ಬಿಸಿಲಿನ ಝಳಕ್ಕೆ ತತ್ತರಿಸಿದೆ ಜನಜೀವನ

Update: 2016-04-22 19:05 GMT

ದೇಶಾದ್ಯಂತ ಬಿಸಿಲಿನ ಝಳದಿಂದ ಜನಸಾಮಾನ್ಯರು ತತ್ತರಿಸುತ್ತಿರುವ ಸಮಯದಲ್ಲಿ, ಪಶ್ಚಿಮ ಘಟ್ಟದ ಹಸಿರು ಹೊದಿಕೆಯ ರಕ್ಷಣಾ ಕವಚದ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿರುವುದು ಆತಂಕವನ್ನು ಸೃಷ್ಟಿಸಿದೆ. ಬೆಳಗ್ಗೆ 10 ಗಂಟೆಯ ಬಳಿಕ ದೇಹವು ಬಿಸಿಲಿನ ಝಳವನ್ನು ಎದುರಿಸಲಾಗದ ಪರಿಸ್ಥಿತಿಯಾದರೆ, ಮಧ್ಯಾಹ್ನ 11:30ರಿಂದ 2 ಗಂಟೆಯ ನಡುವೆ ಬಿಸಿಲಿನಲ್ಲಿ ನಡೆದಾಡುವ ವೇಳೆ ತಲೆಸುತ್ತು ಬರುವ, ಮೈ ಪೂರ್ತಿ ನೀರು ಹರಿಯುವ ಅನುಭವವಾಗುತ್ತದೆ. ಅಬ್ಬಾ ಇದೆಂಥಾ ಸೆಖೆಯಪ್ಪಾ, ಸಹಿಸಲಾಗುತ್ತಿಲ್ಲ ಎಂಬ ಉದ್ಗಾರ ಪ್ರತಿಯೊಬ್ಬರ ಬಾಯಲ್ಲೂ ಸಾಮಾನ್ಯವಾಗುತ್ತಿದೆ. ಮನೆ, ಕಚೇರಿಗಳ ಒಳಗೂ ಫ್ಯಾನು ಗಾಳಿಯೇ ತಾಗುತ್ತಿಲ್ಲ ಎಂಬ ನುಡಿಗಳು. ಒಟ್ಟಿನಲ್ಲಿ ಈ ಬಾರಿಯ ಬಿಸಿಲ ಝಳ ಮಾತ್ರ ಜನಜೀವನವನ್ನೇ ತತ್ತರಿಸಿಬಿಟ್ಟಿದೆ. ಬಿಸಿಲ ಧಗೆಯನ್ನು ತೀರಿಸಿಕೊಳ್ಳಲು ಪದೇ ಪದೇ ನೀರು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರುವ ಜನರು ಎಷ್ಟು ನೀರು ಕುಡಿದರೂ ಮತ್ತೆ ದಾಹ ಎಂಬ ಉದ್ಗಾರ ಎಳೆಯುವಂತಾಗಿದೆ. ಮಧ್ಯಾಹ್ನದ ಊಟ, ತಿಂಡಿಗೆ ಬದಲಾಗಿ ಜನ ನೀರು, ಹಣ್ಣು ಹಂಪಲುಗಳು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಮುಂದಿನ ಐದು ದಿನ ಕರಾವಳಿ ಕರ್ನಾಟಕದಲ್ಲಿ ಡ್ರೈ ಡೇ!

ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಮುಂದಿನ ಐದು ದಿನಗಳ ಕಾಲ ಕರಾವಳಿ ಕರ್ನಾಟಕ ಒಣ ದಿನ (ಡ್ರೈ ಡೇ) ಆಗಲಿದೆ. ಮುಂಗಾರು ಮಳೆ ಜೂನ್ 1 ಅಥವಾ 2ನೆ ತಾರೀಕಿನಿಂದ ಆರಂಭಗೊಳ್ಳಲಿದ್ದು, ಮುಂಗಾರು ಪೂರ್ವ ಮಳೆಯ ಬಗ್ಗೆಯೂ ಸದ್ಯ ಸೂಚನೆ ಇಲ್ಲ ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಎಪ್ರಿಲ್ 21ರಂದು ಗರಿಷ್ಠ ಉಷ್ಣಾಂಶ ದಾಖಲು!
ಎಪ್ರಿಲ್ ತಿಂಗಳ 21ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ಮಂಗಳೂರಿನಲ್ಲಿ ಬಜ್ಪೆ ವಿಮಾನ ನಿಲ್ದಾಣ ಹಾಗೂ ಪಣಂಬೂರು ಬಂದರಿನಲ್ಲಿ ದಾಖಲಾಗುವ ತಾಪಮಾನದ ಲೆಕ್ಕಾಚಾರದಲ್ಲಿ ಬೆಂಗಳೂರಿನ ಹವಾಮಾನ ಇಲಾಖೆಯು ಉಷ್ಣಾಂಶವನ್ನು ದಾಖಲಿಸಿಕೊಳ್ಳುತ್ತದೆ.

ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿರುವುದರಿಂದ ಬಿಸಿ ಗಾಳಿ ಬೀಸುತ್ತಿದ್ದು, ಉಷ್ಣಾಂಶ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಮರಗಳನ್ನು ಕಡಿಯುವುದು, ಕೈಗಾರೀಕರಣ ಮೊದಲಾದ ಸ್ಥಳೀಯ ಕಾರಣಗಳು ಕೂಡಾ ಉಷ್ಣಾಂಶ ಹೆಚ್ಚಳಕ್ಕೆ ಕಾರಣವೆನ್ನಬಹುದು. ಹವಾಮಾನ ಇಲಾಖೆಯು ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆಯನ್ನು ಅಂದಾಜು ಹಾಕುತ್ತದೆ. ಅದರ ಪ್ರಕಾರ ಮುಂದಿನ ಐದು ದಿನಗಳಲ್ಲಿ ಮಳೆಯಾಗುವ ಲಕ್ಷಣ ಇಲ್ಲ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಿಸುತ್ತಾರೆ. ಕಲ್ಲಂಗಡಿ, ಹಣ್ಣುಹಂಪಲುಗಳಿಗೆ ಹೆಚ್ಚಿದ ಬೇಡಿಕೆ

ಕಲ್ಲಂಗಡಿ ಸೇರಿದಂತೆ ಹಣ್ಣು ಹಂಪಲುಗಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆಯಲ್ಲೂ ವ್ಯತ್ಯಾಸವಾಗುತ್ತಿದೆ. ಬಾಯಾರಿಕೆ, ಬಿಸಿಲ ಧಗೆಯ ಶಮನಕ್ಕೆ ಪ್ರಮುಖ ಅಸ್ತ್ರವಾಗಿ ಜನಸಾಮಾನ್ಯರಿಂದ ಉಪಯೋಗಿಸಲ್ಪಡುವ ಕಲ್ಲಂಗಡಿ ಮಾರಾಟವು ನಗರದೆಲ್ಲೆಡೆ ಜೋರಾಗಿದೆ. ರಸ್ತೆ ಬದಿಗಳಲ್ಲಿ ರಾಶಿ ರಾಶಿಯಾಗಿ ಕಲ್ಲಂಗಡಿ ಮಾರಾಟದ ಜತೆಗೆ ಮಾಲ್‌ಗಳಲ್ಲಿಯೂ ಕಲ್ಲಂಗಡಿ ಹಾಗೂ ಹಣ್ಣು ಹಂಪಲುಗಳು, ಹಣ್ಣಿನ ಜ್ಯೂಸ್‌ಗಳು, ಐಸ್‌ಕ್ರೀಂಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ!
ಪಶ್ಚಿಮ ಘಟ್ಟದಲ್ಲಿ ಎಪ್ರಿಲ್ ಹಾಗೂ ಮೇ ಪ್ರಥಮ ವಾರದಲ್ಲಿ ಮುಂಗಾರು ಪೂರ್ವ ಮಳೆ ಬರುವುದು ವಾಡಿಕೆ. ಆದರೆ ನಿರೀಕ್ಷಿತ ಮಳೆ ಬಾರದಿದ್ದರೆ, ನಗರದಲ್ಲಿ ಪ್ರಸ್ತುತ ಎರಡು ದಿನಗಳಿಗೊಮ್ಮೆ ಸಿಗುವ ನೀರು ಮುಂದೆ ವಾರಕ್ಕೊಮ್ಮೆಯೂ ಸಿಗದ ಪರಿಸ್ಥಿತಿ ಉಂಟಾಗಬಹುದು. ಪಶ್ಚಿಮ ಘಟ್ಟ ಈಗಾಗಲೇ ಮಾರಣಾಂತಿಕ ಗಾಯಗಳನ್ನು ಪಡೆಯುತ್ತಿದೆ. ಎತ್ತಿನಹೊಳೆ ಯೋಜನೆ ಇದರಲ್ಲಿ ಪ್ರಮುಖವಾಗಿದ್ದರೆ, ಇತರ ಹಲವಾರು ಸಣ್ಣ ಪುಟ್ಟ ತೊಂದರೆಗಳ ಮೂಲಕ ಹಂತ ಹಂತವಾಗಿ ಪಶ್ಚಿಮ ಘಟ್ಟಕ್ಕೆ ಹಾನಿಯಾಗುತ್ತಿದೆ. ಜಿಲ್ಲೆಯ ಜನ ಈ ಬಗ್ಗೆ ಆಲೋಚನೆ ಮಾಡದಿದ್ದರೆ ಮುಂದೊಂದು ದಿನ ಜನ ನೀರಿಲ್ಲದೆ, ಉಷ್ಣಾಂಶ ತಡೆಯಲಾರದೆ ಇಲ್ಲಿಂದ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಕಳೆದ ಸುಮಾರು 20 ವರ್ಷಗಳಿಂದ ಪಶ್ಚಿಮ ಘಟ್ಟದಲ್ಲಿ ನಿರಂತರ ಚಾರಣ ಮಾಡುತ್ತಿರುವ ಸಹ್ಯಾದ್ರಿ ಸಂಚಯದ ಸಂಚಾಲಕ, ಕಲಾವಿದ ದಿನೇಶ್ ಹೊಳ್ಳ ಅಭಿಪ್ರಾಯಿಸುತ್ತಾರೆ.

ಪಶ್ಚಿಮ ಘಟ್ಟದಲ್ಲಿ ಹಸಿರು ಹೊದಿಕೆ ಕಡಿಮೆಯಾಗಿ ಬಿಸಿಗಾಳಿ!
ಪಶ್ಚಿಮ ಘಟ್ಟ ಹಸಿರು ಹೊದಿಕೆ ದಿನೇ ದಿನೇ ವಿವಿಧ ಕಾರಣಗಳಿಂದ ಬರಿದಾಗುತ್ತಿದೆ. ಬಂಗಾರಪಲ್ಕೆಯ ಎಳನೀರು ಘಟ್ಟದಲ್ಲಿ ನೇತ್ರಾವತಿ ನದಿಯ ಮೂಲದಲ್ಲಿ ಹಾಗೂ ಚಾರ್ಮಾಡಿಯ ಮೃತ್ಯುಂಜಯ ನದಿಯ ಮೂಲಗಳಲ್ಲಿ ಈ ವರ್ಷ ಎಪ್ರಿಲ್ ತಿಂಗಳಲ್ಲಿ ನೀರಿನ ಒರತೆಗಳು ಬತ್ತಿ ಹೋಗಿವೆ. ಕಳೆದ ಸುಮಾರು 20 ವರ್ಷಗಳಿಂದ ಚಾರಣ ಮಾಡುತ್ತಿರುವ ನನಗೆ ಈ ವರ್ಷ ಪಶ್ಚಿಮ ಘಟ್ಟದಲ್ಲಿನ ಚಾರಣದ ವೇಳೆ ವಿಭಿನ್ನ ಅನುಭವವಾಗಿದೆ. ಅರಬ್ಬಿ ಸಮುದ್ರಕ್ಕೂ ಪಶ್ಚಿಮ ಘಟ್ಟಕ್ಕೂ ಪ್ರಾಕೃತಿಕ ಅವಿನಾಭಾವ ಸಂಬಂಧವಿದೆ. ಇತ್ತ ಅರಬ್ಬಿ ಸಮುದ್ರದಲ್ಲಿ ತ್ಯಾಜ್ಯ ತುಂಬಿ ಕಲುಷಿತಗೊಂಡಿರುವಂತೆಯೇ ಪಶ್ಚಿಮ ಘಟ್ಟದಲ್ಲಿ ನೀರಿನ ಒರತೆ ಕಡಿಮೆಯಾಗಿ ಬಿಸಿ ಗಾಳಿಗೆ ಕಾರಣವಾಗುತ್ತದೆ. ಇದು ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳವಾಗಲು ಪ್ರಮುಖ ಕಾರಣವೆನ್ನಬಹುದು. ಎಲ್ಲಾ ಕಡೆ ನದಿಯ ಮೂಲ ಸ್ಥಾನಗಳಲ್ಲಿ ನೀರು ಬರಿದಾಗಿದೆ. ಅಕ್ಟೋಬರ್‌ನಿಂದ ಜನವರಿಗೆ ಚಾರಣಕ್ಕೆ ಉತ್ತಮ ಅವಧಿ. ಈ ಸಂದರ್ಭ ಪಶ್ಚಿಮ ಘಟ್ಟವೆಲ್ಲಾ ಹಸಿರಿನಿಂದ ಮೈದಳೆದಿರುತ್ತದೆ. ಆದರೆ ಈ ಬಾರಿ ಜನವರಿಯಲ್ಲೇ ಪಶ್ಚಿಮ ಘಟ್ಟದ ಹಲವು ಕಡೆ ಬೆಂಕಿ ಬಿದ್ದಿದೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ. ಮಳೆ ಕಡಿಮೆಯಾದಂತೆ ಪಶ್ಚಿಮ ಘಟ್ಟಗಳಲ್ಲಿನ ಹುಲ್ಲುಗಾವಲು ಒಣಗುತ್ತವೆ. ಇದರಿಂದ ಪಶ್ಚಿಮ ಘಟ್ಟದ ಒಡಲಲ್ಲಿರುವ ದಟ್ಟ ಅರಣ್ಯ (ಶೋಲಾ ಫಾರೆಸ್ಟ್)ಗಳಲ್ಲಿ ನೀರು ಇಂಗುವಿಕೆ ಕಡಿಮೆಯಾಗುತ್ತಿದೆ.

                                       -ದಿನೇಶ್ ಹೊಳ್ಳ, ಪರಿಸರ ಹೋರಾಟಗಾರರು, ಚಾರಣಿಗರು.

ಯಥೇಚ್ಛವಾಗಿ ನೀರು ಕುಡಿಯಿರಿ

ಉಷ್ಣಾಂಶ ಹೆಚ್ಚಳದಿಂದಾಗಿ ಮುಖ್ಯವಾಗಿ ದೇಹದಲ್ಲಿನ ನೀರಿನಾಂಶ ಕಡಿಮೆಯಾಗಿ ತಲೆ ಸುತ್ತುವುದು, ಬಳಲಿಕೆ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಕಾಣಬಹುದು. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು, ನೀರಿನಾಂಶ ಹಾಗೂ ಖನಿಜಾಂಶಗಳಿಂದ ಕೂಡಿದ ಆಹಾರ ಸೇವನೆ ಉತ್ತಮ. ಜಿಲ್ಲೆಯಲ್ಲಿ ಸದ್ಯ ಉಷ್ಣಾಂಶದಿಂದ ಆರೋಗ್ಯದ ಮೇಲೆ ತೊಂದರೆಯಾಗಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ.

                                                                - ಡಾ.ರಾಮಕೃಷ್ಣ ರಾವ್,

                                            ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.

ನಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದೇವೆ

ಬಿಸಿಲ ಝಳದಿಂದ ದೇಹದ ಮೇಲಾಗುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮುಖ್ಯವಾಗಿ ಸಾಕಷ್ಟು ನೀರು ಕುಡಿಯುವುದು ಹಾಗೂ ನೇರವಾಗಿ ಬಿಸಿಲ ಝಳಕ್ಕೆ ಮೈಯೊಡ್ಡುವುದನ್ನು ತಪ್ಪಿಸುವುದರಿಂದ, ತೆಳುವಾದ ಹಾಗೂ ಗಾಢವಾದ ಬಣ್ಣವನ್ನು ಹೊಂದಿಲ್ಲದ ಹತ್ತಿಯ ಬಟ್ಟೆಗಳನ್ನು ಧರಿಸುವ ಮೂಲಕ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ. ಆದರೆ ಇಂದು ಕುಡಿಯುವ ನೀರಿಗಾಗಿಯೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಸಿಕ್ಕ ಕಲುಷಿತ ನೀರನ್ನೇ ಉಪಯೋಗಿಸಬೇಕಾದ ಪರಿಸ್ಥಿತಿಯಲ್ಲಿ ಅದೆಷ್ಟು ರೀತಿಯ ಕಾಯಿಲೆಗಳು ಬರಬಹುದು ಎಂಬ ಆತಂಕವನ್ನು ತಳ್ಳಿ ಹಾಕಲಾಗದು. ನಾವು ನಮ್ಮ ಜವಾಬ್ದಾರಿಯನ್ನು ಮರೆತಿರುವುದು ಕೂಡಾ ತಾಪಮಾನ ಹೆಚ್ಚಾಗಲು ಪ್ರಮುಖ ಕಾರಣವೆನ್ನಬಹುದು. ನೆಲದ ಮೇಲಿನ ಮಣ್ಣು ಗೋಚರಿಸದ ರೀತಿಯಲ್ಲಿ ಎಲ್ಲವೂ ಕಾಂಕ್ರಿಟ್‌ಮಯವಾಗಿ ನೀರು ಇಂಗಿ ನೀರಿನ ಒರತೆ ಹಾಗೂ ತೇವಾಂಶ ಹೆಚ್ಚುವುದು, ಆ ಇಂಗಿದ ನೀರು ಆವಿಯಾಗಿ ಮಳೆಯಾಗುವುದು ಯಾವುದಕ್ಕೂ ಸಾಧ್ಯವಾಗುತ್ತಿಲ್ಲ. ರಸ್ತೆಗಳಿಗಾಗಿ 200 ವರ್ಷಗಳಿಗೂ ಪುರಾತನ ಮರಗಳನ್ನು ಯಾರದೇ ಅನುಮತಿ ಇಲ್ಲದೆ ಕಡಿಯಲಾಗುತ್ತದೆ. ಆ ಜಾಗದಲ್ಲಿ ಮತ್ತೆ ಮರ ನೆಡುವ ಆಲೋಚನೆಯನ್ನೂ ಮಾಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದು. ಹಾಗಾಗಿ ಮುಂದಿನ ದಿನಗಳಲ್ಲಿ ಮಳೆ ನೀರನ್ನು ಇಂಗಿಸಲು ಪ್ರತಿಯೊಬ್ಬರು ಆದ್ಯತೆ ನೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳ ಬೇಕು. ಸರಕಾರ ಆ ಕೆಲಸ ಮಾಡದಿದ್ದರೆ, ವ್ಯಕ್ತಿಗತವಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ಅತೀ ಮುಖ್ಯ.

                                                           -ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಖ್ಯಾತ ವೈದ್ಯರು

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News