ತಾಜ್ಯ ಸಂಸ್ಕರಣೆ ಬಾಲಕನ ಸಾಧನೆ

Update: 2016-04-09 18:40 GMT

  ಕಸ ವಿಲೇವಾರಿ ,ತ್ಯಾಜ್ಯ ಸಂಸ್ಕರಣೆ, ಇದು ಇಂದು ಎಲ್ಲಾ ನಗರ, ಪಟ್ಟಣ, ಗ್ರಾಮಗಳಲ್ಲಿ ಕಂಡು ಬರುವ ದೈನಂದಿನ ಸಮಸ್ಯೆ, ಸಮರ್ಪಕ ಕಸ ವಿಲೇವಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಏನೆಲ್ಲಾ ಕ್ರಮ ಕೈಗೊಂಡರೂ, ವೈಜ್ಞಾನಿಕ ಘಟಕ ನಿರ್ಮಾಣಕ್ಕೆ ಸ್ಥಳದ ಕೊರತೆ, ಸ್ಥಳೀಯರ ಅಸಹಕಾರದಿಂದ ಇಂದಿಗೂ ಸಂಪೂರ್ಣವಾಗಿ ಸಮಸ್ಯೆ ಬಗೆಹರಿದಿಲ್ಲ. ಶಾಶ್ವತ ಪರಿಹಾರ ಸಿಕ್ಕಿಲ್ಲ.
 ಕಸವನ್ನು ಮನೆಯಲ್ಲಿಯೇ ಸಮರ್ಪಕ ವಾಗಿ ವಿಲೇವಾರಿ ಮಾಡಿದರೆ, ತ್ಯಾಜ್ಯದ ಸಮಸ್ಯೆ ಬಹುತೇಕ ಕಡಿಮೆಯಾಗಲು ಸಾಧ್ಯ, ಅತ್ಯಂತ ಸರಳ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಎಲ್ಲರೂ ಬಯಸುವ ವಿಧಾನ. ಈ ನಿಟ್ಟಿನಲ್ಲಿ ಉಡುಪಿಯ ಕುಂದಾಪುರದ ಮೋವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿಜೇತ ಆಚಾರ್ಯ ಅವರ ಸಾಧನೆ ಅನುಕರಣೀಯ.
ಕಸದ ವಿಲೇವಾರಿಗೆ ಹಲವು ವಿಧಾನಗಳಿದ್ದರೂ ಇತ್ತೀಚಿನ ಅತ್ಯಂತ ಸರಳ, ಮಿತವ್ಯಯ ಯೋಜನೆ ಪೈಪ್ ಕಾಂಪೋಸ್ಟ್. ಈ ಯೋಜನೆಯನ್ನು ಈತನ ಶಾಲೆಯಲ್ಲಿ ಅಳವಡಿಸಿದ್ದು, ಇದರಿಂದ ಪ್ರೇರಿತನಾದ ಈತ , ತನ್ನ ಮನೆಯವರನ್ನು ಒಪ್ಪಿಸಿ ತಾನೇ ಮನೆಯ ಹಿಂದೆ ಪೈಪ್ ಕಾಂಪೋಸ್ಟ್ ವಿಧಾನ ಅಳವಡಿಸಿದ್ದಾನೆ.
  ತನ್ನ ಮನೆಯ ಅಂಗಳದಲ್ಲಿ 2 ತಿಂಗಳ ಹಿಂದೆ , ಒಂದೂವರೆ ಅಡಿ ಆಳದಲ್ಲಿ ಪಿವಿಸಿ ಪೈಪ್ ನೆಟ್ಟು, ಅದರಲ್ಲಿ ಪ್ರತಿದಿನ ತನ್ನ ಮನೆಯಲ್ಲಿನ ತ್ಯಾಜ್ಯಗಳಾದ ತರಕಾರಿ ಸಿಪ್ಪೆ, ಉಳಿದ ಆಹಾರ ಪದಾರ್ಥ, ದ್ರವ ಪದಾರ್ಥಗಳನ್ನು ಈ ಪೈಪಿ ನಲ್ಲಿ ಸಂಗ್ರಹಿಸಿದ್ದು, ಪ್ರಸ್ತುತ ಸದ್ರಿ ಪೈಪ್ ತುಂಬಿದ್ದು, ಅದರಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ ತಯಾರಾಗಿದೆ. ಈ ಗೊಬ್ಬರವನ್ನು ತಮ್ಮ ಮನೆಯಲ್ಲಿ ತೆಂಗಿನ ಮರಗಳಿಗೆ ಹಾಕಲು ನಿರ್ಧರಿಸಿದ್ದಾನೆ, ಜಿಲ್ಲೆಯಲ್ಲಿ ಈ ಸಾಧನೆ ಮಾಡಿದ ಪ್ರಥಮ ಬಾಲಕ ಈತ, ಇದರಿಂದ ಈತನ ಮನೆಯ ಸಮೀಪ ಉಂಟಾಗುತ್ತಿದ್ದ ತ್ಯಾಜ್ಯ ಮತ್ತು ತ್ಯಾಜ್ಯದ ವಾಸನೆ ಸಂಪೂರ್ಣವಾಗಿ ನಿಂತಿದೆ, ಈ ಪೈಪ್ ಕಾಂಪೋಸ್ಟ್ ವಿಧಾನ ಅಳವಡಿಸಲು ಈತ ಮಾಡಿದ ವೆಚ್ಚ ಎಷ್ಟು ಗೊತ್ತೇ, ಕೇವಲ 60 ರೂಪಾಯಿ.
ಈತ ತನ್ನ ಮನೆಯಲ್ಲಿ 2 ಪೈಪ್ ಕಾಂಪೋಸ್ಟ್ ಅಳವಡಿಸಿದ್ದು, ಈಗ ಒಂದರಲ್ಲಿ ಗೊಬ್ಬರ ತಯಾರಾಗಿರುವ ಕಾರಣ, ಈತನ ಸಾಧನೆ ವೀಕ್ಷಿಸಲು ಅಧಿಕಾರಿಗಳು ಆಗಮಿಸಲಿದ್ದು, ಅಲ್ಲಿಯವರೆಗೆ ಅದನ್ನು ತೆರೆಯಲು ಸಾಧ್ಯವಾಗಿರದ ಕಾರಣ, ಅದನ್ನು ವಿಲೇವಾರಿಯ ಮಾಡುವ ತನಕ ಮತ್ತೊಂದನ್ನು ಬಳಸುತ್ತಿದ್ದಾನೆ.
ಈತನ ಸಾಧನೆ ಗುರುತಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಇತ್ತೀಚೆಗೆ ನಡೆದ ಸ್ವಚ್ಛತಾ ಸಪ್ತಾಹದಲ್ಲಿ ಅಭಿನಂದಿಸಿದ್ದಾರೆ.
  ಪೈಪ್ ಕಾಂಪೋಸ್ಟ್ ಅಳವಡಿಸುವ ವಿಧಾನ- 6 ಇಂಚು ದಪ್ಪ 6 ಅಡಿ ಎತ್ತರದ ಸಿಮೆಂಟ್ ಅಥವಾ ಮಣ್ಣಿನ ಅಥವಾ ಪಿವಿಸಿ ಪೈಪ್ ನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು, ಪೈಪ್‌ನ ಒಳಗೆ ಕಸ ಹಾಕುವ ಮೊದಲು 1 ಕೆಜಿ ಬೆಲ್ಲ ಮತ್ತು ಸೆಗಣಿ ನೀರನ್ನು ಪೈಪ್‌ನ ಒಳಗೆ ಹಾಕಬೇಕು (ಇದರಿಂದ ಜೈವಿಕ ಹುಳುಗಳು ಉತ್ಪತ್ತಿಯಾಗುತ್ತವೆ), ನಂತರ ಮನೆಯಲ್ಲಿ ದಿನ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸವನ್ನು ಹಾಕಬೇಕು. ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್ ಒಳಗೆ ಹಾಕಬಾರದು, ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಪೈಪ್‌ನ ಒಳಗೆ ಹಾಕ ಬೇಕು, ಪೈಪ್‌ನ ಮೇಲ್ಭಾಗವನ್ನು ಮರದ ತುಂಡು ಅಥವಾ ಹಂಚಿನಿಂದ ಮುಚ್ಚಬೇಕು. ಶಾಲಾ ಬಾಲಕ ವಿಜೇತ ಆಚಾರ್ಯನ ಈ ಸಾಧನೆ ಹಲವರಿಗೆ ಪ್ರೇರಣೆಯಾಗಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ವಿಜೇತ ಆಚಾರ್ಯ ನಿಗೆ ಅಭಿನಂದನೆ ಸಲ್ಲಿಸಲು ದೂ.ಸಂ. 9663754739ನ್ನು ಸಂಪರ್ಕಿಸಬಹುದಾಗಿದೆ.

ಪೈಪ್ ಕಾಂಪೋಸ್ಟ್ ಉಪಯೋಗ
  ತ್ಯಾಜ್ಯದ ಮೂಲದಲ್ಲಿಯೇ ನಿರ್ವಹಣೆ ಸಾಧ್ಯ, ಕಡಿಮೆ ಜಾಗ, ಕಡಿಮೆ ಖರ್ಚು, ಸರಳ ರೀತಿಯಲ್ಲಿ ಕಸ ನಿರ್ವಹಣೆ ಸಾಧ್ಯ, ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಬಳಸ ಬಹುದು, ಅರೋಗ್ಯ ಪೂರ್ಣ ಪರಿಸರ ನಿರ್ಮಾಣ ಸಾಧ್ಯ, ಪರಿಸರ ಮಾಲಿನ್ಯ ತಪ್ಪುತ್ತದೆ. ಉಡುಪಿ ಜಿಲ್ಲೆಯಲ್ಲಿ ಪೈಪ್ ಕಾಂಪೋಸ್ಟ್ ಬಗ್ಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಇದು ಅನುಷ್ಠಾನ ಗೊಂಡಿದೆ, ಅಲ್ಲದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಸಹ ಈ ವಿಧಾನವನ್ನು ತಮ್ಮ ಮನೆಯಲ್ಲಿ ಅಳವಡಿಸಿದ್ದಾರೆ.

Writer - ಬಿ.ಶಿವಕುಮಾರ್, ಉಡುಪಿ.

contributor

Editor - ಬಿ.ಶಿವಕುಮಾರ್, ಉಡುಪಿ.

contributor

Similar News