ಸಾಮಾಜಿಕ ನ್ಯಾಯದ ಹರಿಕಾರ ಅರಸು-ಎಂ.ರಘುಪತಿ

Update: 2016-04-25 18:37 GMT

ಭಾಗ 2

1971 ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಯಾಯಿತು. ಹಾಗೆಯೇ ನಾಯಕರು ಮುನ್ನೆಲೆಗೆ ಬಂದು ನಿಂತರು. ಕರ್ನಾಟಕದ ಅಂದಿನ 26 ಕ್ಷೇತ್ರಗಳಲ್ಲಿ, ಆರೇಳು ಕ್ಷೇತ್ರಗಳಿಗೆ ಮಾತ್ರ ಹಳಬರು, ಮಿಕ್ಕ ಹದಿನೆಂಟರಿಂದ ಇಪ್ಪತ್ತು ಅಭ್ಯರ್ಥಿಗಳು ಹೊಸಬರು. ಬರೀ ಹೊಸಬರಲ್ಲ, ರಾಜಕಾರಣದತ್ತ ಮುಖ ಮಾಡಿ ಮಲಗಿದವರೂ ಅಲ್ಲ. ಲಿಂಗಾಯತ ಕೋಮಿನ ನಾಯಕ ಸಿದ್ದವೀರಪ್ಪನವರ ಗುಂಪು ಕನಕಪುರ ಕ್ಷೇತ್ರಕ್ಕೆ ಗಾಂಧಿವಾದಿ ಕರಿಯಪ್ಪನವರನ್ನು ಅಭ್ಯರ್ಥಿಯನ್ನಾಗಿಸಲು ಯತ್ನಿಸಿತು. ಕರಿಯಪ್ಪನವರು ಹಿರಿಯರು, ಯೋಗ್ಯರು, ಅರ್ಹರು. ಆದರೆ ದೇವರಾಜ ಅರಸು ಕರಿಯಪ್ಪನವರ ಬದಲಿಗೆ ಅಭ್ಯರ್ಥಿಯನ್ನಾಗಿಸಿದ್ದು ನಿಜಲಿಂಗಪ್ಪನವರ ಹಿಂದೆ ಓಡಾಡಿಕೊಂಡಿದ್ದ, ಸೇವಾದಳದ ಕಾರ್ಯಕರ್ತರಾಗಿದ್ದ ಜಾಫರ್ ಶರೀಫರನ್ನು. ತುಮಕೂರು ಕ್ಷೇತ್ರ ಸಾಮಾನ್ಯವಾಗಿ ಗಂಗಟಕಾರ ಒಕ್ಕಲಿಗರು, ಲಿಂಗಾಯತರು ಮತ್ತು ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರ. ಅಲ್ಲಿ ಒಕ್ಕಲಿಗರಲ್ಲೇ ಒಳಜಾತಿ ಕುಂಚಟಿಗ ಸಮುದಾಯಕ್ಕೆ ಸೇರಿದ, ಆರ್ಥಿಕವಾಗಿ ಹಿಂದುಳಿದ, ಮುನ್ಸಿಪಾಲಿಟಿ ಎಲೆಕ್ಷನ್‌ನಲ್ಲಿ ಸೋತಿದ್ದ ಮಲ್ಲಣ್ಣ ಎಂಬ ವ್ಯಕ್ತಿಗೆ ಟಿಕೆಟ್ ನೀಡಿದರು. ಚಿಕ್ಕಮಗಳೂರು ಧನಾಢ್ಯ ಕಾಫಿ ಪ್ಲಾಂಟರ್‌ಗಳ ನಾಡು. ಬಲಾಢ್ಯ ಒಕ್ಕಲಿಗರ ಕ್ಷೇತ್ರ.

ಅಂತಹ ಕ್ಷೇತ್ರಕ್ಕೆ ಮಧ್ಯಮವರ್ಗದ, ಎಲ್‌ಎಲ್‌ಬಿ ಓದಿದ, ಮುನ್ಸಿಪಾಲಿಟಿಗೆ ನಿಂತು 16 ಮತ ಪಡೆದು ಸೋತಿದ್ದ ಯುವಕ ಡಿ.ಬಿ.ಚಂದ್ರೇಗೌಡರನ್ನು ಅಭ್ಯರ್ಥಿ ಯನ್ನಾಗಿಸಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಲಿಂಗಾಯತರದೇ ಪ್ರಾಬಲ್ಯ. ಅದರಲ್ಲೂ ಬಣಜಿಗರೇ ಬಲಿಷ್ಠರು. ಅವರ ಮುಂದೆ ಸಾದರ ಲಿಂಗಾಯತರ ಪೈಕಿಯ ಚಂದ್ರಶೇಖರಪ್ಪನವರನ್ನು ಅಭ್ಯರ್ಥಿಯನ್ನಾಗಿಸಿದರು. ಬಡ ವಕೀಲರಾದ ಇವರನ್ನು ಅಂದು ಕೇಳುವವರೇ ಇರಲಿಲ್ಲ. ಉಡುಪಿ ಲೋಕಸಭಾ ಕ್ಷೇತ್ರ ಹೇಳಿ ಕೇಳಿ ಪೈಗಳ ಬಿಗಿಹಿಡಿತ ಕ್ಕೊಳಪಟ್ಟಿತ್ತು. ಅವರಲ್ಲದೆ ಮತ್ತೊಬ್ಬರು ಗೆಲ್ಲುವುದು ಅಲ್ಲಿ ಕಷ್ಟವಾಗಿತ್ತು. ಅಂತಹ ಕಡೆ ಅರಸು ಅವರು ಕೊಂಕಣಿ ಬ್ರಾಹ್ಮಣರ ಪೈಕಿ ಬಡ ಶೆಣೈ ಅವರನ್ನು ಕಣಕ್ಕಿಳಿಸಿದರು. ಉತ್ತರ ಕನ್ನಡದಲ್ಲಿ ಹವ್ಯಕರು ಸ್ಟ್ರಾಂಗು. ಅವರ ಮುಂದೆ ಹಿಂದುಳಿದ ಜಾತಿಯ ಗುಡ್ಡಗಾಡು ಜನಾಂಗಕ್ಕೆ ಸೇರಿದ ಸಂಭಾವಿತ ನಿವೃತ್ತ ಅಧಿಕಾರಿ ಬಿ.ಬಿ.ನಾಯಕ್ ಅವರನ್ನು ಅಭ್ಯರ್ಥಿಯನ್ನಾಗಿಸಿದರು. ಬಾಗಲಕೋಟೆ-ಬಿಜಾಪುರ ಕ್ಷೇತ್ರದಿಂದ ಐದುನೂರು ಜನರಿಲ್ಲದ ಮೀನುಗಾರ ಸಮಾಜಕ್ಕೆ ಸೇರಿದ ಬಿ.ಇ.ಚೌಧರಿ ಎಂಬ ವ್ಯಕ್ತಿಗೆ ಟಿಕೆಟ್ ಕೊಟ್ಟರು. ಕೋಲಿ ಸಮಾಜದವರನ್ನು ಕೇಳುವವರೇ ಇಲ್ಲ. ರಾಜಕಾರಣದಿಂದಲೂ ದೂರ.

ಅಂತಹ ಸಮಾಜದಿಂದ ಬಂದ ಚೌಧರಿಯನ್ನು ಆಯ್ದುಕೊಂಡರು. ಧಾರವಾಡದ ಎರಡು ಸೀಟುಗಳಿಗೆ ಒಂದು ಮುಸ್ಲಿಂ ಸಮುದಾಯದ ಮುಹಿಸಿನ್‌ಗೆ, ಮತ್ತೊಂದು ಬ್ರಾಹ್ಮಣರ ಪೈಕಿಯ ಸರೋಜಿನಿ ಮಹಿಷಿಗೆ. ಮಹಿಳೆಗೂ ಪ್ರಾತಿನಿಧ್ಯ, ಕನಕಪುರ ಮತ್ತು ಧಾರವಾಡಗಳಿಂದ ಮುಸ್ಲಿಮರಿಗೆ ಎರಡು- ಇತಿಹಾಸದಲ್ಲಿಯೇ ಮೊದಲು. ಬೀದರ್‌ನಿಂದ ಕಡುಬಡವ, ನಿರ್ಲಕ್ಷಕ್ಕೊಳಗಾದವ, ಅಧಿಕಾರ, ಸ್ಥಾನಮಾನಗಳ ಅರಿವಿಲ್ಲದ ಶಂಕರ್‌ದೇವ್ ಎಂಬ ಅಮಾಯಕನಿಗೆ ಟಿಕೆಟ್ ಕೊಟ್ಟರು. ಕೊಪ್ಪಳ ಕ್ಷೇತ್ರದಿಂದ, ಅಲ್ಲಿಯವರೆಗೂ ಯಾರೂ ಅಂತಹ ಪ್ರಯೋಗವನ್ನೇ ಮಾಡಿರದಿದ್ದ, ಮಠಾಧಿಪತಿಯಾಗಿದ್ದ ಅಳವಂದ ಸ್ವಾಮೀಜಿಯನ್ನು ಕರೆದುಕೊಂಡು ಬಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದರು. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ದೇವರಾಜ ಅರಸು ಅವರು 1971 ರಲ್ಲಿಯೇ ಅಪಾರ ಅನುಭವವುಳ್ಳ ದೂರದೃಷ್ಟಿಯುಳ್ಳ ನಾಯಕನಂತೆ ವರ್ತಿಸಿದ್ದರು. ಬಡವರು, ನಿರ್ಲಕ್ಷಕ್ಕೊಳಗಾದ ಜಾತಿಯ ಜನರು, ಬಹುಸಂಖ್ಯಾತ ಬಲಾಢ್ಯ ಜಾತಿಯ ದರ್ಪ-ದೌರ್ಜನ್ಯವನ್ನು ಸಹಿಸಿಕೊಂಡೇ ಬಂದ ಉಪಜಾತಿಯವರು, ದನಿಯೇ ಇಲ್ಲದ ಅಲ್ಪಸಂಖ್ಯಾತರು, ಅಸಹಾಯಕರು, ಅಧಿಕಾರವೆಂದರೆ ಏನು ಎನ್ನುವುದನ್ನೇ ಕಾಣದವರು... ಇಂತಹವರನ್ನೆಲ್ಲ ಆಯ್ದು ರಾಜಕಾರಣದ ಅಂಗಳಕ್ಕೆ ತಂದು ಬಿಟ್ಟಿದ್ದರು.

ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಭಾಗಿಗಳಾದ ಮೇಲೆ ಅಧಿಕಾರವನ್ನು ಹಂಚಿಕೊಳ್ಳುವುದರಲ್ಲಿಯೂ ಭಾಗಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕರ್ನಾಟಕದಲ್ಲಿ ವೀರೇಂದ್ರ ಪಾಟೀಲರ ಸರಕಾರವಿದ್ದರೂ; ಬಹುಸಂಖ್ಯಾತರ ಕೈಯಲ್ಲಿ ಅಧಿಕಾರ, ಹಣಬಲ, ತೋಳ್ಬಲವಿದ್ದರೂ; ದೇವರಾಜ ಅರಸರ ಸಾಮಾಜಿಕ ನ್ಯಾಯವೆಂಬ ಪ್ರಯೋಗ ಗೆದ್ದಿತ್ತು. 26ಕ್ಕೆ 26ರನ್ನೂ ಗೆಲ್ಲುವ ಮೂಲಕ ಆಡಳಿತ ಪಕ್ಷವನ್ನು ಮಣ್ಣು ಮುಕ್ಕಿಸಿತ್ತು. ಫಲಿತಾಂಶ ಬಂದ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ದೇವರಾಜ ಅರಸು, ‘‘ಕರ್ನಾಟಕ ಕಾಂಗ್ರೆಸ್ ಪಕ್ಷದ ಈ ಗೆಲುವು ಇಂದಿರಾ ಗಾಂಧಿಯವರ ಮತ್ತು ಸಾಮಾಜಿಕ ನ್ಯಾಯದ ಗೆಲುವು’’ ಎಂದು ವ್ಯಾಖ್ಯಾನಿಸಿದರು. ಇಂದಿರಾ ಗಾಂಧಿ ಅರಸರನ್ನು ಮುಕ್ತಕಂಠದಿಂದ ಹೊಗಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮಾನ್ ಹುದ್ದೆ ನೀಡಿ ಗೌರವಿಸಿದರು. ಅಲ್ಲಿಯವರೆಗೆ, ರಾಜಕಾರಣದಲ್ಲಿ ಯಾರೂ ಬಳಸದ ‘ಸೋಶಿಯಲ್ ಜಸ್ಟೀಸ್’ ಎಂಬ ಪದವನ್ನು ಮೊದಲ ಬಾರಿಗೆ ದೇವರಾಜ ಅರಸು ಅವರು ಬಳಸಿದರು. ಅವತ್ತಿನ ಆ ಸಾಮಾಜಿಕ ನ್ಯಾಯದ ನೆರಳಲ್ಲಿ ಬಂದವರು ಇವತ್ತು ಏನೇನಾಗಿದ್ದಾರೆ, ಎಂತಹ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ, ಆ ಜಾತಿ ಜನಾಂಗಗಳಲ್ಲಿ ಎಂತಹ ಬದಲಾವಣೆಯಾಗಿದೆ, ಆರ್ಥಿಕ-ಸಾಮಾಜಿಕ ಸ್ಥಿತಿಗತಿ ಯೇನು ಎಂಬುದನ್ನು ಅಧ್ಯಯನ ಮಾಡಿದರೆ- ದೇವರಾಜ ಅರಸು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು ಎನ್ನುವುದು ತಿಳಿಯುತ್ತದೆ. ಅದು ಈ ಶತಮಾನೋತ್ಸವ ಸಂದರ್ಭದಲ್ಲಿ ತೀರಾ ಅಗತ್ಯ ಕೂಡ.

ಮುಳ್ಳಿನ ಹಾದಿಯ ಕನಸುಗಾರ
ಲೋಕಸಭಾ ಚುನಾವಣೆಯ ಗೆಲುವು, ಸಾಮಾಜಿಕ ನ್ಯಾಯದ ಗೆಲುವಾದರೂ, ಅರಸು ವಿರುದ್ಧದ ಅಸಹನೆ ಅಲ್ಲಿಂದಲೇ ಭುಗಿಲೇಳತೊಡಗಿತು. ಮೇಲ್ವರ್ಗದವರು, ಬಲಾಢ್ಯ ಜಾತಿಯವರು, ಹಣವಂತರು ಅರಸು ವಿರುದ್ಧ ಒಂದಾದರು. ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದು, ಎದುರೆದುರೆ ವಾಚಾಮಗೋಚರ ಬಯ್ದರು. ಕೀಳುಮಟ್ಟದ ಭಾಷೆ ಬಳಸಿ ಅವಮಾನ ಮಾಡಿದರು. ಆದರೆ ಅರಸು ಮಾತ್ರ ವಿಚಲಿತರಾಗಲಿಲ್ಲ, ಸ್ಟೇಟ್ಸ್‌ಮನ್ ಥರ ಕಾಮ್ ಆ್ಯಂಡ್ ಕ್ವಯಟ್. ‘ಏನು ಹೇಳ್ತೀರೋ ಹೇಳ್ರಪ್ಪ’ ಎಂದು ಇಡೀ ದಿನ ಕೂತು ಕೇಳಿಸಿಕೊಂಡರು. ‘ನೀವು ರಾಜೀನಾಮೆ ಕೊಟ್ಟು, ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು’ ಎಂದು ಕೂಗಾಡಿದರು. ಆದರೆ ಅರಸು, ‘ಇಂದಿರಾ ಗಾಂಧಿ ಹೇಳಿದ್ರೆ ಇವತ್ತೆ ಇಳೀತೇನೆ, ನಾನು ಚುನಾವಣೆಯಲ್ಲಿ ಗೆದ್ದು ಬಂದವನಲ್ಲ, ನೇಮಕಗೊಂಡವನು’ ಎಂದು ಹೇಳಿದರು. ಅದು ಅಲ್ಲಿಗೆ ತಣ್ಣಗಾಯಿತು.

ಆದರೆ, ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ವೀರೇಂದ್ರ ಪಾಟೀಲರ ಆಡಳಿತ ಪಕ್ಷದ ಶಾಸಕರು ರಾತ್ರೋರಾತ್ರಿ ವಿರೋಧ ಪಕ್ಷದತ್ತ ಗುಳೆ ಹೊರಟು, ವಿರೋಧ ಪಕ್ಷದ ನಾಯಕ ಸಿದ್ದವೀರಪ್ಪನವರ ಮನೆ ಮುಂದೆ ಕ್ಯೂ ನಿಂತರು. ಈ ಹೊಸ ರಾಜಕೀಯ ಬೆಳವಣಿಗೆಗಳಿಂದ ಉಬ್ಬಿಹೋದ ಸಿದ್ದವೀರಪ್ಪನವರು ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು, ಆಡಳಿತ ಪಕ್ಷದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ತಾತ್ಕಾಲಿಕ ಸರಕಾರ ರಚಿಸಲು ಮುಂದಾದರು.

ಚೈನಾ ಟೂರ್ ಮುಗಿಸಿ ಬರುವಾಗ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದ ಅರಸು, ಇಂದಿರಾ ಗಾಂಧಿಯನ್ನು ಭೇಟಿ ಮಾಡಿ ಬೆಂಗಳೂರಿಗೆ ಬಂದಿಳಿದವರೆ, ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ‘ನೋ ಹಾರ್ಸ್‌ ಟ್ರೇಡಿಂಗ್, ನಾವು ಸರಕಾರ ರಚಿಸುವುದಿಲ್ಲ, ಚುನಾವಣೆಗೆ ಸಿದ್ಧರಾಗಿದ್ದೇವೆ’ ಎಂದುಬಿಟ್ಟರು. ಇದು ಅರಸು ವಿರೋಧಿ ಪಾಳೆಯ- ಸಿದ್ದವೀರಪ್ಪನವರ ಬಳಗಕ್ಕೆ ಭಾರೀ ಮುಖಭಂಗವಾಯಿತು. ಅಸಹನೆ, ವಿರೋಧ, ಕಾಲೆಳೆಯುವಿಕೆ ಇನ್ನಷ್ಟು ಹೆಚ್ಚಾಯಿತು. ಆದರೆ ಇಂದಿರಾ ಗಾಂಧಿ ಅರಸು ಪರವಿದ್ದ ಕಾರಣ ಬಹಿರಂಗವಾಗಿ ಸ್ಫೋಟಗೊಳ್ಳಲಿಲ್ಲ.

ಜನಾನುರಾಗಿ ಅರಸು
ಅರಸು ಪಕ್ಷದ ಅಧ್ಯಕ್ಷರು, ಅವರೇ ಮುಂದೆ ನಿಂತು ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿದ್ದರು. ಇನ್ನು ಚುನಾವಣಾ ಪ್ರಚಾರ ಭಾಷಣಕ್ಕೆ ಹೋಗದಿದ್ದರೆ ಹೇಗೆ? ನೀರು, ನಿದ್ದೆಯಿಲ್ಲದೆ ಕರ್ನಾಟಕವನ್ನೆಲ್ಲ ಸುತ್ತಾಡಿದರು. ಅವರ ಹಿಂದೆ ನಾನು. ಆಗಿನ ಕೆಲ ಘಟನೆಗಳು ಇಂದಿನ ರಾಜಕಾರಣಿಗಳ ಗಮನಕ್ಕೆ ತರುವುದು ತೀರಾ ಅಗತ್ಯ ಎಂಬ ಕಾರಣಕ್ಕೆ ಇಲ್ಲಿ ಹೇಳುತ್ತಿದ್ದೇನೆ.
  
ಅರಸರ ಪ್ರತೀ ಭಾಷಣದಲ್ಲಿ ಇಂದಿರಾ ಗಾಂಧಿಯವರ ಬಡವರ ಬಗೆಗಿನ 20 ಅಂಶದ ಕಾರ್ಯಕ್ರಮಗಳು ಇದ್ದೇ ಇರುತ್ತಿದ್ದವು. ನಾವು ಅಧಿಕಾರಕ್ಕೆ ಬಂದರೆ, ಬಡವರ ಸಾಲ ಮನ್ನಾ, ಭೂ ಸುಧಾರಣೆ ಕಾಯ್ದೆ, ಭಾಗ್ಯಜ್ಯೋತಿ ಯೋಜನೆಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದರು. ಹಾಗೆಯೇ ಮಹಾಭಾರತ ಮತ್ತು ರಾಮಾಯಣದ ಪ್ರಸಂಗಗಳನ್ನು ಮಾತಿನ ಮಧ್ಯೆ ಕೋಟ್ ಮಾಡುತ್ತಿದ್ದರು. ನಾನು ಅವರ ಮುಖ ನೋಡಿದರೆ, ರಾಮಾಯಣ-ಮಹಾಭಾರತ ನಮ್ಮ ಜನಗಳ ಮನಸ್ಸಿನೊಳಗಿರುವ ಜನಕಾವ್ಯಗಳು, ಅದನ್ನೇ ಉದಾಹರಿಸಿದರೆ ತಕ್ಷಣ ತಟ್ಟುತ್ತದೆ ಎನ್ನುತ್ತಿದ್ದರು. ಬಿಜಾಪುರದಲ್ಲಿ, ಕೃಷ್ಣಾ ಎಡದಂಡೆ ನಾಲೆ ಮೇಲೆ ಮಹಿಳೆಯರ ಗುಂಪೊಂದು ಬರ್ತಿತ್ತು. ಕಾರು ನಿಲ್ಲಿಸಿದ ಅರಸು, ಆ ಮಹಿಳೆಯರ ತಲೆ ಮೇಲಿದ್ದ ಮಡಕೆಯನ್ನು ಕೆಳಗಿಳಿಸಿ, ಅದರೊಳಕ್ಕೆ ಕೃಷ್ಣನಂತೆ ಕೈಹಾಕಿ ಬೆಣ್ಣೆ ತೆಗೆದುಕೊಂಡು ತಿಂದರು. ಅಷ್ಟೂ ಮಹಿಳೆಯರ ಬೆಣ್ಣೆ-ಹಾಲನ್ನು ಜೇಬಿನಲ್ಲಿದ್ದ ಹಣವನ್ನೆಲ್ಲ ಕೊಟ್ಟು ಖರೀದಿಸಿ, ನಮಗೆಲ್ಲ ಕೊಟ್ಟು ಖುಷಿಪಡಿಸಿದರು. ಆ ಮಹಿಳೆಯರು ಸಂತೋಷದಿಂದ ಹರಸಿ ಹೋದರು. ಮುಂದೆ ಕಲಬುರಗಿ ಜಿಲ್ಲೆಯ ಯಾವುದೋ ರಿಮೋಟ್ ಏರಿಯಾದಲ್ಲಿ ಕಾಲು ದಾರಿಯಲ್ಲಿ ನಡೆದುಹೋಗುತ್ತಿದ್ದ ಬಂಜಾರ ಹೆಂಗಸರು ಮಕ್ಕಳನ್ನು ತೋರಿಸಿ, ‘ಈ ಸಮುದಾಯ ವನ್ನು ನಾಗರಿಕ ಸಮಾಜದೊಂದಿಗೆ ಬೆಸೆಯುವುದು ಹೇಗೆ, ಅವರ ಬದುಕನ್ನು ಹಸನುಗೊಳಿಸಲು ಏನು ಮಾಡಬೇಕು’ ಎಂದರು. ನನಗೇನು ಗೊತ್ತು, ಮುಖ ನೋಡಿದೆ. ‘ಅದಕ್ಕೇ ಕೆ.ಟಿ.ರಾಥೋಡ್‌ಗೆ ಟಿಕೆಟ್ ಕೊಟ್ಟಿದ್ದೇನೆ, ಆತ ಗೆದ್ದು ಶಾಸಕನಾಗಿ ಮಂತ್ರಿಯಾಗಿ ಆ ಸಮುದಾಯವನ್ನು ಉದ್ಧಾರ ಮಾಡುತ್ತಾನೆ’ ಎಂದರು. ಅವತ್ತು ಅರಸು ಹೇಳಿದಂತೆಯೇ ಅದೆಲ್ಲೋ ಇದ್ದ ರಾಥೋಡ್ ಅಭ್ಯರ್ಥಿಯಾದರು, ಗೆದ್ದು ಶಾಸಕರಾದರು, ಮಂತ್ರಿಯಾದರು. ಅದೇ ಅರಸು ಅವರ ಸಿದ್ಧತೆ ಮತ್ತು ಬದ್ಧತೆ.

ಮತ್ತೆ ಸಾಮಾಜಿಕ ನ್ಯಾಯ ಚಾಲ್ತಿಗೆ

ಅರಸು ಹೇಳಿದಂತೆಯೇ 1972ರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಮತ್ತೆ ವಿರೋಧಿಗಳು ಅರಸು ವಿರುದ್ಧ ಒಂದಾದರು.ಆದರೆ ಅರಸು ಅವರನ್ನು ತೆಗೆದು ಪಕ್ಕಕ್ಕಿಟ್ಟು ಮತ್ತೆ ಸಾಮಾಜಿಕ ನ್ಯಾಯವನ್ನು ಚಾಲ್ತಿಗೆ ತರುವಲ್ಲಿ ನಿರತರಾದರು. ಆ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿ ಬೆಂಗಳೂರಿನ 9 ಕ್ಷೇತ್ರಗಳಲ್ಲಿ 6ಕ್ಕೆ ಹೊಸಮುಖಗಳ ಪರಿಚಯ ಮಾಡಿಸಿದರು. ಮಲ್ಲೇಶ್ವರಂನಿಂದ ನನಗೆ ಟಿಕೆಟ್ ಎಂದು ನಿರ್ಧಾರವಾಗಿತ್ತು. ಆದರೆ ಕೇಂದ್ರದ ಹೊಂದಾಣಿಕೆಯ ಮೇಲೆ ಕಮ್ಯೂನಿಸ್ಟ್ ಪಕ್ಷದ ಎಂ.ಎಸ್.ಕೃಷ್ಣನ್‌ರಿಗೆ ಬಿಟ್ಟುಕೊಡಲಾಯಿತು. ಇನ್ನು ಶಿವಾಜಿನಗರದಿಂದ ಕೋಲ್ಸ್ ಪಾರ್ಕಿನ ಹಮೀದ್ ಷಾ, ಶಾಂತಿನಗರದಿಂದ ನಾಯ್ಡು ಜನಾಂಗಕ್ಕೆ ಸೇರಿದ ಕೆಎಸ್‌ಆರ್ ನಾಯ್ಡು, ಬಸವನಗುಡಿಯಿಂದ ಅಮಿರ್ ರಹ್ಮತ್ತುಲ್ಲಾ ಖಾನ್(ಇದು ಯಾರು ಗೊತ್ತಾ? 67ರಲ್ಲಿ ಹುಣಸೂರಿನಲ್ಲಿ ರೈಲ್ವೆ ಟಿಕೆಟ್ ಖರೀದಿಸಿ, ದಿಲ್ಲಿಗೆ ಕರೆದುಕೊಂಡು ಹೋಗಿದ್ದರಲ್ಲ ಅವರ ಮಗ, ಆ ಮೂಲಕ ಅರಸು ಅವರ ಋಣ ತೀರಿಸಿದ್ದರು), ಚಿಕ್ಕಪೇಟೆಯಿಂದ ಲೇಬರ್ ಲೀಡರ್ ತಮ್ಮಯ್ಯ, ಗಾಂಧಿನಗರದಿಂದ ರಾಜಾ ಮಿಲ್ ಕಾರ್ಮಿಕರ ಅಧ್ಯಕ್ಷ ರಾಮುಲು... ಎಲ್ಲರೂ ಬಡವರು ಬಲಹೀನರು.

ಕರಾವಳಿ ಭಾಗದಿಂದ ಎಲ್‌ಐಸಿ ಏಜೆಂಟ್ ಆಗಿದ್ದ ದೇವಾಡಿಗರ ವೀರಪ್ಪ ಮೊಯ್ಲಿ, ಮುಸ್ಲಿಂ ಸಮುದಾಯದ ಯು.ಟಿ. ಫರೀದ್, ಬಿಲ್ಲವರ ದಾಮೋದರ್ ಮುಲ್ಕಿ, ಮೀನುಗಾರರ ಪೈಕಿಯ ಮಹಿಳೆ ಮನೋರಮಾ ಮಧ್ವರಾಜ್, ಧನಾಢ್ಯ ಒಕ್ಕಲಿಗರ ಚಿಕ್ಕಮಗಳೂರಿನಿಂದ ಇ.ಇ. ವಾಜ್ ಎಂಬ ಕ್ರಿಶ್ಚಿಯನ್ ಮಹಿಳೆ, ಬ್ರಾಹ್ಮಣರ ಗುಂಡೂರಾವ್ ಕುಶಾಲನಗರದಿಂದ, ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕ್ಷೇತ್ರ ಚಿಂಚೋಳಿಯಿಂದ ಮೀನುಗಾರರ ದೇವೇಂದ್ರಪ್ಪ ಘಾಳಪ್ಪ, ಕೊಪ್ಪಳದಿಂದ ಸಿಎಂ ಪಾಟೀಲ್, ರಾಯಚೂರಿನಿಂದ ದೇಸಾಯಿ, ಹರಪನಹಳ್ಳಿಯಿಂದ ನಾಯಕ್, ಚಿತ್ರದುರ್ಗದಿಂದ ಅಶ್ವಥ್‌ರೆಡ್ಡಿ, ಚಿತ್ತಾಪುರ್‌ದಿಂದ ಗಾಣಿಗ ಜಾತಿಯ ಪಿ.ಆರ್.ತೇಳ್ಕರ್, ಯಲಹಂಕದಿಂದ ನಾರಾಯಣಗೌಡ ಎಂಬ ಬಡ ಒಕ್ಕಲಿಗ, ದೇವನಹಳ್ಳಿಯಿಂದ ಎಂ.ವಿ. ಜಯರಾಂ (ಎಂ.ಎಸ್.ರಾಮಯ್ಯನವರ ಮಗ, ಆಗ ಸ್ಥಿತಿವಂತರಲ್ಲ), ಕೆಜಿಎಫ್‌ನಿಂದ ಅಮುನ್‌ಗಂ, ಮುಳಬಾಗಿಲಿನಿಂದ ಮುನಿಯಪ್ಪ, ಬಾಗೇಪಲ್ಲಿಯಿಂದ ರೇಣುಕಾ ರಾಜೇಂದ್ರನ್ (ಮೂವರು ದಲಿತರು) ಬಿಜಾಪುರದಿಂದ ಅಕ್ಕಸಾಲಿಗರ ಪತ್ಥರ್, ಚಿಕ್ಕೋಡಿಯಿಂದ ಮಾದಿಗರ ಪೈಕಿಯ ಆರ್.ಡಿ. ಕಿತ್ತೂರು, ಹುಬ್ಬಳ್ಳಿಯಿಂದ ಕುರುಬರ ಡಿ.ಕೆ.ನಾಯ್ಕರ್, ಜೇವರ್ಗಿಯಿಂದ ಜನಗಳೇ ಇಲ್ಲದ ಜಾತಿಯ ಧರಂಸಿಂಗ್, ಗುರುಮಿಟಕಲ್‌ನಿಂದ ಮಿಲ್ ಕಾರ್ಮಿಕ, ದಲಿತ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿಯಿಂದ ಭಾಸ್ಕರ್ ನಾಯ್ಡು... ಹೀಗೆ ಸುಮಾರು 60ರಿಂದ 70 ಜನ ಹೊಸ ಮುಖಗಳು. ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲದವರು. ಸಾಮಾಜಿಕ ಶೋಷಣೆಗೊಳಪಟ್ಟ ಸಣ್ಣಪುಟ್ಟ ಜಾತಿಗಳಿಂದ ಬಂದವರು. ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲು ಹತ್ತಿದ್ದರು. ಗೆದ್ದರೂ ಗದ್ದುಗೆಗೆ ಗಂಡಾಂತರ

ಆ ವಿಧಾನಸಭಾ ಚುನಾವಣೆಯಲ್ಲಿ 165 ಸ್ಥಾನಗಳನ್ನು ಗೆಲ್ಲುವ ಮೂಲಕ ಅರಸು ಅಭೂತಪೂರ್ವ ಯಶಸ್ಸನ್ನೇನೋ ಕಂಡರು. ಆದರೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಕಾರಣ ಪಕ್ಷದೊಳಗಿನ ವಿರೋಧಿಗಳ ಷಡ್ಯಂತ್ರ. ಪಕ್ಷದ ಅಧ್ಯಕ್ಷರಾದವರು ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಬೇಕು, ಅಭ್ಯರ್ಥಿಯಾಗುವಂತಿಲ್ಲ ಎಂದು ಮೇಲ್ಜಾತಿ ಜನ ಇಂದಿರಾರ ಮೇಲೆ ಒತ್ತಡ ತಂದು ಒಪ್ಪಿಸಿದ್ದರು. ಅರಸು ಅವರನ್ನು ಡೆಲ್ಲಿಗೆ ಕರೆಸಿಕೊಂಡ ಮೇಡಂ, ‘ಏನು ಮಾಡ್ತೀರಿ’ ಎಂದರು. ಅರಸು, ‘ನನಗೆ ಪಕ್ಷದ ಗೆಲುವು ಮುಖ್ಯ, ನನ್ನ ಗೆಲುವಲ್ಲ, ಹುಣಸೂರಿನಿಂದ ಕರಿಯಪ್ಪಗೌಡರನ್ನು ನಿಲ್ಲಿಸುತ್ತೇನೆ’ ಎಂದು ಹೇಳಿ ಬಂದಿದ್ದರು. ಕೊಟ್ಟ ಮಾತಿನಂತೆಯೇ ನಡೆದುಕೊಂಡರು. ಅರಸು ಅವರ ನಾಯಕತ್ವದಲ್ಲಿ ಅದು ಸತತ ನಾಲ್ಕನೆ ಗೆಲುವು. ರಾಜ್ಯದ ಜನರ ಆಯ್ಕೆ, ಆಶಯ, ಆಶೀರ್ವಾದ ಅರಸು ಮೇಲಿದೆ. ಆದರೆ ಪಕ್ಷದೊಳಗಿನ ವಿರೋಧಿ ಬಣ- ಕೆ.ಎಚ್.ಪಾಟೀಲ್, ಚೆನ್ನಬಸಪ್ಪ, ಸಿದ್ದವೀರಪ್ಪ, ತುಳಸಿದಾಸಪ್ಪ, ನಾಗರತ್ನಮ್ಮ, ಕೆ.ಎಚ್.ರಂಗನಾಥ್‌ರನ್ನೂ ಒಳಗೊಂಡ ಗುಂಪು ಗದ್ದುಗೆ ಏರಲು ಅಡಿಗಡಿಗೂ ಗಂಡಾಂತರ ತಂದೊಡ್ಡುತ್ತಿದೆ.

ಏತನ್ಮಧ್ಯೆ ಅರಸು ಹಿರಿಯರಾದ ಚೆನ್ನಬಸಪ್ಪ ಮತ್ತು ತುಳಸಿದಾಸಪ್ಪನವರ ಮನೆಗೆ ಖುದ್ದಾಗಿ ಭೇಟಿ ಕೊಟ್ಟು ಮುಖ್ಯಮಂತ್ರಿ ವಿಷಯ ಚರ್ಚಿಸಿದರು. ಇಬ್ಬರೂ ಅವಕಾಶ ಸಿಕ್ಕರೆ ಸಿದ್ಧ ಎಂದರು. ಅಲ್ಲಿಗೆ ಒಳಗಿನಿಂದಲೂ, ಹೊರಗಿನಿಂದಲೂ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಡುವ ವ್ಯವಸ್ಥಿತ ಪಿತೂರಿ ನಿಚ್ಚಳವಾಗುತ್ತದೆ. ಬಹುಮತ ಬಂದಾಗ ಬರುವಂತೆ ಯಥಾಪ್ರಕಾರ ದಿಲ್ಲಿಯಿಂದ ಉಮಾಶಂಕರ್ ದೀಕ್ಷಿತ್, ಸ್ವರಣ್‌ಸಿಂಗ್, ಸಿದ್ಧಾರ್ಥ ಶಂಕರ್ ರಾಯ್ ಅಬ್ಸರ್ವರ್ಸ್‌ ಆಗಿ ಬಂದರು. ಹೊಸದಾಗಿ ಆಯ್ಕೆಯಾದ ಶಾಸಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದರು. ಇಲ್ಲೂ ಕೂಡ ಶಾಸಕರ ಮೀಟಿಂಗ್‌ನಿಂದ ಅರಸು ಅವರನ್ನು ದೂರವಿಡಲು, ಮೀಟಿಂಗ್‌ಗೇ ಬರದಂತೆ ತಡೆಯಲು ಶಕ್ತಿಮೀರಿ ಶ್ರಮಿಸಿದರು. ಕೊನೆಗೆ ಶಾಸಕಾಂಗ ಸಭೆ ಕರೆದಾಗ, ಗೆದ್ದ 165 ಶಾಸಕರ ಪೈಕಿ 145 ಶಾಸಕರು ಅರಸು ಪರ ನಿಂತು, ಅರಸು ಮುಖ್ಯಮಂತ್ರಿಯಾಗಲಿ ಎಂದು ಮತ ಚಲಾಯಿಸಿದರು. ಕೊನೆಗೆ ವಿಧಿ ಇಲ್ಲದೆ ಅರಸು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.

ಅಂದರೆ, ಸಣ್ಣ ಸಮುದಾಯದಿಂದ ಬಂದವನಿಗೆ ರಾಜ್ಯದ ಅತ್ಯುನ್ನತ ಹುದ್ದೆ ನೀಡುವುದು ಬಹುಸಂಖ್ಯಾತ ಮೇಲ್ಜಾತಿಯ ಮನಸ್ಸುಗಳಿಗೆ ಸಹಿಸಲಾರದ ಸಂಕಟವಾಗಿತ್ತು. ಕರ್ನಾಟಕದ ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲಿಯ ವರೆಗೆ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಆಳಿದ ಎಂಟೂ ಮಂದಿ ಫ್ಯೂಡಲ್ ಒಕ್ಕಲಿಗರು ಮತ್ತು ಲಿಂಗಾಯತರೇ ಆಗಿದ್ದರು. ಅವರದೇ ದರ್ಬಾರು. ಅವರ ಹಿಡಿತದಲ್ಲಿಯೇ ರಾಜ್ಯ ರಾಜಕಾರಣ. ಅಲ್ಲಿ ಯವರೆಗೆ ದುರ್ಬಲರಿಗೆ, ಶೋಷಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದು ಳಿದವರಿಗೆ ಉನ್ನತ ಹುದ್ದೆಯನ್ನು ನೀಡಿದ ಉದಾಹರಣೆಯೇ ಇರಲಿಲ್ಲ. ಕರ್ನಾಟಕದ ರಾಜಕಾರಣದ ಚರಿತ್ರೆ ಹೀಗಿರುವಾಗ ಹುಣಸೂರಿನ ಕಲ್ಲಳ್ಳಿಯಿಂದ ಬಂದ, ಸಣ್ಣ ಜಾತಿಗೆ ಸೇರಿದ ದೇವರಾಜ ಅರಸು ಮುಖ್ಯಮಂತ್ರಿಯಾಗುವುದು ಸಾಧ್ಯವೇ? ಸಾಧ್ಯವಾಗಿಸಿದ್ದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಅದನ್ನು ಮೊತ್ತ ಮೊದಲ ಬಾರಿಗೆ ಜಾರಿಗೆ ಬರುವಂತೆ ನೋಡಿಕೊಂಡವರು ದೇವರಾಜ ಅರಸು. (ಮುಂದುವರಿಯುವುದು)

 

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News