ಬ್ರಾಹ್ಮಣರ ಮಾಂಸಾಹಾರ ಸೇವನೆಯೂ... ಅಂಬೇಡ್ಕರರ ವಿಚಾರಗಳೂ...
ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ಬ್ರಾಹ್ಮಣರು ಯಾಗ ಮಾಡಿ ಮಾಂಸ ತಿಂದಿರುವುದು ರಾಜ್ಯಾದ್ಯಾಂತ ದೊಡ್ಡ ಸುದ್ದಿಯಾಗಿದೆ. ಸೋಮಯಾಗದಲ್ಲಿ 8 ಆಡುಗಳನ್ನು ಬಲಿ ನೀಡಲಾಗಿದೆ, ಸೋಮರಸ (ಬಟ್ಟಿ ಇಳಿಸಿದ ಹೆಂಡ)ವನ್ನೂ ಕೂಡ ಸೇವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಸಂಚಲನ ಸೃಷ್ಟಿಸಿರುವ ಪ್ರಕರಣವಾಗಿದೆ. ಸಂಚಲನ ಯಾಕೆಂದರೆ ಯಾವ ಸಮುದಾಯ ಸಂಪೂರ್ಣ ಸಸ್ಯಾಹಾರಿ ಎಂದು ಸಮಾಜ ನಂಬಿದೆಯೋ ಮತ್ತು ಅವರ ಸಸ್ಯಾಹಾರದ ಮೇಲೆ ಜನ ಮೇಲು- ಕೀಳು, ವೆಜ್ಜು-ನಾನ್ ವೆಜ್ಜು ಎಂದು ಭಿನ್ನಭೇದ ಆಚರಿಸುತ್ತಾರೋ ಅದರ ಬುಡ ಅಲ್ಲಾಡಲು ಇದರಿಂದ ಪ್ರಾರಂಭವಾಗಿದೆಯಲ್ಲ, ಜಾತಿವ್ಯವಸ್ಥೆ ಸಡಿಲಗೊಳ್ಳಲು ಇದು ಪ್ರೇರೇಪಣೆಯಾಗಿದೆಯಲ್ಲ ಎಂಬ ಕಾರಣಕ್ಕೆ ಇದು ಸಂಚಲನ. ಈ ನಿಟ್ಟಿನಲ್ಲಿ ಇದರ (ಬ್ರಾಹ್ಮಣರ ಮಾಂಸ ಸೇವನೆಯ) ಇತಿಹಾಸ, ಅದರಲ್ಲೂ ಬಾಬಾಸಾಹೇಬ್ ಅಂಬೇಡ್ಕರರು ಅಂತಹ ಇತಿಹಾಸವನ್ನು ದಾಖಲಿಸಿರುವುದರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.
ತನ್ಮೂಲಕ ಜಾತಿವ್ಯವಸ್ಥೆಯ ನಾಶಕ್ಕೆ ನಮ್ಮದೂ ಕೂಡ ಪುಟ್ಟ ಕಾಣಿಕೆ ನೀಡುವ ಅಗತ್ಯವಿದೆ. ಅಂಬೇಡ್ಕರರೇನು ಉದ್ದೇಶಪೂರ್ವಕವಾಗಿ ಅಥವಾ ಯಾರಿಗೋ ಮಸಿ ಬಳಿಯಬೇಕು ಎಂಬ ಕಾರಣಕ್ಕೆ ಇತಿಹಾಸವನ್ನು, ಬ್ರಾಹ್ಮಣರ ಮಾಂಸಾಹಾರವನ್ನು ದಾಖಲಿಸಿಲ್ಲ. 1948ರಲ್ಲಿ ಪ್ರಕಟಗೊಂಡ ‘ದಿ ಅನ್‌ಟಚಬಲ್ಸ್’ ಎಂಬ ಅವರ ಕೃತಿಯಲ್ಲಿ ಅಸ್ಪಶ್ಯತೆ ಅದು ಹೇಗೆ ಉಗಮವಾಯಿತು? ಅಸ್ಪಶ್ಯರು ಯಾರು? ಅವರೇಕೆ ಅಸ್ಪಶ್ಯರಾದರು? ಅದಕ್ಕಿಂತ ಮೊದಲು ಅವರು ಏನಾಗಿದ್ದರು? ಅವರ ಸಂಸ್ಕೃತಿ-ಧರ್ಮ ಏನು? ಅವರು ಸಸ್ಯಾಹಾರಿಗಳೇ? ಮಾಂಸಾಹಾರಿಗಳೇ? ಇತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಕಂಡುಕೊಳ್ಳುತ್ತಾ ಹೋಗಿದ್ದಾರೆ. ಅಂತಹ ಉತ್ತರಗಳ ಮಾದರಿಯಲ್ಲಿ ಅವರು ಕಂಡುಕೊಂಡ ಅನೇಕ ಸತ್ಯಗಳಲ್ಲಿ ಒಂದು ಅಂಶವೆಂದರೆ ಅಸ್ಪಶ್ಯತೆಯ ಮೂಲವಾಗಿ ದನದ ಮಾಂಸ ಸೇವನೆ ಎಂಬ ಅಂಶ. ಅಂದಹಾಗೆ ಮೇಲ್ಕಾಣಿಸಿದ ರೀತಿ ಹೀಗೆ ಪ್ರಶ್ನಿಸುತ್ತಲೇ ಅಂಬೇಡ್ಕರರು ಈ ಸಂಬಂಧ ಹಲವು ಉಪ ಪ್ರಶ್ನೆಗಳನ್ನು ಎತ್ತುತ್ತಾರೆ.
ಅವುಗಳಲ್ಲಿ ಪ್ರಮುಖವಾದುದ್ದೆಂದರೆ Did the Hindus never eat beef? (ಹಿಂದೂಗಳು ಎಂದೂ ಕೂಡ ದನದ ಮಾಂಸ ತಿಂದೇ ಇಲ್ಲವೆ?), Why did non-brahmins give up beef eating? (ಬ್ರಾಹ್ಮಣೇತರರೇಕೆ ದನದ ಮಾಂಸ ತಿನ್ನುವುದನ್ನು ಬಿಟ್ಟರು?), What made the Brahmins become vegetarians? (ಬ್ರಾಹ್ಮಣರು ಸಸ್ಯಾಹಾರಿಗಳಾಗಲು ಏನು ಕಾರಣ?) ಖಂಡಿತ, ಅಂಬೇಡ್ಕರರು ಕೇಳಿರುವ ಕಡೆಯ ಪ್ರಶ್ನೆ ಬ್ರಾಹ್ಮಣರು ಮಾಂಸಾಹಾರಿಗಳಾಗಿದ್ದರು ಎಂಬುದನ್ನು ಶ್ರುತಪಡಿಸುತ್ತದೆ. ಈ ಸಂಬಂಧ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರನ್ನು ಪರಸ್ಪರ ಹೋಲಿಕೆ ಮಾಡುತ್ತಾ ಅಂಬೇಡ್ಕರರು ಹೇಳುವುದೇನೆಂದರೆ, ಮೊದಲಿಗೆ ಇತಿಹಾಸದಲ್ಲಿ ಸ್ಪಷ್ಟವಾಗಿ ಬ್ರಾಹ್ಮಣೇತರರು ಒಂದು ಕ್ರಾಂತಿಯ ಮೂಲಕ ಹಾದುಹೋಗಿದ್ದಾರೆ.
ದನದ ಮಾಂಸ ತಿನ್ನುವವರಾಗಿದ್ದ ಅವರು (ಬ್ರಾಹ್ಮಣೇತರರು) ದನದ ಮಾಂಸ ತಿನ್ನದವರಾದದ್ದು ನಿಜಕ್ಕೂ ಒಂದು ಕ್ರಾಂತಿಯೇ! ಆಶ್ವರ್ಯವೆಂದರೆ ಬ್ರಾಹ್ಮಣೇತರರು ಒಂದು ಕ್ರಾಂತಿಯನ್ನು ಅನುಭವಿಸುವಂತಾದರೆ ಬ್ರಾಹ್ಮಣರು ಒಮ್ಮೆಲೇ ಎರಡು ಕ್ರಾಂತಿಗಳನ್ನು ನೋಡುವಂತಾಯಿತು! ಅಂದರೆ ಅವರು ದನದ ಮಾಂಸ ತಿನ್ನುವುದನ್ನು ಬಿಟ್ಟದ್ದು ಒಂದು ಕ್ರಾಂತಿಯಾದರೆ, ಒಟ್ಟಾರೆ ಅವರು ಮಾಂಸ ತಿನ್ನುವುದನ್ನೇ ಬಿಟ್ಟದ್ದು ತನ್ಮೂಲಕ ಸಸ್ಯಾಹಾರಿಗಳಾಗಿದ್ದು ಮತ್ತೊಂದು ಕ್ರಾಂತಿ. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.7, ಪು.334). ಮತ್ತೆ ಸ್ಪಷ್ಟವಾಗುವುದೆಂದರೆ ಅಂಬೇಡ್ಕರರ ಮೇಲಿನ ಮಾತುಗಳು ಬ್ರಾಹ್ಮಣರು ಬರೇ ಮಾಂಸಾಹಾರಿಗಳಾಗಿರಲಿಲ್ಲ ಬದಲಿಗೆ ದನದ ಮಾಂಸವನ್ನು ಕೂಡ ಸೇವಿಸುತ್ತಿದ್ದರು ಎಂಬುದನ್ನು ಸಾರಿಹೇಳುತ್ತವೆ. ಅಂಬೇಡ್ಕರರು ಈ ಸಂಬಂಧ ಸಾಕ್ಷಿಗಳನ್ನು ಎಲ್ಲಿ ಹೆಕ್ಕಿದ್ದಾರೆ? ಬ್ರಾಹ್ಮಣರ ಶೃತಿ-ಸ್ಮತಿಗಳಿಂದ. ಐತ್ತೇರಿಯ ಬ್ರಾಹ್ಮಣ, ಶತಪಥ ಬ್ರಾಹ್ಮಣ, ಅಪಸ್ತಂಭ ಧರ್ಮಸೂತ್ರ, ಅಶ್ವಲ್ಯಾಯನ ಗೃಹ್ಯ ಸೂತ್ರ, ವಾಜಸನೇಯಿ ಸಂಹಿತೆ, ಋಗ್ವೇದ- ಇವೇ ಅಂಬೇಡ್ಕರರು ಹೆಕ್ಕಿ ತೆಗೆಯಲು ಬಳಸಿಕೊಂಡಿರುವ ಆಧಾರ ಗ್ರಂಥಗಳು. ಹಾಗಿದ್ದರೆ ಇಲ್ಲೆಲ್ಲ ದನ ಅಥವಾ ಹಸು ಪವಿತ್ರ ಎಂದು ಉಲ್ಲೇಖ ಆಗಿಲ್ಲವೇ? ಹೌದು, ಉಲ್ಲೇಖ ಇದೆ. ಅಂಬೇಡ್ಕರರು ಕೂಡ ಇದನ್ನು ಒಪ್ಪುತ್ತಾರೆ.
ಅವರ ಮಾತನ್ನೇ ದಾಖಲಿಸುವುದಾದರೆ ಋಗ್ವೇದದಲ್ಲಿ ಹಸುವಿಗೆ ನೀಡಿರುವ ಅಘ್ನ್ಯ ಎಂಬ ವಿಶೇಷಣದ ಅರ್ಥವೆಂದರೆ, ಹಸು ಅದು ಹಾಲು ಕೊಡುತ್ತದೆ ಆದ್ದರಿಂದ ಅದನ್ನು ಕೊಲ್ಲ್ಲುವುದು ಯೋಗ್ಯವಲ್ಲ. ಹಾಗೆಯೇ ಋಗ್ವೇದದಲ್ಲಿ ಹಸುವನ್ನು ಪವಿತ್ರೀಕರಣಗೊಳಿಸಲಾಗಿದೆ ಎಂಬುದು ಕೂಡ ಒಟ್ಟಾರೆ ನಿಜ. ಆದರೆ ವಾಸ್ತವವೆಂದರೆ ಹಸುವನ್ನು ಹೀಗೆ ಪವಿತ್ರವೆಂದು, ಶ್ರೇಷ್ಠವೆಂದು ನೋಡಬೇಕು ಎಂಬುದು ಕೃಷಿಕ ಸಮುದಾಯವಾದ ಇಂಡೋ ಆರ್ಯರ ಒಂದು ಆಕಾಂಕ್ಷೆಯಾಗಿತ್ತು ಅಷ್ಟೆ. ಇಂತಹ ಆಕಾಂಕ್ಷೆಯ ಕಾರಣಕ್ಕಾಗಿ ಹಸುವಿಗೆ ಅಂಟಿಸಲಾದ ಅದರ ಈ ಉಪಯೋಗದ ಅನ್ವಯ ಆಹಾರದ ಉದ್ದೇಶಕ್ಕಾಗಿ ಅದನ್ನು ಕೊಲ್ಲಲಿಕ್ಕಾಗಿ ಆರ್ಯರಿಗೆ ಯಾವುದೇ ರೀತಿಯ ತಡೆಯನ್ನು ಒಡ್ಡಲಿಲ್ಲ. ನಿಜ ಹೇಳಬೇಕೆಂದರೆ ಹಸು ಪವಿತ್ರ ಎಂದು ಪರಿಗಣಿಸಲ್ಪಟ್ಟಿದ್ದ ಕಾರಣಕ್ಕಾಗಿಯೇ ಅದನ್ನು ಕೊಲ್ಲಲಾಗುತ್ತಿತ್ತು! ಈ ಸಂಬಂಧ ಧರ್ಮಶಾಸ ವಿಚಾರ ಎಂಬ ಮರಾಠಿ ಕೃತಿಯಲ್ಲಿ ಕೇನ್‌ರವರು ಹೇಳುವುದೇನೆಂದರೆ ವೇದಗಳಲ್ಲಿ ಹಸುವನ್ನು ಪವಿತ್ರಗೊಳಿಸಲಾಗಿರಲಿಲ್ಲ ಎಂದಲ್ಲ. ನಿಜಹೇಳಬೇಕೆಂದರೆ ಅದರ ಪಾವಿತ್ರೀಕರಣದ ಕಾರಣಕ್ಕಾಗಿಯೇ ವಾಜಸನೇಯಿ ಸಂಹಿತೆ ಹಸುವನ್ನು ತಿನ್ನಲೇಬೇಕು ಎಂದು ಕಟ್ಟಾಜ್ಞೆ ವಿಸಿತ್ತು. ಇನ್ನು ಋಗ್ವೇದ ಕಾಲದ ಆರ್ಯರು ಆಹಾರದ ಉದ್ದೇಶಕ್ಕಾಗಿ ಹಸುವನ್ನು ಕೊಲ್ಲುತ್ತಿದ್ದರು ಮತ್ತು ತಿನ್ನುತ್ತಿದ್ದರು ಎಂಬುದನ್ನು ಋಗ್ವೇದವೇ ಧಾರಾಳವಾಗಿ ಸ್ಪಷ್ಟಪಡಿಸುತ್ತದೆ.
ಋಗ್ವೇದದ (ಹತ್ತನೆ ಅಧ್ಯಾಯ, ಶ್ಲೋಕ.86.14)ದಲ್ಲಿ ಇಂದ್ರ ಹೇಳುತ್ತಾನೆ ಅವರು ಒಬ್ಬನಿಗಾಗಿ ಹದಿನೈದರಿಂದ ಇಪ್ಪತ್ತು ಎತ್ತುಗಳನ್ನು ಅಡುಗೆ ಮಾಡುತ್ತಿದ್ದರು. ಋಗ್ವೇದದ(ಹತ್ತನೆ ಅಧ್ಯಾಯ, ಶ್ಲೋಕ.91.14) ಹೇಳುತ್ತದೆ ಅಗ್ನಿಗೆ ಟಗರುಗಳು, ಗೂಳಿಗಳು, ಗೊಡ್ಡುದನಗಳು, ಎತ್ತುಗಳು ಮತ್ತು ಕುದುರೆಗಳನ್ನು ಬಲಿಕೊಡಲಾಗುತ್ತಿತ್ತು. ಹಾಗೆಯೇ ಋಗ್ವೇದದ (ಹತ್ತನೆ ಅಧ್ಯಾಯ, ಶ್ಲೋಕ.72.6) ದಲ್ಲಿ ಕಾಣಸಿಗುವುದೆಂದರೆ ಹಸುವನ್ನು ಒಂದು ಖಡ್ಗ ಅಥವಾ ಮಚ್ಚಿನಿಂದ ಕೊಲ್ಲಲಾಗುತ್ತಿತ್ತು ಎಂಬುದು. ಮುಂದುವರಿದು ಅಂಬೇಡ್ಕರರು ಬರೀ ಹಸುವನ್ನು ಕೊಲ್ಲುವುದಷ್ಟೇ ಅಲ್ಲ, ಯಾವ ಬಗೆಯ ಹಸುವನ್ನು ಕೊಲ್ಲಬೇಕು ಎಂಬುದನ್ನೂ ಕೂಡ ಶಾಸಗಳು ಸೂಚಿಸಿವೆ ಎಂಬುದನ್ನು ತಿಳಿಸುತ್ತಾ, ತೈತ್ತೇರಿಯ ಬ್ರಾಹ್ಮಣದಲ್ಲಿ ಪಟ್ಟಿಮಾಡಲ್ಪಟ್ಟಿರುವ ಕಾಮ್ಯಾಷ್ಠಿಗಳು, ಹಸುಗಳು ಮತ್ತು ಎತ್ತುಗಳನ್ನು ಬಲಿಕೊಡುವುದನ್ನಷ್ಟೆ ಸೂಚಿಸುವುದಿಲ್ಲ ಬದಲಿಗೆ ಯಾವ ಯಾವ ದೇವತೆಗಳಿಗೆ ಯಾವ ಯಾವ ಬಗೆಯ ಹಸುಗಳು ಮತ್ತು ಎತ್ತುಗಳನ್ನು ಅರ್ಪಿಸಬೇಕು ಎಂಬುದನ್ನು ಸೂಚಿಸುತ್ತವೆ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ, ಉದಾಹರಣೆಗೆ ವಿಷ್ಣುವಿಗೆ ಬಲಿ ನೀಡಲು ಕುಳ್ಳಾಗಿ ಇರುವ ಒಂದು ಎತ್ತನ್ನು ಅರ್ಪಿಸಬೇಕು, ವೃತ್ತದ ವಿನಾಶಕ ಆಗಿರುವ ಇಂದ್ರನಿಗೆ ಸೊರಗಿದ ಕೊಂಬಿನ ಹಣೆಯಲ್ಲಿ ಜ್ವಾಲೆಯನ್ನು ಹೊಂದಿರುವ ಗೂಳಿಯನ್ನು ಅರ್ಪಿಸಬೇಕು. ಇನ್ನು ಪೂಷಣ ಎಂಬವನಿಗೆ ಒಂದು ಕಪ್ಪು ದನ, ರುದ್ರನಿಗೆ ಕೆಂಪು ದನ, ಹೀಗೆ ...