ಆಪಾದನೆಗಳು, ಅರಸರ ಸಮರ್ಥನೆಗಳು -ಎಂ.ರಘುಪತಿ

Update: 2016-05-17 17:06 GMT

ಭಾಗ 5
ದೇವರಾಜ ಅರಸು ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ, ಶ್ರೀಮಂತ ಕುಳಗಳನ್ನು ಆಯ್ಕೆ ಮಾಡುತ್ತಾರೆಂಬ ಆಪಾದನೆಯಿತ್ತು. ಆದರೆ ಅರಸರ ಆಯ್ಕೆ ಮತ್ತು ಸಮರ್ಥನೆಗಳೇ ಬೇರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕೆಲವು ಮಾನದಂಡಗಳನ್ನು ಪ್ರಯೋಗಿಸುತ್ತಿದ್ದರು. 600 ಎಕರೆ ಜಮೀನು ಹೊಂದಿದ್ದ ಬ್ರಾಹ್ಮಣ ಜಾತಿಗೆ ಸೇರಿದ ಭಾರೀ ಶ್ರೀಮಂತ ಕುಳ ಆರ್.ಎಂ.ದೇಸಾಯಿ, ಈಡಿಗರ ಲಿಕ್ಕರ್ ಧಣಿ ಬಸವರಾಜು ಮತ್ತು ಮಾರ್ಗರೆಟ್ ಆಳ್ವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದರು. ಆಗ ನಾನು ಗೊಂದಲಕ್ಕೊಳಗಾಗಿ, ಇದು ಯಾವ ಲಾಜಿಕ್ ಸರ್ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕವರು, ‘‘‘ದೇಸಾಯಿ ಮತ್ತು ಬಸವರಾಜು, ಇಬ್ಬರೂ ಶ್ರೀಮಂತರು. ಇಬ್ಬರಿಂದಲೂ ಪಕ್ಷಕ್ಕೆ ಅನುಕೂಲವಿದೆ. ಇನ್ನು ಮಾರ್ಗರೆಟ್ ಆಳ್ವ, ಕ್ರಿಶ್ಚಿಯನ್ ಸಮುದಾಯ, ಅಲ್ಪಸಂಖ್ಯಾತರು, ಅದು ನಮ್ಮ ಪಾಲಿಸಿ ಮ್ಯಾಟರ್. ಒಂದು ಮೇಲ್ಜಾತಿಯವರಿಗೆ ಕೊಟ್ಟು ಎರಡನ್ನು ಹಿಂದುಳಿದವರಿಗಾಗಿ ನೀಡಿದರೆ ಯಾರಿಗೂ ಬೇಸರವಾಗುವುದಿಲ್ಲ. ಹೀಗೆ ಮೇಲ್ಜಾತಿಯವರೂ ಬೇಕು, ಉಳ್ಳವರೂ ಬೇಕು, ಇಲ್ಲದವರೂ ಇರಬೇಕು’’ ಎಂದಿದ್ದರು.

ಲಿಕ್ಕರ್ ಲಾಬಿಗೆ ಅರಸು ಹತ್ತಿರ ಎಂಬ ಆಪಾದನೆ ಇತ್ತು. ಅದಕ್ಕೆ ತಕ್ಕಂತೆ ಅರಸು ಲಿಕ್ಕರ್ ಧಣಿಗಳ ಸಭೆ ಕರೆದು ‘‘ಈ ವರ್ಷ ನಿಮ್ಮಿಂದ ಸರಕಾರಕ್ಕೆ 400 ಕೋಟಿ ರೂ. ಬರಬೇಕು, ಅದೇನು ಮಾಡ್ತಿರೋ ಗೊತ್ತಿಲ್ಲ’’ ಎಂದು ಹೇಳಿ ಹರಾಜು ಪ್ರಕ್ರಿಯೆಯನ್ನು ಅವರ ಕೈಗೇ ಒಪ್ಪಿಸಿದ್ದರು. ಕಾನೂನು ಪ್ರಕಾರ ಹರಾಜು ಹಾಕಿದರೆ, ಅವರು ಆಳುಗಳ ಹೆಸರಲ್ಲಿ ಹರಾಜು ಕೂಗಿ, ಕಿಸ್ತು ಬಾಕಿ ಉಳಿಸಿಕೊಂಡು, ಸರಕಾರಕ್ಕೆ ಬೊಕ್ಕಸಕ್ಕೆ, ಆದಾಯಕ್ಕೆ ಕತ್ತರಿ ಹಾಕುತ್ತಿದ್ದರು. ಲಿಕ್ಕರ್ ಧಣಿಗಳ ಈ ತಂತ್ರವನ್ನರಿತ ಅರಸು, ಹಣಕಾಸು ಸಚಿವ ಘೋರ್ಪಡೆಯೊಂದಿಗೆ ಮೊದಲೇ ಚರ್ಚಿಸಿ, ಈ ಪ್ಲಾನ್ ಮಾಡಿದ್ದರು. ಆದರೆ ಹೊರಜಗತ್ತಿಗೆ ಅದು ಲಿಕ್ಕರ್ ಧಣಿಗಳಿಗೆ ಸಹಾಯ ಮಾಡಿದಂತೆ, ಭ್ರಷ್ಟ ವ್ಯವಸ್ಥೆಯನ್ನು ಪೊರೆಯುವಂತೆ ಕಾಣುತ್ತಿತ್ತು. ಆಗಲೂ ನಾನು ಅವರನ್ನು ಪ್ರಶ್ನಿಸಿದ್ದೆ. ಅದಕ್ಕವರು ‘‘ನೋಡಪ್ಪ ರಘು, ಜೇನು ಬಿಚ್ಚೋದಕ್ಕೆ ಮರ ಹತ್ತೀವಿ, ಸ್ವಲ್ಪ ಮೈಮರೆತರೆ ಅನಾಹುತ, ಜಾಣತನದಿಂದ ಬಿಚ್ಚಿದರೆ ಸಿಹಿ. ಬಿಚ್ಚೋವಾಗ ಕೈಗೆ ಜೇನು ಅಂಟೋದು ನೆಕ್ಕೋದು ಸಹಜ. ಆ ನೆಕ್ಕೋದು ಅಂದನಲ್ಲ, ಅದು ನನಗಲ್ಲಪ್ಪ ಪಾರ್ಟಿಗೆ’’ ಎಂದು ಸಮರ್ಥನೆಗಿಳಿಯುತ್ತಿದ್ದರು.

ಒಂದು ಸಲ ಶಾಸನಸಭೆಯಲ್ಲಿ ಜನತಾ ಪಾರ್ಟಿಯ ರಾಜಗೋಪಾಲ್, ‘‘ಬಡವರಿಗೆ ಸರಕಾರದಿಂದ ಮನೆ ಕೊಡ್ತೀರಿ, ಮೊನ್ನೆ ನಮ್ಮೂರಿನಲ್ಲಿ ಗಂಡ-ಹೆಂಡಿರ ಜಗಳದಲ್ಲಿ ಗಂಡ ಸಿಟ್ಟಿನಿಂದ ಗೋಡೆಗೆ ಒದ್ದಾಗ, ಗೋಡೆಯೇ ಮುರಿದು ಬಿತ್ತು. ನಿಮ್ಮ ಆಶ್ರಯ ಮನೆ ಈ ಸ್ಥಿತೀಲಿದೆ ಸ್ವಾಮಿ’’ ಎಂದು ಛೇಡಿಸಿದರು. ಆಗ ಅರಸು, ‘‘ಮೊದಲು ಬಡವರು ಬೀದೀಲಿ ಜಗಳ ಆಡ್ತಿದ್ರು, ಎಲ್ಲರಿಗೂ ಕಾಣ್ತಿತ್ತು. ಈಗ ಕೊನೆಪಕ್ಷ ಮನೆಯ ಒಳಗೆ ಜಗಳ ಮಾಡ್ಕೊಂಡು, ಮನೆ ಗುಟ್ಟು ಹೊರಬರದಂತಾಗಿದೆ, ಅವರು ಗೌರವದಿಂದ ಬದುಕುವಂತಾಗಿದೆ, ಬಡವರ ಮಾನ ಮನೆಯಲ್ಲಿಯೇ ಉಳಿದಿದೆ. ಮನೆ ಗುಣಮಟ್ಟ ಸುಧಾರಿಸುವ ಬಗ್ಗೆ ಕ್ರಮ ಕೈಗೊಳ್ಳೋಣ, ಆದರೆ ಬಡವರಿಗೆ ಸೂರು ಒದಗಿಸುವ ಆಶ್ರಯ ಯೋಜನೆಯೇ ಸರಿ ಇಲ್ಲ ಎನ್ನಬೇಡಿ’’ ಎಂದರು.

ಅಳಿಯ ಡಾ. ನಟರಾಜ್ ಮೇಲೆ ಅಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ರೌಡಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪವಿತ್ತು. ಆ ಆರೋಪಗಳ ನಡುವೆಯೇ ಅರಸು ಹೆಂಡತಿ-ಮಕ್ಕಳ ಒತ್ತಡಕ್ಕೆ ಮಣಿದು, ‘‘ಈ ನಟರಾಜ್‌ಗೆ ನಿಮ್ಮ ಯೂತ್ ಕಾಂಗ್ರೆಸ್‌ನಲ್ಲಿ ಏನಾದರೂ ಆಫೀಸ್ ಬೇರರ್ ಮಾಡಬೇಕಲ್ಲ’’ ಎಂದರು. ನಾನು, ‘‘ಯಾವ ಕಾರಣಕ್ಕೂ ಸಾಧ್ಯವಿಲ್ಲ, ಅವರಿಗೆ ರಾಜಕಾರಣಕ್ಕೆ ಬರಬೇಕೆಂಬ ಆಸೆಯಿದ್ದರೆ, ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಕೆಲಸ ಮಾಡಲಿ, ಜನರ ಮನಸ್ಸನ್ನು ಗೆದ್ದು, ಚುನಾವಣೆಗೆ ನಿಂತು ಗೆಲ್ಲಲಿ. ನನ್ನಿಂದ ಸಾಧ್ಯವಿಲ್ಲ. ಆತನ ಬದಲಿಗೆ ಯಾರಾದರೂ ಹಿಂದುಳಿದವರಿಗೆ ಹೇಳಿ, ಈ ತಕ್ಷಣ ಮಾಡುತ್ತೇನೆ’’ ಎಂದೆ. ಅದಕ್ಕೆ ಅರಸು, ಭುಜದ ಮೇಲೆ ಕೈ ಹಾಕಿ, ‘‘ಚಿಕ್ಕವನಾದರೂ ಒಳ್ಳೆಯ ಯೋಚನೆ ಮಾಡಿದ್ದೀಯ’’ ಎಂದು ಮೆಚ್ಚಿದರು. ಆದರೆ ಡಾ.ನಟರಾಜ್ ಅರಸು ಅವರಿಗೇ ಸಡ್ಡು ಹೊಡೆದು ‘ಇಂದಿರಾ ಬ್ರಿಗೇಡ್’ ಎಂಬ ಯೂತ್ ವಿಂಗ್ ಹುಟ್ಟುಹಾಕಿದ. ಅದರಲ್ಲಿ ಬರೀ ಪುಂಡುಪೋಕರಿಗಳೇ ಸದಸ್ಯರಾಗಿದ್ದರು. ಇದನ್ನು ಕೂಡ ಅರಸು ಅವರೇ ಮುಂದೆ ನಿಂತು ಮಾಡಿಸಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಅಷ್ಟೇ ಅಲ್ಲ, ದಿಲ್ಲಿಯ ಹೈಕಮಾಂಡಿಗೆ ದೂರು ಹೋಯಿತು.

ಕೋಪಗೊಂಡ ಇಂದಿರಾ ಮೇಡಂ. ‘‘ಏನಿದು, ಮೊದಲು ಅದನ್ನು ಕಿತ್ತುಹಾಕಿ, ಇಲ್ಲಾಂದ್ರೆ ನಿಮ್ಮನ್ನು...’’ ಎಂದರು. ಅರಸು ಅಷ್ಟೇ ಕೂಲಾಗಿ, ‘‘ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಹೆಸರು ಕೆಡಿಸಲು ಕೆಲವರು ಇದನ್ನು ಅಸದಂತೆ ಬಳಸಿಕೊಂಡಿದ್ದಾರೆ’’ ಎಂದು ಮೇಡಂಗೆ ಸಮಜಾಯಿಷಿ ಹೇಳಿ, ಸಮಾಧಾನಪಡಿಸಿದರು. ಕೆಎಚ್‌ರೊಂದಿಗೆ ಜಟಾಪಟಿ ಮುಖ್ಯಮಂತ್ರಿಯಾಗಿ ಅರಸು ಕ್ರಾಂತಿಕಾರಕ ಕೆಲಸಗಳನ್ನೇ ಮಾಡುತ್ತಿದ್ದರು. ಆಡಳಿತವೂ ಜನಪರವಾಗಿತ್ತು. ಆದರೂ ನಮ್ಮ ಪಾರ್ಟಿಯ ಒಳಗೇ ಅವರ ಏಳ್ಗೆಯನ್ನು ಸಹಿಸಲಾಗದವರ ವಿರೋಧ ಹೆಚ್ಚಾಗಿತ್ತು. ಅಂಥವರ ನಾಯಕರಾಗಿ ಕೆ.ಎಚ್.ಪಾಟೀಲರಿದ್ದರು. ಹಾಗಂತ ಅವರು ದುಷ್ಟರು ಅಂತಲ್ಲ. ರಾಜಕಾರಣದಲ್ಲಿ ಸಹಜವಾಗಿದ್ದ ಪೈಪೋಟಿ, ತಂತ್ರ, ವಿರೋಧವನ್ನು ಆರೋಗ್ಯಕರವಾಗಿಟ್ಟುಕೊಂಡವರು. ವೈಯಕ್ತಿಕವಾಗಿ ಅವರಿಬ್ಬರೂ ಒಳ್ಳೆಯ ಸ್ನೇಹಿತರು. ಇದನ್ನು ಬಹಳ ಹತ್ತಿರದಿಂದ ಕಂಡಿದ್ದ ನಾನು ಅವರಿಬ್ಬರನ್ನು ಒಂದುಗೂಡಿಸಿದರೆ ಈ ಭಿನ್ನಮತ, ಬಂಡಾಯ, ದೂರು ಕೊಂಚ ಮಟ್ಟಿಗೆ ತಗ್ಗಿ, ಪಕ್ಷ ಸಂಘಟನೆಗೆ ಒಳಿತಾಗಬಹುದೆಂದು ತೀರ್ಮಾನಿಸಿದೆ. ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಆಗಿದ್ದೆನಲ್ಲ, ಕಲಬುರಗಿ, ರಾಯಚೂರು, ಬೀದರ್ ಕಡೆಗಳಲ್ಲಿ ಸಮಾವೇಶವನ್ನು ಆಯೋಜಿಸಿದೆ. ಅದಕ್ಕೆ ಸಂಜಯಗಾಂಯವರು ಬರಲು ಒಪ್ಪಿದರು. ಆಗ ಅವರನ್ನು ಬರಮಾಡಿಕೊಳ್ಳಲು ನಾನು, ಅರಸು, ಕೆ.ಎಚ್. ಪಾಟೀಲ್, ಗುಂಡೂರಾವ್, ಜಾರ್ಜ್, ರೇವಣ್ಣ, ಬೇಗ್ ಹೀಗೆ ಒಂದು ತಂಡವೇ ಹೈದರಾಬಾದ್‌ಗೆ ಹೋದೆವು. ಅಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು.

ಆಗ ಪಾರ್ಟಿ ಪ್ರೆಸಿಡೆಂಟ್ ಆಗಿದ್ದ ಕೆ.ಎಚ್.ಪಾಟೀಲರು, ‘‘ಸಂಜಯ ಗಾಂಗಿಂತ ಮೊದಲು ಇಂದಿರಾ ಗಾಂಯವರು ಕರ್ನಾಟಕಕ್ಕೆ ಬಂದಿದ್ದರೆ ಪಕ್ಷಕ್ಕೆ ಅನುಕೂಲವಾಗುತ್ತಿತ್ತು’’ ಎಂದರು. ‘‘ಸಂಜಯ ಗಾಂ ಕಾರ್ಯಕ್ರಮಗಳು ಈಗಾಗಲೇ ಫಿಕ್ಸ್ ಆಗಿವೆ. ಅವರು ಬಂದುಹೋಗಲಿ ನೋಡೋಣ’’ ಎಂದರು ಅರಸು. ಇಬ್ಬರ ಮಾತಲ್ಲೂ ತಪ್ಪಿರಲಿಲ್ಲ. ಆದರೆ ಇದು ವಾದ-ವಿವಾದಕ್ಕೆ ಕಾರಣವಾಯಿತು. ಇಬ್ಬರು ನಾಯಕರ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಯಿತು. ಕೊನೆಗೆ ಆಗಿನ ಆಂಧ್ರ ಸಿಎಂ ವೆಂಕಟರಾಮನ್ ಮಧ್ಯೆ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನಪಡಿಸಬೇಕಾಯಿತು. ಇದರಲ್ಲಿ ಇನ್ನೂ ಒಂದು ರಾಜಕಾರಣವಿತ್ತು. ನಾನು ಕ್ಯಾಂಪ್ ಆರ್ಗನೈಸ್ ಮಾಡಿದ ಜಾಗ, ಅರಸರಿಗೆ ವಿರುದ್ಧವಿದ್ದ, ಪಾಟೀಲರ ಪಾಳೆಯದಲ್ಲಿದ್ದ ಭೀಮಣ್ಣ ಖಂಡ್ರೆಯ ಕ್ಷೇತ್ರ. ಆ ಕ್ಯಾಂಪ್‌ಗೆ ಹೋಗುವುದು ಬೇಡ ಅಂತ ಅರಸು; ಅಲ್ಲೇ ಆಗಲಿ ಅಂತ ಪಾಟೀಲರು. ಅದೇ ಸಮಯಕ್ಕೆ ಸರಿಯಾಗಿ ಸಂಜಯಗಾಂ ಬೀದರ್‌ಗೆ ಬರುವ ಕಾರ್ಯಕ್ರಮ ರದ್ದಾಯಿತು. ಅರಸು-ಕೆಎಚ್‌ಪಿ ಒಂದಾಗಬೇಕೆಂದು ಸಂಜಯಗಾಂ ಆಸೆಪಟ್ಟಿದ್ದರು.

ಮತ್ತೊಬ್ಬರನ್ನು ಪಾರ್ಟಿ ಪ್ರೆಸಿಡೆಂಟ್ ಮಾಡಿ, ಕೆಎಚ್ ಪಾಟೀಲರನ್ನು ಮಂತ್ರಿ ಮಾಡಿ ಎಂದು ಅರಸು ಅವರಿಗೆ ಶಿಾರಸು ಮಾಡಿದ್ದರು. ಆಶ್ಚರ್ಯವೆಂದರೆ, ಗುಂಡೂರಾವ್ ಮೇಲೆ ಸಂಜಯಗಾಂಗೆ ಪ್ರೀತಿ ಇರಲಿಲ್ಲ. ಅರಸರಿಗೂ ಕೂಡ. ಏಕೆಂದರೆ ಗುಂಡೂರಾವ್ ಮುಖ್ಯಮಂತ್ರಿಯಾಗುವ ಆತುರದಲ್ಲಿದ್ದರು, ಅದಕ್ಕೆ ಬೇಕಾದ ದೂರಾಲೋಚನೆಯಲ್ಲಿ ಮುಳುಗಿದ್ದರು. ಇದು ಅರಸರಿಗೆ ಗೊತ್ತಾಗಿ, ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತುಹಾಕಲು ಯೋಚಿಸುತ್ತಿದ್ದರು. ಇದು ಗುಂಡೂರಾಯರಿಗೆ ಗೊತ್ತಾಗಿ, ನನ್ನ ಮುಂದೆ, ‘‘ಅರಸರಿಂದ ಅನುಕೂಲ ಪಡೆದವನು ನಾನು, ಹಾಗಂತ ನಾನು ಸನ್ಯಾಸಿಯಲ್ಲ’’ ಎಂದು ಕಣ್ಣೀರು ಹಾಕಿದ್ದರು. ಹೈಕದತ್ತ ಅರಸರ ಚಿತ್ತ

 ಈ ಕಲಬುರಗಿ ಕ್ಯಾಂಪ್ ಅಂದಾಕ್ಷಣ ನೆನಪಾಯಿತು ನೋಡಿ... ಅರಸುಗೆ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ಕಂಡರೆ ಭಾರೀ ಪ್ರೀತಿ. ಏಕೆಂದರೆ ಅದು ಇತರೆ ಭಾಗದಂತಲ್ಲ ಎನ್ನುವುದು ಅರಸುಗೆ ಮನವರಿಕೆಯಾಗಿತ್ತು. ಆ ಭಾಗ ಭಾರೀ ಬಡತನ, ಬರಗಾಲಕ್ಕೆ ತುತ್ತಾಗಿತ್ತು. ಆ ಜನರ ಸ್ಥಿತಿ ಕಂಡು ಮರುಕವಿತ್ತು. ಆ ಜನರ ಮುಗ್ಧತೆ, ಆಚಾರ-ವಿಚಾರ ಇಷ್ಟವಾಗಿತ್ತು. ಆ ಭಾಗವನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂದು ಯೋಚಿಸುತ್ತಿದ್ದರು. ಪ್ರತಿ ಹಳ್ಳಿಗೂ ಕುಡಿಯುವ ನೀರು ಕೊಡಬೇಕೆಂದು ಬಯಸಿದ್ದರು. ಆಲಮಟ್ಟಿ ಡ್ಯಾಂಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಎತ್ತಿಟ್ಟಿದ್ದರು. ಟಿಬಿ ಡ್ಯಾಂನಿಂದ ರಾಯಚೂರಿಗೆ ನೀರು ಹರಿಸಿದ್ದರು. ಹಾಗೆಯೇ ಟಿಬಿ ಡ್ಯಾಂನಲ್ಲಿ ಉಳಿದುಕೊಳ್ಳುವುದಕ್ಕೂ ಅರಸರು ತುಂಬಾ ಇಷ್ಟಪಡುತ್ತಿದ್ದರು. ರಾತ್ರಿ ಅಲ್ಲಿ ತಂಗಿದರೆ, ಬೆಳಗ್ಗೆ ಎದ್ದು ಕಾಲುವೆ ಮೇಲೆಯೇ ವಾಕಿಂಗ್ ಹೊರಟು ಬಿಡುತ್ತಿದ್ದರು.

ಆಗ ಎದುರಿಗೆ ಯಾರೇ ಸಿಕ್ಕಲಿ, ತಾವೊಬ್ಬ ಮುಖ್ಯಮಂತ್ರಿ ಎನ್ನುವುದನ್ನು ಮರೆತು ಸಾಮಾನ್ಯ ರೈತನಂತೆ ಹೆಸರು ಗೊತ್ತಿದ್ದರೆ ಸರಿ, ಇಲ್ಲಾಂದರೆ ‘‘ಏನಪ್ಪ, ಯಾವೂರು, ಹೇಗಿದೆ ಮಳೆ, ಬಿತ್ತನೆ ಏನಾದ್ರು ಮಾಡಿದಿರ ಈ ಸಲ’’ ಎಂದು ಮಾತಿಗೆ ಎಳೆಯುತ್ತಿದ್ದರು. ಅವರ ಕಷ್ಟ-ಸುಖವನ್ನೆಲ್ಲ ಕೇಳುತ್ತಿದ್ದರು. ಮಳೆ ಬಂದರೆ, ರೈತರ ಬದುಕು ಹಸನಾದರೆ ರಾಜ್ಯ ಸುಭಿಕ್ಷ ಎನ್ನುವುದು ಅರಸರ ಸಾಮಾನ್ಯ ತಿಳುವಳಿಕೆಯಾಗಿತ್ತು. ಅರಸು ವಿರುದ್ಧ ಚೆಡ್ಡಿ ಚಳವಳಿ ಆಶ್ಚರ್ಯಕರ ಸಂಗತಿ ಎಂದರೆ, ಅರಸು ಸರಕಾರದ ವಿರುದ್ಧ ಮಂಡ್ಯದ ರೈತರು ಎದ್ದು ನಿಂತರು. ದೇವರಾಜ ಅರಸರ ಮಂತ್ರಿಮಂಡಲದಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದ, ಒಕ್ಕಲಿಗ ಸಮುದಾಯದ ವಿದ್ಯಾವಂತ ಯುವ ರಾಜಕಾರಣಿ ಎಸ್.ಎಂ.ಕೃಷ್ಣ, ರಾಜೀನಾಮೆ ಕೊಟ್ಟಾಗ, ಸಹಿಸಲಸಾಧ್ಯವಾದ ಸಂಕಟಕ್ಕೀಡಾದರು. ಕೃಷ್ಣರ ರಾಜೀನಾಮೆಗೆ ಕಾರಣ, ವರುಣಾ ನಾಲೆ. ಸ್ಥಳೀಯ ರಾಜಕಾರಣ. ಒಕ್ಕಲಿಗ ಸಮುದಾಯದ ಒಲೈಸುವಿಕೆ. ಕಾವೇರಿ ನೀರನ್ನು ಚಾಮರಾಜನಗರ ಜಿಲ್ಲೆಗೆ ಹರಿಸುವ ವರುಣಾ ಯೋಜನೆಯ ವಿರುದ್ಧ ಇಡೀ ಮಂಡ್ಯ ಜಿಲ್ಲೆಯ ರೈತರು ವಿರೋಧ ವ್ಯಕ್ತಪಡಿಸಿದರು. ಹಾಗೆ ನೋಡಿದರೆ ಈ ಯೋಜನೆ ಮೈಸೂರು ಮಹಾರಾಜರು ಕನ್ನಂಬಾಡಿ ಕಟ್ಟುವಾಗಲೇ ವರುಣಾ ನಾಲೆಯ ಡಿಸೈನ್ ಇತ್ತು. ತಮಿಳುನಾಡಿಗೆ ಬಿಟ್ಟು ಹೆಚ್ಚಾದ ನೀರನ್ನು ವರುಣಾ ನಾಲೆಗೆ ತಿರುಗಿಸುವ ಯೋಜನೆ ಅದಾಗಿತ್ತು.

ಇದು ಗೊತ್ತಿದ್ದೂ ಹಿರಿಯ ಮಾನವಂತ ರಾಜಕಾರಣಿ ಕೆ.ವಿ.ಶಂಕರಗೌಡರು ಚಳವಳಿಯ ನೇತೃತ್ವ ವಹಿಸಿದರು. ಆಗ ಅರಸು ಅವರ ನೀಲಿಗಣ್ಣಿನ ಹುಡುಗ ಕೃಷ್ಣ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರೈತರನ್ನು ಬೆಂಬಲಿಸಿ, ಅರಸು ಸರಕಾರದ ವಿರುದ್ಧ ಮಂಡ್ಯದಲ್ಲಿ ಧರಣಿ ಕೂತರು. ಹಾಗೆ ನೋಡಿದರೆ, ಶಂಕರಗೌಡರು ಮತ್ತು ಎಸ್.ಎಂ.ಕೃಷ್ಣ, ಇಬ್ಬರು ಆಡಳಿತ ಪಕ್ಷಕ್ಕೆ ಸೇರಿದ ಇಂದಿರಾ ಕಾಂಗ್ರೆಸ್‌ನವರು. ಬೆಂಬಲಿಸಿ ಬೆನ್ನಿಗೆ ನಿಲ್ಲಬೇಕಾದವರೆ ವಿರೋಗಳಾದರು. ಬಹುಸಂಖ್ಯಾತ ಮೇಲ್ಜಾತಿಯ ಅಸಹನೆಗೆ ವರುಣಾ ನೆಪವಾಯಿತು. ಅಷ್ಟೇ ಅಲ್ಲ, ಶಂಕರಗೌಡರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ರೈತರು, ಅರಸು ಸರಕಾರದ ವಿರುದ್ಧ ಮಂಡ್ಯದಿಂದ ಬೆಂಗಳೂರಿನವರೆಗೆ ಚೆಡ್ಡಿ ಮೆರವಣಿಗೆ ಹಮ್ಮಿಕೊಂಡರು. ಸುಮಾರು ಒಂದೂವರೆ ಲಕ್ಷ ಜನ ರೈತರು ಚೆಡ್ಡಿ ಮೆರವಣಿಗೆಯಲ್ಲಿ ಬೆಂಗಳೂರಿಗೆ ಬಂದರು, ಕಬ್ಬನ್ ಪಾರ್ಕ್‌ನಲ್ಲಿ ಬಹಿರಂಗ ಸಭೆ ಏರ್ಪಡಿಸಿದರು.

ಆಳುವ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಆದರೆ ಮುಖ್ಯಮಂತ್ರಿ ದೇವರಾಜ ಅರಸು, ನೇರ ಕಬ್ಬನ್ ಪಾರ್ಕ್‌ಗೆ ಹೋಗಿ, ನೆರೆದಿದ್ದ ಒಂದೂವರೆ ಲಕ್ಷ ರೈತರನ್ನು ಉದ್ದೇಶಿಸಿ, ‘‘ನಾನೂ ಕೂಡ ರೈತ. ಉತ್ತು ಬಿತ್ತಿ ಬೆಳೆ ತೆಗೆದವನು, ಕೃಷಿ ಕಷ್ಟ ಗೊತ್ತಿರುವವನು. ವರುಣಾ ನಾಲಾ ಯೋಜನೆಯಿಂದ ಮಂಡ್ಯದ ರೈತರಿಗೆ ಒಂದು ಹನಿ ನೀರು ಕೂಡ ಕಡಿಮೆಯಾಗುವುದಿಲ್ಲ. ಇದು ಚಾಮರಾಜನಗರದ ಜನರ ಕುಡಿಯುವ ನೀರಿನ ಯೋಜನೆ, ಇದರಿಂದ ನಿಮಗೇನು ತೊಂದರೆ ಇಲ್ಲ, ನೀರು ಕೊಟ್ಟ ಪುಣ್ಯ ನಿಮ್ಮದಾಗುತ್ತದೆ’’ ಎಂದು ಮನವಿ ಮಾಡಿಕೊಂಡರು. ಅರಸು ಬಂದು ನಿಂತ ರೀತಿಗೆ, ಮಾತಿಗೆ ರೈತರು ಮರು ಮಾತನಾಡದೆ ಮಂಡ್ಯಕ್ಕೆ ಹೋದರು. ಈ ರೀತಿ ಪ್ರತಿಭಟನಾನಿರತ ರೈತರ ಮುಂದೆ ಹೋಗಿ ನಿಂತ ಮುಖ್ಯಮಂತ್ರಿ, ಅರಸು ಒಬ್ಬರೆ. ಇದನ್ನು ಇಲ್ಲಿ ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಇತ್ತೀಚೆಗೆ ಬಯಲು ಸೀಮೆ ರೈತರು ಕುಡಿಯುವ ನೀರು ಕೇಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಆಗ ಆಡಳಿತಾರೂಢ ಸರಕಾರ ಅವರ ಮೇಲೆ ಪೊಲೀಸರನ್ನು ಛೂಬಿಟ್ಟು, ಲಾಠಿ ರುಚಿ ತೋರಿಸಿ, ಬಂಸಿ ಕಂಬಿ ಹಿಂದೆ ಕೂರಿಸಿತು. ಅರಸರಿಗೂ ಇವರಿಗೂ ಇರುವ ವ್ಯತ್ಯಾಸ ಇದೇ.

ರಾಜೀನಾಮೆ ರಾದ್ಧಾಂತ
ಮಂಡ್ಯದ ಒಕ್ಕಲಿಗರು ದೇವರಾಜ ಅರಸು ಸರಕಾರದ ವಿರುದ್ಧ ಬೀದಿಗಿಳಿದಾಗ, ಅರಸರ ಕಾಂಗ್ರೆಸ್ ಪಕ್ಷದೊಳಗಿದ್ದ ಮೇಲ್ಜಾತಿ ಮನಸುಗಳ ಅಸಹನೆ ಕಟ್ಟೆಯೊಡೆಯಿತು. ಅದರ ಲವಾಗಿ ಆಡಳಿತ ಪಕ್ಷದ ಸುಮಾರು 40 ಶಾಸಕರು ಮುಖ್ಯಮಂತ್ರಿ ಅರಸು ಸರಕಾರದ ವಿರುದ್ಧ ಬಂಡಾಯವೆದ್ದು, ರಾಜೀನಾಮೆ ಸಲ್ಲಿಸಿದರು. ಶಾಸಕರು ಹೀಗೆ ಏಕಾಏಕಿ ಸರಕಾರದ ವಿರುದ್ಧ ಬಂಡಾಯವೆದ್ದದ್ದನ್ನು ಕಂಡ 8 ಮಂತ್ರಿಗಳು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸರಕಾರದಿಂದ ಹೊರಬಂದರು. ಅದರಲ್ಲಿ ಲಿಂಗಾಯತ ಕೋಮಿನ ನಾಯಕ ಕೆ.ಎಚ್.ಪಾಟೀಲ್, ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ, ಹುಚ್ಚಮಾಸ್ತಿಗೌಡರೂ ಸೇರಿದ್ದರು. ಮುಂದುವರಿದು, ಕೆ.ಎಚ್.ಪಾಟೀಲ್ ನೇತೃತ್ವದಲ್ಲಿ ‘ರೆಡ್ಡಿ ಕಾಂಗ್ರೆಸ್’ ಎಂಬ ಪಕ್ಷ ರಚಿಸಿದರು. ಚುನಾವಣೆ ಎದುರಿಸಲು ಸಿದ್ಧರಾದರು. ಇದು ದೇವರಾಜ ಅರಸು ಅವರಿಗೆ ಭಾರೀ ಅವಮಾನಕ್ಕೀಡುಮಾಡಿತು. ಆದರೂ ಅಪಾರ ತಾಳ್ಮೆಯ ಅರಸು ನೋವನ್ನು ನುಂಗಿಕೊಂಡರು.

1977ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗಾಂಬಝಾರ್‌ನಲ್ಲೊಂದು ಪ್ರಹಸನ ನಡೆಯಿತು. ಅದೇನಪ್ಪ ಅಂದರೆ, ಅದಾಗಲೇ ಅರಸು ಮುಖ್ಯಮಂತ್ರಿಯಾಗಿ ಐದು ವರ್ಷ ಕಳೆಯುತ್ತಾ ಬಂದಿತ್ತು, ಸರಕಾರದ ಬಗ್ಗೆ ಅವರ್ಷನ್ ಶುರುವಾಗಿತ್ತು, ತುರ್ತು ಪರಿಸ್ಥಿತಿಯ ಕಾರಣಕ್ಕೆ ಕಾಂಗ್ರೆಸ್ ಕಂಡರೆ ಜನರಿಗೆ ಸಿಟ್ಟಿತ್ತು, ಅರಸು ವಿರುದ್ಧ ಮೇಲ್ಜಾತಿ ಜನ ಒಂದಾಗಿ ಬಹಿರಂಗವಾಗಿ ಮಾತನಾಡುವುದು ಹೆಚ್ಚಾಗಿತ್ತು. ಅಂತಹ ಸಂದರ್ಭದಲ್ಲಿ ಗಾಂಬಝಾರ್‌ನಲ್ಲೊಂದು ಚುನಾವಣಾ ಪ್ರಚಾರ ಭಾಷಣ... ಸರ್ಕಲ್‌ನಲ್ಲಿ ನಿಂತು ಅರಸು ಮಾತನಾಡಬೇಕೆನ್ನುವಷ್ಟರಲ್ಲಿ, ನೆರೆದಿದ್ದ ಜನರಿಂದ ‘‘ಜೆಪಿ ಜಿಂದಾಬಾದ್, ಇಂದಿರಾ ಮುರ್ದಾಬಾದ್’’ ಎಂಬ ಜೋರು ಘೋಷಣೆ. ನನಗೆ ಆಶ್ಚರ್ಯವಾಗಿದ್ದೇನೆಂದರೆ, ಅರಸು ಅವರ ಸಹನೆ. ‘‘ನೋಡ್ರಪ್ಪ ಇಲ್ಲಿಗೆ ಬಂದ್ ಕೂಗ್ತಿರೋ ನೀವು ಮಸಾಲೆದೋಸೆ ತಿನ್ನೋರು, ಸೂಪ್ ಕುಡಿಯೋರು. ನಾವು ಅಂಬ್ಲಿ, ರಾಗಿ ಮುದ್ದೆ, ಜೋಳದ ರೊಟ್ಟಿ ತಿನ್ನೋ ಜನ. ಅಂಬ್ಲಿ ಕುಡಿಯೋರು ನಮ್ಮ ಜೊತೆ ಇದಾರೆ. ಯಾರು ಬೇಕು ಅನ್ನುವುದನ್ನು ಜನ ನಿರ್ಣಯ ಮಾಡಲಿದ್ದಾರೆ’’ ಎಂದರು. ಅರಸು ಹೇಳಿದಂತೆಯೇ ಆಯಿತು, ಲಿತಾಂಶವೂ ಬಂತು. 28ಕ್ಕೆ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಅರಸು ಎಲ್ಲರ ಬಾಯಿ ಮುಚ್ಚಿಸಿದ್ದರು. ಗೌಡರ ಹಠ, ಮತ್ತೆ ಪ್ರಯೋಗ

ಕರ್ನಾಟಕದಲ್ಲೇನೋ ಅರಸು ಗೆದ್ದರು. ಆದರೆ ದೇಶಾದ್ಯಂತ ಕಾಂಗ್ರೆಸ್ ಧೂಳೀಪಟವಾಯಿತು. ಕೇಂದ್ರದಲ್ಲಿ ಜನತಾ ಸರಕಾರ ರಚನೆಯಾಯಿತು. ಇಲ್ಲಿ, ಕರ್ನಾಟಕದಲ್ಲಿ ದೇವರಾಜ ಅರಸು ಅವರ ಸರಕಾರದ ವಿರುದ್ಧವಿದ್ದ ದೇವೇಗೌಡ, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ವೀರೇಂದ್ರ ಪಾಟೀಲರು ಜಾಗೃತರಾದರು. ಕೇಂದ್ರ ಸರಕಾರ ಅಕಾರಕ್ಕೆ ಬಂದ ಎರಡೇ ತಿಂಗಳಿಗೆ ಅವರ ಮೇಲೆ ಒತ್ತಡ ತರಲು ದಿಲ್ಲಿ ನಾಯಕರ ಮನೆ ಬಾಗಿಲು ಬಡಿದರು. ಮೇಲಿಂದ ಮೇಲೆ ದಿಲ್ಲಿಗೆ ಹೋಗಿ, ದೇವರಾಜ ಅರಸರ ಸರಕಾರವನ್ನು ಕಿತ್ತೊಗೆಯುವಲ್ಲಿ, ಅರಸು ಭ್ರಷ್ಟಾಚಾರವನ್ನು ತನಿಖಿಸಲು ಗ್ರೋವರ್ ಆಯೋಗ ನೇಮಕ ಮಾಡಿಸುವಲ್ಲಿ ಯಶಸ್ವಿಯೂ ಆದರು. ಚುನಾಯಿತ ಸರಕಾರವನ್ನೂ ಕಿತ್ತು ಹಾಕಿಸಿದರು. ಭ್ರಷ್ಟಾಚಾರ ತನಿಖೆಯ ನೆಪದಲ್ಲಿ ಕೊಡಬಾರದ ಕಷ್ಟ ಕೊಟ್ಟರು.
 
ಆಗ ಅರಸು ಕೇಂದ್ರ ಸರಕಾರಕ್ಕೆ ಮತ್ತು ಸಿಬಿಐಗೆ ಒಂದು ಮಾತು ಹೇಳಿದ್ದರು, ‘‘ನೀವು ನನ್ನ ಮೇಲೆ ಯಾವ ಥರದ ತನಿಖೆ ಬೇಕಾದರೂ ಮಾಡಿ, ನಾನು ಸಿದ್ಧ. ಆದರೆ ನನ್ನ ಆರೋಪಗಳಿಗೆ ಸಂಬಂಸಿದಂತೆ ಅಕಾರಿಗಳನ್ನಾಗಲಿ, ಇತರರನ್ನಾಗಲಿ ವಿಚಾರಗೊಳಪಡಿಸುವ ಅಕಾರ ನಿಮಗಿಲ್ಲ. ರಾಜ್ಯಪಾಲರ ಆಡಳಿತಾವಯಲ್ಲಿ ವಿಚಾರಣೆ ಮಾಡಲಿಕ್ಕೆ ನಿಮಗೆ ಅಕಾರವಿಲ್ಲ’’ ಎಂದಿದ್ದರು. ಅಂದರೆ ತಮ್ಮನ್ನು ನಂಬಿದ ಅಕಾರಿಗಳಾಗಲಿ, ಪಕ್ಷದವರಾಗಲಿ, ಇತರರಾಗಲಿ ವಿಚಾರಣೆಗೆ ಒಳಪಡಿಸುವುದು, ವೃಥಾ ತೊಂದರೆ ಕೊಡುವುದು ಅರಸು ಅವರಿಗೆ ಇಷ್ಟವಿರಲಿಲ್ಲ. ಅದನ್ನು ಅವರು ಮಾಡಲೂ ಇಲ್ಲ. ಕೇವಲ ಐದು ವರ್ಷದ ಅಕಾರವಯಲ್ಲಿ ಕಾಣಬಾರದ್ದನ್ನೆಲ್ಲ ಕಂಡ, ಸಹಿಸಲಸಾಧ್ಯವಾದ ಸಂಕಟಗಳನ್ನು ಸಹಿಸಿದ ದೇವರಾಜ ಅರಸು, 1978ರ ವಿಧಾನಸಭಾ ಚುನಾವಣೆಗೆ ಎಲ್ಲವನ್ನು ಕೊಡವಿ ಫೀನಿಕ್ಸ್ ಹಕ್ಕಿಯಂತೆ ಎದ್ದುಬಂದರು. ತಾವು ಬೆಳೆಸಿದವರೇ ಬಿಟ್ಟುಹೋದರೂ, ಕಷ್ಟ ಕೊಟ್ಟರೂ ಮತ್ತೆ ತಮ್ಮ ಮೂಲಮಂತ್ರವಾದ ಸಾಮಾಜಿಕ ನ್ಯಾಯಕ್ಕೇ ಜೋತುಬಿದ್ದರು. ರಾಜಕಾರಣವೆಂಬ ಚದುರಂಗದಾಟಕ್ಕೆ ಬಿಸಿ ರಕ್ತದ ತರುಣರ ಪಡೆಯನ್ನು ಮತ್ತೆ ತಂದು ನಿಲ್ಲಿಸಿದರು.

ಆ ತಂಡದಲ್ಲಿ ಟಿ.ಬಿ.ಜಯಚಂದ್ರ(ಇಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿ), ಕೆ.ಆರ್.ರಮೇಶ್‌ಕುಮಾರ್(ಮಾಜಿ ಸ್ಪೀಕರ್), ಚೌಡರೆಡ್ಡಿ, ಡಿ.ಟಿ.ರಾಮು, ಎಚ್.ವಿಶ್ವನಾಥ್, ಎಂ.ಸಿ.ನಾಣಯ್ಯ, ಬಿ.ಎ.ಮೊಹಿದ್ದೀನ್, ರೊಡ್ರಿಗಸ್, ಮೋಟಮ್ಮ, ಎಸ್.ಎಂ. ಯಾಹ್ಯ, ಬಿ.ಬಿ.ಚಿಮ್ಮನಕಟ್ಟಿಯಂತಹ ಎಲ್ಲ ಜಾತಿಯ, ಸಮುದಾಯದ ಸುಮಾರು 40 ಜನ ಯುವಕರಿದ್ದರು. ಕೇಂದ್ರದಲ್ಲಿ ಜನತಾ ಸರಕಾರವಿದ್ದರೂ, ಇಂದಿರಾ ಗಾಂ ಸೋತಿದ್ದರೂ, ದೇಶದೆಲ್ಲೆಡೆ ಕಾಂಗ್ರೆಸ್ ವಿರೋ ಅಲೆ ಇದ್ದರೂ, ಕರ್ನಾಟಕದ ಜನ ಕಾಂಗ್ರೆಸ್ಸನ್ನು 149 ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ದೇವರಾಜ ಅರಸು ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಆರಿಸಿಕೊಂಡಿದ್ದರು. ಇದು ಅರಸು ಅವರ ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News