ಯಶಸ್ವಿಯಾದ ನೂರ್ ಜಹಾನ್ ಜಾಗೃತಿ ಅಭಿಯಾನ: ಗ್ರಾಮದ ಎಲ್ಲ ಮನೆಗೆ ಶೌಚಾಲಯ ಬಂತು

Update: 2016-05-14 16:48 GMT

ಲಕ್ನೋ, ಮೇ 15: ಮುಂದಿನ ಎರಡು ವಾರಗಳಲ್ಲಿ ಇಲ್ಲಿನ ಹೊರವಲಯದ ಪಪ್ನ ಮುಆ ಗ್ರಾಮ ಸಂಪೂರ್ಣ ಬಹಿರಂಗ ಬಹಿರ್ದೆಸೆ ಮುಕ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮೊದಲು ತನ್ನ ಮನೆಯಲ್ಲಿ ನಂತರ ಗ್ರಾಮದ ಎಲ್ಲ 418 ಮನೆಗಳಲ್ಲಿ ಶೌಚಾಲಯ ನಿರ್ಮಾಣ ಆಗುವಂತೆ ಮಾಡಿದ ಕೀರ್ತಿ ಗ್ರಾಮದ ಸಾಮಾನ್ಯ ಗ್ರಹಿಕೆ ನೂರ್ ಜಹಾನ್ ಹಾಗೂ ಆಕೆಯ 11ರ ಹರೆಯದ ಪುತ್ರಿ ನರ್ಗೀಸ್ ಗೆ ಸಲ್ಲುತ್ತದೆ.

ಕಳೆದ 6 ತಿಂಗಳಲ್ಲಿ ನೂರ್ ಜಹಾನ್ ತನ್ನ ಪುತ್ರಿಯ ಸಹಕಾರ ಪಡೆದು ನಡೆಸಿದ ನಿರಂತರ ಜಾಗೃತಿ ಅಭಿಯಾನ ಈಗ ಫಲ ನೀಡಿದೆ. ಆದರೆ ಇದು ಸುಲಭವಾಗಿರಲಿಲ್ಲ. ಪತಿ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ಇರುವ ನೂರ್ ಜಹಾನ್ ಪ್ರಾರಂಭದಲ್ಲಿ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಆಕೆಯ ಪತಿ ಕೂಡಾ ಆಕೆಯ ಈ ಜಾಗೃತಿ ಅಭಿಯಾನವನ್ನು ವಿರೋಧಿಸಿ ಸ್ವಲ್ಪ ಸಮಯ ಆಕೆಯನ್ನು ಬಿಟ್ಟೇ ಹೋಗಿದ್ದ. ಆಕೆ ಜನರ ಬಳಿ ಹೋಗಿ ಶೌಚಾಲಯದ ಮಹತ್ವ ಹೇಳುವಾಗ ನಮ್ಮ ಮನೆಯೊಳಗಿನ ವಿಷಯಕ್ಕೆ ನೀನು ತಲೆ ಹಾಕಬೇಡ ಎಂದು ಮನೆಯಿಂದ ದೂಡಿ ಬಿಡುತ್ತಿದ್ದರು. ಆದರೆ ನೂರ್ ಜಹಾನ್ ತನ್ನ ಗ್ರಾಮದ ಎಲ್ಲ ಮನೆಗಳಲ್ಲಿ ಶೌಚಾಲಯ ಇರಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದರು.

ಬಹಿರಂಗ ಬಹಿರ್ದೆಸೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅದು ಯುವತಿಯರಿಗೆ ತಂದೊಡ್ಡುವ ಅಪಾಯ್ಗಳ ಬಗ್ಗೆ ಅವರು ಗ್ರಾಮಸ್ಥರಿಗೆ ಹೇಳುತ್ತಲೇ ಹೋದರು. ಶೌಚಾಲಯ ಕಟ್ಟಿಸಲು ಸಾಮರ್ಥ್ಯ ಇಲ್ಲದವರಿಗೆ ಸರಕಾರದಿಂದ ಸಿಗುವ ಆರ್ಥಿಕ ನೆರವಿನ ಬಗ್ಗೆ ಕೂಡಾ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನೂರ್‌ಜಹಾನ್‌ರ ಪುತ್ರಿ ನರ್ಗೀಸ್ ತನ್ನ ಸಹಪಾಠಿಗಳಿಗೆ ಶೌಚಾಲಯದ ಮಹತ್ವವನ್ನು ತಿಳಿಸಿಕೊಡುತ್ತಿದ್ದರು. ಅದರ ಜೊತೆಗೆ ಸ್ವಚ್ಛತೆ ಕಾಪಾಡುವ ಕುರಿತೂ ಆಕೆ ತನ್ನ ಸ್ನೇಹಿತರಿಗೆ ತಿಳಿಸಿದ್ದಳು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಇಂದು ನೂರ್‌ಜಹಾನ್‌ರ ಗ್ರಾಮದ 300 ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಉಳಿದ ಮನೆಗಳಲ್ಲೂ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ.

ಇದೆಲ್ಲಾ ಪ್ರಾರಂಭವಾಗಿದ್ದು ಅಂಗನವಾಡಿ ಕಾರ್ಯಾಗಾರವೊಂದರಿಂದ. ಅಲ್ಲಿ ಶೌಚಾಲಯದ ಮಹತ್ವ ತಿಳಿದುಕೊಂಡ ನೂರ್‌ಜಹಾನ್ ಅದೇದಿನ ತನ್ನ ಮನೆಗೆ ಬಂದು ಮನೆಯ ಹಿಂದಿದ್ದ ಜಾಗದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಸ್ವತಃ ತಾವೇ ಕಟ್ಟಿ, ಶೌಚಾಲಯ ನಿರ್ಮಾಣವನ್ನು ಪೂರ್ಣಗೊಳಿಸಿದರು. ಇದು ಆ ಗ್ರಾಮದ ಪ್ರಪ್ರಥಮ ಶೌಚಾಲಯವಾಗಿತ್ತು. ಇಂದು ಆ ಗ್ರಾಮದ ಎಲ್ಲಾ ಮನೆಗಳು ಶೌಚಾಲಯ ಹೊಂದುವ ಹಂತಕ್ಕೆ ಬಂದಿವೆ.

ತನ್ನ ವಿಶಿಷ್ಟ ಸಾಮಾಜಿಕ ಜಾಗೃತಿಯ ಅಭಿಯಾನಕ್ಕಾಗಿ ನೂರ್‌ಜಹಾನ್‌ರನ್ನು ಜಿಲ್ಲಾಧಿಕಾರಿ ರಾಜ್‌ಶೇಖರ್ ಅವರು ಅಭಿನಂದಿಸಿ, 2,000 ರೂ. ನಗದು ಬಹುಮಾನವನ್ನು ನೀಡಿದ್ದರು.

ಕೃಪೆ:timesofindia

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News