ಗಾಂಧಿವಾದಿ, ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿಗೆ@:98

Update: 2016-04-09 18:27 GMT

ಜನಸಾಮಾನ್ಯರ ಪರವಾಗಿ, ಪ್ರಭುತ್ವದ ವಿರುದ್ಧವಾಗಿ ಸದಾ ಹೋರಾಟ ಮಾಡುವ, ಪ್ರತಿಭಟನೆ, ರ್ಯಾಲಿ, ಜಾಥಾ, ಧರಣಿ, ಕಾಲ್ನಡಿಗೆಗಳಲ್ಲಿ ಕಾಣಿಸಿಕೊಳ್ಳುವ ನಮ್ಮ ನಡುವಿನ ಹಿರಿಯ ಗಾಂಧಿವಾದಿ ಡಾ. ಹಾರೋಹಳ್ಳಿ ಶ್ರೀನಿವಾಸಯ್ಯ ಅಯ್ಯರ್ ದೊರೆಸ್ವಾಮಿ ಅವರಿಗೆ ಇಂದು 98ರ ಹರೆಯ.
ಕರ್ನಾಟಕದ ಹಿರಿಯ ಸ್ವಾತಂತ್ರ ಹೋರಾಟಗಾರ ಎಂದೇ ಖ್ಯಾತಿ ಪಡೆದಿರುವ ಡಾ.ಎಚ್.ಎಸ್.ದೊರೆಸ್ವಾಮಿ ಅವರು ಜನಿಸಿದ್ದು, ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ, 1918 ಎಪ್ರಿಲ್ 10 ರಂದು. ಐದನೆ ವಯಸ್ಸಿನಲ್ಲಿಯೇ ಪ್ರೀತಿಯ ತಂದೆ ಶ್ರೀನಿವಾಸಯ್ಯ ಅಯ್ಯರ್ ಅವರನ್ನು ಕಳೆದುಕೊಂಡ ಅವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾರೋಹಳ್ಳಿಯಲ್ಲಿ ಮುಗಿಸಿ ತದನಂತರ ಹೆಚ್ಚಿನ ಶಿಕ್ಷಣ ಪಡೆಯಲು ಅಜ್ಜನೊಂದಿಗೆ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದರು. ಬಳಿಕ ಬಿಎಸ್ಸಿ ಪದವಿಯನ್ನು ಸೆಂಟ್ರಲ್ ಕಾಲೇಜಿನಲ್ಲಿ ಪಡೆದರು.

 ಗಾಂಧಿನಗರದ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲವು ತಿಂಗಳು ಸೇವೆ ಸಲ್ಲಿಸಿದರು. ಬಳಿಕ ಮಹಾತ್ಮ ಗಾಂಧಿಯವರ ಕ್ವಿಟ್ ಇಂಡಿಯಾ ಕರೆಗೆ ಓಗೊಟ್ಟು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿ ಸೆರೆವಾಸ ಅನುಭವಿಸಿದರು. ಜೀವನೋಪಾಯಕ್ಕಾಗಿ ಮೈಸೂರಿನಲ್ಲಿ ಟಿಂಬರ್ ಡಿಪೋ, ಪುಸ್ತಕ ಪ್ರಕಾಶನ ನಡೆಸಿದರು. ನಂತರ ಕರ್ನಾಟಕ ಏಕೀಕರಣ ಹೋರಾಟಕ್ಕೆ ಮರಳಿದರು. ಜನರ ಕಲ್ಯಾಣಕ್ಕಾಗಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ‘ಪೌರವಾಣಿ’ ಮತ್ತು ‘ಪೌರವೀರ’ ಪತ್ರಿಕೆಯ ಸಂಪಾದಕರಾಗಿ ದುಡಿದರು. ಪ್ರಜಾಸತ್ತಾತ್ಮಕ ಸರಕಾರವನ್ನು ಸ್ಥಾಪಿಸಲು ಶ್ರಮಿಸಿದರು. ಜನಪ್ರತಿನಿಧಿಗಳ ಹಗಲು ನಾಟಕಕ್ಕೆ ಬೇಸತ್ತು ಹೋರಾಟದ ಹಾದಿಗೆ ಬಿದ್ದರು. ಮಹಾತ್ಮ ಗಾಂಧಿಯ ಪ್ರಭಾವ: ದೊರೆಸ್ವಾಮಿ ಅವರು 14ನೆ ವಯಸ್ಸಿನಲ್ಲಿಯೇ ಗಾಂಧಿ ಅವರ ಪುಸ್ತಕ ‘ಮೆ ಅರ್ಲಿ ಲೈಫ್’ನಿಂದ ಸ್ವಾತಂತ್ರ ಹೋರಾಟದ ಕಡೆ ಪ್ರಭಾವಿತರಾದರು. ಮುಂದೆ ಗಾಂಧೀಜಿ ಅವರನ್ನೇ ಅನುಸರಿಸಿ ಖಾದಿಧಾರಿಗಳಾಗಿ, ಸ್ವಾತಂತ್ರ ಹೋರಾಟದಲ್ಲಿ ಮಾತ್ರವಲ್ಲದೆ, ಸ್ವಾತಂತ್ರಾ ನಂತರವು ಸಾಕಷ್ಟು ಸಂದರ್ಭಗಳಲ್ಲಿ ಸತ್ಯ-ನ್ಯಾಯ- ಸಮಾನತೆಗಳ ಪರವಾಗಿ ಹೋರಾಟ ಕೈಗೊಂಡು ಆದರ್ಶ ಬದುಕಿಗೆ ಮಾದರಿಯಾದರು. ಇತಿಹಾಸಪ್ರಸಿದ್ಧ ಮೈಸೂರಿನ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿ, ಅಲ್ಲಿನ ಜಾತೀಯತೆಗೆ ಬೇಸರ ವ್ಯಕ್ತಪಡಿಸಿ ಹೊರ ನಡೆದರು. ಆದರೆ ತಮ್ಮ ಹೋರಾಟದ ಕಿಚ್ಚನ್ನು ಕಳೆದುಕೊಳ್ಳದೆ, ವಿನೋಬಾಜಿ ಅವರ ಭೂದಾನ ಪ್ರತಿಭಟನೆಯಲ್ಲಿ ಭಾಗಿಯಾದರು. ಅಲ್ಲಿಂದ ಇಲ್ಲಿಯವರೆಗೆ... ರಾಜ್ಯಾದ್ಯಂತ ತಿರುಗಾಡಿ, ಜನಪರ ಚಳವಳಿಗಳೊಂದಿಗೆ ಗುರುತಿಸಿಕೊಂಡ ದೊರೆಸ್ವಾಮಿ, ಹೋರಾಟವನ್ನೇ ನಿತ್ಯದ ಬದುಕನ್ನಾಗಿಸಿಕೊಂಡವರು. ಇತ್ತೀಚಿನ ಸರಕಾರಿ ಭೂಕಬಳಿಕೆದಾರರ ವಿರುದ್ಧ ಹಾಗೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತಡೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ದೊರೆಸ್ವಾಮಿಯವರ ನಾಯಕತ್ವವನ್ನು ಬೆಂಬಲಿಸಿ ಹಲವಾರು ಕನ್ನಡಪರ, ನ್ಯಾಯಪರ ಸಂಘಟನೆಗಳು ಜೊತೆಗೂಡಿವೆ. ದೊರೆಸ್ವಾಮಿಯವರ ಹೋರಾಟವನ್ನು ಬೆಂಬಲಿಸಿವೆ. ಎಚ್.ಎಸ್.ದೊರೆಸ್ವಾಮಿ ಅವರು 97 ವರ್ಷಗಳ ತುಂಬು ಜೀವನದಲ್ಲಿ ಪಾಲ್ಗೊಂಡಿರುವ ಹೋರಾಟಗಳಿಗೆ ಲೆಕ್ಕವಿಲ್ಲ. ಇವರು ಕಂಡಿರುವ ಕಷ್ಟಗಳಿಗೆ ಕೊನೆ ಇಲ್ಲ. ಆದರೂ, ಇವತ್ತಿಗೂ ಅದೇ ಉತ್ಸಾಹ, ಅದೇ ಹೋರಾಟದ ಕಿಚ್ಚು ದೊರೆಸ್ವಾಮಿಯವರಲ್ಲಿದೆ. ಬಡವರು, ಮಹಿಳೆಯರು, ಅಸಹಾಯಕರ ಪರವಾಗಿ ದನಿ ಎತ್ತುವ, ಅನ್ಯಾಯ ಕಂಡಲ್ಲಿ ಪ್ರತಿಭಟಿಸುವ ದೊರೆಸ್ವಾಮಿಯವರು ಮುಂದಿನ ಜನಾಂಗಕ್ಕೊಂದು ಮಾದರಿ.

Writer - ಆರ್.ಸಮೀರ್, ದಳಸನೂರು

contributor

Editor - ಆರ್.ಸಮೀರ್, ದಳಸನೂರು

contributor

Similar News