ಎರಡು ವರ್ಷಗಳಲ್ಲಿ ಬಾಂಗ್ಲಾ ಗಡಿ ಮುಚ್ಚಲು ಕ್ರಮ: ಅಸ್ಸಾಂ ಸಿಎಂ

Update: 2016-05-21 18:39 GMT

 ಗುವಾಹತಿ, ಮೇ 21: ಬಾಂಗ್ಲಾದೇಶದ ಜತೆಗಿನ ಗಡಿಯನ್ನು ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ಭದ್ರಪಡಿಸಲಾಗುವುದು ಎಂದು ಅಸ್ಸಾಂನ ಸಂಭಾವ್ಯ ಮುಖ್ಯಮಂತ್ರಿ ಸಬರಾನಂದ ಸೊನೊವಾಲ್ ಪ್ರಕಟಿಸಿದ್ದಾರೆ.

1980ರ ದಶಕದಲ್ಲಿ ವಿದೇಶಿಯರ ವಿರೋಧಿ ವಿದ್ಯಾರ್ಥಿ ಹೋರಾಟದಿಂದ ನಾಯಕರಾಗಿ ರೂಪುಗೊಂಡ ಇವರು, ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣ ಕರ್ತರಾದವರು. ಅಕ್ರಮವಾಗಿ ಗಡಿ ನುಸುಳುಕೋರರನ್ನು ತಡೆಯುವುದು ತಮ್ಮ ಸರಕಾರದ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಕೂಡಾ ಅಕ್ರಮ ಗಡಿ ನುಸುಳುವ ವಿಚಾರಕ್ಕೆ ಬಿಜೆಪಿ ಹೆಚ್ಚಿನ ಒತ್ತು ನೀಡಿತ್ತು.

ಬಾಂಗ್ಲಾದೇಶದ ಜತೆಗಿನ ಗಡಿಯನ್ನು ಮುಚ್ಚಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎರಡು ವರ್ಷ ಸಮಯಾವಕಾಶ ನೀಡಿದ್ದಾರೆ. ಈ ನಿಗದಿತ ಕಾಲಾವಧಿಯ ಒಳಗೆ ಈ ಕೆಲಸವನ್ನು ಮುಗಿಸಲು ಅಗತ್ಯ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ. ಇದರಲ್ಲಿ ನದಿಗಡಿ ಪ್ರದೇಶ ಕೂಡಾ ಸೇರಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜನಾಥ್ ಸಿಂಗ್ ಅವರು ಭಾರತ- ಬಾಂಗ್ಲಾ ಗಡಿಪ್ರದೇಶವಾದ ದಕ್ಷಿಣ ಅಸ್ಸಾಂನ ಕರೀಂಗಂಜ್‌ಗೆ ದಿಢೀರ್ ಭೇಟಿ ನೀಡಿದ ವೇಳೆ, ಗಡಿಭಾಗಕ್ಕೆ ತಂತಿ ಬೇಲಿ ಹಾಕುವ ಕಾಮಗಾರಿ ವರ್ಷಾಂತ್ಯಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಿದ್ದರು. ಬಾಂಗ್ಲಾದೇಶದಿಂದ ನುಸುಳುಕೋರರನ್ನು ತಡೆಯಲು ಯಾವ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೀರಿ ಎಂದು ಕೆದಕಿದಾಗ, ಇದೀಗ ವಾಪಾಸು ಪಡೆದಿರುವ ಐಎಂಡಿಟಿ ಕಾಯ್ದೆಗೆ ತಾವು ವಿರೋಧವಿರುವುದಾಗಿ ಸ್ಪಷ್ಟಪಡಿಸಿದರು. ಪರಿಷ್ಕೃತ ರಾಷ್ಟ್ರೀಯ ನಾಗರಿಕರ ನೋಂದಣಿಯ ಅಂತಿಮ ಕರಡನ್ನು ಸಿದ್ಧಪಡಿಸುವಾಗ, ಅಸ್ಸಾಂನಲ್ಲಿ ನಾಗರಿಕರು ಯಾರು ಹಾಗೂ ನುಸುಳುಕೋರರು ಯಾರು ಎಂದು ಸ್ಪಷ್ಟಪಡಿಸಲಾಗುವುದು ಎಂದರು. ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಹಾಗೂ ನುಸುಳುಕೋರರ ವಿರುದ್ಧ ಹಾಲಿ ಕಾನೂನುಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News