91 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇರಳದಲ್ಲಿ ಮತ್ತೆ ಎಲ್‌ಡಿಎಫ್

Update: 2016-05-19 18:17 GMT

ತಿರುವನಂತಪುರ, ಮೇ 19: ಪ್ರತಿ ಬಾರಿ ಚುನಾವಣೆಯಲ್ಲೂ ಆಳು ವವರನ್ನು ಬದಲಿಸುವ ಕೇರಳ ಈ ಸಲವೂ ತನ್ನ ಸಂಪ್ರದಾಯದಿಂದ ಹೊರತಾಗಿಲ್ಲ. ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ್ನು ಕೆಳಗಿಳಿಸಿರುವ ದೇವರ ಸ್ವಂತ ನಾಡಿನ ಮತದಾರರು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಅಧಿಕಾ ರದ ಗದ್ದುಗೆಗೇರಿಸಿದ್ದಾರೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ 91 ಸ್ಥಾನಗಳಲ್ಲಿ ಆಧಿಪತ್ಯ ಮೆರೆದಿದೆ. ಅದು ಕಳೆದ ಬಾರಿಗಿಂತ 24 ಅಧಿಕ ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕಳೆದ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಯುಡಿಎಫ್ 47 ಸ್ಥಾನಗಳನ್ನಷ್ಟೇ ಗೆಲ್ಲುವಲ್ಲಿ ಸಫಲವಾಗಿದೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಜಧಾನಿ ತಿರುವನಂತಪುರದ ಉಪನಗರ ನೆಮಮ್ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸುತ್ತಿದೆ.

 2011ರ ಚುನಾವಣೆಯಲ್ಲಿ ಎಲ್‌ಡಿಎಫ್ 68 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಅಲೆಯು ಎಲ್‌ಡಿಎಫ್ ಪರವಾಗಿದೆ ಎನ್ನುವುದನ್ನು ಈ ಚುನಾವಣೆಯು ತೋರಿಸಿದೆ ಎಂದು ಹಿರಿಯ ಸಿಪಿಎಂ ನಾಯಕ ವಿ.ಎಸ್.ಅಚ್ಯುತಾನಂದನ್ ಅವರು ಪ್ರತಿಕ್ರಿಯಿಸಿದ್ದಾರೆ. ಚುನಾವಣೆಗೆ ಮುನ್ನ ಅಚ್ಯುತಾನಂದನ್ ಎಡರಂಗದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಭಾವಿಸಲಾಗಿತ್ತಾದರೂ ಆ ಗದ್ದುಗೆ ಈಗ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಪಿಣರಾಯಿ ವಿಜಯನ್(72) ಅವರತ್ತ ವಾಲುತ್ತಿರುವಂತಿದೆ. ಈ ಬಗ್ಗೆ ಸಿಪಿಎಂ ಈವರೆಗೂ ಯಾವುದೇ ವಿದ್ಯುಕ್ತ ಘೋಷಣೆಯನ್ನು ಮಾಡಿಲ್ಲ.

ಇದು ಅನಿರೀಕ್ಷಿತ ಫಲಿತಾಂಶವಾಗಿದ್ದು,ಯುಡಿಎಫ್‌ಗೆ ಹಿನ್ನಡೆಯಾಗಿದೆ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪ್ರತಿಕ್ರಿಯಿಸಿದ್ದಾರೆ.
ನೆಮಮ್ ಕ್ಷೇತ್ರದಲ್ಲಿ ಬಿಜೆಪಿಯ ಒ.ರಾಜಗೋಪಾಲ ಗೆಲುವು ಸಾಧಿಸಿದ್ದರೆ ಆ ಪಕ್ಷದ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಜಶೇಖರನ್, ಮಾಜಿ ಅಧ್ಯಕ್ಷ ವಿ.ಮುರಳೀಧರನ್,ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಮತ್ತು ಹಿರಿಯ ನಾಯಕ ಕೆ.ಸುರೇಂದ್ರನ್ ಪರಾಭವಗೊಂಡಿದ್ದಾರೆ.

ಪಿಣರಾಯಿ ವಿಜಯನ್ ಮತ್ತು ವಿ.ಎಸ್.ಅಚ್ಯುತಾನಂದನ್ ಅವರು ಅನುಕ್ರಮವಾಗಿ ಧರ್ಮಾಡ ಮತ್ತು ಮಲಂಪುಝಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಚಾಂಡಿ,ಗೃಹಸಚಿವ ರಮೇಶ ಚೆನ್ನಿತಲ, ಕೈಗಾರಿಕಾ ಸಚಿವ ಪಿ.ಕೆ.ಕುಜ್ಞಾಲಿಕುಟ್ಟಿ, ಕಂದಾಯ ಸಚಿವ ಅಡೂರ್ ಪ್ರಕಾಶ, ಆಹಾರ ಸಚಿವ ಅನೂಪ್ ಜೇಕಬ್, ಸಮಾಜ ಕಲ್ಯಾಣ ಸಚಿವ ಎಂ.ಕೆ.ಮುನೀರ್, ಮಾಜಿ ವಿತ್ತ ಸಚಿವ ಕೆ.ಎಂ.ಮಣಿ ಯುಡಿಎಫ್ ಪಾಳಯದಲ್ಲಿ ಗೆದ್ದ ಪ್ರಮುಖರಾಗಿದ್ದಾರೆ. ಅಬಕಾರಿ ಸಚಿವ ಕೆ.ಬಾಬು,ಕಾರ್ಮಿಕ ಸಚಿವ ಶಿಬು ಬಾಬು ಜಾನ್ಸನ್, ಕೃಷಿ ಸಚಿವ ಕೆ.ಪಿ.ಮೋಹನನ್,ಯುವಜನ ವ್ಯವಹಾರಗಳ ಸಚಿವೆ ಪಿ.ಜಯಲಕ್ಷ್ಮೀ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ.ಸುಧಾಕರನ್ ಅವರು ಸೋಲನ್ನಪ್ಪಿರುವ ಯುಡಿಎಫ್ ಪ್ರಮುಖರಾಗಿದ್ದಾರೆ.

ಸ್ಪೀಕರ್ ಎನ್.ಶಕ್ತನ್ ಮತ್ತು ಡೆಪ್ಯುಟಿ ಸ್ಪೀಕರ್ ಪಾಲೋಡೆ ರವಿ ಅವರೂ ಸೋಲನ್ನುಂಡಿದ್ದಾರೆ. ಸೆಬಾಸ್ಟಿಯನ್ ಪಾಲ್ ಮತ್ತು ನಿಕೇಶ್ ಕುಮಾರ್ ಅವರು ಎಲ್‌ಡಿಎಫ್ ಪಾಳಯದಲ್ಲಿ ಸೋತವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News