ಕೇರಳದಲ್ಲಿ ಪಟಾಕಿ ದುರಂತಗಳು ಹೊಸದೇನಲ್ಲ

Update: 2016-04-10 18:33 GMT

ಕೊಲ್ಲಂ ಜಿಲ್ಲೆಯ ಪರವೂರಿನ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ರವಿವಾರ ಬೆಳಗಿನ ಜಾವ ಸಿಡಿಮದ್ದು ಪ್ರದರ್ಶನದ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತವು ರಾಷ್ಟ್ರಾದ್ಯಂತ ಆಘಾತವನ್ನುಂಟು ಮಾಡಿದೆ. ಪಟಾಕಿ ದುರಂತಗಳು ಕೇರಳಕ್ಕೆ ಹೊಸದೇನಲ್ಲ, ಇವು ಈ ರಾಜ್ಯದಲ್ಲಿ ಮಾಮೂಲು ಘಟನೆಗಳಾಗಿಬಿಟ್ಟಿವೆ. ಕಳೆದ ದಶಕದಲ್ಲಿ ಕೇರಳ ದಲ್ಲಿ ಪಟಾಕಿಗಳಿಂದ ಸಂಭವಿಸಿದ 5 ಅಗ್ನಿ ಅವಘಡಗಳ ವಿವರ ಇಲ್ಲಿದೆ:
 ಮಾರಾಡು ಕೊಟ್ಟಾರಂ ಭಗವತಿ ದೇವಸ್ಥಾನ (ಜನವರಿ,2016)
ಕೊಚ್ಚಿಯ ಮಾರಾಡುವಿನ ಕೊಟ್ಟಾರಂ ಭಗವತಿ ದೇವಸ್ಥಾನಕ್ಕೆ ಹೊಂದಿಕೊಂಡಿದ್ದ ಪಟಾಕಿ ತಯಾರಿಕೆ ಘಟಕವೊಂದರ ಗೋದಾಮಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ ಮಹಿಳೆಯೋರ್ವಳು ಬಲಿಯಾಗಿ ಸುತ್ತಲಿನ ಹಲವಾರು ಮನೆಗಳಿಗೆ ವ್ಯಾಪಕ ಹಾನಿಯುಂಟಾಗಿತ್ತು. ಪ್ರತಿವರ್ಷ ಫೆಬ್ರವರಿಯಲ್ಲಿ ನಡೆಯುವ ದೇವಸ್ಥಾನದ ಉತ್ಸವ ಸಂದರ್ಭದಲ್ಲಿ ಬಾಣಬಿರುಸುಗಳ ಪ್ರದ ರ್ಶನ ಪ್ರಸಿದ್ಧಿಯನ್ನು ಪಡೆದಿದ್ದು,ಇದು ಜಿಲ್ಲೆಯಲ್ಲಿಯೇ ಅತೀ ದೊಡ್ಡದೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಂದು ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ದುರಂತ ಸಂಭವಿಸಿತ್ತು.
 ಪಣ್ಣಿಯಂಕುರಿಸಿ ಪಟಾಕಿ ಕಾರ್ಖಾನೆ (ಮಾರ್ಚ್,2013)
ಈ ಪಟಾಕಿ ತಯಾರಿಕೆ ಘಟಕದಲ್ಲಿ ಸಂಭವಿಸಿದ್ದ ಭೀಕರ ಸ್ಫೋಟದಲ್ಲಿ ಏಳು ಜನರು ಮೃತಪಟ್ಟಿದ್ದರು. ಸ್ಫೋಟಕ್ಕೆ ನಿಖರ ಕಾರಣವಿನ್ನೂ ಗೊತ್ತಾಗಿಲ್ಲ. ಘಟನೆಯ ಬಳಿಕ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.
 ಅಥನಿಯ ಪಟಾಕಿ ಘಟಕ (ಡಿಸೆಂಬರ್, 2011)
ತ್ರಿಶೂರು ಬಳಿಯ ಅಥನಿಯ ಪಟಾಕಿ ತಯಾರಿಕೆ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಆರು ಜನರು ಬಲಿಯಾಗಿದ್ದರು. ಈ ಘಟಕವು ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿತ್ತೆನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

 ಶೋರನಪುರ (ಫೆಬ್ರವರಿ, 2011)

ಶೋರನಪುರ ಬಳಿಯ ಪಟಾಕಿ ತಯಾರಿಕೆ ಘಟಕದಲ್ಲಿ ಸ್ಫೋಟದಿಂದಾಗಿ 13 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಘಟಕದ ಪರವಾನಿಗೆ 2008ರಲ್ಲಿಯೇ ಅಂತ್ಯಗೊಂಡಿತ್ತು.
 ತ್ರಿಶೂರು (ಮೇ 2006)

ತ್ರಿಶೂರು ಪೂರಂ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದ ಘಟಕ ದಲ್ಲಿ ಸಂಭವಿಸಿದ್ದ ಸ್ಫೋಟಕ್ಕೆ ನಾಲ್ವರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದರು.

ಇನ್ನೂ ಹಿಂದಿನ ಕೆಲವು ಅವಘಡಗಳು
1989ರಲ್ಲಿ ಕಂದಶಾಮಕಡವು ಚರ್ಚ್ ಉತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ 12 ಜನರು ಸಾವನ್ನಪ್ಪಿದ್ದರು.
1988ರಲ್ಲಿ ತ್ರಿಪುನಿತುರಾದಲ್ಲಿ ಪಟಾಕಿಗಳಿದ್ದ ಶೆಡ್‌ಗೆ ಬೆಂಕಿ ತಗುಲಿ 10 ಜನರು ಮೃತಪಟ್ಟಿದ್ದರು.
1984 ರಲ್ಲಿ ಕಂದಶಾಮಕಡವು ಚರ್ಚ್ ಉತ್ಸವದ ವೇಳೆ ಸಂಭವಿಸಿದ್ದ ಪಟಾಕಿ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದರು.
1952ರಲ್ಲಿ ಬೆಳಗಿನ ಜಾವ ಶಬರಿಮಲೆ ದೇವಸ್ಥಾನದಲ್ಲಿ ಸಂಭವಿಸಿದ್ದ ಪಟಾಕಿ ಸ್ಫೋಟಕ್ಕೆ 68 ಜೀವಗಳು ಬಲಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News