ಮ್ಯಾನ್‌ಹೋಲ್‌ಗಳ ವಿಷಗಾಳಿಯಲ್ಲಿ ಪೌರಕಾರ್ಮಿಕರು

Update: 2016-04-26 18:31 GMT

ದೊಡ್ಡಬಳ್ಳಾಪುರದ ಖಾಸ್‌ಬಾಗ್ ಪ್ರದೇಶದ ಬೆಂಗಳೂರು ಮುಖ್ಯರಸ್ತೆಯಲ್ಲಿ ಸುಮಾರು 15 ಅಡಿ ಆಳದ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಪೌರ ಕಾರ್ಮಿಕರು ಮತ್ತು ಅವರನ್ನು ರಕ್ಷಿಸಲು ಹೋದ ಮತ್ತಿಬ್ಬರು ಸ್ಥಳೀಯರು ವಿಷಗಾಳಿಯಿಂದಾಗಿ ದಿನಾಂಕ 3-4-2016ರಂದು ದಾರುಣವಾಗಿ ಪ್ರಾಣಕಳೆದುಕೊಂಡಿದ್ದು ಆಘಾತಕಾರಿ ವಿಚಾರವಾಗಿದೆ. ಈ ಅಸಹ್ಯ ಕೆಲಸಕ್ಕೆ ಬದುಕನ್ನು ಅರ್ಪಿಸಿಕೊಂಡು ದಲಿತ ಸಮುದಾಯ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರು ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಹುಳಗಳಂತೆ ಸಾಯುತ್ತಲೇ ಇದ್ದಾರೆ. ಕಾನೂನು ಕಟ್ಟಳೆಗಳನ್ನು ಜವಾಬ್ದಾರಿ ಸರಕಾರಗಳು ಕಟ್ಟುನಿಟ್ಟಾಗಿ ಪಾಲನೆ ಮಾಡದ ಹಿನ್ನೆಲೆಯಲ್ಲಿ ಇನ್ನೂ ಎಷ್ಟು ಮುಗ್ಧ್ದ ಜೀವಿಗಳು ಬಲಿಯಾಗಲಿವೆಯೋ ಎಂಬ ಆತಂಕ ಮತ್ತು ನಾಗರಿಕ ಸಮಾಜ ಎಂದು ಹೇಳಿಕೊಳ್ಳುವ ಈ ಸಮಾಜದ ಬಗ್ಗೆ ಅಸಹ್ಯ ಮೂಡುತ್ತಿದೆ.

ಪರಿಶಿಷ್ಟ ಜಾತಿಗೆ ಸೇರಿದ ಪೌರಕಾರ್ಮಿಕರಾದ ಜಗನ್ನಾಥ್ (25), ಮುನಿಸ್ವಾಮಿ (45) ಆಂಧ್ರಪ್ರದೇಶ ಮೂಲದ ರಾವುಸ್ ಕನ್‌ಸ್ಟ್ರಕ್ಷನ್ ಕಂಪೆನಿಗೆ ಸೇರಿದವರು. ಮಧು ಮತ್ತು ಮುನಿರಾಜು ಮಲದ ಗುಂಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದವರ ನೆರವಿಗೆ ಧಾವಿಸಿ ಪ್ರಾಣ ಬಿಟ್ಟವರು. ಸುಮಾರು 15 ಅಡಿ ಆಳದ ಕಿರಿದಾದ ಪ್ರವೇಶವಿರುವ ಚೇಂಬರ್‌ನಲ್ಲಿ ಇಳಿಯಲು ಯಾವುದೇ ಸುರಕ್ಷತಾ ಸಾಧನಗಳನ್ನು ಕಂಪೆನಿ ನೀಡಿರಲಿಲ್ಲ. ಆದರೂ ಇಂತಹ ಅಪಾಯಕಾರಿ ಕೆಲಸಕ್ಕೆ ನೇಮಿಸಿದ ಕಂಪೆನಿ, ಗುತ್ತಿಗೆದಾರ, ನಗರಸಭೆ ಅಧಿಕಾರಿಗಳ ಮೇಲೆ ಉಗ್ರಕಾನೂನು ಕ್ರಮ ಸರಕಾರ ತೆಗೆದುಕೊಳ್ಳಬೇಕಿದೆ. ದೊಡ್ಡಬಳ್ಳಾಪುರದಂಥ ನೇಯ್ಗೆ ಊರಿನಲ್ಲಿ ರೇಷ್ಮೆ ಬಣ್ಣಗಾರಿಕೆ ಘಟಕಗಳ ವಿವಿಧ ರಾಸಾಯನಿಕ ಕಂಪೆನಿಗಳ ವಿಷ ತ್ಯಾಜ್ಯಗಳು ವಿಪುಲವಾಗಿ ಸೇರುತ್ತವೆ. ಹರಿದು ಬರುವ ನೀರಿನಲ್ಲಿ ಕ್ಷಾರಯುಕ್ತ ಪದಾರ್ಥಗಳಿಂದ ಮಿಥೇನ್‌ನಂಥ ವಿಷಗಾಳಿ ವಿಪುಲವಾಗಿ ಉತ್ಪತ್ತಿಯಾಗುತ್ತದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ ಪೌರ ಕಾರ್ಮಿಕರಿಗೆ ಯಾವುದೇ ಸುರಕ್ಷಾ ಸಾಧನ ನೀಡಿರಲಿಲ್ಲ. ಅಂದು ರವಿವಾರ ಬೆಳಗ್ಗೆ ಮ್ಯಾನ್‌ಹೋಲ್‌ಗಳಲ್ಲಿ ಬಟ್ಟೆಗೆ ಬಣ್ಣ ಹಾಕುವ ರಾಸಾಯನಿಕಯುಕ್ತ ನೀರು ತುಂಬಿತ್ತು. ಈ ರಾಸಾಯನಿಕ ನೀರಿನ ತೀಕ್ಷ್ಣಘಾಟು ಮತ್ತು ವಿಷಗಾಳಿಯೇ ನಾಲ್ವರ ಸಾವಿಗೆ ಕಾರಣವಾಗಿದೆ.

ಸಮಾಜದ ಅತ್ಯಂತ ಅಮಾನವೀಯ ಪದ್ಧತಿ ಎಂಬ ಹಣೆಪಟ್ಟಿಗೆ ಒಳಗಾಗಿರುವ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಗಳನ್ನು ಮ್ಯಾನ್‌ಹೋಲ್‌ಗೆ ಇಳಿಸುವುದು ಶಿಕ್ಷಾರ್ಹವಾದರೂ ಕಾನೂನು, ಕಾಯ್ದೆಗಳನ್ನು ಗಾಳಿಗೆ ತೂರಲಾಗಿದೆ. 1974ರಲ್ಲೇ ಬಿ.ಬಸವಲಿಂಗಪ್ಪರವರು ಪೌರಾಡಳಿತ ಸಚಿವರಾಗಿದ್ದಾಗ ಮಲ ಹೊರುವ ಪದ್ಧತಿ ನಿಷೇಧ ಮಾಡಿದ್ದರು. ತದನಂತರ ಜಾರಿಯಾದ ವರದಿಗಳಲ್ಲಿ ಐ.ಪಿ.ಡಿ. ಸಾಲಪ್ಪ ಸಮಿತಿ ವರದಿ ಉಲ್ಲೇಖಾರ್ಹ. ಆ ಪ್ರಕಾರ ಈ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿ ಮತ್ತು ಕುಟುಂಬಗಳ ಪುನರ್ವಸತಿ ಕುರಿತು ಐ.ಪಿ.ಡಿ. ಸಾಲಪ್ಪರವರ ಸಮಿತಿ ವರದಿ ಇಂದಿಗೂ ಅನುಷ್ಠಾನ ಆಗಿಲ್ಲ. ಇದಾದ ನಂತರ 1993ರಲ್ಲಿ ಭಾರತ ಸರಕಾರ ಮಲಹೊರುವ ಪದ್ಧತಿಯನ್ನು ನಿಷೇಧಿಸಿ ಕಾಯ್ದೆ ಹೊರಡಿಸಿತ್ತಾದರೂ ಈ ಕಾಯ್ದೆ ಹಲವು ದೋಷದಿಂದ ಕೂಡಿದ್ದ ಕಾರಣ ಮಲ ಬಾಚುವ ಕಾರ್ಮಿಕರ ಹಿತಕಾಪಾಡುವಲ್ಲಿ ವಿಫಲವಾಯಿತು. 2003ರಲ್ಲಿ ಮಲಬಾಚುವ / ಸ್ವಚ್ಛತ ಕಾರ್ಮಿಕರ ಮತ್ತವರ ಕುಟುಂಬಗಳ ಪುನರ್ವಸತಿಗಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದ ಮೇಲೂ ಸಹ ಮ್ಯಾನ್ ಹೋಲ್‌ಗಳಲ್ಲಿ ಅಥವಾ ಮಲದ ಗುಂಡಿಗಳಲ್ಲಿ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಾಗಿಲ್ಲ. ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸುಮಾರು 40ಜನ ಪೌರಕಾರ್ಮಿಕರು ಮ್ಯಾನ್‌ಹೋಲ್ ವಿಷಗಾಳಿಯಿಂದ ಮರಣ ಹೊಂದಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 18 ಮಂದಿ ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಪೌರಕಾರ್ಮಿಕರಲ್ಲಿ ಶೇ.95 ರಷ್ಟು ಜನ ದಲಿತರು ಎಂಬುದು ಗಮನಾರ್ಹ ಸಂಗತಿ.

ಈ ಕೆಲಸವನ್ನು ಜಟ್ಟಿಂಗ್ ಯಂತ್ರಗಳನ್ನು ಬಳಸಿಮಾಡಬೇಕೆಂಬ ನಿಯಮವಿದೆ. ಅಲ್ಲದೆ ಯಾವೊಬ್ಬ ವ್ಯಕ್ತಿ, ಮುನ್ಸಿಪಾಲಿಟಿ ಅಥವಾ ಪ್ರಾಧಿಕಾರ ಇನ್ನಿತರ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ಮಲಹೊರುವ ಮತ್ತು ಸ್ವಚ್ಛಗೊಳಿಸಲು ಯಾರನ್ನಾದರೂ ಕೆಲಸಕ್ಕೆ ನಿಯೋಜಿಸಿದರೆ ಅವರ ಮೇಲೆ ಕಾನೂನು ರೀತಿಯ 1 ವರ್ಷ ಸಜೆ ಶಿಕ್ಷೆ ಇದೆ. ಇಷ್ಟಾದರೂ ಮಾನಗೇಡಿ ಲಾಭಕೋರರು ಪೌರಕಾರ್ಮಿಕರನ್ನು ಶೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಶೌಚಗುಂಡಿ ಸ್ವಚ್ಛತೆಗೆ ಪೌರಕಾರ್ಮಿಕರನ್ನೇ ಬಳಸುತ್ತಿರುವ ಗುತ್ತಿಗೆದಾರರು, ಕಂಪೆನಿ, ನಗರಸಭೆ ಆಡಳಿತ ಅಧಿಕಾರಿಗಳ ವಿರುದ್ಧ ಪೊಲೀಸರು ಮೊಕದ್ದಮೆಗಳನ್ನು ದಾಖಲಿಸುತ್ತಿಲ್ಲ. ಮಲಹೊರುವ ಪದ್ಧತಿ ನಿಷೇಧದ ಸೆಕ್ಷನ್ 6 ರಿಂದ 8ರವರೆಗಿನ ಅಂಶಗಳ ಅಡಿ ಕೇಸು ದಾಖಲಿಸುವುದು ಕಡ್ಡಾಯ. ಆದರೆ ಪೊಲೀಸರು ಈ ಕಾಯ್ದೆ ಬದಲು ಐ.ಪಿ.ಸಿ. ಸೆಕ್ಷನ್ 304 ಮತ್ತು 302ರ ನಿಯಮದಡಿ ಪ್ರಕರಣದಾಖಲಿಸಿ ಆರೋಪಿಗಳು ಶಿಕ್ಷೆಯಿಂದ ಪಾರಾಗುವಂತೆ ಮಾಡುತ್ತಿದ್ದಾರೆ. ಲಂಗು ಲಗಾಮಿಲ್ಲದೆ ಒಳಚರಂಡಿ ಕಾಮಗಾರಿ ನಡೆಯುತ್ತಲೇ ಇದೆೆ.

ಮಲಗುಂಡಿಯಲ್ಲಿ ಪ್ರಾಣಕಳೆದುಕೊಳ್ಳುತ್ತಿರುವ ದಲಿತನ ಜೀವಕ್ಕೆ ಬೆಲೆಯೇ ಇಲ್ಲದೆ ಹೋಗಿದೆ. ಇಂತಹ ಘಟನೆಗಳು ನಡೆದಾಗ ರಾಷ್ಟ್ರೀಯ / ರಾಜ್ಯ ಪರಿಶಿಷ್ಟ ಆಯೋಗಗಳು, ಮಾನವ ಹಕ್ಕು ಆಯೋಗಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಚಕಾರ ಎತ್ತಿದರೂ ಕೇವಲ ವರದಿ ಮಾಡಿ ಕೈ ತೊಳೆದುಕೊಳ್ಳುತ್ತಿವೆ. ಬಡಪಾಯಿ ದಲಿತ ಕಾರ್ಮಿಕರು ತಮ್ಮ ತುತ್ತು ಚೀಲ ತುಂಬಿಸಿಕೊಳ್ಳುವ ಸಲುವಾಗಿ ಇಂತಹ ಪಿಟ್‌ಗಳಿಗೆ ಇಳಿದು ಮಿಥೇನ್‌ನಂತಹ ವಿಷಗಾಳಿಗೆ ಬಲಿಯಾಗುತ್ತಲೇ ಇದ್ದಾರೆ. ಪ್ರತಿಬಾರಿ ಪೌರಕಾರ್ಮಿಕರು ಮೃತರಾದಾಗಲೆಲ್ಲ ಒಂದಿಷ್ಟು ಪರಿಹಾರ ನೀಡಿ ಮಹಾನಗರ ಪಾಲಿಕೆ ಕಮಿಷನರ್‌ಗಳು, ಅಧಿಕಾರಿಗಳು, ಗುತ್ತಿಗೆದಾರರು, ಪೊಲೀಸರು, ಆಯೋಗಗಳು ತಮ್ಮ ಜವಾಬ್ದಾರಿ ಕೈಚೆಲ್ಲಿ ತಮ್ಮ ಹೊಣೆಯನ್ನು ಇನ್ನೊಬ್ಬರ ಮೇಲೆ ಎತ್ತಿಹಾಕಿ ಕೈಕಟ್ಟಿ ನಿರ್ಲಿಪ್ತವಾಗಿರುವುದು ನಾಚಿಕೆಗೇಡು. ಕಾನೂನು ಕಟ್ಟಳೆಗಳ ನಿರ್ಲಕ್ಷ್ಯ, ಸುರಕ್ಷತಾ ಸಾಧನಗಳ ಕೊರತೆ, ತುರ್ತುಸೇವೆ ಒದಗಿಸದೆ ಅಪಾಯಕಾರಿ ಕೆಲಸಗಳಲ್ಲಿ ಮೇಲುಸ್ತುವಾರಿ ವಹಿಸದ ಕಂಪೆನಿ, ಗುತ್ತಿಗೆದಾರರ ಮೇಲೆ ಹಾಲಿ 2013ರ ಮಲಹೊರುವ ನಿಷೇಧಕಾಯ್ದೆ ಅನ್ವಯ ಆರೋಪಿಗಳಿಗೆ 6 ತಿಂಗಳ ಕಾಲ ಜಾಮೀನು ರಹಿತ ಜೈಲುಶಿಕ್ಷೆ ದಂಡ ವಿಧಿಸಿದ್ದರೆ ಮುಂದೆ ಇಂಥ ಪ್ರಕರಣಗಳು ಪುನರಾವರ್ತನೆಯಾಗುವುದು ತಪ್ಪುತ್ತದೆ.

Writer - ಮಾರುತಿ ಎಚ್. ಬೆಂಗಳೂರು

contributor

Editor - ಮಾರುತಿ ಎಚ್. ಬೆಂಗಳೂರು

contributor

Similar News