ಭಾರತ ಕಾಫಿಗೆ ಪ್ರತಿಕೂಲ ಹವಾಮಾನ: 2 ದಶಕದಲ್ಲೇ ಕನಿಷ್ಠ ಉತ್ಪಾದನೆ

Update: 2016-05-17 18:13 GMT

ಮುಂಬೈ, ಮೇ 17: ಮುಂದಿನ ಬೆಳೆ ಹಂಗಾಮಿನಲ್ಲಿ ದೇಶದ ಕಾಫಿ ಉತ್ಪಾದನೆ ಶೇ.25ರಷ್ಟು ಕುಸಿಯುವ ಸಾಧ್ಯತೆ ಇದ್ದು, ಎರಡು ದಶಕಗಳಲ್ಲೇ ಕನಿಷ್ಠ ಪ್ರಮಾಣದ ಕಾಫಿ ಉತ್ಪಾದನೆಯಾಗುವ ಸಾಧ್ಯತೆ ಇದೆ. ಕಾಫಿ ಹೂ ಬಿಡುವ ಹಂತದಲ್ಲಿ ಮಳೆ ಅಭಾವ ಹಾಗೂ ಅಧಿಕ ಉಷ್ಣಾಂಶದ ಕಾರಣದಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಕಾಫಿ ಉದ್ಯಮ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಾಫಿ ಉತ್ಪಾದನೆಯಲ್ಲಿ ಬ್ರೆಜಿಲ್ ಹಾಗೂ ವಿಯೆಟ್ನಾಂಗಿಂತ ತೀರಾ ಹಿಂದಿರುವ ಭಾರತ, ವಿಶ್ವದಲ್ಲಿ ಆರನೆ ಸ್ಥಾನದಲ್ಲಿದೆ. ಭಾರತದಲ್ಲಿ ಉತ್ಪಾದನೆ ಕುಸಿತದಿಂದಾಗಿ ಜಾಗತಿಕ ಮಟ್ಟದಲ್ಲಿ ಕಾಫಿ ಬೆಲೆ ಏರಿಕೆಗೆ ಕಾರಣವಾಗಲಿದೆ. ಈಗಾಗಲೇ ಅಗ್ರಗಣ್ಯ ಕಾಫಿ ಉತ್ಪಾದಕ ದೇಶವಾದ ಬ್ರೆಜಿಲ್‌ನಲ್ಲಿ ಉತ್ಪಾದನೆ ಕುಸಿತದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಗಗನಮುಖಿಯಾಗಿದೆ.
ಮಹತ್ವದ ಕಾಫಿ ಹೂ ಬಿಡುವ ಹಂತದಲ್ಲಿ ಒಣ ಹವೆ ಬಹುತೇಕ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ. ತೀರಾ ಕಠಿಣ ಅಂದಾಜಿನ ಪ್ರಕಾರ ಕೂಡಾ ಶೇ.25ರಷ್ಟು ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಬಾಬಾ ಪಿ.ಎಸ್.ಬೇಡಿ ರಾಯ್ಟರ್ಸ್‌ ಸುದ್ದಿಸಂಸ್ಥೆ ಜತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ.
ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.70ರಷ್ಟಿದೆ. ಈ ವರ್ಷದ ಸೆಪ್ಟಂಬರ್ 30ರಂದು ಅಂತ್ಯವಾಗುವ ಕಾಫಿ ಋತುವಿನಲ್ಲಿ ಭಾರತ ಸುಮಾರು 3.5 ಲಕ್ಷ ಟನ್ ಕಾಫಿ ಉತ್ಪಾದಿಸುವ ಅಂದಾಜು ಇದೆ ಎಂದು ಕಾಫಿ ಬೋರ್ಡ್ ಹೇಳಿದೆ. ಆದರೆ ಕರ್ನಾಟಕದ ಉತ್ಪಾದನೆಯಲ್ಲಿ ಶೇ.25ರಷ್ಟು ಕುಸಿತವಾಗುವ ಹಿನ್ನೆಲೆಯಲ್ಲಿ, 2016-17ನೆ ಬೆಳೆ ವರ್ಷದಲ್ಲಿ ಇದು 2.63 ಲಕ್ಷ ಟನ್‌ಗೆ ಕುಸಿಯುವ ನಿರೀಕ್ಷೆ ಇದೆ. ಇದು 1988-89ರ ಬಳಿಕ ಕನಿಷ್ಠ ಉತ್ಪಾದನೆಯಾಗಿದೆ.
ಕಾಫಿ ಬೋರ್ಡ್ 2016-17ನೆ ಸಾಲಿನ ಕಾಫಿ ಬೆಳೆ ಅಂದಾಜಿನ ಮೊದಲ ವರದಿಯನ್ನು ಜೂನ್ ಮಧ್ಯಭಾಗದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಮಂಡಳಿಯಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿರುವ ಡಿ.ಆರ್.ಬಾಬು ರೆಡ್ಡಿ ಪ್ರಕಟಿಸಿದ್ದಾರೆ. ಕಳ್ಳಸಾಗಣೆೆ ಮೂಲಕ ತಂದ ಏಳು ಗಿಡಗಳೊಂದಿಗೆ 1670ರಲ್ಲಿ ಕಾಫಿ ಬೆಳೆ ಆರಂಭಿಸಿದ ಭಾರತದಲ್ಲಿ ಪ್ರಮುಖವಾಗಿ ರೊಬಸ್ಟಾವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ಇನ್‌ಸ್ಟಂಟ್ ಕಾಫಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಮೇಲಿಂದ ಮೇಲೆ ಬರ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕೆಳಕ್ಕೆ ಹೋಗಿದೆ. ಕಳೆದ ಬರ ವರ್ಷದ ಮಾರ್ಚ್ ತಿಂಗಳಲ್ಲಿ ಮಳೆ ಕಡಿಮೆ ಬಿದ್ದಿರುವುದು ಇಳುವರಿ ಕುಂಠಿತವಾಗಲು ಕಾರಣ ಎಂದು ಅವರು ವಿವರಿಸುತ್ತಾರೆ.

ದಕ್ಷಿಣ ಭಾರತದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಾರ್ಚ್‌ನಿಂದ ಮೇ ಮಧ್ಯಭಾಗದವರೆಗೆ ಬೀಳುವ ವಾಡಿಕೆ ಮಳೆಯ ಪೈಕಿ ಶೇ.70ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ. ನೀರಿನ ಕೊರತೆಯ ಜತೆಗೆ ಸಾಮಾನ್ಯಕ್ಕಿಂತ ಅಧಿಕವಾಗಿದ್ದ ಬೇಸಿಗೆ ಉಷ್ಣಾಂಶ ಪ್ರಮಾಣ ಕೂಡಾ ಉತ್ಪಾದನೆ ಕುಂಠಿತವಾಗಲು ಕಾರಣ. ಇದರಿಂದಾಗಿ ಕಾಫಿ ಹೂವುಗಳು ಕಾಳುಕಟ್ಟುವ ಮಹತ್ವದ ಹಂತದಲ್ಲಿ ಇವುಗಳನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದು ದೊಡ್ಡ ಕಾಫಿ ಬೆಳೆಗಾರ ಅನಿಲ್ ಕುಮಾರ್ ಭಂಡಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News