ವಿಶ್ವ ಭಾರತಿ ವಿವಿ ಕಚೇರಿಗೆ ಸಿಬಿಐ ದಾಳಿ

Update: 2016-05-24 16:54 GMT

ಕೋಲ್ಕತಾ, ಮೇ 24: ಉಚ್ಚಾಟಿಸಲ್ಪಟ್ಟಿರುವ ಉಪಕುಲಪತಿಯ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಶಾಂತಿ ನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಕಚೇರಿಗೆ ಇಂದು ಸಿಬಿಐ ದಾಳಿ ನಡೆಸಿದೆ.

ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಹಾಗೂ ಆಡಳಿತಾತ್ಮಕ ಅವ್ಯವಹಾರ ನಡೆದಿರುವ ಬಗ್ಗೆ ಗೃಹ ಸಚಿವಾಲಯ ನೀಡಿದ್ದ ವರದಿಯೊಂದರ ಆಧಾರದಲ್ಲಿ ಉಪಕುಲಪತಿ ಸುಶಾಂತ ದತ್ತಗುಪ್ತಾರನ್ನು ರಾಷ್ಟ್ರಪತಿ ಫೆಬ್ರವರಿಯಲ್ಲಿ ವಜಾ ಮಾಡಿದ್ದರು.
ವಿಶ್ವ ಭಾರತಿ ವಿವಿಯಿಂದ ಸಂಬಳ ಹಾಗೂ ಜೆಎನ್‌ಯುನಿಂದ ಪಿಂಚಣಿಯನ್ನು ಏಕಕಾಲಕ್ಕೆ ಪಡೆಯುತ್ತಿದ್ದ ಆರೋಪ ದತ್ತಗುಪ್ತಾರ ಮೇಲಿದೆ. ಕಾನೂನಿನ ಪ್ರಕಾರ, ಅವರು ಪಿಂಚಣಿ ಮೊತ್ತವನ್ನು ವಿಶ್ವಭಾರತಿಯಿಂದ ಪಡೆಯುತ್ತಿದ್ದ ಸಂಬಳದಿಂದ ಕಡಿತಗೊಳಿಸಬೇಕಿತ್ತು.
ಇದಲ್ಲದೆ, ಅಧಿಕಾರ ಇಲ್ಲದಿರುವಾಗಲೂ ಪರೀಕ್ಷಾ ನಿಯಂತ್ರಕರ ನೇಮಕ ಹಾಗೂ ವಿಶ್ವಭಾರತಿ ಕಾಯ್ದೆಯನ್ನು ಉಲ್ಲಂಘಿಸಿ ಪ್ರಮುಖ ಹುದ್ದೆಗಳ ಮಂಜೂರಾತಿ ಸಹಿತ ನೇಮಕಾತಿ ಅವ್ಯವಹಾರದ ಆರೋಪವೂ ದತ್ತಗುಪ್ತಾರ ಮೇಲಿದೆ.
ದತ್ತಗುಪ್ತಾ 2011ರಲ್ಲಿ ಉಪಕುಲಪತಿಯಾಗಿ ನೇಮಿಸಲ್ಪಟ್ಟಿದ್ದರು. ಸಚಿವಾಲಯದ ಸತ್ಯ ಶೋಧನ ಸಮಿತಿಯ ಕಾನೂನು ಬದ್ಧತೆಯನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ, ಕೋಲ್ಕತಾ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News