ಇಡೀ ದೇಶದಲ್ಲಿ ನೀರಿಗೆ ಬರ, ಆದರೆ ಥಾರ್ ಮರಭೂಮಿಯಲ್ಲಿ ನೀರಿನ ಸಮಸ್ಯೆಯೇ ಇಲ್ಲ

Update: 2016-04-27 07:39 GMT

ಏಳು ವರ್ಷದ ಹಿಂದೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ನಚಾನಾ ಪ್ರದೇಶದ ಚರಣವಾಲಾ ಗ್ರಾಮದ ರೈತ ಅರ್ಷದ್ ಅಲಿ ಕೊಳವೆಬಾವಿ ತೋಡಿಸಿದರು. ಪಾಕಿಸ್ತಾನ ಗಡಿಯಿಂದ ಸುಮಾರು 50 ಕಿಲೋಮೀಟರ್ ದೂರದ ಈ ಹಳ್ಳಿಯಲ್ಲಿ 560 ಅಡಿ ಆಳದಲ್ಲಿ ಕೊನೆಗೂ ನೀರು ಸಿಕ್ಕಿತು. ತೀರಾ ಶ್ರಮ ವಹಿಸಿ ಅದನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದ. ಆದರೆ ಇಂದು ಈ ಬತ್ತದ ಗಂಗೆಯನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲವಾಗಿದೆ. ರೈತನ ಹೊಲದಲ್ಲಿ ಹೇರಳವಾಗಿ ನೀರು ಹರಿಯುತ್ತದೆ ಮಾತ್ರವಲ್ಲದೇ ಅಕ್ಕಪಕ್ಕದ ಹೊಲಗಳಿಗೂ ನೀರು ಹರಿಸಲಾಗುತ್ತದೆ.

ಈ ಪ್ರಯತ್ನ ವಿಶೇಷವೇನೂ ಅಲ್ಲ ಎಂದು ಅಲಿ ಹೇಳುತ್ತಾರೆ. 60 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಲಸಂಪನ್ಮೂಲ ಹೇರಳವಾಗಿದೆ. ನೀರಿನ ಒತ್ತಡ ಎಷ್ಟು ಇರುತ್ತದೆ ಎಂದರೆ ಎಷ್ಟೋ ಬಾರಿ ಪೈಪ್‌ಗಳು ಒಡೆದುಹೋಗಿವೆ. ಅದೇ ಹಳ್ಳಿಯ ಇಸ್ಲಾಮಿಲ್ ಖಾನ್ ಅವರ ಬಾವಿಯಲ್ಲೂ ಪ್ರವಾಹದೋಪಾದಿಯಲ್ಲಿ ನೀರು ಹರಿಯುತ್ತದೆ ಎಂದು ಅವರು ವಿವರಿಸುತ್ತಾರೆ.

ಬರ ಪರಿಸ್ಥಿತಿಯಿಂದಾಗಿ ಇಡೀ ದೇಶದಲ್ಲಿ ನೀರಿಗೆ ಹಾಹಾಕಾರ ಎದ್ದಿದ್ದರೆ, ಈ ಗ್ರಾಮದಲ್ಲಿ 10 ಕೊಳವೆಬಾವಿಗಳಲ್ಲಿ ನೀರು ರಭಸದಿಂದ ಚಿಮ್ಮುತ್ತಿದೆ. ಇಂತ ಚಿಲುಮೆಯ ನೀರಿನ ಗುಣಮಟ್ಟ ಅಧ್ಯಯನ ಮಾಡುವ ಪ್ರಯತ್ನ ಇನ್ನೂ ಸರ್ಕಾರದಿಂದ ನಡೆದಿಲ್ಲ. ಈ ನೀರಿನ ಸದ್ಬಳಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುರಾಜ್ ಸಿಂಗ್ ಕುಶ್ವಾಹ ರಾಜ್ಯ ಸರ್ಕಾರವನ್ನು ಕೋರಿದ್ದರು.

2005ರಲ್ಲಿ ಓಎನ್‌ಜಿಸಿ ಮಂಡಳಿ ಈ ಪ್ರದೇಶಕ್ಕೆ 1.7 ಕೋಟಿ ರೂಪಾಯಿಯ ಯೋಜನೆ ರೂಪಿಸಿ, ವೇದಗಳಲ್ಲಿ ಉಲ್ಲೇಖವಿರುವ ಸರಸ್ವತಿ ನದಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ನೆರವಾಗಿತ್ತು. 2007ರಲ್ಲಿ ಓಎನ್‌ಜಿಸಿ ಕೆಲ ಬಾವಿಗಳನ್ನು ಕೊರೆದಾಗ ಕೂಡ ಜೈಸಲ್ಮೇರ್‌ನಲ್ಲಿ ನೀರು 550 ಮೀಟರ್ ಆಳದಲ್ಲಿ ಸಿಕ್ಕಿತ್ತು. ಇದು ಅತ್ಯಂತ ಆಳದ ಕೊಳವೆಬಾವಿ ಎನಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News