ಕಾಗದದ ಪುಟ್ಟ ಚೂರು ಪೊಲೀಸರನ್ನು ಹಂತಕರ ಮನೆ ಬಾಗಿಲಿಗೆ ತಲುಪಿಸಿದ್ದು ಹೀಗೆ !

Update: 2016-05-20 03:28 GMT

ಬೆಂಗಳೂರು, ಮೇ 20: ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರನ್ನು 1991ರ ಮೇ 21ರಂದು ಎಲ್‌ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬ್ ದಾಳಿಕೋರರು ಶ್ರೀಪೆರಂಬದೂರಿನಲ್ಲಿ ಹತ್ಯೆ ಮಾಡಿದರು. ಐಪಿಎಸ್ ಅಧಿಕಾರಿ ಡಿ.ಆರ್.ಕಾರ್ತಿಕೇಯನ್ ನೇತೃತ್ವದ ಸಿಬಿಐ ವಿಶೇಷ ತನಿಖಾ ತಂಡ, ಈ ಪ್ರಕರಣದ ತನಿಖೆಗೆ ನಿಯೋಜಿತವಾಯಿತು. ಮೂರೇ ತಿಂಗಳಲ್ಲಿ ಎಸ್‌ಐಟಿ ತಂಡ ಕೋಣನಗುಂಟೆಗೆ ಲಗ್ಗೆ ಇಟ್ಟಿತು. ಅಂತಿಮವಾಗಿ ಬೆಂಗಳೂರು ಪೊಲೀಸ್ ನೆರವಿನಿಂದ ಹಂತಕರನ್ನು ಬಂಧಿಸಲಾಯಿತು. ಅಷ್ಟು ಸುಲಭವಾಗಿ ಹಂತಕರು ಬಲೆಗೆ ಬಿದ್ದದ್ದು ಹೇಗೆ?

1991ರ ಆಗಸ್ಟ್ 18ರಂದು ಡಿಸಿಪಿ ಕೆಂಪಯ್ಯ ಪೊಲೀಸ್ ಆಯುಕ್ತ ರಾಮಲಿಂಗಮ್ ಅವರಿಗೆ ಕರೆ ಮಾಡಿ, ಎಲ್‌ಟಿಟಿಗೆ ಸಹಾನುಭೂತಿ ಇರುವ ಇಬ್ಬರು ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ಈ ದಂಪತಿಯ ಜಾಡು ಹಿಡಿಯುವಂತೆ ಕೆಂಪಯ್ಯ ಅವರಿಗೆ ಸೂಚಿಸಲಾಯಿತು. ಈ ಹಂತಕರ ಸುಳಿವು ಸಿಕ್ಕಿದ್ದು ಮಂಡ್ಯ ಜಿಲ್ಲೆ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದ ಒಂದು ಕಾಗದದ ಚೂರಿನಿಂದ. ಪೊಲೀಸ್ ದಾಳಿಯ ಮುನ್ನ ಈ ಪ್ರದೇಶದಲ್ಲಿ 12 ಮಂದಿ ಎಲ್‌ಟಿಟಿಇ ಕಾರ್ಯಕರ್ಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಾಗದದಲ್ಲಿ ಇದ್ದುದು ಆಂಜನಪ್ಪ ಪುಟ್ಟೇನಳ್ಳಿ ಎಂದು ಮಾತ್ರ.

ಈ ಸುಳಿವು ಆಧರಿಸಿ ಆಂಜನಪ್ಪ ಅವರ ಮನೆಗೆ ತನಿಖಾತಂಡ ತೆರಳಿ ಮಾಹಿತಿ ಪಡೆಯಿತು. ಆಂಜನಪ್ಪ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ರಂಗನಾಥ್ ಎಂಬಾತ ತಮ್ಮನ್ನು ಮುತ್ತತ್ತಿಗೆ ಕರೆದೊಯ್ದ ವಿಷಯವನ್ನು ಆಂಜನಪ್ಪ ಬಹಿರಂಗಪಡಿಸಿದರು. ಆ ವೇಳೆಗೆ ರಂಗನಾಥ್ ಮನೆ ಖಾಲಿ ಮಾಡಿದ್ದ. ಮನೆ ಖಾಲಿ ಮಾಡುವಾಗ ಮನೆ ಸಾಮಗ್ರಿಗಳನ್ನು ಒಯ್ದ ಟ್ರಕ್ ಚಾಲಕ ನೀಡಿದ ಸುಳಿವಿನ ಮೇರೆಗೆ ರಂಗನಾಥ್‌ನ ಪತ್ನಿ ಮೃದುಲಾ ಎಂಬಾಕೆಯನ್ನು ಸೆರೆ ಹಿಡಿಯಲಾಯಿತು. ಶಿವರಸನ್ ಹಾಗೂ ಇತರ ಆರು ಮಂದಿ ಸಹಚರರಿಗೆ ಕೋಣನಕುಂಟೆಯಲ್ಲಿ ಮನೆ ಮಾಡಿಕೊಡಲು ತಾನು ಸಹಕರಿಸಿದ್ದಾಗಿ ಮೃದುಲಾ ಬಾಯಿಬಿಟ್ಟಳು. ಆ ಮನೆಯ ಮೇಲೆ ದಾಳಿ ಮಾಡಿ ಗುಂಡಿನ ಚಕಮಕಿ ಬಳಿಕ ಅವರನ್ನು ಬಂಧಿಸಲಾಯಿತು. ಆದರೆ ರಾಜೀವ್‌ಹತ್ಯೆಯಲ್ಲಿ ಮತ್ತೊಬ್ಬ ಆತ್ಮಹತ್ಯೆ ಬಾಂಬರ್ ಆಗಿದ್ದ ಶುಭಾ, ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News