ಇನ್ನಾದರೂ ನನ್ನ ಬಾಳು ಹಸನಾಗುವುದೇ?
ಮಂಗಳೂರು, ಎ. 13: ನನ್ನ ಮನೆಯಲ್ಲಿ ಸಚಿವರು ಬಂದು ಕೆಲ ಹೊತ್ತಾದರೂ ಇರುತ್ತಾರೆಂದರೆ ನನ್ನ ಪಾಲಿನ ಭಾಗ್ಯವದು. ಕಷ್ಟದಲ್ಲೇ ಹುಟ್ಟಿ ಬೆಳೆದು ಈವರೆಗೂ ಕಷ್ಟದಲ್ಲೇ ಜೀವಿಸುತ್ತಿರುವ ನನ್ನ ಬಾಳು ಸಚಿವರ ಆಗಮನದಿಂದಲಾದರೂ ಹಸನಾಗುವುದೇ ಎಂಬ ಕಾತರ, ಸಂತಸ, ನಿರೀಕ್ಷೆ ನನ್ನದು.
ಇದು ಮಂಗಳೂರು ತಾಲೂಕಿನ ಮುಲ್ಕಿ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಎಪ್ರಿಲ್ 15ರಂದು ಸಚಿವ ಆಂಜನೇಯ ಅವರು ವಾಸ್ತವ್ಯ ಮಾಡಲಿರುವ ಮನೆಯ ಒಡತಿ ಬೇಬಿಯವರ ಮನದಾಳದ ಮಾತು.
ಒಂದಿಬ್ಬರು ಆರಾಮವಾಗಿ ಮಲಗಬಹುದಾದ ಒಂದು ಪುಟ್ಟ ಕೋಣೆ, ಅದಕ್ಕೆ ತಾಗಿಕೊಂಡು ಅರ್ಧ ಗೋಡೆಯಿಂದ ಕೂಡಿದ ಪುಟ್ಟದಾದ ಅಡುಗೆ ಮನೆ. ಸಚಿವರ ಆಗಮನ ಹಿನ್ನೆಲೆಯಲ್ಲಿ ಮನೆ ಸುಣ್ಣ ಬಣ್ಣದ ಭಾಗ್ಯ ಪಡೆದಿದೆ. ಮನೆಗೆ ಹೊಸ ಒಲೆಗಳನ್ನು ಹಾಕಲಾಗಿದೆ. ಕಿರಿದಾದ ಮನೆಯ ಅಂಗಳಕ್ಕೆ ಸಿಮೆಂಟು ಶೀಟು ಹಾಸಲಾಗಿದ್ದು, ಅದಕ್ಕೆ ಆಧಾರವಾಗಿ ಕಂಬಗಳನ್ನು ಹಾಕಿ ಬಣ್ಣ ಬಳಿಯಲಾಗಿದೆ. ಮನೆಯ ಹೊರಗಡೆ ಸಣ್ಣದಾದ ಶೌಚಾಲಯವಿದೆ. ಒಬ್ಬ ವ್ಯಕ್ತಿ ಅದರಲ್ಲಿ ಆರಾಮವಾಗಿ ಕುಳಿತು ಶೌಚ ಮಾಡಲು ಸಾಧ್ಯವಿಲ್ಲದ ಕಾರಣ, ಸಚಿವರ ಆಗಮನದ ಹಿನ್ನೆಲೆಯಲ್ಲಿ ಹೊಸ ಶೌಚಾಲಯದ ಜತೆಗೆ ಸ್ನಾನಗೃಹವೂ ಸಿದ್ಧಗೊಂಡಿದೆ.
ಕಾಲನಿಯಲ್ಲಿ ಬಟ್ಟೆಗಳ ಜೋಪಡಿಯೇ ಸ್ನಾನಗೃಹ!
ಈ ಕಾಲನಿಯಲ್ಲಿ 14 ಕೊರಗ ಸಮುದಾಯದ ಕುಟುಂಬಗಳು ಪ್ರಸ್ತುತ ವಾಸವಿದ್ದು, ಸಚಿವ ಆಂಜನೇಯರು ವಾಸ್ತವ್ಯ ಹೂಡಲಿರುವ ಬೇಬಿ ಅವರ ಮನೆ ಸೇರಿದಂತೆ ಯಾವುದೇ ಕುಟುಂಬಕ್ಕೆ ಅಚ್ಚುಕಟ್ಟಾದ ಸ್ನಾನಗೃಹವೆಂಬುದಿಲ್ಲ. ನಾಲ್ಕು ಕಂಬಗಳಿಗೆ ಹಳೆಯ ಸೀರೆಗಳನ್ನು ಪರದೆಯ ರೀತಿಯಲ್ಲಿ ಜೋಡಿಸಲಾದ ಸಣ್ಣದಾದ ಜೋಪಡಿಗಳೇ ಇಲ್ಲಿನವರ ಸ್ನಾನಗೃಹಗಳು. ಇದೀಗ ಸಚಿವರು ಬರುವ ಕಾರಣದಿಂದ ಬೇಬಿ ಅವರ ಮನೆಯ ಹಿಂಬದಿಯಲ್ಲಿ ಕಮೋಡ್‌ನಿಂದ ಕೂಡಿದ ಶೌಚಾಲಯ ಹಾಗೂ ಅದಕ್ಕೆ ತಾಗಿಕೊಂಡು ಪ್ರತ್ಯೇಕ ಬೇಸಿನಿಂದ ಕೂಡಿದ ಸ್ನಾನಗೃಹ ರಚಿಸಲಾಗಿದೆ.
ಸಚಿವರಾರೆಂದೇ ಇವರಿಗೆ ಗೊತ್ತಿಲ್ಲ!
ತಮ್ಮ ಕಾಲನಿಯಲ್ಲಿ ಅದೇನೋ ದೊಡ್ಡದಾದ ಸಂಭ್ರಮ ನಡೆಯಲಿದೆ ಎಂಬ ಭಾರೀ ನಿರೀಕ್ಷೆಯೊಂದಿಗೆ ಇಲ್ಲಿನ ಎಲ್ಲಾ ಕುಟುಂಬಗಳ ಸದಸ್ಯರು ಒಟ್ಟಾಗಿ ಮನೆಯ ಸಂಭ್ರಮದಂತೆ ತಯಾರಿ ನಡೆಸುತ್ತಿದ್ದಾರೆ. ಆದರೆ, ಬೇಬಿ ಹಾಗೂ ಪಡು ಪಣಂಬೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಹಾಗೂ ಸ್ಥಳೀಯ ನಿವಾಸಿ ಕೊಲ್ಲು ಸೇರಿದಂತೆ ಕಾಲನಿಯ ಬಹುತೇಕರಿಗೆ ತಮ್ಮ ಕಾಲನಿಗೆ ಬರುವವರು ಯಾರೆಂದು ತಿಳಿದಿಲ್ಲ. ಹಾಗಿದ್ದರೂ ತಮ್ಮ ಕಾಲನಿಗೆ ಅತಿಥಿಗಳ ಸ್ವಾಗತಕ್ಕಾಗಿ ಎಲ್ಲರೂ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
‘‘ಬುಟ್ಟಿ ಹೆಣೆಯುವುದನ್ನು ಬಿಟ್ಟು ಬೇರೆ ಯಾವ ಕೆಲಸವೂ ನನಗೆ ತಿಳಿದಿಲ್ಲ. ತಾಳೆ ಮರದ ಗರಿಗಳನ್ನು ಹೆಣೆದು ದಿನಕ್ಕೊಂದು ಬುಟ್ಟಿ ಮಾಡಿದರೆ 200 ರೂ. ಸಿಗುತ್ತದೆ. ಅದೂ ತಾಳೆ ಮರದ ಗರಿ ಸಿಗುವುದಿಲ್ಲ. ನನ್ನ ಇಬ್ಬರು ಗಂಡು ಮಕ್ಕಳಾದ ಧರ್ಮೇಂದ್ರ ಮತ್ತು ಅಶೋಕ ಹೊಟೇಲ್‌ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇನ್ನೊಬ್ಬ ಮಗ ಶಶಿ ಮನೆಯಲ್ಲಿರುತ್ತಾನೆ. 20 ವರ್ಷಗಳಿಂದ ನಾನಿಲ್ಲಿ ವಾಸವಾಗಿದ್ದೇನೆ. ಪತಿ ವಾಮನ ನಾಲ್ಕು ವರ್ಷಗಳ ಹಿಂದೆ ಕ್ಷಯರೋಗದಿಂದ ಮೃತಪಟ್ಟಿದ್ದಾರೆ’’ ಎಂದು ಹೇಳುವ ಬೇಬಿಯವರಿಗೆ ತನ್ನ ಮನೆಗೆ ವಾಸ್ತವ್ಯ ಹೂಡಲು ಬರುತ್ತಿರುವ ಸಚಿವವರ ಹೆಸರೂ ಗೊತ್ತಿಲ್ಲ.
‘ಮಿನಿಸ್ಟರೊಬ್ಬರು ನಮ್ಮ ಮನೆ ಬಂದು ಇರುತ್ತಾರೆ ಎಂದು ಒಂದು ವಾರದ ಹಿಂದೆ ಹೇಳಿದ್ದಾರೆ. ಆದರೆ ಅವರ್ಯಾರು, ಅವರ ಹೆಸರೇನು, ಅವರನ್ನು ನೋಡಿಯೂ ಇಲ್ಲ. ಆದರೆ ಅವರು ಬಂದು ನಮ್ಮ ಕಾಲನಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ. ಕಾಲನಿಯಲ್ಲಿ ಬಹುತೇಕರಿಗೆ ಅವರು ವಾಸದ ದಾಖಲೆಗಳು ಸರಿಯಾಗಿಲ್ಲ. ಅದೆಲ್ಲಾ ಸರಿಯಾಗುತ್ತದೆ ಎಂಬ ಆಸೆ ಇದೆ’’ ಎನ್ನುತ್ತಾರೆ ಬೇಬಿ.
ಮಿನಿಸ್ಟರಿಗೆ ಬಸಳೆ- ಕುಡು ಸಾರು, ಗುಜ್ಜೆ ಗಸಿ ಇಷ್ಟವಂತೆ!
ಸಚಿವರು ಬಂದಾಗ ಅವರಿಗೇನು ಅಡುಗೆ ಮಾಡಿ ಬಡಿಸುತ್ತೀರಿ ಎಂಬ ಪ್ರಶ್ನೆಗೆ ಮುಗ್ಧವಾಗಿ ಉತ್ತರಿಸುವ ಬೇಬಿ, ‘‘ನಾನೇನು ಮಾಡುವುದು, ನಾವು ತರಕಾರಿ, ಮೀನು, ಮಾಂಸ ಎಲ್ಲಾ ತಿನ್ನುತ್ತೇವೆ. ಮಿನಿಸ್ಟರಿಗೆ ಬಸಳೆ- ಕುಡು ಸಾರು, ಗುಜ್ಜೆ ಗಸಿ, ಬೆಳ್ತಿಗೆ ಅನ್ನ ಇಷ್ಟವೆಂದು ಹೇಳಿದ್ದಾರೆ. ಅದನ್ನೆಲ್ಲಾ ತಯಾರು ಮಾಡಬೇಕು’’ ಎನ್ನುತ್ತಾರೆ.
ವಿಶೇಷವೆಂದರೆ, ಸಚಿವರ ಭೇಟಿಯ ಖರ್ಚನ್ನೆಲ್ಲಾ ಕೊರಗ ಸಂಘಟನೆಗಳ ಒಕ್ಕೂಟವೇ ವಹಿಸಿಕೊಂಡಿರುವುದು. ಮನೆಗೆ ಸುಣ್ಣ ಬಣ್ಣ, ದುರಸ್ತಿ, ವೇದಿಕೆ ನಿರ್ಮಾಣ, ಊಟದ ಖರ್ಚು ವೆಚ್ಚ ಹಾಗೂ ವ್ಯವಸ್ಥೆ ಎಲ್ಲದಕ್ಕೂ ಕೈಜೋಡಿಸಿರುವ ಕೊರಗ ಸಂಘಟನೆಗಳ ಒಕ್ಕೂಟ, ಸಚಿವರ ಆಗಮನದಿಂದ ತಮ್ಮ ದೀರ್ಘಾವಧಿಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಆಶಯವ್ನು ಹೊಂದಿದೆ.
‘‘ನಾವಿಲ್ಲಿ ಕೊರಗ ಸೇವಾ ಸಂಘವೊಂದನ್ನು ರಚಿಸಿಕೊಂಡಿದ್ದು, ಇದರಲ್ಲಿ 28 ಮಂದಿ ಸದಸ್ಯರಿದ್ದೇವೆ. ನಮ್ಮಲ್ಲಿ ದುಡಿಯುವ ಯುವಕರು ತಮ್ಮ ಕೈಲಾದ ದೇಣಿಯ ಮೂಲಕ ನಡೆಯುವ ಈ ಸಂಘದಿಂದ ನಾವು ಈಗಾಗಲೇ ನಮ್ಮ ಕಾಲನಿಯ ಹೆಣ್ಣು ಮಕ್ಕಳ ಮದುವೆ, ಮರಣದ ಸಂದರ್ಭ ನೆರವು ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಮಾತ್ರವಲ್ಲದೆ ಸಂಘದಿಂದ ಕ್ಯಾಟರಿಂಗ್ ಕೂಡಾ ನಡೆಸುತ್ತಿದ್ದೇವೆ. ನಮ್ಮ ಸಮುದಾಯ ಸೇರಿದಂತೆ ಮದುವೆ, ಔತಣ, ಹುಟ್ಟುಹಬ್ಬ ಹಾಗೂ ಇತರ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ನಾವು ಇಲ್ಲಿ ಎಲ್ಲಾ ರೀತಿಯ ಅಡುಗೆಗಳನ್ನು ತಯಾರಿಸಿ ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಎ. 15ರಂದು ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 1000 ಮಂದಿ ಸೇರುವ ನಿರೀಕ್ಷೆ ಇದ್ದು, ಅದಕ್ಕಾಗಿ ಊಟದ ವ್ಯವಸ್ಥೆಯನ್ನು ಸಂಘದ ಸದಸ್ಯರೇ ಮಾಡಲಿದ್ದೇವೆ. ಆದರೆ ನಮಗೆ ಅದಕ್ಕೆ ಅಗತ್ಯವಾದ ದೊಡ್ಡದಾದ ಪಾತ್ರೆಗಳ ಕೊರತೆಯಿದೆ’’ ಎನ್ನುತ್ತಾರೆ ಸ್ಥಳೀಯ ಹಾಗೂ ಸಂಘದ ಸದಸ್ಯರಾದ ಶಶಿಧರ.
ಸಚಿವರ ಆಗಮನದ ಹಿನ್ನೆಲೆಯಲ್ಲಿ ಕೆರೆಕಾಡಿನ ಕೊರಗ ಕಾಲನಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. 14 ಕುಟುಂಬಗಳಲ್ಲಿ ಯಮುನಾ ಹಾಗೂ ಬಿಟ್ಟು ಅವರ ಕುಟುಂಬಗಳು ಸೇರಿದ್ದು, ಇವರು ಕಳೆದ ಕೆಲ ವರ್ಷಗಳಿಂದ ಇಲ್ಲಿ ತಮ್ಮ ವಾಸ್ತವ್ಯದ ಬಗ್ಗೆ ಯಾವುದೇ ದಾಖಲೆ ಹೊಂದಿಲ್ಲದೆ ವಾಸಿಸುತ್ತಿದ್ದಾರೆ. ಅವರೂ ತಮಗೊಂದು ನೆಲೆಗಾಗಿ ಕಾಯುತ್ತಿದ್ದಾರೆ.
ಸಂಚಲನ ಮೂಡಿಸುವರೇ ಸಚಿವ ಆಂಜನೇಯ?
ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿಯಾಗಿರುವ ಕೊರಗ ಸಮುದಾಯ ಜನಸಂಖ್ಯೆಯ ಋಣಾತ್ಮಕ ಕುಸಿತದೊಂದಿಗೆ ಆರ್ಥಿಕವಾಗಿಯೂ ತೀರಾ ಸಂಕಷ್ಟದವಲ್ಲಿರುವ ಸಮುದಾಯ. ಈ ಬಗ್ಗೆ ಸಮಗ್ರ ಆರೋಗ್ಯ ಸಮಿಕ್ಷೆ ಆಗಬೇಕೆಂಬುದು ಕೊರಗ ಸಮುದಾಯದ ಪ್ರಮುಖ ಆಗ್ರಹ. ಇದೀಗ ಸಚಿವ ಆಂಜನೇಯ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಈ ಕೊರಗ ಕಾಲನಿಯ ಜನರಲ್ಲಿ ಹೊಸ ನಿರೀಕ್ಷೆಯ ಜತೆ ಹುರುಪನ್ನೂ ತುಂಬಿದೆ. ಸಚಿವರ ವಾಸ್ತವ್ಯ ಕಾಲನಿಯ ಜತೆಗೆ ಕೊರಗ ಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಲಿದೆಯೇ ಎಂಬ ನಿರೀಕ್ಷೆಯನ್ನೂ ಹುಟ್ಟು ಹಾಕಿದೆ.
ಕೊರಗ ಸಮುದಾಯದ ಪೂರ್ವಜರ ಹೆಸರಿನಲ್ಲಿರುವ ಭೂಮಿಯನ್ನು ಪೂರ್ವಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮಕ್ಕಳಿಗೆ ಆರ್‌ಟಿಸಿ ಮಾಡಿಸಲು ಸಾಧ್ಯವಾಗಿಲ್ಲ. ಕೊರಗ ಸಮುದಾಯದಿಂದ ಪ್ರಸ್ತುತ ಸಾಕಷ್ಟು ಮಂದಿ ಪದವೀಧರರಿದ್ದರೂ ಸೂಕ್ತ ಉದ್ಯೋಗವಿಲ್ಲದೆ ಪರದಾಡುತ್ತಿದಾರೆ. ಯುವಕರಿಗೆ ಉದ್ಯೋಗ ಹಾಗೂ ಕೊರಗ ಸಮುದಾಯ ಮುಖ್ಯವಾಗಿ ಬುಟ್ಟಿ ಹೆಣೆಯುವ ಕಾಯಕವನ್ನು ತಮ್ಮದಾಗಿಸಿಕೊಂಡವರು. ಆದರೆ ಇಂದು ಆ ಬುಟ್ಟಿಗಳಿಗೆ ಬೇಕಾದ ಕಚ್ಚಾ ವಸ್ತುಗಳ ಕೊರತೆ ಹಾಗೂ ಅದನ್ನು ಕೊಳ್ಳುವವರ ಸಂಖ್ಯೆಯೂ ಕಡಿಮೆ ಇರುವುದರಿಂದ ಪರ್ಯಾಯ ಉದ್ಯೋಗದ ವ್ಯವಸ್ಥೆಯನ್ನು ನೀಡಬೇಕೆಂಬುದು ಸಮುದಾಯದ ಇತರ ಹಲವಾರು ಬೇಡಿಕೆಗಳಲ್ಲಿ ಸೇರಿವೆ.
ಕಾರ್ಯಕ್ರಮ ಏನೇನು?
ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಸಚಿವರ ವಿಶೇಷ ಅಧಿಕಾರಿ, ಐಟಿಡಿಪಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾಲನಿಗಳನ್ನು ಪರಿಶೀಲಿಸಿ ಕೆರೆಕಾಡು ಕಾಲನಿಯನ್ನು ಅಂತಿಮಗೊಳಿಸಿದೆ. ಸಚಿವರ ಗ್ರಾಮ ವಾಸ್ತವ್ಯದ ವೇಳೆ ಅಂದು ಬೆಳಗ್ಗಿನಿಂದ ಸಂಜೆಯವರೆಗೆ ಉಚಿತ ಆರೋಗ್ಯ ಶಿಬಿರ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಸಭಾ ಕಾರ್ಯಕ್ರಮಕ್ಕೆ ವೇದಿಕೆಯನ್ನೂ ಸಿದ್ಧಗೊಳಿಸಲಾಗಿದೆ. ಅಹವಾಲು ಸ್ವೀಕಾರ, ಸಂವಾದ ಸೇರಿದಂತೆ ದಿನಪೂರ್ತಿ ಕೊರಗ ಕಾಲನಿಯ ಜನರ ಜತೆ ಬೆರೆಯಲಿರುವ ಸಚಿವರು ಸಂಜೆ ಬೇಬಿಯವರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಪಡು ಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಪಿಡಿಒ ಅನಿತಾ ಕ್ಯಾತರಿನ್ ಸೇರಿದಂತೆ ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಸಿದ್ಧತೆ ನಡೆಯುತ್ತಿದೆ. ಸುಮಾರು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಹೇಮಲತಾ ಬಿ.ಎಸ್. ಹೇಳಿದ್ದಾರೆ
.