ಬೇಸಿಗೆಯಲ್ಲಿ ಬೇತಾಳದಂತೆ ಕಾಡುವ ಚಿಕನ್ ಪಾಕ್ಸ್
ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಡುವ ಚಿಕನ್ ಪಾಕ್ಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು, ವಾರಿಸೆಲ್ಲಾ ಜೋಸ್ಟರ್ ಎಂಬ ವೈರಸ್‌ನಿಂದ ಈ ರೋಗ ಹರಡುತ್ತದೆ. ಸಿತಾಳೆ ಸಿಡುಬು, ಸಿತಾಳೆ, ಚಿಕ್ಕಮ್ಮ ರೋಗ, ಗನಗಲಿ ಎಂಬುದಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಹೆಚ್ಚಾಗಿ ಚಿಕನ್ ಪಾಕ್ಸ್ ಎಂದೇ ಜನಪ್ರಿಯವಾಗಿದೆ. ಆಂಗ್ಲ ಭಾಷೆಯಲ್ಲಿ ವಾರಿಸೆಲ್ಲಾ ಎಂದೂ ಕರೆಯುತ್ತಾರೆ. ಹೆಚ್ಚು ಮಾರಣಾಂತಿಕವಲ್ಲದ, ಸುಲಭವಾಗಿ ಗುರುತು ಹಚ್ಚಬಲ್ಲ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ವಿಶೇಷ ಚಿಕಿತ್ಸೆ ಇಲ್ಲದೆಯೇ ವಾಸಿಯಾಗುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ, 15 ವರ್ಷದೊಳಗಿನ ಮಕ್ಕಳಲ್ಲಿ ವಿಶೇಷ ವಾಗಿ ಕಾಣಿಸಿಕೊಳ್ಳುತ್ತದೆ. ಹಾಗೆಂದ ಮಾತ್ರಕ್ಕೆ ದೊಡ್ಡವರಲ್ಲಿ ಕಾಣಬಾರದೆಂದಿಲ್ಲ. ದೊಡ್ಡವರಲ್ಲಿ ಕಾಣಿಸಿಕೊಂಡಲ್ಲಿ ಈ ರೋಗ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು. ಗರ್ಭಿಣಿಯರಲ್ಲಿ ಈ ರೋಗದ ಸೋಂಕು ತಗಲಿದರೆ ಗರ್ಭಸ್ತ ಶಿಶುವಿಗೂ ಹರಡುವ ಸಾಧ್ಯತೆ ಇದೆ.
ರೋಗದ ಲಕ್ಷಣಗಳು ಏನು?
ಆರಂಭದಲ್ಲಿ ಎಲ್ಲಾ ವೇರಲ್ ಸೋಂಕಿನಲ್ಲಿರುವಂತೆ ಜ್ವರ ಬರುತ್ತದೆ. ಜ್ವರದ ಜೊತೆಗೆ ಹಸಿವಿಲ್ಲದಿರುವುದು, ಸುಸ್ತು, ತಲೆನೋವು, ಸ್ನಾಯು ಸೆಳೆತ ಇರುತ್ತದೆ. ಒಂದೆರಡು ದಿನದ ಬಳಿಕ ತುರಿಕೆ ಇರುವ, ಸಣ್ಣ ಸಣ್ಣ ಕೆಂಪು ಚುಕ್ಕೆಗಳು, ಬಾಯಿ, ಅಂಗಳ ಹೊಟ್ಟೆ, ಬೆನ್ನು, ಹೆಗಲು, ಜನನಾಂಗ, ಕಣ್ಣು ರೆಪ್ಪೆಯಲ್ಲಿ ಕಾಣಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಈ ಗುಳ್ಳೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕ್ರಮೇಣ ಸೋಂಕು ತಗಲಿ ಕೀವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಸರಿ ಸುಮಾರು 150ರಿಂದ 300ರ ವರೆಗಿನ ಗುಳ್ಳೆಗಳು ಇರಬಹುದು. ಈ ಗುಳ್ಳೆಗಳ ಸಂಖ್ಯೆ ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ರೋಗದ ತೀವ್ರತೆಯ ಮೇಲೆ, ಗುಳ್ಳೆಗಳ ಸಾಂದ್ರತೆ ನಿರ್ಧರಿತವಾಗುತ್ತದೆ. ಈ ಗುಳ್ಳೆಗಳು 4 ರಿಂದ 6 ದಿನಗಳಲ್ಲಿ ಒಡೆಯಲಾರಂಭಿಸಿ ಒಣಗಲು ತೊಡಗುತ್ತದೆ. ಈ ಹಕ್ಕಳೆಗಳನ್ನು ತೆಗೆಯಬಾರದು. ಅದು ತನ್ನಿಂತಾನೇ ಒಣಗಿ ಉದುರಿ ಹೋಗುತ್ತದೆ. ತುರಿಕೆ ಇದೆ ಎಂದು ಉಗುರುಗಳಿಂದ ಹಕ್ಕಳೆಗಳನ್ನು ತೆಗೆದ್ದಲ್ಲಿ ಸೋಂಕು ತಗಲುವ ಸಾಧ್ಯತೆ ಇದೆ. ವೈರಾಣು ದೇಹಕ್ಕೆ ಸೇರಿದ ಬಳಿಕ 10 ರಿಂದ 20 ದಿನಗಳ ಒಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮತ್ತು ಜ್ವರ ಬಂದು ಎರಡು ವಾರಗಳಲ್ಲಿ ಎಲ್ಲಾ ಹಕ್ಕಳೆಗಳು ಉದುರಿ ಹೋಗಿ ಮೊದಲಿನ ಸಹಜ ಸ್ಥಿತಿಗೆ ಬರುತ್ತದೆ. ಹೆಚ್ಚಿನ ರೋಗಿಗಳಲ್ಲಿ ಈ ರೋಗ ತನ್ನಿಂತಾನೇ ವಾಸಿಯಾಗುತ್ತದೆ. ಆದರೆ ಕೆಲವೊಮ್ಮೆ ತೀವ್ರ ಸ್ವರೂಪಕ್ಕೆ ತಿರುಗಿ ಮಿದುಳು ಬಾವು, ನ್ಯೂಮೋನಿಯ (ಪಪ್ಪುಸ ರೋಗ), ಚರ್ಮದಲ್ಲಿ ರಕ್ತಸ್ರಾವ ಮತ್ತು ಅಪಸ್ಮಾರ ಉಂಟಾಗುವ ಸಾಧ್ಯತೆಯೂ ಇದೆ.
ಪತ್ತೆ ಹಚ್ಚುವುದು ಹೇಗೆ? :
ಸಾಮಾನ್ಯವಾಗಿ ರೋಗಿಯ ರೋಗದ ಲಕ್ಷಣಗಳನ್ನು ಮತ್ತು ದೇಹದ ಮೇಲಿನ ಗುಳ್ಳೆಗಳಿಂದಲೇ ಚಿಕನ್ ಪಾಕ್ಸ್ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಗುಳ್ಳೆಗಳಿಂದ ತೆಗೆದ ದ್ರವವನ್ನು ಜ್ಯಾಂಕ್ ಸ್ಮಿಯರ್ ಪರೀಕ್ಷೆ ಮತ್ತು ಪ್ಲೋರೋಸೆಂಟ್ ಪ್ರತಿ ಬಂಧಕಗಳನ್ನು ಪತ್ತೆ ಹಚ್ಚಿ ದಢೀಕರಿಸಲಾಗುತ್ತದೆ. ಅದೇ ರೀತಿ ಇ್ಕ ಎಂಬ ಪರೀಕ್ಷೆಯ ಮುಖಾಂತರ ಐಎ ಮತ್ತು ಐಎಎ ಎಂಬ ಪ್ರತಿ ಬಂಧಕಗಳ ಸಾಂದ್ರತೆಯನ್ನು ಪತ್ತೆ ಹಚ್ಚಿ, ರೋಗದ ತೀವ್ರತೆ ಮತ್ತು ಸ್ವರೂಪವನ್ನು ಪತ್ತೆ ಹಚ್ಚಬಹುದಾಗಿದೆ.
ಚಿಕಿತ್ಸೆ ಹೇಗೆ?
ರೋಗವನ್ನು ಸಾಮಾನ್ಯವಾಗಿ ರೋಗದ ಲಕ್ಷಣಗಳನ್ನು ಕಡಿಮೆಯಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಕೇಂದ್ರೀಕರಿ ಸಲಾಗಿದೆ. ಇದೊಂದು ವೈರಾಣು ಕಾಯಿಲೆಯಾಗಿರುವ ಕಾರಣ ದಿಂದ ಚಿಕಿತ್ಸಿಸಲು ನಿರ್ದಿಷ್ಟ ಔಷಧಿಗಳಿಲ್ಲ. ಆದರೆ ವೈರಾಣು ನಿರ್ಬಂಧಕ ಔಷಧಿಯಾದ ಎಸೈಕ್ಲೊವಿರ್ ಎಂಬ ಔಷಧಿ ನೀಡಿ ರೋಗದ ತೀವ್ರತೆ ಕಡಿಮೆ ಮಾಡಿ, ಗುಳ್ಳೆಗಳ ಸಾಂದ್ರತೆ ಕಡಿಮೆಯಾಗುವಂತೆ ಮಾಡಲಾಗುತ್ತದೆ. ಜ್ವರವನ್ನು ಪ್ಯಾರಾಸಿ ಟಮಾಲ್ ಔಷಧಿ ನೀಡಿ ಮತ್ತು ಒದ್ದೆ ಹಣೆ ಪಟ್ಟಿ ಹಚ್ಚಿ ಕಡಮೆ ಮಾಡಲಾಗುತ್ತದೆ. ಸಾಕಷ್ಟು ದ್ರವಾಹಾರ ನೀಡಿ ದೇಹಕ್ಕೆ ನಿರ್ಜಲೀಕರಣವಾಗದಂತೆ ಮುಂಜಾಗರೂಕತೆ ವಹಿಸಲಾಗುತ್ತದೆ. ಸಾಮಾನ್ಯವಾಗಿ ರೋಗಿಗಳನ್ನು ಮನೆಯಿಂದ ಹೊರಗೆ ಹೋಗದಂತೆ ಮಾಡಿ, ರೋಗ ಹರಡದಂತೆ ಎಚ್ಚರ ವಹಿಸಲಾಗುತ್ತದೆ. ಹಾಗೆಯೇ ಬಿಸಿಲಿಗೆ ಹೋಗಿ, ರೋಗಿ ಮತ್ತಷ್ಟು ಬಳಲದಂತೆ ಎಚ್ಚರ ವಹಿಸಲಾಗುತ್ತದೆ. ಅದೇ ರೀತಿ ರೋಗಿಯ ಉಗುರುಗಳನ್ನು ಚಿಕ್ಕದಾಗಿಸಿ, ಚೊಕ್ಕದಾಗಿಸಿ ತುರಿಕೆಯಿಂದಾಗಿ ಸೋಂಕು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಅದೇ ರೀತಿ ಕೈಗವಚ (ಗ್ಲೌಸ್) ಹಾಕಿ, ಗುಳ್ಳೆಗಳನ್ನು ಕೆರೆಯದಂತೆ ಮಾಡಿ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಕೈಗವಚ ಧರಿಸಿದ್ದಲ್ಲಿ ತುರಿಕೆಯ ತೀವ್ರತೆ ಕಡಿಮೆಯಾಗಿ ಕಲೆ ಉಳಿಯುವ ಸಾಧ್ಯತೆ ಇಲ್ಲ. ಅದೇ ರೀತಿ ಗುಳ್ಳೆಗಳಿಗೆ ಕ್ಯಾಲಾಮೈನ್ ಎಂಬ ದ್ರಾವಣವನ್ನು ಬಳಸಲಾಗುತ್ತದೆ. ಈ ದ್ರಾವಣ ತುರಿಕೆಯನ್ನು ಕಡಿಮೆ ಮಾಡಿ, ಗುಳ್ಳೆಗಳು ಬೇಗನೆ ಒಣಗುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೆ ಆಸ್ಪರಿನ್, ಬ್ರೂಫೆನ್ ಮಾತ್ರೆಯನ್ನು ಬಳಸಬಾರದು. ಪ್ಯಾರಾಸಿಟಮಾಲ್ ಔಷಧಿ ಮಾತ್ರ ಬಳಸಬೇಕು. ಕ್ಯಾಲಾಮೈನ್ ದ್ರಾವಣ ಸಿಗದಿದ್ದಲ್ಲಿ ಉಗುರು ಬೆಚ್ಚಗಿನ ಶುದ್ಧ ನೀರಿನಲ್ಲಿ ದೇಹವನ್ನು ಶುಚಿಗೊಳಿಸಿ, ಗುಳ್ಳೆಗಳಿಗೆ ಸೋಂಕು ತಗಲದಂತೆ ನೋಡಿಕೊಳ್ಳಬೇಕು. ಸೋಂಕು ತಗಲಿದಲ್ಲಿ ಕಲೆಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜ್ವರ ವಿಪರೀತವಾಗಿ, ಅಪಸ್ಮಾರ, ವಾಂತಿ, ಸುಸ್ತು ನಿಶಕ್ತಿ, ಪ್ರಜ್ಞಾಹೀನತೆ ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿರಿ, ಯಾವುದೇ ಹಳ್ಳಿ ಮದ್ದು, ಲೇಪನಗಳನ್ನು ಮಾಡಿದ್ದಲ್ಲಿ ಗುಳ್ಳೆಗಳಿಗೆ ಸೋಂಕು ತಗಲಿ, ರೋಗದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದೇಹದ ಚರ್ಮದ ಸ್ವಚ್ಛತೆಯನ್ನು ಸರಿಯಾಗಿ ಕಾಪಾಡಿಕೊಂಡಲ್ಲಿ ಸೋಂಕು ತಗಲುವ ಸಾಧ್ಯತೆ ಇಲ್ಲದಾಗಿ, ಗುಳ್ಳೆಗಳು ಬೇಗನೆ ಒಣಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಪಿಸೈಕ್ಲೊವಿರ್ ಮಾತ್ರೆಯನ್ನು 12 ವರ್ಷದ ಕೆಳಗಿನ ಮಕ್ಕಳಲ್ಲಿ ಹೆಚ್ಚಾಗಿ ಉಪಯೋಗಿಸುವುದಿಲ್ಲ. ಯುವಕರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ರೋಗ ನಿರೋಧಕ ಶಕ್ತಿ ಕುಂದಿದ ವ್ಯಕ್ತಿಗಳಲ್ಲಿ ಮತ್ತು ಗರ್ಭಿಣಿ ಸ್ತ್ರೀಯಲ್ಲಿ ಈ ಔಷಧಿ ಉಪಯೋಗಿಸಿ ರೋಗದ ತೀವ್ರತೆಯನ್ನು ಕಡಿಮೆ ಮಾಡಲಾಗುತ್ತದೆ. ಅದೇ ರೀತಿ ದೇಹದ ತುರಿಕೆಯನ್ನು ಕಡಿಮೆ ಮಾಡಲು ಆಂಟಿ ಹಿಸ್ಟಮಿನ್ ಎಂಬ ಔಷಧಿ ನೀಡಿ ತುರಿಕೆ ಕಡಿಮೆಯಾಗಿಸುತ್ತಾರೆ ಮತ್ತು ಈ ಔಷಧಿಯಿಂದ ಸ್ವಲ್ಪ ಮತ್ತು ಬಂದಂತಾಗಿ, ಸುಲಭವಾಗಿ ನಿದ್ರೆ ಬರಲು ಸಹಾಯಕಾರಿಯಾಗುತ್ತದೆ. ನೆನಪಿರಲಿ ಒಂದು ರೋಗ ಇನ್ನೊಂದು ರೋಗಕ್ಕೆ ಮೂಲ ಎನ್ನುವ ಮಾತು, ಈ ಚಿಕನ್ ಪಾಕ್ಸ್ ರೋಗಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ. ಶೇ.40ರಷ್ಟು ಮಂದಿ ಸರ್ಪಸುತ್ತು ಎಂಬ ಇನ್ನೊಂದು ಚರ್ಮ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರಲ್ಲಿ, ರೋಗ ನಿರೋಧಕ ಶಕ್ತಿ ಕುಂದಿದವರಲ್ಲಿ, ಕ್ಯಾನ್ಸರ್ ರೋಗಿಗಳಲ್ಲಿ ಮತ್ತು ಮಧುಮೇಹ ರೋಗ ಇರುವವರಲ್ಲಿ ಹೆಚ್ಚಾಗಿರುತ್ತದೆ.
ಕೊನೆ ಮಾತು: ಮಾನವನಿಗೆ ಮಾತ್ರ ಕಾಡುವ ಈ ರೋಗ, ಚಿಂಪಾಂಜಿ ಮತ್ತು ಗೋರಿಲ್ಲಾಗಳಿಗೂ ಬರುವ ಸಾಧ್ಯತೆ ಇದೆ. ಯಾಕಾಗಿ ಈ ಚಿಕನ್ ಪಾಕ್ಸ್ ಎಂಬ ಹೆಸರು ಬಂದಿದೆ ಎಂಬುದಕ್ಕೆ ಸರಿಯಾದ ವಿವರಣೆ ಇನ್ನೂ ದೊರೆತಿಲ್ಲ. ಕೋಳಿಗೂ ಈ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಈ ರೋಗದಲ್ಲಿ ದೇಹದಲ್ಲಿ ಮೂಡುವ ಗುಳ್ಳೆಗಳು ಅಥವಾ ಚುಕ್ಕೆಗಳು 5ರಿಂದ 10 ಮಿಲಿಮೀಟರ್ ಅಗಲವಿದ್ದು, ಕಡ್ಲೆಕಾಳು ಬೀಜ (Chick Peas) ಹೋಲುತ್ತದೆ ಎಂಬ ಕಾರಣದಿಂದಲೂ ಈ ಹೆಸರು ಬಂದಿರುವ ಸಾಧ್ಯತೆಯೂ ಇದೆ. ಆದರೆ ಒಂದಂತೂ ಸತ್ಯ, ರೋಗದ ತೀವ್ರತೆ ಬಹಳ ಸೌಮ್ಯವಾಗಿರುವ ಕಾರಣದಿಂದ ಈ ಹೆಸರು ಬಂದಿರುವ ಸಾಧ್ಯತೆಯೂ ಇದೆ. ಅದೇ ರೀತಿ ಕೋಳಿಗಳು ಆಹಾರ ತಿನ್ನುವ ಸಮಯದಲ್ಲಿ ಆಹಾರವನ್ನು ಕುಕ್ಕಿದಾಗ ಉಂಟಾಗುವ ರೀತಿಯಲ್ಲಿ ( Chicken Pecks)
ದೇಹದಲ್ಲಿ ಗುಳ್ಳೆಗಳು ಒಡೆದು ಹಕ್ಕಳೆಗಳಟ್ಟದಾಗ ಕಾಣುತ್ತದೆ ಎಂಬ ಕಾರಣದಿಂದಲೂ ಚಿಕನ್ ಪಾಕ್ಸ್ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗುವ ಕಾರಣದಿಂದಲೂ ಚೈಲ್ಡ್ ಪಾಕ್ಸ್ ಬದಲಾಗಿ ಚಿಕನ್ ಪಾಕ್ಸ್ ಎಂಬುದಾಗಿ ಕರೆದಿರುವ ಸಾಧ್ಯತೆಯೂ ಇಲ್ಲದಿಲ್ಲ. ಹೆಸರು ಏನೇ ಇರಲಿ ಈ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗ, ಬೇಸಗೆ ಕಾಲದಲ್ಲಿ ವಿಪರೀತ ಸೆಕೆಯ ನಡುವೆ, ಬೆಂಬಿಡದ ಬೇತಾಳನಂತೆ ಶತಮಾನಗಳಿಂದ ಮಕ್ಕಳನ್ನು ಕಾಡುತ್ತಿದೆ. ಬೇಸಗೆಯ ಪರೀಕ್ಷೆ ಕಾಲದಲ್ಲಿ ಬಂದರಂತೂ, ತಾಯಂದಿರಿಗೆ ಮತ್ತು ಮಕ್ಕಳಿಗೆ ಬಹಳ ಆತಂಕ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ನಿಟ್ಟಿನಲ್ಲಿ ನಮಗೆ ಬೇಕಾದ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡು ಬೇಸಿಗೆ ಪರೀಕ್ಷೆಯ ಸಮಯದಲ್ಲಿ ರೋಗದಿಂದ ಭಯ ಮುಕ್ತರಾಗಿರುವುದಲ್ಲಿಯೇ ಜಾಣತನ ಅಡಗಿದೆ. ಜಾಗತಿಕವಾಗಿ ವಿಶ್ವದ ಎಲ್ಲೆಡೆ ಕಾಣಸಿಗುವ ಈ ರೋಗ ಉಷ್ಣತೆ ಜಾಸ್ತಿಯಿರುವ ಜಾಗಗಳಲ್ಲಿ, ಈ ರೋಗದ ಸಾಂದ್ರತೆ ಹೆಚ್ಚಿರುತ್ತದೆ. 2013ರಲ್ಲಿ ಸುಮಾರು 140ಮಿಲಿಯನ್ ಮಂದಿ ಚಿಕನ್ ಪಾಕ್ಸ್ ರೋಗದಿಂದ ಬಳಲಿದ್ದರು. ಲಸಿಕೆ ಬಂದ ಬಳಿಕ ಈ ರೋಗದ ಸಂಖ್ಯೆ ಶೀಘ್ರವಾಗಿ ಇಳಿಮುಖವಾಯಿತು (ಸುಮಾರು 90%). ಸುಮಾರು 60,000ರದಲ್ಲಿ ಒಬ್ಬರು ಈ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಇದೆ. 1,990ರಲ್ಲಿ 9000 ಮಂದಿ ಮತ್ತು 2013ರಲ್ಲಿ 7,000ರ ಮಂದಿ ಮತ್ತು 2015ರಲ್ಲಿ 6,500 ಮಂದಿ ವಿಶ್ವದಾದ್ಯಂತ ಸತ್ತಿದ್ದಾರೆ ಎಂಬುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಭಾರತದಲ್ಲಿ ಸುಮಾರು ವರ್ಷ ಒಂದರಲ್ಲಿ ಸುಮಾರು 1 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಸುಲಭವಾಗಿ ತಡೆಗಟ್ಟಬಹುದಾದ, ಅತೀ ಶೀಘ್ರವಾಗಿ ಹರಡುವ, ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಅಗತ್ಯವಿಲ್ಲದ, ಸುಲಭವಾಗಿ ಗುರುತಿಸಬಲ್ಲ, ತನ್ನಿಂತಾನೆ ಗುಣವಾಗುವ ಹಾಗೂ ಕೆಲವೇ ದಿನಗಳಲ್ಲಿ (ಒಂದೆರಡು ವಾರಗಳಲ್ಲಿ) ಸಂರ್ಪೂಣವಾಗಿ ಗುಣವಾಗುವ ಮತ್ತು ಲಸಿಕೆಯಿಂದ ತಡೆಗಟ್ಟಬಹುದಾದ ಈ ರೋಗವನ್ನು, ಲಸಿಕೆ ಹಾಕಿಸಿಕೊಂಡು ಬೇಸಗೆಯ ಕಾಲದಲ್ಲಿ ರೋಗದ ಕಾಟದಿಂದ ಮುಕ್ತರಾಗಿಸಿ ರೋಗದಿಂದ ಉಂಟಾಗುವ ನೋವು, ಯಾತನೆ ತುರಿಕೆಗಳಿಂದ ವಿಮುಕ್ತರಾಗುವುದರಲ್ಲಿಯೇ ಜಾಣತನ ಅಡಗಿದೆ.
ಲಸಿಕೆ ಹಾಕಬೇಕೆ?
ಈ ಕಾಯಿಲೆ ಬರದಂತೆ ತಡೆಯಲು ಒಂದೇ ಉಪಾಯ ಎಂದರೆ, ರೋಗ ನಿರೋಧಕ ಲಸಿಕೆ ಬಳಸುವುದು. ಲಸಿಕೆ ಹಾಕುವ ಪ್ರಮಾಣ, ಸಮಯ ಬಹಳ ಮುಖ್ಯ. ಈ ಲಸಿಕೆಯನ್ನು ಮಕ್ಕಳು ಮತ್ತು ದೊಡ್ಡವರಿಗೂ ಹಾಕಬಹುದು. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಿತಾಳ ಸಿಡುಬು ರೋಗಿ ಜೊತೆ ಸಂಪರ್ಕ ಹೊಂದಿದ ಕುಟುಂಬಿಕರಿಗೂ ಉಪಯುಕ್ತವಾಗಬಲ್ಲದು. 12 ವರ್ಷದ ಕೆಳಗಿನ ಮಕ್ಕಳಿಗೆ 5 ವರ್ಷಗಳ ಅಂತರದಲ್ಲಿ ಎರಡು ಡೋಸ್ ಆವಶ್ಯಕತೆ ಇರುತ್ತದೆ. ಮೊದಲ ಡೋಸ್ 12-15 ತಿಂಗಳಿಗೆ ನೀಡಬೇಕು, 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಮತ್ತು ವಯಸ್ಕರಿಗೆ ಒಂದು ತಿಂಗಳ ಅಂತರದಲ್ಲಿ ಎರಡು ಡೋಸ್ ಸಾಕಾಗುತ್ತದೆ. ರೋಗಿಯ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿ ಸಂಪರ್ಕ ಹೊಂದಿದ 72 ಗಂಟೆಗಳ ಒಳಗೆ ಮುಂಜಾಗ್ರತೆಗಾಗಿ ಈ ಲಸಿಕೆಯನ್ನು ಪಡೆಯಬೇಕು. ಈ ಲಸಿಕೆ ಇಂಜೆಕ್ಷನ್ ರೂಪದಲ್ಲಿದ್ದು, ಕನಿಷ್ಠ 10 ವರ್ಷಗಳ ಕಾಲ ರೋಗ ಬರದಂತೆ ತಡೆಯುತ್ತದೆ ಮತ್ತು ಶೇ.98ರಷ್ಟು ಪರಿಣಾಮಕಾರಿಯಾಗಿದೆ. ಲಸಿಕೆ ಹಾಕಿದರೂ ಕಾಯಿಲೆ ಬರುವ ಸಾಧ್ಯತೆ 2%ರಷ್ಟು ಇರುತ್ತದೆ. ವಿಪರೀತ ಜ್ವರ, ಕ್ಷಯರೋಗಿಗಳು, ಗರ್ಭಿಣಿಯರಿಗೆ, ಎದೆಹಾಲು ಉಣಿಸುವ ತಾಯಂದಿರಿಗೆ ಈ ಲಸಿಕೆ ನೀಡುವುದಿಲ್ಲ. ಅದೇ ರೀತಿ ಲಸಿಕೆ ಪಡೆದ ಕನಿಷ್ಠ 3 ತಿಂಗಳವರೆಗೆ ಗರ್ಭ ಧರಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಲಸಿಕೆ ಬಹಳ ಸುರಕ್ಷಿತವಾಗಿದ್ದು, ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಲಸಿಕೆ ಹಾಕಿ ರೋಗ ನಿರೋಧಕ ಶಕ್ತಿ ಬರುವಂತೆ ಮಾಡುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಈ ಲಸಿಕೆ ಬಗ್ಗೆ ಹೆಚ್ಚಿನ ತಿಳುವಳಿಕೆ ಬಂದಿಲ್ಲ. ನೈಸರ್ಗಿಕವಾಗಿ ರೋಗ ಬಂದು ರೋಗ ನಿರೋಧಕ ಶಕ್ತಿ ಬಂದಲ್ಲಿ ಒಳ್ಳೆಯದು ಎಂಬ ಭಾವನೆ ಒಂದು ವರ್ಗದ ಜನರಲ್ಲಿ ಇನ್ನೂ ಇದೆ. ಒಟ್ಟಿನಲ್ಲಿ ನೈಸರ್ಗಿಕವಾಗಿ ಅಥವಾ ಕೃತಕವಾಗಿಯಾದರೂ ರೋಗ ನಿರೋಧಕ ಬರಿಸಿಕೊಂಡಲ್ಲಿ ರೋಗದಿಂದ ಉಂಟಾಗುವ ತೊಂದರೆ ಯಾತನೆ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು ಎಂಬುದಂತೂ ಸತ್ಯವಾದ ಮಾತು.
ಹೇಗೆ ಹರಡುತ್ತದೆ?
ಚಿಕನ್ ಪಾಕ್ಸ್ ಗಾಳಿಯಿಂದ ಹರಡುವ ರೋಗವಾಗಿದ್ದು, ಕೆಮ್ಮಿನಿಂದ ಅಥವಾ ಸೀನಿದಾಗ ಕೂಡಾ ಹರಡುವ ಸಾಧ್ಯತೆ ಇದೆ. ಹೆಚ್ಚಾಗಿ ರೋಗಿಯ ಬಟ್ಟೆ, ಹಾಸಿಗೆ ಮತ್ತು ಗುಳ್ಳೆಯ ದ್ರವದ ಸಂಪರ್ಕದಿಂದ ಇನ್ನೊಬ್ಬರಿಗೆ ಹರಡುತ್ತದೆ. ರೋಗಿಯ ದೈಹಿಕ ಸಂಪರ್ಕ ಹೊಂದಿದ, ಶೇ.99ರಷ್ಟು ಆರೋಗ್ಯವಂತ ವ್ಯಕ್ತಿಗಳಿಗೆ ಈ ರೋಗ ಹರಡುವ ಸಾಧ್ಯತೆ ಇರುತ್ತದೆ. ರೋಗಿಯನ್ನು ಕನಿಷ್ಠ 10 ದಿನ ಆರೋಗ್ಯವಂತರಿಂದ ಪ್ರತ್ಯೇಕವಿರಿಸಬೇಕು. ಹೀಗೆ ಮಾಡುವುದರಿಂದ ಇತರರಿಗೆ ಹರಡುವುದು ತಪ್ಪುತ್ತದೆ. ಗುಳ್ಳೆಗಳು ಒಡೆದು ಹಕ್ಕಳೆಗಟ್ಟುವ ವರೆಗೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಗುಳ್ಳೆಗಳು ಸುಮಾರು 4ರಿಂದ 7ನೆ ದಿನಗಳಿಂದ ಒಡೆದು ಹಕ್ಕಳೆಗಟ್ಟುತ್ತದೆ ಮತ್ತು ಜ್ವರ ಬಂದ 14ನೆ ದಿನ ಹಕ್ಕಳೆಗಳು ಉದುರಿ ಹೋಗಿ ಆರಾಮವಾಗುತ್ತದೆ.