ಈ ಐದು ಸೂತ್ರಗಳನ್ನು ನೆನಪಿಟ್ಟು, ಮನೆಕಟ್ಟು
ಮನೆ ಕಟ್ಟಿನೋಡು, ಮದುವೆ ಮಾಡಿನೋಡು ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಮನೆಕಟ್ಟುವಾಗ ಎಷ್ಟು ಅನುಭವ ಇದ್ದರೂ ಕಡಿಮೆಯೇ. ಇದಕ್ಕೆ ತೀರಾ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗೆಗೂ ಗಮನ ಹರಿಸಬೇಕಾಗುತ್ತದೆ. ಮನೆಯ ಗಾತ್ರ, ರಚನೆಯ ವಿಧಾನ, ಮನೆ ನಿರ್ಮಾಣವಾಗುವ ನಗರ, ಬಳಸಬೇಕಾದ ಸಲಕರಣೆಗಳು ಮತ್ತಿತರ ಅಂಶಗಳು ವೆಚ್ಚದ ಮೇಲೆ ನೇರ ಪರಿಣಾಮ ಬೀರುವಂಥವು. ನಿಮ್ಮ ಕಟ್ಟಡ ಯೋಜನೆಗೆ ಅನುಗುಣವಾಗಿ ವೆಚ್ಚವನ್ನು ನಿರ್ಧರಿಸಲು ಸಹಾಯಕವಾಗುವ ಕೆಲ ಅಂಶಗಳು ಇಲ್ಲಿವೆ ನೋಡಿ.
* ಒಟ್ಟು ನಿರ್ಮಾಣ ವೆಚ್ಚ ನಿರ್ಧರಿಸುವಲ್ಲಿ ಮನೆಯ ಸುತ್ತಳತೆ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಆಕೃತಿ ಕೂಡಾ ವೆಚ್ಚ ನಿರ್ಧರಣೆಯ ಪ್ರಮುಖ ಅಂಶ. ಸಂಕೀರ್ಣ ಆಕೃತಿಯಾಗಿದ್ದಲ್ಲಿ ಪ್ರತಿ ಚದರ ಅಡಿಯ ವೆಚ್ಚ ಸಹಜವಾಗಿಯೇ ಹೆಚ್ಚುತ್ತದೆ. ಮನೆಯ ಸುತ್ತಳತೆಯಲ್ಲಿ ಗ್ಯಾರೆಜ್ ಸೇರಿದಂತೆ ಒಟ್ಟು ಪ್ರಮಾಣದ ಸ್ಥೂಲ ಅಂದಾಜು ಸಿಗುತ್ತದೆ.
* ಆದರ್ಶ ಮನೆಗಳು ಇತರ ಐಷಾರಾಮಿ ಮನೆಗಳಿಗಿಂತ ತುಲನಾತ್ಮಕವಾಗಿ ಅಗ್ಗ. ನಿಮ್ಮ ವಿಶಿಷ್ಟತೆಗೆ ಅನುಗುಣವಾದ ಮನೆ ನಿರ್ಮಿಸುವುದಾದರೆ, ವೆಚ್ಚ ಅಧಿಕವಾಗುತ್ತದೆ. ಇದು ಇತರ ಆದರ್ಶ ಮನೆಗಳಷ್ಟೇ ಗಾತ್ರದ್ದಾದರೂ ವೆಚ್ಚ ದುಪ್ಪಟ್ಟಾಗುತ್ತದೆ. ಉದಾಹರಣೆಗೆ ವೃತ್ತಾಕಾರದ ಒಂದು ಕೊಠಡಿ ನಿರ್ಮಿಸುವುದಾದಲ್ಲಿ ಅದರ ಹೊಗಾಂಗಣ ಹಾಗೂ ಒಳಾಂಗಣ ವಿನ್ಯಾಸದ ವೆಚ್ಚ ಅಧಿಕ.ಜತೆಗೆ ಬಾಗಿಲು, ಕಿಟಕಿ, ಅಡುಗೆ ಮನೆ, ಸ್ನಾನಗೃಹ, ಫ್ಲೋರಿಂಗ್ ಕೂಡಾ ವೆಚ್ಚ ಹೆಚ್ಚುವಂತೆ ಮಾಡುತ್ತದೆ.
* ಒಟ್ಟು ಸ್ಥಳಾವಕಾಶ ಕೂಡಾ ಪ್ರಮುಖವಾಗುತ್ತದೆ. ಅಂದರೆ ಮುಖ್ಯ ಛಾವಣಿಯಡಿ ಬರುವ ಎಲ್ಲವೂ ಇದರಲ್ಲಿ ಸೇರುತ್ತದೆ. ಕಟ್ಟಡದ ಗೋಡೆಯೂ ಸಏರಿದಂತೆ ಸಮಗ್ರವಾಗಿ ನಿರ್ಮಾಣವಾಗಬೇಕಾದ ಪ್ರಮಾಣ. ಆದರೆ ಇದರಲ್ಲಿ ಬೇಸ್‌ಮೆಂಟ್, ಪೋರ್ಚ್ ಅಥವಾ ಗ್ಯಾರೆಜ್ ವೆಚ್ಚ ಸೇರುವುದಿಲ್ಲ. ಅದನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಬೇಕು. ಸಾಮಾನ್ಯವಾಗಿ ದೊಡ್ಡಕಟ್ಟಡ ಹೆಚ್ಚು ವೆಚ್ಚದಾಯಕ.
* ಬಾಲ್ಕನಿಗಳು ಖರೀದಿದಾರರ ಅಪೇಕ್ಷೆಗಳಲ್ಲೊಂದು. ಇದು ಬೆಲೆಯಲ್ಲಿ ಸೇರುತ್ತದೆ. ಆದರೆ ಬೇಸ್‌ಮೆಂಟ್, ಗ್ಯಾರೇಜ್ ಹಾಗೂ ಪೋರ್ಚ್‌ಗಳು ಲಿವಿಂಗ್ ಏರಿಯಾದಲ್ಲಿ ಸೇರದಿದ್ದರೂ ಹೆಚ್ಚು ವೆಚ್ಚವನ್ನು ತರುತ್ತವೆ.
* ನಿರ್ಮಾಣದಲ್ಲಿ ಬಳಸುವ ಪರಿಕರಗಳಾದ ಇಟ್ಟಿಗೆ, ಸಿಮೆಂಟ್, ಮರಳು ಮತ್ತಿತರ ಅಂಶಗಳ ಬೆಲೆ ಕೂಡಾ ನಗರದಿಂದ ನಗರಕ್ಕೆ ಬದಲಾಗುತ್ತವೆ. ಕೂಲಿ ವೆಚ್ಚ ಕೂಡಾ ಬದಲಾಗುತ್ತದೆ. ಮಹಾನಗರಗಳಲ್ಲಿ ಇವುಗಳ ವೆಚ್ಚ ಅಧಿಕ.
ವೆಚ್ಚ ಇಳಿಸಲು ಸೂತ್ರಗಳು
* ಮನೆ ನಿರ್ಮಾಣ ಪ್ರದೇಶಕ್ಕೆ ಪ್ರತಿದಿನ ಭೇಟಿ ನೀಡಿ, ಗುತ್ತಿಗೆದಾರರು ಹಾಗೂ ಕಾರ್ಮಿಕರು ದುರ್ಬಳಕೆ ಮಾಡದಂತೆ ನೋಡಿಕೊಳ್ಳಿ.
* ಗೋಡೆ ನಿರ್ಮಾಣಕ್ಕೆ ಗಮನ ಕೊಡಿ. ಉತ್ತಮವಾಗಿ ಗೋಡೆ ಕಟ್ಟಿದರೆ ಕಡಿಮೆ ಸಿಮೆಂಟ್ ಹಾಗೂ ಕಡಿಮೆ ವೆಚ್ಚ ತಗುಲುತ್ತದೆ.
* ಆಯತಾಕಾರದ ಕೊಠಡಿಗಳಿಗೆ ಕಡಿಮೆ ಉಕ್ಕಿನ ಸರಳುಗಳು ಸಾಕು.
* ಪ್ರಬಲ ಮೆಟ್ಟಲುಗಳಿಗೆ ಸಾದರಹಳ್ಳಿ ಕಲ್ಲುಗಳನ್ನು ಬಳಸಿ. ಇದಕ್ಕೆ ಎರಡು ಆರ್‌ಸಿಸಿ ಬೀಮ್‌ಗಳಷ್ಟೇ ಸಾಕು.
* ಟೆರೇಸ್‌ಗೆ ತುಂಡು ಇಟ್ಟಿಗೆ ಹಾಗು ಕಲ್ಲುಗಳನ್ನು ಬಳಸಿ. ಇದನ್ನು ಆವರಣಗೋಡೆಗೂ ಬಳಸಬಹುದು. ವೆಚ್ಚ ಸಹಜವಾಗಿಯೇ ಕಡಿಮೆಯಾಗುತ್ತದೆ.