ಸೈನಿಕರಿಂದ ಅತ್ಯಾಚಾರ ವಾಸ್ತವವೇನು?

Update: 2016-04-14 18:02 GMT

2016ರ ಮಾರ್ಚ್ 8ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಭಾಷಣ ಮಾಡಿದರು. ತಮ್ಮ ಭಾಷಣದ ಕೊನೆಯಲ್ಲಿ ಕನ್ಹಯ್ಯಾ, ಮಾನವ ಹಕ್ಕು ಉಲ್ಲಂಘನೆಯನ್ನು ತಾನು ವೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತದ ಸಶಸ್ತ್ರ ಪಡೆಗಳ ಯೋಧರ ಬಗ್ಗೆ ಅಪಾರ ಗೌರವವಿದೆ. ಇಷ್ಟಾಗಿಯೂ ಕಾಶ್ಮೀರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು ಒಬ್ಬ ಸೈನಿಕ ಎಂದು ಹೇಳಲೇಬೇಕಾಗುತ್ತದೆ ಎಂದರು. ಸಭೆಯಲ್ಲಿ ಹಾಜರಿದ್ದ ಎಲ್ಲರೂ ಕನ್ಹಯ್ಯಾ ಹೇಳಿಕೆಯನ್ನು ಶ್ಲಾಘಿಸಿದರೂ, ಹಲವು ಮಂದಿ ರಾಜಕಾರಣಿಗಳು ಹಾಗೂ ಮಾಧ್ಯಮಗಳು ಈ ಹೇಳಿಕೆಗಾಗಿ ಕನ್ಹಯ್ಯಾ ಅವರನ್ನು ಟೀಕಿಸಿದವು. ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಕನ್ಹಯ್ಯಾ ವಿರುದ್ಧ, ಭಾರತೀಯ ಸೇನೆಯ ಬಗ್ಗೆ ವಿಷಕಾರಿ ಮಾತುಗಳನ್ನಾಡಿದ ಕಾರಣಕ್ಕಾಗಿ ಪ್ರಕರಣವನ್ನೂ ದಾಖಲಿಸಿದರು.

ಈ ಹೇಳಿಕೆಯನ್ನು ಉಲ್ಲೇಖಿಸಿ ಝೀ ನ್ಯೂಸ್ ಚಾನಲ್‌ನ ನಿರೂಪಕನೊಬ್ಬ ಪದೇ ಪದೇ ಒಬ್ಬ ಪ್ರತ್ಯೇಕತಾವಾದಿಯಂತೆ ಮಾತನಾಡಿದ್ದಾನೆ ಎಂದು ವಿವರಿಸಿದ. ಕನ್ಹಯ್ಯಾ ಅವರ ಟೀಕಾಕಾರರಲ್ಲಿ ಪತ್ರಕರ್ತ ಶೇಖರ್ ಗುಪ್ತ ಕೂಡಾ ಸೇರಿದ್ದಾರೆ. ಗುಪ್ತಾ ಈ ಬಗ್ಗೆ ಟ್ವೀಟ್ ಮಾಡಿ, ಕನ್ಹಯ್ಯೆ ವಿಶ್ವಾಸಾರ್ಹತೆ ಕಳೆದುಕೊಂಡರು ಎಂದು ಅಭಿಪ್ರಾಯಪಟ್ಟರು. ಕಾಶ್ಮೀರದಲ್ಲಿ ಸೇನೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದೆ ಎಂದು ಹೇಳುವ ಮೂಲಕ 90ರ ದಶಕದ ಮಾಮೂಲಿ ಹೇಳಿಕೆಯನ್ನು ಅವರು ಮತ್ತೆ ಕೆದಕಿದ್ದಾರೆ ಎಂದು ಟೀಕಿಸಿದರು. ಕನ್ಹಯ್ಯಾ ಅವರನ್ನು ಕುರಿತು, ಕಾಮ್ರೇಡ್ ದಯವಿಟ್ಟು ಪತ್ರಿಕೆ ಓದಿ ಎಂದು ಟ್ವೀಟಿಸಿದರು. ಹೀಗೆ ಹೇಳುವ ಮೂಲಕ ಅವರು ಕೇವಲ ಅಜ್ಞಾನ ಮತ್ತು ಪಕ್ಷಪಾತ ಮೂಲಕ ದ್ರೋಹ ಎಸಗಿರುವುದು ಮಾತ್ರವಲ್ಲದೇ, ಭಾರತದ ಬುದ್ಧಿಜೀವಿಗಳೆನಿಸಿಕೊಂಡವರ ಮನೋಪ್ರವೃತ್ತಿ ಬಗ್ಗೆಯೂ ಬೆಳಕು ಚೆಲ್ಲಿದರು. ಸೇನೆಯ ಪರಾಕ್ರಮದಿಂದ ಸಾಮಾನ್ಯವಾಗಿ ಈ ವಲಯ ಆಕರ್ಷಿತವಾಗಿದ್ದು, ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿ ಎಸಗಿದ ಅಪರಾಧಗಳನ್ನು ಒಪ್ಪಿಕೊಳ್ಳಲೂ ಸಿದ್ಧವಿಲ್ಲ.

ಕಾಶ್ಮೀರದಂಥ ಸಂಘರ್ಷ ಪ್ರದೇಶದಲ್ಲಿ, ಭಾರತದ ಸಶಸ್ತ್ರ ಪಡೆಗಳು ಪ್ರತಿರೋಧವನ್ನು ಮಟ್ಟಹಾಕಲು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹಲವು ಅಪರಾಧಗಳನ್ನು ಎಸಗಿವೆ. ಅದು ಚಿತ್ರಹಿಂಸೆ, ಕಾನೂನುಬಾಹಿರ ಹತ್ಯೆ, ಕಣ್ಮರೆ ಮಾಡುವುದು, ಅಪಹರಣ, ಅತ್ಯಾಚಾರ ಹೀಗೆ ಬೇರೆ ಬೇರೆ ವಿಧಾನದಲ್ಲಿ ಇರಬಹುದು. ಪ್ರತಿರೋಧವನ್ನು ಹತ್ತಿಕ್ಕಲು ಸೇನೆ ತನ್ನ ಬತ್ತಳಿಕೆಯ ಅಸ್ತ್ರಗಳಲ್ಲಿರುವ ಅಸ್ತ್ರಗಳ ಪೈಕಿ ಪ್ರಮುಖವಾಗಿ ಬಳಸುವ ಅಸ್ತ್ರವೆಂದರೆ ಲೈಂಗಿಕ ಹಿಂಸೆ. ಈ ಭಾಗದಲ್ಲಿ ಅತ್ಯಾಚಾರ ಎನ್ನುವುದು ಪ್ರತಿರೋಧವನ್ನು ಮಟ್ಟಹಾಕಲು ಹಾಗೂ ಸಾರ್ವಜನಿಕರನ್ನು ಅವಮಾನಿಸಲು ಅಸ್ತ್ರವಾಗಿ ಬಳಸಲಾಗುತ್ತದೆ. ಬುದ್ಧಿವಂತ ವರ್ಗ ಹಾಗೂ ಇತರ ಭಾರತೀಯರು ಈ ಬಗ್ಗೆ ಗಮನ ಹರಿಸದೇ, ಅಭಯ ನೀಡುವ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಾ ಬಂದ ಕಾರಣ ಸೇನೆಗೆ ಶ್ರೀರಕ್ಷೆ ದೊರಕಿದೆ. ಇಂಥ ಅಪರಾಧಗಳ ಬಗ್ಗೆ ಅವು ಯಾವ ಪ್ರಶ್ನೆಗಳಿಗೂ ಉತ್ತರಿಸಬೇಕಿಲ್ಲ ಎಂಬ ಮನೋಭಾವ ಬೆಳೆಸಿಕೊಂಡಿದೆ. ಆದರೆ ಕಾಶ್ಮೀರಿ ಮಹಿಳೆಯರಾದ ನಮಗೆ ಶೇಖರ್ ಗುಪ್ತ ಅವರ ಹೇಳಿಕೆ, ಭಾರತದ ಈ ರಾಜ್ಯದ ಇಮೇಜ್ ಕಾಪಾಡುವ ಪ್ರಯತ್ನ.
ಭಾರತದ ಸಶಸ್ತ್ರ ಪಡೆಗಳ ಯೋಧರು ಅತ್ಯಾಚಾರ ಎಸಗಿರುವುದು ಏಷ್ಯಾ ವಾಚ್‌ನಂಥ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ನಡೆಸಿದ ಸ್ವತಂತ್ರ ತನಿಖೆಯಲ್ಲಿ ದಾಖಲಾಗಿದೆ. ಪ್ರತೀಕಾರದ ಭೀತಿ ಹಾಗೂ ಸಾಮಾಜಿಕ ಕಳಂಕದ ಭೀತಿಯಿಂದ ಇಂಥ ಹಲವು ಪ್ರಕರಣಗಳಲ್ಲಿ ಅತ್ಯಾಚಾರ ನಡೆದ ಘಟನೆಗಳನ್ನು ಬಹಿರಂಗಪಡಿಸುವುದಿಲ್ಲವಾದರೂ, ವರದಿಯಾದ ಪ್ರಕರಣಗಳು ಇಂದಿಗೂ ವಾಸ್ತವವನ್ನು ತೆರೆದಿಡುತ್ತವೆ.
2009ರ ಮೇ 30ರಂದು 22 ವರ್ಷದ ನಿಲೋಫರ್ ಜಾನ್ ಹಾಗೂ ಆಕೆಯ 17 ವರ್ಷದ ಸಂಬಂಧಿ ಆಸ್ಯಾ ಜಾನ್ ಅವರ ದೇಹಗಳು ಕಾಶ್ಮೀರದ ಸೋಫಿಯನ್ ಜಿಲ್ಲೆಯ ತೊರೆಯಲ್ಲಿ ಪತ್ತೆಯಾದವು. ಅದು ಕೂಡಾ ಸಿಆರ್‌ಪಿಎಫ್ ಶಿಬಿರದ ಬಳಿ. ನಿಲೋಫರ್ ಹಾಗೂ ಆಸ್ಯಾ ಅವರ ಕುಟುಂಬದವರು ಹೇಳುವಂತೆ, ಅವರನ್ನು ಸಿಆರ್‌ಪಿಎಫ್‌ಸಿಬ್ಬಂದಿ ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ಅದೇ ದಿನ ಪೊಲೀಸರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ದೇಹದಲ್ಲಿ ಯಾವ ಗಾಯದ ಗುರುತುಗಳೂ ಪತ್ತೆಯಾಗಿಲ್ಲ ಎಂದು ಹೇಳಿದರು. ಅದಾಗ್ಯೂ ಎರಡು ಗಂಟೆ ಬಳಿಕ, ಪೊಲೀಸರು ಈ ಹೇಳಿಕೆ ವಾಪಸು ಪಡೆದರು. ಈ ಘಟನೆ ಕಣಿವೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು ಹಾಗೂ 47 ದಿನಗಳ ಕಾಲ ಪ್ರತಿಭಟನೆ ಮುಂದುವರಿಯಿತು.
2009ರ ಆಗಸ್ಟ್ ಸಂಚಿಕೆಯಲ್ಲಿ ದ್ವೈಮಾಸಿಕ ನಿಯತಕಾಲಿಕ ಫ್ರಂಟ್‌ಲೈನ್, ಎ ಪ್ಲೇವ್ಡ್ ಎನ್‌ಕ್ವೈರಿ ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿ, ತನಿಖೆಯನ್ನು ವಿಶ್ಲೇಷಣೆ ಮಾಡಿತ್ತು. ಜೂನ್ 1ರಂದು ಅಂದಿನ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಈ ಬಗ್ಗೆ ತನಿಖೆ ನಡೆಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಮುಝಫರ್ ಜಾನ್ ಅವರ ನೇತೃತ್ವದ ಏಕಸದಸ್ಯ ಆಯೋಗ ನೇಮಕ ಮಾಡಿದರು. ನಾಲ್ಕು ದಿನಗಳ ಬಳಿಕ ಮೈತ್ರಿಪಕ್ಷವಾದ ಕಾಂಗ್ರೆಸ್‌ನ ಒತ್ತಡದಿಂದ ಸರಕಾರ, ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿತು. ಜುಲೈ 10ರಂದು ಸಮಿತಿ ವರದಿ ಬಿಡುಗಡೆ ಮಾಡಲಾಯಿತು. ಈ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ನಡೆದಿರುವುದನ್ನು ವರದಿ ಖಚಿತಪಡಿಸಿತು. ಜತೆಗೆ ಇದು ನಾಗರಿಕರ ಕೃತ್ಯವಲ್ಲ. ಆದರೆ ಯಾರು ಈ ಕೃತ್ಯ ಎಸಗಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು. ಅದಾಗ್ಯೂ ವರದಿಯ ಜತೆಗಿದ್ದ ಒಂದು ಅನುಬಂಧದಲ್ಲಿ ಇಬ್ಬರು ಯುವತಿಯರ ಹತ್ಯೆಯಲ್ಲಿ ಅವರ ಕುಟುಂಬದ ಪಾತ್ರ ಇದೆ ಎಂದು ಹೇಳಲಾಗಿತ್ತು. ಈ ವರದಿ ಪ್ರಕಟವಾದ ಎರಡು ದಿನಗಳಲ್ಲಿ ನ್ಯಾಯಮೂರ್ತಿ ಜಾನ್ ಈ ವರದಿಯನ್ನು ಅಲ್ಲಗಳೆದರು. ಈ ಸಿದ್ಧಾಂತವನ್ನು ನಾನು ಸ್ಪಷ್ಟವಾಗಿ ಅಲ್ಲಗಳೆದಿದ್ದರೂ ಪೊಲೀಸರು ನನ್ನ ವರದಿಯನ್ನು ತಿರುಚಿದ್ದಾರೆ ಎಂದು ಹೇಳಿಕೆ ನೀಡಿದರು, ರಾಜ್ಯದಲ್ಲಿ ಪ್ರತಿಭಟನೆಗಳು ಮುಂದುವರಿದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸರಕಾರ ಈ ಪ್ರತಿಪಾದನೆಯನ್ನು ಅಲ್ಲಗಳೆಯಿತು. ಕೆಲ ತಿಂಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಆದರೆ ಅದರಿಂದಲೂ ಏನೂ ಹೊರಬರಲಿಲ್ಲ. ಆ ಅಪರಾಧಕ್ಕಾಗಿ ಯಾರನ್ನೂ ಹೊಣೆ ಮಾಡಲಿಲ್ಲ.

ಸೋಫಿಯಾನ್ ಪ್ರಕರಣ ಕಾಶ್ಮೀರದಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸೆ ಪ್ರಕರಣಗಳ ಬಗ್ಗೆ ಪ್ರತಿರೋಧ ವ್ಯಕ್ತವಾದ ಏಕೈಕ ಪ್ರಕರಣ ಎನಿಸಿಕೊಂಡಿತು. ವಿಕಿಲೀಕ್ಸ್ 2005ರಲ್ಲಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ, ಹೊಸದಿಲ್ಲಿಯಲ್ಲಿರುವ ವಿಶ್ವಸಂಸ್ಥೆ ರಾಜತಾಂತ್ರಿಕರಿಗೆ ನೀಡಿದ ಮಾಹಿತಿಯಂತೆ 1,298 ಮಂದಿ ಸಂತ್ರಸ್ತರನ್ನು ಕಾಶ್ಮೀರದಲ್ಲಿ ಸಂದರ್ಶಿಸಲಾಗಿದೆ. ಈ ಪೈಕಿ 304 ಮಂದಿಯ ವಿರುದ್ಧ ಲೈಂಗಿಕ ಸ್ವರೂಪದ ಹಿಂಸೆ ನಡೆದಿದೆ. ಈ ಹಿಂಸಾಪೀಡಿತ ರಾಜ್ಯದಲ್ಲಿ ಪುರುಷರ ಮೇಲೂ ಲೈಂಗಿಕ ಚಿತ್ರಹಿಂಸೆ ನಡೆದಿದೆ ಎನ್ನುವುದನ್ನು ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಯೋಧರಿಂದ ನಡೆಯುತ್ತಿರುವ ಅತ್ಯಾಚಾರದ ಆರೋಪಗಳು ಕಾಶ್ಮೀರಿಗಳ ಮಾಮೂಲಿ ಹೇಳಿಕೆ ಎಂಬ ಮನೋಭಾವದವರು ಈ ಸತ್ಯಾಂಶವನ್ನು ಮನವರಿಕೆ ಮಾಡಿಕೊಳ್ಳಬೇಕು. ಅತ್ಯಾಚಾರವನ್ನು ಪ್ರತಿರೋಧ ಹತ್ತಿಕ್ಕುವ ತಂತ್ರವಾಗಿ ಸೇನೆ ಇರುವ ಹಲವು ಪ್ರದೇಶಗಳಲ್ಲಿ ಬಳಸಲಾಗುತ್ತಿದೆ. 2013ರಲ್ಲಿ ಭಾರತೀಯ ಸೇನೆಯ ಯೋಧರ ವಿರುದ್ಧ ಲೈಂಗಿಕ ಹಿಂಸೆಯ 70 ಪ್ರಕರಣಗಳು ದಾಖಲಾಗಿದ್ದವು. 2004ರ ಜುಲೈ 10ರಂದು ತಂಗ್ಜಮ್ ಮನೋರಮಾ ದೇವಿ ಎಂಬ ಮಣಿಪುರಿ ಮಹಿಳೆಯನ್ನು 17 ಮಂದಿ ಅಸ್ಸಾಂ ರೈಫಲ್ ರೆಜಿಮೆಂಟ್‌ನ ಯೋಧರು ಮನೆಯಿಂದ ಕರೆದೊಯ್ದರು. ಉಗ್ರಗಾಮಿ ಸಂಘಟನೆಯೊಂದರ ಪರ ಈಕೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಆಕೆಯನ್ನು ವಶಕ್ಕೆ ಪಡೆದರು. ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಜನನೇಂದ್ರಿಯಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗುಂಡುಗಳಿಂದ ಛಿದ್ರವಾಗಿದ್ದ ಆಕೆಯ ದೇಹ ಪಕ್ಕದ ಹೊಲದಲ್ಲಿ ಮರುದಿನ ಬಿದ್ದಿತ್ತು. ಈ ಘಟನೆ ಇಡೀ ರಾಜ್ಯದಲ್ಲಿ ಪ್ರತಿಭಟನೆಯ ಕಾವಿಗೆ ಕಾರಣವಾಯಿತು. ಇದು ಮಾಧ್ಯಮಗಳಲ್ಲೂ ವ್ಯಾಪಕ ಪ್ರಚಾರ ಪಡೆಯಿತು. ಸೇನೆಯ ವಿರುದ್ಧದ ಆಕ್ರೋಶ ಹೇಗಿತ್ತು ಎಂದರೆ, ಮಹಿಳೆಯರ ಒಂದು ಗುಂಪು ನಗ್ನವಾಗಿ ಸೇನಾ ಕೇಂದ್ರ ಕಚೇರಿಗೆ ಮೆರವಣಿಗೆ ಹೋಯಿತು. ಮನೋರಮಾ ಮೇಲೆ ಅತ್ಯಾಚಾರ ಎಸಗಿದಂತೆ ಧೈರ್ಯವಿದ್ದರೆ ನಮ್ಮ ಮೇಲೂ ಸೇನೆಯ ಯೋಧರು ಅತ್ಯಾಚಾರ ಎಸಗುವ ಧೈರ್ಯ ತೋರಲಿ ಎಂದು ಸವಾಲು ಹಾಕಿತು. 2005ರಲ್ಲಿ ಕಾನೂನು ಕ್ರಮ ಆರಂಭವಾದಾಗ ಅಸ್ಸಾಂ ರೈಫಲ್ಸ್ ಪ್ರತಿಹಂತದಲ್ಲೂ ವಿರೋಧ ವ್ಯಕ್ತಪಡಿಸಿತು. ಅಂತಿಮವಾಗಿ ಹೈಕೋರ್ಟ್, ಸೇನೆಯ ಬಗ್ಗೆ ತನಗೆ ಯಾವುದೇ ಆಡಳಿತಾತ್ಮಕ ನಿಯಂತ್ರಣ ಇಲ್ಲ.

ಏಕೆಂದರೆ ಇವರನ್ನು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅನ್ವಯ ನಿಯೋಜಿಸಲಾಗಿದೆ ಎಂದು ತೀರ್ಪು ನೀಡಿತು. ಇದರ ಅನ್ವಯ, ಸಶಸ್ತ್ರಪಡೆಗಳ ಯಾವುದೇ ಚಟುವಟಿಕೆಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಹೈಕೋರ್ಟ್‌ಗೆ ಇಲ್ಲ ಎಂದು ಸ್ಪಷ್ಟಪಡಿಸಿತು.
ಛತ್ತೀಸ್‌ಗಡದ ಬಸಗುಂಡ ಬ್ಲಾಕ್‌ನಲ್ಲಿ 2015ರ ಅಕ್ಟೋಬರ್ 19ರಿಂದ 24ರ ನಡುವೆ ಅರೆಸೇನಾ ಸಿಬ್ಬಂದಿ ಮನೆಗಳನ್ನು ಕೊಳ್ಳೆ ಹೊಡೆದು, ಹಲವು ಮಹಿಳೆಯರಿಗೆ ಲೈಂಗಿಕ ಹಿಂಸೆ ನೀಡಿ ಅತ್ಯಾಚಾರ ಎಸಗಿದರು. ಸಂತ್ರಸ್ತರ ಹೇಳಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಫ್‌ಐಆರ್ ದಾಖಲಿಸಲು ಸೂಚಿಸಿದರು. ಇದು ಗಂಭೀರ ಪ್ರಕರಣ ಎಂದು ಒಪ್ಪಿಕೊಂಡರು. ಛತ್ತೀಸ್‌ಗಡದಲ್ಲಿ ಹಲವು ವರ್ಷಗಳಿಂದ ಪೊಲೀಸರು ಹಾಗೂ ಅರೆ ಮಿಲಿಟರಿ ಪಡೆಗಳ ವಿರುದ್ಧ ಕಾನೂನುಬಾಹಿರ ಹತ್ಯೆ, ಸಾಮೂಹಿಕ ಲೈಂಗಿಕ ಹಿಂಸಾಚಾರ ಆರೋಪಗಳು ಕೇಳಿ ಬರುತ್ತಲೇ ಇವೆ. ಸೈನಿಕರು ಅತ್ಯಾಚಾರ ಎಸಗುತ್ತಿಲ್ಲ ಎಂಬ ಮನೋಭಾವ ಹೊಂದಿರುವವರ ಬಾಯಿ ಮುಚ್ಚಿಸಲು ಬಹುಶಃ ಈ ಇತ್ತೀಚಿನ ನಿದರ್ಶನಗಳು ಸಾಕು.
ಶಿಕ್ಷಣ ತಜ್ಞೆ ಮತ್ತು ಲೇಖಕಿ ಸೀಮಾ ಖಾಜಿ ತಮ್ಮ ‘ಜೆಂಡರ್ ಆ್ಯಂಡ್ ಮಿಲಿಟರೈಸೇಷನ್ ಇನ್ ಕಾಶ್ಮೀರ್’ ಎಂಬ ಕೃತಿಯಲ್ಲಿ, 2005ರಲ್ಲಿ ನಡೆದ ಲೆಫ್ಟಿನೆಂಟ್ ಕರ್ನಲ್ ವಿ.ಕೆ.ಬಾತ್ರಾ ಅವರ ಸಂದರ್ಶನದ ಆಯ್ದ ಭಾಗವನ್ನು ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಸೇನೆ ವಿರುದ್ಧದ ಅತ್ಯಾಚಾರ ಆರೋಪಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ ಯೋಧರ ಕೃತ್ಯವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದ ಬಾತ್ರಾ, ಸೈನಿಕರು ತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದಿದ್ದರು. ಅಂದರೆ ಈ ಮೂಲಕ ಸೈನಿಕರ ಕೃತ್ಯವನ್ನು ಒಪ್ಪಿಕೊಂಡಿದ್ದರು. ಸೈನಿಕರನ್ನು ಸಮರ್ಥಿಸಿಕೊಳ್ಳುವ ಸೇನೆಯ ಸಂಸ್ಕೃತಿಯನ್ನು ಬಾತ್ರಾ ಮುಂದುವರಿಸಿದ್ದರು. ತವರಿನಿಂದ ದೂರ ಇದ್ದು ದೇಶರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ಎಂಬ ಕಾರಣಕ್ಕೆ ಅವರ ವಿರುದ್ಧ ಬೆರಳು ತೋರುವುದನ್ನು ಅವರಿಗೆ ಅವಮಾನ ಮಾಡಿದಂತೆ ಎಂದು ಹಲವರು ಭಾವಿಸುತ್ತಾರೆ. ಜವಾನ ಎಂಬ ಭಾರತೀಯ ಪದವೇ ಯುವ (ಯೌವನ) ಎಂಬ ಅಂಶವನ್ನು ಒಳಗೊಂಡಿದೆ.

ಈ ಯುವಕರು ಅತ್ಯಾಚಾರ ಎಸಗಿದರೂ, ಅವರಿಗೆ ಶಿಕ್ಷೆಯಾಗದಂತೆ ಈ ಮನೋಭಾವ ತಡೆಯುತ್ತದೆ. ಅವರ ಬಿಸಿರಕ್ತ ಇಂಥ ನಡವಳಿಕೆಗೆ ಪ್ರಚೋದಿಸಿರುತ್ತದೆ ಎನ್ನುವ ಮನೋಭಾವ ಇದೆ. ಇದೇ ಸೈನಿಕರು ಮತ್ತೆ ಮತ್ತೆ ಇಂಥ ಕ್ರೌರ್ಯ ಎಸಗಲು ಅನುವು ಮಾಡಿಕೊಡುತ್ತಿರುವ ಅಂಶ. ಭಾರತೀಯ ಸೈನಿಕರಿಗೆ ದೊರೆಯುತ್ತಿರುವ ಇಂಥ ಅಭಯವೇ ಈ ಘಟನೆಗಳು ಹೆಚ್ಚಲು ಕಾರಣ. ಯೋಧರು ದೇಶಕ್ಕಾಗಿ ತ್ಯಾಗ ಮಾಡುತ್ತಿದ್ದಾರೆ ಎಂಬ ಸಮಾನ್ಯ ಮನೋಭಾವದಿಂದಾಗಿ ಲಾಬಿದಾರರು ಸದಾ ಇಂಥ ಆರೋಪಗಳನ್ನು ಮಾಮೂಲಿ ರಾಗ ಎಂದೇ ಬಿಂಬಿಸುವ ಪ್ರಯತ್ನ ಮಾಡುತ್ತಾರೆ.
ಒಂದು ಸಂಸ್ಥೆಯಾಗಿ ಸೇನೆ, ತನ್ನ ಸೈನಿಕರು ಎಸಗಿದ ಕೃತ್ಯಗಳನ್ನು ಅಥವಾ ಅನ್ಯಾಯವನ್ನು ಸರಿಪಡಿಸಲು ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದೇ ಹೇಳಬೇಕಾಗುತ್ತದೆ. ಭಾರತೀಯ ಸೇನೆಯ ಯಾರೊಬ್ಬರ ವಿರುದ್ಧವೂ ಇದುವರೆಗೆ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವಿಚಾರಣೆ ನಡೆದಿಲ್ಲ. ಕೋರ್ಟ್ ಮಾರ್ಷಲ್ ಕೂಡಾ ಶಿಸ್ತುಕ್ರಮಕ್ಕೆ ಒತ್ತು ನೀಡುತ್ತವೆಯೇ ವಿನಃ ಶಿಕ್ಷೆಗಲ್ಲ ಎನ್ನುವುದಕ್ಕೆ 2004ರ ಮೇಜರ್ ರಹ್ಮಾನ್ ಪ್ರಕರಣ ಸಾಕ್ಷಿ. ಹಂದ್ವಾರದ ಬಡೇರ್ ಪಯೀನ್ ಎಂಬ ಗ್ರಾಮದಲ್ಲಿ 30 ವರ್ಷದ ಮಹಿಳೆ ಹಾಗೂ ಆಕೆಯ 8 ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಮೇಜರ್ ರಹ್ಮಾನ್ ಮೇಲಿತ್ತು. ಇದರಲ್ಲಿ ಆರೋಪಿ ತಪ್ಪಿತಸ್ಥ ಎನ್ನುವುದೂ ಸಾಬೀತಾಯಿತು. ಈ ಪ್ರಕರಣ ಭಾರತೀಯ ಸಂಸ್ಥೆಯ ಮೇಲಿದ್ದ ವಿಶ್ವಾಸ ಸಂಪೂರ್ಣ ನಾಶವಾಗಲು ಕಾರಣವಾಯಿತು ಮತ್ತು ಸೇನೆ ಎಸಗಿದ ಅನ್ಯಾಯ ಹಾಗೂ ದ್ರೋಹದ ಬಗ್ಗೆ ಕಾಶ್ಮೀರ ಜನತೆಯಲ್ಲಿ ನೆನಪುಗಳು ಮರುಕಳಿಸಲು ಕಾರಣವಾಯಿತು.
ಗುಪ್ತ ಅವರಂಥವರು ನೀಡುವ ಇಂಥ ಅಜಾಗರೂಕ ಹೇಳಿಕೆಗಳು ಇಂಥ ಕೃತ್ಯಗಳ ಸಮರ್ಥನೆಗೆ ದಾರಿಯಾಗುತ್ತವೆ. ಸೇನೆಯ ಯೋಧರು ನಡೆಸುವ ಅಪರಾಧಗಳು ಅವರು ತಮ್ಮ ಸೇವೆಗಾಗಿ ಪಡೆಯುವ ಗೌರವದ ನೆರಳಲ್ಲಿ ಮರೆಯಾಗಿ ಹೋಗುತ್ತವೆ. ಸೇನೆಯ ಯೋಧರು ಕಾಶ್ಮೀರದಲ್ಲಿ ಅತ್ಯಾಚಾರದಂಥ ಕೃತ್ಯದಲ್ಲಿ ತೊಡಗಿಲ್ಲ ಎನ್ನುವುದನ್ನು ಹೇಳುವುದು ಗುಪ್ತಾ ಅವರ ಹೇಳಿಕೆಯ ಉದ್ದೇಶವಾಗಿದ್ದರೂ, ಇದು ಹೆಚ್ಚಿನ ಮಹತ್ವವನ್ನೇನೂ ಹೊಂದಿಲ್ಲ. ಅತ್ಯಾಚಾರ ಎನ್ನುವುದು ನಮ್ಮ ಸಮಾಜದಲ್ಲಿ ಕಳಂಕವಾಗಿರುವುದರಿಂದ ಅಂಥ ಕೃತ್ಯಗಳು ಆಗಿದ್ದರೂ ಅದನ್ನು ಬಹಿರಂಗಗೊಳಿಸುವುದಕ್ಕೆ ನಮ್ಮ ಸಮಾಜ ಉತ್ತೇಜನ ನೀಡುವುದಿಲ್ಲ. ಗುಪ್ತ ಅವರ ಈ ಹೇಳಿಕೆ ಅವರನ್ನು ಕೂಡಾ ಬಿ.ಜಿ.ವರ್ಗೀಸ್ ಅವರಂಥ ಪತ್ರಕರ್ತರ ಸಾಲಿಗೆ ಸೇರಿಸುತ್ತದೆ. 1991ರಲ್ಲಿ ಕುನಾನ್ ಪೋಷಪುರ ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆ ಪ್ರಕರಣದಲ್ಲಿ ಭಾರತೀಯ ಸೇನೆ ವಿರುದ್ಧದ ಆರೋಪವನ್ನು ಖುಲಾಸೆಗೊಳಿಸುವಲ್ಲಿ ವರ್ಗೀಸ್ ಪ್ರಮುಖ ಪಾತ್ರ ವಹಿಸಿದ್ದರು. 4ನೆ ರಜಪೂತನ ರೈಫಲ್ಸ್ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 80 ಮಂದಿ ಮಹಿಳೆಯರ ವಿರುದ್ಧ ಅತ್ಯಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿ ರಚಿಸಿದ್ದ ಸಮಿತಿಯ ಸದಸ್ಯರಾಗಿದ್ದ ಬಿ.ಜಿ.ವರ್ಗೀಸ್, ಈ ಆರೋಪಗಳನ್ನು ದೊಡ್ಡ ಸುಳ್ಳು ಎಂದು ಬಣ್ಣಿಸಿದ್ದರು. ಅವರು ಯಾವ ಯಾವ ಗ್ರಾಮಗಳಿಗೆ ಭೇಟಿ ನೀಡಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದ್ದರೋ, ಆ ಗ್ರಾಮಗಳಿಗೆ ಭೇಟಿಯನ್ನೇ ನೀಡಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದರು.

ಸತ್ಯ ಪತ್ರಿಕೋದ್ಯಮದ ವೌಲ್ಯಗಳನ್ನು ಸ್ತುತಿಸುತ್ತಲೇ ಬಂದ ಗುಪ್ತ ಅವರಂಥ ಪತ್ರಕರ್ತರು ಮತ್ತು ಬುದ್ಧಿಜೀವಿಗಳು, ಸೈನಿಕರನ್ನು ಸಮರ್ಥಿಸಿಕೊಳ್ಳುತ್ತಿರುವುದು ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ಪ್ರಯತ್ನ ಎನ್ನಬಹುದು. ತಮ್ಮ ಭಾಷಣದಲ್ಲಿ ಕನ್ಹಯ್ಯಿ ಕುಮಾರ್, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವೆಡೆಗಳಲ್ಲಿ ಸೈನಿಕರು ಹೇಗೆ ಅತ್ಯಾಚಾರವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ವಿವರಿಸಿದ್ದರು. ಅವರ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗಿದ್ದರೂ, ಅದನ್ನು ಸಮರ್ಥಿಸಲು ಸಾಕಷ್ಟು ನಿದರ್ಶನಗಳೂ ಇವೆ. ಭಾರತದ ಮಾಧ್ಯಮ ಹಾಗೂ ಬುದ್ಧಿವಂತ ವಲಯಕ್ಕೆ ಸೇರಿರುವ ಗುಪ್ತ ಅವರಂಥ ಪತ್ರಕರ್ತರು ಸತ್ಯದ ಬಗ್ಗೆ ಕುರುಡು ದೃಷ್ಟಿಕೋನ ಹೊಂದಿರುವುದು ದುರದೃಷ್ಟಕರ. ಎಂದೂ ಇಂಥ ಪ್ರಕ್ಷುಬ್ಧ ಪ್ರದೇಶದಲ್ಲಿ ವಾಸಿಸದ ಇಂಥ ಬುದ್ಧಿವಂತ ಜನಾಂಗ, ಅವಮಾನ, ಪ್ರತೀಕಾರವನ್ನು ಸಹಿಸಿಕೊಂಡು ಸತ್ಯವನ್ನು ಹೇಳುವವರ ಬಗ್ಗೆ ನೈತಿಕವಾಗಿ ಹೊಣೆಗಾರಿಕೆ ಪ್ರದರ್ಶಿಸುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News