ಆದಾಯ ತೆರಿಗೆ ತನಿಖೆ: ಬಚ್ಚನ್ ಬಚಾವ್ ಆದದ್ದು ಹೀಗೆ,

Update: 2016-04-08 13:11 GMT

ಮುಂಬೈ ಎ. 8: 2009ರ ಡಿಸೆಂಬರ್ 22ರಂದು ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಂದ ಒಂದು ಪತ್ರ ಬಂದಿತ್ತು. ಹಿಂದಿನ ದಿನ ರಾತ್ರಿ ನಡುವೆ ಇಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಯ ಮುಂದುವರಿದ ಭಾಗವಾಗಿ ಆ ಪತ್ರ ಬರೆಯಲಾಗಿತ್ತು, ಈಗ ರಾಷ್ಟ್ರಪತಿಯಾಗಿರುವ ಮುಖರ್ಜಿಯವರನ್ನು ’ಪ್ರಣಬ್ ದಾ’ ಎಂದು ಸಂಬೋಧಿಸಿದ್ದ ಆ ಪತ್ರದ ವಿವರ ಹೀಗಿತ್ತು:
"ಆದಾಯ ತೆರಿಗೆ ಇಲಾಖೆಯ ಮುಂಬೈ ಕಚೇರಿಯಿಂದ ನನಗೆ ಬಂದಿರುವ ನೋಟಿಸ್‌ನಲ್ಲಿ ನನ್ನ ವಿರುದ್ಧ ಸಂಶಯ ವ್ಯಕ್ತಪಡಿಸಿರುವುದು ದುರದೃಷ್ಟಕರ. ನನ್ನ ವಿರುದ್ಧ ಮಾಧ್ಯಮಗಳಲ್ಲಿ ಬಂದಿರುವ ನಿರರ್ಥಕ ವರದಿಗಳ ಆಧಾರದಲ್ಲಿ ನನ್ನ ವಿರುದ್ಧ ಪ್ರಕರಣ ಹೆಣೆಯಲಾಗಿದೆ ಎಂಬ ಭಾವನೆ ನಿರಂತರವಾಗಿ ನನ್ನಲ್ಲಿದೆ. ಇಲಾಖೆ ಹೇಳಿರುವ ಪ್ರಕರಣಗಳಲ್ಲಿ ನಾನು ಅಮಾಯಕ ಎಂದು ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ. ಇನ್ನಷ್ಟು ಕಿರುಕುಳದಿಂದ ನನ್ನನ್ನು ಬಿಟ್ಟುಬಿಡಿ ಎಂದು ಕೋರಿದ್ದೇನೆ"
ತೆರಿಗೆ ಇಲಾಖೆ ಬಳಿ ಬಚ್ಚನ್ ವಿರುದ್ಧ ತೆರಿಗೆ ಕಳ್ಳತನ ಬಗ್ಗೆ ಕಣ್ಣಿಗೆ ರಾಚುವಂಥ ಪುರಾವೆಗಳಿದ್ದರೂ, ತನಿಖೆ ಮುಂದುವರಿಸಲಿಲ್ಲ.

ಸಂಶಯಾಸ್ಪದ ವರ್ಗಾವಣೆ ಹಾಗೂ ಪಾವತಿ
ಡಿಎನ್‌ಎ ತನ್ನ ತನಿಖಾ ಪತ್ರಕರ್ತರ ತಂಡ ನಡೆಸಿದ ತನಿಖೆಯಿಂದ ಒಂದಷ್ಟು ಮಹತ್ವದ ಅಂಶಗಳನ್ನು ಬಹಿರಂಗಗೊಳಿಸುತ್ತಿದೆ. ತೆರಿಗೆ ತಪ್ಪಿಸಿದ ಸಂಬಂಧ ಬಚ್ಚನ್ ವಿರುದ್ಧ ಕೈಗೊಂಡ ತನಿಖೆಯ ಸಂಪೂರ್ಣ ವಿವರಗಳನ್ನು ಬೆಳಕಿಗೆ ತರುತ್ತಿದೆ. ಬಚ್ಚನ್ ಅವರ ಪರವಾಗಿ ಸಾಗರೋತ್ತರ ತೆರಿಗೆ ಸ್ವರ್ಗಗಳಿಗೆ ಮಾಡಿದ ಸಂಶಯಾಸ್ಪದ ವರ್ಗಾವಣೆ ಹಾಗೂ ಪಾವತಿಗಳ ಬಗ್ಗೆ ವಿವರಗಳಿವೆ. ಇಂಥ ಸುಮಾರು 60 ಲಕ್ಷ ಪೌಂಡ್ ಹಣವನ್ನು ಮರೀಷಿಯಸ್‌ಗೆ ಪಾವತಿಸಲಾಗಿದೆ. ಬಚ್ಚನ್ ಅಲ್ಲಿಂದ ಪಡೆದ ಸಾಲಕ್ಕೆ ಮರುಪಾವತಿ ಮಾಡುವ ನೆಪದಲ್ಲಿ ಹಣ ವರ್ಗಾವಣೆಯಾಗಿದೆ. ಈ ಹಣವನ್ನು ಬಚ್ಚನ್ ತಮ್ಮ ಆದಾಯವಾಗಿ ನಮೂದಿಸಿಲ್ಲ ಮತ್ತು ಅದಕ್ಕೆ ತೆರಿಗೆಯನ್ನೂ ಪಾವತಿಸಿಲ್ಲ.
ಪ್ರಕರಣ ಬಗೆಗಿನ ಇನ್ನೂ ಜಿಜ್ಞಾಸೆ ಎಂದರೆ ಬಚ್ಚನ್ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ಸುಬ್ರಥಾ ರಾಯ್ ಮಾಲೀಕತ್ವದ ಸಹಾರ ಉದ್ಯಮ ಸಮೂಹ ಈ ಸಾಲವನ್ನು ಮರುಪಾವತಿ ಮಾಡಿದೆ ಎನ್ನುವ ಅಂಶ. ಆದಾಯ ತೆರಿಗೆ ತನಿಖಾ ತಂಡ ಇಂಥ ಸರಣಿ ವಹಿವಾಟನ್ನು ಪತ್ತೆ ಮಾಡಿ, ವಿಸ್ತೃತ ತನಿಖೆ ಆರಂಭಿಸಿ ಹಲವು ಮಂದಿಯನ್ನು ಪ್ರಶ್ನಿಸಿತ್ತು. ಜತೆಗೆ ಕಾನೂನು ಜಾರಿ ನಿರ್ದೇಶನಾಲಯಕ್ಕೆ ವಿದೇಶಿ ವಿನಿಮಯ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವಂತೆಯೂ ಸೂಚಿಸಲಾಯಿತು. ತೆರಿಗೆ ಕಳ್ಳತನದ ಬಗ್ಗೆ ಪ್ರಬಲ ಪುರಾವೆ ಇದ್ದರೂ, ಆದಾಯ ತೆರಿಗೆ ತನಿಖೆಯನ್ನು ಸುಪ್ತಗೊಳಿಸಲಾಯಿತು. ಈ ಬಗ್ಗೆ ತನಿಖೆ ನಡೆಸುವಂತೆ ಕಾನೂನು ಜಾರಿ ನಿರ್ದೇಶನಾಲಯಕ್ಕೆ ಮುಂಬೈ ಹೈಕೋರ್ಟ್ ಆದೇಶ ನೀಡಿದರೂ, ತನಿಖೆ ಆರಂಭವಾಗಲೇ ಇಲ್ಲ.

ಅಮಿತಾಭ್ ಬಚ್ಚನ್ 1993-95ರ ಅವಧಿಯಲ್ಲಿ ಭಾರತೀಯ ಉದ್ಯಮಿ ಹಾಗೂ ಜರ್ಮನಿಯಲ್ಲೂ ಉದ್ಯಮ ನಡೆಸುತ್ತಿದ್ದ ಚೊಟ್ಟೂಭಾಯಿ ಕೇಶವ್‌ಭಾಯ್ ಪಿತ್ತವಲ್ಲಾ ಅವರಿಂದ 56.5 ಲಕ್ಷ ಡಾಲರ್ ಸಾಲ ಪಡೆದರು. ಬಚ್ಚನ್ ಅವರ ಹೊಸ ಯೋಜನೆಗಳಿಗೆ ಈ ಸಾಲ ಪಡೆದದ್ದಾಗಿ ಹೇಳಲಾಗಿತ್ತು. ಚನೆಲ್ ದ್ವೀಪದ ಒಂದು ಕಂಪೆನಿಯ ಮೂಲಕ ಈ ಹಣ ಬಚ್ಚನ್‌ಗೆ ವರ್ಗಾವಣೆಯಾಯಿತು. ಚನೆಲ್ ದ್ವೀಪ ಕೂಡಾ ತೆರಿಗೆ ಸ್ವರ್ಗವಾಗಿದ್ದು, ಈ ಹಣವನ್ನು 1996ರೊಳಗೆ ಮರುಪಾವತಿ ಮಾಡುವಂತೆ ಷರತ್ತು ವಿಧಿಸಲಾಗಿತ್ತು.

  ಈ ಬಾಲಿವುಡ್ ತಾರೆಗೆ ಅದು ಸಂಕಷ್ಟದ ಕಾಲ. ಅವರ ಎಲ್ಲ ವ್ಯವಹಾರಗಳೂ ಅಪಾಯದ ಅಂಚಿನಲ್ಲಿದ್ದವು. ಅವರ ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ನಷ್ಟದಲ್ಲಿತ್ತು. ಬಚ್ಚನ್ ತಮ್ಮ ಸಾಲವನ್ನು ಪಿತಾವಲ್ಲ ಅವರಿಗೆ ಮರುಪಾವತಿ ಮಾಡಬೇಕಿದ್ದ ವರ್ಷದಲ್ಲಿ, ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆಯನ್ನು ಎಬಿಸಿಎಲ್ ಆಯೋಜಿಸಿತ್ತು. ಆದರೆ ಇದು ಕೂಡಾ ದೊಡ್ಡ ಹಣಕಾಸು ವಿಪ್ಲವವಾಗಿ ಪರಿಣಮಿಸಿತು. ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಸೊಸೆ ಐಶ್ವರ್ಯ ರೈ ಹಾಗೂ ವಿಜಯ ಮಲ್ಯ ಸೇರಿದ್ದರು, ಬಚ್ಚನ್ ಸಾಲ ಪಾವತಿಸದ ಕಾರಣ ಒಂದು ವರ್ಷ ಸಾಲದ ಅವಧಿಯನ್ನು ವಿಸ್ತರಿಸಲಾಯಿತು. ಈ ವಿಸ್ತರಿತ ಅವಧಿ ಕೂಡಾ 1997ರ ಮಾರ್ಚ್ 31ರಂದು ಮುಗಿಯಿತು. ಇಷ್ಟಾಗಿಯೂ ಸಾಲ ಮರುಪಾವತಿ ಆಗಲೇ ಇಲ್ಲ. 1997ರ ಜುಲೈ 16ರಂದು ಬಚ್ಚನ್, ಪಿಥಾವಲ್ಲ ಅವರ ಪ್ಯಾಟ್‌ಚಾಮ್ ಇಂಟರ್‌ನ್ಯಾಷನಲ್ ಎಂಜಿನಿಯರಿಂಗ್ ಎಜಿ ಕಂಪೆನಿಗೆ 6.33 ದಶಲಕ್ಷ ಡಾಲರ್ ಮೊತ್ತ ಹಾಗೂ ಮಾಸಿಕ 15 ಶೇಕಡ ಬಡ್ಡಿ ಸಲ್ಲಿಸುವ ಪ್ರಾಮಿಸರಿ ನೋಟ್ ಬಿಡುಗಡೆ ಮಾಡಿದರು. 1997ರ ಆಗಸ್ಟ 15ರ ಒಳಗಾಗಿ ಹಣ ಪಾವತಿ ಮಾಡದಿದ್ದರೆ ಇದು ಜಾರಿಯಾಗಬಹುದು ಎಂದು ಸ್ಪಷ್ಟಪಡಿಸಲಾಗಿತ್ತು. ಬಚ್ಚನ್ ವಹಿವಾಟು ಕುದುರಿದರೂ ಸಾಲ ಬಾಕಿ ಹಾಗೆಯೇ ಉಳಿಯಿತು.

1999ರಲ್ಲಿ ಪಿಥವಲ್ಲ ತಮ್ಮ ಜರ್ಮನಿ ವಕೀಲರ ಮೂಲಕ ಬಚ್ಚನ್‌ಗೆ ನೋಟಿಸ್ ಕಳುಹಿಸಿ 8.5 ದಶಲಕ್ಷ ಡಾಲರ್ ಮರುಪಾವತಿಗಾಗಿ ಆಗ್ರಹಿಸಿದರು.
ಪಿಥವಲ್ಲ ವಿರುದ್ಧ ಪ್ರಕರಣದ ಬಗ್ಗೆ ತನಿಖೆ ನಡೆಸುವಾಗ ಮತ್ತು ಸಾಕ್ಷಿ ಹೇಳಿಕೆ ಪಡೆದಾಗ, ಬಚ್ಚನ್ ಅವರು ಮುಂಬೈ ಹೈಕೋರ್ಟ್‌ನಲ್ಲಿ ಪಿಥಾವಲ್ಲ ವಿರುದ್ಧ ದೂರು ದಾಖಲಿಸಿರುವುದು ಬೆಳಕಿಗೆ ಬಂತು. ಪ್ರಾಮಿಸರಿ ನೋಟ್ ರದ್ದತಿಗಾಗಿ ಹಿಂದಿರುಗಿಸುವಂತೆ ಆದೇಶಿಸಲು ಬಚ್ಚನ್ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪಿಥವಲ್ಲ ಅವರು ಬಚ್ಚನ್ ವಿರುದ್ಧ ಎರಡು ದಾವೆ ಹೂಡಿದರು. 2000ನೇ ಇಸ್ವಿಯಲ್ಲಿ 9 ದಶಲಕ್ಷ ಡಾಲರ್ ಮರುಪಾವತಿಸಲು ಆದೇಶಿಸುವಂತೆ ಹಾಗೂ 2002ರಲ್ಲಿ ಬಚ್ಚನ್ ವಿರುದ್ಧ ದಾಖಲೆ ತಿರುಚಿದ ಹಾಗೂ ವಂಚನೆ ಸಂಬಂಧ ಕ್ರಿಮಿನಲ್ ಮೊಕದ್ದಮೆಯೂ ಸಲ್ಲಿಕೆಯಾಯಿತು. 2000ದಲ್ಲಿ ಸಿವಿಲ್ ದಾವೆ ಹಾಗೂ 2002ರಲ್ಲಿ ಕ್ರಿಮಿನಲ್ ದಾವೆ ಹೂಡುವ ಮಧ್ಯದಲ್ಲಿ, ಇಬ್ಬರ ನಡುವೆ ಕುತೂಹಲಕರ ಚರ್ಚೆ ನಡೆದಿರುವುದು ಬೆಳಕಿಗೆ ಬಂತು.

2001ರ ಜುಲೈ 11ರಂದು ಪಿತಾವಲ್ಲ ಅವರು ಬಚ್ಚನ್ ಅವರನ್ನು ಮುಂಬೈ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ಭೇಟಿ ನಡೆದದ್ದು ಬಚ್ಚನ್ ದಾವೆ ಹೂಡಿದ ಕೆಲ ತಿಂಗಳ ಬಳಿಕ. ಈ ಸಭೆಯಲ್ಲಿ ಬಚ್ಚನ್ ಸಹೋದರ ಅಜಿತಾಬ್ ಬಚ್ಚನ್ ಮತ್ತು ಎಚ್.ನಾಗೇಶ್ವರನ್ ಎಂಬ ವ್ಯಕ್ತಿಯೂ ಇದ್ದರು.
ಪಿತಾವಲ್ಲ ಹಾಗೂ ಬಚ್ಚನ್ ಜತೆಗೆ ನಾಗೇಶ್ವರ ರಾವ್ ಹೊಂದಿದ್ದ ಸಂಬಂಧದ ಬಗ್ಗೆ ಹೆಚ್ಚೇನೂ ತಿಳಿದುಬರುವುದಿಲ್ಲ. ಇದನ್ನು ಪತ್ತೆ ಮಾಡಲು ಡಿಎನ್‌ಎ ಕೋರ್ಟ್ ದಾಖಲೆಗಳನ್ನು ಜಾಲಾಡಿಸಿತು. ಮುಂಬೈ ದಾದರ್‌ನ ವಸತಿ ಸಂಕೀರ್ಣವೊಂದರಲ್ಲಿ ಅವರು ವಾಸವಿರುವ ಬಗ್ಗೆ ವಿಳಾಸ ಪತ್ತೆಯಾಯಿತು. ಆದರೆ ಆ ಸಂಕೀರ್ಣಕ್ಕೆ ಬೀಗ ಜಡಿದು ಪೊಸೆಷನ್ ನೋಟಿಸ್ ಬಾಗಿಲಿಗೆ ನೇತುಹಾಕಲಾಗಿತ್ತು. ಎಂಟು ವರ್ಷಗಳಿಂದ ಅವರು ಇಲ್ಲಿಲ್ಲ ಎನ್ನುವುದನ್ನು ಭದ್ರತಾ ಸಿಬ್ಬಂದಿ ಹೇಳಿದರು. ಅಜಿತಾಭ್ ಬಚ್ಚನ್ ಅವರನ್ನು ಪ್ರಶ್ನಿಸಿದಾಗ, ನಾನು ಈಗಷ್ಟೇ ಶಸ್ತ್ರಚಿಕಿತ್ಸೆಯೊಂದರಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಈ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಜಾರಿಕೊಂಡರು.
ಈ ಸಭೆಯ ನಡಾವಳಿಗಳನ್ನು ದಾಖಲಿಸಿಕೊಂಡ ಪಿಥವಲ್ಲ ಅದನ್ನು ಮುಂಬೈನಲ್ಲಿ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಸಲ್ಲಿಸಿದರು. ಇದು ಬಚ್ಚನ್ ಸಾಲವನ್ನು ಚುಕ್ತಾ ಮಾಡುವ ಒಪ್ಪಂದಪತ್ರ. ಇದರ ಅನ್ವಯ ಅಜಿತಾಬ್ ಬಚ್ಚನ್ ಅವರು ಪಿಥವಲ್ಲ ಅವರಿಗೆ 3 ಕೋಟಿ ರೂಪಾಯಿ ಸಾಲ ಮತ್ತು ಬಡ್ಡಿ ಪಾವತಿಸಬೇಕು ಹಾಗೂ 10 ಕೋಟಿಯನ್ನು ಅಮಿತಾಭ್ ಬಚ್ಚನ್ ಹಣಕಾಸು ಸಂಸ್ಥೆಗಳಿಂದ ಪಡೆದು ಸಲ್ಲಿಸಬೇಕು. ಇದಕ್ಕಾಗಿ ಸೂರತ್‌ನಲ್ಲಿದ್ದ ಆದರ್ಶ ಕೆಮಿಕಲ್ ಅಂಡ್ ಫರ್ಟಿಲೈಸರ್ ಲಿಮಿಟೆಡ್ ಹಾಗೂ ಬರೋಡಾದಲ್ಲಿದ್ದ ಜಾನ್ಸನ್ ಎಲೆಕ್ಟ್ರಿಕ್ ಕಂಪೆನಿಯ ಆಸ್ತಿ ಅಡವು ಇಡಬೇಕು ಎಂದು ನಿರ್ಧರಿಸಲಾಗಿತ್ತು.

10 ಕೋಟಿಯನ್ನು ಪಡೆದ ಬಳಿಕ ಪಿತಾವಲ್ಲ ಅವರು ಮೂರು ಕೋಟಿ ರೂಪಾಯಿಯನ್ನು ಮತ್ತೆ ಅಮಿತಾಭ್ ಬಚ್ಚನ್‌ಗೆ ಹಿಂದಿರುಗಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಪಿಥವಲ್ಲ ಅವರು 9 ದಶಲಕ್ಷ ಡಾಲರ್ ಮೊತ್ತವನ್ನು ವಾಪಾಸು ಪಡೆಯುವ ಪ್ರಕ್ರಿಯೆ ಅಲ್ಲಿಂದ ಆರಂಭವಾಗಿತ್ತು ಎಂದು ಈ ದಾಖಲೆಯಿಂದ ತಿಳಿದುಬರುತ್ತದೆ.
ಈ ನಡಾವಳಿಯ ಕೊನೆಯ ಪ್ಯಾರಾದಲ್ಲಿ ಅಮಿತಾಭ್ ಬಚ್ಚನ್ ಅವರು 90 ಲಕ್ಷ ಡಾಲರ್ ಸಾಲ ಮರುಪಾವತಿ ಮಾಡುವ ವಿಧಿವಿಧಾನವನ್ನು ನಮೂದಿಸಿತ್ತು. 2001ರ ಜುಲೈ ಕೊನೆಯ ಒಳಗಾಗಿ 30 ಲಕ್ಷ ಡಾಲರ್ ಮರುಪಾವತಿ ಮಾಡಬೇಕಿತ್ತು. ಉಳಿದ ಎರಡು ಕಂತುಗಳನ್ನು ಕ್ರಮವಾಗಿ 2003ರ ಮಾರ್ಚ್ 31 ಹಾಗೂ 2005ರ ಮಾರ್ಚ್ 31ರೊಳಗೆ ಪಾವತಿಸಬೇಕಿತ್ತು.

ವಂಚನೆ ಆರೋಪ

ಆದರೆ 2002ರ ನವೆಂಬರ್ 1ರಂದು ಪಿಥವಲ್ಲ ಅವರು ಬಚ್ಚನ್ ವಿರುದ್ಧ ದಾಖಲೆ ತಿರುಚಿದ ಹಾಗೂ ವಂಚಿಸಿದ ಆರೋಪ ಮಾಡಿ ದಾವೆ ಹೂಡಲು ಕಾರಣವೇನು ಎನ್ನುವುದು ಖಚಿತವಾಗಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಾದ ಕೆಲವೇ ದಿನಗಳಲ್ಲಿ ಬಚ್ಚನ್ 10 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಪಿಥವಲ್ಲ ಅವರಿಗೆ ಪಾವತಿಸಿದ್ದರು. 2002ರ ನವೆಂಬರ್ 20 ಹಾಗೂ 23ರಂದು ತಲಾ ಐದು ಕೋಟಿಗಳ ಎರಡು ಪಾವತಿ ಮಾಡಲಾಗಿತ್ತು ಎಂದು ತೆರಿಗೆ ಅಧಿಕಾರಿಗಳಿಗೆ ತಿಳಿದುಬಂತು.

ಆದರೆ ಪಿಥವಲ್ಲ ಅವರ ದಾಖಲೆಗಳನ್ನು ಪರಿಶೀಲಿಸಿದಾಗ, 2003ರ ಮಾರ್ಚ್ 26ರಂದು 60 ಲಕ್ಷ ಪೌಂಡ್, ಸ್ವೀಕರಿಸಿರುವುದು ಬೆಳಕಿಗೆ ಬಂತು. 2003ರ ಏಪ್ರಿಲ್ 10ರಂದು ಮತ್ತೆ 4.65 ದಶಲಕ್ಷ ಪೌಂಡ್, 2003ರಲ್ಲಿ ವಿನಿಮಯ ದರಲ್ಲಿ 1.4 ದಶಲಕ್ಷ ಪೌಂಡ್ ಹಾಗೂ ಆರು ದಶಲಕ್ಷ ಪೌಂಡ್ ಸೇರಿ ಸುಮಾರು 9.6 ದಶಲಕ್ಷ ಪೌಂಡ್ ಪಾವತಿಯಾಗಿರುವುದು ತಿಳಿದುಬಂತು. ಇದು 2001ರ ಜುಲೈ 11ರ ಸಭೆಯ ನಡಾವಳಿಗಳಿಗೆ ಅನುಗುಣವಾಗಿ ಪಾವತಿಯಾದ ಹಣ.

ಕುತೂಲಹಕಾರಿ ಅಂಶವೆಂದರೆ, ಬಚ್ಚನ್ ವಿರುದ್ಧದ ಸಿವಿಲ್ ದಾವೆಯನ್ನು 2003ರ ಏಪ್ರಿಲ್ 3ರಂದು ವಾಪಾಸು ಪಡೆಯಲಾಯಿತು. ಏಪ್ರಿಲ್ 19ರಂದು ಕ್ರಿಮಿನಲ್ ದಾವೆಯನ್ನೂ ವಾಪಾಸು ಪಡೆಯಲಾಯಿತು. ಮುಂಗಡ ಠೇವಣಿಯಾಗಿ ಅಮಿತಾಭ್ ನೀಡಿದ್ದ 10 ಕೋಟಿ ರೂಪಾಯಿಯನ್ನು ಪಿತಾವಲ್ಲ 2013ರ ಏಪ್ರಿಲ್ 17ರಂದು ಮರುಪಾವತಿ ಮಾಡಿದ್ದರು. ಹೀಗೆ ಹಣಪಾವತಿ ಮಾಡಿರುವುದಕ್ಕೂ ಪ್ರಕರಣ ವಾಪಾಸು ಪಡೆದಿರುವುದಕ್ಕೂ ಇರುವ ಸಂಬಂಧ ಮತ್ತಷ್ಟು ಸಂಶಯಕ್ಕೆ ಕಾರಣವಾಯಿತು.
ಪಿಥವಲ್ಲ ಅವರ ಬ್ಯಾಂಕ್ ದಾಖಲೆಗಳಿಂದ ತಿಳಿದುಬರುವಂತೆ ಅವರು ಹಣ ಸ್ವೀಕರಿಸಿರುವುದು ಸ್ಪಷ್ಟ. ಆದರೆ ಬಚ್ಚನ್ ತಾವು ಹಣ ಮರುಪಾವತಿ ಮಾಡಿಯೇ ಇಲ್ಲ ಎಂದು ನಿರಾಕರಿಸಿದ್ದರು. ಆದರೆ ಪಿತಾವಲ್ಲ ಆದಾಯ ತೆರಿಗೆ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲೂ ಸಾಲ ನೀಡಿದ್ದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಬಚ್ಚನ್ ಅವರ ಸ್ಪಷ್ಟನೆ ಬಯಸಿ ಮಾಡಿದ ಇ-ಮೇಲ್‌ಗಳಿಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ.

ಇಲ್ಲಿ ಸಹಜವಾಗಿಯೇ ಏಳುವ ಪ್ರಶ್ನೆ ಎಂದರೆ, ಪಿತಾವಲ್ಲ ಅವರಿಂದ ಪಡೆದ ಸಾಲವನ್ನು ಅಮಿತಾಬ್ ಮರುಪಾವತಿ ಮಾಡಿಲ್ಲ ಎಂದಾದರೆ ಅದನ್ನು ಪಾವತಿಸಿದ್ದು ಯಾರು?
ಪಿಥವಲ್ಲ ಅವರ ಕಂಪೆನಿಯ ಖಾತೆಯ ಮಾಹಿತಿ ಪ್ರಕಾರ, ಮರೀಷಿಯಸ್ನ ಪಿಬಿಎಲ್ ಎಂಬ ಕಂಪೆನಿ 60 ಲಕ್ಷ ಪೌಂಡ್ ಪಾವತಿ ಮಾಡಿದೆ. ಇದು ಆಸ್ಟ್ರೇಲಿಯಾದ ಬಿಲಿಯಾಧಿಪತಿ ಜೇಮ್ಸ್ ಪ್ಯಾಕರ್ ಅವರಿಗೆ ಸೇರಿದ ಕಂಪೆನಿ. ಇದು ಭಾರತೀಯ ಕಂಪನಿಯ ಷೇರನ್ನು ಪಡೆದಿದ್ದು, 2000ದಲ್ಲಿ ಭಾರತೀಯ ದೂರದರ್ಶನದ ಕೆಲ ಸಮಯವನ್ನೂ ಖರೀದಿಸಿತ್ತು. ಎಬಿಸಿಎಲ್ ಕೂಡಾ ಹೀಗೆ ಡಿಡಿ ಸಮಯ ಖರೀದಿ ಮಾಡಿತ್ತು. 2000ನೇ ಇಸ್ವಿ ಸೆಪ್ಟೆಂಬರ್ 9ರ ದ ಹಿಂದೂ ವರದಿಯ ಪ್ರಕಾರ, ಅಮಿತಾಭ್ ಬಚ್ಚನ್ ಅವರು ಪ್ಯಾಕರ್ ಅವರ ಹೊಸ ಪಕ್ಷಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಭಾಗವಹಿಸಿದ್ದರು. ಇವರಿಬ್ಬರ ನಡುವಿನ ವ್ಯಾಪಾರ ಸಂಬಂಧ ಬಗ್ಗೆ ಬಹಿರಂಗಪಡಿಸಲು ಬಚ್ಚನ್ ನಿರಾಕರಿಸಿದ್ದರು.

ಮರೀಷಿಯಸ್‌ನ ಪಿಬಿಎಲ್ ನೀಡಿದ್ದ ಹಣವನ್ನು ಮುಂಬೈ ಮೂಲದ ಲಹರಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆ ಕಂಪನಿಗೆ ಪಾವತಿ ಮಾಡಿತ್ತು. ಲಹರಿ, ಶ್ರೀಪಾಲ್ ಮೊರಖಿಯಾ ಅವರಿಗೆ ಸೇರಿದ ಕಂಪೆನಿ. ಮೊರಾಖಿಯಾ ಸಾಲ ನೀಡುವ ವ್ಯಕ್ತಿ ಹಾಗೂ ಚಿತ್ರ ನಿರ್ದೇಶಕ. ಊರ್ಮಿಳಾ ಮಾತೋಂಡ್ಕರ್ ಅವರಿದ್ದ ನೈನಾ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದವರು. ಲಹರಿ ಕಂಪೆನಿಗೆ ಈ ಹಣವನ್ನು ಸುಬ್ರತಾ ರಾಯ್ ಮಾಲೀಕತ್ವದ ಸಹರ ಇಂಡಿಯಾ ಮೀಡಿಯಾ ಕಮ್ಯುನಿಕೇಶನ್ಸ್ ಲಿಮಿಟೆಡ್ ನೀಡಿತ್ತು ಎಂದು ಆದಾಯ ತೆರಿಗೆ ಮೂಲಗಳು ಹೇಳಿವೆ.

ಸುಬ್ರತಾ- ಬಚ್ಚನ್ ಹಳೆ ನಂಟು
ಸುಬ್ರತಾ ರಾಯ್ ಹಾಗೂ ಬಚ್ಚನ್ ನಡುವಿನ ವ್ಯಾಪಾರ ನಂಟು ಹಳೆಯದು. 1999ರ ಜೂನ್ 22ರಂದು ರೇಡಿಫ್ ನ್ಯೂಸ್ ವರದಿಯ ಪ್ರಕಾರ, ಸಾಲ ಮರುಪಾವತಿ ಮಾಡದ ಕಾರಣಕ್ಕೆ ಎಬಿಸಿಎಲ್ ಕಚೇರಿ ಮುಟ್ಟುಗೋಲು ಹಾಕಿಕೊಳ್ಳುವ ವಾರೆಂಟ್ ಬಂದ ತಕ್ಷಣ ಬಚ್ಚನ್ ಎಬಿಸಿಎಲ್ ಕಚೇರಿಯನ್ನು ಸಹಾರ ಇಂಡಿಯಾ ಮುಂಬೈ ಕಚೇರಿಗೆ ಸ್ಥಳಾಂತರಿಸಿದ್ದರು. 1998ರಲ್ಲಿ ಬಚ್ಚನ್ ಹಾಗೂ ಜಯಾ ಬಚ್ಚನ್ ದೇಶಾದ್ಯಂತ ಊರೂರು ಸುತ್ತಿ ಸಹಾರ ಕಂಪೆನಿಯ ನಾನ್ ಬ್ಯಾಂಕಿಂಗ್ ಯೋಜನೆಗಳನ್ನು ಪ್ರಚಾರ ಮಾಡಿದ್ದರು ಹಾಗೂ ಇದರ ಉತ್ತೇಜನಕ್ಕೆ ತಮ್ಮ ಭಾವಚಿತ್ರ ಬಳಸಿಕೊಳ್ಳಲು ಅನುಮತಿಯನ್ನೂ ನೀಡಿದ್ದರು. ಈ ಯೋಜನೆ ಮೂಲಕ ಸಹಾರ ಕಾನೂನು ಬಾಹಿರವಾಗಿ ಸಣ್ಣ ಹೂಡಿಕೆದಾರರಿಂದ 27 ಸಾವಿರ ಕೋಟಿ ಕ್ರೋಢೀಕರಿಸಿತ್ತು.

ಬಚ್ಚನ್ ಅವರ ಸಾಲವನ್ನು ಸಹಾರ ಮರುಪಾವತಿ ಮಾಡಿದ ಸಂಬಂಧ ಕೇಳಿದ ಪ್ರಶ್ನೆಗೆ ಸಹಾರ ವಕ್ತಾರರು ಉತ್ತರಿಸಲು ನಿರಾಕರಿಸಿ, ಅದನ್ನು ಬಚ್ಚನ್ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಆದಾಯ ತೆರಿಗೆ ಮೂಲಗಳ ಪ್ರಕಾರ ಈ ಪಾವತಿ ಸರಣಿ ಕೊನೆಗೆ ಸಹಾರಕ್ಕೆ ಬಂದು ನಿಲ್ಲುತ್ತದೆ.

ಸಹಾರ ಕಂಪೆನಿಯ 2004ರ ವಾರ್ಷಿಕ ವರದಿ ಪ್ರಕಾರ, ’ಆಕ್ಟರ್ ರೈಟ್’ ಅನ್ನು 60 ಕೋಟಿ ಎಂದು ನಮೂದಿಸಲಾಗಿದೆ. ಈ ಆಕ್ಟರ್ ರೈಟನ್ನು ಲಹರಿ ಪ್ರೊಡಕ್ಷನ್ಸ್‌ನಿಂದ ಪಡೆಯಲಾಗಿದೆ ಎನ್ನಲಾಗಿತ್ತು. ಆದರೆ ತೆರಿಗೆ ಅಧಿಕಾರಿಗಳ ಪ್ರಕಾರ, ಈ ಪ್ರಶ್ನಾರ್ಥಕ ಆಕ್ಟರ್ ಅಮಿತಾಬ್ ಬಚ್ಚನ್. 2000ನೇ ಇಸ್ವಿ ಜೂನ್ 28ರಂದು ಲಾಹಿರಿ ಪ್ರೊಡಕ್ಷನ್ಸ್ ಹಾಗೂ ಅಮಿತಾಬ್ ಅವರ ನಡುವೆ ಒಪ್ಪಂದವಾಗಿ, ಬಚ್ಚನ್ ಅವರ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಲಹರಿ ಖಾತೆಯಲ್ಲಿ ಕೂಡಾ 60 ಲಕ್ಷ ರೂಪಾಯಿಯನ್ನು ಸಹಾರ ಸಂಸ್ಥೆ ಪಾವತಿ ಮಾಡಿರುವುದಕ್ಕೆ ದಾಖಲೆ ಇದೆ.

ಪಿಬಿಎಲ್ ಪಾತ್ರ

ಲಹರಿ ಪ್ರೊಡಕ್ಷನ್ಸ್ ಬ್ಯಾಂಕ್ ಖಾತೆ ಪರೀಶೀಲಿಸಿದಾಗ, ಸಹಾರದಿಂದ ಹಣ ಪಾವತಿಯಾದ ತಕ್ಷಣ ದನ್ನು ಪಿಬಿಎಲ್‌ಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಒಮ್ಮೆ 4.6 ದಶಲಕ್ಷ ಪೌಂಡ್ ಹಾಗೂ ಮತ್ತೊಮ್ಮೆ 1.4 ದಶಲಕ್ಷ ಪೌಂಡ್. ಇದು ಅಮಿತಾಬ್ ಪಿತಾವಲ್ಲ ಅವರಿಗೆ ನೀಡಬೇಕಿದ್ದ ಹಣಕ್ಕೆ ಸಮ. ತೆರಿಗೆ ಇಲಾಖೆ ಮೂಲಗಳ ಪ್ರಕಾರ, ಲಹರಿ ಪ್ರೊಡಕ್ಷನ್ಸ್‌ನ ವಾಸ್ತವ ಮಾಲೀಕರು ಪಿಬಿಎಲ್ ಮರೀಷಿಯಸ್ ಪ್ರೈವೇಟ್ ಲಿಮಿಟೆಡ್. ಹೆಸರು ಬದಲಾವಣೆಗೆ ಮುನ್ನ ಲಹರಿ ಪ್ರೊಡಕ್ಷನ್ಸನ್ನು ಎಚ್‌ಎಫ್‌ಸಿಎಲ್ ಎಂದು ಕರೆಯಲಾಗುತ್ತಿತ್ತು. ಇದು ಜೇಮ್ಸ್ ಪ್ಯಾಕರ್ ಅವರ ಸಹ ಮಾಲೀಕತ್ವದ ಕಂಪನಿ. ಪಿಬಿಎಲ್ ಮರೀಷಿಯಸ್ ಈ ಹಣವನ್ನು ಸ್ವೀಕರಿಸಿದ ಮರುದಿನವೇ ಪಿತಾವಲ್ಲ ಅವರ ಕಂಪೆನಿಗೆ ವರ್ಗಾಯಿಸಿದೆ. ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಬಚ್ಚನ್ ಅವರ ಹಣ ಮರುಪಾವತಿಗೆ ಸಹಾರ, ಪಿಬಿಎಲ್ ಕಂಪನಿಯನ್ನು ವಾಹಿನಿಯಾಗಿ ಬಳಸಿಕೊಂಡಿದೆ. ಬಚ್ಚನ್ ಅವರ ಹಕ್ಕನ್ನು ಖರೀದಿಸಿದಂತೆ ತೋರಿಸಿ ಈ ಪ್ರಹಸನ ನಡೆದಿದೆ. ಇದು ಖಂಡಿತವಾಗಿಯೂ ಬಚ್ಚನ್ ಅವರ ಆದಾಯ. ಆದರೆ ಗೌರವಯುತ ನಾಗರಿಕನಾಗಿ ಅವರು ಹೀಗೆ ಮಾಡಿದ್ದು ಸರಿಯಲ್ಲ. ಅವರು ತೆರಿಗೆ ತಪ್ಪಿಸಿಕೊಂಡಿದ್ದಾರೆ ಹಾಗೂ ಇದು ಅಕ್ರಮ"

ತೆರಿಗೆ ಅಧಿಕಾರಿಗಳು ಪಿಥವಲ್ಲ ಅವರ ಸಾಕ್ಷ ಪಡೆದಿರುವ ವೇಳೆ ಕೂಡಾ ಅವರು ಬಚ್ಚನ್ ಅವರ ಹಣವನ್ನು ಪಿಬಿಎಲ್ ಮೂಲಕ ಮರುಪಾವತಿ ಮಾಡಿದ್ದನ್ನು ಖಚಿತಪಡಿಸಿದ್ದರು. ಹಣ ಪಾವತಿಯಾದ ಬಳಿಕ ಬಚ್ಚನ್ ಅವರ ಪ್ರಾಮಿಸರಿ ನೋಟನ್ನು ಅವರು ಹೇಳಿದ ವ್ಯಕ್ತಿಗೆ ಲಂಡನ್‌ನಲ್ಲಿ ನೀಡಿದ್ದಾಗಿಯೂ ಸ್ಪಷ್ಟಪಡಿಸಿದ್ದರು.

ಕೃಪೆ : dnaindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News