ಕೆರೆಕಾಡು ಕೊರಗರ ಹಾಡಿಯಲ್ಲಿ ಹಬ್ಬದ ವಾತಾವರಣ

Update: 2016-04-15 18:19 GMT

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಎಚ್. ಆಂಜನೇಯ ಅವರು ಗ್ರಾಮವಾಸ್ತವ್ಯಕ್ಕೆ ಪಡುಪಣಂಬೂರಿನ ಕೆರೆಕಾಡಿನ ಕೊರಗ ಹಾಡಿಗೆ ಆಗಮಿಸುವ ಹಿನ್ನೆಲೆಯಲ್ಲಿ ಶನಿವಾರ ಕಾಲನಿ ಸಂಪೂರ್ಣ ಮದುವಣಗಿತ್ತಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿತ್ತು. ತೆಂಗಿನ ಗರಿಯ ಸಾಂಪ್ರದಾಯಿಕ ಪ್ರವೇಶ ದ್ವಾರದ ಮೂಲಕ ಬೆಳಗ್ಗೆ ಸುಮಾರು 10:30ಕ್ಕೆ ಆಗಮಿಸಿದ ಸಚಿವ ಆಂಜನೇಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಕೊರಗರ ಸಾಂಪ್ರದಾಯಿಕ ಡೋಲು ಹಾಗೂ ಕೊಳಲು ವಾದನದೊದಿಗೆ ಸ್ವಾಗತಿಸಲಾಯಿತು. ಸಚಿವರು ವಾಸ್ತವ್ಯ ಹೂಡಲಿರುವ ಬೇಬಿ ಅವರ ಮನೆ ಸೇರಿದಂತೆ ಅಲ್ಲಿನ ಒಟ್ಟು 14 ಮನೆಗಳವರೂ ಕಾರ್ಯಕ್ರಮದಲ್ಲಿ ಅತ್ಯಂತ ಸಂಭ್ರಮದಿಂದ ಭಾಗವಹಿಸಿ ಆತಿಥ್ಯ ನೀಡಿದರು. ಕಾಲನಿಯಲ್ಲಿ ಸ್ವಚ್ಛತೆ ಪ್ರಮುಖ ಅಂಶವಾಗಿದ್ದು, ಊಟೋಪಚಾರದ ವ್ಯವಸ್ಥೆಯಲ್ಲೂ ಅಚ್ಚುಕಟ್ಟನ್ನು ಕಾಪಾಡಿಕೊಳ್ಳಲಾಗಿತ್ತು. ಸ್ಥಳಾಂತರಿಸಬಹುದಾದ ಸಾಮೂಹಿಕ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕಾಲನಿಯ ಸಮೀಪದಲ್ಲೇ ಇದ್ದ ಜಾಗವನ್ನು ಹದಗೊಳಿಸಿ ವೇದಿಕೆಯನ್ನು ಸಿದ್ಧಗೊಳಿ ಸಲಾಗಿದ್ದು, ಅಲ್ಲಿ ಸಚಿವರು ಕೊರಗರ ಸಾಂಪ್ರದಾಯಿಕ ಡೋಲು ಬಾರಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಸಚಿವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಅಧಿಕಾರಿಗಳು ಕೇಕ್ ಕತ್ತರಿಸುವಂತೆ ಸಚಿವರನ್ನು ಕೋರಿಕೊಂಡಾಗ ಅವರು ತಿರಸ್ಕರಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಸವಲತ್ತುಗಳನ್ನು ವಿತರಿಸಿದ ಸಚಿವರು, ಕೊರಗ ಸಮುದಾಯದವರ ಅಹವಾಲು, ಬೇಡಿಕೆಗಳನ್ನು ಆಲಿಸಿದರು. ಬಳಿಕ ಸಂವಾದ ನಡೆಸಿದರು. ಕೊರಗ ಯುವಕರಿಂದ ಅಚ್ಚುಕಟ್ಟಾದ ಊಟದ ವ್ಯವಸ್ಥೆ

ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಅತಿಥಿಗಳು, ಸಭಿಕರು ಹಾಗೂ ಅಧಿಕಾರಿಗಳು ಸೇರಿದಂತೆ ಸುಮಾರು 1,000 ಮಂದಿಗೆ ಬೇಕಾಗುವಷ್ಟು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೆರೆಕಾಡು ಕೊರಗ ಸೇವಾ ಸಂಘದ ಯುವಕರು ಸಿದ್ಧಪಡಿಸಿದ್ದರು. ಕೊರಗ ಒಕ್ಕೂಟದಿಂದ ಸಚಿವ ಆಂಜನೇಯರಿಗೆ ಮನವಿ

 ಪಡುಪಣಂಬೂರಿನ ಕೆರೆಕಾಡುವಿನಲ್ಲಿ ಇಂದು ಗ್ರಾಮ ವಾಸ್ತವ್ಯಕ್ಕೆ ಆಗಮಿಸಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಆಂಜನೇಯರಿಗೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಸಂಜೀವ ಕೋಡಿಕಲ್ ಮನವಿ ಸಲ್ಲಿಸಿದರೆ, ಸಮುದಾಯದ ಪ್ರತಿನಿಧಿ ಮತ್ತಡಿ ಬೇಡಿಕೆಗಳನ್ನು ಪ್ರಸ್ತಾಪಿಸಿದರು. 1986ರಲ್ಲಿ ಕೊರಗರನ್ನು ಪ್ರಿಮಿಟಿವ್ ಟ್ರೈಬ್ (ಕೃಷಿ ಪೂರ್ವದ ನಾಗರಿಕತೆ ಹಂತದಲ್ಲಿರುವ ಪಂಗಡ) ಎಂದು ಗುರುತಿಸಲಾಗಿದ್ದು, ಸಮುದಾಯದ ಜನಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿ ಯುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಸದಸ್ಯರ ಆರೋಗ್ಯದ ಬಗ್ಗೆ ಸಮಗ್ರ ಅಧ್ಯಯನ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ವ್ಯಕ್ತಿಯ ಆರೋಗ್ಯ ವೆಚ್ಚವನ್ನು ಭರಿಸಬೇಕು. ಕೊರಗ ಸಮುದಾಯ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದು, ಯುವಕರಿಗೆ ಸರಕಾರಿ, ಖಾಸಗಿ ಹಾಗೂ ಸರಕಾರೇತರ ವಲಯಗಳಲ್ಲಿ ಸಮಾನ ವೇತನ ಆಧಾರದಲ್ಲಿ ಉದ್ಯೋಗ ಒದಗಿಸಬೇಕು.

ಜಿಲ್ಲಾ ಮಟ್ಟದಲ್ಲಿ ಮಾದರಿ ಸ್ವಯಂ ಉದ್ಯೋಗ ಕೇಂದ್ರಗಳನ್ನು ತೆರೆದು ತರಬೇತಿ ನೀಡಿ ಉದ್ಯೋಗಾವಕಾಶ ನೀಡಬೇಕು. ಡಾ. ಮುಹಮ್ಮದ್ ಪೀರ ವರದಿಯ ಉಲ್ಲೇಖದಂತೆ ಸ್ವ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ನಡೆಸಲು ಪೂರ್ವ ಹಂತದ ತಯಾರಿ ಮಾಡಬೇಕು. ಕರ್ನಾಟಕದ ಪ್ರಿಮಿಟಿವ್ ಟ್ರೈಬ್ ಗುಂಪುಗಳಿಗೆ ಆರೋಗ್ಯ ಸಹಾಯಧನಕ್ಕಾಗಿ ಕೇಂದ್ರದಿಂದ ಅನುದಾನ ಬಿಡುಗಡೆಗೆ ಪ್ರಯತ್ನಿಸಬೇಕು. ತಾಲೂಕು ಮಟ್ಟದಲ್ಲಿ ಕನಿಷ್ಠ 100 ಎಕರೆ ಭೂಮಿ ನೀಡಿ ಕೊರಗರ ಸಾಂಸ್ಕೃತಿಕ ವಲಯಗಳನ್ನಾಗಿ ಘೋಷಣೆ ಮಾಡಬೇಕು. ಮಾದರಿ ಸ್ವಯಂ ಉದ್ಯೋಗ ಕೇಂದ್ರಗಳನ್ನಾಗಿ ಮಾಡಬೇಕು. ಕೃಷಿ ಮಾದರಿ ಕೇಂದ್ರಗಳನ್ನಾಗಿ ಮಾಡಬೇಕು. ಕುಲಕಸುಬು ಬುಟ್ಟಿ ಹೆಣೆಯುವುದಾಗಿದ್ದು, ಅದಕ್ಕೆ ಬೆಂಬಲ ಬೆಲೆ ನೀಡಬೇಕು. ಅರಣ್ಯ ಇಲಾಖೆಯಲ್ಲಿ ಕುಲಕಸುಬಿಗೆ ಕಚ್ಚಾವಸ್ತು ಸಂಗ್ರಹಣೆಗೆ ಅನುಮತಿ ಒದಗಿಸುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಕೊರಗರು ಸಾಮೂಹಿಕ ಜೀವಿಗಳಾಗಿರುವುದರಿಂದ ಹೋಬಳಿ ಮಟ್ಟದಲ್ಲಿ ಸಾಮೂಹಿಕ ಕೃಷಿ ಯೋಗ್ಯ ಭೂಮಿ ಕೊಟ್ಟು ಸಾಮೂಹಿಕ ಕೃಷಿ ಮತ್ತು ನೀರಾವರಿಗೆ ವ್ಯವಸ್ಥೆ ಮಾಡ ಬೇಕು. ಕೊರಗ ಸಮುದಾಯಕ್ಕೆ ಮನೆ ಯೋಜನೆ ವೆಚ್ಚವನ್ನು 6 ಲಕ್ಷ ರೂ.ಗಳಿಗೆ ಏರಿಕೆ ಮಾಡುವು ದಲ್ಲದೆ, ಐಟಿಡಿಪಿ ಗುರುತಿನ ಚೀಟಿ ಆಧಾರದ ಮೇಲೆ ವಾಸ್ತವ್ಯ ದೃಢೀಕರಣ ಪತ್ರವನ್ನು ಪಿಡಿಒ ಅವರಿಂದ ಪಡೆದು ಹೊಸ ಮನೆಯ ಯೋಜನೆ ಪಡೆಯಲು ಅವಕಾಶ ಕಲ್ಪಿಸಬೇಕು. ಶಿಕ್ಷಣದಲ್ಲಿ ಹಿಂದುಳಿದಿರುವ ಕೊರಗ ಸಮುದಾಯದಿಂದ ಆಂಗ್ಲ ಮಾಧ್ಯಮ ಶಾಲೆಗೆ ಹೋಗುವ ಮಕ್ಕಳ ಶುಲ್ಕವನ್ನು ಸಂಪೂರ್ಣವಾಗಿ ಸರಕಾರ ಭರಿಸಬೇಕು. ಉನ್ನತ ಶಿಕ್ಷಣಕ್ಕೆ ಉಚಿತ ವಸತಿ ನಿಲಯ ನೀಡುವುದು ಹಾಗೂ ಶಿಕ್ಷಣ ಪಡೆದಿರುವ ಯುವ ಜನಾಂಗಕ್ಕೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವಿಶೇಷ ಆದ್ಯತೆಯ ಮೇರೆಗೆ ಉದ್ಯೋಗ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿವಿಧ ಸವಲತ್ತುಗಳ ವಿತರಣೆ

 ಸಚಿವ ಆಂಜನೇಯ ಅವರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಸವಲತ್ತುಗಳ ವಿತರಣೆಯನ್ನು ಮಾಡಲಾಯಿತು.

ಅರಣ್ಯ ಹಕ್ಕು ಕಾಯ್ದೆಯಡಿ 17 ಮಂದಿ ಹಕ್ಕತುಪತ್ರ ವಿತರಣೆ

ಕೊರಗ ಜನಾಂಗದವರಿಗೆ 94 ಸಿ ಯಡಿ 11 ಮನೆಗಳ ನಿರ್ಮಾಣಕ್ಕೆ 22 ಲಕ್ಷ ರೂ.

ಕೊರಗ ಜನಾಂಗದ ಮನೆ ನಿರ್ಮಾಣ ಯೋಜನೆಯ 14 ಫಲಾನುಭವಿಗಳಿಗೆ ತಲಾ 2 ಲಕ್ಷ ರೂ. ನಂತೆ ಪ್ರಥಮ ಕಂತು 50 ಲಕ್ಷರೂ.ಗಳ ಚೆಕ್ ಹಸ್ತಾಂತರ

ಮಲೆಕುಡಿಯ ಜನಾಂಗದವರಿಗೆ ಸ್ವ ಉದ್ಯೋಗ ಯೋಜನೆಯಡಿ ವಾಹನ ಖರೀದಿಸಲು 5 ಫಲಾನುಭವಿಗಳಿಗೆ ತಲಾ 2 ಲಕ್ಷರೂ. ಸಹಾಯಧನದ ಮಂಜೂರಾತಿ ಪತ್ರ

  ಮಲೆ ಕುಡಿಯ ಜನಾಂಗದ ನಾಲ್ಕು ಫಲಾನುಭವಿಗಳಿಗೆ ತಲಾ 25,000 ರೂ.ನಂತೆ ಸವಲತ್ತು ವಿತರಣೆ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ವಾಹನ ಖರೀದಿಸಲು 2 ಲಕ್ಷ ರೂ. ಸಹಾಯಧನ ಮಂಜೂರಾತಿ ಆದೇಶ ವಿತರಣೆ

ಕೆರೆಕಾಡು ಕೊರಗರ ಕಾಲನಿಯಲ್ಲಿ 12 ಲಕ್ಷ ರೂ. ವೆಚ್ಚದ ಸಮುದಾಯ ಭವನಕ್ಕೆ ಮಂಜೂರಾತಿ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧ್ದಿ ನಿಗಮದಿಂದ ಸ್ವಸಹಾಯ ಸಂಘಕ್ಕೆ ಚೆಕ್ ವಿತರಣೆ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿಯಮಿತ ವತಿಯಿಂದ ಪುತ್ತಿಗೆ ಗ್ರಾಮದಲ್ಲಿ 19 ಕೊರಗ ಕುಟುಂಬಗಳಿಗೆ 10 ಎಕರೆ ಜಮೀನಿನ ಪಹಣಿ ಪತ್ರವನ್ನು ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News