ಐಪಿಎಲ್ ಪಂದ್ಯಗಳು: ಪ್ರೇಕ್ಷಕರಿಗೂ ಬರ

Update: 2016-04-25 18:47 GMT

ಒಂಬತ್ತನೆ ಅವೃತ್ತಿ ಐಪಿಎಲ್ ಪಂದ್ಯಗಳು ಪ್ರೇಕ್ಷಕರ ಮತ್ತು ವೀಕ್ಷಕರ ಬರದಿಂದ ಬಳಲುತ್ತಿದೆ ಎಂದು ಮಾಧ್ಯಮ ಗಳಲ್ಲಿ ವರದಿಯಾಗಿವೆ. ಇದು ವಾಸ್ತವಕ್ಕೆ ಸಮೀಪವೂ ಕೂಡಾ. ಪ್ರೇಕ್ಷಕರ ಸಂಖ್ಯೆಯಲ್ಲಿ ಸುಮಾರು ಶೇ.40 ಕಡಿಮೆಯಾಗಿದ್ದರೆ, ಟಿವಿ ಚಾನೆಲ್‌ಗಳ ಟಿಆರ್‌ಪಿಯಲ್ಲಿಯೂ ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಿಂದಿನ ದಿನದ ಆಟದ ಬಗೆ ಮಾರನೆ ದಿನ ಎಲ್ಲಿಯೂ ಚರ್ಚೆ ಕೂಡಾ ಕೇಳುತ್ತಿಲ್ಲ. ಕ್ರಿಕೆಟ್ ಭಾರತೀಯರ ಅಚ್ಚುಮೆಚ್ಚಿನ ಆಟ ಮತ್ತು ದೌರ್ಬಲ್ಯ ಕೂಡಾ.ಆದರೂ, ಈ ರೀತಿ ಸ್ಟೇಡಿಯಂಗಳು ಖಾಲಿಖಾಲಿ ಕಾಣುತ್ತಿರು ವುದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮೊದಲನೆಯ ಉದಾ ಹರಣೆ ಇರಬಹುದು. ಕ್ರಿಕೆಟ್ ಆಟ ನೋಡಲು ಒಂದು ದಿನದ ಊಟ, ಉದ್ಯೋಗ, ಸಂಬಳ ಮತ್ತು ನೋವನ್ನೂ ಮರೆಯುವ ಭಾರತದಲ್ಲಿ ಈ ತಿರುವು, ಹಠಾತ್ ಬದಲಾವಣೆ ಕ್ರಿಕೆಟ್ ಆಡಳಿತವ್ಯವಸ್ಥೆ ಕುಳಿತು ಚಿಂತಿಸುವಂತೆ ಮಾಡಿದೆ. ಮನರಂಜನೆ ಮತ್ತು ಕ್ರೀಡೆಯ ಹೆಸರಿನಲ್ಲಿ ಹಣ ಮಾಡುವ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಗೋಚರ ಉದ್ದೇಶಕ್ಕೆ ಸ್ವಲ್ಪ ಪೆಟ್ಟು ಬಿದ್ದಂತೆ ಕಾಣು ತ್ತಿದೆ. ಅದು ತನ್ನ ಕಾರ್ಯಸೂಚಿಯನ್ನು ಮತ್ತು ಕಾರ್ಯಕ್ರಮ ವನ್ನು ಬದಲಿಸುವಂತೆ ಮಾಡಬಹುದು ಎಂದು ಕಾಣುತ್ತಿದೆ. ಮೇಲುನೋಟಕ್ಕೆ ಈ ರೀತಿಯ ಕ್ರಿಕೆಟ್ ಬಗೆಗಿನ ನಿರುತ್ಸಾಹಕ್ಕೆ ಬರ ಮತ್ತು ಬಿಸಿಲು ಎಂದು ಹೇಳಲಾಗುತ್ತಿದೆ. ಇದರಲ್ಲಿ ಸತ್ಯ ವಿಲ್ಲದಿಲ್ಲ. ಅದರೆ, ಇವುಗಳನ್ನೇ ಮುಖ್ಯ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಇದಕ್ಕೂ ಕೆಟ್ಟದಾದ ಹವಾಮಾನದಲ್ಲಿ ಪ್ರೇಕ್ಷಕರು ಕ್ರಿಕೆಟನ್ನು ಅನಂದಿಸಿದ ಉದಾಹರಣೆಗಳಿವೆ. ಕ್ರಿಕೆಟ್ ಪ್ರಿಯರು, ಅನುಭವಿಗಳು ಮತ್ತು ವಿಶ್ಲೇಷಕರು ಹೇಳುವಂತೆ, ಐಪಿಎಲ್ ಮ್ಯಾನೇಜ್‌ಮೆಂಟ್‌ನ ಅತಿಯಾದ ಮತ್ತು ತೀರದ ಹಣದಾಹಕ್ಕೆ ಐಪಿಎಲ್ ಬಲಿಯಾಗಿದೆ. ಒಂದು ಐಪಿಎಲ್ ಪಂದ್ಯದ ಟಿಕೆಟ್‌ನ ಕನಿಷ್ಠ ದರ ಸುಮಾರು 800 ರೂಪಾಯಿಗಳು. ಅದರ ಮೇಲೆ ಶೇ.14.5 ಸೇವಾ ತೆರಿಗೆ ಬೇರೆ. ಅದೆಷ್ಟು ಭಾರತೀಯರಲ್ಲಿ ಈ ಮೊತ್ತ ತೆತ್ತು ಟಿಕೆಟ್ ಖರೀದಿಸುವ ಆರ್ಥಿಕ ಚೈತನ್ಯವಿದೆ? ಈ ಹಣದಲ್ಲಿ ಅದೆಷ್ಟೋ ಭಾರತೀಯರಿಗೆ ಒಂದು ವಾರದ ಊಟದ ವ್ಯವಸ್ಥೆ ಆಗುತ್ತದೆ. ಕ್ರಿಕೆಟ್ ಬಗೆಗಿನ ಭಾರತೀಯರ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಳ್ಳುವ ಐಪಿಎಲ್ ನ ಆಸೆೆ ಬುಡುಕತನ ಅದಕ್ಕೆ ಮುಳುವಾಗಿದೆ. ಐದು-ಆರಂಕೆ ಆದಾ ಯದವರು ಮಾತ್ರ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬಹುದಾಗಿದ್ದು, ಆರ್ಥಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಅಲಿಖಿತ ನಿರ್ಬಂಧವಾಗಿದೆ.

ಅತಿಯಾದರೆ ಅಮೃತವೂ ವಿಷ. ಇದು ಕನ್ನಡದ ಹಳೆಯ ಮತ್ತು ಅರ್ಥ ಪೂರ್ಣ ಗಾದೆ. ಐಪಿಎಲ್ ಪಂದ್ಯಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ, ಈ ಗಾದೆ ಮಾತು ನೆನಪಿಗೆ ಬರುತ್ತದೆ. ಒಂದು ಕಾಲದಲ್ಲಿ ಕ್ರಿಕೆಟ್ ಪಂದ್ಯಗಳು ವರ್ಷದ ಒಂದು ನಿರ್ದಿಷ್ಟ ಅವಧಿಯಲ್ಲಿ ನಡೆಯುತ್ತಿ ದ್ದವು. ವರ್ಷದ ಕೆಲವು ತಿಂಗಳುಗಳಾದರೂ ಕ್ರಿಕೆಟಿಗೆ ವಿರಾಮಇರುತ್ತಿತ್ತು. ಈಗ ಕ್ರಿಕೆಟ್ ಪಂದ್ಯಗಳು ಅಪರೂಪದ ಅತಿಥಿಗಳಾ ಗದೇ ನಿತ್ಯ ದರ್ಶನವಾಗಿದ್ದು, ಕ್ರಿಕೆಟ್ ಪ್ರೇಮಿಗಳು ಒಂದು ರೀತಿಯಆಯಾಸ ಅನಭವಿಸುತ್ತಿದ್ದಾರೆ. ಮೂರು ದಶಕಗಳ ಹಿಂದೆ ಆಸ್ಟ್ರೇಲಿಯಾದ ಕೆರಿ ಪ್ಯಾಕರ್, ಪಾರಂಪರಿಕ ಐದು ದಿನದ ಮ್ಯಾರಥಾನ್ ಟೆಸ್ಟ್ ಪಂದ್ಯಗಳಿಗೆ ಸೆಡ್ಡು ಹೊಡೆದು ನಿಯಮಿತ ಒವರ್ ಮತ್ತು ದಿನದ ಕೊನೆಗೆ ಪರಿಣಾಮ ನೀಡುವ ಒಂದು ದಿನದ ಪಂದ್ಯವನ್ನು ಪರಿಚಯಿಸಿದ ಮೇಲೆ ಕ್ರಿಕೆಟ್ ಆಟದ ಗತಿಯೇ ಬದಲಾಯಿತು. ಭಾರತದ ಲಲಿತ್ ಮೋದಿ ಒಂದುದಿನದ ಪಂದ್ಯಗಳಿಗೆ ವಿರುದ್ಧವಾಗಿ ವರ್ಷಗಳ ಹಿಂದೆೆ ಟಿ-20 ಪಂದ್ಯಾವಳಿಗಳನ್ನು ತಂದ ಮೇಲೆ ಕ್ರಿಕೆಟ್ ತನ್ನ ಚಾರಿತ್ರಿಕ ಹಿಂದಿನ ಕ್ರೀಡೆಯ ಮಜಲನ್ನು ಸಂಪೂರ್ಣವಾಗಿ ಕಳೆದುಕೊಂಡು ಹಣ ಹೂಡಿ ಹಣ ತೆಗೆಯುವ ಬೃಹತ್ ವ್ಯವಹಾರವಾಗಿ ಪರಿವರ್ತಿತ ವಾಯಿತು. ಪ್ರಭಾವಶಾಲಿಗಳು, ಬೃಹತ್ ಉದ್ಯಮಿಗಳು, ರಾಜಕಾ ರಣಿಗಳು, ಕಾರ್ಪೊರೇಟ್ ಹೌಸ್ ಗಳು ಮತ್ತು ಸೆಲೆಬ್ರಿಟಿಗಳ, ಜಾಹೀರಾತುದಾರರ, ಮೀಡಿಯಾ ಹೌಸ್ ಗಳ ಪ್ರವೇಶ ಆದ ಮೇಲೆ, ಕ್ರಿಕೆಟ್ ಚೆಂಡಿನ ಬಣ್ಣದ ಸಂಗಡ ಕ್ರಿಕೆಟಿನ ಸ್ವರೂಪವೂ ಬದಲಾಗಿದ್ದು, 24X

7 ಮತ್ತು 365 ದಿವಸಗಳವರೆಗೂ ಏರಿತು. ಇಂದು ಅತಿವೃಷ್ಟಿಯಾಗಿ ಕ್ರಿಕೆಟ್ ಪಿಚ್ ಈಜುಗೊಳ ಆದಾಗಲೇಕ್ರಿಕೆಟ್‌ಗೆ ವಿರಾಮ. ಇಲ್ಲದಿದ್ದರೆ ಇದು ನಿರಂತರ ಪ್ರಕ್ರಿಯೆ. ಕ್ರಿಕೆಟ್ ಪ್ರೇಮಿಗಳೂ ನಿರಂತರ ಕ್ರಿಕೆಟ್‌ನಿಂದ ಬೇಸತ್ತಿದ್ದಾರೆ. ಅದಕ್ಕೂ ಮಿಗಿಲಾಗಿ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದಿಂದಾಗಿ ಕ್ರಿಕೆಟ್ ಪ್ರೇಮಿಗಳು ಆಟದ ಕೊನೆಯ ಪರಿಣಾಮವನ್ನು ಸಂಶಯದಿಂದ ನೋಡುವಂತಾಗಿದೆ. ಈ ಭಾಗ್ಯಕ್ಕೆ ಕ್ರಿಕೆಟ್ ಪಂದ್ಯ ನೋಡಬೇಕೇ ಎನ್ನುವ ನಿರುತ್ಸಾಹವೂ ಕಾಣುತ್ತಿದೆ. ಪ್ರಾಮಾಣಿಕ ಆಟವಾದರೂ ಮೊಸರಿನಲ್ಲಿ ಕಲ್ಲು ಹುಡುಕಿದಂತೆ, ಪ್ರೇಕ್ಷಕರು ಮತ್ತು ಕ್ರೀಡಾ ಪ್ರೇಮಿಗಳು ಸಂದೇಹ ವ್ಯಕ್ತಮಾಡುತ್ತಾರೆ. ಇತ್ತೀಚೆಗೆ ನಡೆದ ವಿಶ್ವ ಟಿ-20 ಪಂದ್ಯ ಯಶಸ್ವಿಯಾಗಿದ್ದು, ನಂತರ ನಡೆಯುತ್ತಿರುವ ಪಂದ್ಯಗಳು ಜನಾಕರ್ಷಣೆ ಕಳೆದು ಕೊಳ್ಳುತ್ತಿರುವುದು ಏಕೆ ಎನ್ನುವುದು ತುಂಬಾ ಚರ್ಚಾಸ್ಪದ. ಒಂದು ಕ್ರೀಡೆ ಯಶಸ್ವಿ ಯಾಗಬೇಕಿದ್ದರೆ ಅಥವಾ ಹೆಚ್ಚು ಜನರನ್ನು ಆಕರ್ಷಿಸಬೇಕಿದ್ದರೆ, ಅದು ಹೆಚ್ಚು ತುರುಸಿನದ್ದಿರಬೇಕಿದ್ದರೆ, ಎರಡು ದೇಶಗಳ ಮಧ್ಯೆ ಅಥವಾ ಎರಡು ರಾಜ್ಯಗಳ ಮಧ್ಯೆ ನಡೆಯ ಬೇಕು. ಆದರೆ, ಐಪಿಎಲ್‌ನಲ್ಲಿ ಪಂಗಡಗಳು ಕಲಸುಮೇಲೋ ಗರವಾಗಿದ್ದು, ಈ ರೀತಿಯ ಚೈತನ್ಯ ಕಾಣುವುದಿಲ್ಲ. ಈವರೆಗಿನ ಪಂದ್ಯಗಳನ್ನು ನೋಡಿದಾಗ, ಹಿಂದಿನ ವರ್ಷಗಳಲ್ಲಿ ಕಂಡು ಬಂದ ಸೊಗಸು ಕೂಡಾ ಕಾಣುತ್ತಿಲ್ಲ ಮತ್ತು ಸ್ಕೋರ್ ಬೋರ್ಡ್ ಸಾಧಾರಣ ಮಟ್ಟದಲ್ಲಿದೆ. ಹಣ ತೆಗೆದುಕೊಂಡ ತಪ್ಪಿಗೆ ಒಂದು ರೀತಿಯ ಕಾಟಾಚಾರದ ಆಟ ಆಡಿದಂತೆ ಕಾಣುವುದೆನ್ನುವ ಹಲವರ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ.
ಕ್ರಿಕೆಟ್‌ನ ಇಂದಿನ ಈ ಸ್ಥಿತಿಗೆ ಕ್ರಿಕೆಟ್ ಆಡಳಿತ ವ್ಯವಸ್ಥೆಯೇ ಕಾರಣ. ಇಲ್ಲಿ ಅಟದ ಉನ್ನತಿಗಿಂತ ಒಂದು ರೀತಿಯ ‘ಪರಸ್ಪರ ಸಹಾಯ’ ಕಾರ್ಯ ಪದ್ಧ್ದತಿ ಮುಖ್ಯವಾಗಿದೆ ಎನ್ನುವ ನ್ಯಾಯಾಲ ಯದ ಅಭಿಪ್ರಾಯ ಅರ್ಥಪೂರ್ಣ. ಈ ಆಟದಲ್ಲಿ ಕ್ರೀಡಾ ಪ್ರೇಮಿ ಗಳು ಕ್ರಮೇಣ ಆಸಕ್ತಿಯನ್ನು ಕಳೆದುಕೊಳ್ಳಬಹುದು ಎನ್ನುವ ಭಯ ಇಂದು ನಿಜವಾಗುತ್ತಿದೆ. ಯಾವುದೇ ಸಂಸ್ಥೆಯಲ್ಲಿ ಹಣದ ಹೊಳೆ ಹರಿಯಲು ಆರಂಭಿಸಿದಾಗ, ಅದು ತನ್ನ ಧ್ಯೇಯ ಮತ್ತು ಉದ್ದೇಶಗಳನ್ನು ಮರೆಯತ್ತದೆ ಎನ್ನುವ ಮಾತಿಗೆ ಇದು ಜೀವಂತ ಉದಾಹರಣೆ. ಕ್ರಿಕೆಟ್ ಕ್ರೀಡೆಯಾಗಿ ಇರಲಿ. ಹಣ ಹೂಡಿ ಹಣ ತೆಗೆಯುವ ಸಾಧನವಾಗದಿರಲಿ.

Writer - ರಮಾನಂದ ಶರ್ಮಾ ಬೆಂಗಳೂರು

contributor

Editor - ರಮಾನಂದ ಶರ್ಮಾ ಬೆಂಗಳೂರು

contributor

Similar News