ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ ದೇಶಭಕ್ತಿ

Update: 2016-04-19 18:46 GMT

  2014ರ ಮೇಯಲ್ಲಿ ಮೋದಿ ಸರಕಾರವು ಅಧಿಕಾರಕ್ಕೇರುವುದರೊಂದಿಗೆ, ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಪ್ರಶ್ನೆಗಳು ಮುಂಚೂಣಿಗೆ ಬರತೊಡಗಿದವು. ಒಂದರ ಬೆನ್ನಿಗೆ ಒಂದರಂತೆ ವಿವಿಧ ಶಿಕ್ಷಣಸಂಸ್ಥೆಗಳಲ್ಲಿ ಸರಕಾರದ ಹಸ್ತಕ್ಷೇಪದ ಕುರಿತ ಸುದ್ದಿಗಳು ಹರಿದುಬರತೊಡಗಿದವು.ಅವುಗಳಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಶಿಕ್ಷಣ ಸಂಸ್ಥೆಗಳು ಸಹ ಒಳಗೊಂಡಿರುವುದು ಆತಂಕ ಮೂಡಿಸಿದೆ. ಕಳೆದ ವರ್ಷ ಮದ್ರಾಸ್ ಐಐಟಿಯಲ್ಲಿ ಪೆರಿಯಾರ್ 'ಅಂಬೇಡ್ಕರ್ ಸ್ಟಡಿ ಸರ್ಕಲ್' ಎಂಬ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಲಾಯಿತು. ಕೇಂದ್ರ ಮಾನವಸಂಪನ್ಮೂಲಗಳ ಸಚಿವಾಲ ಯದ ದೊಡ್ಡಣ್ಣ ನೀತಿಗೆ ಬೇಸತ್ತು ಆಗಿನ ಐಐಟಿ ಬಾಂಬೆ ನಿರ್ದೇಶಕರಾಗಿದ್ದ ಪ್ರೊ. ಶೆವ್‌ಗಾಂವ್‌ಕರ್ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಐಐಟಿ ಬಾಂಬೆ ಗವರ್ನರ್‌ಗಳ ಮಂಡಳಿಗೆ ಪ್ರೊ. ಅನಿಲ್ ಕಾಕೋಡ್ಕರ್ ರಾಜೀನಾಮೆ ನೀಡಿದ್ದರು.

   ಆರೆಸ್ಸೆಸ್-ಬಿಜೆಪಿ ಬೆಂಬಲಿಗರಾದ ಗಜೇಂದ್ರ ಚೌಹಾಣ್ ಎಂಬ ಬಿ ದರ್ಜೆಯ ಚಿತ್ರ ನಟನನ್ನು ಪುಣೆಯ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಹಾಗೂ ಟಿವಿ ತರಬೇತಿ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ನ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ದೀರ್ಘ ಸಮಯದವರೆಗೆ ಮುಷ್ಕರ ನಡೆಸಿದರು. ಸುಮಾರು 8 ತಿಂಗಳುಗಳ ಕಾಲ ವಿದ್ಯಾರ್ಥಿಗಳು ಸರತಿ ಮುಷ್ಕರ ನಡೆಸಿದರೂ, ಸರಕಾರವು ಅವರ ಬೇಡಿಕೆಗೆ ಕಿವಿಗೊಡದಿದ್ದಾಗ, ಅನಿವಾರ್ಯವಾಗಿ ಅವರು ಮುಷ್ಕರದಿಂದ ಹಿಂದೆ ಸರಿಯಬೇಕಾಯಿತು. ಅಲಹಾಬಾದ್ ವಿವಿ ಹಾಗೂ ಫರ್ಗ್ಯೂಸನ್ ಕಾಲೇಜ್‌ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಅಹಿತಕರ ಬೆಳವಣಿಗೆಗಳಿಗೆ ಸಾಕ್ಷಿಗಳಾದವು.
  ಆದರೆ ಹೈದರಾಬಾದ್ ಕೇಂದ್ರೀಯ ವಿವಿ (ಎಚ್‌ಸಿಯು) ಹಾಗೂ ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು)ಯಲ್ಲಿ ನಡೆದ ಎರಡು ಘಟನೆಗಳು ವಿದ್ಯಾರ್ಥಿ ಸಮುದಾಯದ ನೈತಿಕ ಸ್ಥೈರ್ಯಕ್ಕೆ ಆಘಾತವೊಡ್ಡಿದವು. ಈ ಎರಡೂ ಪ್ರಕರಣಗಳಲ್ಲಿ ಕೇಂದ್ರ ಸರಕಾರವು ಬಿಜೆಪಿ ಹಾಗೂ ಸಂಘಪರಿವಾರದ ಜೊತೆ ಕೈಜೋಡಿಸಿ ರಾಷ್ಟ್ರೀಯತೆ, ದೇಶಭಕ್ತಿವಾದವನ್ನು ತನ್ನ ದಾಳಗಳಾಗಿ ಬಳಸಿಕೊಂಡಿತು.

     ಎಚ್‌ಸಿಯು ಪ್ರಕರಣದಲ್ಲಿ, ಸ್ಥಳೀಯ ಬಿಜೆಪಿ ಸಂಸದರೊಬ್ಬರು, ವಿಶ್ವವಿದ್ಯಾನಿಲಯದ ಎಬಿವಿಪಿ ಘಟಕದ ಕುಮ್ಮಕ್ಕಿನಿಂದ ಕೇಂದ್ರ ಮಾನವಸಂಪನ್ಮೂಲಾಭಿವೃದ್ಧಿ ಸಚಿವೆಗೆ ಪತ್ರ ಬರೆದು ವಿವಿಯಲ್ಲಿ ರಾಷ್ಟ್ರವಿರೋಧಿ ಹಾಗೂ ಜಾತಿವಾದಿ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಲ್ಲಿ ಶಾಮೀಲಾಗಿರುವ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್‌ಎ)ದ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಹೈದರಾಬಾದ್ ವಿವಿಯ ಆವರಣದಲ್ಲಿ ಎಎಸ್‌ಎ ಆಯೋಜಿ ಸಿದ ಸಭೆಗಳನ್ನು ಎಬಿವಿಪಿ ವಿರೋಧಿಸುತ್ತಿತ್ತು. ಅವು ತನ್ನ ರಾಜಕೀಯ ಕಾರ್ಯಸೂಚಿಗೆ ವಿರುದ್ಧವಾಗಿರುವುದೇ ಎಬಿವಿಪಿಯ ಕೆಂಗಣ್ಣಿಗೆ ಕಾರಣವಾಗಿತ್ತು. ವಿವಿಯಲ್ಲಿ ಆಯೋಜಿಸಲಾಗಿದ್ದ ಉತ್ತರ ಪ್ರದೇಶದ ಮುಝಫ್ಫರ್‌ನಗರ ಕೋಮುುುಗಲಭೆಯ ಕುರಿತಾದ 'ಮುಝಫ್ಫರ್ ನಗರ್ ಬಾಕಿ ಹೈ' ಚಿತ್ರದ ಪ್ರದರ್ಶನ, ಆನಂತರ ಆಯೋಜಿಸಲಾಗಿದ್ದ ಬೀಫ್ ಖಾದ್ಯ ಉತ್ಸವ ಎಬಿವಿಪಿಯನ್ನು ರೊಚ್ಚಿಗೆಬ್ಬಿಸಿದ್ದವು. ಗೋಮಾಂಸವನ್ನು ಸೇವಿಸುವವರ ಜೊತೆ ಏಕತೆ ಪ್ರದರ್ಶಿಸಲು ತಾನು ಬೀಫ್ ಉತ್ಸವದಲ್ಲಿ ಪಾಲ್ಗೊಂಡಿದ್ದಾಗಿ ರೋಹಿತ್ ವೇಮುಲಾ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆಬಳಿಕ ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿಯೂ ಸಭೆ ಏರ್ಪಡಿಸಲಾಗಿತ್ತು. ಮರಣದಂಡನೆಯೆಂಬುದು ಅಮಾನವೀಯವಾಗಿದ್ದು, ನಾಗರಿಕ ಸಮಾಜದ ವ್ಯವಸ್ಥೆಗೆ ವಿರುದ್ಧವಾಗಿದೆಯೆಂದು ಎಎಸ್‌ಎನ ವಾದವಾಗಿತ್ತು.

  ಇದಾದ ನಂತರ, ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದ ಒತ್ತಡಕ್ಕೊಳಗಾಗಿ ಉಪಕುಲಪತಿಯು ವೇಮುಲಾ ಅವರನ್ನು ಹಾಸ್ಟೆಲ್‌ನಿಂದ ಉಚ್ಚಾಟಿಸಿದರು ಹಾಗೂ ಆತನಿಗೆ ದೊರೆಯುತ್ತಿದ್ದ ಫೆಲೋಶಿಪ್‌ನ್ನು ಸ್ಥಗಿತಗೊಳಿಸಿದರು. ಈ ವಿದ್ಯಮಾನಗಳು ವೇಮುಲಾ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು. ಇನ್ನು ಹೊಸದಿಲ್ಲಿಯ ಜೆಎನ್‌ಯು ವಿಷಯದಲ್ಲಿ, ದೇಶಭಕ್ತಿವಾದವನ್ನು ಅನಗತ್ಯವಾಗಿ ಎಳೆದುತರಲಾಯಿತು. ಜೆಎನ್‌ಯುನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೆಲವು ಮುಸುಕುಧಾರಿ ವಿದ್ಯಾರ್ಥಿಗಳು ಆಗಮಿಸಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಕನ್ಹಯ್ಯಾ ಕುಮಾರ್ ಆಗಲಿ ಅವರ ಜೊತೆಗಿದ್ದ ಇನ್ನಿಬ್ಬರು ಗೆಳೆಯರಾಗಲಿ ಈ ಗುಂಪಿನ ಭಾಗವಾಗಿರಲಿಲ್ಲ. ಆಶ್ಚರ್ಯಕರವೆಂದರೆ ಈ ತನಕವೂ ದೇಶವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸಲಾಗಿಲ್ಲ ಹಾಗೂ ಅವರ ಗುರುತನ್ನು ಕೂಡಾ ಪತ್ತೆ ಹಚ್ಚಲಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪೊಲೀಸರು ಕನ್ಹಯ್ಯೆ, ಅನಿರ್ಬನ್ ಹಾಗೂ ಉಮರ್ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿದರು. ಇದೇ ವೇಳೆ ತಿರುಚಿದ ವೀಡಿಯೊವೊಂದನ್ನು ಕೆಲವು ಚಾನೆಲ್‌ಗಳು ನಿರಂತರವಾಗಿ ಪ್ರಸಾರ ಮಾಡತೊಡಗಿದವು. ಜೆಎನ್‌ಯುವಿನ ಬಂಧಿತ ವಿದ್ಯಾರ್ಥಿ ನಾಯಕರಿಗೂ, ಭಾರತ ವಿರೋಧಿ ಘೋಷಣೆಗೂ ಯಾವುದೇ ಸಂಬಂಧವಿಲ್ಲವೆಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿತ್ತು.. ಅಫ್ಝಲ್‌ಗುರುವನ್ನು ಹುತಾತ್ಮನೆಂದೇ ಪ್ರತಿಪಾದಿಸುತ್ತಿರುವ ಹಾಗೂ ಆತನೊಬ್ಬ ನ್ಯಾಯವಂಚಿತ ವ್ಯಕ್ತಿಯೆಂದೇ ಪರಿಗಣಿಸುತ್ತಿರುವ ಪಿಡಿಪಿಯ ಜೊತೆ ಬಿಜೆಪಿ ಜಮ್ಮುಕಾಶ್ಮೀರದಲ್ಲಿ ಸರಕಾರ ರಚಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಬಿಜೆಪಿಯು ಜೆಎನ್‌ಯು ಘಟನೆಯನ್ನು ತನ್ನ ಸ್ವಾರ್ಥಸಾಧನೆಗಾಗಿ ಭಾವನಾತ್ಮಕ ವಿಷಯವಾಗಿ ಮಾಡಿದೆಯೆಂಬುದು ಇದರಿಂದ ನಿಚ್ಚಳವಾಗುತ್ತದೆ.

 ಇಂತಹ ಘೋಷಣೆಗಳು ಕಾಶ್ಮೀರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೇಳಿಬರುವುದು ಸಾಮಾನ್ಯವಾಗಿದೆ. ಅದೇ ರೀತಿ ಡಿಎಂಕೆ ನಾಯಕ ದಿವಂಗತ ಸಿ.ಎನ್.ಅಣ್ಣಾ ದೊರೈ ತಮಿಳುನಾಡು ಪ್ರತ್ಯೇಕ ದೇಶವಾಗಬೇಕೆಂದು ಆಗ್ರಹಿಸಿದ್ದರು. ರಾಷ್ಟ್ರಭಾಷೆಯಾಗಿ ಹಿಂದಿಯ ಹೇರಿಕೆಯನ್ನು ಅವರು ವಿರೋಧಿಸಿದ್ದರು. ಜಗತ್ತಿನ ವಿವಿಧ ದೇಶಗಳ ಪ್ರಾಂತಗಳಲ್ಲಿ ಸ್ವಾಯತ್ತೆ ಹಾಗೂ ಪ್ರತ್ಯೇಕತೆಯ ಕೂಗುಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಅದನ್ನು ದೇಶದ್ರೋಹದ ಕೃತ್ಯವೆಂದು ಅಲ್ಲಿ ಭಾವಿಸಲಾಗುತ್ತಿಲ್ಲ. ಹಲವು ಸಂಘಟನೆಗಳು ಹಾಗೂ ರಾಜಕೀಯ ಚಿಂತಕರು ಆಡಳಿತಾರೂಢ ಸರಕಾರಗಳನ್ನು ಟೀಕಿಸುತ್ತವೆ. ಆದರೆ ಅದನ್ನು ದೇಶದ್ರೋಹವೆಂದು ಪರಿಗಣಿಸಲಾಗದು. ಅದು ಪ್ರಜಾತಾಂತ್ರಿಕ ಸಮಾಜದ ಹಕ್ಕಾಗಿದೆ.
 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ವಾತಂತ್ರ ಹೋರಾಟದ ಕಾಲದಲ್ಲಿ ಮಹಾತ್ಮಗಾಂಧಿಯಿಂದ ಪ್ರೇರಿತವಾದ ವಿದ್ಯಾರ್ಥಿ ಸಂಘಟನೆಯೊಂದರ ಮೇಲ್ವಿಚಾರಕರಾಗಿದ್ದರು. 1942ರಲ್ಲಿ ಬ್ರಿಟಿಷ್ ಸರಕಾರ ಅಟಲ್‌ರನ್ನು ಬಂಧಿಸಿದಾಗ ಅವರು ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದು ಸ್ವಾತಂತ್ರ ಹೋರಾಟದ ಜೊತೆ ತನಗೆ ಯಾವುದೇ ಸಂಬಂಧವಿಲ್ಲವೆಂದು ತಿಳಿಸಿದ್ದರು. ಎರಡೇ ದಿನಗಳ ಬಳಿಕ ಅವರು ಜೈಲಿನಿಂದ ಬಿಡುಗಡೆಗೊಂಡರು.
   ನಮ್ಮ ಸಂವಿಧಾನದ ಕಾನೂನುಗಳನ್ನು ಅನುಸರಿಸುವುದರಲ್ಲಿಯೇ ನಿಜವಾದ ದೇಶಭಕ್ತಿಯಿದೆ. ಆಡಳಿತಾರೂಢ ಸರಕಾರದ ವಿರುದ್ಧ ಮಾಡುವ ಟೀಕೆಗಳನ್ನು ರಾಷ್ಟ್ರದ್ರೋಹದ ಜೊತೆ ಸಮೀಕರಿಸಕೂಡದು. ಘೋಷಣೆಗಳನ್ನು ಬಲವಂತವಾಗಿ ಹೇರುವುದಕ್ಕೂ, ದೇಶಭಕ್ತಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇಂತಹ ಪ್ರಾಮುಖ್ಯವಲ್ಲದ ವಿಚಾರಗಳನ್ನು ಇತರರ ಮೇಲೆ ಹೇರಲು ಯತ್ನಿಸುತ್ತಿರುವ ಭಾಗವತ್, ಬಾಬಾರಾಮ್‌ದೇವ್ ಹಾಗೂ ದೇವೇಂದ್ರ ಫಡ್ನವೀಸ್ ಅಂತಹವರ ವಿಭಜನವಾದಿ ಪ್ರವೃತ್ತಿಗಳನ್ನು ನಾವು ಮೀರಿ ನಿಲ್ಲಬೇಕಾಗಿದೆ. ಭಾರತದಲ್ಲಿ ನಕಲಿ ರಾಷ್ಟ್ರೀಯ ವಾದಿಗಳು ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಆಶ್ರಯಿಸುವ ತಾಣವಾಗಿದೆ. ಭಿನ್ನಾಭಿಪ್ರಾಯದ ಧ್ವನಿಗಳೊಂದಿಗೆ ಚರ್ಚೆ ಹಾಗೂ ಸಂಧಾನದ ಸಂಸ್ಕೃತಿಯನ್ನು ನಮ್ಮ ಶಿಕ್ಷಣ ಸಂಸ್ಥೆಗಳು ಪೋಷಿಸಬೇಕಾಗಿದೆ. ಭಾರತೀಯ ರಾಷ್ಟ್ರೀಯತೆ ಹಾಗೂ ಮಾನವತೆಯ ಗಾಢವಾದ ವೌಲ್ಯಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News