ಅಂದು ಐಐಟಿಯಿಂದ ತಿರಸೃತನಾಗಿದ್ದ ವ್ಯಕ್ತಿಯೀಗ 50 ಕೋ.ರೂ.ವಹಿವಾಟಿನ ಕಂಪೆನಿಯ ಒಡೆಯ!

Update: 2016-04-07 18:56 GMT

ಹೈದರಾಬಾದ್,ಎ.7: ಶ್ರೀಕಾಂತ ಬೊಲ್ಲ ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿರುವ ಕುಗ್ರಾಮದಲ್ಲಿ ಹುಟ್ಟಿದಾಗಲೇ ದೃಷ್ಟಿಯನ್ನು ಕಳೆದುಕೊಂಡಿದ್ದ. ಈ ಅಂಧ ಮಗುವನ್ನು ಸಾಕುವುದಕ್ಕಿಂತ ಅದನ್ನು ದೂರ ಮಾಡುವುದೇ ಉತ್ತಮ ಎಂದು ನೆರೆಕರೆಯವರು ಶ್ರೀಕಾಂತನ ಹೆತ್ತವರಿಗೆ ಫುಕ್ಕಟೆ ಸಲಹೆಯನ್ನು ನೀಡಿದ್ದರು. ಆದರೆ ತಿಂಗಳಿಗೆ ಕೇವಲ 1,600 ರೂ. ದುಡಿಯುತ್ತಿದ್ದ ಬಡ ಹೆತ್ತವರು ಮಗನಿಗೆ ಉತ್ತಮ ಶಿಕ್ಷಣ ನೀಡಿ ಆತನನ್ನು ಸ್ವಾವಲಂಬಿಯಾಗಿಸಲು ಅಂದೇ ನಿರ್ಧರಿಸಿದ್ದರು. ನಾನು ಏನು ಬೇಕಾದರೂ ಮಾಡಬಲ್ಲೆ
ಈಗ 23 ವರ್ಷಗಳ ಬಳಿಕ ಅದೇ ಶ್ರೀಕಾಂತ ಬೊಲ್ಲ ಹೈದರಾಬಾದ್‌ನ ಬೊಲ್ಲಂತ್ ಇಂಡಸ್ಟ್ರೀಸ್‌ನ ಸಿಇಓ ಆಗಿದ್ದಾರೆ. ಪರಿಸರಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುವ ಈ ಕಂಪೆನಿಯು ನಿರುದ್ಯೋಗಿ,ದೈಹಿಕ ವಿಕಲ ವ್ಯಕ್ತಿಗಳಿಗೆ ಉದ್ಯೋಗ ನೀಡುವುದರ ಜೊತೆಗೆ ವಾರ್ಷಿಕ 50 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಜಗತ್ತು ನನ್ನತ್ತ ನೋಡಿ ‘ಶ್ರೀಕಾಂತ,ನಿನಗೆ ಏನೂ ಮಾಡಲು ಸಾಧ್ಯವಿಲ್ಲ ’ಎಂದು ಹೇಳಿದರೆ ನಾನು ಅದನ್ನು ತಿರುಗಿ ನೋಡಿ ‘ನಾನು ಏನು ಬೇಕಾದರೂ ಮಾಡಬಲ್ಲೆ ’ಎಂದು ಹೇಳುತ್ತೇನೆ ಎನ್ನುವ ಛಾತಿ ಶ್ರೀಕಾಂತ ಅವರದ್ದು. ತನಗೆ ವಿದ್ಯಾಭ್ಯಾಸ ಕೊಡಿಸಿದ್ದಕ್ಕಾಗಿ ತನ್ನ ಹೆತ್ತವರಿಗೆ ತಾನು ಚಿರಋಣಿ ಎನ್ನುವ ಶ್ರೀಕಾಂತ,ತಾನು ಈ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎನ್ನುತ್ತಾರೆ.


  ಡಾ.ಕಲಾಂ ಜೊತೆ ಕಾರ್ಯ

ಶ್ರೀಕಾಂತ ತನ್ನ ಪ್ರಾರಂಭಿಕ ಶಿಕ್ಷಣ ಪಡೆದ ಶಾಲೆಗೆ ಅವರ ಬಗ್ಗೆ ಕಿಂಚಿತ್ತೂ ದಯೆಯಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸದಾ ಅವರನ್ನ್ನು ಗೇಲಿ ಮಾಡುತ್ತಲೇ ಇದ್ದರು. ಆದರೆ ಬಳಿಕ ಶ್ರೀಕಾಂತ ವಿಶೇಷ ಮಕ್ಕಳಿಗಾಗಿಯೇ ಇರುವ ಶಾಲೆಯನ್ನು ಸೇರಿಕೊಂಡಿದ್ದರು. ಅಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಶ್ರೀಕಾಂತ ಚದುರಂಗ ಮತ್ತು ಕ್ರಿಕೆಟ್‌ನಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದರು.
10ನೆ ತರಗತಿಯಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದರೂ ಪಿಯುಸಿ ವಿಜ್ಞಾನ ತರಗತಿಗೆ ಸೇರಿಕೊಂಡು ಕೋರ್ಸ್ ಪೂರೈಸಲು ಆತ ತುಂಬಾ ಕಷ್ಟಪಟ್ಟಿದ್ದರು. ಅದಾದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಐಐಟಿಗಳು ಮತ್ತು ಇತರ ಉನ್ನತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸಿ ಅರ್ಜಿಗಳನ್ನು ಸಲ್ಲಿಸಿದಾಗಲೂ ತೊಂದರೆಗಳ ಸರಮಾಲೆಯೇ ಎದುರಾಗಿತ್ತು. ಆತ ಅಂಧ ಎಂಬ ಕಾರಣಕ್ಕೆ ಐಐಟಿ ಹಾಲ್‌ಟಿಕೆಟ್ಟನ್ನೇ ನೀಡಿರಲಿಲ್ಲ.
ಹುಟ್ಟಿನಿಂದ ಅಂಧನಾಗಿದ್ದರೂ ಸಾಧನೆಯಿಂದ ನಾನು ಅಂಧನಾಗಿರಲಿಲ್ಲ. ಆದರೆ ಜನರ ಗ್ರಹಿಕೆಗಳು ನನ್ನನ್ನು ನಿಜವಾಗಿ ಅಂಧನನ್ನಾಗಿಸಿದವು ಎಂದು ನೆನಪಿಸಿಕೊಂಡಿದ್ದಾರೆ ಶ್ರೀಕಾಂತ. ಅವರ ಸಹನೆ ಮತ್ತು ಬುದ್ಧಿಮತ್ತೆ ಅವರಿಗೆ ವೌಲ್ಯಾಧಾರಿತ ಶಿಕ್ಷಣದ ಮೂಲಕ ಯುವಜನರ ಸಬಲೀಕರಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಲೀಡ್ ಇಂಡಿಯಾ ಯೋಜನೆಗಾಗಿ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನೊದಗಿಸಿತ್ತು.

ಐಐಟಿಯಿಂದ ತಿರಸ್ಕೃತನನ್ನು ಎಂಐಟಿ ಅಪ್ಪಿಕೊಂಡಿತು
ಐಐಟಿಯಿಂದ ತಿರಸ್ಕೃತಗೊಂಡ ಶ್ರೀಕಾಂತರ ಮನೋಬಲ ಇನ್ನಷ್ಟು ಹೆಚ್ಚಾಯಿತು ಮತ್ತು ಅವರು ವಿದೇಶಿ ವಿವಿಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಅಮೆರಿಕದ ಅತ್ಯಂತ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಯಲ್ಲಿ ಪ್ರವೇಶ ಗಿಟ್ಟಿಸಿಕೊಂಡ ಮೊದಲ ಅಂತಾರಾಷ್ಟ್ರೀಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಅವರದಾಗಿತ್ತು. ಅಮೇರಿಕದಲ್ಲಿ ಓದುತ್ತಿರುವಾಗಲೇ ಅವರು ಭಾರತಕ್ಕೆ ಮರಳಿದ ನಂತರ ತನ್ನಂತಹ ದೈಹಿಕ ವಿಕಲರ ಕನಸುಗಳನ್ನು ನನಸಾಗಿಸಲು ಏನನ್ನಾದರೂ ಮಾಡಬೇಕು ಎಂಬ ದೃಢ ನಿರ್ಧಾರವನ್ನು ತಳೆದಿದ್ದರು. ಸುಮಾರು 3,000 ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿಪರತೆಯನ್ನು ಪಡೆದುಕೊಳ್ಳುವಲ್ಲಿ ನೆರವಾದ ಶ್ರೀಕಾಂತರಿಗೆ ಅವರ ಉದ್ಯೋಗದ ಬಗ್ಗೆ ಚಿಂತೆಯುಂಟಾದಾಗ ತಾನೇ ಸ್ವಂತ ಕಂಪೆನಿಯನ್ನು ಸ್ಥಾಪಿಸಿದರು. ಇಂದು ಅವರ ಕಂಪೆನಿಯಲ್ಲಿ ಸುಮಾರು 150 ದೈಹಿಕ ವಿಕಲರು ಅನ್ನವನ್ನು ಕಂಡುಕೊಂಡಿದ್ದಾರೆ.

‘ನಾನು ಏನು ಬೇಕಾದರೂ ಮಾಡಬಲ್ಲೆ’

 ‘ಈಗ 23 ವರ್ಷಗಳ ಬಳಿಕ ಅದೇ ಶ್ರೀಕಾಂತ ಬೊಲ್ಲ ಹೈದರಾಬಾದ್‌ನ ಬೊಲ್ಲಂತ್ ಇಂಡಸ್ಟ್ರೀಸ್‌ನ ಸಿಇಓ ಆಗಿದ್ದಾರೆ. ಪರಿಸರಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುವ ಈ ಕಂಪೆನಿಯು ನಿರುದ್ಯೋಗಿ,ದೈಹಿಕ ವಿಕಲ ವ್ಯಕ್ತಿಗಳಿಗೆ ಉದ್ಯೋಗ ನೀಡುವುದರ ಜೊತೆಗೆ ವಾರ್ಷಿಕ 50 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಜಗತ್ತು ನನ್ನತ್ತ ನೋಡಿ ‘ಶ್ರೀಕಾಂತ,ನಿನಗೆ ಏನೂ ಮಾಡಲು ಸಾಧ್ಯವಿಲ್ಲ ’ಎಂದು ಹೇಳಿದರೆ ನಾನು ಅದನ್ನು ತಿರುಗಿ ನೋಡಿ ‘ನಾನು ಏನು ಬೇಕಾದರೂ ಮಾಡಬಲ್ಲೆ ’ಎಂದು ಹೇಳುತ್ತೇನೆ ಎನ್ನುವ ಛಾತಿ ಶ್ರೀಕಾಂತ ಅವರದ್ದು. ತನಗೆ ವಿದ್ಯಾಭ್ಯಾಸ ಕೊಡಿಸಿದ್ದಕ್ಕಾಗಿ ತನ್ನ ಹೆತ್ತವರಿಗೆ ತಾನು ಚಿರಋಣಿ ಎನ್ನುವ ಶ್ರೀಕಾಂತ,ತಾನು ಈ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News