ಪಂಜಾಬ್ ನ ಕುಸಿತ
ಅದೊಂದು ಕಾಲದಲ್ಲಿ ಪಂಜಾಬ್ ದೇಶದ ಮಾದರಿ ರಾಜ್ಯವಾಗಿತ್ತು. ಅದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಸ್ಥಾನಿಯಾಗಿತ್ತು. ಆದರೆ ಇದೀಗ ಹಲವು ದಶಕಗಳಲ್ಲಿ ಭ್ರಷ್ಟ ಮತ್ತು ಅಸಮರ್ಥ ಸರಕಾರಗಳು ಅಧಿಕಾರದ ಚುಕ್ಕಾಣಿ ಹಿಡಿದಿವೆ. ಇತರ ರಾಜ್ಯಗಳಿಗೆ ಮಾದರಿಯಾಗಿದ್ದ ಪಂಜಾಬ್ ಈಗ ಒಂದು ವಿಪತ್ತು ವಲಯ ಮತ್ತು ಒಂದು ರಾಷ್ಟ್ರೀಯ ಹೊರೆಯಾಗಿ ಬದಲಾಗಿದೆ. ಈಗ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಬಾದಲ್ ಕುಟುಂಬದ ನೇತೃತ್ವದ ಅಕಾಲಿದಳ ಸರಕಾರ ಕೆಟ್ಟ ಆಡಳಿತವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಪಂಜಾಬ್‌ನ ಆಡಳಿತಗಾರರು, ಅಸ್ತಿತ್ವದಲ್ಲೇ ಇಲ್ಲದ ಸಂಗ್ರಹಗಳ ಬದಲಾಗಿ ಅಥವಾ ಅಡಮಾನವಿಟ್ಟ ಸಂಗ್ರಹಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಬಂಡವಾಳವನ್ನು ಪಡೆದುಕೊಳ್ಳುವಲ್ಲಿ ಕೈಗಾರಿಕೋದ್ಯಮಿಗಳಿಗಿಂತಲೂ ಉತ್ತಮ ರೀತಿಯ ನಿರ್ವಹಣೆ ತೋರಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸಾಲವನ್ನು ನಿರ್ವಹಣೆಯಿಲ್ಲದ ಆಸ್ತಿಯಾಗಿ ಘೋಷಿಸುವಂತೆ ಸಾಲ ನೀಡಿದ ಬ್ಯಾಂಕ್ಗಳಿಗೆ ಸೂಚಿಸಿದೆ. ಮಾಹಿತಿ ಪ್ರಕಾರ ರೂ. 20,000 ಕೋಟಿ ವೌಲ್ಯದ ಆಹಾರಧಾನ್ಯಗಳು ಸಂಗ್ರಹದಿಂದ ಕಾಣೆಯಾಗಿದೆ. ಒಂದೋ ಅವುಗಳು ಅಲ್ಲಿ ಇರಲೇ ಇಲ್ಲ ಅಥವಾ ಅಡಮಾನವಿಟ್ಟ ಸಂಗ್ರಹಗಳನ್ನು ವಿಲೇವಾರಿ ಮಾಡಲಾಗಿದೆ ಅಥವಾ ಎರಡೂ ಆಗಿರಬಹುದು. ಈ ಹೊಂಡ ದೊಡ್ಡದಾಗಿದ್ದು, ಬ್ಯಾಂಕ್ ಗಳು ಪಂಜಾಬ್ ಸರಕಾರಕ್ಕೆ ಇನ್ನಷ್ಟು ಸಾಲ ನೀಡಲು ಅಸಮರ್ಥವಾಗಿವೆ.
ಕಾಣೆಯಾದ ಆಹಾರಧಾನ್ಯ
ಹಾಗಾದರೆ ಇದರ ರಕ್ಷಣೆಗೆ ಬರುವವರು ಯಾರು? ಕೇಂದ್ರ ಸರಕಾರವು ಪಂಜಾಬ್ಗೆ ರೂ. 20,000 ಕೋಟಿ ನಗದು ಸಾಲ ನೀಡುತ್ತಿದ್ದು, ಆಹಾರಧಾನ್ಯದ ಖರೀದಿಸುವಿಕೆ ಸುಸೂತ್ರವಾಗಿ ಮುಂದುವರಿಯುವಂತೆ ನೋಡಿಕೊಳ್ಳಲಿದೆ. ಕಳೆದ ವಾರವಷ್ಟೇ ಸರ್ವೋಚ್ಚ ನ್ಯಾಯಾಲಯವು, ಮಹಾರಾಷ್ಟ್ರದ ಮರಾಠವಾಡಾ ಜಿಲ್ಲೆಯಂಥಾ ಅನಾವೃಷ್ಟಿಪೀಡಿತ ಪ್ರದೇಶಗಳಲ್ಲಿ ಬರಪರಿಹಾರ ಕಾರ್ಯ ನಡೆಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಿಂದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಪರಿಣಾಮವಾಗಿ ಕೇಂದ್ರವು ಮನಸ್ಸಿಲ್ಲದ ಮನಸ್ಸಿನಿಂದ ರೂ. 12,000 ಕೋಟಿ ಬಿಡುಗಡೆ ಮಾಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ ಆದರೆ ಪಂಜಾಬ್ನಂತೆ ಅಲ್ಲಿ ಶೀಘ್ರದಲ್ಲಿ ಚುನಾವಣೆಯಿಲ್ಲ. ಹಾಗಾಗಿ ಬಿಜೆಪಿ ಮಂತ್ರಿಗಳಾದ ಏಕನಾಥ ಖಂಡ್ಸೆ ಇರುವ ಸ್ವಲ್ಪನೀರನ್ನು ಹೆಲಿಪ್ಯಾಡ್‌ನ ಧೂಳನ್ನು ತೊಳೆಯಲು ಬಳಸಬಹುದು ಮತ್ತು ಪಂಕಜಾ ಮುಂಡೆ ಕೈತುಂಬಾ ಆಭರಣ ತೊಟ್ಟು ಲಾತೂರ್ ನ ಬರಪರಿಹಾರ ಪ್ರದೇಶದಲ್ಲಿ ನಿಂತು ಸೆಲ್ಫಿ ತೆಗೆಯಬಹುದು. ಆದರೆ ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಗಣ್ಯರ ವ್ಯವಹಾರಗಳ ಕಾರ್ಯಸಾಧ್ಯತೆ ಗಂಭೀರವಾಗಿ ಸವಾಲು ಎದುರಿಸುತ್ತಿದೆ ಮತ್ತು ಸದ್ಯ ವಿತ್ತ ಸಚಿವರಾಗಿರುವ, ಅಮೃತಸರದಿಂದ ಚುನಾವಣೆ ನಿಂತು ತಿರಸ್ಕರಿಸಲ್ಪಟ್ಟಿರುವವರು ಸಂಕಷ್ಟದಲ್ಲಿರುವ ತಮ್ಮ ಗೆಳೆಯರ ಸಹಾಯಕ್ಕೆ ಬಹಳ ಆಸಕ್ತಿಯಿಂದ ಧಾವಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಪಂಜಾಬ್ ನ ನಾಗರಿಕ ಪೂರೈಕೆ ಮತ್ತು ಆಹಾರ ಸಚಿವ, ಪ್ರತಿಷ್ಠಿತ ಮನೆತನಕ್ಕೆ ಸೇರಿರುವ ಆದರ್ಶ್ ಪ್ರಕಾಶ್ ಸಿಂಗ್ ಕೈರೋನ್, ‘ಆಹಾರ ಖರೀದಿ ಯೋಜನೆ ಒಂದು ಲಾಭದಾಯಕ ಯೋಜನೆಯಲ್ಲ. ಪಂಜಾಬ್ ಈ ಕೆಲಸವನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಮಾಡುತ್ತಿದೆ’ ಎಂದು ಹೇಳುವಷ್ಟು ಧೈರ್ಯ ಪ್ರದರ್ಶಿಸುತ್ತಾರೆ. ಪಂಜಾಬ್ ಇಡೀ ಭಾರತಕ್ಕೆ ಆಹಾರ ಉಣಿಸುತ್ತದೆ ಎಂಬ ಮಾತು ಈಗ ಅಸಂಬದ್ಧವಾಗಿ ಕಾಣುತ್ತದೆ. ಭಾರತವು ಕೆಲವು ದಶಕಗಳಿಂದ ತನಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಉತ್ಪಾದಿಸಿದೆ. 1991ರಿಂದೀಚೆಗೆ ಭಾರತವು ಸರಾಸರಿ ವಾರ್ಷಿಕ ರೂ.6,000 ಕೋಟಿಯ ಆಹಾರಧಾನ್ಯಗಳನ್ನು ರಫ್ತು ಮಾಡಿದೆ ಮತ್ತು ಕಳೆದ ವರ್ಷ ಈ ಪ್ರಮಾಣ ರೂ.27,000 ಕೋಟಿ ಮುಟ್ಟಿತ್ತು. ಬರದ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ 260 ಮಿಲಿಯನ್ ಟನ್ ಆಹಾರಧಾನ್ಯವನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ರೂ. 50,000 ಕೋಟಿ ಮೌಲ್ಯದ 49 ಮಿಲಿಯನ್ ಟನ್ ಆಹಾರಧಾನ್ಯ ಸಂಗ್ರಹವಿದೆ, ಇದು ಅದರ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು.
ಸತ್ಯಾಸತ್ಯತೆಯ ಪರಿಶೀಲನೆ
ಹಾಗಾಗಿ ಇದು ಒಂದು ರೀತಿ ವ್ಯತಿರಿಕ್ತವಾಗಿದೆ. ಶೇಷ ಭಾರತವು ಪಂಜಾಬ್ ನ ಈ ಅಸಂಬದ್ಧ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಬೆಂಬಲಿಸಿದೆ. ವಾಸ್ತವವಾಗಿ ಇದೊಂದು ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಹೆಚ್ಚಿನ ದರ ಯೋಜನೆಯಾಗಿದೆ. ಇದನ್ನು ಕನಿಷ್ಠ ದರದ ದ್ವಿದಳಧಾನ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿಗೆ ಸೇರಿಸಿದಾಗ ಇದೊಂದು ಬೃಹತ್ ಸಬ್ಸಿಡಿ ಯೋಜನೆಯಾಗಿ ಮಾರ್ಪಡುತ್ತದೆ. 2016ರ ಒಟ್ಟಾರೆ ಸಹಾಯಧನವು ರೂ.2,50,433 ಕೋಟಿಯಾಗಿದ್ದು, ಇದರಲ್ಲಿ ಅರ್ಧದಷ್ಟು ಆಹಾರ ಸಬ್ಸಿಡಿಯಾಗಿದ್ದರೆ, ಕಾಲು ಭಾಗ ಗೊಬ್ಬರಕ್ಕೆ ಸಬ್ಸಿಡಿಯಾಗಿದೆ. ಇದರಲ್ಲಿ ದೊಡ್ಡ ಪಾಲು ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಿಗೆ ಹೋಗುತ್ತದೆ. ಅದರರ್ಥ ಕನಿಷ್ಟ ಬೆಂಬಲ ಬೆಲೆಯ ಸಬ್ಸಿಡಿಯ ದೊಡ್ಡ ಮೊತ್ತ ಈ ರಾಜ್ಯಗಳಲ್ಲಿ ಶೇಖರವಾಗುತ್ತದೆ. ಪಂಜಾಬ್ ಆಹಾರಧಾನ್ಯಗಳನ್ನು ಬೆಳೆಯುವ ಪ್ರಮುಖ ರಾಜ್ಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದು ಭಾರತಕ್ಕೆ ಆಹಾರ ಉಣಿಸುತ್ತದೆ ಎನ್ನುವ ಮಾತು ಮಾತ್ರ ಉತ್ಪ್ರೇಕ್ಷೆಯಾಗಿದೆ. 2015ರಲ್ಲಿ ಒಟ್ಟಾರೆ ರಾಷ್ಟ್ರೀಯ ಆಹಾರಧಾನ್ಯ ಉತ್ಪಾದನೆಯು 264 ಮಿಲಿಯನ್ ಟನ್ ಆಗಿತ್ತು. ಇದರಲ್ಲಿ ಪಂಜಾಬ್‌ನ ಪಾಲು 27.4 ಮಿಲಿಯನ್ ಟನ್. ಅಂದರೆ ಸುಮಾರು ಶೇ.10. ಖಂಡಿತವಾಗಿಯೂ ಪಂಜಾಬ್‌ನ ಉತ್ಪಾದನಾ ಸಾಮರ್ಥ್ಯ ದೇಶದ ಇತರ ಭಾಗಗಳಿಗಿಂತ ಹೆಚ್ಚಾಗಿದೆ, ಅದು ದೇಶದ 54 ಮಿಲಿಯನ್ ಹೆಕ್ಟೇರ್ ನೀರಾವರಿಯುಕ್ತ ಕೃಷಿಭೂಮಿಯಲ್ಲಿ ಕೇವಲ ಶೇ.5 ಮಾತ್ರ ಹೊಂದಿದೆ. ಪಂಜಾಬ್ ಸರಕಾರದ ಹೇಳಿಕೆ ಕೂಡಾ ಈ ಕಲ್ಪನೆಯನ್ನು ಬೆಂಬಲಿಸುತ್ತದೆ. ಅದರ ಜಾಲತಾಣ ಸೂಚಿಸುವಂತೆ;
‘‘ಪಂಜಾಬ್ ದೇಶದ ಒಟ್ಟಾರೆ ಆಹಾರಧಾನ್ಯ ಉತ್ಪಾದನೆಯಲ್ಲಿ ಮೂರನೆ ಎರಡು ಭಾಗ ಆಹಾರಧಾನ್ಯ ಉತ್ಪಾದಿಸುತ್ತದೆ ಮತ್ತು ದೇಶದಲ್ಲೇ ಹಾಲಿನ ಉತ್ಪಾದನೆಯಲ್ಲಿ 3ನೆ ಸ್ಥಾನವನ್ನು ಹೊಂದಿದೆ. ಅದು ಗೋಧಿ ಬೆಳೆಯುವ ಪ್ರಮುಖ ರಾಜ್ಯವಾಗಿದ್ದು ಆ ಮೂಲಕ ರಾಷ್ಟ್ರೀಯ ಆಹಾರ ಭದ್ರತೆಗೆ ನೆರವಾಗಿದೆ. ಪಂಜಾಬಿಗಳು ಭಾರತದ ಜನಸಂಖ್ಯೆಯ ಕೇವಲ ಶೇ.2.5 ಮಾತ್ರವಿದ್ದರೂ ಅದು ಭಾರತದಲ್ಲೇ ಅತ್ಯಂತ ಸಮೃದ್ಧ ಸಮುದಾಯಗಳಲ್ಲಿ ಒಂದಾಗಿದೆ. ಅವರ ತಲಾ ಆದಾಯ ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದೆ’’.
ಪ್ರಸ್ತುತ ರಾಷ್ಟ್ರೀಯ ತಲಾ ಆದಾಯವು ರೂ.74,000 ಆಗಿದ್ದು ಪಂಜಾಬ್‌ನಲ್ಲಿ ರೂ. 92,000 ಆಗಿದೆ. ಆದರೆ ಬಹಳಷ್ಟು ಮಂದಿ ಪಂಜಾಬ್ ದೇಶದಲ್ಲೇ ಅತ್ಯಂತ ಸಮೃದ್ಧಿ ಹೊಂದಿದ ರಾಜ್ಯ ಎಂಬ ಕತೆಯನ್ನು ಕಂಠಪಾಠ ಮಾಡಿಕೊಂಡಿದ್ದಾರೆ.
ಕೇಂದ್ರದ ಔದಾರ್ಯ
ದೇವರು ಮತ್ತು ಈ ದೇಶ ಎರಡೂ ಕೂಡಾ ಪಂಜಾಬ್ ಪಾಲಿಗೆ ಒಳ್ಳೆಯವರಾಗಿದ್ದಾರೆ. ಇಂದು ಪಂಜಾಬ್ನ ಶೇ.85.2 ಜಮೀನು ಕೃಷಿಯೋಗ್ಯವಾಗಿದೆ ಮತ್ತು ಅದರಲ್ಲಿ ಶೇ.89.7 ಜಮೀನು ದೀರ್ಘಕಾಲೀನ ನೀರಾವರಿಯನ್ನು ಹೊಂದಿದೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕೇಂದ್ರ ಸರಕಾರ ಬೃಹತ್ ಯೋಜನೆಗಳ ಫಲಿತಾಂಶವಾಗಿದೆ. ಅದರಲ್ಲಿ ಪ್ರಮುಖವಾದದ್ದು ಬಾಕ್ರಾ ನಂಗಲ್ ಯೋಜನೆ. ಬ್ರಿಟಿಷರು ತಮ್ಮ ಭೂಕಂದಾಯದ ಆಸೆಗೆ ಸರಿಯಾಗಿ ಪಂಜಾಬ್ ಮೇಲೆಯೇ ವಿಶೇಷ ಗಮನವನ್ನು ಹರಿಸಿದ್ದರು. ಅವರು ಅಲ್ಲಿ ನೀರಾವರಿ ಮೇಲೆ ಹೂಡಿಕೆ ಮಾಡಿದರು. ಆದರೆ 1947ರ ನಂತರ ಈ ಬೆಳವಣಿಗೆ ಏರುತ್ತಲೇ ಸಾಗಿತು. 1955ರಲ್ಲಿ ಒಟ್ಟಾರೆ ರಾಷ್ಟ್ರೀಯ ನೀರಾವರಿ ಯೋಜನೆಗಳಿಗಾಗಿ ಕಾದಿರಿಸಿದ ಮೊತ್ತ ರೂ.29,106 ಲಕ್ಷ. ಇದರಲ್ಲಿ ಪಂಜಾಬ್ ಪಡೆದಿದ್ದು, 10,952 ಲಕ್ಷ ಅಂದರೆ ಶೇ.37.6. ಇದಕ್ಕೆ ವಿರುದ್ಧವಾಗಿ ಬಿಹಾರ ಪಡೆದಿದ್ದು ಕೇವಲ ರೂ.1,323 ಲಕ್ಷ ಅಂದರೆ ಕೇವಲ ಶೇ.4.5. ಜವಾಹರ್ ಲಾಲ್ ನೆಹರೂ ಅವರ ಆಧುನಿಕ ಭಾರತಕ್ಕೆ ವೈಭವಯುತ ಕೊಡುಗೆಗಳಲ್ಲಿ ಒಂದಾದ ಬಾಕ್ರಾ ನಂಗಲ್ ಅಣೆಕಟ್ಟನ್ನು ರೂ.7,750 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 1.44 ಮಿಲಿಯನ್ ಹೆಕ್ಟೇರ್ ಜಮೀನಿಗೆ ಅಥವಾ ಪಂಜಾಬ್
ನ ಒಟ್ಟಾರೆ ನೀರಾವರಿ ಪ್ರದೇಶಗಳ ಶೇ.40 ಭೂಮಿಗೆ ನೀರುಣಿಸುತ್ತದೆ. ಈ ಅಣೆಕಟ್ಟಿನ ಉಪಯುಕ್ತತೆ ಅಸಂಖ್ಯ, ಹಾಗಾಗಿ ಪಂಜಾಬ್ ಮುನ್ನುಗ್ಗುತ್ತಲೇ ಸಾಗಿತು. ಭಾರತದಲ್ಲಿ ಪ್ರಾದೇಶಿಕ ಅಸಮಾನತೆಯ ಕೋನ ಬಹಳ ವಿಸ್ತಾರವಾದದ್ದು. ಪಂಜಾಬ್ ಮತ್ತು ಬಿಹಾರ ಈ ಕೋನದ ಎರಡು ಕೊನೆಗಳಾಗಿವೆ. ಸ್ವಾತಂತ್ರ ಪಡೆದ ದಶಕಗಳ ನಂತರ ರಾಜ್ಯಗಳ ಜಿಡಿಪಿಯ ಅಧ್ಯಯನ ನಡೆಸಿದಾಗ ಈ ಕೋನದ ವಿಸ್ತಾರ ಹೆಚ್ಚಾಗುತ್ತಲೇ ಸಾಗಿದೆ ಎಂಬುದನ್ನು ಸೂಚಿಸುತ್ತದೆ. 1965ರಲ್ಲಿ ಪಂಜಾಬ್ ನ ತಲಾ ಆದಾಯವು ರೂ.562 ಆಗಿತ್ತು ಮತ್ತು ಬಿಹಾರದ ರೂ.332ರ 1.7ಪಟ್ಟು ಹೆಚ್ಚಾಗಿತ್ತು. ಈಗ ಪಂಜಾಬ್‌ನ ತಲಾ ಆದಾಯ ರೂ.92,000 ಆಗಿದೆ ಮತ್ತು ಬಿಹಾರದ್ದು ರೂ.31,000 ಅಥವಾ ಸುಮಾರು 3:1. ಆದರೆ ಇನ್ನೊಂದು ಬದಲಾವಣೆ ಕೂಡಾ ಕಂಡುಬಂದಿದೆ. ಒಂದೊಮ್ಮೆ ಸಮೃದ್ಧ ರಾಜ್ಯವಾಗಿದ್ದ ಪಂಜಾಬ್ ಈಗ ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ತೆಲಂಗಾಣಕ್ಕಿಂತ ಹಿಂದೆ ಬಿದ್ದಿದ್ದು ಪರ್ವತ ರಾಜ್ಯ ಹಿಮಾಚಲ ಪ್ರದೇಶದ ಜೊತೆ ಸ್ಥಾನ ಹಂಚಿಕೊಂಡಿದೆ. ಪಂಜಾಬ್‌ಗೆ ನೈಸರ್ಗಿಕವಾಗಿ ಸಿಗಬಹುದಾದ ಎಲ್ಲಾ ಅನುಕೂಲತೆಗಳೂ ದೊರಕಿವೆ ಮತ್ತು ಅದು ತನ್ನ ಹಕ್ಕಿನ ಪಾಲಿಗಿಂತಲೂ ಅಧಿಕವಾಗಿ ಕೇಂದ್ರ ಸರಕಾರದ ನೆರವನ್ನು ಪಡೆದುಕೊಂಡಿದೆ, ಕೇವಲ ಆಹಾರ ಖರೀದಿ ಮತ್ತು ಸಬ್ಸಿಡಿ ಮಾತ್ರವಲ್ಲ ಉದ್ಯೋಗಗಳ ವಿಷಯದಲ್ಲೂ. ಪಂಜಾಬ್ ಸಶಸ್ತ್ರಪಡೆ ಮತ್ತು ಅರೆಸೈನಿಕ ಪಡೆಯಲ್ಲಿ ಅನಿಯಮಿತವಾಗಿ ಸೇರ್ಪಡೆಗೊಳ್ಳುವ ಲಾಭಪಡೆಯುವ ಮೂಲಕ ಅಲ್ಲಿನ ಗ್ರಾಮೀಣ ಭಾಗದ ಕುಟುಂಬಗಳ ಆದಾಯಕ್ಕೆ ಎರಡನೆ ಮೂಲ ಒದಗಿಸಿದೆ. ಪ್ರತೀವರ್ಷ ಸುಮಾರು 60,000 ಪಂಜಾಬಿ ಅಧಿಕಾರಿಗಳು ಮತ್ತು ಸೈನಿಕರು ಸಶಸ್ತ್ರಪಡೆಗಳಿಂದ ನಿವೃತ್ತಿ ಹೊಂದುತ್ತಾರೆ ಮತ್ತು ಮಿಲಿಯನ್‌ಗಿಂತಲೂ ಅಧಿಕ ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಆದರೂ ಪಂಜಾಬ್ ತೀವ್ರ ಥರದ ಪಿಡುಗಿನಿಂದ ನರಳುತ್ತಿದೆ. ಮಹಿಳಾ ಮತ್ತು ಮಕ್ಕಳ ಸಾಮಾಜಿಕ ಭದ್ರತಾ ಅಭಿವೃದ್ಧಿ ಇಲಾಖೆಯ ಅಧ್ಯಯನದ ಪ್ರಕಾರ ಪಂಜಾಬ್ ಶೇ.67 ಮನೆಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಡ್ರಗ್ಸ್ ವ್ಯಸನಿಯಾಗಿದ್ದಾನೆ. ಹಾಗಾದರೆ ಪಂಜಾಬನ್ನು ಈ ಸ್ಥಿತಿಗೆ ತಂದಿದ್ದಾದರೂ ಯಾವುದು? ಒಂದು ಕಾರಣವೆಂದರೆ ಪಂಜಾಬ್ ಕೆಟ್ಟ ಸರಕಾರಗಳ ಆಳ್ವಿಕೆಗೆ ಒಳಗಾಗಿತ್ತು. ಅದರ ರಾಜಕಾರಣಿಗಳು ಮತ್ತು ಅವರ ಅಧಿಕಾರಶಾಹಿ ಸಹ ಸಂಚುಗಾರರು, ಪಕ್ಷಭೇದವಿಲ್ಲದೆ ಎಲ್ಲರೂ ಕೂಡಾ ದೇಶದ ಅತ್ಯಂತ ಸ್ವಾರ್ಥಸಾಧಕ ಮತ್ತು ಭ್ರಷ್ಟರಾಗಿದ್ದಾರೆ. ಪಂಜಾಬ್‌ನ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಎಂಬಾತ ಜನವರಿಯಲ್ಲಿ ಪಠಾಣ್‌ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಗೆ ಸಹಕಾರ ನೀಡಿದ್ದ. ಆತನ ಸುತ್ತ ಆವರಿಸಿದ ವೌನ ಅರ್ಥವಾಗುವಂಥದ್ದೆ. ಪಂಜಾಬ್ನ ಓರ್ವ ಮಾಜಿ ಪೊಲೀಸ್ ಮಹಾನಿರ್ದೇಶಕರ ಪ್ರಕಾರ, ಕೆಲವು ವರ್ಷಗಳ ಹಿಂದೆ ಗುಪ್ತಚರ ಇಲಾಖೆಯು ರಾಜ್ಯದ ಡ್ರಗ್ಸ್ ದೊರೆಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಈ ಪಟ್ಟಿಯು ಎಲ್ಲಾ ಪಕ್ಷಗಳ ರಾಜಕಾರಣಿಗಳ ಮತ್ತು ಎಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳ ಹೆಸರನ್ನು ಹೊಂದಿತ್ತು. ಸಲ್ವಿಂದರ್ ಸಿಂಗ್ ಮಂಜುಗಡ್ಡೆಯ ಕೇವಲ ತುದಿ ಮಾತ್ರ. ಪಂಜಾಬ್ ಒಂದು ಉತ್ತಮ ಸರಕಾರವನ್ನು ಪಡೆಯದ ಹೊರತಾಗಿ ಈ ಜಾರುವಿಕೆ ಮುಂದುವರಿಯುತ್ತಲೇ ಇರುತ್ತದೆ.