ನಕಲಿ ಎನ್‌ಕೌಂಟರ್: ಅರಣ್ಯರೋದನವಾದ ಸಂತ್ರಸ್ತರ ಕುಟುಂಬದ ಮೊರೆ

Update: 2016-04-05 18:07 GMT

 ಇಬ್ಬರು ಪೊಲೀಸರ ಹತ್ಯೆ ಮಾಡಿದ ಆರೋಪದಲ್ಲಿ ಐದು ಮಂದಿಯನ್ನು ನಲ್ಗೊಂಡ ಜಿಲ್ಲೆಯ ಅಲೇರ್‌ನಲ್ಲಿ ಗುಂಡಿನ ಚಕಮಕಿಯಲ್ಲಿ ಕೊಂದು ಈ ತಿಂಗಳ 7ಕ್ಕೆ ಒಂದು ವರ್ಷ ತುಂಬುತ್ತದೆ. ಸ್ವಯಂರಕ್ಷಣೆ ನೆಪದಲ್ಲಿ ಪೊಲೀಸರು ಐದು ಮಂದಿಯನ್ನು ಗುಂಡಿಟ್ಟು ಕೊಂದರು. ಇತರ ಎಲ್ಲ ಬಹುತೇಕ ಎನ್‌ಕೌಂಟರ್‌ಗಳಂತೆ ಇದು ಕೂಡಾ ನಿಗೂಢವಾಗಿಯೇ ಉಳಿದಿದೆ. ಸಂತ್ರಸ್ತರ ಕುಟುಂಬದವರ ಪ್ರಶ್ನೆಗೆ ಒಂದು ವರ್ಷ ಕಳೆದರೂ ಉತ್ತರ ಸಿಕ್ಕಿಲ್ಲ. ಅವರ ಮನವಿಯನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಸರಣಿಯ ಮೊದಲ ಭಾಗದಲ್ಲಿ ರಕೀಬ್ ಹಮೀದ್ ನಾಯಕ್ ಅವರು ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಸೈಯದ್ ಅಜ್ಮಲ್ ಅಲಿ ಅವರ ಕುಟುಂಬದ ಜತೆ ಮಾತನಾಡಿದ್ದಾರೆ.

 ರೆಸತ್‌ನಗರ (ಹೈದರಾಬಾದ್): 2015ರ ಎಪ್ರಿಲ್ 7ರಂದು ಬೆಳ್ಳಂಬೆಳಗ್ಗೆ ಸೈಯದ್ ಇಮ್ತಿಯಾಝ್ ಅಲಿ ಅವರಿಗೆ ಅವರ ಸಂಬಂಧಿಕರಿಂದ ಭಾವಾವೇಶದ ದೂರವಾಣಿ ಕರೆ ಬಂತು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವರ ಸಹೋದರನ ಬಗ್ಗೆ ಸೃಷ್ಟಿಯಾಗುತ್ತಿರುವ ಟ್ರೆಂಡ್ ಬಗ್ಗೆ ಪರಿಶೀಲಿಸಲು ಆತಂಕದಿಂದ ಕೋರಿದರು. ತಕ್ಷಣ ಫೇಸ್‌ಬುಕ್ ಅಕೌಂಟ್ ಲಾಗ್ ಇನ್ ಮಾಡಿದಾಗ, ಅಲ್ಲಿನ ಸುದ್ದಿ ಅವರನ್ನು ಒಂದು ಕ್ಷಣ ದಂಗುಬಡಿಸಿತು.
ಆರಂಭಿಕ ಆಘಾತದಿಂದ ಚೇತರಿಸಿಕೊಂಡು, ಇಮ್ತಿಯಾಝ್ ಸುದ್ದಿವಾಹಿನಿಗಳನ್ನು ಜಾಲಾಡಿದರು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೊಲೀಸ್ ಎನ್‌ಕೌಂಟರ್‌ನ ಫ್ಲಾಶ್ ಸುದ್ದಿಗಳು ಬರುತ್ತಿದ್ದವು.
ಆ ಸುದ್ದಿ ಅವರ 27 ವರ್ಷದ ಸಹೋದರ ಸೈಯದ್ ಅಮ್ಜದ್ ಅಲಿಗೆ ಸಂಬಂಧಿಸಿದ್ದು. ಇತರ ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳ ಜತೆ ಆತನನ್ನೂ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. 17 ಮಂದಿ ಪೊಲೀಸರ ಕಾವಲಿನಲ್ಲಿ ವಾರಂಗಲ್ ಜೈಲಿನಿಂದ ಹೈದರಾಬಾದ್ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಅಮ್ಜದ್ ತಮ್ಮ ಸೋದರ ಸಂಬಂಧಿ ಮುಹಮ್ಮದ್ ವಿಕರುದ್ದೀನ್ (33) ಕೂಡಾ ಈ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇವರನ್ನು ಆಂಧ್ರಪ್ರದೇಶದ ಆಕ್ಟೋಪಸ್ (ಭಯೋತ್ಪಾದಕ ನಿಗ್ರಹ ಪಡೆ) ಪೊಲೀಸರು 2010ರಲ್ಲಿ ಹೈದರಾಬಾದ್‌ನ ಮುಷ್ರಿಯಾಬಾದ್ ಪ್ರದೇಶದಿಂದ ಬಂಧಿಸಿತ್ತು. ಇಬ್ಬರು ಪೊಲೀಸರನ್ನು ಕೊಂದ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು. ಹೈದರಾಬಾದ್‌ನಲ್ಲಿ 2007ರಲ್ಲಿ ಸಂಭವಿಸಿದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಬಳಿಕ, ಆಂಧ್ರಪ್ರದೇಶ ಪೊಲೀಸರು ಮುಸ್ಲಿಂ ಯುವಕರ ವಿರುದ್ಧ ಸಂಶಯಾಸ್ಪದ ಪಾತ್ರ ವಹಿಸಿದ್ದಕ್ಕೆ ಪ್ರತೀಕಾರವಾಗಿ ಪೊಲೀಸರನ್ನು ಕೊಂದು, ಗುಪ್ತಚರ ಏಜೆಂಟ್ ಒಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.
ಪೊಲೀಸರ ಪ್ರಕಾರ, ಮೂವರು ಪೊಲೀಸರ ಮೇಲಿನ ದಾಳಿಯ ಹೊಣೆ ಹೊತ್ತ ತೆಹ್ರೀಕ್ ಇ ಗಲ್ಬಾ ಇ ಇಸ್ಲಾಂ (ಟಿಜಿಐ) ಎಂಬ ಉಗ್ರಗಾಮಿ ಸಂಘಟನೆಯನ್ನು ಈ ಇಬ್ಬರು ಹುಟ್ಟುಹಾಕಿದ್ದರು. ಆ ಬಳಿಕ ಮುಹಮ್ಮದ್ ಝಾಕಿರ್, ಡಾ.ಮುಹಮ್ಮದ್ ಹನೀಫ್ ಹಾಗೂ ಇಜಾರ್ ಖಾನ್ ಅವರನ್ನು ಇವರಿಗೆ ಸಹಾಯ ನೀಡಿದ ಆರೋಪದಲ್ಲಿ ಬಂಧಿಸಲಾಯಿತು. ಇವರಿಗೆ ಸಂಚಾರ ವ್ಯವಸ್ಥೆ ಮಾಡಿಕೊಟ್ಟ ಆರೋಪವೂ ಅವರ ಮೇಲಿತ್ತು. 2010ರ ಅದೇ ತಿಂಗಳು ಆ ಮೂವರನ್ನೂ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು.
ಎನ್‌ಕೌಂಟರ್‌ನ ಆ ದಿನ..
ಎನ್‌ಕೌಂಟರ್ ನಡೆದ ಆ ದಿನ ಅಮ್ಜದ್ ಹಾಗೂ ಇತರ ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳನ್ನು ಹೈದರಾಬಾದ್ ಕೋರ್ಟಿಗೆ ವಿಚಾರಣೆಗಾಗಿ ವಾರಂಗಲ್‌ನಿಂದ ಕರೆದೊಯ್ಯಲಾಗುತ್ತಿತ್ತು. ಪೊಲೀಸ್ ಕಟ್ಟುಕಥೆಯ ಪ್ರಕಾರ, ಮಾರ್ಗಮಧ್ಯದಲ್ಲಿ, ಮುಹಮ್ಮದ್ ವಿಕರುದ್ದೀನ್, ಅಲೆರ್ ಬಳಿಯ ತಂಗಾತುರ್ ಗ್ರಾಮದಲ್ಲಿ ಮೂತ್ರ ಮಾಡುವ ಸಲುವಾಗಿ ವಾಹನವನ್ನು ನಿಲ್ಲಿಸುವಂತೆ ಕೋರಿದ. ಆತನನ್ನು ಬಸ್ಸಿಗೆ ಕರೆತಂದ ಬಳಿಕ, ಆತ ಪೊಲೀಸರಿಂದ ಶಸ್ತ್ರಾಸ್ತ್ರ ಕಿತ್ತುಕೊಳ್ಳಲು ಪ್ರಯತ್ನಿಸಿದ. ಇತರ ನಾಲ್ವರು ವಿಚಾರಣಾಧೀನ ಕೈದಿಗಳೂ ಆತನಿಗೆ ಸಹಕಾರ ನೀಡಿದ್ದರಿಂದ ಬೆಂಗಾವಲು ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ಆತ್ಮರಕ್ಷಣೆ ಸಲುವಾಗಿ ಆ ಎಲ್ಲ ಐದು ಮಂದಿಯನ್ನು ಗುಂಡಿಟ್ಟು ಕೊಲ್ಲಬೇಕಾಯಿತು.
ವಾಹನ ಪ್ರವೇಶಿಸಿದ ಬಳಿಕ, ಬೆಂಗಾವಲು ಪೊಲೀಸರ ಶಸ್ತ್ರಾಸ್ತ್ರಗಳನ್ನು ಆತ ಕಿತ್ತುಕೊಂಡು, ಗುಂಡು ಹಾರಿಸಿದ. ಉಳಿದ ನಾಲ್ಕು ಮಂದಿ ಕೂಡಾ ಶಸ್ತ್ರಗಳನ್ನು ಕಸಿದುಕೊಂಡು ಘೋಷಣೆ ಕೂಗಿದರು. ಬೆಂಗಾವಲು ಪೊಲೀಸರು ಸ್ವಯಂ ರಕ್ಷಣೆ ಸಲುವಾಗಿ ಗುಂಡು ಹಾರಿಸಿದರು ಎಂದು ನಂಬಲಾಗಿದೆ. ಇದರಲ್ಲಿ ವಿಕರ್ ಹಾಗೂ ಇತರ ನಾಲ್ವರು ಮೃತಪಟ್ಟರು ಎನ್ನುತ್ತದೆ ಪೊಲೀಸ್ ಹೇಳಿಕೆ.
ಅದೇ ದಿನ ಎಲ್ಲ ಐದು ಮಂದಿ ಯುವಕರು ಪೊಲೀಸ್ ವ್ಯಾನ್‌ನಲ್ಲಿ ಕೈಗೆ ಕೋಳ ಹಾಕಿ, ಸೀಟುಗಳಿಗೆ ಕಟ್ಟಿಹಾಕಿದ್ದ ಸ್ಥಿತಿಯಲ್ಲೇ ಹೆಣವಾಗಿ ಬಿದ್ದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದು ಸ್ವಯಂರಕ್ಷಣೆ ಹಾಗೂ ಪ್ರತೀಕಾರದ ಕ್ರಮವಾಗಿ ಗುಂಡು ಹಾರಿಸಿದ ಬಗೆಗಿನ ಪೊಲೀಸ್ ಹೇಳಿಕೆಯ ಬಗ್ಗೆ ಸಂಶಯ ಹುಟ್ಟಲು ಕಾರಣವಾಯಿತು.
 ನನ್ನ ಸಹೋದರನ ಸಾವಿನ ಮಾಹಿತಿಯನ್ನು ನಮಗೆ ಪೊಲೀಸರು ನೀಡಿಲ್ಲ. ಅದು ನನಗೆ ಗೊತ್ತಾದ್ದು ಸುದ್ದಿವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳಿಂದ. ಎಪ್ರಿಲ್ 8ರಂದು ನಾವು ಶವ ಸ್ವೀಕರಿಸಲು ವಾರಂಗಲ್‌ಗೆ ತೆರಳಿದೆವು. ದೇಹ ಗುಂಡುಗಳಿಂದ ಜರ್ಜರಿತವಾಗಿತ್ತು ಎಂದು ಸೈಯದ್ ಅಮ್ಜದ್ ಅಲಿಯವರ ಅಣ್ಣ ಸೈಯದ್ ಇಮ್ತಿಯಾಝ್ ಅಲಿ ವಿವರಿಸುತ್ತಾರೆ.
ಶವ ಸಂಸ್ಕಾರದ ಬಳಿಕ ಐದೂ ಮಂದಿ ಸಂತ್ರಸ್ತರ ಕುಟುಂಬಗಳು ನಲ್ಗೊಂಡ ಜಿಲ್ಲೆಯ ಪೊಲೀಸ್ ಠಾಣೆಗೆ ತೆರಳಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 302ರ ಅನ್ವಯ, ಐದು ಮಂದಿಯ ಹತ್ಯೆಗಾಗಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಮುಂದಾದವು. ಆದರೆ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸದೆ, ದಿನಚರಿ ಪುಸ್ತಕದಲ್ಲಿ ಒಂದು ದಾಖಲಾತಿ ಮಾಡಿಕೊಂಡರು.
ಈ ಕುಟುಂಬಗಳಿಗೆ ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಇವರು ಎಫ್‌ಐಆರ್ ದಾಖಲಿಸುವ ಪ್ರಯತ್ನ ಮಾಡುವ ಮುನ್ನವೇ ನಲ್ಗೊಂಡ ಎಸ್ಪಿ, ಮೃತಪಟ್ಟ ಐದು ಮಂದಿಯ ವಿರುದ್ಧ ಕೊಲೆ ಪ್ರಯತ್ನ ಹಾಗೂ ಗಲಭೆ ಸೃಷ್ಟಿಸಿದ ಕಾರಣಕ್ಕಾಗಿ ಅಲೇರ್ ಠಾಣೆಯಲ್ಲಿ ದೂರು (ನಲ್ಗೊಂಡ ಜಿಲ್ಲೆ 35/2015) ದಾಖಲಿಸಿದರು. ಸೆಕ್ಷನ್ 120 ಬಿ, 143, 1467, 397, 307, 224, 332 ಅನ್ವಯ ದೂರು ದಾಖಲಿಸಲಾಗಿತ್ತು.
ಚೆರ್ಲಪಲ್ಲಿಯಿಂದ ವಾರಂಗಲ್‌ಗೆ..
ಆರಂಭದಲ್ಲಿ ಅಮ್ಜದ್ ಅವರನ್ನು ಅಧಿಕ ಭದ್ರತೆಯ ಹೈದರಾಬಾದ್‌ನ ಚೆರ್ಲಪಲ್ಲಿ ಜೈಲಿನಲ್ಲಿ ಇಡಲಾಗಿತ್ತು. ಅವರ ವಿರುದ್ಧದ ವಿಚಾರಣೆ ಹೈದರಾಬಾದ್‌ನ ನಾಂಪಲ್ಲಿ ವಿಚಾರಣಾ ನ್ಯಾಯಾಲಯದಲ್ಲೇ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿ ಇಡಲಾಗಿತ್ತು. ಆದರೆ ಸೋದರ ಸಂಬಂಧಿ ವಿಕರ್ ಜತೆ 147 ಕಿಲೋಮೀಟರ್ ದೂರದ ವಾರಂಗಲ್ ಜೈಲಿಗೆ 2011ರಲ್ಲಿ ಸ್ಥಳಾಂತರಿಸಲಾಯಿತು. ಜೈಲು ಅಧಿಕಾರಿಯೊಬ್ಬರಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಸ್ಥಳಾಂತರಿಸಲಾಯಿತು.
ವಾರಂಗಲ್‌ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ಉದ್ದೇಶಪೂರ್ವಕವಾಗಿ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಏಕೆಂದರೆ ನನ್ನ ಸಹೋದರನ ಮೇಲೆ ಅವರ ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ ಆರೋಪವಿತ್ತು. ಇದಕ್ಕಾಗಿ ಚಿತ್ರಹಿಂಸೆ ನೀಡುವ ಸಲುವಾಗಿ ಅಲ್ಲಿಗೆ ಕರೆದೊಯ್ದರು ಎನ್ನುವುದು ಇಮ್ತಿಯಾಝ್ ಆರೋಪ.
2010ರಿಂದ 2015ರ ವರೆಗೆ ಜೈಲು ಹಾಗೂ ನ್ಯಾಯಾಲಯದಲ್ಲಿ ತಮ್ಮನನ್ನು ಭೇಟಿ ಮಾಡಿದ ಅನುಭವವನ್ನು ನೆನಪಿಸಿಕೊಂಡ ಇಮ್ತಿಯಾಝ್, ಆತನ ಬೆವರಿದ ಮುಖ, ಗದ್ಗದಿತ ಧ್ವನಿ ಆತನ ಸ್ಥಿತಿಯನ್ನು ಹೇಳುತ್ತಿತ್ತು. ನಾವು ಭೇಟಿಯಾದಾಗ, ಪ್ರತಿ ಬಾರಿ ಪೊಲೀಸರು ಹೈದರಾಬಾದ್‌ಗೆ ವಿಚಾರಣೆಗೆ ಕರೆತರುವಾಗಲೂ ಹೊಡೆಯುತ್ತಿದ್ದರು ಎಂದು ಹೇಳಿದ್ದ. ಅವರು ಹಿಂಸೆ ನೀಡಿದ್ದಾರೆ. ಚಿತ್ರಹಿಂಸೆ ನೀಡಿದ್ದಾರೆ

ಅವರ ವಿರುದ್ಧ ಅಹ್ಮದಾಬಾದ್‌ನಲ್ಲೂ ಒಂದು ಪ್ರಕರಣ ಇತ್ತು. ಪೊಲೀಸರು ಅಲ್ಲಿಗೂ ಕರೆದೊಯ್ಯುತ್ತಿದ್ದರು. ಆದರೆ ಅವರನ್ನು ವಾರಂಗಲ್‌ನಲ್ಲಿ ಇಟ್ಟದ್ದು ಏಕೆ ಎನ್ನುವುದು ನನಗೆ ಅರ್ಥವಾಗಿರಲಿಲ್ಲ. ಅವರ ವಿಚಾರಣೆ ನಡೆಯುತ್ತಿದ್ದುದು 147 ಕಿಲೋಮೀಟರ್ ದೂರದ ಹೈದರಾಬಾದ್‌ನಲ್ಲಿ ಎಂದು ಅವರು ಹೇಳುತ್ತಾರೆ.

ಪೊಲೀಸರು ಹೇಳುವಂತೆ, ಅಮ್ಜದ್ ಹಾಗೂ ವಿಕರುದ್ದೀನ್, 2007ರಲ್ಲಿ ಗುಜರಾತ್‌ನಲ್ಲಿ ಬ್ಯಾಂಕ್ ಲೂಟಿ ಮಾಡುವ ವೇಳೆ ಒಬ್ಬ ಪೊಲೀಸನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರ ಹತ್ಯೆಗೂ ಸಂಚು ರೂಪಿಸುತ್ತಿದ್ದರು. ನ್ಯಾಯವಿಳಂಬ
ಅಮ್ಜದ್ ಕುಟುಂಬ ಪದೇ ಪದೇ ಮರಣೋತ್ತರ ಪರೀಕ್ಷೆ ವರದಿಗೆ ಮನವಿ ಮಾಡಿದರೂ, ಇದುವರೆಗೂ ಪೊಲೀಸರು ಅದನ್ನು ನೀಡಿಲ್ಲ. ಮರು ಮರಣೋತ್ತರ ಪರೀಕ್ಷೆಗೆ ಕುಟುಂಬವು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿ ವಜಾ ಆಗಿತ್ತು.
ಇದು ಯಾವ ಬಗೆಯ ನ್ಯಾಯ? ಮರು ಮರಣೋತ್ತರ ಪರೀಕ್ಷೆಯ ಮನವಿಯನ್ನೂ ಪುರಸ್ಕರಿಸಲಿಲ್ಲ. ಈಗಾಗಲೇ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿಲ್ಲ. ಅವರು ಏನನ್ನೋ ಮುಚ್ಚಿಡುತ್ತಿದ್ದಾರೆಯೇ? ಎನ್ನುವುದು ಅವರ ಪ್ರಶ್ನೆ.
ಐದೂ ಮಂದಿ ಯುವಕರ ಕುಟುಂಬದವರು ಕಳೆದ ವರ್ಷ ರಾಜ್ಯ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿ, ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದಾರೆ. ಜತೆಗೆ ಬೆಂಗಾವಲು ಪೊಲೀಸರ ವಿರುದ್ಧ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ. ವಿಚಿತ್ರವೆಂದರೆ, ಕಳೆದ ಒಂದು ವರ್ಷದಲ್ಲಿ ಈ ಬಗ್ಗೆ ವಿಚಾರಣೆಯೇ ಆರಂಭವಾಗಿಲ್ಲ.
ಕಳೆದ ವರ್ಷ ನಮ್ಮ ವಕೀಲ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಪ್ರಕರಣದ ವಿಚಾರಣೆಗೆ ಸೂಚನೆ ನೀಡುವಂತೆ ಕೋರಿದ್ದರು. ನ್ಯಾಯಾಧೀಶರು ರಿಜಿಸ್ಟ್ರಿಗೆ ಈ ಸಂಬಂಧ ಸೂಚನೆ ನೀಡಿದ ಬಳಿಕ ಪಟ್ಟಿಯಲ್ಲಿ ಸೇರಿಸಲಾಯಿತು. ಆದರೆ ಕೊನೆ ಕ್ಷಣದಲ್ಲಿ ಕೈಬಿಡಲಾಯಿತು. ಆರೋಪಿಗಳನ್ನು ರಕ್ಷಿಸಲು ಮೇಲಿನಿಂದ ಒತ್ತಡ ಇದೆ. ಪ್ರಕರಣ ವಿಚಾರಣೆಗೆ ಬಂದರೆ ಸತ್ಯ ಆಚೆಗೆ ಬರುತ್ತದೆ ಎಂಬ ಭೀತಿ ಅವರಿಗಿದೆ ಎಂದು ದೂರುತ್ತಾರೆ.
ಲಿಸ್ಟಿಂಗ್ ರಿಜಿಸ್ಟ್ರಿಯಿಂದ ಕೇಸು ಕಿತ್ತುಹಾಕಿದ ಸಂಬಂಧ ಇಮ್ತಿಯಾಝ್ ಹೇಳಿಕೆಯನ್ನು ಪರಿಶೀಲಿಸಿದಾಗ, ಅವರ ಹೇಳಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಮೊದಲು ವಿಚಾರಣೆಗೆ ನಿಗದಿಪಡಿಸಿದ್ದ ಆ ಪ್ರಕರಣವನ್ನು ದಿಢೀರನೇ ತೆಗೆದುಹಾಕಿರುವುದು ತಿಳಿದುಬಂತು.
ಇಮ್ತಿಯಾಝ್ ಇಂದಿಗೂ ನ್ಯಾಯ ಸಿಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಇದೀಗ ನ್ಯಾಯಾಂಗವೊಂದೇ ನಮಗೆ ಕೊನೆಯ ಆಸರೆ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆದರೆ ಮಾತ್ರ ನಾವು ನ್ಯಾಯ ನಿರೀಕ್ಷಿಸಬಹುದು ಎಂದು ಅವರು ಹೇಳುತ್ತಾರೆ. ಇಲ್ಲದಿದ್ದರೆ ಇಡೀ ವ್ಯವಸ್ಥೆ ಬಗ್ಗೆ ನಮಗೆ ದ್ರೋಹವಾಗಿದೆ ಎಂಬ ಭಾವನೆ ನಮಗೆ ಬರುತ್ತದೆ ಎಂದು ಸುದೀರ್ಘ ಮೌನದ ಬಳಿಕ ನಿಟ್ಟುಸಿರು ಬಿಟ್ಟರು.

ಪ್ರತೀಕಾರದ ಹತ್ಯೆ
ವ್ಯವಸ್ಥಿತ ನಕಲಿ ಎನ್‌ಕೌಂಟರ್‌ನಲ್ಲಿ ಅಮ್ಜದ್‌ನನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಇಮ್ತಿಯಾಝ್ ಅವರ ಆರೋಪ. ಪೊಲೀಸರಿಂದ ಶಸ್ತ್ರಾಸ್ತ್ರ ಕಸಿದ ಆರೋಪವನ್ನು ನಿರಾಕರಿಸುವ ಅವರು, ಇದು ಪ್ರತೀಕಾರದ ಹತ್ಯೆ ಎಂದು ಹೇಳುತ್ತಾರೆ.
ನನ್ನ ಸಹೋದರ ಹಾಗೂ ನಾಲ್ಕು ಮಂದಿಯನ್ನು ಕೊಲ್ಲಲು ಇದು ಕಡೆಯ ಅವಕಾಶ ಎನ್ನುವುದು ಪೊಲೀಸರಿಗೆ ಚೆನ್ನಾಗಿ ತಿಳಿದಿತ್ತು. ಏಕೆಂದರೆ ಆರೋಪಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ಜೈಲು ಸ್ಥಳಾಂತರಕ್ಕೆ ಆದೇಶ ನೀಡುವುದರಲ್ಲಿತ್ತು. ಹೈದರಾಬಾದ್‌ನ ಜೈಲಿಗೆ ಅವರು ಸ್ಥಳಾಂತರಗೊಳ್ಳುತ್ತಿದ್ದರು ಎನ್ನುವುದು ಇಮ್ತಿಯಾಝ್‌ವಾದ.
ಇಮ್ತಿಯಾಝ್ ಅವರ ಪ್ರಕಾರ, ಎನ್‌ಕೌಂಟರ್ ನಡೆಯುವ ಮುನ್ನಾ ದಿನ ಅಂದರೆ ಏಪ್ರಿಲ್ 6ರಂದು ವಿಕರುದ್ದೀನ್ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ, ಜೀವಭಯ ಇರುವ ಹಿನ್ನೆಲೆಯಲ್ಲಿ ವಾರಂಗಲ್ ಜೈಲಿನಿಂದ ಹೈದರಾಬಾದ್‌ನ ಯಾವುದಾದರೂ ಜೈಲಿಗೆ ಸ್ಥಳಾಂತರಿಸಬೇಕು ಎಂದು ಕೋರಿದ್ದ. ಪೊಲೀಸರು ತಮ್ಮ ಹತ್ಯೆಗೆ ಸಂಚು ಮಾಡಿದ್ದಾರೆ ಎನ್ನುವುದು ಎಲ್ಲ ಐದು ಮಂದಿಗೂ ತಿಳಿದಿತ್ತು. ಈ ಕಾರಣದಿಂದ ಸ್ಥಳಾಂತರ ಕೋರಿದ್ದರು
ಮೃತ ವ್ಯಕ್ತಿಗಳ ದೇಹದ ಮೇಲೆ ಚಿತ್ರಹಿಂಸೆ ನೀಡಿದ ಗುರುತುಗಳು ಇದ್ದವು. ಪ್ರತಿ ಶವದಲ್ಲಿ 6-7 ಗುಂಡುಗಳು ಇದ್ದವು. ದೇಹಗಳ ಇಂಚಿಂಚನ್ನೂ ಜರ್ಜರಿತಗೊಳಿಸಿದ್ದವು. ಅಮ್ಜದ್ ಎದೆಭಾಗ ನೀಲಿಬಣ್ಣಕ್ಕೆ ತಿರುಗಿತ್ತು. ಏಕೆಂದರೆ ರೈಫಲ್‌ನಿಂದ ತಿವಿದಿದ್ದರು. ಇದಲ್ಲದೆ ಆತ ಎದೆಯ ಮೇಲೆ ಗುಂಡು ಹೊಕ್ಕ್ತಿತ್ತು. ಇದರಿಂದ ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎನ್ನುವುದು ಸ್ಪಷ್ಟ
ನನ್ನ ಸಹೋದರನಲ್ಲದೇ, ವಿಕರುದ್ದೀನ್‌ನ ಮೂಗು ಹಾಗೂ ಹಲ್ಲು ಮುರಿದಿತ್ತು. ಝಾಕೀರ್‌ನ ದವಡೆ ತಿರುಚಲಾಗಿತ್ತು. ಹನೀಫ್ ಮೈಮೇಲೆ ಮತ್ತು ಹಿಂಭಾಗದಲ್ಲಿ ಗುಳ್ಳೆಗಳಿದ್ದವು. ಇದು ನಕಲಿ ಚಕಮಕಿ. ಸ್ಪಷ್ಟ ಕಗ್ಗೊಲೆ ಎಂದು ಇಮ್ತಿಯಾಝ್‌ಆಕ್ರೋಶ ವ್ಯಕ್ತಪಡಿಸುತ್ತಾರೆ.
ಶವ ಮಹಜರು ನಡೆಸಿದ ಬಳಿಕ ಪಂಚನಾಮೆ ಮಾಡಲಾಗಿದ್ದು, ಇದರಲ್ಲಿ ಅಮ್ಜದ್‌ಗೆ 11 ಕಡೆ ಗುಂಡು ತಗಲಿದ ಗಾಯಗಳ ಉಲ್ಲೇಖವಿದೆ. ನಾಲ್ಕು ಗಂಟಲಿನ ಎಡಪಕ್ಕದಲ್ಲಿ, ಒಂದು ಎದೆ ಮಧ್ಯದಲ್ಲಿ, ಒಂದು ಬೆನ್ನು ಹುರಿಯ ಮೇಲೆ. ಎರಡು ಬಲಭುಜದಲ್ಲಿ. ಎರಡು ಎಡಭುಜದಲ್ಲಿ ಹಾಗೂ ಒಂದು ಭುಜದ ಒಳಭಾಗದಲ್ಲಿ. ಆತನ ಇಡೀ ಶರೀರದಲ್ಲಿ ಇದ್ದ ರಂಧ್ರಗಳನ್ನು ನೋಡಿದರೆ, ಆತ ಮನುಷ್ಯನೇ ಅಲ್ಲ ಎಂಬಂತಿತ್ತು ಎಂದು ಇಮ್ತಿಯಾಝ್‌ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News