ಆರೆಸ್ಸೆಸ್-ಅಂಬೇಡ್ಕರ್
ಆರೆಸ್ಸೆಸ್ ಮುಖವಾಣಿ ‘‘ಆರ್ಗನೈಸರ್’’ ಇಂಗ್ಲಿಷ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯ ಮುಖಪುಟದಲ್ಲಿ ಅಂಬೇಡ್ಕರ್ ಭಾವಚಿತ್ರ ರಾರಾಜಿಸುತ್ತಿತ್ತು. ಜತೆಗೆ ‘‘ಅಲ್ಟಿಮೇಟ್ ಯುನಿಫಯರ್’’ ಎಂಬ ಒಕ್ಕಣೆಯೂ ಇತ್ತು. 2016ರ ಎಪ್ರಿಲ್ 17ರ ಆರ್ಗನೈಸರ್ ಸಂಚಿಕೆಯಲ್ಲಿ ಈ ಶ್ರೇಷ್ಠ ನಾಯಕನ ವಿವಿಧ ಆಯಾಮಗಳನ್ನು ಚಿತ್ರಿಸುವ ಹಲವು ಲೇಖನಗಳಿದ್ದವು. ಒಂದು ಲೇಖನದಲ್ಲಿ ‘‘ಅಂಬೇಡ್ಕರ್ ಈ ರಾಷ್ಟ್ರನಿರ್ಮಾಣದ ಬಂಧ’’ ಎಂದು ಬಣ್ಣಿಸಿದ್ದರೆ, ಇನ್ನೊಂದರಲ್ಲಿ, ‘‘ಅವರ ದೃಷ್ಟಿಕೋನ ಹಾಗೂ ಕಾರ್ಯಚಟುವಟಿಕೆಗಳು ಬ್ರಹ್ಮೊ ಸಮಾಜ, ಪ್ರಾರ್ಥನಾ ಸಮಾಜ, ಆರ್ಯಸಮಾಜದಂಥ ಸಂಘಟನೆಗಳನ್ನು ಹೋಲುತ್ತದೆ’’ ಎಂದು ವಿವರಿಸಲಾಗಿತ್ತು. ಮತ್ತೊಂದರಲ್ಲಿ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಮಹಾನ್ ನಾಯಕ ಎಂದು ಹೊಗಳಿದರೆ, ನಾಲ್ಕನೆ ಲೇಖನ ಅವರನ್ನು ಶಾಶ್ವತ ನಾಯಕ ಎಂದು ಶ್ಲಾಘಿಸಿದೆ. ಅಂಬೇಡ್ಕರ್ ಎಂದೂ ಬ್ರಾಹ್ಮಣ ವಿರೋಧಿಯಾಗಿರಲಿಲ್ಲ; ಬದಲಾಗಿ ಬ್ರಾಹ್ಮಣ್ಯ ವ್ಯವಸ್ಥೆಗೆ ಅವರ ವಿರೋಧವಿತ್ತು ಎಂದು ವಿಶ್ಲೇಷಿಸಲಾಗಿದೆ.
ಈ ಎಲ್ಲ ಲೇಖನಗಳಲ್ಲಿ ಹಾಗೂ ಇಡೀ ಸಂಚಿಕೆಯಲ್ಲಿ ಅಂಬೇಡ್ಕರ್ ಅವರನ್ನು ದೊಡ್ಡ ಸೆಲೆಬ್ರಿಟಿಯಾಗಿ ಬಿಂಬಿಸಲಾಗಿತ್ತು. ಆದರೆ ಅಂಬೇಡ್ಕರ್ ಅವರು ಜೀವಂತವಿದ್ದಾಗ ಆರೆಸ್ಸೆಸ್ ಹಾಗೂ ಅದರ ಮುಖವಾಣಿ ಅಂಬೇಡ್ಕರ್ ಬಗ್ಗೆ ಯಾವ ಅಭಿಪ್ರಾಯ ಹೊಂದಿತ್ತು? ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಾನು 1949-50ರ ಅವಧಿಯಲ್ಲಿ ಅಂಬೇಡ್ಕರ್ ಕೇಂದ್ರ ಸರಕಾರದ ಕಾನೂನು ಸಚಿವರಾಗಿದ್ದಾಗ, ಭಾರತ ಸಂವಿಧಾನವನ್ನು ಅಂತಿಮಪಡಿಸುವ ಅವಧಿಯಲ್ಲಿ ಹಾಗೂ ಹಿಂದೂ ವೈಯಕ್ತಿಕ ಕಾನೂನಿನ ಸುಧಾರಣೆ ಬಗ್ಗೆ ಪ್ರತಿಪಾದಿಸಿ, ಮಹಿಳೆಯರಿಗೆ ವಿಸ್ತೃತ ಹಕ್ಕನ್ನು ನೀಡಲು ಬಯಸಿದಾಗ ಈ ಸಂಘಟನೆಯ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಬಗ್ಗೆ ಗಮನ ಕೇಂದ್ರೀಕರಿಸುತ್ತೇನೆ.
ಎರಡೂ ವಿಚಾರಗಳಿಗೆ ಆರೆಸ್ಸೆಸ್ ಅಸಮ್ಮತಿ ಇತ್ತು. 1949ನೆ ಇಸ್ವಿ ನವೆಂಬರ್ 30ರ ಆರ್ಗನೈಸರ್ ಸಂಚಿಕೆಯು ಭಾರತದ ಸಂವಿಧಾನ ಹಾಗೂ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಿದ ಅದರ ಅಂತಿಮ ಕರಡು ಪ್ರತಿ ಬಗ್ಗೆ ಸಂಪಾದಕೀಯ ಪ್ರಕಟವಾಗಿತ್ತು. ‘‘ಭಾರತದ ಹೊಸ ಸಂವಿಧಾನದ ಅತ್ಯಂತ ಕೂಳು ಸಂಗತಿಗಳು’’ ಎಂಬ ಶೀರ್ಷಿಕೆಯಡಿ ಸಂಪಾದಕೀಯ ಬರೆಯಲಾಗಿತ್ತು. ‘‘ಇದರಲ್ಲಿ ಭಾರತೀಯ ಎನ್ನುವುದು ಏನೂ ಇಲ್ಲ. ಪ್ರಾಚೀನ ಭಾರತದ ಸಂವಿಧಾನಾತ್ಮಕ ಕಾನೂನುಗಳ ಯಾವ ಅಂಶವೂ ಇದರಲ್ಲಿಲ್ಲ. ಆ ಸಂಸ್ಥೆಗಳಾಗಲಿ, ಅದರ ಉಲ್ಲೇಖ ಅಥವಾ ಪದವಿನ್ಯಾಸ ಕೂಡಾ ಇಲ್ಲ. ಪ್ರಾಚೀನ ಭಾರತದಲ್ಲಿ ಆಗಿದ್ದ ವಿಶಿಷ್ಟ ಸಂವಿಧಾನಾತ್ಮಕ ಬೆಳವಣಿಗೆ ಬಗ್ಗೆಯೂ ಉಲ್ಲೇಖ ಇಲ್ಲ. ಮನು ಸೂತ್ರಗಳು ಪ್ರಾಚೀನ ಕಾಲದಲ್ಲೇ ಜಾರಿಗೆ ಬಂದಿದ್ದವು. ಇದು ಸ್ಪಾರ್ಟಾದ ಲಿಕ್ಯೂರ್ಗಸ್ ಅಥವಾ ಪರ್ಶಿಯಾದ ಸೊಲೋನ್‌ಗಿಂತಲೂ ಪ್ರಾಚೀನ. ಇದೀಗ ಮನು ಕಾನೂನುಗಳು ಮನುಸ್ಮತಿಯಲ್ಲಿ ಕಂಡುಬರುತ್ತವೆ. ಇದಕ್ಕೆ ಇಡೀ ದೇಶವೇ ತಲೆಬಾಗುತ್ತದೆ ಮತ್ತು ಅದರ ಶ್ರೇಷ್ಠತೆಯನ್ನು ಹಿಂದೂ ಸಮಾಜ ಸಾರುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ’’ ಎಂದು ಈ ಸಂಪಾದಕೀಯದಲ್ಲಿ ಆಕ್ಷೇಪಿಸಲಾಗಿತ್ತು. ಅಂಬೇಡ್ಕರ್ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸದಿದ್ದರೂ, ಪ್ರಮುಖ ಸಂವಿಧಾನ ಪಂಡಿತರಾಗಿದ್ದ ಅಂಬೇಡ್ಕರ್ ಅವರೇ ಆರೆಸ್ಸೆಸ್‌ನ ಟೀಕಾಸ್ತ್ರದ ಗುರಿ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
ಹಿಂದೂ ವೈಯಕ್ತಿಕ ಕಾನೂನಿಗೆ ಸುಧಾರಣೆ ತರುವ ಸಂಬಂಧ ಅಂಬೇಡ್ಕರ್ ಮುಂದಿಟ್ಟಿದ್ದ ಪ್ರಸ್ತಾವದ ಬಗ್ಗೆ ಆರೆಸ್ಸೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ಎಂ.ಎಸ್.ಗೋಳ್ವಾಲ್ಕರ್, 1949ರ ಆಗಸ್ಟ್‌ನಲ್ಲಿ ಮಾಡಿದ ಒಂದು ಭಾಷಣದಲ್ಲಿ ಅಂಬೇಡ್ಕರ್ ಅವರ ಪ್ರಸ್ತಾವವನ್ನು ಖಂಡತುಂಡವಾಗಿ ವಿರೋಧಿಸಿದ್ದರು. ‘‘ಅಂಬೇಡ್ಕರ್ ಮುಂದಿಟ್ಟಿರುವ ಸುಧಾರಣೆಯಲ್ಲಿ ಭಾರತೀಯತೆಯ ಸ್ಪರ್ಶವೇ ಇಲ್ಲ. ವಿವಾಹ ಹಾಗೂ ವಿಚ್ಛೇದನದಂಥ ಪ್ರಶ್ನೆಗಳನ್ನು ಅಮೆರಿಕನ್ ಅಥವಾ ಬ್ರಿಟಿಷ್ ಮಾದರಿಯ ಕಾನೂನುಗಳಿಂದ ಬಗೆಹರಿಸಲಾಗದು. ಹಿಂದೂ ಸಂಸ್ಕೃತಿ ಮತ್ತು ಕಾನೂನಿನ ಪ್ರಕಾರ, ವಿವಾಹ ಎನ್ನುವುದು ಒಂದು ಸಂಸ್ಕಾರ. ಅದು ಸತ್ತ ಬಳಿಕವೂ ಬದಲಾಗದು. ಅಥವಾ ಯಾವುದೇ ಕಾಲಕ್ಕೂ ಮುರಿಯಬಹುದಾದ ಕರಾರು ಅದಲ್ಲ’’ ಎಂದು ಬಣ್ಣಿಸಿದ್ದರು.
‘‘ಅದಾಗ್ಯೂ ಭಾರತದ ಕೆಲವೆಡೆ ಹಿಂದೂ ಸಮಾಜದ ಕೆಳವರ್ಗದ ಕೆಲ ಜಾತಿಗಳು ರೂಢಿಯಂತೆ ವಿಚ್ಛೇದನ ನೀಡುವ ಪದ್ಧತಿ ಇದೆ. ಆದರೆ ಅವರ ಪದ್ಧತಿಯನ್ನು ಇಡೀ ಸಮಾಜದ ಆದರ್ಶ ಎಂದು ಪರಿಗಣಿಸಲಾಗದು’’ ಎಂದು ಗೋಳ್ವಾಲ್ಕರ್ ‘‘ಆರ್ಗನೈಸರ್’’ನ 1949ನೆ ಇಸ್ವಿ ಸೆಪ್ಟಂಬರ್ 6ರ ಸಂಚಿಕೆಯಲ್ಲಿ ಪ್ರತಿಪಾದಿಸಿದ್ದರು. ಅದೇ ವರ್ಷದ ಪತ್ರಿಕೆಯ ಎಪ್ರಿಲ್ 17ರ ಸಂಚಿಕೆ ಹಾಗೂ ನವೆಂಬರ್ 2ರ ಸಂಚಿಕೆಗಳಲ್ಲೂ ಹಿಂದೂ ಸಂಹಿತೆ ಮಸೂದೆಯನ್ನು, ’’ಹಿಂದೂಗಳ ನಂಬಿಕೆ ಮೇಲಿನ ನೇರ ದಾಳಿ’’ ಎಂದು ಬಣ್ಣಿಸಲಾಗಿತ್ತು. ಮಹಿಳೆಯರು ವಿಚ್ಛೇದನ ಪಡೆಯುವಂತೆ ಅವರನ್ನು ಸಬಲಗೊಳಿಸುವುದು ಹಿಂದೂ ಸಿದ್ಧಾಂತದ ವಿರುದ್ಧ ಸಿಡಿದೇಳಲು ಅವರನ್ನು ಪ್ರಚೋದಿಸುವ ಕ್ರಮ ಎಂದು ಟೀಕಿಸಲಾಗಿತ್ತು. ಇದಾದ ಒಂದು ತಿಂಗಳ ಬಳಿಕ (1949ರ ಡಿಸೆಂಬರ್ 7) ‘‘ಹಿಂದೂ ಸಂಹಿತೆ ಮಸೂದೆ’’ ಎಂಬ ವಿಷಯದ ಬಗ್ಗೆ ಸಂಪಾದಕೀಯ ಪ್ರಕಟವಾಯಿತು. ಅದರಲ್ಲಿನ ಒಂದು ಪ್ಯಾರಾ ಹೇಗಿತ್ತು ನೋಡಿ- ‘‘ಹಿಂದೂ ಸಂಹಿತೆ ಮಸೂದೆಯನ್ನು ನಾವು ವಿರೋಧಿಸುತ್ತೇವೆ. ನಮ್ಮ ವಿರೋಧಕ್ಕೆ ಕಾರಣವೆಂದರೆ, ಅದು ಬಾಹ್ಯ ಹಾಗೂ ಅನೈತಿಕ ತತ್ವಗಳ ಆಧಾರದ ಅವಹೇಳನಕಾರಿ ಕ್ರಮಗಳನ್ನು ಒಳಗೊಂಡಿದೆ. ಅದು ಹಿಂದೂ ಸಂಹಿತೆ ಅಲ್ಲ; ಹಿಂದುತ್ವದ ಬಗ್ಗೆ ಏನೂ ಅದರಲ್ಲಿಲ್ಲ. ಅದು ಹಿಂದೂ ಕಾನೂನು, ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಪಾಲಿಗೆ ಕ್ರೂರ ಹಾಗೂ ಮಾನಹಾನಿಕರ ಎಂಬ ಕಾರಣಕ್ಕೆ ಅದನ್ನು ಖಂಡಿಸುತ್ತೇವೆ’’.
ಈ ಸುಧಾರಣೆಗಳು ಯಾರಿಗಾಗಿ ಎನ್ನುವುದನ್ನು ವಿಶ್ಲೇಷಿಸುವಲ್ಲಿ, ಈ ಅಭಿಪ್ರಾಯಗಳನ್ನು ಮಾರು ಮುಂದಿಟ್ಟಿದ್ದಾರೆ ಎನ್ನುವುದನ್ನು ಸಂಪಾದಕೀಯ ವಿವರಿಸಿತ್ತು. ‘‘ಕೆಲ ವಿಧವೆಯರು ಹಾಗೂ ವಿಧುರರು, ಸಂತಾನವಿಲ್ಲದ ಮಹಿಳೆಯರು ಹಾಗೂ ಮುದಿ ವರರು ಜತೆ ಸೇರಿಕೊಂಡು ಕೆಲವರ ವಿಚಾರಶೂನ್ಯತೆಯಿಂದ ನಮ್ಮ ಪ್ರಾಚೀನ ಕಾನೂನು ಸಡಿಲಿಸಲು ಹೊರಟಿದ್ದಾರೆ’’ ಇದರಲ್ಲಿ ಮಸೂದೆ ಸಿದ್ಧಪಡಿಸಿದ ಇಬ್ಬರು ಪ್ರತಿಪಾದಕರನ್ನು ಗುರಿ ಮಾಡಲಾಗಿತ್ತು. ಇವರನ್ನು ಆರೆಸ್ಸೆಸ್ ‘‘ಋಷಿ ಅಂಬೇಡ್ಕರ್ ಹಾಗೂ ಮಹರ್ಷಿ ನೆಹರೂ’’ ಎಂದು ಲೇವಡಿ ಮಾಡಿತ್ತು. ಇವರ ಸುಧಾರಣೆಯಿಂದಾಗಿ ಸಮಾಜ ಯಾಂತ್ರಿಕವಾಗುತ್ತದೆ ಹಾಗೂ ಪ್ರತಿ ಕುಟುಂಬಕ್ಕೆ ಕೂಡಾ ಇದು ಸೋಂಕಿನಂತೆ ಬಾಧಿಸಲಿದೆ. ಕುಟುಂಬದಲ್ಲಿ ಕೋಲಾಹಲ, ಸಂದೇಹ ಹಾಗೂ ಅನಿಷ್ಟಗಳಿಗೆ ಇದು ಕಾರಣವಾಗಲಿದೆ ಎಂದು ಪ್ರತಿಪಾದಿಸಲಾಗಿತ್ತು. ‘‘ಈ ಮಸೂದೆಯು ಕುಟುಂಬಗಳನ್ನು ಛಿದ್ರಗೊಳಿಸಿ, ಆಸ್ತಿ ಹಕ್ಕಿನ ವಿಚಾರದಲ್ಲಿ ಸಹೋದರರನ್ನೇ ಸಹೋದರಿಯರ ವಿರುದ್ಧವೇ ಎತ್ತಿಕಟ್ಟುತ್ತದೆ’’ ಎಂದು ಹೇಳಿತ್ತು.
ಪ್ರಾಚೀನ ಹಿಂದೂ ನ್ಯಾಯಶಾಸ್ತ್ರಜ್ಞರು ಹಾಗೂ ಸಂತರ ಜ್ಞಾನವನ್ನು ರಕ್ಷಿಸುವ ಹೆಸರಿನಲ್ಲಿ, ಆರೆಸ್ಸೆಸ್ ಎಲ್ಲ ಆಯಾಮಗಳಿಂದಲೂ ಪಿತೃಪ್ರಭುತ್ವವನ್ನು ಸಮರ್ಥಿಸಿಕೊಂಡಿತ್ತು. ಅದನ್ನು ವಾಸ್ತವವಾಗಿ ಕಾಡಿದ ಅಂಶವೆಂದರೆ ಹೊಸ ಮಸೂದೆಯದಲ್ಲಿ, ಮಹಿಳೆಯರಿಗೆ ತಮ್ಮ ವಿವಾಹ ಪಾಲುದಾರನನ್ನು ಆಯ್ಕೆ ಮಾಡುವ, ಕ್ರೂರ ಗಂಡನಿಗೆ ವಿಚ್ಛೇದನ ನೀಡುವ ಹಾಗೂ ಆಸ್ತಿ ಮೇಲಿನ ಉತ್ತರಾಧಿಕಾರದ ಅಂಶಗಳು ಒಳಗೊಂಡಿದ್ದವು. ಈ ಎಲ್ಲ ಅವಕಾಶಗಳನ್ನು ಈ ಮೊದಲು ಮಹಿಳೆಯರಿಗೆ ನಿರಾಕರಿಸಲಾಗಿತ್ತು.
ಆರೆಸ್ಸೆಸ್ ಹಿಂದೂ ಸಂಹಿತೆ ಮಸೂದೆ ಬಗ್ಗೆ ಸರ್ವಸನ್ನದ್ಧ ದಾಳಿ ಆರಂಭಿಸಿತು. ಮಸೂದೆ ತಡೆಯಲು ನೂರಾರು ಮೆರವಣಿಗೆ, ಧರಣಿ, ಹರತಾಳಗಳನ್ನು ಆಯೋಜಿಸಿತು; ಇದರಲ್ಲಿ ಸಾಧು ಸಂತರು ಭಾಷಣಗಳನ್ನು ಮಾಡಿದರು. ಆ ಪೈಕಿ ಒಬ್ಬರ ಭಾಷಣದ ವೈಖರಿ ಹೀಗಿತ್ತು, ‘‘ಈ ಮಸೂದೆಯನ್ನು ರೂಪಿಸಿದ ಬಿ.ಎನ್.ರಾವ್ ಹಾಗೂ ಶಾಸನ ಸಭೆಯಲ್ಲಿ ಇಂದು ಅದರ ಪೈಲಟ್ ಆಗಿದ್ದ ಅಂಬೇಡ್ಕರ್ ಇಬ್ಬರೂ ತಾವು ಹಿಂದೂಗಳಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ ಹಿಂದೂ ಪದ್ಧತಿಗೆ ಅನುಗುಣವಾಗಿ ವಿವಾಹವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅಂಥವರಿಗೆ ಹಿಂದೂಧರ್ಮದ ಸುಧಾರಣೆಯ ಹೊಣೆ ವಹಿಸಿದ್ದು ದುರಂತ ಹಾಗೂ ಕರಾಳ’’ (ಆರ್ಗನೈಸರ್, 14ನೆ ಡಿಸೆಂಬರ್ 1949). ಮಸೂದೆ ವಿರುದ್ಧದ ಆಂದೋಲನ ಹಲವು ತಿಂಗಳ ಕಾಲ ನಡೆಯಿತು. ಈ ವಿಷಯದ ಬಗ್ಗೆ ಆರ್ಗನೈಸರ್ ಹಲವು ಲೇಖನಗಳನ್ನು ಪ್ರಕಟಿಸಿತು. ಅದರಲ್ಲಿ ಒಂದು ಹೀಗೆ ಆರಂಭವಾಗಿತ್ತು, ‘‘ಹಿಂದೂ ಧರ್ಮ, ಸಂಸ್ಥೆ ಹಾಗೂ ಕಾನೂನುಗಳು ನೆಹರೂ ಹಾಗೂ ಅಂಬೇಡ್ಕರ್ ಕಲ್ಪಿಸಿಕೊಂಡಿದ್ದಕ್ಕಿಂತ ಅಧಿಕವಾಗಿವೆ’’.
1950ರ ಜನವರಿ 11ರ ಆರ್ಗನೈಸರ್ ಸಂಚಿಕೆ, ಕೆ.ಡಿ.ಪಿ.ಶಾಸ್ತ್ರಿ ಎಂಬವರ ಸುದೀರ್ಘ ಪತ್ರವನ್ನು ಪ್ರಕಟಿಸಿತ್ತು. ‘‘ಫ್ರೀ ಇಂಡಿಯಾ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಪ್ರಬಂಧದಲ್ಲಿ ಅಂಬೇಡ್ಕರ್ ಅವರನ್ನು ಆಧುನಿಕ ಭಾರತದ ಮನು ಎಂದು ಬಣ್ಣಿಸಲಾಗಿದೆ. ಇದು ಲಿಲ್ಲಿಪುಟ್ ಅನ್ನು ಬ್ರಾಬ್ಡಿಂಗಾಂಗ್ (ತೀರಾ ಪುಟ್ಟ ಭೂಭಾಗವನ್ನು ಬೃಹತ್ ಎಂದು ಬಿಂಬಿಸುವುದು) ಎಂದು ವಿವರಿಸಿದ್ದಕ್ಕೆ ಸಮ. ದೇವಸಮಾನ ಮನುವಿಗೆ ಅಂಬೇಡ್ಕರ್ ಅವರನ್ನು ಹೋಲಿಸುವುದು ಮನುವಿಗೆ ಮಾಡುವ ಅವಮಾನ. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಹಿಂದೂಧರ್ಮಕ್ಕೆ ಮಾಡಿದ ಕೆಡುಕು ಎಲ್ಲರಿಗೂ ತಿಳಿದಿದೆ’’ ಎಂದು ಪತ್ರದಲ್ಲಿ ವಿವರಿಸಲಾಗಿತ್ತು. ಇದು ಹಿಂದೂಗಳನ್ನು ಮತಾಂತರ ಮಾಡುವ ಅಂಬೇಡ್ಕರ್ ಅವರ ಆಕಾಂಕ್ಷೆ ಹಾಗೂ 1947ರ ಪೂರ್ವದಲ್ಲಿ ಅವರು ಪಾಕಿಸ್ತಾನಿ ಪರ ಬೆಂಗಾಲಿ ದಲಿತ ನಾಯಕ ಜೋಗೇನ್ ಮಂಡಲ್ ಜತೆಗೆ ಹೊಂದಿದ್ದ ಸಹಭಾಗಿತ್ವವನ್ನು ಬಹಿರಂಗಗೊಳಿಸುತ್ತದೆ. ಈ ಆರೆಸ್ಸೆಸ್ ಮನುಷ್ಯ, ‘‘ಭಾರತದಲ್ಲಿ ಎಷ್ಟೇ ಒಳ್ಳೆಯ ವ್ಯಕ್ತಿಯಾದರೂ, ಮನು ಎಂದು ಕರೆದುಕೊಳ್ಳಲಾಗದು’’ ಎಂದು ಪ್ರತಿಪಾದಿಸಲಾಗಿತ್ತು.
ವ್ಯಕ್ತಿಗಳಂತೆ ಸಂಸ್ಥೆಗಳು ಕೂಡಾ ತಮ್ಮ ನಿಲುವು ಬದಲಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಅಂಥ ಬದಲಾವಣೆಗೆ ಏನು ಕಾರಣ, ಏಕೆ ಈ ಬದಲಾವಣೆ ಎಂದು ಮುಕ್ತವಾದ ಸಮರ್ಥನೆ ಇರಬೇಕು. ನಿಜಾಂಶವೆಂದರೆ, ಅಂಬೇಡ್ಕರ್ ಕಾನೂನು ಸಚಿವರಾಗಿ, ದೇಶದ ಸಂವಿಧಾನವನ್ನು ರೂಪಿಸುತ್ತಿದ್ದ ಪ್ರಮುಖ ಕಾಲಘಟ್ಟದಲ್ಲಿ, ಆರೆಸ್ಸೆಸ್ ಅಂಬೇಡ್ಕರ್ ಹಾಗೂ ಅವರ ಸಿದ್ಧಾಂತಗಳನ್ನು ದೂಷಿಸಿತು. 1949ನೆ ಇಸ್ವಿ ನವೆಂಬರ್ ತಿಂಗಳ ಸಂಚಿಕೆಯಲ್ಲಿ ಆರ್ಗನೈಸರ್ ವಿವರಿಸಿದಂತೆ, ಆರೆಸ್ಸೆಸ್‌ಗೆ ಬೇಕಾಗಿರುವುದು ಸಂಘ ಪರಿವಾರ ವ್ಯಾಖ್ಯಾನಿಸುವ ಹಿಂದೂ ಸಂಸ್ಕೃತಿ, ಸಂಪ್ರದಾಯ ಹಾಗೂ ವೌಲ್ಯಕ್ಕೆ ‘‘ವಿಧೇಯತೆ ಹಾಗೂ ಖಚಿತತೆ’’ಯೇ ವಿನಃ ಕ್ರಾಂತಿಕಾರಿ, ಬೌದ್ಧಿಕ ಹಾಗೂ ಪಿತೃಪ್ರಧಾನ ವ್ಯವಸ್ಥೆಯನ್ನು ವಿರೋಧಿಸುವ ಅಂಬೇಡ್ಕರ್ ಅವರಂಥ ಸುಧಾರಕರನ್ನು ಸಹಜವಾಗಿಯೇ ಅದು ಸ್ವೀಕರಿಸಿಕೊಳ್ಳುವುದಿಲ್ಲ.
(ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)