ಗಣಿಲಾಬಿಯ ವಿರುದ್ಧ ಸಿಡಿದೆದ್ದ ಆದಿವಾಸಿಗಳು!

Update: 2016-04-07 18:17 GMT

ಅಂದು ಎಪ್ರಿಲ್ 2,ಶುಕ್ರವಾರದ ರಾತ್ರಿ.. ಬಿರ್‌ಹೊರ್ ಹಾಗೂ ಗೊಂಡ ಆದಿವಾಸಿ ಪಂಗಡಗಳೇ ಅಧಿಕ ಸಂಖ್ಯೆಯಲ್ಲಿದ್ದ ಸುಮಾರು 150 ಮಂದಿ ಛತ್ತೀಸ್‌ಗಡದ ರಾಯ್‌ಗಡ ಜಿಲ್ಲೆಯ ತಮನಾರ್ ಬ್ಲಾಕ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಕಲ್ಲಿದ್ದಲು ಗಣಿ ವಿಸ್ತರಣಾ ಯೋಜನೆಗೆಂದು ಗುರುತು ಮಾಡಲಾಗಿದ್ದ ಪ್ರದೇಶದ ವ್ಯಾಪ್ತಿಗೆ ಬರುವ 15 ಮನೆಗಳನ್ನು ಅಕ್ರಮವಾಗಿನೆಲಸಮಕ್ಕೆ ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅವರು ಪ್ರತಿಭಟನೆ ನಡೆಸಿದರು.
          
   ಶನಿವಾರ ಮುಂಜಾನೆ 3 ಗಂಟೆಗೆ, ರಾಯಗಢದ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗ್ರಾಮಸ್ಥರನ್ನು ಭೇಟಿಯಾಗಲು ಆಗಮಿಸಿದರು. ಅವರ ಅಹವಾಲುಗಳನ್ನು ಅಲಿಸಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದರು. ಇದಕ್ಕೂ ಮುನ್ನಾ ದಿನ ಅಂದರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪೊಲೀಸರು ಮೂರು ಮನೆಗಳನ್ನು ಧ್ವಂಸಗೊಳಿಸುವ ಉದ್ದೇಶದಿಂದ ಬುಲ್‌ಡೋಝರ್‌ಗಳಲ್ಲಿ ಆಗಮಿಸಿದ್ದರು. ಈ ಬುಲ್‌ಡೋಝರ್‌ಗಳ ದಾಳಿಯ ಗುರಿಗಳಾಗಿದ್ದ ಮನೆಗಳ ಮಾಲಕಿಯರಾದ ನಿರ್ಮಲಾ ಸಿದೊರ್ ಹಾಗೂ ಸನ್ಯಾರೊ ಬಿಹಾರೊ, ತೆರವು ಕಾರ್ಯಾಚರಣೆಯನ್ನು ಪ್ರತಿಭಟಿಸಿದರು. ಪೊಲೀಸರು ಅವರಿಬ್ಬರನ್ನು ಹಾಗೂ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದ ಸ್ಥಳೀಯ ಸಾಮಾಜಿಕ ಕಾರ್ಯಕತೆರ್ ರಿಂಚಿನ್‌ರನ್ನು ವಶಕ್ಕೆ ತೆಗೆದುಕೊಂಡರು.
 ಈ ಮೂವರು ಮಹಿಳೆಯರ ವಿರುದ್ಧ ಕರ್ತವ್ಯ ನಿರ್ವಹಣೆಯಲ್ಲಿ ಸರಕಾರಿ ಉದ್ಯೋಗಿಗಳಿಗೆ ಅಡ್ಡಿಪಡಿಸುವುದು ಹಾಗೂ ಭಾರತೀಯ ದಂಡ ಸಂಹಿತೆಯ 147,186, 294 ಸೆಕ್ಷನ್ ಅಡಿ ಅಸಭ್ಯ ವರ್ತನೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ.
ಈ ಎಲ್ಲಾ ಸೆಕ್ಷನ್‌ಗಳು ಜಾಮೀನು ಬಿಡುಗಡೆಗೆ ಯೋಗ್ಯವಾಗಿದ್ದರೂ, ಮಹಿಳೆಯರು ಜಾಮೀನು ಅರ್ಜಿ ಸಲ್ಲಿಸಲು ನಿರಾಕರಿಸಿದ್ದು,ಈ ಪ್ರಕರಣಗಳು ಆಧಾರರಹಿತವೆಂದು ಹೇಳಿದರು. ಈ ಬಂಧನವು ಅಕ್ರಮವಾಗಿದ್ದು ತಮ್ಮ ಮೇಲೆ ಹೊರಿಸಲಾದ ಆರೋಪಗಳು ಆಧಾರರಹಿತವೆಂದು ಹೇಳಿದರು. ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಪಡಿಸುವಂತೆ ಅವರು ಆಗ್ರಹಿಸಿದರು. ‘‘ಈ ಬಂಧನಗಳು ಅಕ್ರಮವಾಗಿದ್ದು,ಅವರ ವಿರುದ್ಧ ಹೊರಿಸಲಾದ ಆರೋಪಗಳು ಸಂಪೂರ್ಣ ಆಧಾರರಹಿತ’’ ಎಂದು ನ್ಯಾಯವಾದಿ ರಮಾ ವೇದುಲಾ ಹೇಳಿದ್ದಾರೆ.
ಬುಡಕಟ್ಟು ಜಮೀನುಗಳು
 ಮಂಡ್ ರಾಯ್‌ಘರ್ ಕಲ್ಲಿದ್ದಲು ಗಣಿಯ ವ್ಯಾಪ್ತಿಯಲ್ಲಿರುವ ಕಲ್ಲಿದ್ದಲು ಗಣಿಯ ವಿಸ್ತರಣೆಗಾಗಿ ಈ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ಆದಿತ್ಯ ಬಿರ್ಲಾ ಗ್ರೂಪ್‌ಗೆ ಸೇರಿದ ಹಿಂಡಾಲ್ಕೊ ಇಂಡಸ್ಟ್ರೀಸ್ ಈ ಗಣಿಯನ್ನು ನಿರ್ವಹಿಸುತ್ತಿದೆ.
  ಆರಂಭದಲ್ಲಿ ಈ ಗಣಿಯನ್ನು ಜಯಸ್ವಾಲ್ ನೆಲ್ಕೊ ಇಂಡಸ್ಟ್ರೀಸ್‌ಗೆ ನೀಡಲಾಗಿತ್ತು. ಆದರೆ ಅವರ ಲೀಸ್ ಅನ್ನು 2014ರ ಸೆಪ್ಟಂಬರ್‌ನಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. 1993ರಿಂದ 2011ರ ನಡುವೆ ಖಾಸಗಿ ಕಂಪೆನಿಗಳಿಗೆ 214 ಕಲ್ಲಿದ್ದಲು ಗಣಿಗಳನ್ನು ಏಕಪಕ್ಷೀಯವಾಗಿ ನೀಡಲಾಗಿದೆಯೆಂದು ಹೇಳಿ ಅವನ್ನು ಅಮಾನ್ಯಗೊಳಿಸಿತ್ತು. ಆನಂತರ ಕಳೆದ ವರ್ಷ ನಡೆದ ಹರಾಜಿನಲ್ಲಿ ಹಿಂಡಾಲ್ಕೊ ಈ ಗಣಿಗಳ ಮೇಲಿನ ಹಕ್ಕುಗಳನ್ನು ಪಡೆದುಕೊಂಡಿತ್ತು.
 
ಮನೆಗಳನ್ನು ತೆರವುಗೊಳಿಸಲಾದವರಿಗೆ ಹೆಚ್ಚುವರಿ ಪರಿಹಾರವನ್ನು ನೀಡಲಾಗಿದೆಯೆಂದು ಹಿಂಡಾಲ್ಕೊ ಅಧಿಕಾರಿಗಳು ಹೇಳುತ್ತಾರೆ. ಆದರೆ ಅವರ ಹೇಳಿಕೆಯನ್ನು ಬಿರ್‌ಹೊರ್ ಅಲ್ಲಗಳೆಯುತ್ತಾರೆ. ಒಂದು ವೇಳೆ ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಪರಿಹಾರ ನೀಡಿದ್ದರೆ ತಾವು ಇಲ್ಲಿ ಇರುತ್ತಿದ್ದೆವಾ ಎಂದವರು ಪ್ರಶ್ನಿಸುತ್ತಾರೆ. ಛತ್ತೀಸ್‌ಗಡದ ರಾಯ್‌ಗಡ ಜಿಲ್ಲೆಯನ್ನು ಭಾರತೀಯ ಸಂವಿಧಾನದ ಐದನೆ ಶೆಡ್ಯೂಲ್ ನಿಯಮಗಳ ಪ್ರಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಬುಡಕಟ್ಟು ಜನರ ಭೂಮಿಯ ವರ್ಗಾಣೆಗೆ ಸಂಬಂಧಿಸಿ ವಿಶೇಷ ಸುರಕ್ಷತಾ ಕ್ರಮಗಳನ್ನು ಅಲ್ಲಿ ಜಾರಿಗೊಳಿಸಲಾಗಿದೆ.
ಸಂವಿಧಾನದ ಐದನೆ ಪರಿಚ್ಛೇದದ ನಿಯಮಗಳ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ವಾಸಿಸುವ ಕುಟುಂಬಗಳನ್ನು ತೆರವುಗೊಳಿಸಬೇಕಾದರೆ, ಅವರಿಗೆ ತಾವು ಈಗಾಗಲೇ ವಾಸವಿರುವ ಪ್ರದೇಶದಲ್ಲೇ ಪರ್ಯಾಯ ನಿವೇಶನ ಅಥವಾ ಮನೆಯನ್ನು ವಿತರಿಸಬೇಕಾಗುತ್ತದೆ.
 ಈ ಮೂವರು ಗ್ರಾಮಸ್ಥರಿಗೆ ಈವರೆಗೆ ಪರ್ಯಾಯ ನಿವೇಶನ ಅಥವಾ ಮನೆಯನ್ನು ವಿತರಿಸಲಾಗಿಲ್ಲ. ಈ ಮೂರು ಮನೆಗಳಿಗೆ, ಮಾರ್ಚ್ 22ರಂದು ಜಾಗ ತೆರವು ನೋಟಿಸ್ ಜಾರಿಗೊಳಿಸಲಾಗಿದ್ದು, ಮಾರ್ಚ್ 30ರೊಳಗೆ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದಾಗ್ಯೂ ತಮಗೆ ಎಪ್ರಿಲ್ 1ನೆ ತಾರೀಕಿಗಷ್ಟೇ ನೋಟಿಸ್ ತಲುಪಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಆ ದಿನವೇ ಅವರ ಮನೆಗಳನ್ನು ಬುಲ್‌ಡೋಝರ್‌ಗಳು ನೆಲಸಮಗೊಳಿಸಿದ್ದವು.
  ಜಮೀನು ಹಾಗೂ ಪಾರಿಸರಿಕ ಪರವಾನಿಗೆಗಳು ಒಂದು ಕಲ್ಲಿದ್ದಲು ಗಣಿಯ ಮಾಲಕನಿಂದ ಇನ್ನೊಂದು ಕಲ್ಲಿದ್ದಲು ಮಾಲಕನವರೆಗೆ ಕ್ಷಿಪ್ರವಾಗಿ ಬದಲಾಗುತ್ತಲೇ ಇರುತ್ತವೆ. ದುರ್ಬಲ ಆದಿವಾಸಿ ಸಮುದಾಯಗಳು ಪರಿಹಾರ ಹಾಗೂ ಪುನರ್ವಸತಿಗೆ ಸಂಬಂಧಿಸಿದ ಸಮಸ್ಯೆಗಳ ಬಲೆಯಲ್ಲಿ ಒದ್ದಾಡುತ್ತಲೇ ಇರುತ್ತವೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಾನವಹಕ್ಕುಗಳ ಅಧಿಕಾರಿ ಅರುಣಾ ಚಂದ್ರಶೇಖರ್ ಹೇಳುತ್ತಾರೆ.
ಅಪರೂಪದ ಗೆಲುವು
 ಪ್ರತಿಭಟನೆ ನಡೆದ ಹದಿನೇಳು ತಾಸುಗಳ ಆನಂತರ, ಪ್ರತಿಭಟನಾಕಾರರಿಗೆ ಸಣ್ಣ ಮಟ್ಟದ ಗೆಲುವೊಂದು ದೊರೆಯಿತು. ‘‘ಕನಿಷ್ಠ ದಾಖಲೆಪತ್ರಗಳಲ್ಲಾದರೂ ನಾವು ಜಯಗಳಿಸಿದ್ದೇವೆ’’ ಎಂದು ಸನ್ಯಾರೊ ಬಿರ್‌ಹೊರ್ ಹೇಳುತ್ತಾರೆ
  ಗ್ರಾಮಸ್ಥರೊಂದಿಗೆ ನಾಲ್ಕು ತಾಸುಗಳ ಚರ್ಚೆಯ ಬಳಿಕ, ಜಿಲ್ಲಾಡಳಿತವು ಅವರ ಮನೆಗಳನ್ನು ನೆಲಸಮಗೊಳಿಸುವ ಮೊದಲು ಅವರ ಪುನರ್ವಸತಿಗೆ ಶ್ರಮಿಸಲು ಒಪ್ಪಿಕೊಂಡಿತು. ಅಷ್ಟು ಮಾತ್ರವಲ್ಲ, ರಾಜ್ಯ ಸರಕಾರ ಕೂಡಾ ತಮನಾರ್ ಪ್ರಾಂತದಲ್ಲಿ ನಡೆಯುವ ಯಾವುದೇ ಅಕ್ರಮ ತೆರವು ಹಾಗೂ ದೋಷಪೂರಿತ ಭೂ ಸ್ವಾಧೀನಕ್ಕೆ ಸಂಬಂಧಿಸಿದ ದೂರುಗಳನ್ನು ತಕ್ಷಣವೇ ಗಮನಹರಿಸುವುದಾಗಿ ತಿಳಿಸಿದೆ. ಈ ಮಹಿಳೆಯರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.
 ಈ ಗ್ರಾಮಸ್ಥರನ್ನು ಅಕ್ರಮವಾಗಿ ತೆರವುಗೊಳಿಸಲು ಯತ್ನಿಸಿದ್ದಕ್ಕಾಗಿ ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ದೂರು ದಾಖಲಿಸಲು ನಾವು ಬಯಸಿದ್ದೇವೆ. ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಬುಡಕಟ್ಟು ಜನರ ಭೂಮಿಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ರಿಂಚಿನ್ ಹೇಳುತ್ತಾರೆ.

Writer - ರಕ್ಷಾ ಕುಮಾರ್

contributor

Editor - ರಕ್ಷಾ ಕುಮಾರ್

contributor

Similar News