ಏಕಕಾಲದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಮುಗಿಸಲು ಸುಪ್ರೀಂಗೆ ಮೊರೆ

Update: 2016-05-16 18:02 GMT

ಬೆಂಗಳೂರು, ಮೇ 16: ಸುಪ್ರೀಂಕೋರ್ಟ್ ಆದೇಶದನುಸಾರ ಜೂನ್ 24ರಂದು ನಡೆಯಲಿರುವ ನೀಟ್ ಪರೀಕ್ಷೆ ಫಲಿತಾಂಶ ಜುಲೈ 17ರಂದು ಪ್ರಕಟವಾಗಲಿದ್ದು, ಇದು ಸಿಇಟಿ ಫಲಿತಾಂಶಕ್ಕಿಂತ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದರಿಂದ ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯನ್ನು ಏಕಕಾಲದಲ್ಲಿ ಮುಗಿಸಲು ಅನುವು ಮಾಡಿಕೊಡುವಂತೆ ಕೋರಿ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲಿದೆ.

ಈ ಸಂಬಂಧ ಮಂಗಳವಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳ ಸಭೆಯನ್ನು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಕರೆದಿದ್ದಾರೆ.

ಇಂದಿಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ಸಿಇಟಿ ಹಾಗೂ ನೀಟ್ ಫಲಿತಾಂಶಗಳು ವಿಳಂಬವಾಗುವುದರಿಂದ ಇಂಜಿನಿಯರಿಂಗ್ ಕೋರ್ಸು ಪಡೆಯಬಯಸುವ ವಿದ್ಯಾರ್ಥಿಗಳಿಗೂ ಸಮಸ್ಯೆ ತಂದೊಡ್ಡಲಿದೆ. ಅದೇ ರೀತಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳನ್ನು ಪಡೆಯಬಯಸುವ ವಿದ್ಯಾರ್ಥಿಗಳಿಗೂ ತೊಂದರೆಯುಂಟು ಮಾಡಲಿದೆ ಎಂದರು.

ಸಿಇಟಿ ಫಲಿತಾಂಶ ಮೇ 27ಕ್ಕೆ ಪ್ರಕಟವಾಗಲಿದೆ ಮತ್ತು ನೀಟ್ ಫಲಿತಾಂಶ ಜುಲೈ 17ರಂದು ಪ್ರಕಟಗೊಳ್ಳಲಿದೆ. ಈ ಅಂತರದಿಂದಾಗಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ ಬಯಸುವವರಿಗೆ ತೊಂದರೆಯಾಗಲಿದೆ ಎಂದರು.

ಸಿಇಟಿ ಫಲಿತಾಂಶ ಬೇಗ ಬರುವುದರಿಂದ ಜುಲೈ ಅಂತ್ಯದ ವೇಳೆಗೆ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಹೀಗಾಗಿ ವೈದ್ಯಕೀಯ,ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಬಯಸುವವರೂ ಆ ಸೀಟು ಸಿಗುತ್ತದೋ ಇಲ್ಲವೋ ಎಂಬ ಆತಂಕದಿಂದ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕಾಗುತ್ತದೆ. ಪ್ರವೇಶಕ್ಕೆ ಅನಿವಾರ್ಯವಾದ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಅದರೆ ಈ ಪೈಕಿ ಬಹುತೇಕರು ತಮಗೆ ವೈದ್ಯಕೀಯ ಹಾಗೂ ದಂತವೈದ್ಯಕೀಯ ಸೀಟುಗಳು ದೊರೆತರೆ ಅಲ್ಲಿಗೆ ಹೋಗಲು ಬಯಸುವುದರಿಂದ ಕಟ್ಟಿದ ಪ್ರವೇಶ ಶುಲ್ಕದ ಕತೆ ಏನಾಗುತ್ತದೆ?ಅನ್ನುವ ಆತಂಕಕ್ಕೊಳಗಾಗುತ್ತಾರೆ.

ಇದೇ ರೀತಿ ಮತ್ತೊಂದು ಕಡೆ ಇಂಜಿನಿಯರಿಂಗ್ ಕೋರ್ಸುಗಳನ್ನು ಬಯಸುವವರು ಇಂತಹ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುವುದರಿಂದ ರ್ಯಾಂಕಿಂಗ್ ಕಾರಣಕ್ಕಾಗಿ ನಿಗದಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯದೆ ಸಿಕ್ಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಇದರ ಪರಿಣಾಮವಾಗಿ ಏಕಕಾಲಕ್ಕೆ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳನ್ನು ಬಯಸುವ ವಿದ್ಯಾರ್ಥಿಗಳು ತಾವು ಬಯಸಿದ ಸೀಟು ಸಿಕ್ಕಾಗ ಇಂಜಿನಿಯರಿಂಗ್ ಕೋರ್ಸು ಪ್ರವೇಶಕ್ಕಾಗಿ ಕಟ್ಟಿದ ಶುಲ್ಕವನ್ನು ಕಳೆದುಕೊಳ್ಳುವ ಸ್ಥಿತಿ ಬರುತ್ತದೆ.

ಹೀಗಾಗಿ ಈ ವರ್ಷ ಸಿಇಟಿ ಹಾಗೂ ನೀಟ್ ಫಲಿತಾಂಶಗಳನ್ನು ಗಮನಿಸಿಯೇ ಒಟ್ಟಾರೆಯಾಗಿ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಬೇಕಾ?ಎಂಬ ಕುರಿತು ಮಂಗಳವಾರ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News