ಸರ್ಪಸುತ್ತು ಏನಿದರ ಮರ್ಮ?

Update: 2016-04-16 10:54 GMT

ರ್ಪಸುತ್ತು ಎನ್ನುವ ರೋಗ ಹರ್ಪಿಸ್ ಎನ್ನುವ ವೈರಾಣುಗಳಿಂದ ಹರ ಡುತ್ತದೆ. ಈ ಹರ್ಪಿಸ್ ಪ್ರಭೇದದ ವೈರಾಣುಗಳಲ್ಲಿ 130 ರೀತಿಯ ವಿಧ ವಿಧದ ವೈರಾಣುಗಳು ಇದೆ. ಇದರಲ್ಲಿ ಹೆಚ್ಚಾಗಿ ಮನುಷ್ಯರಿಗೆ ಬಾಧಿಸುವ ವೈರಾಣುಗಳೆಂದರೆ ಹರ್ಪಿಸ್ ಸಿಂಪ್ಲೆಕ್ಸ್ 1, ಹರ್ಪಿಸ್ ಸಿಂಪ್ಲೆಕ್ಸ್ 2, ವಾರಿಸೆಲ್ಲಾ ಜೋಸ್ಟ್‌ರ್, ಸೈಟೋಮೆಗಾಲೇ ವೈರಸ್, ಏಬ್‌ಸ್ಟೆನ್ ಬಾರ್ ವೈರಸ್ ಮತ್ತು ಹ್ಯೂಮಸ್ ಪ್ಯಾಪಿಲೋಮ ವೈರಸ್ 6ಎ, 6ಬಿ, 7 ಮತ್ತು 8. ಇದರಲ್ಲಿ ಹರ್ಪಿಸ್ ಸಿಂಪ್ಲೆಕ್ಸ್ 1 ಬಾಯಿ, ವಸಡು, ಗಂಟಲು ಮತ್ತು ಸೊಂಟದ ಮೇಲ್ಭಾಗದಲ್ಲಿ ಹುಣ್ಣುಗಳಿಗೆ ಕಾರಣವಾಗುತ್ತದೆ. ಮತ್ತು ಹರ್ಪಿಸ್ ಸಿಂಪ್ಲೆಕ್ಸ್ 2 ಸೊಂಟದ ಕೆಳಭಾಗದಲ್ಲಿ ಜನನೇಂದ್ರಿಯಗಳ ಸುತ್ತಮುತ್ತ ಹುಣ್ಣುಗಳಿಗೆ ಕಾರಣವಾಗುತ್ತದೆ.

ವಾರಿಸೆಲ್ಲಾ ಜೋಸ್ಟ್‌ರ್ ವೈರಸ್ ಚಿಕನ್ ಪಾಕ್ಸ್ ಮತ್ತು ಸರ್ಪಸುತ್ತು ಎಂಬ ರೋಗಕ್ಕೆ ಕಾರಣವಾಗುತ್ತದೆ. ಮೊದಲ ಬಾರಿ ಈ ವೈರಾಣು ವ್ಯಕ್ತಿಗೆ ಸಂರ್ಪಕಕ್ಕೆ ಬಂದು ಸೋಂಕು ತಗಲಿದಾಗ ಚಿಕನ್ ಪಾಕ್ಸ್ ಎಂಬುದಾಗಿ ಕರೆಯುತ್ತಾರೆ. ರೋಗಿ ಗುಣಮುಖವಾದ ಬಳಿಕ ಈ ವೈರಾಣು ನರಗಳಲ್ಲಿ ನಿಷ್ಕ್ರಿಯವಾಗಿರುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ವೈರಾಣು ಪುನಃ ವ್ಯಕ್ತಿಯನ್ನು ಕಾಡಿ, ದೇಹದಲ್ಲಿ 2ನೆ ಬಾರಿ ಪ್ರಕಟಗೊಂಡಾಗ ಅದನ್ನು ಶಿಂಗ್ಲೇಸ್ ಅಥವಾ ಜೋಸ್ಟ್‌ರ್ ಅಥವಾ ಜೋನಾ ಅಥವಾ ಸರ್ಪಸುತ್ತು ಎಂದು ಕರೆಯುತ್ತಾರೆ. ಜೋಸ್ಟ್‌ರ್ ಎಂಬುವುದು ಗ್ರೀಕ್ ಮೂಲದ ಶಬ್ದವಾಗಿದ್ದು, ಇದು ಒಂದು ಬಗೆಯ ತೊಡುಗೆ ಯಾಗಿದ್ದು, ಜೋಸ್ಟ್‌ರ್ ಪದಕ್ಕೆ ವಸ್ತ್ರದ ವಿನ್ಯಾಸ ಎಂಬ ಅರ್ಥವಿದೆ. ರೋಗದ ಚಿಹ್ನೆಗಳು ಮತ್ತು ರೋಗ ಪ್ರಕಟವಾಗುವ ರೂಪ, ದೇಹಕ್ಕೆ ಬಟ್ಟೆ ತೊಡಿಸಿದ ರೀತಿಯಲ್ಲಿ ಕಾಣಿಸುವುದರಿಂದ ಈ ಹೆಸರು ಬಂದಿರಲೂಬಹುದು.

ಸರ್ಪಸುತ್ತು ಎಂದರೇನು?

ಚಿಕನ್ ಪಾಕ್ಸ್ ರೋಗ ಬಂದ ನಂತರ ಮೊದಲನೆ ಹಂತದ ಸೋಂಕು ಕಡಿಮೆಯಾದ ಬಳಿಕ ರೋಗಿ ಗುಣಮುಖವಾಗುತ್ತಾನೆ. ವೈರಾಣುಗಳು ನರಗಳ ಮುಖಾಂತರ ಬೆನ್ನುಹುರಿಯ ನರ ಮಂಡಲದಲ್ಲಿ ಸುಪ್ತಾವಸ್ಥೆಯಲ್ಲಿ ಬದುಕುತ್ತಿರುತ್ತದೆ. ಸೋಂಕಿತ ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಪುನಃ ವ್ಯಕ್ತಿಯನ್ನು ಕಾಡುತ್ತದೆ. ಈ ಜೋಸ್ಟ್‌ರ್ ಅಥವಾ ಸರ್ಪಸುತ್ತು ರೋಗ ಸಾಮಾನ್ಯವಾಗಿ ಹಿರಿಯ ನಾಗರಿಕರಲ್ಲಿ ವೃದ್ದಾಪ್ಯದಲ್ಲಿ ಕಾಣಿಸುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಧುಮೇಹ ರೋಗಿಗಳಲ್ಲಿ, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವ ವ್ಯಕ್ತಿಗಳಲ್ಲಿ, ಮತ್ತು ನಿರಂತರವಾಗಿ ಸ್ಥಿರಾಯ್ಡು ಸೇವನೆ ಮಾಡುವ ವ್ಯಕ್ತಿಗಳಲ್ಲಿ, ಎಚ್‌ಐವಿ ಪೀಡಿತರಲ್ಲಿ, ಈ ಸರ್ಪಸುತ್ತು ರೋಗ ಹೆಚ್ಚಾಗಿ ಪ್ರಕಟಗೊಳ್ಳುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸರ್ಪಸುತ್ತು ರೋಗ ಹಿರಿಯ ನಾಗರಿಕರಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ಈ ರೋಗ ಬಹಳ ಅಪರೂಪ. ಆದರೆ ಚಿಕನ್ ಪಾಕ್ಸ್ (ಸಿಡುಬು)ರೋಗ ಶೇಕಡಾ 90ರಷ್ಟು ಮಕ್ಕಳಲ್ಲಿಯೇ ಕಂಡು ಬರುತ್ತದೆ. ಒಟ್ಟಿನಲ್ಲಿ ಈ ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟ್‌ರ್ ರೋಗ ಬರುವುದರ ಮೊದಲು ಆ ವ್ಯಕ್ತಿ ವಾರಿಸೆಲ್ಲಾ ಜೋಸ್ಟ್‌ರ್ ಎಂಬ ವೈರಾಣುವಿನಿಂದ ಪೀಡಿತವಾಗಿ, ಚಿಕನ್ ಪಾಕ್ಸ್ ರೋಗದಿಂದ ಬಳಲಿದ್ದಲ್ಲಿ ಮಾತ್ರ, ಈ ಸರ್ಪಸುತ್ತು ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.

ರೋಗದ ಲಕ್ಷಣಗಳು

ಈ ರೋಗ ಸುಮಾರು 3 ಹಂತಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಬಹುದು. ಮೊದಲ ಹಂತದಲ್ಲಿ ವಿಪರೀತ ಸುಸ್ತು, ಜ್ವರ, ವಿಪರೀತ ಚರ್ಮ ಉರಿತ ಮತ್ತು ಕೆರೆತ ಹಾಗೂ ನೋವು ಇರಬಹುದು. ಸ್ಪರ್ಶಜ್ಞಾನ ಇಲ್ಲದೆ ಇರಬಹುದು. ಈ ಮೊದಲ ಹಂತದ ಲಕ್ಷಣಗಳು ಕಾಣಿಸಿದ 3 ರಿಂದ 4 ದಿನಗಳ ಬಳಿಕ ಚರ್ಮದಲ್ಲಿ ಲಕ್ಷಣಗಳು ಗೋಚರಿಸುತ್ತವೆ. ಎರಡನೆ ಹಂತದಲ್ಲಿ ಕೆಂಪಗಿನ ದೊಡ್ಡ ಗಾತ್ರದ ಕಲೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು. ಈ ಕಲೆಗಳು ದೊಡ್ಡದಾದ ಗುಳ್ಳೆಗಳಾಗಿ ಪರಿವರ್ತಿತವಾಗಿ, ನೀರಿನಿಂದ ತುಂಬಿಕೊಂಡು ಚಿಕನ್ ಪಾಕ್ಸ್‌ನ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ದೇಹದ ಒಂದು ಬದಿಯಲ್ಲಿ (ಬಲಭಾಗ ಅಥವಾ ಎಡಭಾಗ) ಮಾತ್ರ ಈ ರೀತಿಯಾಗಿ ಗುಂಪುಗುಂಪಾಗಿ, ಹೂಗುಚ್ಛಗಳ ರೀತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ಅವುಗಳ ಸುತ್ತ ಕೆಂಪಾದ ಮಚ್ಚೆಗಳು ಇರಬಹುದು. ಕ್ರಮೇಣ ಈ ಗುಳ್ಳೆಗಳು ಒಟ್ಟಾಗಿ ಸೇರಿಕೊಂಡು ದೊಡ್ಡದಾದ ಗುಳ್ಳೆಗಳಾಗಿ ಪರಿವರ್ತಿತವಾಗಿ ಕ್ರಮೇಣ ಒಡೆದು ಒಣಗಲು ಪ್ರಾರಂಭಿಸುತ್ತದೆ. ಸುಮಾರು ಎರಡು ವಾರಗಳಲ್ಲಿ ಈ ಒಣಗಿದ ಗುಳ್ಳೆಗಳಿಂದ ಚರ್ಮ ಕಳಚಿಕೊಳ್ಳಲು ತೊಡಗುತ್ತದೆ. ಇದಾದ 4 ರಿಂದ 6 ವಾರಗಳಲ್ಲಿ ಸಂಪೂರ್ಣವಾಗಿ ಗಾಯ ಒಣಗಿ, ಮೊದಲಿನಂತೆ ಚರ್ಮ ಕಾಣಿಸುತ್ತದೆ.

ಆದರೆ ಈ 4 ವಾರ ವಿಪರೀತ ನೋವು ಮತ್ತು ಯಾತನೆ ಇರುತ್ತದೆ. ಈ ನೋವು ಮತ್ತು ಯಾತನೆ, ಆ ನರದ ಪರಿಧಿಯೊಳಗೆ ಮಾತ್ರ ಇರುತ್ತದೆ ಮತ್ತು ದೇಹದ ಒಂದು ಬದಿಯಲ್ಲಿ ಮಾತ್ರ ಕಾಣಸಿಗುತ್ತದೆ. ದೇಹದ ಎರಡೂ ಬದಿಯಲ್ಲಿ ಕಾಣಸಿಗುವ ಸಾಧ್ಯತೆ ಬಹಳ ಕಡಿಮೆಯಾಗಿರುತ್ತದೆ. ಈ ನೋವು ಮಾತ್ರ ನಿರಂತರವಾಗಿದ್ದು, ವಿಪರೀತ ಉರಿತ ಮತ್ತು ಕೆರೆತ ಇರುತ್ತದೆ. ಮೂರನೆ ಹಂತದಲ್ಲಿ ಈ ನೋವು, ಕ್ರಮೇಣ ತೀವ್ರತೆಯನ್ನು ಕಳೆದುಕೊಂಡು, ನಿರಂತರವಾದ ಅಲ್ಪ ಪ್ರಮಾಣದ ನೋವು, ನರದ ವ್ಯಾಪ್ತಿಯ ಕ್ಷೇತ್ರದಲ್ಲಿ ಕಂಡುಬರುತ್ತದೆ. ಈ ನಿರಂತರವಾದ ನೋವು ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸಿ, ಮಾನಸಿಕ ಮತ್ತು ದೈಹಿಕ ಯಾತನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿದ್ರಾಹೀನತೆ, ಹಸಿವಿಲ್ಲದಿರುವುದು, ಮುಂತಾದವು ಉಂಟಾಗಿ ಇನ್ನಾವುದೇ ರೋಗಕ್ಕೆ ಕಾರಣವಾಗಲೂಬಹುದು.

ತಡೆಗಟ್ಟುವುದು ಹೇಗೆ?
ಸರ್ಪಸುತ್ತು ರೋಗದಿಂದ ಬಳಲುತ್ತಿರುವವರು ರೋಗ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು.
    1.ಸೋಂಕಿರುವ ಜಾಗವನ್ನು ಮುಟ್ಟಿದ ನಂತರ, ಸೋಪಿನ ದ್ರಾವಣ ಬಳಸಿ ಕೈ ತೊಳೆಯಬೇಕು.
    2.ಸೋಂಕು ದೇಹದ ಬೇರೆ ಬೇರೆ ಭಾಗಕ್ಕೆ ಮತ್ತು ಬೇರೆ ಜನರಿಗೆ ಹರಡದಂತೆ ನೋಡಿಕೊಳ್ಳಬೇಕು.
    3.ಹರ್ಪಿಸ್ ರೋಗವುಳ್ಳವರು ಸಂಪೂರ್ಣ ಗುಣಮುಖವಾಗುವವರೆಗೂ ಲೈಂಗಿಕ ಕ್ರಿಯೆಯನ್ನು ಮಾಡಬಾರದು.
    4.ಸಾಕಷ್ಟು ವಿಶ್ರಾಂತಿ, ನಿದ್ದೆ, ದ್ರವಾಹಾರ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು.
    5.ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಸಿ ತರಕಾರಿ, ಹಣ್ಣು, ಹಂಪಲು ಸೇವಿಸಬೇಕು.
    6.ಗಾಯಗಳನ್ನು ರಕ್ಷಿಸುವ ಕ್ರೀಂಗಳನ್ನು ಮತ್ತು ಸೋಂಕು ಆಗದಂತೆ ತಡೆಯುವ ದ್ರಾವಣಗಳನ್ನು ಬಳಸಬೇಕು.
    7.ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ವೈದ್ಯರ ಸಲಹೆ ಪಡೆದಲ್ಲಿ ರೋಗದ ತೀವ್ರತೆಯನ್ನು ಹತ್ತಿಕ್ಕಬಹುದು.
    8.ರೋಗ ಶಂಕಿತ ವ್ಯಕ್ತಿ ಬಳಸಿದ ತಟ್ಟೆ, ಕರವಸ್ತ್ರ, ಬಟ್ಟೆ ಮುಂತಾದವುಗಳನ್ನು ಬಳಸಬಾರದು. ಸಾಮಾನ್ಯವಾಗಿ ಈ ರೋಗಿಗಳನ್ನು ಏಕಾಂತದಲ್ಲಿ ಇರಿಸಿ, ಇತರರಿಗೆ ರೋಗ ಹರಡದಂತೆ ನೋಡಿಕೊಳ್ಳಲಾಗುತ್ತದೆ.

ಕೊನೆ ಮಾತು

ಸರ್ಪಸುತ್ತು ಎನ್ನುವುದು ಭಯಾನಕ ಕಾಯಿಲೆ ಅಲ್ಲ. ಸರ್ಪಸುತ್ತು ರೋಗಕ್ಕೆ ನಾಗದೇವನ ಮುನಿಸು ಮತ್ತು ದೈವ ದೋಷ ಖಂಡಿತಾ ಕಾರಣವಲ್ಲ. ಚಿಕ್ಸಿತೆಯಿಂದ ಪೂರ್ತಿಯಾಗಿ ಗುಣಪಡಿಸಬಹುದಾದ ಕಾಯಿಲೆಯಂತೂ ಹೌದು. ರೋಗದ ಚಿಕ್ಸಿತೆಗಿಂತ ರೋಗವನ್ನು ತಡೆಗಟ್ಟುವುದು ಯಾವತ್ತೂ ಒಳ್ಳೆಯದು. ಹಾಗೆಂದ ಮಾತ್ರಕ್ಕೆ ರೋಗ ಬಂದ ಬಳಿಕ ಯಾವುದೇ ರೀತಿಯ ಮುಚ್ಚುಮರೆ ಒಳ್ಳೆಯದಲ್ಲ. ನಿಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹಂಚಿಕೊಳ್ಳಿ. ನಿಮ್ಮ ಎಲ್ಲಾ ಗೊಂದಲ, ನೋವು, ಮತ್ತು ಸಮಸ್ಯೆಗಳನ್ನು ವೈದ್ಯರಲ್ಲಿ ಯಾವುದೇ ಸಂಕೋಚವಿಲ್ಲದೆ ತಿಳಿಸಿದಲ್ಲಿ, ರೋಗವನ್ನು ಸಕಾಲದಲ್ಲಿ ಪತ್ತೆ ಹಚ್ಚಿ, ಸೂಕ್ತವಾಗಿ ಚಿಕ್ಸಿತೆ ನೀಡುವಲ್ಲಿ ವೈದ್ಯರಿಗೆ ಅನುಕೂಲವಾಗಬಹುದು. ಆರೋಗ್ಯ ಪೂರ್ಣ ಸಮಾಜದ ನಿರ್ಮಾಣವಾಗಬೇಕಾದಲ್ಲಿ ಈ ರೀತಿಯ ರೋಗಗಳನ್ನು ಹತೋಟಿಯಲ್ಲಿಡಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ.

ಹೇಗೆ ಹರಡುತ್ತದೆ?

    ಈ ವೈರಾಣು ರೋಗಿಯಿಂದ ರೋಗಿಗೆ ಸ್ಪರ್ಶದ ಮುಖಾಂತರ ಹರಡಬಹುದು. ಗುಳ್ಳೆಗಳಿಂದ ಬರುವ ದ್ರವಗಳಿಂದ ಮತ್ತು ಉಸಿರಾಟದ ಗಾಳಿಯಿಂದ ಹರಡುವ ಸಾಧ್ಯತೆ ಇರುತ್ತದೆ. 

ಲಸಿಕೆ ಇದೆಯೇ?
ಈ ರೋಗಕ್ಕೆ ಲಸಿಕೆ ಲಭ್ಯವಿದ್ದು, ಅಮೆರಿಕ ದೇಶದಲ್ಲಿ 60 ವರ್ಷ ಕಳೆದ ಎಲ್ಲರಿಗೂ ಈ ಲಸಿಕೆ ಹಾಕಲಾಗುತ್ತದೆ. ಈ ಲಸಿಕೆ ತುಂಬಾ ಪರಿಣಾಮಕಾರಿಯಾಗಿದ್ದು, 60ರಿಂದ 70 ವರ್ಷದ ವ್ಯಕ್ತಿಗಳಲ್ಲಿ ತುಂಬ ಉಪಯುಕ್ತ. 80 ವರ್ಷ ಕಳೆದ ಬಳಿಕ ಈ ಲಸಿಕೆ ವಿಶೇಷವಾಗಿ ಉಪಯೋಗವಾಗಲಿಕ್ಕಿಲ್ಲ. ಜೋಸ್ಟ್‌ರ್ ಲಸಿಕೆ ಎಂಬ ಹೆಸರಿನಲ್ಲಿ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Writer - ಡಾ.ಮುರಲೀ ಮೋಹನ್ ಚೂಂತಾರು

contributor

Editor - ಡಾ.ಮುರಲೀ ಮೋಹನ್ ಚೂಂತಾರು

contributor

Similar News