ನಿಗಿನಿಗಿ ನೈಪುಣ್ಯದ ನಿಯಾನ್ ಬುಲ್

Update: 2016-04-20 17:57 GMT

 ಸಿನೆಮಾ ನಿರ್ದೇಶಕ ಒಬ್ಬ ದೃಶ್ಯಕಲಾ ಪರಿಣತನೂ ಆದಾಗ ಏನಾಗುತ್ತದೆ? ಕೋರೈಸುವ ಶೈಲೀಕೃತstylized‘ನಿಯಾನ್ ಬುಲ್’ ನಂತಹ ಚಿತ್ರಗಳು ನಿರ್ಮಾಣವಾಗುತ್ತವೆ! ಉಜ್ವಲ ವರ್ಣಗಳು, ಅದ್ಭುತ ಸಂಯೋಜನೆ, ಗೆರೆಕೊರೆದ ವಿವರಗಳು ಇರುವ ಪ್ರತಿ ಫ್ರೇಮ್, ಒಂದು ಪೇಂಟಿಂಗ್ ನೀಡುವ ರಸಾಸ್ವಾದವನ್ನು ಒಡಲಲ್ಲಿ ಇರಿಸಿಕೊಂಡಿರುತ್ತದೆ.

 ಬ್ರೆಝಿಲ್ ದೇಶದ ನಶಿಸಿಹೋಗುತ್ತಿರುವ ಸಾಂಸ್ಕೃತಿಕ ಕ್ರೀಡೆ ‘ರೋಡಿಯೋ’ -ಅಶ್ವಾರೋಹಿಗಳಿಬ್ಬರು, ಮೈದಾನದೊಳಗೆ ನುಗ್ಗಿಸಲ್ಪಡುವ ಗೂಳಿಯನ್ನು ಬಾಲ ಹಿಡಿದು ಜಗ್ಗಿಸಿ, ನಿಗದಿತ ಬಿಂದುವಿನಲ್ಲಿ ಬೀಳಿಸಿ ಕೆಡವುವ- ಹಿನ್ನೆಲೆಯಲ್ಲಿ ಈ ಸಿನೆಮಾ ಮೈದಾಳುತ್ತದೆ. ಕುದುರೆಯೇರಿದವರು ಕ್ರೀಡೆಯ ‘ಗ್ಲಾಮರ್’ ಭಾಗವಾದರೆ, ಸಮಯಕ್ಕೆ ಸರಿಯಾಗಿ, ಗೂಳಿಗಳನ್ನು ಒಂದು ಮಣಿದ ಮೇಲೆ ಇನ್ನೊಂದರಂತೆ ಮೈದಾನಕ್ಕೆ ಬಿಡುವ ಕೆಲಸ ಪರದೆಯ ಹಿಂದಿನ ಶ್ರಮಜೀವಿಗಳದ್ದು. ಸರ್ಕಸ್ ತಂಡದಂತೆ, ನಾನಾ ಕೆಲಸ ಹಂಚಿಕೊಂಡ ನಾಲ್ಕಾರು ಸದಸ್ಯರು, ಗೂಳಿಗಳ ಸಮೇತ ಸ್ಪರ್ಧೆ ನಡೆಯುವ ಸ್ಥಳಗಳಿಗೆ ನಿರಂತರ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಹಾಗೆ ಕೂಡಿಕೊಂಡ ಒಂದು ವಿಲಕ್ಷಣ ‘ಸಂಸಾರ’, ಗೂಳಿಗಳನ್ನು ಸಲಹುವ ಇರೆಮರ್, ಅವನ ಸಹಚರ ಝೆ, ಸಂಚಾರದ ಹೊಣೆ ಹೊತ್ತ ಟ್ರಕ್ ಚಾಲಕಿ ಗಲೆಗಾ ಮತ್ತವಳ ಎಂಟೊಂಬತ್ತು ವರ್ಷದ ಮಗಳು ಕಾಕಾಳನ್ನು ಒಳಗೊಂಡಿದೆ.

ಸ್ಪರ್ಧೆ ನಡೆಯುವ ಹಳ್ಳಿ ತಲುಪಿ, ಕಿಷ್ಕಿಂಧೆಯಂತಿರುವ ಶೆಡ್‌ನಿಂದ, ಮೈದಾನಕ್ಕೆ ಗೂಳಿಗಳನ್ನು ಪುಸಲಾಯಿಸಿ, ಉತ್ತೇಜಿಸಿ, ಅವುಗಳ ಬಾಲಕ್ಕೆ ಸೀಮೆಸುಣ್ಣ ಪೂಸಿ, ದೂಡುವುದು ಅವರ ದೈನಿಕ. ತಾತ್ಕಾಲಿಕ ತಂಗುದಾಣಗಳು ಇಲ್ಲವೇ ಲಾರಿಯಲ್ಲಿ ದನಗಳ ಜತೆ, ಕ್ರೀಡೆ ಮುಗಿದ ಮೇಲೆ ವಿರಮಿಸುತ್ತಾರೆ. ಜೋಲಿಯಲ್ಲೇ ಒಮ್ಮಾಮ್ಮೆ ನಿದ್ರಿಸುತ್ತಾರೆ. ಟ್ರಕ್ ರಿಪೇರಿ ಮಾಡಿಕೊಂಡು, ಸಿಕ್ಕ ಕಡೆ ಹೊಟ್ಟೆಗೆ ಹಾಕಿಕೊಂಡು, ತಮ್ಮನ್ನು, ದನಗಳನ್ನು ಶುಚಿಗೊಳಿಸಿಕೊಂಡು ಮುಂದಿನ ಆಟೋಟಕ್ಕೆ ತಯಾರಾಗುತ್ತಾರೆ. ಕಷ್ಟಜೀವನಕ್ಕೆ ಪೂರಕವಾದ ಒರಟು ನಡೆನುಡಿ, ಪ್ರಾಣಿ ಸದೃಶವಾಗಿಯೇ ನೈಸರ್ಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯ. ಸಗಣಿ, ಗಂಜಲದೊಡನೆ ನಿರಂತರ ಒಡನಾಡುವ ಕಾರಣ ಒಳ್ಳೆ ಉಡುಗೆ-ತೊಡುಗೆ ಧರಿಸುವುದೂ ಅಷ್ಟರಲ್ಲೇ. ಮಾತಿನಲ್ಲಿ, ಹಾಸ್ಯದಲ್ಲಿ ಬೈಗುಳದಲ್ಲಿ ಧಾರಾಳವಾಗಿ ಲೈಂಗಿಕ ಹಸಿವು, ವಾಂಛೆ, ದ್ವಂದ್ವಾರ್ಥಕವಾಗಿ ಪ್ರಕಟವಾಗುತ್ತಿರುತ್ತದೆ.

ಇದೆಲ್ಲದರ ಮಧ್ಯೆ ನವಿರಾದ ಕಲಾತ್ಮಕತೆ, ಕೋಮಲ ಭಾವನೆಗಳು, ಮನುಷ್ಯ ಮನುಷ್ಯನ ನಡುವೆ, ಅತಿ ಸೂಕ್ಷ್ಮ ಆಯದಲ್ಲಿ ಇರುವ ಪ್ರೀತಿ, ವಿಶ್ವಾಸ, ನಂಬಿಕೆಗಳೂ ಇವೆ: ‘ಕೌ ಬಾಯ್’ಗೆ ದಕ್ಕುವ ಶ್ರಮ ಜೀವನವನ್ನು ತಕರಾರಿಲ್ಲದೆ ಒಪ್ಪಿಕೊಂಡಿರುವ ಇರೆಮರ್, ಸದಾ ಸುಂದರ ಹೆಣ್ಣುಗಳು, ನೃತ್ಯಗಾರ್ತಿಯರು ತೊಡುವ ಉಡುಪು ವಿನ್ಯಾಸಗಳ ಕುರಿತು ಚಿಂತಿಸುತ್ತಿರುತ್ತಾನೆ. ಯಾವ ತರಬೇತಿಯೂ ಇಲ್ಲದೆ, ಕಲಾತ್ಮಕ ಉಡುಗೆ-ತೊಡುಗೆ ತಯಾರಿಸುವ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವ, ಅದರಲ್ಲಿ ನಾನಾ ಪ್ರಯೋಗ ಮಾಡಲು ಬಲ್ಲ ಸಹಜ ಪ್ರತಿಭೆ ಅವನದು. ಹಗಲಲ್ಲಿ ಒಂದು ಬನಿಯನ್, ಚಡ್ಡಿ ಧರಿಸಿ, ಟ್ರಕ್ ಕೆಳಗೆ ಮಲಗಿ, ಟೂಲ್ ಬಾಕ್ಸ್ ಟಣಟಣಾರೆನಿಸುತ್ತ ಏಕಾಗ್ರತೆಯಿಂದ ರಿಪೇರಿ ಮಾಡಿಕೊಳ್ಳುವ ಗಲೆಗಾ, ಸಂಜೆಗೆ ಸೂರೆಗೊಳ್ಳುವ ಸೌಂದರ್ಯದ ನೃತ್ಯಪಟುವಾಗಿ ರೂಪಾಂತರಗೊಂಡು ‘ರೋಡಿಯೊ’ ಪಂದ್ಯ ವೀಕ್ಷಿಸಲು ಬಂದ ಜನರನ್ನು ರಂಜಿಸುತ್ತಾಳೆ. ಅವಳ ತುಂಡುಡುಗೆಯನ್ನು, ತೊಡುವ ಕುದುರೆ ಮುಖವಾಡವನ್ನು, ಇರೆಮರ್, ಚಚ್ಚರದಿಂದ ವಿನ್ಯಾಸಗೊಳಿಸಿಕೊಡುತ್ತಾನೆ. ಬಿಡುವಿನ ವೇಳೆ, ಸುತ್ತಮುತ್ತ ಸುಳಿದಾಡುತ್ತಾ, ನೂರು ಪ್ರಶ್ನೆ ಕೇಳುತ್ತ, ಛೇಡಿಸುತ್ತ, ಕೌಬಾಯ್ ಆದ ಅವನ ಅಕ್ಷರಜ್ಞಾನ, ಸಾಮಾನ್ಯ ತಿಳುವಳಿಕೆ ತಿದ್ದುತ್ತ, ಸಣ್ಣಪುಟ್ಟ ಸಹಾಯ ಮಾಡುವ ಚುರುಕು ಹುಡುಗಿ ಕಾಕಾಳ ಸಮ್ಮುಖದಲ್ಲಿ ಹೊಸ ವಿನ್ಯಾಸ ಸೃಷ್ಟಿಸುವುದು ಇರೆಮರ್‌ನ ಅತ್ಯಂತ ಸುಖೀ ಕ್ಷಣಗಳು.

ತಮ್ಮ ಜತೆಯಲ್ಲಿ ಇಲ್ಲದ ಅಪ್ಪನ ಕುರಿತು ಪ್ರಜ್ಞಾಪೂರ್ವಕವಾಗಿ, ಅಪ್ರಜ್ಞಾಪೂರ್ವಕವಾಗಿ ಹಂಬಲಿಸುತ್ತಿರುವ ಹುಡುಗಿ, ಈ ಕಲಾವಿದನಲ್ಲೇ ತಂದೆಯನ್ನು ಕಾಣುತ್ತಾಳೆ. ಕೆಲಸದಲ್ಲಿ ಅವನು ಕರಗಿಹೋದ ಗಳಿಗೆ ಅವಳು ‘ನನ್ನನ್ನು ಒಮ್ಮೆ ಅಪ್ಪಿಕೊ’ ಎಂದು ಇದ್ದಕ್ಕಿದ್ದಂತೆ ಯಾಚಿಸುವುದು, ಅವನು ಕೂಡಲೇ ಸ್ಪಂದಿಸಿ, ಬರಸೆಳೆಯುವುದು ಅವರಿಬ್ಬರ ನಡುವೆ ನಡೆಯುತ್ತಿರುತ್ತದೆ. ಅಷ್ಟೇ ಅಲ್ಲ, ಒಂದು ಕುದುರೆಯ ಒಡತಿಯಾಗಬೇಕೆಂಬ ಅವಳ ಬೃಹದಾಸೆ, ಅದು ಸೂಚಿಸುವ ಅನೇಕ ಅರ್ಥಗಳು ಅವನಂಥವನಿಗೆ ಮಾತ್ರ ಮನನವಾಗಲು ಸಾಧ್ಯ. ದೊಡ್ಡ ಹೊಟ್ಟೆ ಬಿಟ್ಟುಕೊಂಡ ಝೆ ಅವಳನ್ನು ರೇಗಿಸಿ, ಹೆದರಿಸಿ, ಕಿಚಾಯಿಸಿದಾಗಲೆಲ್ಲ ಕಾಪಾಡುವುದಷ್ಟೇ ಅಲ್ಲ, ಸೆಗಣಿ ಮೆಟ್ಟಿ, ಎಲ್ಲರಿಂದ ಅಪಹಾಸ್ಯಕ್ಕೊಳಗಾಗಿ ಗೋಳಾಡುವಾಗ ಮಗುವಿನಂತೆ ಮೀಯಿಸಿ ಮುದ್ದುಗರೆಯುತ್ತಾನೆ. ತನ್ನನ್ನು ಚಂದಗೊಳಿಸುವುದರಲ್ಲಿ, ವೈಯಕ್ತಿಕ ರಾಗ-ಅನುರಾಗಗಳಿಗೆ ಪಕ್ಕಾಗದೆ, ಒಬ್ಬ ಪಕ್ಕಾ ವೃತ್ತಿಪರನಂತೆ ಪ್ರಪಂಚ ಮರೆತುಬಿಡುವ ಇರೆಮರ್ ಕುರಿತು ಗಲೆಗಾ ಹೇಗೆ ಯೋಚಿಸುತ್ತಾಳೆ ಎಂಬುದು ಸ್ಪಷ್ಟವಿಲ್ಲದಿದ್ದರೂ, ಅವಳ ಒಣ, ಭಣ ನಡೆವಳಿಕೆಯ ಆಳದಲ್ಲಿ ಅವನ ಕುರಿತು ‘ಪೊಸೆಸ್ಸಿವ್‌ನೆಸ್’- ತನಗೆ ಮಾತ್ರ ಸೇರಬೇಕೆಂಬ ಭಾವ- ಇದೆ.
***

ಈ ಬಾರಿಯ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡೆ ಯೋಜಿಸಲು ಸಜ್ಜಾಗಿರುವ, ಜತೆಗೇ ಅತಿ ಭ್ರಷ್ಟಾಚಾರದ ಆರೋಪ ಹೊತ್ತ ಪ್ರಥಮ ಮಹಿಳಾ ಅಧ್ಯಕ್ಷೆಯನ್ನು impeachmentಶಿಕ್ಷೆಗೆ ಒಳಪಡಿಸಲಿರುವ ಬ್ರೆಝಿಲ್ ಗುಣ-ಸ್ವಭಾವಗಳೂ ಚಿತ್ರದಲ್ಲಿ ಕಾಣುವುದು ನಿರ್ದೇಶಕರ ಪ್ರಬುದ್ಧ ವಿಷಯ ನಿರ್ವಹಣೆಗೆ ಸಾಕ್ಷಿ. ಶೀರ್ಷಿಕೆಯೇ ಹೇಳುವಂತೆ, ನವನಾಗರಿಕತೆಯ ‘ನಿಯಾನ್’ ಹಾಗೂ ಪ್ರಾಕೃತಿಕ ಗುಣಗಳ ‘ಬುಲ್’ ಎರಡರ ಸಂಗಮವಾಗಿದ್ದ ದೇಶದ ಸಂಕ್ರಮಣ ಕಾಲವನ್ನೂ ಒಟ್ಟಂದದಲ್ಲಿ ಕಾಣಿಸುತ್ತದೆ, ನಿಯಾನ್ ಬುಲ್: ಕುಗ್ರಾಮಗಳಲ್ಲೂ ತಲೆಯೆತ್ತಿರುವ ಬೃಹತ್ ಗಾರ್ಮೆಂಟ್ ಫ್ಯಾಕ್ಟರಿಗಳು, ಫ್ಯಾಷನ್ ಕೈಗಾರಿಕೆಗಳು, ಪ್ರಸಾಧನ ಮಾರುವ ಕಂಪೆನಿಗಳು ಹಾಗೂ ಮಾಲೀಸಿನಿಂದ ಮಿರುಗುವ, ಸೌಷ್ಠವದಿಂದ ಸೆಳೆಯುವ ಕುದುರೆ ತಳಿಗಳು, ಅವುಗಳ ಕುರಿತು ಹುಚ್ಚು ಅನಿಸುವಷ್ಟು ಮೆಚ್ಚು ಬೆಳೆಸಿಕೊಂಡಿರುವ ಜನತೆ, ಇವಕ್ಕೆ ಹೋಲಿಸಿದರೆ ಎರಡನೆ ದರ್ಜೆಯ ಉಪಚಾರಕ್ಕೆ ಒಳಗಾಗುವ ಗೂಳಿಗಳು...ಎಲ್ಲ ಸೃಷ್ಟಿಸುವುದು ವಿಚಿತ್ರ ಕಲಸುಮೇಲೋಗರ! ಇಲ್ಲಿಯ ತನಕ ಹೆಚ್ಚೇನೂ ಸಂಭವಿಸಿದ ಚಿತ್ರಕ್ಕೆ ಒಂದಷ್ಟು ತಿರುವು, ಓಟ, ನೋಟ ಬದಲಾವಣೆ ನೀಡುವುದು, ಗಿರಾಕಿಗಳನ್ನು ಹುಡುಕಿಕೊಂಡು ಇರೆಮರ್ ಇರುವ ಪ್ರದೇಶಕ್ಕೆ ಬರುವ ಒಬ್ಬ ಗರ್ಭಿಣಿ ಸೇಲ್ಸ್‌ವುಮನ್.

ಸಹಜವಾಗಿಯೇ ರಸಗ್ರಹಣ, ಉತ್ತಮ ಅಭಿರುಚಿ ಇರುವ ಇರೆಮರ್ ಹಾಗೂ ಅವಳ ನಡುವೆ ಎಂಥದೋ ಒಂದು ಆತ್ಮೀಯತೆ ಉಂಟಾಗುತ್ತದೆೆ. ತನ್ನ ಇಂಥ ಅವಸ್ಥೆಯಲ್ಲಿಯೂ ಬೆಳಗಿನ ವೇಳೆ ಮಾರಾಟದ ಕೆಲಸ ಹಾಗೂ ರಾತ್ರಿ, ವೇರ್‌ಹೌಸ್ ಒಂದರ ಸೆಕ್ಯುರಿಟಿ ಗಾರ್ಡ್ ಕೆಲಸ ಎಲ್ಲವನ್ನೂ ಮಾಡುತ್ತಿರುವುದನ್ನು ಅವಳು ಹೇಳಿಕೊಳ್ಳುತ್ತಾಳೆ. ಇಡೀ ರಾತ್ರಿ ಗನ್ ಹಿಡಿದು ಒಬ್ಬಳೇ ಫ್ಯಾಕ್ಟರಿ ಕಾಯುವ ಈ ಗರ್ಭಿಣಿಯ ಧೈರ್ಯ, ಕರ್ತೃತ್ವಶಕ್ತಿ ಅತಿಶಯವಾದದ್ದು ಎಂದು ಅವನಿಗೆ ಅನಿಸುತ್ತದೆ. ಈ ಮಧ್ಯೆ ಝೆಗೆ ಬದಲಾಗಿ ಇನ್ನೊಬ್ಬ, ಜೂನಿಯರ್ ಹೆಸರಿನ ಸಹಚರ ಅವನ ಜತೆ ಕೆಲಸಮಾಡುತ್ತಿದ್ದಾನೆ. ಇನ್ನೂ ತರುಣನಾದ ಅವನೋ ಸೊಗಸುಗಾರ ಪುಟ್ಟಸ್ವಾಮಿ. ಭುಜದವರೆಗೆ ಬೆಳೆಸಿದ ಕೂದಲನ್ನು ವಿವಿಧ ಬಗೆಯಲ್ಲಿ ಆರೈಕೆ ಮಾಡುತ್ತ, ತನ್ನಲ್ಲಿಯೇ ಮಗ್ನನಾಗಿರುವ ಅವನು ಹೆಚ್ಚು ‘ಫ್ಯಾಷನೇಬಲ್’ ಆಗಿದ್ದಾನೆಂದು ಪುಟ್ಟ ಹುಡುಗಿ ಕಾಕಾಗೆ ಅನಿಸಿ, ಬೇಗ ಅವಳು ಅವನ ಕಡೆ ವಾಲುತ್ತಾಳೆ.

ಇದನ್ನು ಇರೆಮರ್ ಅರಿತುಕೊಳ್ಳುತ್ತಾನೆ. ಅವರಿಬ್ಬರ ನಡುವಿನ ಬಂಧ ನಲುಗುತ್ತದೆ. ಒಂದು ಸಾರಿ ಪರಿಚಯ ಮಾಡಿಕೊಂಡು ಹೋದ ಸೇಲ್ಸ್ ವುಮನ್, ಮತ್ತೆ ಇರೆಮರ್‌ನನ್ನು ಕಾಣಲು ಒಂದು ‘ಕೊಲಾನ್’ ಸುಗಂಧ ದ್ರವ್ಯದ ಬಾಟಲ್ ಹಿಡಿದುಕೊಂಡು ಬರುವುದು ಗಲೆಗಾಗೆ ಇರಿಸುಮುರಿಸಾಗುತ್ತದೆ. ಅವರಿಬ್ಬರ ಭೇಟಿಯನ್ನು ಅವಳು ತಪ್ಪಿಸುತ್ತಾಳೆ. ದೂರದೂರವೇ ಇರುವ ಇರೆಮರ್‌ನನ್ನು ಕಡೆಗಣಿಸಿ, ಕ್ರಮೇಣ ಜೂನಿಯರ್‌ನತ್ತ ಲೈಂಗಿಕವಾಗಿ ಆಕರ್ಷಿತಳಾಗುತ್ತಾಳೆ. ಅತ್ಯಂತ ಸೂಕ್ಷ್ಮ ಸ್ತರದಲ್ಲಿ ಇವೆಲ್ಲ ನಡೆಯುತ್ತಿರುತ್ತವೆ...

ಒಂದು ರಾತ್ರಿ, ಏಕಾಂಗಿ ಇರೆಮರ್ ಹತ್ತಿರದಲ್ಲೇ ಇರುವ ವೇರ್‌ಹೌಸ್‌ಗೆ ಗರ್ಭಿಣಿಯನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ಅವನಿಗೆ ಎದುರಾಗುವ ದೊಡ್ಡ ದೊಡ್ಡ ಬಟ್ಟೆ ಕತ್ತರಿಸುವ ಮೇಜುಗಳು, ನವನಾವೀನ್ಯ ಉಡುಪು ಸಿದ್ಧಪಡಿಸುವ ಸಲಕರಣೆ, ಹೊಳೆಯುವ ಮೆಷೀನ್‌ಗಳು ಒಂದು ಬಗೆಯ ಮೈಮರವನ್ನೇ ಅವನಲ್ಲಿ ಸೃಷ್ಟಿಸುತ್ತವೆ. ಫ್ಯಾಷನ್ ವಿನ್ಯಾಸಕಾರನಾಗಬೇಕೆಂಬ ತನ್ನ ಆಳದ ಬಯಕೆ ಹೇಗೋ ಈಡೇರುತ್ತದೆ ಎಂಬ ಭರವಸೆಯಲ್ಲಿ ಅವನು ಅವುಗಳನ್ನು ಮುಟ್ಟುವ, ನೇವರಿಸುವ, ಒಡನಾಡುವ, ಕರಗಿಹೋಗುವ ರಮ್ಯತೆ ಅವರಿಬ್ಬರ ಸಮಾಗಮದ ಸಂಕೇತಾರ್ಥದಲ್ಲಿ ಹುದುಗಿರುವುದೇ ಕ್ಲೈಮ್ಯಾಕ್ಸ್! ***
ಪ್ರತಿಷ್ಠಿತ ಲೊಕಾರ್ನೊ ಚಿತ್ರೋತ್ಸವದಲ್ಲಿ ತನ್ನ ಪ್ರಥಮ ಚಿತ್ರದಿಂದಲೇ ‘August Winds' (2014) ಎಲ್ಲರ ಗಮನ ಸೆಳೆದ, ಹಲವು ಪುರಸ್ಕಾರ, ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡ ಗೇಬ್ರಿಯಲ್ ಮಸ್ಕಾರೋ ನಿರ್ಮಿಸಿದ ನಿಯಾನ್ ಬುಲ್, 2015ರ ವೆನಿಸ್ ಅಂತಾರಾಷ್ಟ್ರೀಯ ಸಿನೆಮೋತ್ಸವದಲ್ಲಿ ಪ್ರಥಮಬಾರಿಗೆ ಪ್ರದರ್ಶನಗೊಂಡಿತು. ಸದ್ಯ ಪಶ್ಚಿಮ ದೇಶಗಳ ಥಿಯೇಟರುಗಳಲ್ಲಿ ಬಿಡುಗಡೆಗೊಂಡಿದೆ.

Writer - ವಿ.ಎನ್. ವೆಂಕಟಲಕ್ಷೀ

contributor

Editor - ವಿ.ಎನ್. ವೆಂಕಟಲಕ್ಷೀ

contributor

Similar News