ಐಐಟಿ ಶುಲ್ಕ ದುಬಾರಿ: ಸ್ವಸ್ಥಸಮಾಜಕ್ಕೆ ವಿನಾಶಕಾರಿ
ಐಐಸಿ ಮಂಡಳಿಗಳ ಶಿಫಾರಸಿನಂತೆ ಕೇಂದ್ರ ಸರಕಾರ ಐಐಟಿಗಳ ಶುಲ್ಕ ಹೆಚ್ಚಿಸುತ್ತದೆ ಅಥವಾ ಇಲ್ಲ ಎಂಬ ಬಗ್ಗೆ ತಿಂಗಳುಗಳ ಕಾಲ ಇದ್ದ ಊಹಾಪೋಹಗಳಿಗೀಗ ತೆರೆ ಬಿದ್ದಿದೆ. ಐಐಟಿಗಳ ವಾರ್ಷಿಕ ಬೋಧನಾ ಶುಲ್ಕವನ್ನು ದುಪ್ಪಟ್ಟಿಗಿಂತಲೂ ಅಧಿಕಗೊಳಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಆದೇಶ ಹೊರಡಿಸಿದೆ. ಈ ಮೊದಲು 90 ಸಾವಿರ ರೂಪಾಯಿ ಇದ್ದ ಶುಲ್ಕ ಇದೀಗ 2 ಲಕ್ಷಕ್ಕೆ ಏರಿದೆ.
ಐಐಟಿ ಸ್ಥಾಯಿ ಸಮಿತಿ, ತಜ್ಞರ ಸಮಿತಿ ಹಾಗೂ ಉನ್ನತಾಧಿಕಾರದ ಐಐಟಿ ಸಮಿತಿ ದೊಡ್ಡಮಟ್ಟದ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳವಾಗುತ್ತದೆಯೇ ಎಂಬ ಬಗ್ಗೆ ಇದ್ದ ಪ್ರಶ್ನೆಗಿಂತ ಯಾವಾಗ ಹೆಚ್ಚಳವಾಗುತ್ತದೆ ಎನ್ನುವುದೇ ಪ್ರಮುಖವಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ನಿರ್ಧಾರ ಹಲವರಲ್ಲಿ ನಿರಾಸೆಗೆ ಕಾರಣವಾಗಿದೆ. ಅವರ ನಿರಾಸೆಗೆ ಕಾರಣಗಳು ಇಲ್ಲದಿಲ್ಲ.
ಈ ಶುಲ್ಕ ಹೆಚ್ಚಳ ಕೆಲವರ ಮೇಲೆ ಮಾತ್ರ ಪರಿಣಾಮ ಬೀರಬಹುದು ಎಂಬ ಕಲ್ಪನೆ ನಮ್ಮಲ್ಲಿದ್ದರೂ ವಾಸ್ತವವಾಗಿ ಸಮಾಜದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವುದು ಖಚಿತ. ಅದು ಹೇಗೆ ಎನ್ನುವುದನ್ನು ಒಂದೊಂದಾಗಿ ನೋಡೋಣ.
1. ಐಐಟಿ ಭವಿಷ್ಯವನ್ನು ದುರ್ಬಲಗೊಳಿಸುತ್ತದೆ, ಹೊಸ ಐಐಟಿಗಳನ್ನು ಸಾಯಿಸುತ್ತದೆ ಮತ್ತು ಕೈಗೆಟುಕುವ ಸಾರ್ವಜನಿಕ ಶಿಕ್ಷಣದ ಕನಸಿಗೆ ಕೊಳ್ಳಿ ಇಡುತ್ತದೆ.
ಕಳೆದ ಕೆಲ ವರ್ಷಗಳಿಂದ ಐಐಟಿಗಳ ಪ್ರಾಬಲ್ಯಕ್ಕೆ ಪಿಲಾನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್‌ನಂಥ ಖಾಸಗಿ ಸಂಸ್ಥೆಗಳು ಸವಾಲು ಒಡ್ಡುತ್ತಲೇ ಬಂದಿವೆ. ಅದಾಗ್ಯೂ ಬ್ರಾಂಡ್ ಪ್ರಯೋಜನ, ಒಳ್ಳೆಯ ಹಳೆವಿದ್ಯಾರ್ಥಿ ಜಾಲ, ಕಡಿಮೆ ಶುಲ್ಕ ಮತ್ತಿತರ ಕಾರಣಗಳಿಂದ ಐಐಟಿಗಳಿಗೆ ಮೇಲುಗೈ ಇತ್ತು.
ಆದರೆ ಇದೀಗ ಐಐಟಿ ಶುಲ್ಕ ಹೆಚ್ಚಳದಿಂದ ಐಐಟಿಗಳ ಪ್ರಾಥಮಿಕ ಲಾಭ ಹೊರಟುಹೋಗಿದೆ. ಬಿಐಟಿಎಸ್, ವಿಐಟಿ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯಗಳಂಥ ಖಾಸಗಿ ಸಂಸ್ಥೆಗಳ ವಿರುದ್ಧ ಈ ವಿಚಾರದಲ್ಲಿ ಇದ್ದ ಮೇಲುಗೈಗೆ ಇನ್ನು ಐಐಟಿಗಳಿಗೆ ಅವಕಾಶವಿಲ್ಲ. ಇದೀಗ ಈ ಸಂಸ್ಥೆಗಳ ಶುಲ್ಕದ ಮಟ್ಟಕ್ಕೇ ಐಐಟಿ ಶುಲ್ಕವೂ ಹೆಚ್ಚಿದೆ. ಜತೆಗೆ ಈ ಖಾಸಗಿ ಸಂಸ್ಥೆಗಳು ಖಾಸಗಿ ವಲಯದ ಜತೆ ಉತ್ತಮ ಸಂಬಂಧವನ್ನು ಹೊಂದಿದ್ದು, ನೀತಿಗಳು ಹೆಚ್ಚು ವಿದ್ಯಾರ್ಥಿಸ್ನೇಹಿಯಾಗಿರುತ್ತವೆ. ಇಲ್ಲಿ ಕೋರ್ಸ್‌ಗಳು ಕೂಡಾ ಹೆಚ್ಚು ಪರಿಷ್ಕೃತ ಪಠ್ಯಗಳನ್ನು ಒಳಗೊಂಡಿದ್ದು, ತೀರಾ ಕಠಿಣ ಎನಿಸುವ ನಿಯಮಾವಳಿಗಳು ಇಲ್ಲಿಲ್ಲ.
ಇದರ ಜತೆಗೆ ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೂ ದ್ವಾರ ಮುಕ್ತವಾಗಿದೆ. ಜತೆಗೆ ಖಾಸಗಿ ವಲಯದ ದೊಡ್ಡ ಕುಳಗಳಾದ ಅಂಬಾನಿ, ಮಿತ್ತಲ್, ಅನಿಲ್ ಅಗರ್‌ವಾಲ್ ಅವರಂಥ ಮಂದಿ ಉನ್ನತ ಶಿಕ್ಷಣ ಕ್ಷೇತ್ರ ಪ್ರವೇಶಿಸಿ, ಅದನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ರಾಷ್ಟ್ರರತ್ನಗಳು ಎನಿಸಿಕೊಂಡ ಐಐಟಿಗಳ ಹಾದಿ ಕಠಿಣವಾಗಿದೆ.
ಈ ಶುಲ್ಕ ಹೆಚ್ಚಳ ಹಾಗೂ ಖಾಸಗಿ ವಲಯದ ಪೈಪೋಟಿಯನ್ನು ಐಐಟಿಗಳು ಪರಿಗಣಿಸಿದಂತಿಲ್ಲ. ಇನ್ನೂ ಅಭಿವೃದ್ದಿ ಹಂತದಲ್ಲಿರುವ ಐಐಟಿಗಳ ಪಾಲಿಗಂತೂ ಇದು ಮಾರಕ ನಿರ್ಧರ. ಏಕೆಂದರೆ ಇನ್ನೂ ಸಾಧನೆಯ ಹಾದಿಯಲ್ಲಿ ಸಾಗಬೇಕಿರುವ ಹಂತದಲ್ಲೇ ದೊಡ್ಡ ಶುಲ್ಕವನ್ನು ವಿಧಿಸುವ ಕಾರಣದಿಂದಾಗಿ ಪ್ರತಿಭೆಗಳನ್ನು ಈ ಸಂಸ್ಥೆಗಳು ಆಕರ್ಷಿಸುವುದು ಕಷ್ಟಸಾಧ್ಯ.
ಹೀಗೆ ಹೊಸ ಐಐಟಿಗಳು ಶೈಶವಾವಸ್ಥೆಯಲ್ಲೇ ದುರ್ಬಲಗೊಳ್ಳಲಿದ್ದು, ರಾಷ್ಟ್ರದ ಹೆಮ್ಮೆಯ ಸಂಸ್ಥೆಗಳಾಗಿ ಬೆಳೆಯುವ ಸಾಧ್ಯತೆ ಕ್ಷೀಣಿಸಿದೆ. ಇವುಗಳ ಅಭಿವೃದ್ಧಿಗೆ ಸರಕಾರ ಹೂಡಿಕೆ ಮಾಡುತ್ತಿರುವ ದೊಡ್ಡ ಪ್ರಮಾಣದ ಸಂಪನ್ಮೂಲ ವ್ಯರ್ಥವಾಗುವ ಎಲ್ಲ ಸಾಧ್ಯತೆಯೂ ಇದೆ.
ಇದಕ್ಕಿಂತಲೂ ಹೆಚ್ಚಾಗಿ ದೀರ್ಘಾವಧಿಯಲ್ಲಿ ಇಂಥ ಶ್ರೇಷ್ಠ ಸಂಸ್ಥೆಗಳಿಗೆ ಮಾಡುವ ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವುದರಿಂದ ಹಳೆಯ ಹಾಗೂ ಹೊಸ ಸಂಸ್ಥೆಗಳು ಖಾಸಗಿ ವಲಯಕ್ಕೆ ಹೋಲಿಸಿದರೆ ದುರ್ಬಲವಾಗುವುದರಲ್ಲಿ ಸಂಶಯವೇ ಇಲ್ಲ. ಅಂದರೆ ನಮ್ಮ ಸರಕಾರಿ ಶಿಕ್ಷಣ ಪದ್ಧತಿಯನ್ನು ದುರ್ಬಲಗೊಳಿಸಿ, ಉನ್ನತ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಹುನ್ನಾರ ಎಂದೇ ಹೇಳಬೇಕಾಗುತ್ತದೆ.
ಹಿಂಬಾಗಿಲ ಮೂಲಕ ಖಾಸಗೀಕರಣ ಮಾಡಿದರೆ ತಪ್ಪೇನು ಎಂಬ ಪ್ರಶ್ನೆಯೂ ಸಹಜವಾಗಿಯೇ ಎದುರಾಗುತ್ತದೆ. ಇಂಥವರು ಖಾಸಗಿ ಪ್ರಾಬಲ್ಯದ ಅಮೆರಿಕ ಶಿಕ್ಷಣ ವ್ಯವಸ್ಥೆಯ ಕಡೆಗೊಮ್ಮೆ ದೃಷ್ಟಿ ಹಾಯಿಸಬೇಕು. ಇಲ್ಲಿ ಖಾಸಗೀಕರಣದ ಫಲವಾಗಿ ಇಡೀ ವಿದ್ಯಾರ್ಥಿ ಸಮುದಾಯ ಸಾಲದ ಸುಳಿಯಲ್ಲಿ ಸಿಕ್ಕಿದ್ದು, ದೇಶದ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಸಾರ್ವಜನಿಕ ಕ್ಷೇತ್ರ ಖಾಸಗಿಯೆದುರು ಮಂಡಿಯೂರಿದರೆ ಏನಾಗುತ್ತದೆ ಎನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ. ಹೆಚ್ಚುವ ಅಸಮಾನತೆ, ಸಂಶೋಧನಾ ಮನೋಭಾವ ಕಡಿಮೆಯಾಗುವುದು ಹಾಗೂ ವೈವಿಧ್ಯತೆಯ ಕೊರತೆ, ಖಾಸಗಿ ಶಿಕ್ಷಣ ವ್ಯವಸ್ಥೆಯ ಇತರ ಲೋಪಗಳು.
ಜತೆಗೆ ಈ ಶುಲ್ಕ ಹೆಚ್ಚಳ ಕೇವಲ ಐಐಟಿಗಳಿಗಷ್ಟೇ ಸೀಮಿತ ಎಂದು ಸುಮ್ಮನಾಗುವಂತಿಲ್ಲ. ನಾಳೆ ಇತರ ಸರಕಾರಿ ಶಿಕ್ಷಣ ಸಂಸ್ಥೆಗಳೂ ಐಐಟಿ ನಿದರ್ಶನವನ್ನು ಮಾನದಂಡವಾಗಿಟ್ಟುಕೊಂಡು ಶುಲ್ಕ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಒತ್ತಡ ಹಾಗೂ ಕಡಿಮೆ ಆದಾಯದ ಸ್ಥಿತಿಯಲ್ಲಿರುವ ಸಾಮಾನ್ಯ ಭಾರತೀಯರು ಕೂಡಾ ಇದಕ್ಕೆ ಬೆಲೆ ತೆರಬೇಕಾಗುತ್ತದೆ.
2. ಏಕಸ್ವಾಮ್ಯ
ದಶಕಗಳ ಕಾಲದಿಂದಲೂ ಭಾರತ ಸರಕಾರ ತನ್ನ ನೀತಿಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಏಕಸ್ವಾಮ್ಯ ಹೊಂದಿತ್ತು. ಖಾಸಗಿಯವರು ಈ ಕ್ಷೇತ್ರಕ್ಕೆ ತೆರೆದುಕೊಳ್ಳುವುದು ಮತ್ತು ಇಲ್ಲಿ ಕಾರ್ಯಾಚರಿಸುವುದಕ್ಕೆ ಅವಕಾಶ ಸೀಮಿತವಾಗಿತ್ತು. ಆದ್ದರಿಂದ ಅತ್ಯುನ್ನತ ತಾಂತ್ರಿಕ ಶಿಕ್ಷಣದಲ್ಲಿ ಐಐಟಿಗಳು ಪ್ರಾಬಲ್ಯ ಹೊಂದಿವೆ. ಇವುಗಳಿಗೆ ಪೈಪೋಟಿಯೇ ಇಲ್ಲ ಎನ್ನುವ ಸ್ಥಿತಿ ಇದೀಗ ವೇಗವಾಗಿ ಬದಲಾಗುತ್ತಿದೆ ಎನ್ನುವುದು ಬೇರೆ ಸಂಗತಿ.
ಈ ಕ್ಷೇತ್ರದಲ್ಲಿ ಮಾರುಕಟ್ಟೆ ಬೆಳೆಯಲು ಅವಕಾಶವನ್ನೇ ನೀಡದೇ ಇದೀಗ ದಿಢೀರನೆ ಸರಕಾರ ಎಚ್ಚೆತ್ತುಕೊಂಡು ಮಾರುಕಟ್ಟೆ ದರದಲ್ಲಿ ಬದಲಾವಣೆ ಘೋಷಿಸಲಾಗದು. ಸಾರ್ವಜನಿಕ ಕಲ್ಯಾಣದ ಹೆಸರಿನಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸಿ, ಇದೀಗ ಶುಲ್ಕವನ್ನು ದುಪ್ಪಟ್ಟಿಗಿಂತಲೂ ಅಧಿಕವಾಗಿಸಿ, ವಾರ್ಷಿಕ 2 ಲಕ್ಷಕ್ಕೆ ನಿಗದಿಪಡಿಸಿದೆ. ಭಾರತದಲ್ಲಿ ಬಹುತೇಕ ವಿದ್ಯಾರ್ಥಿಗಳು ಇಂದಿಗೂ ಐಐಟಿಗಳನ್ನೇ ಅತ್ಯುತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಎಂದು ನಂಬಿಕೊಂಡಿದ್ದು, ಜನಸಾಮಾನ್ಯ ಭಾರತೀಯರ ಅಸಹಾಯಕತೆಯನ್ನು ಸರಕಾರ ಇದೀಗ ದುರ್ಬಳಕೆ ಮಾಡಿಕೊಂಡಿದೆ.
ಇದರ ಜತೆಗೆ ವೆಚ್ಚವನ್ನು ಭರಿಸಿಕೊಳ್ಳಲಾಗುತ್ತಿದೆ ಎಂಬ ತರ್ಕ ಕೂಡಾ ಅನುಮಾನಾಸ್ಪದ. ಉದಾಹರಣೆಗೆ ಬಿಐಟಿಎಸ್ ಐಐಟಿಗಳಂತೆ ಉಚಿತ ಭೂಮಿಯನ್ನು ಕೂಡಾ ಪಡೆಯದಿದ್ದರೂ, ಐಐಟಿಗಳಷ್ಟೇ ಗುಣಮಟ್ಟದ ಶಿಕ್ಷಣವನ್ನು ಅದೇ ವೆಚ್ಚದಲ್ಲಿ ನೀಡುತ್ತದೆ. ಆದರೆ ಐಐಟಿ ಪ್ರೊಫೆಸರ್‌ಗಳಿಗೆ ಕಡಿಮೆ ವೇತನ ಇದ್ದು, ಉಚಿತವಾಗಿ ಭೂಮಿ ಸಿಕ್ಕಿದರೂ, ಐಐಟಿಗಳಲ್ಲಿ ಬಿಐಟಿಎಸ್‌ಗಿಂತ ಹೆಚ್ಚಿನ ಬೋಧನಾ ಶುಲ್ಕವನ್ನು ಏಕೆ ವಿಧಿಸುತ್ತದೆ? ಐಐಟಿ ಸೌಲಭ್ಯಗಳ ವೆಚ್ಚ ಕಡಿಮೆ ಇದ್ದೂ, ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎನ್ನುವುದು ವಾಸ್ತವ.
3. ಮುಕ್ತ ಯೋಚನೆಗೆ ಅಡ್ಡಿ ಹಾಗೂ ಸಾಲಕ್ಕೆ ಬಲಿಯಾಗುವ ವಿದ್ಯಾರ್ಥಿಗಳು
ಹಲವು ಮಂದಿ ಐಐಟಿ ಹಳೆವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಇದು ಸಾಧ್ಯವಾಗಿರುವುದು ಐಐಟಿ ಶಿಕ್ಷಣ ಅವರಿಗೆ ವಿಶ್ವದಲ್ಲಿ ಸಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಿರುವ ಕಾರಣದಿಂದ. ಸಮಾಜದ ವಿಭಿನ್ನ ಹಿನ್ನೆಲೆಯಿಂದ ಬಂದ ವರ್ಗಗಳ ಜತೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ. ಇದೀಗ ಅವರಿಗೆ ಶುಲ್ಕದ ದೊಡ್ಡ ಹೊರೆ ವಿಧಿಸುವುದರಿಂದ ಅವರ ಮರುಪಾವತಿಯ ಚಿಂತೆ ಅವರ ಎಲ್ಲ ಸೃಜನಶೀಲ, ಮುಕ್ತ ಹಾಗೂ ಶಕ್ತಿಶಾಲಿ ಸಮಯವನ್ನು ತಿಂದುಹಾಕುತ್ತದೆ.
ಇದೀಗ ಈ ದೊಡ್ಡ ಮೊತ್ತದ ಶುಲ್ಕ ವಿದ್ಯಾರ್ಥಿಗಳನ್ನು ಸಾಲಕ್ಕೆ ಶರಣಾಗುವಂತೆ ಮಾಡುತ್ತದೆ. ಇವರು ತಮ್ಮ ಅಧ್ಯಯನ ಮತ್ತು ಇಷ್ಟಗಳಿಗೆ ಗಮನ ಹರಿಸುವುದು ಕಷ್ಟ. ಏಕೆಂದರೆ ಅವರ ಮನಸ್ಸು ದೊಡ್ಡ ಮೊತ್ತದ ಸಾಲವನ್ನು ಮರುಪಾವತಿ ಮಾಡುವ ಚಿಂತೆಗೇ ಒತ್ತು ನೀಡಬೇಕಾಗುತ್ತದೆ. ಇದು ಸಹಜವಾಗಿಯೇ ಈ ಸಮುದಾಯದ ಜಾಣ್ಮೆ, ಸಂಶೋಧನಾ ಮನೋಭಾವ ಹಾಗೂ ಮುಕ್ತ ಚಿಂತನೆಯನ್ನು ತಿಂದುಹಾಕಿ, ವೈಟ್ ಕಾಲರ್ ಕಾರ್ಮಿಕರಾಗಿಯೇ ಜೀವನ ಸವೆಸಬೇಕಾಗುತ್ತದೆ. ನಮ್ಮ ಉತ್ತಮ ಪ್ರತಿಭೆಗಳು ಸಮಾಜದ ಚಿಂತಕರಾಗಿ, ಕಲಾವಿದರಾಗಿ ಆರೋಗ್ಯಪೂರ್ಣ, ವಿಮರ್ಶಾತ್ಮಕ ಹಾಗೂ ವೈವಿಧ್ಯಮಯ ಮತ್ತು ಅದ್ಭುತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಕೊಡುಗೆ ನೀಡದಿದ್ದರೆ ಎಂಥ ಸಮಾಜ ನಿರ್ಮಾಣವಾಗಬಹುದು?
4. ಆರಂಭಿಕ ಉದ್ಯಮಕ್ಕೆ ಪೆಟ್ಟು
ಭಾರತದಲ್ಲಿ ಉದ್ದಿಮೆ ಆರಂಭದಲ್ಲಿ ಯುವಸಮುದಾಯ ಆಸಕ್ತಿ ತೋರುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಹಲವು ಮಂದಿ ವಿದ್ಯಾರ್ಥಿಗಳು ಉದಯೋನ್ಮುಖ ಉದ್ಯಮಿಗಳಾಗಿ ಬೆಳೆಯುತ್ತಿದ್ದಾರೆ. ಐಐಟಿ ಹಳೆವಿದ್ಯಾರ್ಥಿಗಳು ಪ್ರಮುಖ ಬದಲಾವಣೆಯ ಮುಂಚೂಣಿಯಲ್ಲಿದ್ದಾರೆ. ಅದು ಫ್ಲಿಪ್‌ಕಾರ್ಟ್ ಅಥವಾ ಸ್ನ್ಯಾಪ್‌ಡೀಲ್ ಇರಬಹುದು; ಹೀಗೆ ಹಲವು ಉದ್ಯಮಗಳನ್ನು ಕೈಗೆಟುಕುವ ದರದಲ್ಲಿ ಐಐಟಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹುಟ್ಟುಹಾಕಿದ್ದಾರೆ.
ಆದರೆ ಈ ಶುಲ್ಕ ಹೆಚ್ಚಳ ಸಹಜವಾಗಿಯೇ ಇಂಥ ಹೊಸ ಸಾಹಸಗಳಿಗೆ ನಿರುತ್ತೇಜಕವಾಗಿ ಪರಿಣಮಿಸುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಸಾಲ ಮರುಪಾವತಿ ಬಗ್ಗೆಯೇ ತಲೆ ಕೆಡಿಸಿಕೊಳ್ಳಬೇಕಾಗಿರುವುದರಿಂದ ಅವರಿಗೆ ಉದ್ಯಮ ಅಥವಾ ಇತರ ಹೊಸ ಸಾಹಸಗಳ ಬಗ್ಗೆ ಯೋಚಿಸಲು ಸಮಯಾವಕಾಶವೇ ಇಲ್ಲ. ಏಕೆಂದರೆ ಹೊಸ ಉದ್ಯಮದ ಆರಂಭಿಕ ಹಂತದಲ್ಲಿ ಲಾಭ ಕಡಿಮೆ ಹಾಗೂ ಅಪಾಯ ಸಾಧ್ಯತೆ ಅಧಿಕ. ಆದ್ದರಿಂದ ಈ ಕ್ರಮ ಖಂಡಿತವಾಗಿಯೂ ಇಂಥ ಹೊಸ ಸಾಹಸದ ಸಂಸ್ಕೃತಿಗೆ ಮಾರಕ. ವಿದ್ಯಾರ್ಥಿಗಳು ತಮ್ಮ ಸಾಲ ಮರುಪಾವತಿಗಾಗಿ ಉದ್ಯೋಗ ಬೇಟೆಗೆ ಮುಂದಾಗುತ್ತಾರೆಯೇ ವಿನಃ ಮತ್ತೆ ಹೊಸ ಸಾಹಸ ಕೈಗೊಳ್ಳುವ ಧೈರ್ಯ ತೋರುವುದಿಲ್ಲ. ಇದು ಉದ್ಯೋಗ ಸೃಷ್ಟಿಯನ್ನು ಸ್ಥಗಿತಗೊಳಿಸುತ್ತದೆ, ಸಂಪತ್ತಿನ ಸೃಷ್ಟಿ ಹಾಗೂ ತೆರಿಗೆ ಸಂಗ್ರಹದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರಕಾರಕ್ಕೆ ಅಂತಿಮವಾಗಿ ಶುಲ್ಕ ಹೆಚ್ಚಳದಿಂದ ನಷ್ಟವೇ ಹೊರತು ಲಾಭವಲ್ಲ.
5. ಕ್ಯಾಂಪಸ್ ವಿಭಜನೆ
ಶುಲ್ಕ ಹೆಚ್ಚಳದ ಈ ಕ್ರಮ ವಿಭಜಿತ ಕ್ಯಾಂಪಸ್ ಸೃಷ್ಟಿಗೆ ಕಾರಣವಾಗುತ್ತದೆ. ಪರಿಣಾಮವಾಗಿ ವಿಭಜಿತ ಸಮಾಜ ರೂಪುಗೊಳ್ಳುತ್ತದೆ. ಶುಲ್ಕ ವಿನಾಯಿತಿ ಪಡೆದವರು ಹಾಗೂ ಅಧಿಕ ಶುಲ್ಕ ಪಾವತಿಸಿ ಬಂದಿರುವವರ ನಡುವೆ ಸಹಜವಾಗಿಯೇ ಅಂತರ ಬೆಳೆಯುತ್ತದೆ. ಸಹಜವಾಗಿಯೇ ಉಚಿತವಾಗಿ ಶಿಕ್ಷಣ ಪಡೆಯುವವರು, ಅಧಿಕ ಶುಲ್ಕ ಪಾವತಿಸಿ ಬಂದ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿ, ಕ್ಯಾಂಪಸ್ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ದೇಶದ ಭವಿಷ್ಯ ಎನಿಸಿಕೊಂಡಿರುವ ನಮ್ಮ ಯುವ ಸಮುದಾಯದಲ್ಲಿ ಇಂಥ ಮನೋಭಾವ ಬೆಳೆಯುವುದು, ವೈವಿಧ್ಯತೆಯೇ ಜೀವಾಳವಾಗಿರುವ ಭಾರತದಂಥ ದೇಶಕ್ಕೆ ಮಾರಕ.
ಆದ್ದರಿಂದ ಐಐಟಿ ಶುಲ್ಕ ಹೆಚ್ಚಳದಂಥ ಕ್ರಮವನ್ನು ಹೆಚ್ಚು ಎಚ್ಚರಿಕೆಯಿಂದ ವಿಶ್ಲೇಷಿಸಬೇಕಾಗುತ್ತದೆ. ಜತೆಗೆ ಅದು ಬೀರಬಹುದಾದ ದೀರ್ಘಾವಧಿ ಪರಿಣಾಮಗಳ ಬಗ್ಗೆಯೂ ಚರ್ಚಿಸುವುದು ಅಗತ್ಯವಾಗುತ್ತದೆ. ತೆರಿಗೆಪಾವತಿದಾರರ ಹೆಚ್ಚಿನ ಹಣವನ್ನು ಉನ್ನತ ಶಿಕ್ಷಣ ಕ್ಷೇತ್ರದಿಂದ ಹಿಂದಕ್ಕೆ ಪಡೆಯಬೇಕು ಎಂಬ ಮನೋಭಾವ ದಟ್ಟವಾಗುತ್ತಿರುವ ಹಿನ್ನೆಲೆಯಲ್ಲಿ, ಶುಲ್ಕ ಹೆಚ್ಚಳದ ಕ್ರಮ ಅನೇಕರ ಹುಬ್ಬೇರಿಸದು.
ಆದರೆ ಮೇಲೆ ಚರ್ಚಿಸಿದ ಕಾರಣಗಳ ಹಿನ್ನೆಲೆಯಲ್ಲಿ, ಶಿಕ್ಷಣವನ್ನು ಕೇವಲ ಖಾಸಗಿ ಕಲ್ಯಾಣ; ಆದ್ದರಿಂದ ಅದಕ್ಕೆ ಸಂಪೂರ್ಣ ಶುಲ್ಕ ವಿಧಿಸಬೇಕು ಎಂಬ ಪ್ರತಿಪಾದನೆಗಳು ಅರ್ಥಹೀನವಾಗುತ್ತವೆ. ಒಂದು ದೇಶದ ಸಮೃದ್ಧ, ಪ್ರಜ್ಞಾವಂತ ಹಾಗೂ ವೈವಿಧ್ಯಮಯ ಸಮಾಜ ಸೃಷ್ಟಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ನಿರ್ವಿವಾದ.
ರಿಯಾಯಿತಿದರದಲ್ಲಿ ಐಐಟಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನಾವು ನಮ್ಮೆಲ್ಲರ ಸಂಘಟಿತ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಮಾಡುತ್ತಿರುವ ಹೂಡಿಕೆ ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಯೋಚಿಸಿದರೆ, ಐಐಟಿ ಸಬ್ಸಿಡಿಯನ್ನು ಕಡಿತಗೊಳಿಸುವ ಮೂಲಕ ನಾವು ನಮ್ಮ ಉಜ್ವಲ ಭವಿಷ್ಯದ ಸಾಧ್ಯತೆಯನ್ನೂ ಕಡಿತಗೊಳಿಸುತ್ತಿದ್ದೇವೆ ಎಂದೇ ಅರ್ಥ. ಆದ್ದರಿಂದ ಇದನ್ನು ಪೈಸೆ ಪೈಸೆ ಲೆಕ್ಕಾಚಾರ ಹಾಕುವುದು ಮೂರ್ಖತನದ ಪರಮಾವಧಿ.