ಮೇಲ್ಸೇತುವೆ ಕುಸಿತ ಕೋಲ್ಕತಾ ಮೊದಲಲ್ಲ ... ಕೊನೆಯೂ ಅಲ್ಲ

Update: 2016-04-12 18:47 GMT

ಕೋಲ್ಕತ್ತಾದಲ್ಲಿ ನಿರ್ಮಾಣಹಂತದ ಮೇಲುಸೇತುವೆ ಕುಸಿದದ್ದು ದೊಡ್ಡ ಸುದ್ದಿಯಾಯಿತು. ಆದರೆ ಅದಕ್ಕಿಂತ ದೊಡ್ಡ ಸುದ್ದಿ ಇದೆ. 2010ರಿಂದ 2014ರ ನಡುವೆ ನಿರ್ಮಾಣ ಹಂತದಲ್ಲಿದ್ದ ಕಾಮಗಾರಿಗಳು ಕುಸಿದು 13,178 ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನುವ ಅಂಶ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಈ ಅವಧಿಯಲ್ಲಿ ಸಂಭವಿಸಿದ 13,473 ಇಂತಹ ಪ್ರಕರಣಗಳ ಆಧಾರದಲ್ಲಿ ಹೇಳುವುದಾದರೆ, ಪ್ರತಿ ದಿನ ಇಂತಹ ಏಳು ಕುಸಿತಗಳು ಸಂಭವಿಸುತ್ತಲೇ ಇರುತ್ತವೆ ಎಂದು Factly.in ಎಂಬ ಮಾಹಿತಿ ಪತ್ರಿಕೋದ್ಯಮದ ಪೋರ್ಟಲ್ ವಿಶ್ಲೇಷಿಸಿದೆ. ಕಳೆದ ಗುರುವಾರ ಕೊಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿಯಿತು. 2,2 ಕಿಲೋಮೀಟರ್ ಉದ್ದದ ಈ ವಿವೇಕಾನಂದ ರಸ್ತೆ ಫ್ಲೈ ಓವರ್ ವಾಹನಗಳ ಮೇಲೆ ಕುಸಿದು 24 ಮಂದಿಯನ್ನು ಬಲಿ ಪಡೆಯಿತು.
ಇಂತಹ ಮಾಹಿತಿಯನ್ನು ಎನ್‌ಸಿಆರ್‌ಬಿ ತನ್ನ ಭಾರತದಲ್ಲಿ ಅಪಘಾತ ಸಾವು ಹಾಗೂ ಆತ್ಮಹತ್ಯೆ ಎಂಬ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸುತ್ತದೆ. ಹಲವು ಅಸಹಜ ಸಾವಿನ ಕಾರಣಗಳನ್ನು ಈ ವರದಿಯಲ್ಲಿ ವಿವರಿಸಲಾಗುತ್ತದೆ. ಅಂತಹ ಉಪಶೀರ್ಷಿಕೆಗಳಲ್ಲಿ ನಿರ್ಮಾಣಗಳ ಕುಸಿತ ಕೂಡಾ ಒಂದು. 2010ರಲ್ಲಿ ಇಂತಹ ಕಟ್ಟಡ ಕುಸಿತದಿಂದ ಒಟ್ಟು 2,682 ಮಂದಿ ಜೀವ ಕಳೆದುಕೊಂಡಿದ್ದಾರೆ. 2011ರಲ್ಲಿ ಇದು 3,161ಕ್ಕೆ ಹೆಚ್ಚಿದರೆ, 2012ರಲ್ಲಿ 2,682ಕ್ಕೆ ಇಳಿಯಿತು. 2013ರಲ್ಲಿ 2832 ಮಂದಿ ಬಲಿಯಾದರು. ಇಂತಹ ಕುಸಿತದಿಂದ 2014ರಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಐದು ವರ್ಷಗಳಲ್ಲೇ ಕನಿಷ್ಠ ಎಂದರೆ 1821.

ದೊಡ್ಡ ರಾಜ್ಯಗಳಲ್ಲಿ ಅಧಿಕ ಸಾವು
ಇಂತಹ ನಿರ್ಮಾಣಗಳು ಕುಸಿತದಿಂದ ಅಧಿಕ ಸಂಖ್ಯೆಯಲ್ಲಿ ಜನ ಮೃತಪಟ್ಟಿರುವುದು ದೊಡ್ಡ ರಾಜ್ಯಗಳಲ್ಲಿ. ಪಶ್ಚಿಮ ಬಂಗಾಳ ಮಾತ್ರ ಈ ಪ್ರವೃತ್ತಿಗೆ ಅಪವಾದ. ಪಶ್ಚಿಮ ಬಂಗಾಳದಲ್ಲಿ 2010-2014ರ ಅವಧಿಯಲ್ಲಿ ಕಟ್ಟಡ ಅಥವಾ ಇತರ ನಿರ್ಮಾಣಗಳ ಕುಸಿತದಿಂದ 184 ಮಂದಿ ಮೃತಪಟ್ಟಿದ್ದಾರೆ. ಇದು ಒಟ್ಟು ಇಂತಹ ಸಾವಿನ ಪೈಕಿ ಶೇಕಡ 1.4ರಷ್ಟು. ಉತ್ತರ ಪ್ರದೇಶದಲ್ಲಿ ಇಂತಹ ಸಾವು ಅತ್ಯಧಿಕ ಪ್ರಮಾಣದಲ್ಲಿ ಸಂಭವಿಸಿದೆ. 2010-14ರ ಅವಧಿಯಲ್ಲಿ 2,065 ಮಂದಿ ಇಂತಹ ದುರ್ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 1,343, ಆಂಧ್ರಪ್ರದೇಶದಲ್ಲಿ 1,330, ಮಧ್ಯಪ್ರದೇಶದಲ್ಲಿ 1,176, ತಮಿಳುನಾಡಿನಲ್ಲಿ 1,154 ಹಾಗೂ ಗುಜರಾತ್‌ನಲ್ಲಿ 1,067 ಮಂದಿ ಕಟ್ಟಡಗಳ ಕುಸಿತದಿಂದ ಪ್ರಾಣ ಬಿಟ್ಟಿದ್ದಾರೆ.

ಕಟ್ಟಡ ಕುಸಿತ
ಎನ್‌ಸಿಆರ್‌ಬಿ ಇಂತಹ ವಿನ್ಯಾಸಗಳ ಕುಸಿತವನ್ನು ಐದು ವಿಭಾಗಗಳಲ್ಲಿ ವಿಂಗಡಿಸುತ್ತದೆ. 2010ರಿಂದ 2014ರ ಅವಧಿಯಲ್ಲಿ ವಸತಿ ಕಟ್ಟಡ ಗಳ ಕುಸಿತದಿಂದ 4,914 ಮಂದಿ ಮೃತಪಟ್ಟಿದ್ದಾರೆ. ಇದು ಒಟ್ಟು ಕಟ್ಟಡಗಳ ಕುಸಿತದಿಂದ ಮೃತಪಟ್ಟವರ ಪೈಕಿ ಶೇಕಡ 37.3. ವಾಣಿಜ್ಯ ಕಟ್ಟಡಗಳ ಕುಸಿತದಿಂದ 1,610 ಮಂದಿ ಅಸುನೀಗಿದ್ದಾರೆ.

ಅಣೆಕಟ್ಟು ಹಾಗೂ ಸೇತುವೆಗಳ ಕುಸಿತದಿಂದ ಕ್ರಮವಾಗಿ 124 ಹಾಗೂ 297 ಸಾವುಗಳು ಸಂಭವಿಸಿವೆ. ಹೀಗೆ ಸೇತುವೆ ಹಾಗೂ ಅಣೆಕಟ್ಟು ಕುಸಿತದಿಂದ ಮೃತಪಟ್ಟವರ ಪ್ರಮಾಣ ಒಟ್ಟು ಸಾವಿನಲ್ಲಿ ಶೇಕಡ 3.2.

ಅತಿಹೆಚ್ಚು ಸಾವು ಸಂಭವಿಸಿರುವುದು ಮೇಲ್ಸೇತುವೆಯಂಥ ನಿರ್ಮಾಣಗಳ ಕುಸಿತದಿಂದ. ಇಂತಹ ಅವಘಡಗಳಿಂದ 6,233 ಮಂದಿ ಮೃತಪಟ್ಟಿದ್ದು, ಇದು ಒಟ್ಟು ಇಂತಹ ಸಾವಿನಲ್ಲಿ ಶೇ. 47.3ರಷ್ಟು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News