ನಾವು ಪೌರರು.. ಮಹಾ ಪೌರರು...
‘‘ಅಪ್ಪಬೆಳಗ್ಗೆ ಆರು ಗಂಟೆಗೇ ಕೆಲಸಕ್ಕೆ ಹೋಗುತ್ತಾರೆ. ಅಮ್ಮ ಮಿಶನ್ ಆಸ್ಪತ್ರೆಗೆ ಕೆಲಸಕ್ಕೆ ಹೋಗುತ್ತಾರೆ. ನಾನು ಒಬ್ಬಳೇ ಇರುತ್ತೇನೆ. ತುಂಬಾ ಬೇಜಾರು ಆಗುತ್ತಿತ್ತು. ಆದ್ರೆ ಈಗ ಖುಷಿಯಾಗಿದ್ದೇನೆ. ಇಲ್ಲಿ ಬಂದು ಹಾಡು, ನೃತ್ಯ, ಕೋಲಾಟ, ನಗಾರಿ ಕಲಿಯುತ್ತಿದ್ದೇನೆ. ಮುಂದೆ ಚೆನ್ನಾಗಿ ಓದಿ ಡಾಕ್ಟರ್ ಅಥವಾ ಪೊಲೀಸ್ ಆಗಬೇಕೆಂದಿದ್ದೇನೆ...’’ ಮೈಸೂರು ನಗರದ ಗುಡ್ ಶೆಫರ್ಡ್ ಕಾನ್ವೆಂಟಿನಲ್ಲಿ 6ನೇ ತರಗತಿ ಓದುತ್ತಿರುವ ಪೌರಕಾರ್ಮಿಕರ ಮಗಳು ನಿವೇದ ತೆಲುಗು ಮಿಶ್ರಿತ ಕನ್ನಡದಲ್ಲಿ ಮುದ್ದುಮುದ್ದಾಗಿ ಹೇಳಿದ ಮಾತುಗಳಿವು. ಇನ್ನು ಭಾರತ್‌ನಗರದಲ್ಲಿ ಸರಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಮಾದೇಶ ಹೇಳಿದ್ದು, ‘‘ಅಪ್ಪ ಕೆಲಸಕ್ಕೆ ಹೋಗಿದ್ದಾರೆ. ಅಮ್ಮನೂ ಕೂಡ ಮನೆಗೆಲಸಕ್ಕೆ ಹೋಗಿದ್ದಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಾರೆ. ಊಟ ಕೊಡುತ್ತಾರೆ, ಬಿಸ್ಕೆಟ್ ಕೊಡುತ್ತಾರೆ, ಹಾಡೂ ಹೇಳಿಕೊಡುತ್ತಾರೆ, ಖುಷಿಯಾಗಿದ್ದೇನೆ....’’
ಹೌದು, ಮೈಸೂರು ನಗರದ ಸಾತಗಳ್ಳಿ ಬಸ್ ಡಿಪೋದ ಪೌರಕಾರ್ಮಿಕರ ಕಾಲೋನಿ ಭಾರತ್‌ನಗರದ ಬಳಿಯೀಗ ಎಲ್ಲೆಲ್ಲೂ ಖುಷಿಯದ್ದೇ ಮಾತು. ಯಾರ ಮುಖದಲ್ಲೂ ಗುಲಗಂಜಿಯಷ್ಟೂ ನೋವಿಲ್ಲ. ಬರುವ 300ಕ್ಕೂ ಹೆಚ್ಚು ಮಕ್ಕಳ ಮೊಗದಲ್ಲಿ ಅರಳಿದೆ ಸುಂದರ ನಗು. ಹೇಳಲಾರದಷ್ಟು ಖುಷಿ. ಈ ಖುಷಿಗೆ ಕಾರಣ ಸ್ಥಳೀಯ ಆದಿ ದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಸಂಘದ ಮಂಜುನಾಥ್ ಮತ್ತು ಮಿತ್ರರು ಆಯೋಜಿಸಿರುವ 25 ದಿನಗಳ ಬೇಸಿಗೆ ಶಿಬಿರ. ಅರೆ, ಬೇಸಿಗೆ ಶಿಬಿರ... ಅದರಲ್ಲೇನು ಮಹಾ ಎನ್ನಬೇಡಿ. 5ರಿಂದ 10 ಸಾವಿರ ವಸೂಲಿ ಮಾಡಿರುತ್ತಾರೆ ಎಂದು ಮೂಗು ಮುರಿಯಬೇಡಿ. ಯಾಕೆಂದರೆ ಇಲ್ಲಿ ಬೇಸಿಗೆ ಶಿಬಿರ ಉಚಿತವಾಗಿ ಏರ್ಪಡಿಸಿರುವುದು ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ ಈ ಉರಿಬಿಸಿಲಲ್ಲ್ಲೂ ನಗರದ ಅಷ್ಟೂ ಗಲೀಜನ್ನು ಸ್ವಚ್ಛಗೊಳಿಸುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ. ಹಣ ಸಂಪಾದನೆಯ ಉದ್ಯೋಗವನ್ನೇ ಶೋಷಣೆಯ ಪ್ರತಿ ಘಳಿಗೆಯಂತೆ ಈಗಲೂ ಅನುಭವಿಸುತ್ತಿರುವ ಪೌರಬಂಧುಗಳ ಕುಡಿಗಳಿಗೆ ಅರ್ಥಪೂರ್ಣಗೊಳಿಸಲೆಂಬಂತೆ ಈ ಶಿಬಿರಕ್ಕೆ ಇಟ್ಟಿರುವ ಹೆಸರು ‘ನಾವು ಪೌರರು... ಮಹಾ ಪೌರರು....’’
ಈ ಕಾರ್ಯಕ್ರಮದ ರೂವಾರಿ, ಬೆನ್ನೆಲುಬು ಅಂತಾರಾಷ್ಟ್ರೀಯ ಖ್ಯಾತಿಯ ಸಾಂಸ್ಕೃತಿಕ ಸಂಘಟಕ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರು. ಬೆಳಗ್ಗೆಯಿಂದ ಸಂಜೆಯವರೆಗೆ ನಗರದ ವಿವಿಧ ಏರಿಯಾಗಳ 15ಕ್ಕೂ ಹೆಚ್ಚು ದಲಿತ ಕಾಲೋನಿಗಳಿಂದ ಅಗಮಿಸುವ ಪೌರಕಾರ್ಮಿಕ ಕುಡಿಗಳೊಂದಿಗೆ ತಮ್ಮ ಸಮಯ ಕಳೆದು ಶಿಬಿರದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತಿರುವ ಕಪ್ಪಣ್ಣರವರು ಹೇಳಿದ್ದು ಭಾರತದ ಜನಪದ ಕಲೆಗಳಿಗೆ ಮೂಲ ದೈವೀ ಆರಾಧನೆ. ಅಂದರೆ ಮಾರಮ್ಮನ ಆರಾಧನೆ, ದುರ್ಗಮ್ಮನ ಆರಾಧನೆ, ಎಲ್ಲಮ್ಮನ ಆರಾಧನೆ, ಪಟಲದಮ್ಮನ ಆರಾಧನೆ ಇತ್ಯಾದಿ. ಈ ಹಿನ್ನೆಲೆಯಲ್ಲಿ ಜನಪದಕ್ಕೆ ಭಾರತದಲ್ಲಿ ಧರ್ಮದ ನೆಲೆಯಿದೆ. ಆದರೆ ಅದೇ ಪಾಶ್ಚಾತ್ಯದಲ್ಲಿ ಅದಕ್ಕೆ ಸಾಮಾಜಿಕ ನೆಲೆಯಿದೆ. ಆದ್ದರಿಂದ ಸ್ಥಳೀಯ ಧರ್ಮದ ಹಿನ್ನೆಲೆಯ ಜನಪದ ಕಲೆಗಳನ್ನು ಪಾಶ್ಚಾತ್ಯರ ರೀತಿ ಸಾಮಾಜಿಕೀಕರಣಗೊಳಿಸಲು ಸಾಧ್ಯವಿಲ್ಲವೇ? ಈ ದಿಸೆಯಲ್ಲಿ ಜನಪದ ಮೂಲ ಕರ್ತೃಗಳಾದ ದಲಿತರನ್ನು, ಅವರ ಕಲೆಗಳನ್ನು ಸಾಮಾಜಿಕೀಕರಣಗೊಳಿಸುವುದು, ಹೊರಜಗತ್ತಿಗೆ ಫೋಕಸ್ ಮಾಡುವುದು ಈ ಶಿಬಿರದ ಉದ್ದೇಶ.
ಹಾಗಿದ್ದರೆ ತಳ ಸಮುದಾಯದ ಕಲೆಗಳ ಸದ್ಯದ ಸ್ಥಿತಿ? ಕಪ್ಪಣ್ಣನವರು ಆತಂಕವ್ಯಕ್ತಪಡಿಸಿದ್ದು ತಳ ಜಾತಿಗಳ ಕಲೆ ನಾಶವಾದರೆ ಒಟ್ಟಾರೆ ಆ ಕಲೆಯೇ ನಾಶವಾಗುತ್ತದೆ. ಉದಾಹರಣೆಗೆ ನಗಾರಿ ಬಾರಿಸುವುದು. ಆ ನಗಾರಿ ಬಾರಿಸುವಾಗ ಪೌರಕಾರ್ಮಿಕ ಬಂಧು ಅಥವಾ ಅವರ ಮಕ್ಕಳು ಹಾಕುವ ಒಂದೊಂದು ಹೆಜ್ಜೆಯಲ್ಲೂ ಪರಂಪರೆ ಪ್ರತಿಧ್ವನಿಸುತ್ತದೆ. ನಗಾರಿ ಬಾರಿಸುವ ಶೈಲಿ ಅದು ಅವರಿಗಷ್ಟೇ ಸಾಧ್ಯ. ಹೀಗಿರುವಾಗ ಇಂತಹದ್ದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಲ್ಲವೆ? ಎಂದು. ಇನ್ನು ಈ ಶಿಬಿರದಲ್ಲಿ ಸ್ವಯಂಸ್ಫೂರ್ತಿ ಯಿಂದ ತೊಡಗಿಸಿಕೊಂಡಿರುವ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕ ಸಿ.ಎಂ.ನರಸಿಂಹ ಮೂರ್ತಿಯವರು ‘‘ಪೌರಕಾರ್ಮಿಕರ ಮಕ್ಕಳಿಗೆ ನಡೆಸುತ್ತಿರುವ ಈ ಬೇಸಿಗೆ ಶಿಬಿರ ಭಾರತದಲ್ಲೆ ಪ್ರಪ್ರಥಮವಾಗಿ ನಡೆಯುತ್ತಿರುವ ಅಪರೂಪದ ಶಿಬಿರ. ಪೌರಕಾರ್ಮಿಕರು ಅತ್ಯಂತ ನಿಕೃಷ್ಟವಾಗಿ ಕಾಣಲ್ಪಡುತ್ತಿರುವ ಜನ. ಅವರ ಮನೆಯಲ್ಲಿ ಬೇರೆಯವರು ಒಂದು ತೊಟ್ಟು ನೀರೂ ಕೂಡ ಕುಡಿಯುವುದಿಲ್ಲ. ಎಲ್ಲರೂ ಅವರ ಬಗ್ಗೆ ಹೊರಗಡೆ ನಿಂತು ಮಾತನಾಡುವವರೆ. ಯಾರೂ ಕೈಜೋಡಿಸಿ ಕೆಲಸ ಮಾಡಲು ಮುಂದೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮಕ್ಕಳನ್ನು ಪ್ರತಿದಿನ ವಿವಿಧ ಬಡಾವಣೆಗಳಿಂದ ಇಲ್ಲಿಗೆ ಕರೆಸಿ ಶಿಬಿರ ಮಾಡುತ್ತಿರುವುದು ಅರ್ಥಪೂರ್ಣದ್ದಲ್ಲವೆ? ಇಂತಹ ಅರ್ಥಪೂರ್ಣ ಕೆಲಸಕ್ಕೆ ಮೈಸೂರಿನ ಜನತೆ ಕೈಜೋಡಿಸಬೇಕು, ಸಹಾಯ-ಸಹಕಾರ ನೀಡಬೇಕು’’ ಎನ್ನುತ್ತಾರೆ
125ನೆ ವರ್ಷದ ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ಇದೇ 24ರಂದು ನಗರದ ಕಲಾಮಂದಿರದಲ್ಲಿ ನಡೆಯಲಿರುವ ಶಿಬಿರದ ಸಮಾರೋಪ ಸಮಾರಂಭದಲ್ಲಿ 125 ಬಾಲಕ-ಬಾಲಕಿಯರಿಂದ 125 ನಗಾರಿ ಬಾರಿಸುವ ಪ್ರದರ್ಶನಕ್ಕೂ ಕೂಡ ಶಿಬಿರ ಸಿದ್ಧತೆ ನಡೆಸುತ್ತಿದೆ. ಅಲ್ಲದೆ ಅದಕ್ಕೂ ಮೊದಲು ಇದೆ 22ರಂದು ನಗರದ ವಿಶ್ವೇಶ್ವರ ನಗರದ 2ನೆ ಹಂತದ ಡಿ.ದೇವರಾಜ ಅರಸು ಕಾಲನಿಯಲ್ಲಿ ಶಿಬಿರಾರ್ಥಿಗಳು ರಾಜ್ಯದಲ್ಲಿ ತಲೆ ಮೇಲೆ ಮಲಹೊರುವ ಪದ್ಧತಿಯನ್ನು ನಿಷೇಧಿಸಿ ಅವರಿಗೆ ‘ಪೌರಕಾರ್ಮಿಕರು’ ಎಂಬ ಗೌರವದ ನಾಮಾಂಕಿತ ನೀಡಿದ ದಿ.ಬಿ.ಬಸವಲಿಂಗಪ್ಪನವರ ನೆನಪಿನಲ್ಲಿ ‘ನಮ್ಮ ಕೇರಿ ಹಬ್ಬ’ವನ್ನು ಕೂಡ ನಡೆಸಿಕೊಡಲಿದ್ದಾರೆ.
ಈ ಹಬ್ಬದ ಘೋಷವಾಕ್ಯವೆಂದರೆ ‘‘ನಮ್ಮ ಕೇರಿಗೆ ಬನ್ನಿ, ಪುಸ್ತಕ ಕೊಳ್ಳಿ, ಕಲಾಕೃತಿ ನೋಡಿ, ಸಾಧ್ಯವಾದರೆ ನಮ್ಮ ಜೊತೆ ಊಟ ಮಾಡಿ.’’ ‘‘ಸ್ವಚ್ಛಭಾರತ ಘೋಷಣೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ, ಅವರ ಬದುಕಿಗೆ, ಮಕ್ಕಳಿಗೆ ಆದ್ಯತೆ ನೀಡಬೇಕು ಮತ್ತು ಮುಖ್ಯವಾಗಿ ಪೌರಕಾರ್ಮಿಕರ ಕಲೆ-ಸಂಸ್ಕೃತಿಯನ್ನು ಸಂಭ್ರಮಿಸಬೇಕು’’ ಎಂದು ದನಿಗೂಡಿಸುವ ಶ್ರೀನಿವಾಸ ಜಿ. ಕಪ್ಪಣ್ಣನವರು ಇದಕ್ಕಾಗಿ ಸಹೃದಯಿ ನಾಗರಿಕರು ಕೈಜೋಡಿಸಬೇಕು ಎಂದು ಮತ್ತೊಮ್ಮೆ ಮನವಿಮಾಡಿಕೊಳ್ಳುತ್ತಾರೆ. ಅಂದ ಹಾಗೆ ಇದೇ 24ರವರೆಗೆ ನಡೆಯುವ ಶಿಬಿರಕ್ಕೆ ನೀವು ಸಹಾಯ-ಸಲಹೆ-ಸಹಕಾರ ನೀಡಬೇಕೆ? ಅಥವಾ ಪೌರಕಾರ್ಮಿಕರ ಖುಷಿಯಲ್ಲಿ ನೀವೂ ಪಾಲುದಾರರಾಗಬೇಕೆ? ಹಾಗಿದ್ದರೆ ಸಂಪರ್ಕಿಸಿ ಶಿಬಿರದ ಆಯೋಜಕರಾದ ಮಂಜುನಾಥ್‌ರವರನ್ನು (ದೂ.ಸಂ. 9740598169) ಹಾಗೆಯೇ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿಯವರನ್ನು (ದೂ.ಸಂ. 9916115263).