊಣೆಯನ್ನು ಹೊರಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಕರೀಂ. ಈ ರೀತಿಯ ಕ್ರಮ ಕೈಗೊಳ್ಳಲು ಕಳೆದ ವರ್ಷ ಅಬುಲ್ ಕಲಾಂ ಆಝಾದ್ ಅವರ ಬಗ್ಗೆ ಬರೆಯಲಾಗಿದ್ದ ಪುಸ್ತಕವೊಂದರಲ್ಲಿ ತಪ್ಪು ಮಾಹಿತಿಯನ್ನು ನೀಡಿರುವುದೇ ಕಾರಣ ಎಂದು ಕರೀಂ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News