ಬಿಜೆಪಿ ಈಗ ಏಕೈಕ ರಾಷ್ಟ್ರೀಯ ಪಕ್ಷ!
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಲಿತಾಂಶ ಪ್ರಕಟವಾಗಿದ್ದು, ಈಶಾನ್ಯ ರಾಜ್ಯವಾದ ಅಸ್ಸಾಂ ಬಲಪಂಥೀಯ ಬಿಜೆಪಿ ತೆಕ್ಕೆಗೆ ಬಿದ್ದಿದ್ದರೆ, ದಕ್ಷಿಣ ರಾಜ್ಯವಾದ ಕೇರಳ ಎಡಪಕ್ಷಗಳ ಮೈತ್ರಿಕೂಟಕ್ಕೆ ಒಲಿದಿದೆ. ಜಯಲಲಿತಾ ಹಾಗೂ ಮಮತಾ ಬ್ಯಾನರ್ಜಿ ಕ್ರಮವಾಗಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಅಕಾರ ಉಳಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರತಿ ರಾಜ್ಯದಲ್ಲಿ ಪ್ರಾಬಲ್ಯ ಹೊಂದಿ ನೈಜ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷ ಇದೀಗ ವೈಭವೀಕೃತ ಪ್ರಾದೇಶಿಕ ಪಕ್ಷವಾಗಿ ಸಂಕುಚಿತಗೊಂಡಿರುವುದು ಈ ಚುನಾವಣೆಯ ಲಿತಾಂಶದಿಂದ ಸ್ಪಷ್ಟವಾಗಿದೆ.
ಕಾಂಗ್ರೆಸ್ ಪತನ ಕೆಲವೊಂದು ವೈಯಕ್ತಿಕ ಚುನಾವಣಾ ಹಿನ್ನಡೆಗಳಿಗೆ ಸೀಮಿತವಾಗಿಲ್ಲ. 2013ರ ಬಳಿಕ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಕಾಂಗ್ರೆಸ್ ಅವನತಿಯ ಹಾದಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜಸ್ಥಾನ ಹಾಗೂ ದಿಲ್ಲಿಯ ಹೊರತಾಗಿ ಕಾಂಗ್ರೆಸ್ ಪಕ್ಷ ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹೀನಾಯ ಸೋಲು ಕಂಡಿದೆ. ಇದೀಗ ಸೋಲಿನ ಸರಣಿಗೆ ಕೇರಳ ಹಾಗೂ ಅಸ್ಸಾಂ ಸೇರ್ಪಡೆಯಾಗಿವೆ. ಎರಡೂ ರಾಜ್ಯಗಳಲ್ಲಿ ಇದು ಸರಕಾರಗಳನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ ಮತಹಂಚಿಕೆ ಪ್ರಮಾಣ ಕೂಡಾ ಗಣನೀಯವಾಗಿ ಕುಸಿದಿದೆ.
ಎಲ್ಲೆಲ್ಲಿ ಸ್ವಲ್ಪಮಟ್ಟಿಗಾದರೂ ಅಸ್ತಿತ್ವ ಉಳಿಸಿಕೊಂಡಿದೆಯೋ ಅದೆಲ್ಲ ಸ್ಥಳೀಯ ಅಥವಾ ಪ್ರಾದೇಶಿಕ ಪಕ್ಷಗಳ ಜತೆ ಮಾಡಿಕೊಂಡ ಮೈತ್ರಿ ಕಾರಣದಿಂದ ಆ ಪಕ್ಷಕ್ಕೆ ಅಸ್ತಿತ್ವ ಉಳಿದಿದೆ. ಉದಾಹರಣೆಗೆ ತಮಿಳುನಾಡಿನಲ್ಲಿ ಡಿಎಂಕೆ ಜತೆ ಸೇರಿ, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ, ಬಿಹಾರದಲ್ಲಿ ಆರ್‌ಜೆಡಿ- ಜೆಡಿಯು ಜತೆ ಕೈಜೋಡಿಸಿದ್ದರಿಂದ ಒಂದಷ್ಟು ಲಾಭವಾಗಿದೆ. ಅಕೃತವಾಗಿ ಅಲ್ಲದಿದ್ದರೂ, ಕಾಂಗ್ರೆಸ್ ಸೋಲಿನ ಹಲವು ಕಾರಣಗಳ ಪೈಕಿ ಪಕ್ಷದ ಹಿರಿಯ ಮುಖಂಡರ ಭಿನ್ನಮತ ಕೂಡಾ ಪಕ್ಷದ ಅವಕಾಶಕ್ಕೆ ಮಾರಕವಾಗಿ ಪರಿಣಮಿಸಿದೆ. ಉದಾಹರಣೆಗೆ ಅಸ್ಸಾಂನಲ್ಲಿ ಹಿಮಾಂತ ವಿಶ್ವ ಶರ್ಮಾ, ತಮಿಳುನಾಡಿನಲ್ಲಿ ಜಿ.ವಾಸನ್, ಅರುಣಾಚಲ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಕೂಡಾ ಹಿರಿಯ ನಾಯಕರ ಭಿನ್ನಮತವೇ ಪಕ್ಷಕ್ಕೆ ಮುಳುವಾಗಿದೆ.
ಕಾಂಗ್ರೆಸ್‌ನ ದೀರ್ಘಾವ ಕುಸಿತದ ಆರಂಭಿಕ ಹಂತದಲ್ಲಿ ಅಂದರೆ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಬಲ ಪಾಲುದಾರ ಪಕ್ಷವಾಗಿ ಪಾತ್ರ ನಿರ್ವಹಿಸುವುದು ಸ್ಥಗಿತವಾದ ಬಳಿಕ, ಪಕ್ಷ ಏಕಾಂಗಿಯಾಗಿ ಚುನಾವಣೆಗೆ ತೆರಳಬೇಕೇ ಅಥವಾ ಪ್ರಾದೇಶಿಕ ಪ್ರಬಲ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬ ಬಗ್ಗೆಯೇ ಪಕ್ಷದಲ್ಲಿ ಆಂತರಿಕ ಚರ್ಚೆಗಳು ಆರಂಭವಾದವು. ಈ ಚುನಾವಣೆಯಲ್ಲಿ ಪಕ್ಷದ ಪಾಲಿಗೆ ಕೆಟ್ಟ ಸುದ್ದಿಯೆಂದರೆ, ಮೈತ್ರಿ ಮಾಡಿಕೊಂಡರೂ, ಮಾಡಿಕೊಳ್ಳದಿದ್ದರೂ ಎರಡೂ ಸ್ಥಿತಿಯಲ್ಲೂ ಗೆಲ್ಲಲಾಗದು ಎಂಬ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ್ದು. ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ್ರಂಟ್ ಜತೆ ಮೈತ್ರಿ ಮಾಡಿಕೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿತು. ಪರಿಣಾಮವಾಗಿ ಭಾರೀ ನಷ್ಟ ಅನುಭವಿಸಿತು. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡುಗಳಲ್ಲಿ, ತನ್ನ ಅಹಮಿಕೆಯನ್ನು ಬದಿಗಿಟ್ಟು ಕನಿಷ್ಠ ಪಾಲುದಾರ ಪಕ್ಷವಾಗಿ ಎಡಪಕ್ಷಗಳು ಹಾಗೂ ಡಿಎಂಕೆ ಜತೆಗೆ ಮೈತ್ರಿಗೆ ಮುಂದಾಯಿತು.
ಆದರೆ ಈ ಪ್ರಯತ್ನದಲ್ಲೂ ರಾಜ್ಯಗಳಲ್ಲಿ ಅಕಾರ ಗಳಿಸಿಕೊಳ್ಳಲು ವಿಲವಾಯಿತು. ಈ ಮೈತ್ರಿಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಎಡಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಆದರೆ ವಾಸ್ತವ ಅಂಶವೆಂದರೆ, ಕಾಂಗ್ರೆಸ್‌ನ ಒಟ್ಟು ಮತಗಳಿಕೆ ಪ್ರಮಾಣ ಬಿಜೆಪಿಗಿಂತ ಸ್ವಲ್ಪ ಅಕವಷ್ಟೇ. ಅಂದರೆ ರಾಜ್ಯದಲ್ಲಿ ಇದಕ್ಕೆ ಯಾವ ಮಹತ್ವವೂ ಉಳಿದಿಲ್ಲ.
ಅವಿಭಜಿತ ಕಮ್ಯುನಿಸ್ಟ್ ಪಾರ್ಟಿ ಆ್ ಇಂಡಿಯಾ, ಒಮ್ಮೆ ದೇಶದ ಎರಡನೆ ಅತ್ಯಂತ ಪ್ರಮುಖ ರಾಷ್ಟ್ರೀಯ ಪಕ್ಷವಾಗಿತ್ತು. ಕಮ್ಯುನಿಸ್ಟ್ ಪಕ್ಷ ಇದೀಗ ಕೇರಳದಲ್ಲಿ ಕಾಂಗ್ರೆಸ್‌ನಿಂದ ಅಕಾರ ಕಿತ್ತುಕೊಂಡಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡರೂ, ನಾಮಾವಶೇಷವಾಗಿರುವುದು ಕೇರಳ ವಿಜಯದ ಸಿಹಿಯನ್ನು ಅಳಿಸಿಹಾಕಿದೆ.
ರಾಷ್ಟ್ರೀಯ ಪರಿಣಾಮ
ಭಾರತದಲ್ಲಿ ಬಿಜೆಪಿ ಏಕೈಕ ರಾಷ್ಟ್ರೀಯ ಪಕ್ಷ ಎನ್ನುವುದರಲ್ಲಿ ಯಾವ ವಿವಾದವೂ ಇಲ್ಲ. ಈ ಸ್ಥಾನಮಾನದೊಂದಿಗೆ ಆ ಪಕ್ಷದ ನಾಯಕತ್ವ ಏನು ಮಾಡುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಅಂತಿಮವಾಗಿ ಪಕ್ಷದ ನಾಯಕತ್ವ ಎಚ್ಚೆತ್ತುಕೊಂಡು ತನ್ನ ಅಭಿವೃದ್ಧಿಯ ಬದ್ಧತೆಯನ್ನು ನಾಯಕರ ಪ್ರಮಾಣಕ್ಕೆ ಅನುಗುಣವಾಗಿ ಮೆರೆಯುತ್ತದೆಯೇ? ಅಥವಾ ಪ್ರತಿಕ್ರಿಯಾತ್ಮಕ ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ದೇಶದ ಅರ್ಥವನ್ನು ಮರುವ್ಯಾಖ್ಯಾನಿಸುವ ಸಾಹಸ ಮುಂದುವರಿಸುತ್ತದೆಯೇ? ಬಹುಶಃ ಸಂಘ ಪರಿಹಾರ ಎರಡೂ ನಿಟ್ಟಿನಲ್ಲಿ ಮುಂದುವರಿಯಲಿದೆ. ಬಿಜೆಪಿಯನ್ನು ತನ್ನ ಉತ್ತಮ ಆಡಳಿತಕ್ಕೆ ಬಿಂಬಿಸಿ, ಆರೆಸ್ಸೆಸ್ ಹಾಗೂ ಇತರ ಸಹ ಸಂಘಟನೆಗಳು ಕೇರಳ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗಳಲ್ಲಿ ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುಂದಿಟ್ಟು ಸಂಘಟನೆ ಬಲಪಡಿಸಬಹುದು.
ರಾಷ್ಟ್ರೀಯವಾಗಿ ಬಿಜೆಪಿ ಅಸಹಿಷ್ಣುತೆ ಮತ್ತು ದುರಭಿಮಾನವನ್ನು ಬೆಳೆಸುತ್ತದೆ ಎಂಬ ಆರೋಪವನ್ನು ಜನ ತಿರಸ್ಕರಿಸಿದ್ದಾರೆ ಎಂದು ನಿರೂಪಿಸಲು ಮುಂದಾಗಬಹುದು, ಅಕ ಸಂಖ್ಯೆಯ ಮಂದಿ ಒಂದಲ್ಲ ಒಂದು ರೀತಿಯಲ್ಲಿ ಗೋಮಾಂಸ ಭಕ್ಷಣೆ ಮಾಡುವ ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಗೋ ಸಂರಕ್ಷಣೆ ಅಭಿಯಾನವನ್ನು ಸಂಘ ಪರಿವಾರ ಹಿಂದಿಟ್ಟಿದ್ದರೂ, ಬಿಜೆಪಿ ಮಾತ್ರ ಎಲ್ಲೆಲ್ಲಿ ತಮಗೆ ಲಾಭವಾಗುತ್ತದೋ ಅಂಥ ಕಡೆಗಳಲ್ಲಿ ತನ್ನ ಕೋಮು ಟ್ರಂಪ್ ಕಾರ್ಡನ್ನು ಯಶಸ್ವಿಯಾಗಿಯೇ ಬಳಸಿದೆ. ಮುಂದಿನ ಎರಡು ದಶಕಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳಗಳಲ್ಲಿ ಬಿಜೆಪಿ ಅಕಾರದ ಪೈಪೋಟಿಯಲ್ಲಿ ಪ್ರಬಲ ಹಕ್ಕುಪ್ರತಿಪಾದಿಸುವ ಹಂತಕ್ಕೆ ಬೆಳೆಯುವ ಸಾಧ್ಯತೆಯನ್ನು ಸಂಘ ಪರಿವಾರ ಮನಗಂಡಿದೆ. ಕಾಂಗ್ರೆಸ್ ಪಕ್ಷದಿಂದ ಮತಗಳನ್ನು ಕಸಿಯಲು ಸಾಧ್ಯ ಎನ್ನುವುದನ್ನು ಈ ಚುನಾವಣೆಗಳಿಂದ ಬಿಜೆಪಿ ಅರಿತುಕೊಂಡಿದೆ. ದೀರ್ಘಾವಯಲ್ಲಿ ಅದು ಎಡಪಕ್ಷಗಳ ಮತಬುಟ್ಟಿಗೂ ಕೈಹಾಕುವ ಸಾಧ್ಯತೆಗಳಿವೆ. ಸಂಘ ಪರಿವಾರದ ಇಂಥ ತಂತ್ರಗಳು, ೀರ್ಘಕಾಲದಿಂದ ನಾಗರಿಕ ಜಾತ್ಯತೀತತೆ ಒಪ್ಪಿಕೊಂಡು ಬಂದ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇನ್ನೊಂದು ಕಾದುನೋಡುವ ಅಂಶವೆಂದರೆ ಅಸ್ಸಾಂನಲ್ಲಿ ನೂತನ ಮುಖ್ಯಮಂತ್ರಿ ಸರಬಾನಂದ ಸೊನೊವಾಲ್ ಅವರಿಗೆ ಎಷ್ಟರಮಟ್ಟಿಗೆ ಪಕ್ಷ ಸ್ವಾತಂತ್ರ್ಯ ನೀಡುತ್ತದೆ ಎನ್ನುವುದು. ಇವರು ಬಿಜೆಪಿಗೆ ಹಿಂಬಾಗಿಲ ಪ್ರವೇಶ ಪಡೆದವರು. ಅಸ್ಸಾಂ ವಿದ್ಯಾರ್ಥಿ ಚಳವಳಿಯಿಂದ ನಾಯಕರಾಗಿ ರೂಪುಗೊಂಡ ಇವರು, ಬಾಂಗ್ಲಾದೇಶೀಯರ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವುದನ್ನೂ ಕಾದು ನೋಡಬೇಕು. ಅಸ್ಸಾಮಿ ರಾಷ್ಟ್ರೀಯತೆ ಹೆಚ್ಚು ಜಾತ್ಯತೀತವಾಗಿರುತ್ತದೆ ಎಂದು ಪದೇ ಪದೇ ಸೊನೊವಾಲ್ ಹೇಳುತ್ತಲೇ ಬಂದಿದ್ದಾರೆ. ಆರೆಸ್ಸೆಸ್ ಸಹಜವಾಗಿಯೇ ತಮ್ಮ ಉಸಿರು ಗಟ್ಟಿಸುವ ಕಾರ್ಯಸೂಚಿಯನ್ನು ಅಸ್ಸಾಂನಲ್ಲಿ ಪ್ರತಿಷ್ಠಾಪಿಸಲು ಪ್ರಯತ್ನ ನಡೆಸುವ ಹಿನ್ನೆಲೆಯಲ್ಲಿ ಈ ಯುವ ಮುಖ್ಯಮಂತ್ರಿಯ ರಾಜಕೀಯ ಜಾಣ್ಮೆಗೆ ಪರೀಕ್ಷೆ ಎದುರಾಗುವ ಎಲ್ಲ ಸಾಧ್ಯತೆಯೂ ಇದೆ.
ಎಡಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತೀವ್ರ ಏಟು ಬಿದ್ದಿರುವ ಹಿನ್ನೆಲೆಯಲ್ಲಿ, ಆರೆಸ್ಸೆಸ್ ಹಾಗೂ ಬಿಜೆಪಿ ತಮ್ಮ ಪೂರ್ವದ ರಾಷ್ಟ್ರೀಯತೆಯನ್ನು ಹೆಚ್ಚು ಬಿರುಸಿನಿಂದ ಪ್ರಚುರಪಡಿಸುವ ಎಲ್ಲ ಸಾಧ್ಯತೆ ಇದೆ. ಮುಂದಿನ ತಿಂಗಳುಗಳಲ್ಲಿ ಸಂಘರ್ಷದ ರಾಜಕೀಯ ಸಂಸತ್ತಿನ ಒಳಗೆ ಹಾಗೂ ಹೊರಗೆ ಬಿರುಸುಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿಯೇ ಮುಂದಿನ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯತ್ತ ಎಲ್ಲರ ಚಿತ್ತ ಹರಿಯುತ್ತದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಇನ್ನೂ ಹಲವು ತಿಂಗಳು ಇದ್ದರೂ, ರಾಜ್ಯದ ವಿವಿಧೆಡೆಗಳಲ್ಲಿ ಮುಲಾಯಂ ಸಿಂಗ್ ವಿರೋ ಟ್ರಂಪ್ ಕಾರ್ಡನ್ನು ಬಿಜೆಪಿ ಚಲಾವಣೆಗೆ ತರುವ ಎಲ್ಲ ಸೂಚನೆಗಳು ಸ್ಪಷ್ಟವಾಗಿ ಕಾಣಿಸುತ್ತಿದೆ. ಹಿಂದುತ್ವ ಟ್ರಂಪ್‌ಕಾರ್ಡ್‌ನಿಂದ ಬಿಹಾರ ಹಾಗೂ ದಿಲ್ಲಿಯಲ್ಲಿ ಬಿಜೆಪಿಗೆ ಯಾವುದೇ ಲಾಭ ಆಗದಿದ್ದರೂ, ಉತ್ತರ ಪ್ರದೇಶದ ಚಿತ್ರಣ ಬೇರೆ ಎನ್ನುವುದು ಆರೆಸ್ಸೆಸ್ ಮುಖಂಡರ ನಿಲುವು. ಬಿಹಾರದಲ್ಲಿ ವಿರೋಗಳು ಒಗ್ಗಟ್ಟಾದಂತೆ ಉತ್ತರ ಪ್ರದೇಶದಲ್ಲೂ ಆಗುವ ಸಾಧ್ಯತೆ ಕ್ಷೀಣವಾಗಿದೆ ಮತ್ತು ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ ಬೆಳೆದಂತೆ ಯಾವುದೇ ಪಕ್ಷ ಅಷ್ಟು ಪ್ರಬಲವಾಗಿ ರೂಪುಗೊಳ್ಳುವ ಸಾಧ್ಯತೆ ಇಲ್ಲ.
ಪ್ರಧಾನಿ ನರೇಂದ್ರ ಮೋದಿಯವರಂತೂ ಈಗಾಗಲೇ ಪರೋಕ್ಷ ಪ್ರಚಾರಕ್ಕೆ ಇಳಿದಿದ್ದಾರೆ. ರಾಜಕೀಯ ಹಾಗೂ ಸಾಂಸ್ಥಿಕ ಮಟ್ಟದಲ್ಲಿ ಬಿಜೆಪಿ ಈಗಾಗಲೇ ಮನವೊಲಿಕೆ ಕಾರ್ಯ ಆರಂಭಿಸಿದೆ. ಕಾಂಗ್ರೆಸ್ ತಮ್ಮ ಗೆಲುವಿನ ಹಾದಿಗೆ ತಡೆ ಅಲ್ಲ ಎನ್ನುವುದು ಇತ್ತೀಚಿನ ಚುನಾವಣಾ ಲಿತಾಂಶದಿಂದ ಬಿಜೆಪಿಗೆ ಖಚಿತವಾಗಿದೆ. ಆದ್ದರಿಂದ ಉಳಿದಿರುವುದು ಪ್ರಾದೇಶಿಕ ಪಕ್ಷಗಳು ಮಾತ್ರ. ಎಡಪಕ್ಷಗಳ ಅಸ್ತಿತ್ವ ಕೂಡಾ ಇಲ್ಲಿ ಸೀಮಿತ. ದೀರ್ಘಾವಯಲ್ಲಿ ಬಿಜೆಪಿ ಇತರ ಪ್ರಾದೇಶಿಕ ಪಕ್ಷಗಳನ್ನೂ ತೆಗೆದುಕೊಳ್ಳಬಹುದು. ಆದರೆ ಇದೀಗ ಬಿಜೆಪಿಗೆ ರಾಷ್ಟ್ರೀಯ ಪಕ್ಷದ ವಾಸ್ತವ ಸ್ಥಾನಮಾನ ಇರುವುದು ತಮ್ಮ ಪಕ್ಷಕ್ಕೆ ಮಾತ್ರ ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ಒಂದೆರಡು ರಾಜ್ಯಗಳಲ್ಲಿ ಸೋತು, ಉತ್ತರ ಪ್ರದೇಶ ಚುನಾವಣೆಯಲ್ಲಿ ಕೂಡಾ ಸೋಲು ಅನುಭವಿಸಿದರೂ, 2019ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಅನುಕೂಲತೆಗಳಿವೆ.
ಅರಳಿದ ಕಮಲ
ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ವಿಭಜನಕಾರಿ, ಅಸಮರ್ಪಕ ಪ್ರಚಾರ ತಂತ್ರದಿಂದಾಗಿ ದಿಲ್ಲಿ ಹಾಗೂ ಬಿಹಾರಗಳಲ್ಲಿ ಮುಖಭಂಗ ಅನುಭವಿಸಿದ್ದರೂ ಬಿಜೆಪಿ, ಇದೀಗ ಏಕೈಕ ರಾಷ್ಟ್ರೀಯ ಪಕ್ಷ ಎನ್ನುವುದನ್ನು ಅಲ್ಲಗಳೆಯಲಾಗದು.
ಬಿಜೆಪಿ ಇದೀಗ ಅಸ್ಸಾಂನಲ್ಲಿ ಚುಕ್ಕಾಣಿ ಹಿಡಿದಿದೆ. ಪ್ರಾದೇಶಿಕ ಪ್ರಾಬಲ್ಯದ ಅಸ್ಸಾಂ ಗಣ ಸಂಗ್ರಾಮ ಪರಿಷತ್ ಹಾಗೂ ಬೋಡೋ ಪೀಪಲ್ಸ್ ್ರಂಟ್ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಆದರೆ ವೈಯಕ್ತಿಕ ಮತ ಗಳಿಕೆ ಪ್ರಮಾಣವನ್ನು ಹೋಲಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಸರಿಸಮನಾಗಿದೆ ಎನ್ನುವುದು ಗಮನಾರ್ಹ ಅಂಶ. ಪಶ್ಚಿಮ ಬಂಗಾಳದಲ್ಲಿ 2011ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಅದು ತನ್ನ ಮತಗಳಿಕೆಯನ್ನು ದುಪ್ಪಟ್ಟುಗೊಳಿಸಿಕೊಂಡಿದೆ. ಬಿಜೆಪಿ ಮತಗಳಿಕೆ ಕಾಂಗ್ರೆಸ್‌ನ ಒಟ್ಟು ಮತಗಳಿಗಿಂತ ಕೇವಲ ಶೇ.ಒಂದರಷ್ಟು ಕಡಿಮೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಾಗೂ ಕೇರಳದಲ್ಲಿ ಒಂದು ಸ್ಥಾನ ಗಳಿಸಿರುವುದು ಹೆಚ್ಚು ಪ್ರಭಾವಿ ಎಂದು ಕಾಣಿಸದು. ಆದರೆ ಈ ಸ್ಥಾನಗಳು ಆಯಾ ವಿಧಾನಸಭೆೆಗಳಲ್ಲಿ ಕೇಸರಿ ಅಸ್ತಿತ್ವ ಮೊಟ್ಟಮೊದಲ ಬಾರಿಗೆ ಕಂಡುಬರಲಿದೆ. ಕೇರಳದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ.11.7ರಷ್ಟು ಮತಗಳನ್ನು ಪಡೆದಿದ್ದು, 2011ರ ಸ್ಥಿತಿಗೆ ಹೋಲಿಸಿದರೆ ಬಿಜೆಪಿ ಸಾಧನೆ ಉತ್ತಮವಾಗಿರುವುದಷ್ಟೇ ಅಲ್ಲದೇ 2014ರಲ್ಲಿ ಮೋದಿ ಅಲೆಯಲ್ಲಿ ಗಳಿಸಿದ್ದ ಶೇ.10.3 ಮತಕ್ಕಿಂತಲೂ ಅಕ ಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಬಿಜೆಪಿ ರಾಜ್ಯದಲ್ಲಿ ಬೆಳೆಯುತ್ತಿರುವುದರ ಸಂಕೇತ. ಆದರೆ ತಮಿಳುನಾಡಿನಲ್ಲಿ ಪಕ್ಷಕ್ಕೆ ಇನ್ನೂ ಅಸ್ತಿತ್ವ ಇಲ್ಲ. ಏಕೆಂದರೆ ಇಲ್ಲಿನ ಮತ ಬಹುತೇಕ ಹಂಚಿಕೆಯಾಗುವುದು ಎರಡು ದ್ರಾವಿಡ ಪಕ್ಷಗಳ ನಡುವೆ. ಕಳೆದ ನಾಲ್ಕು ದಶಕಗಳಲ್ಲಿ ಯಾವ ರಾಷ್ಟ್ರೀಯ ಪಕ್ಷ ಕೂಡಾ ಕಿರಿಯ ಮೈತ್ರಿ ಪಕ್ಷಕ್ಕಿಂತ ಹೆಚ್ಚಿನ ಸಾಧನೆ ಮಾಡಿಲ್ಲ.
ಜನಾದೇಶವನ್ನು ಸ್ವೀಕರಿಸಿ ಇನ್ನಷ್ಟು ಶ್ರಮಿಸುತ್ತೇವೆ : ರಾಹುಲ್ ಗಾಂಧಿ
ಜನರ ವಿಶ್ವಾಸ ಹಾಗೂ ನಂಬಿಕೆ ಗಳಿಸುವ ಸಲುವಾಗಿ ಕಾಂಗ್ರೆಸ್ ಇನ್ನೂ ಹೆಚ್ಚು ಶ್ರಮಿಸಲಿದೆ. ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಜನಾದೇಶವನ್ನು ಪಕ್ಷ ವಿನಮ್ರವಾಗಿ ಒಪ್ಪಿಕೊಂಡಿದೆ ಹಾಗೂ ವಿಜೇತ ಪಕ್ಷಗಳಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ ಹೇಳಿದ್ದಾರೆ.
ನಾಲ್ಕೂ ರಾಜ್ಯಗಳ ಚುನಾವಣಾ ಲಿತಾಂಶ ಇಂದು ಪ್ರಕಟಗೊಂಡಿದ್ದು ಕಾಂಗ್ರೆಸ್ ಪಕ್ಷ ತಾನು ಆಡಳಿತದಲ್ಲಿದ್ದ ಅಸ್ಸಾಂ ಹಾಗೂ ಕೇರಳಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿರುವುದು ಹಾಗೂ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಬೆಂಬಲ ಗಳಿಸಲು ವಿಲವಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಮೇಲಿನ ಹೇಳಿಕೆ ನೀಡಿದ್ದಾರೆ.
‘‘ಚುನಾವಣಾ ಪ್ರಚಾರಕ್ಕಾಗಿ ನಮ್ಮಾಂದಿಗೆ ಕೈಜೋಡಿಸಿದ ಎಲ್ಲ ಕಾರ್ಯಕರ್ತರಿಗೂ ಮಿತ್ರ ಪಕ್ಷಗಳಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳಲಿಚ್ಛಿಸುತ್ತೇನೆ,’’ಎಂದು ಗಾಂ ಟ್ವೀಟ್ ಮಾಡಿದ್ದಾರೆ.
ಲಿತಾಂಶದಿಂದ ತಮಗಾದ ನಿರಾಸೆಯನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅದೇ ಸಮಯ ಲಿತಾಂಶ ಅನಿರೀಕ್ಷಿತವೇನಲ್ಲ ಎಂದು ಬಣ್ಣಿಸಿದ್ದಾರೆ.
ಜನರು ಬದಲಾವಣೆ ಬಯಸಿದ್ದರಿಂದ ಅಸ್ಸಾಂನಲ್ಲಿ ಪಕ್ಷ ಸೋಲನ್ನನುಭವಿಸಿದೆ ಎಂದು ಹೇಳಿದ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿ ತೃಣಮೂಲ ಕಾಂಗ್ರೆಸ್ ಮೇಲೆ ಯಾವುದೇ ಪ್ರಭಾವ ಬೀರಲು ವಿಲವಾಗಿರುವ ಹೊರತಾಗಿಯೂ ಎರಡೂ ಪಕ್ಷಗಳ ಮೈತ್ರಿ ಸಹಜ ಎಂದಿದ್ದಾರೆ.
ಕಿಂಗ್ ಮೇಕರ್ ಕನಸು ಕಂಡಿದ್ದ ಬದ್ರುದ್ದೀನ್ ಅಜ್ಮಲ್‌ಗೇ ಸೋಲು
ದಿಸ್ಪುರ್ : ಎಐಯುಡಿಎ್ ಅಧ್ಯಕ್ಷ ಹಾಗೂ ಸುಗಂಧ ದ್ರವ್ಯ ದೊರೆ ಬದ್ರುದ್ದೀನ್ ಅಜ್ಮಲ್ ಸೌಥ್ ಸಲ್ಮಾರ ಕ್ಷೇತ್ರದಿಂದ ಸೋಲುವ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 18 ಸ್ಥಾನ ಗಳಿಸಿ ಪ್ರಧಾನ ವಿಪಕ್ಷವಾಗಿದ್ದ ಅಜ್ಮಲ್ ಅವರ ಪಕ್ಷ ಈಗ ಕೇವಲ 13 ಸ್ಥಾನಗಳನ್ನು ಪಡೆದಿದೆ. ಅದರಲ್ಲೂ ಪಕ್ಷದ ಅಧ್ಯಕ್ಷರೇ ಸೋತಿದ್ದಾರೆ. ಬಿಜೆಪಿಯನ್ನು ಅಭಿನಂದಿಸುತ್ತೇನೆ . ನಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಬದ್ರುದ್ದೀನ್ ಹೇಳಿದ್ದಾರೆ. ಈ ಬಾರಿ ತ್ರಿಶಂಕು ವಿಧಾನ ಸಭೆ ಸೃಷ್ಟಿಯಾಗಿ ತಾನು ಕಿಂಗ್ ಮೇಕರ್ ಆಗುತ್ತೇನೆ ಎಂಬ ವಿಶ್ವಾಸದಲ್ಲಿದ್ದ ಬದ್ರುದ್ದೀನ್ ಅವರಿಗೆ ಈ ಸೋಲು ಆಘಾತ ತಂದಿದೆ. ಸ್ವತ: ಅವರು ಸೋಲುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಚುನಾವಣೆ ಮುಗಿದ ಮೇಲೆ ಅಗತ್ಯ ಬಿದ್ದರೆ ಬಿಜೆಪಿ ಜೊತೆ ಮೈತ್ರಿ ಮಾಡುವ ಸಾಧ್ಯತೆ ಇದೆ ಎಂಬರ್ಥ ಬರುವಂತೆ ಅವರು ಮಾತನಾಡಿದ್ದರು. ಆದರೆ ಈಗ ಅವರು ಹೀನಾಯ ಸೋಲು ಅನುಭವಿಸಿದ್ದಾರೆ.
ಸಿ.ಕೆ. ಜಾನುಗೆ ಹೀನಾಯ ಸೋಲು
ಕೇರಳದ ಖ್ಯಾತ ಆದಿವಾಸಿ ನಾಯಕಿ, ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಸಿ. ಕೆ. ಜಾನು ವಯನಾಡ್‌ನ ಸುಲ್ತಾನ್ ಬತ್ತೇರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ಇಲ್ಲಿ ಯುಡಿಎ್ ಅಭ್ಯರ್ಥಿ ಸಿ. ಬಾಲಕೃಷ್ಣನ್ ಅವರು 75,747 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಡರಂಗದ ರುಕ್ಮಿಣಿ ಸುಬ್ರಮಣ್ಯನ್ ಅವರು 64,549 ಮತಗಳನ್ನು ಪಡೆದು ಎರಡನೆ ಸ್ಥಾನದಲ್ಲಿದ್ದರೆ ಜಾನು ಕೇವಲ 27,920 ಮತಗಳನ್ನು ಗಳಿಸಿ ಮೂರನೆ ಸ್ಥಾನಕ್ಕೆ ಇಳಿದಿದ್ದಾರೆ . ಕಳೆದೆರಡು ದಶಕಗಳಿಂದ ಆದಿವಾಸಿಗಳ ಪರ ಹೋರಾಟ ನಡೆಸುತ್ತಿದ್ದ ಜಾನು ಕೇರಳದಲ್ಲಿ ಖ್ಯಾತ ಹೆಸರು. ಆದರೆ ಅವರು ಚುನಾವಣಾ ರಾಜಕೀಯದಲ್ಲಿ ತಮ್ಮ ಖ್ಯಾತಿಯನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಲರಾಗಿದ್ದಾರೆ.
ಮಮತಾ ಎದುರು ನಡೆಯಲಿಲ್ಲ ‘ನೇತಾಜಿ ’ ದಾಳ ಚಂದ್ರ ಬೋಸ್ ಹೀನಾಯ ಸೋಲು
ಕೊಲ್ಕತಾ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹೆಸರು ಬಳಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಚುನಾವಣಾ ರಾಜಕೀಯದಲ್ಲಿ ಹಣಿಯುವ ಬಿಜೆಪಿಯ ನಡೆ ಪಶ್ಚಿಮ ಬಂಗಾಳದಲ್ಲಿ ದಯನೀಯ ಸೋಲು ಕಂಡಿದೆ. ಭಬನೀಪುರ್ ಕ್ಷೇತ್ರದಲ್ಲಿ ಮಮತಾ ಎದುರು ಸ್ಪರ್ಸಿ ದೇಶದ ಗಮನ ಸೆಳೆದಿದ್ದ ನೇತಾಜಿಯ ಸೋದರ ಮೊಮ್ಮಗ ಚಂದ್ರ ಬೋಸ್ ಅವರು ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟು ಹೀನಾಯ ಸೋಲುಂಡಿದ್ದಾರೆ. ದೇಶದ ಮಹನೀಯರ ಹೆಸರು ಹಾಗು ಸಂಬಂಧವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಇಲ್ಲಿ ಸಂಪೂರ್ಣ ತಲೆಕೆಳಗಾಗಿದ್ದು ಮಮತಾ ಗೆಲುವಿನ ಅಂತಿಮ ನಗೆ ಬೀರಿದ್ದಾರೆ. ಮಮತಾ 65,520 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರೆ ಬಿಜೆಪಿಯ ಚಂದ್ರ ಬೋಸ್ ಕೇವಲ 26,299 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಪ್ರಿಯ ರಂಜನ್ ದಾಸ್ ಮುನ್ಷಿ ಅವರ ಪತ್ನಿ ದೀಪಾ ದಾಸ್ ಮುನ್ಷಿ ಅವರು 40,219 ಮತಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ.
ಭಾರತ 16 ಮಹಿಳಾ ಮುಖ್ಯಮಂತ್ರಿಗಳನ್ನು ಹೊಂದಿತ್ತು
13 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಅಕಾರ ನಡೆಸಿದ್ದಾರೆ.
ದಿಲ್ಲಿ, ತ. ನಾಡು, ಉ.ಪ್ರ.ಗಳಲ್ಲಿ ತಲಾ ಇಬ್ಬರು ಮಹಿಳಾ ಮುಖ್ಯಮಂತ್ರಿಗಳು ಅಕಾರ ವಹಿಸಿಕೊಂಡಿದ್ದಾರೆ.
ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅತ್ಯಕ ಅವಯ ಮಹಿಳಾ ಮುಖ್ಯಮಂತ್ರಿ-5,434 ದಿನಗಳು
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಾನಕಿ ರಾಮಚಂದ್ರನ್ ಅತೀ ಕಡಿಮೆ ಅವಯ ಮಹಿಳಾ ಮುಖ್ಯಮಂತ್ರಿ-23 ದಿನಗಳು
ಸುಚಿತ್ರ ಕೃಪಲಾನಿ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ
ಜಮ್ಮು ಕಾಶ್ಮೀರದ ಸಿಎಂ ಮೆಹಬೂಬ ಮುಫ್ತಿ ಇತ್ತೀಚಿನ ದಿನಗಳಲ್ಲಿ ಈ ಕೂಟಕ್ಕೆ ಸೇರ್ಪಡೆಗೊಂಡವರು.
ಉನ್ನತ ಸ್ಥಾನದಲ್ಲಿರುವ ಮಹಿಳೆಯರು
ಈಗಿನ ಮುಖ್ಯಮಂತ್ರಿಗಳು
ಅನಂದ್ ಬೆನ್ ಪಟೇಲ್
ಗುಜರಾತ್
ವಸುಂಧರಾ ರಾಜೆ
ರಾಜಸ್ಥಾನ
ಮೆಹಬೂಬ ಮುಫ್ತಿ
ಜಮ್ಮು-ಕಾಶ್ಮೀರ
ಇದೀಗ ಮರು ಆಯ್ಕೆಯಾದವರು
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ
ಜಯಲಲಿತಾ
ತಮಿಳುನಾಡು